—- ಹೌದಾ ಜೀವು? ಸರಿ ಹಾಗಾದ್ರೆ,ಎಲ್ಲಾ ಒಳ್ಳೇದಕ್ಕೆನೇ—
- haparna
- Jul 6, 2014
- 9 min read
—- ಹೌದಾ ಜೀವು? ಸರಿ ಹಾಗಾದ್ರೆ,ಎಲ್ಲಾ ಒಳ್ಳೇದಕ್ಕೆನೇ— ( Courtesy:”APARANJI”-Kannada Monthly humour magazine)) ಭಾನುವಾರದ ಬೆಳಿಗ್ಗೆ ಅರೆ ನಿದ್ರಾವಸ್ತೆಯ ಕಣ್ಣು ತೆರೆದಾಗ, ಎದುರಿನ ಗೋಡೆ ಗಡಿಯಾರ ೯ ಗಂಟೆ ತೋರಿಸುತ್ತಿತ್ತು. ಪಕ್ಕದಲ್ಲಿನ ಫೋನಿನ ಕರೆ ಗಂಟೆ ರಿಂಗುಣಿಸುತ್ತಿತ್ತು. ಸವಿನಿದ್ದೆಯನ್ನು ಕೆಡಿಸುವವರು ಯಾರಿರಬಹುದೆಂದು ರಿಸೀವರನ್ನು ಕೈಗೆ ತೆಗೆದುಕೊಂಡೆ. ಆ ಕಡೆಯಿಂದ ಜೋರಾಗಿ, ಎಂ. ಜಿ.ಎಂ. ಪಿಕ್ಚರ್ಸ್ನನ ಸಿಂಹ ಗರ್ಜಿಸಿದ ತರಹ, ತೇಲಿ ಬಂದ ರೇಖಾ ಸೋದರತ್ತೆಯ ಧ್ವನಿ, ಅರೆನಿದ್ದೆಯಿಂದ ಹೊಡೆದೆಬ್ಬಿಸಿತು. “ ಇನ್ನಾನಿಮ್ಗೆ ಬೆಳಗಾಗಿಲ್ವೋನೋ ರಾಜೀವ? ರಾತ್ರಿ ಎಲ್ಲೆಲ್ಲೋ ಹೋಗಿ ಏನೇನ್ ಹೊಟ್ಟೆಗೆ ಹಾಕ್ಕೊಂಡು,ಯಾವಾಗ ಬರ್ತಿರೋ, ಏನೋ, ಮನೇಲೂ ಇರಲ್ಲ,ಇದ್ರೂ ,ಫೋನೂ ಎತ್ತೋಲ್ಲಾ ?”–ಆಕೆ ಯಾವಾಗ್ಲೂ ಹೀಗೆ, ಫೋನಲ್ಲಿ ಮಾತಾಡಿದ್ರೆ, ಪಕ್ಕದ ಮನೆವರ್ಗೂ ಕೇಳ್ಸುತ್ತೆ. ಬಹುಷ: ಅವರಪ್ಪ ಅರಣ್ಯಇಲಾಖೇಲಿ ಇದ್ದದ್ದರಿಂದಲೋ ಏನೋ, ಬೇಟೆ ನಾಯಿಗಳ್ನ ಸಾಕಿದ್ದು, ಆ ಪ್ರಭಾವ ಈಕೆ ಮೇಲೆ ಬೀರಿರ್ಬೇಕು! ನಮ್ಮೆನ್ನೆಲ್ಲಾ ಚಿಕ್ಕಂದ್ನಲ್ಲಿ ಮಮತೆಯಿಂದ ಸಾಕಿದ್ದವರು ಈಕೆ, ಅದಕ್ಕೆ ನಮಗೆಲ್ಲ ಸದರ. ನಮ್ಮ ಎಲ್ಲಾ ಅತ್ತೆಗಳ ಪೈಕಿ ಈಕೆ ನಮಗೆ ಏನ್ ಬಯ್ದರೂ ಆಶೀರ್ವಾದಾನೇ. “ಸಾರ್, ಕಾಫಿ” ಜೀವು ಬಿಸಿ ಬಿಸಿ ಕಾಫಿ ತಂದಿಟ್ಟುಹೊರಡೊದ್ರಲ್ಲಿದ್ದ. ಫೋನ್ನ ದೂರ ಇಟ್ಕೊಂಡು ಜೀವುಗೆ “ಸ್ವಲ್ಪ ಇಲ್ಲೇ ಇರು ಜೀವು, ಆ ಕಡೆ ಆಲಿಕಲ್ಲು ,ಗುಡುಗು ಎಲ್ಲ ಆಗ್ತಿದೆ”. “ಏನಂದೆ? ” -ಅತ್ತೆ ಉವಾಚ.-“ಏನಿಲ್ಲ ಅತ್ತೆ, ಟೀವಿನಲ್ಲಿ, ಸಂಜೆಗೆ ಮಳೆ ಗುಡ್ಗು,ಮಿಂಚು ಸಮೇತ ಬರ್ಬೊದು ಅಂತ ಹೇಳ್ತಿದ್ದನ್ನ ಜೀವೂಗೆ ತಿಳಿಸ್ತಿದ್ದೆ. ಭಾನುವಾರ ಒಂದಿನ ಆದ್ರೂ, ನಿಧಾನವಾಗಿ ಏಳೋನಾಂದ್ರೆ, ಯಾಕೀ ಬೆಳಗ್ಗೆ ಬೆಳಗ್ಗೇನೆ ಅವಸರದ ಫೋನು? ಮಾವ ಏನಾದ್ರೂ ನಿಮ್ಮೇಲೆ ಕ್ವಾಪ ಮಾಡ್ಕೊಂಡು ಮೌನವ್ರತ ಆಚರ್ಸ್ತಿದಾರ?”- “ನನ್ನ ಗಂಡ ಮುನಿಸಿಕೊಂಡ್ರೆ ನಿಂಗೆ ಫೋನ್ ಮಾಡೋಷ್ಟು ದಡ್ಡಿ ಅಲ್ಲ ನಾನು. ಮುಠ್ಠಾಳನ ತರಹ ಮಾತಾಡೋದನ್ನ ಇನ್ನಾದ್ರೂ ಬಿಡು. ಅಷ್ಟಕ್ಕೂ ಈ ವಯಸ್ಸ್ನಲ್ಲಿ ನಿಮ್ಮಾವ ಮುನ್ಸಿಕೊಂಡ್ರೆ, ತಿರುಪಿನ ಚೆಂಬು,ಕಂಬಳಿ,ಡಮಾರ್ ಟ್ರಂಕು ಹಿಡಿದು ತೀರ್ಥ ಯಾತ್ರೆಗೆ ಹೋಗ್ಬೇಕಷ್ಟೆಯಾ. –“ಈಗೆಲ್ಲಾ ಮಾಡ್ರನೈಸ್ ಆಗಿರ್ತಾರೆ ಅತ್ತೆ, ಸ್ಟೈನ್ಲೆಸ್ ಸ್ಟೀಲ್ ಫ್ಲಾಸ್ಕು,ಕ್ವಿಲ್ಟು,ಟ್ರಾಲಿ ಸೂಟ್ಕೇಸು ಉಪಯೋಗಿಸೋದು”- “ವಿಷಯಕ್ಕೆ ಬಾ ಸುಮ್ನೆ. ಬಾಯಿದೆ ಅಂತ ಏನೇನೋ ಹರ್ಟಬೇಡ. ನಿನ್ನೇ ಇಂದ ಫೋನ್ ಮಾಡ್ತಾನೇ ಇದ್ದೀನಿ, ಕ್ಲಬ್ಬು, ಬಾರು,ಅದೂ, ಇದೂ ಅಂತ ಎಲ್ಲೆಲ್ಲೋ ಅಲೀತಿರ್ತೀಯಾ, ಅ ಹಾಳಾದವನು ಇದಾನಲ್ಲ ನಿನ್ನ ಬಲಗೈ ಬಂಟ ಜೀವೂಗೆ ಹೇಳಿ ಹೇಳಿ ಸಾಕಾಯ್ತು. ನಾಳೆ ಸಂಜೆ ೫ ಗಂಟೆ ಒಳಗೆ ನಮ್ಮನೇಲಿದ್ರೆ ಸರಿ,ಇಲ್ಲಾಂದ್ರೆ, ಅಷ್ಟೆ ” ಎನ್ನುತ್ತಾ ಫೋನನ್ನು ಆ ಕಡೆ ಕುಕ್ಕಿದ್ಳು. ಅಲ್ಲ, ಈ ಅತ್ತೆ ಮತ್ತು ಆಕೆಯ ವಯಸ್ಸಿಗೆ ಬಂದ ಮಗಳು ‘ಚಿತ್ರ’ ಜೊತೇಲಿ ಒಂದುವಾರ ಮುಂಬೈ ಎಲ್ಲಾ ಸುತ್ತಿಬಂದು ಇನ್ನೂ ಹದಿನೈದು ದಿನಾನೂ ಆಗಿಲ್ಲ, ಆಗ್ಲೇ ಊರ್ಗೆ ಬಾ ಅಂತಿದಾಳಲ್ಲ! ಯಾಕೆ ಹೇಳಕ್ಕೆ ಬಂದೆ ಅಂದ್ರೆ, ನನ್ನ ಜೊತೆ ಯಾರ್ಗೂ ಸಾಮಾನ್ಯವಾಗಿ ಎರಡು ದಿನಕ್ಕೂ ಹೆಚ್ಚಿಗೆ ಇರಲು ಆಗೊಲ್ಲ !ನಂಗೂ ಅಷ್ಟೇ ಒಗ್ಗಲ್ಲ. ಹಾಗಿದ್ದು, ಮತ್ತೆ ನನ್ನ ದರ್ಶನ ಯಾಕೆ ಇವರಿಗೆ ಬೇಕು? “ಜೀವೂ”-, “ಸಾರ್ ”,-“ ಅಲ್ಲಾ , ಏನಿದ್ದೀತೂ ಅಂತ ಮತ್ತೆ ಈ ಬುಲಾವ್ ನಂಗೆ? ಚಿತ್ರಾ ಮದ್ವೆ ನಮ್ ತರ್ಕಲಾಂಡಿ ಶಿವೂ ಜೊತಗೆ ಸೆಟ್ಲಾ ಗಿದೆ,ಜಾನಕಿರಾಮ್ ಸೋದರಮಾವಗೆ ಬೀಪಿ ,ಶುಗರ್ರು,ಇನ್ಕಂಟ್ಯಾಕ್ಸುಎಲ್ಲಾ ಓಕೇ. ಚಿಕ್ಮಗ್ಳೂರಲ್ಲಿ, ಪ್ರವಾಹ, ಸರ್ಕಸ್ ದುರಂತ, ಜ್ವಾಲಾಮುಖಿ, ಹಗಲು ದರೋಡೆ, ಸೀರಿಯಲ್ ಕೊಲೆಗಳು, ಹುಲಿ ನುಗ್ಗಾಟ ಇತ್ಯಾದಿ ಎಂಥದೂ ಆಗಿಲ್ಲ?”–“ ಹಾಗೇನೂ ಇಲ್ಲ ಸಾರ್,ಆದ್ರೆ,ಚಿತ್ರಕ್ಕ ಅವ್ರ ನಿಶ್ಚಿತಾರ್ಥ ಶಿವೂ ಅವ್ರ ಜೊತೆ ಮುರಿದುಬೀಳೋ ಪರಿಸ್ಥಿತಿ ಇದೆ”,- “ಹಾಗಂತ ಪೇಪರ್ನಲ್ಲಿ ಹಾಕಿದ್ರಾ ಜಾನು ಮಾವ? ”,–“ಇಲ್ಲ, ನಿನ್ನೆ ಶಿವಕುಮಾರ ಸಾರ್ ಅವ್ರು ಇಲ್ಲಿಗೆ ಬಂದಿದ್ರೂ, ಅವ್ರೆ ಹೇಳಿದ್ದು”, – “ಮತ್ತೆ , ನಂಗ್ಯಾಕ್ ಹೇಳ್ಲಿಲ್ಲ?”,–“ ಸಾರ್, ಅವ್ರು ನನ್ನ ಸಲಹೆ ಕೇಳೋಕ್ಕೆ ಬಂದಿದ್ದು, ತುರ್ತು ಕಾರ್ಯ ಅಂತ ಊಟಾನೂ ಮಾಡ್ದೆ ಹೊರಟು ಬಿಟ್ರು.”.,–“ಹಂಗಾ?”–ಈ ಮೂರ್ಖ ಶಿಖಾಮಣಿಗೆ ಹುಡ್ಗೀರ್ ಜೊತೇಲಿ ಹೇಗೆ ನಡ್ಕೋಬೇಕು ಅನ್ನೋದು ಗೊತ್ತಾಗದೆ ಇರೋದೇ ಈ ಸಮಸ್ಯೆಗೆ ಕಾರಣ. ಅಲ್ಲ, ಜೀವೂ, ಇಪ್ಪತ್ತ್ನಾಲ್ಕು ಗಂಟೇನೂ ಲ್ಯಾಬರೊಟರೀಲಿ ಮೀನುಗ್ಳ ಜೊತೇಲೆ ಇದ್ದು ಪ್ರಪಂಚವೇ ಕಾಣೊಲ್ಲಾ ಇವನಿಗೆ. ಮೀನುಗಳ ಮೇಲೆ ಮಾಡೋ ಪ್ರಯೋಗಾನ ಆಕೆ ಮೇಲೂ ಮಾಡ್ತಾ ಇರ್ಬೇಕು ಅಂತ ಕಾಣುತ್ತೆ ಈ ಮರ್ಕಟಕುಮಾರ್! ಮೀನುಗಳ್ನ ಬಿಟ್ಟು ಅವ್ನು ಊರ್ಬಿಟ್ ಹೋದವನೆ ಅಲ್ಲ, -“ಮೀನುಗಳು ಮತ್ತು ಹೆಣ್ಣುಗಳ್ಗೂ ಏನೋ ಸಂಬಂಧ ಇದೆ ಅಂತ ಡೀವೀಜಿ ಬರೆದಿದ್ರು ಅಂತ ಎಲ್ಲೋ ಕೇಳಿದ್ದು ನೆನಪು. ”, – “ ಡೀವೀಜಿ ಅಲ್ಲ ಸಾರ್, ಸರ್ವಜ್ಞ ಕವಿ ಹೆಣ್ಣಿನ ಮನಸ್ಸಿನ ಚಂಚಲತೆ ಬಗ್ಗೆ ವಿವರಿಸುವಾಗ ನೀರಿನಲ್ಲಿಯ ಮೀನಿನ ಚಲನೆಗೆ ಹೋಲಿಸಿ ‘ಗುಂಡಿ ನೀರಲಿ ಕಿರಿ ಮೀನ ಹೆಜ್ಜೆ ಕಂಡಾತನಾರು ಸರ್ವಜ್ಞ’ ಎಂದು ಬರೆದಿದ್ದಾನೆ. ಸಂಸ್ಕೃತದ ಸುಭಾಷಿತ ಗಳಲ್ಲೂ ಹಾಗೆ ಆಡ್ಕೊಂಡಿದಾರೆ”, -“ಈ ಸರ್ವಜ್ಞಂಗೆ ಯಾರೋ ಹೆಣ್ಣುಗ್ಳು ಚೆನ್ನಾಗಿ ಚಳ್ಳೇಕಾಯಿ ತಿನ್ನಿಸಿರ್ಬೇಕು, ಅದಕ್ಕೆ ಹೀಗೆಲ್ಲಾ ಬರ್ಕೊಂಡಿದಾನೆ,ಪಾಪ! ಈ ಸರ್ವಜ್ಞಂ ಬಹುಷ: ತಮಿಳ್ನಾಡಿನವನಿರಬೇಕು. ಹೋಗ್ಲಿ, ಈತ ಕೊನೆಗೂ ಮದ್ವೆ ಮಾಡ್ಕೊಂಡ್ನ,ಇಲ್ವಾ ”,– “ಗೊತ್ತಿಲ್ಲ ಸಾರ್, ಆತ ಕವಿಯಾಗಿದ್ರಿಂದ ಹಾಗೆ ಬರೆದಿರ್ಬೇಕು. ರವಿ ಕಾಣದ್ದು ಕವಿ ಕಂಡ ಅಂತ ಗಾದೇನೇ ಇದೆ .ಈತನ ಬಗ್ಗೆ ಅಷ್ಟೇನೂ ತಿಳಿದಿಲ್ಲ. ಕನ್ನಡನಾಡಿನವ್ರೆ. ಹದಿನಾರನೇ ಶತಮಾನದವರು.” “ ಸರ್ವಜ್ಞಂ ಇಂದ ನಂಗೇನ್ ಆಗ್ಬೇಕಾಗಿದೆ. ವಿಷಯಕ್ಕೆ ಬಾ. ನಮ್ಮವರಿಬ್ಬರ ವಿರಸ ಏನಕ್ಕಂತೆ?”,-“ಮೊನ್ನೆ ನಿಮ್ಮ ಸೋದರತ್ತೆ ಮನೇಗೆ ಆಳಿಯಾ ಆಗೋ ಶಿವೂ ಅವರನ್ನ ಊಟಕ್ಕೆ ಕರೆದಿದ್ರಂತೆ. ಮಾತಿಗೆ ಮಾತು ಬಂದು ರೇಗಿಸಕ್ಕೋಸ್ಕರ ‘ಹುಡ್ಗೀರ್ ಬುದ್ಧಿ ಊರ್ಗೆ ಸುದ್ದಿ, ನಿನ್ನ ಬುದ್ಧಿ ಶೂನ್ಯಕ್ಕೆ ಸುದ್ದಿ’ ಅಂತ ನಿಮ್ಮ ಸ್ನೇಹಿತರು ಪ್ರಾಸವಾಗಿ ಹೇಳಿದ್ರಂತೆ , ಅದಕ್ಕೆ ಆಕೆ ‘ನಿನ್ನ ತಲೇ ಬರೀ ಕೆಸರು ಗದ್ದೆ , ಗೊತ್ತಿದ್ದೂ ನಾನ್ ಟೋಪಿ ಬಿದ್ದೆ’ ಅಂತ ಹೇಳಿದರಂತೆ. ಆತ ‘ಅದಕ್ಕೇ ನಿಮ್ಮಂತ ಹುಡ್ಗೀರ್ಗೆ ಬ್ರಹ್ಮ ಬರೀ ತಲೆ ಕೊಟ್ಟ, ನಮ್ಗಳಿಗೆ ಅದರಲ್ಲಿ ಮೆದಳು ತುಂಬಿ ಕೊಟ್ಟ’ ಆಕೆ ‘ಆದರೇನು, ಆ ಮೆದುಳ್ನ ಉಪಯೋಗ್ಸಿಕೊಳ್ಳೋ ಬುದ್ಧಿ ಹುಡ್ಗೀರ ಕೈಲಿ ಇಟ್ಟ’. ಹೀಗೆ ಇವರ ದ್ವಂಧ್ವ ‘ ಅಪ್ಪ,ಅಮ್ಮ,ಅವ್ರು ಇವ್ರು, ಜಾತಿ,ಕುಲ,ಗೋತ್ರ ,ಊರು,ಕೇರಿ ’, ಹೀಗೆ ಎಲ್ಲೆ ಲ್ಲೋ ಹೋಗಿ ಚಿತ್ರಕ್ಕಾ ‘ಈ ಮೊಸಳೆ ಬುದ್ಧಿಯ, ಮೀನಿನ್ ಸಹ್ವಾಸದವ್ನ ಮದ್ವೆ ಸುತರಾಂ ಬೇಡ ಅಂತ ಹಠ ಹಿಡ್ದಿದಾರಂತೆ.”,–“ಹಿಗಾಗ್ಬಾರದಿತ್ತು. ಅದಕ್ಕೇ ನಂಗೆ ಬುಲಾವ್ ಬಂದಿರೋದು. ಈ ವೇಳೇಲೀ ಸಹಾಯಕ್ಕೆ ನಾನ್ ಇರಬೇಕಾದ್ದು ನ್ಯಾಯ,ನೀ ಏನ ಸಲಹೆ ಕೊಟ್ಟೆ ಈ ಪೆದ್ದುಗೆ ? ಯಥಾ ಪ್ರಕಾರ ನಿನ್ನ ಮನಶಾಸ್ತ್ರ ಪ್ರಯೋಗಾನ ?”,–“ಹೌದು, ಸಾರ್,ಈ ವ್ಯಾಜ್ಯ ಕೇವಲ ಮನಸ್ಸಿಗೆ ಸಂಬಂಧಿಸಿದ್ದು. ಇಲ್ಲಿ ಚರ್ಚೆಗೆ ವಸ್ತುವೇ ಇಲ್ಲ. ಕೇವಲ ಕಾಲು ಎಳೆಯಕ್ಕೆಹೋಗಿ ನಿಮ್ಮ ಸ್ನೇಹಿತರು ದುಡುಕಿದ್ರು,ಅಷ್ಟೇಯ. ಶಿವೂ ಸಾರ್ ವಿಜಯದಶಮಿವರೆಗೂ ಅಂದ್ರೆ ಇನ್ನೂ ನಾಲ್ಕು ದಿನ ಅವ್ರ ಮನೇಲೆ ಇರ್ತಾರೆ. ತಿಂಡಿ ವೇಳೆ, ಊಟದ ವೇಳೆ ಎಲ್ಲರೂ ಹಬ್ಬದ ಸ್ಪೆಷಲ್ ಒಟ್ಟಾಗಿ ತಿಂತಿದ್ರೆ, ಇವ್ರು ಉಪವಾಸ ಇರಬೇಕು. ಅದನ್ನ ನೋಡೀ,ನೋಡೀ ಆಕೆಗೆ ಕರುಳು ಚುರುಕ್ ಎನ್ನತ್ತೆ, ತಾನು ದುಡ್ಕುಬಾರ್ದಿತ್ತು ಅನ್ಸುತ್ತೆ . ಆಮೇಲೆ ಎಲ್ಲ ಸರಿಹೋಗುತ್ತೆ”,–“ ಶಿವೂ ನಾಲ್ಕು ದಿನ ಅಲ್ಲ, ನಾಲ್ಕು ಗಂಟೆನೂ ಖಾಲಿ ಹೊಟ್ಟೆ ಇರುಲ್ಲ! ಊರ್ಗೇ ಬಕಾಸುರ ಇವ್ನು. ಮದ್ವೆ ಮುರ್ದಬಿದ್ದೋಗತ್ತೆ ಅಷ್ಟೇಯಾ. ನಿಂಗೇನ್ ಗೊತ್ತು ಅವ್ನ ಹೊಟ್ಟೆ ಸಮಾಚಾರ. ನಮ್ಮ ಹಾಸ್ಟೆಲ್ನಿದ್ದಾಗ, ದಿನಕ್ಕೆ ಆರ್ಸಲ ತಿಂದ್ರೂ ಅವ್ನ ಹೊಟ್ಟೇಗೆ ಸಾಲ್ತಿರಲಿಲ್ಲ. ಅಡಿಗೆ ಭಟ್ಟ ಐತಾಳ್ನ ಕೈಲಿ ಭಸ್ಮಾಸುರನ ಹೊಟ್ಟೆ ಅಂತ ಟೈಟಲ್ ಪಡೆದಿದ್ದಾನೆ. ನಿನ್ನ ಬ್ರೈನು ಈ ನಡುವೆ ತುಂಬಾ ವೀಕು. ಮೀನು ತಿಂದ್ರೆ ಬ್ರೈನ್ಗೆ ಒಳ್ಳೇದಂತೆ. ಜೀವು, ನಾನು ಈ ಸಮಸ್ಯೆಗೆ ಸಿಂಪಲ್ಲಾಗಿ ಮದ್ದು ಕೊಡ್ತೀನಿ, ನೀನು ಈ ಕೇಸ್ನ ನಂಗೆ ಬಿಟ್ಭಿಡು, ತಿಳೀತಾ. ನನ್ ಜವಾಬ್ದಾರಿ.”,–“ಆಯ್ತು ಸಾರ್”,–“ ನೀನು ನಿನ್ನ ಭಾವಮೈದ ಚಾಮುಂಡೇಶ್ವರಯ್ಯನ್ನ ನೋಡ್ಬೇಕೆಂತ ಇದ್ದೆಯಲ್ಲ, ನಾಳೆ ಟಿ. ನರ್ಸೀಪುರಕ್ಕೆ ಹೋಗಿ ಬಂದ್ಬಿಡು ”,–“ ಇಲ್ಲ ಸಾರ್, ಅವ್ನು ಈಗ ಊರಲ್ಲಿ ಇರೋಲ್ಲ, ಮುಡಿ ಕೊಡಕ್ಕಂತ ತಿರ್ಪತಿಗೆ ಹೋಗ್ಬೇಕಂತಿದ್ದ. ಬರೋದು ಯಾವಾಗ ಅಂತ ಹೇಳಿಲ್ಲ.”,–“ ಸರಿ, ಐದಾರು ದಿನಕ್ಕಾಗೋಷ್ಟು ಬಟ್ಟೆಗಳನ್ನ ಸೂಟ್ಕೇಸ್ಗೆ ಹಾಕಿ ನಮ್ಮ ಹೊಂಡ ಕಾರು ಚಿಕ್ಮಗ್ಳೂರ್ಗೆ ಹೋಗೋಕ್ಕೆ ರೆಡಿ ಮಾಡು. ನಾಳೆ ಬೆಳಿಗ್ಗೆನೇ ಪ್ರಯಾಣ. ಊಟಕ್ಕಲ್ಲಿರ್ಬೋದು. ಅಂದಹಾಗೆ ಮಧ್ಯಾನ್ಹ ಕಾಯ್ಬೇಡ, ನಮ್ಮ ಆನಂದ ವಿಹಾರ ಕ್ಲಬ್ ನ ಚುರಿಮುರಿ ಸಂಘದ ಎಲೆಕ್ಷನ್ ಇಂದು .”, “ ಸರಿ ಸಾರ್”. ** ** ** “ಚಿಕ್ಕಮಗ್ಳೂರ್ನ ಸೇರೋ ವೇಳೆಗೆ ಎಲ್ಲಾರ ಊಟ ಮುಗೀತಿತ್ತು. ಚಿತ್ರ ಎಸ್ಟೇಸ್ಟ್ ಮನೇಲಿ ಎಲ್ಲೂ ಕಾಣಲಿಲ್ಲ. ಜಾನಕಿರಾಮ್ ಮಾವ ಇನ್ಕಂ ಟ್ಯಾಕ್ಸ್ ವಿಷಯ ಸೆಟ್ಟಲ್ ಮಾಡೊಕ್ಕೆ ಆಡಿಟರ್ ಬಳಿ ಹೋಗಿದ್ರು. ರೇಖಾ ಅತ್ತೆ ಬಳಿ ಎಲ್ಲಾ ವಿಷಯ ತಿಳ್ಕೊಂಡು, ಶಿವುನ ನೋಡಕ್ಕೆ ಅವ್ನ ರೂಂಗೆ ಬಂದೆ. ಮೈ ಎಲ್ಲಾ ಮುದ್ದೆ ಮಾಡ್ಕೊಂಡು, ಉಗುರು ಕಡಿತಾ, ಕಿಟಕೀಲಿ ನೋಡ್ತಾ ಕೂತಿದ್ದ ಮೂರ್ಖ ಶಿಖಾಮಣಿ. ಒಂದ್ ಸೊಳ್ಳೆ ಬಹುಷ: ಅದ್ರ ಸಂಗಾತೀನ ಹುಡುಕ್ತಾ ದಾರೀಲಿ ಅವ್ನ ಮೂಗು ಅದಕ್ಕೆ ಏನೋ ಆಕರ್ಷಕವಾಗಿ ಕಂಡಿರ್ಬೇಕು. ಮೂಗಿನ್ ಸುತ್ತಾ ಗಿರಕಿ ಹೊಡೀತಾ ಆಗಾಗ್ಗೆ ತುದೀಲಿ ಕೂರೋದು,ಇವ್ನುಬಲಗೈಲಿ ಅದಕ್ಕೆ ಹೊಡೆಯೋಕೆ ಕೈಬೀಸೋದು, ಅದು ತಪ್ಪಿಸ್ಕೊಂಡ್ ಇವನ ಮೂಗಿಗೆ ಏಟು ಬೀಳೋದ. ಹೀಗೆ ಅವ್ಯಾಹತವಾಗಿ ನಾಸಿಕ ಯಜ್ಞ ನಡೀತಲೇ ಇತ್ತು. ಕೊನೆಗೆ ಅವ್ನ ಈ ಸಮಾಧಿಯಿಂದ ಏಬ್ಬಿಸಿದೆ–. “ ಏ ಮಂಕೆ, ಯಾಕೆ ಹೀಗೆ ಕೊರಗ್ತಾ ಕೂತಿದ್ದೀಯಾ, ಪ್ರಪಂಚಾನೇ ಮುಳಗೋದ್ಹಾಗೆ ?”,–“———–”, “ಅರೆ, ಮಾತಾಡಯ್ಯ” “————”, “ ನಾನಯ್ಯ,ಶಿವೂ, ನಿನ್ನ ಬಚಪನ್ಕೆ ದೋಸ್ತ್ ತಿಳೀತ?ನಿನ್ನ ಸಮಾಚಾರ ತಿಳ್ದೆ ಇಲ್ಲಿಗೆ ಓಡ್ಬಂದೆ.”, __”ಎಲ್ಲ ಮುಗ್ದ ಮೇಲೆ ಬಂದರೇನು ಪ್ರಯೋಜನ? ಅಷ್ಟಕ್ಕೂಪಾಪ, ನಿಂಕೈಲಿ ಏನಾಗುತ್ತೆ? ದೇವ್ರು ನಿನ್ನ ಮಾಡೋ ಅವಸರದಲ್ಲಿ ತಲೇಲಿ ಮೆದುಳಿಡೋದನ್ನ ಮರ್ತಿರಬೇಕು.”,–“ !…? ?”,–“ಇನ್ಮೇಲೆ ನನ್ನ ದಾರಿ ನಂಗೆ, ಅವಳ ದಾರಿ ಅವಳ್ಗೆ , ನಾನ್ ತಪ್ಪು ಮಾಡ್ದೆನಯ್ಯ, ಹುಡ್ಗೀರ್ನ ನಂಬಾರ್ದು ಅನ್ನೋದು ಈಗ ಸ್ವಂತ ಅನುಭವಕ್ಕೆ ಚೆನ್ನಾಗಿ ಬಂತು, ನಿಮ್ಮತ್ತೆ ಮಗಳ್ನ ಗುಡಾಣ್ದಲ್ಲಿ ಇಟ್ಟು ಚೆನ್ನಾಗಿ ಬೆಳಸ್ಕೊಳ್ಳಿ, ಥ್ಯಾಂಕ್ಸ್, ನಾನ್ ಹೊರಡುತೀನಿ ಮಿತ್ರ.”, –ಅಷ್ಟುಹೊತ್ತಿಗೆ, ಸೊಳ್ಳೆ ಹೊಡ್ದು, ಹೊಡ್ದು ಅವ್ನ ಮೂಗು ಕೆಂಪೇರಿತ್ತು. ಸೊಳ್ಳೇನೂ ಬಹುಶ: ಸ್ವಾರಸ್ಯ ಕಾಣ್ದೆ ,ಬೇರೆ ಮೂಗ್ನ ಹುಡ್ಕಂಡು ಜಾಗ ಖಾಲಿ ಮಾಡಿತ್ತು. ಅಲ್ಲ, ನಂ ಮನೇಗೆ ಬಂದು,ನನ್ನೋಡ್ದೆ ಜೀವೂನ ಮಾತಾಡಿಸ್ಕೊಂಡು ಹೋಗಿದಾನೆ ಈ ಛತ್ರಿ. ನನ್ಕೈಲಿ ಏನಾಗುತ್ತೆ ಅಂತಾ ನನ್ನೇ ಜರಿತಾನಲ್ಲಾ ,ಇರ್ಲಿ, ಎಷ್ಟೇ ಆಗ್ಲಿ ಸ್ನೇಹಿತ. ದು:ಖದಲ್ಲಿದಾನೆ. ಇಂಥಾ ಸಮಯದಲ್ಲಿ ಅವ್ನ ಮಾತ್ನ ಮನಸ್ಗೆ ತೊಗೋಬಾರ್ದು. ಆದ್ರೆ, ಯಾವಾಗ ಹುಡ್ಗೀರ್ ಜೊತೆ ಹ್ಯಾಗಿರಬೇಕು ಅನ್ನೋದ್ನನ ತಿಳ್ಕೊಳ್ದೆ, ಆಗ್ತಾನೆ ಮದ್ವೆ ಸೆಟ್ಲ್ ಆಗಿರೋ ಹುಡುಗಿ ಜೊತೆ ಚಕ್ಕಂದವಾಗಿರೋದ್ ಬಿಟ್ಟು ,ಮೀನಿನ ಜೊತೆ ಆಡೊ ರೀತೀಲಿ ಇವಳ್ನ ಕೀಟ್ಲೆ ಮಾಡಿದ್ರೆ ಈಗಿನ ಹೈ ಸ್ಪಿರಿಟೆಡ್, ಹೈ ಟೆಕ್,ಅಲ್ಟ್ರಾಮಾಡ್ರನ್ ಹುಡ್ಗೀರು ಸಹಿಸ್ತಾರ? ಏನಾಗಬೇಕೋ ಅದೇ ಆಯ್ತು,—“ನೀ ಏನೂ ಯೋಚ್ನೆ ಮಾಡ್ಬೇಡ, ನಾನೊಂದ ಪ್ಲಾನ್ ಹೇಳ್ತೀನಿ, ಎಲ್ಲಾ ಸರಿ ಹೋಗಿ, ಮತ್ತೆ, ನಿನ್ನ ಅವ್ಳು ಡಾರ್ಲಿಂಗ್, ಡಾರ್ಲಿಂಗ್ ಅಂತ ಕರ್ಕೊಂಡ್ ಓಡಾಡ್ತಾಳೆ, ತಾಳಿ ಕಟ್ಟೋದ್ ಒಂದ್ ಬಾಕಿ ಅಷ್ಥೇಯ. ನಿಜ ಹೇಳ್ಬೇಕಂದ್ರೆ ಶೀ ವರ್ಷಿಪ್ಸ್ ಯು.” “ಡಿಯರ್ ಮಿಸ್ಟರ್ ರಾಜೀವ್, ದಯವಿಟ್ಟು ಇಂಥ ಉಪಕಾರ ಮಾಡಕ್ಕೆ ಬರ್ಬೇಡಾ. ಇದೊಂದು ಕೆಟ್ಟ ಕನ್ಸು ಅಂತ ಮರ್ತು ಬಿಡ್ತೀನಿ. ನಿಜವಾದ ಸ್ನೇಹಿತ ಅನ್ನೋದಾದ್ರೆ ಈ ವಿಷಯದಲ್ಲಿ ಮೂಗ್ನ ತೂರಿಸ್ಬೇಡ. ನೀನಾಯ್ತು, ನಿನ್ ಐಡ್ಲರ್ಸ್ ಕ್ಲಬ್ ಆಯ್ತು ಅಂತ ಇದ್ಬಿಡು. ಜೀವು ಗೈಡನ್ಸ್ ನಂಬಿದೀನಿ. ಅಯ್ಯಾ, ಇದು ನಂ ಜೀವನದ ಪ್ರಶ್ನೆ,”, –“ನಿಂಗೇನು ಗೊತ್ತು, ನನ್ನ ಸ್ಕೀಮಿನ ಯೋಗ್ಯತೆ? ಜೀವು ಈ ನಡುವೆ ಮೊದಲ ತರಹ ಇಲ್ಲ. ಸೆರಿಬಲ್ಲಂ ಪೂರಾನೇ ಕೊರತೆ. ತುಂಬಾ ಮಂಕಾಗಿ, ಟೇಕ್ಸ್ ರಾಂಗ್ ಡಿಸಿಷನ್ಸ್.”, -“ಹಾಗಂತಾ ಯಾರ್ ಹೇಳಿದ್ರು? ನಿಂಗೇನಾದ್ರೂ ಯಾರಾದ್ರೂ ಟೆಕ್ಸ್ಟ್ ಮಾಡಿದ್ರ?”,-“ಹಾಗೇನಿಲ್ಲ,ಆದ್ರೆ ಅವ್ನ ಚಟುವಟಿಕೆಗಳ್ನ ಸೆಂಟರ್ ಸ್ಟೇಜಿನಲ್ಲಿದ್ದು ಸದಾ ನೋಡೋವ್ನು ನಾನೇ ಆಲ್ವಾ, ಭೋಳೇ ಶಿವ”, – “ಏನೋಪ್ಪಾ, ಏನಾದ್ರೂ ಮಾಡ್ಕೊಳ್ಳಿ, ಆದ್ರೆ, ಐ ವಿಲ್ ನಾಟ್ ಫಾಲ್ ಅಟ್ ಹರ್ ಫೀಟ್. ” ** ** ** ಮಾರನೆ ದಿನ ಚಿತ್ರ ತೋಟದಲ್ಲಿ, ತಾವರೆ ಕೊಳದ ಬಳಿ, ಅವಳ ಸ್ನೇಹಿತೆ ಜೊತೆ ಮಾತಾಡ್ತಾ ಇದ್ದಾಗ ಸಿಕ್ಕಿದ್ಲು., – “ಚಿತ್ರಾ, ನಿನ್ ಹತ್ರ ಮಾತಾಡಬೇಕಿದೆ, ಸ್ವಲ್ಪ ಅವಕಾಶ ಮಾಡ್ಕೊಂಡು ಬರ್ತೀಯಾ? “, -“ ಅದೇನು? ಶಿವೂ ಬಗ್ಗೆ ತಾನೇ? ಅವ್ನೇನ್ ನಿನ್ನ ಸ್ನೇಹಿತಾನ ಇಲ್ಲ ಹಳೇ ಶಿಲಾಯುಗದಿಂದ ಎದ್ಬಂದ ಆದಿಮಾನವ ನೋ? ”,–“ನೊ,ನೋ, ಹಿ ಇಸ್ ಅಲ್ರೈಟ್. ಇಷ್ಟೇನಾ ಅವ್ನ ನೀನು ಅವ್ನ ಅರ್ಥ ಮಾಡ್ಕೊಂಡಿರೋದು? ಡೋಂಟ್ ವರಿ ಚಿತ್ರ, ಇವೆಲ್ಲ ಪ್ರೇಮಿಗಳ ಮಧ್ಯೆ ಕಾಮನ್, ನಿಜ ಹೇಳ್ಬೇಕಂದ್ರೆ ಹೀ ವರ್ಶಿಪ್ಸ್ ಯು, ನಿನ್ ಬಿಟ್ರೆ ಇಲ್ಲಂತ ಹೇಳ್ತಾನೆ ಇರ್ತಾನೆ. ಸ್ವಲ್ಪ ಮಾತ್ನಲ್ಲಿ ನೀವಿಬ್ರೂ ಸರರ್ಸ್ಕೊಂಡು ಹೋಗ್ಬೇಕಷ್ಟೇಯಾ, ಲೀವ್ ಇಟ್ ಟು ಮೀ.”, -“ನೋಡು ರಾಜೀವ್ ಮಾಮ, ನಿಂಮ್ ಕಾಲುದ್ದಕ್ಕೂ ನಮಸ್ಕಾರ ಮಾಡಿ ಹೇಳ್ತೀನಿ, ನಾ ಅವ್ನಗೆ ಸರಂಡರೂ ಆಗೋಲ್ಲ,ಅವ್ನ ಮುಖಾನೂ ನೋಡೋಕ್ಕೆ ಇಷ್ಟ ಪಡುಲ್ಲ. ಈ ಬುಡ್ಬುಡ್ಕೆ ಮಾತಿಗೆ ಫುಲ್ಸ್ಟಾಪ್ ಹಾಕು. ”, -“ ಸರೆಂಡರ್ ಪ್ರಶ್ನ್ನೇನೇ ಇಲ್ಲ, ಬುಡ್ಬುಡ್ಕೆನೂ ಅಲ್ಲ ಚಿತ್ರಾ, ನೀನ್ ಸುಮ್ನಿದ್ ಬಿಡು ಏನೂ ಆಗ್ಲಿಲ್ಲ ಅನ್ನೋ ತರಹ, ನಾನ್ ಮುಂದಿಂದು ನಾಡ್ಕೊಳ್ತೀನಿ. ಬೈ.” ** ** ** ಪರಿಸ್ಥಿತಿ ತೀರ ಹದಗೆಡ್ತಾ ಇತ್ತು. ಯೋಚಿಸಿ, ಯೋಚಿಸಿ ನಾಲ್ಕು ಗೋಲ್ಡ್ ಫಲೇಕು ಸುಟ್ಟು ಭಸ್ಮ ಆಯ್ತಷ್ಟೆ. ಏನೂ ಹೊಳೆಯಲಿಲ್ಲ .ಅತ್ತೆ ಹತ್ರ ಮತ್ತೆ ದೀರ್ಘವಾಗಿ ವಿಚಾರ ವಿನಿಮಯ ಮಾಡಿಕೊಂಡೆ.,– “ ಯಾಕೆ ಯೋಚ್ನೆ ಮಾಡ್ತಿ .ಖಾಲಿ ತಲೆಗೆ ಯಾಕೆ ಕೆಲಸ? ನಾನು ಜೀವಣ್ಣನ ಹತ್ರ ಮಾತಾಡಿ ಅದಕ್ಕೆ ಒಂದ್ ದಾರಿ ಮಾಡಿದೀನಿ. ಅವ್ನು ಎಲ್ಲೋ ಊರಿಗೆ ತುರ್ತಾಗಿ ಹೋಗ್ಬೇಕಂತಿದ್ದ. ಅದಕ್ಕೆ ನಿಂಗೆ ಹೇಳಿ ಅವ್ನು ಇಲ್ಲಿಗೆ ಬರೋಹಾಗೆ ಮಾಡಿದ್ದು.” ನಂಗೆ ನಿಜವಾಗ್ಲೂ ನಖಶಿಖಾಂತ ಕೋಪ ಬಂತು. ನಿಜ, ನನ್ನ ಬಿಟ್ಟು ಅವ್ನ ಒಬ್ಬನೇ ಅಲ್ಲಿಗೆ ಕರ್ಸಿಕೊಳ್ಳೋದು ಸಾಧುವಲ್ಲ. ಅದಕ್ಕೆ ನಮ್ಮಿಬ್ರುಗೂ ಬುಲಾವ್. ಆದ್ರೆ, ಇಲ್ಲಿ ಒಂದು ಸತ್ಯ ಸಂಗತಿ ಹೇಳ್ಳೇಬೇಕು. ನಮ್ಮ ಆತ್ಮೀಯ ಬಂಧುಗಳು ಮತ್ತು ಆಪ್ತ ಸ್ನೇಹಿತರಲ್ಲಿ ಈ ಜೀವು ಏನೋ ಮೋಡಿ ಮಾಡಿದಾನೆ. ಅವರಿಗೆಲ್ಲ ಏನಾದ್ರೂ ಸಮಸ್ಯೆಗ್ಳು ಬಂದ್ರೆ, ಮೊದಲಿಗೆ ಇವನ ಹತ್ರ ಓಡಿ ಬರ್ತಾರೆ. ಅದೇನೋ ಸರಳವಾದ ಮನೋ ಶಾಸ್ತ್ರದ ಮೂಲ ತಂತ್ರ ಅಂತೆ, ಇವನು ಕೊಡೋ ಸಲಹೆಗಳು ಅವರಿಗೆಲ್ಲ ಯಂತ್ರ,ತಾಯ್ತ ಕಟ್ಟಿಸ್ಕೊಂಡ ಹಾಗೆ ಪರಿಹಾರ ಸಿಗುತ್ತವೆ. ನನ್ನ ಗೃಹ ಕೃತ್ಯಗಳ ಕೆಲಸ ಹೊರುವದಲ್ದೆ, ನನ್ನ ಪರಿಚಾರಕನಾಗಿದ್ರೂವೆ, ಎಲ್ಲ ವಿಷಯಗಳು ಮತ್ತು ಸಾಹಿತ್ಯದ ಬಗ್ಗೆನೂ ಬಹುಳಷ್ಟು ತಿಳ್ಕೊಂಡಿದಾನೆ. ನನಗೂ ಅವ್ನ ಐಡಿಯಾಗಳಿಂದ ಪ್ರಯೋಜನ ಆಗಿರೋದು ನಿಜ. ಆದ್ರೆ, ಈ ರೀತಿ ನನ್ನನ್ನೇ ಎಲ್ಲಾರೂ ದುಷ್ಮನ್ ಮಾಡೋದು ಸಭ್ಯತೆ ಅಲ್ಲ. ಇವ್ರುಗಳ್ದು ‘ಮೀನ್ ಮೆಂಟಾಲಿಟಿ’ ಅಷ್ಟೇ. ನಾನು ಏನು ಅನ್ನೋದು ಇವರಿಗೆ ತೋರ್ಸಿಯೇ ಬಿಡ್ತೀನಿ,–“ರಾಜೀವ, ಹೇಳೋದ್ ಮರ್ತ್ ಬಿಟ್ಟಿದ್ದೆ. ನಿಂದೊಡ್ ಮಾವನೂ ನಾಳಿದ್ದು ಬರ್ತಿದಾರೆ, ನಿನ್ನ, ನೀನ್ ಸ್ನೇಹಿತನ್ನೂ ನೋಡೋಕ್ಕೆ ಪೆದ್ದಣ್ಣ! ನಿನ್ ಕಂಡ್ರಂತೂ ಅವ್ರಿಗೆ ಅದೇನ್ ಪ್ರೀತೀನೋ!! ಅಲ್ವ?”,– ಇದೀಗ ನಾನು ನಿಜವಾಗ್ಲೂ ಹೌಹಾರಿದೆ. ಯಾಕಂದ್ರೆ, ಈ ಸೋದರತ್ತೆ ಗಂಡನ ಅಣ್ಣ ಕೇಶು ಮಾವ. ನಾವುಗಳು ಕರೆಯೋದು ‘ಹುಚ್ಮಾವ’ ಅಂತಲೇ- ಅವರಿಗೂ ನನಗೂ ಅಷ್ಟಕ್ಕಷ್ಟೇಯ. ಹೇಳಿಕೇಳಿ ಅವ್ರು ಮನ:ಶಾಸ್ತ್ರ ಡಾಕ್ಟ್ರು. ಅವ್ರು ಮೊದಲಿಗೆ ಯಾರನ್ನ ನೋಡಿದ್ರೂ ಮೊದ್ಲು ತಲೇನ್ ನೋಡೋದು. ಆಮೇಲೆ ಮುಂಡ, ಕೈ,ಕಾಲು ಎಟ್ಸೆಟ್ರಾ. ಮನಸ್ಸ್ನಲ್ಲೇ ನಿಮ್ಮ ತಲೆ ಉದ್ದ,ಅಗಲ,ಗಾತ್ರ ಎಲ್ಲ ಅಳೆದೂ ಸುರಿದೂ ನೀವಿಷ್ಟೇ, ನಿಮ್ಮ ಬುದ್ಧಿ ಇಷ್ಟೇ ಅಂತ ಕರಾರ್ವಾಕ್ಕಾಗಿ ಗುರ್ತು ಮಾಡ್ಕೊಳ್ತಾರೆ. ಮತ್ತೆ ನೀವ್ ಏನ್ ಮಾಡಿದ್ರೂ ಅಭಿಪ್ರಾಯ ಬದ್ಲಾಯ್ಸೊಲ್ಲಾ. ಹಿಂದೆ ಒಂದ್ಸಲ, ನಾನು, ಚಿತ್ರಾಳ ಅಣ್ಣ ಶ್ರೀಕಂಠೂ ಇಬ್ಬರೂ ಏನೋ ತಮಾಷೆ ಮಾಡಕ್ಕೆ ಹೋಗಿ ನಂ ಪ್ಲಾನು ಎಡ್ವಟ್ಟಾಗಿದ್ದರ ಪರಿಣಾಮ ಕಣ್ಣಾರೆ ನೋಡಿ ಆತ ನನ್ನ ‘ಅರೆ ಹುಚ್ಚ’ ಅಂತ ನಿರ್ಧರಿಸಿ, ಅವ್ರ ಹುಚ್ಚಾಸ್ಪತ್ರ್ಗೆಗೆ ಕಳ್ಸೋದಿಕ್ಕೆ ಏರ್ಪಾಟು ಮಾಡ್ತಿದ್ರು. ನಮ್ಮತ್ತೆ ಆತನಿಗೆ ಏನೋ ಸಮಾಧಾನ ಹೇಳಿ ನನ್ನ ಬಿಡ್ಸಿದ್ರು. ಮತ್ತೆ ನಮ್ಮಿಬ್ಬರ ಮುಖಾಮುಖಿ ಭೇಟಿ ಅಂದ್ರೆ ಇಬ್ಬರಿಗೂ ಕಸಿವಿಸಿ! ನಾಡಿದ್ದು ಬರೋದು ಅಂತ ತಿಳ್ಕೊಂಡು ಸಮಾಧಾನ ಆಯ್ತು. ಅಷ್ಟರಲ್ಲಿ ನನ್ನ ಪ್ಲಾನ್ ಕೂಡ್ಲೆ ಮುಗ್ಸಬೇಕು. ** ** ** ರಾತ್ರಿಯೆಲ್ಲ ಯೋಚ್ನೆಮಾಡ್ದೆ. ಏನೂ ಪ್ರಯೋಜನವಾಗ್ಲಿಲ್ಲ. ಕೊನೆಗೆ ‘ಫ್ಲಾಶ್ ’ ಅಂತಾರಲ್ಲಾ ಹಾಗೆ, ಇದ್ದಕ್ಕಿದ್ ಹಾಗೇ ಬೆಳಗಿನ ಜಾಮದಲ್ಲಿ ‘ಪಡೋಸನ’ ಸಿನಿಮ ಜ್ಞಾಪಕಕ್ಕೆ ಬಂತು. ಹೌದಲ್ಲ ! ಸುನೀಲ್ ದತ್ ಮೇಲೆ ಸಾಯಿರ ಬಾನು ಪ್ರೇಮ ಮತ್ತೆ ಚಿಗುರೋ ಹಾಗೆ ಈ ಎಬ್ಬಂಕ ಶಿವೂಗು ನಮ್ಮ ಚಿತ್ರಾಗೂ ಕಿಶೋರನ ಅದೇ ಪ್ಲಾನ್ ಮಾಡ್ಬಹುದಲ್ವ? ಸಾವ್ರ ಸುಳ್ಳು ಹೇಳಿ ಮದ್ವೆ ಮಾಡಿಸಬಹುದಾದ್ರೆ, ಇಬ್ರು ಪ್ರೇಮಿಗಳಿಗೂ ಸ್ವಲ್ಪ ಹಸಿ ಸುಳ್ಳು ಹಂಚಿ ಯಾಕೆ ಒಂದ್ ಮಾಡ್ಬಾರದು? ಬೆಳಗಾಗುತ್ತ್ಲೂವೆ ಶಿವುನ ನೋಡಕ್ಕೆ ಹೊರಟೆ. ರೂಮ್ನಲ್ಲಿ ಮುಠ್ಠಾಳ ಹಾಸ್ಗೆ ಮೇಲೆ ಬಿದ್ಕಂಡು ಛಾವಣಿ ನೋಡ್ತಾ, ಏನೋ ಒದರ್ಕೊಳ್ತಾ ಇದ್ದ. ರಾತ್ರಿ ಎಲ್ಲ ನಿದ್ದೆ ಇಲ್ದವರ ಹಾಗೆ ಕಣ್ಣು ಕೆಂಪಗಾಗಿತ್ತು. ನನ್ನ ನೋಡತ್ಲೂವೆ ಸರಕ್ ಅಂತ ಎದ್ದು “ರಾಜೀವ, ನಿನ್ನ, ಅಲ್ಲ, ಜೀವುನ ಮಾತ್ಗೆ ಬೆಲೆ ಕೊಟ್ಟು ಈ ಒಂದಿನ ಇರ್ತೀನಿ. ನಾಳೆ ನನ್ನ ದಾರಿ ನಂಗೆ.”ಅಂದು ಎದ್ದು ಕೂತ. “ಡೋಂಟ್ ವರಿ, ಉಪಹಾರಕ್ಕೆ ಬರ್ತೀಯಲ್ಲ, ಆವಾಗ ಮಾತಾಡೋಣ”. ನನ್ನ ದುರ್ಗುಟ್ಟ್ಕಂಡು ನೋಡ್ದ. ಸಮಯ ಸರಿ ಇಲ್ಲ ಅಂತ ಅಲ್ಲಿಂದ ಎದ್ಬಂದೆ. *** *** *** ಆದ್ರೆ, ಉಪಹಾರದ ವೇಳೆ ಚಿತ್ರ, ಅವಳ ಅಣ್ಣ ಅವರುಗಳ ಸ್ನೇಹಿತರನ್ನ ಪರಿಚಯ ಮಾಡ್ಕೊಳ್ಳೋದ್ರಲ್ಲಿ ಇವನ ವಿಷಯ ಗಮನಕ್ಕೆ ಬರಲಿಲ್ಲ. ಊಟದ ವೇಳೇಲಿ ನಾನು ಜಾನಕಿರಾಮ್ ಮಾವ ಯಾವುದೋ ತುರ್ತು ಗೃಹ ಕೃತ್ಯದ ಕೆಲಸದ ಮೇಲೆ ಪಟ್ಣಕ್ಕೆಹೋಗಿದ್ವಿ. ಸಂಜೆ, ಜೀವೂನ ಕರೆದು ಅವ್ನ ರೂಮ್ನಿಲ್ಲಿದ್ದಾನ,ನೋಡುಬಾ ಎಂದು ಕಳಿಸಿದೆ,–“ಇಲ್ಲ ಸಾರ್, ಅವ್ರು ಎಸ್ಟೇಟ್ ಕಡೆ ಹೋಗಿದಾರೆ. ಬರೋದು ಊಟದ ಟೈಂಗಷ್ಟೆ ಆಂತ ಆಳುಗಳು ಹೇಳಿದರು” .—ನಾನು,ಈ ಭಡವನ್ಗೆ ನನ್ನ ಪ್ಲಾನ್ ಹೇಳ್ಬೇಕು ಅನ್ನೋಷ್ಟರಲ್ಲಿ ಅವ್ನೆ ಪತ್ತೆ ಇಲ್ಲ! ಕೊನೆಗೆ ರಾತ್ರಿ ಊಟಕ್ಕೆ ಮುಂಚೆ ಅವ್ನ ರೂಮ್ನಲ್ಲಿ ಸಿಕ್ದ. ನನ್ನ ಪ್ಲಾನ್ ವಿವರವಾಗಿ ಅವನಿಗೆ ತಿಳಿಸಿದೆ,–“ನೋಡು, ನೀನ್ ಇಷ್ಟೇ ಮಾಡ್ಬೇಕಾಗಿರೋದು. ನಿನ್ನ ಹಾಸ್ಗೆ ಮೇಲೇ ಸರಿಯಾಗಿ ಫ್ಯಾನ್ ಇದೆ. ನೀನು ಯಾವಾಗ್ಲಾದ್ರೂ ಪ್ರಾಣಾಯಾಮ ಮಾಡಿದ್ದೀಯಾ? ಇಲ್ವಾ, ಹೋಗ್ಲಿ ಶವಾಸನ ಗೊತ್ತ? ಅದೇ ಸ್ಟೈಲಲ್ಲಿ, ಆದ್ರೆ ಕಾಲು ಒಂದ್ಕಡೆ, ಕೈ ಒಂದ್ಕಡೆ ಇರೋತರ ಕೆಳ ಮುಖ ಮಾಡ್ಕಂಡು ಬೋರಲು ಬಿದ್ದಿರು. ಉಸಿರಾಡೋದೊಂದ್ ಬಿಟ್ರೆ, ಸತ್ತಿದೀಯೋ, ಬಿಟ್ಟಿದೀಯೋ ಗೊತ್ತಾಗಬಾರ್ದು. ನೋಡ್ದೋರ್ಗೆ ಉರುಳಾಕ್ಕೊಂಡು ನೀನ್ ರಭಸದಿಂದ ಹಾಸ್ಗೆ ಮೇಲೆ ಬಿದ್ದು ಸತ್ತೋದ್ ತರಹ ಕಾಣ್ಬೇಕು. ನಿನ್ ಬೆಡ್ ಷೀಟ್ನ ಫ್ಯಾನ್ಗೆ ಭದ್ರವಾಗಿ ಕಟ್ಟಿ ಅದ್ರ ಇನ್ನೊಂದ್ ಕೊನೆ ನಿನ್ ಕತ್ತಿನಮೇಲೆ ಕಟ್ಟಿರ್ಬೇಕು. ಫ್ಯಾನ್ಗೂ ಹಾಸ್ಗೇಗೂ ಮಧ್ಯಬೆಡ್ ಷೀಟ್ನ ಒಂದ್ ಸ್ವಲ್ಪ ಹರ್ದಿರ್ಬೇಕು. ಬೆಳಗ್ಗೆ ೭ಗಂಟೆ ಹೊತ್ತಿಗೆ ಕಾಫಿ ತರೋ ಆಳು ನಿನ್ನ ನೋಡಿದ ತಕ್ಷಣವೆ ಎಲ್ಲಾರ್ಗೂ ವಿಷಯ ತಿಳಿಯುತ್ತೆ. ಮುಂದಿನ ವಿಷ್ಯ ನಂಗೆ ಬಿಡು.”,–“ಜೀವುಗೆ ಹೇಳಿದಿಯಾ ತಾನೇ?”,–“ಅವ್ನು ಈ ಸ್ಕೀಮ್ನಲ್ಲೇ ಇಲ್ಲ. ನಾನು ಹೇಳ್ದಮೇಲೆ ಅವ್ನು ಒಪ್ಕೊಂಡು ಕೀಪಿಂಗ್ ಅವೆ. ** ** ರಾತ್ರಿ ಎಲ್ಲಾ, ಏನೇನ್ ಆಗ್ಬೋದು, ಅದಕ್ಕೆ ಯಾವ ರೀತೀಲಿ ಸುಖಾಂತ್ಯ ಮಾಡ್ಸಿ, ಮತ್ತೆ ಎಲ್ಲ ಸರಿಹೋಗಿ ನಾನು ಉರ್ಗೆ ಹೊರಡಬೇಕು, ಜೀವಣ್ಣಂಗೆ,ಎಲ್ಲರಿಗೂ ನಾನು ಏನು ಅಂತ ತೋರಿಸಬೇಕು ಅನ್ನೋ ಯೋಚ್ನೇಲಿ,ಯಾವಾಗಲೋ ನಿದ್ದೆ ಆವರ್ಸಿತ್ತು. ಬೆಳಿಗ್ಗೆ ನಂಗೆ ಕಾಫಿ ಕೊಡಲು, ಅಡಿಗೆ ಸಹಾಯಕ ಶಂಭು ಬಾಗ್ಲು ತಟ್ಟಿದಾಗ,ಆಗ್ಲೇ ೭ ಗಂಟೆ ಆಗಿತ್ತು. ನಾನ್ ಶಂಭು ಮುಖ ನೋಡ್ದೆ. ಏನಾದರೂ ವಿಷಯ ತಿಳಿಯುತ್ತೆ ಅಂತ. ಅವ್ನು ಕಾಫಿಗ್ಲಾಸನ್ನ ಟೇಬಲ್ ಮೇಲಿಟ್ಟು ನಿಶ್ಶಬ್ದವಾಗಿ ಹೊರಟ. ಕುತೂಹಲ ತಡೀಲಾರ್ದೆ, ನಾನೇ ಎದ್ದು ಶಿವೂ ರೂಮ್ಗೆ ಹೊರಟೆ. ದಾರೀಲಿ, ಜೀವಣ್ಣ ಸಿಕ್ದ. “ಸಾರ್, ನಿಮ್ಮನ್ನೇ ಕಾಣಲು ಹೊರಟಿದ್ದೆ.”,–“ಏನ್ ವಿಶೇಷ?”, –“ನಿಮ್ಮ ಶಿವೂ ನಿಮಗೆ ತುಂಬಾ ಥ್ಯಾಂಕ್ಸ್ ಹೇಳು ಅಂತ ಹೇಳಿ ಈಗತಾನೆ ಊರ್ಗೆ ಹೊರಟರು.” “?…?”,—“ ಅವ್ರ ಸಮಸ್ಯೆ ಎಲ್ಲ ಸುಖಾಂತ್ಯವಾಗಿ, ಎಲ್ಲರೂ ಖುಷಿಯಾಗಿದಾರೆ. ನಿಮ್ಮ ಅತ್ತೆ ಅವ್ರು ಈ ಹೊತ್ತು ನಿಮಗೋಸ್ಕರ ಸ್ಪೆಷಲ್ ಪಾರ್ಟಿ ಕೊಡಕ್ಕೆ ತಯಾರಿ ಮಾಡ್ತಿದ್ದಾರೆ. ಹಾಗೆ ನಾವು ಊರ್ಗೆ ವಾಪಸ್ಸು ಹೊರಡೋದೇ ವಾಸಿ ಅಂತ ಹೇಳಿದ್ರು. ಕಾರಣ, ನಿಮ್ಮ ದೊಡ್ಡ್ಮಾವ ಈ ಸಂಜೆನೇ ಇಲ್ಲಿ ಇರ್ತಾರೆ ”,-“ಶಿವೂ ಕೊರಳಿಗೆ ಸರಿಯಾಗಿ ಬೆಡ್ಷೀಟ್ನ ಸುತ್ತಿಕೊಂಡಿದ್ದ್ನ? ಯಾರ್ಗೂ ಅನುಮಾನ ಬರಲಿಲ್ವ? ಚಿತ್ರ ಏನ್ ಹೇಳಿದಳು?” “ಇಲ್ಲ, ಆ ಸಂಧರ್ಭನೇ ಬರಲಿಲ್ಲ. ನಿನ್ನೆ ಮಧ್ಯಾನ್ಹ ಊಟದ ವೇಳೆ ಶಿವೂ ಅವ್ರು ತಲೆ ತಿರುಗಿ ಬಿದ್ದು, ಡಾಕ್ಟರ್ನ ಕರ್ಸಿದ್ರಂತೆ. ‘ಈತ ಯಾವುದೋ ಯೋಚ್ನೇಲಿ ತಲೆಕೆಡಿಸ್ಕೊಂಡು ೩-೪ ದಿನಗಳಿಂದ ಉಪವಾಸ ಇರ್ಬೇಕು. ಅದಕ್ಕೇ ಹಿಗಾಗಿರ್ಬೇಕು. ಇದಕ್ಕೆ ಕಾರಣ ನಿಮ್ಮಲ್ಲಿ ಯಾರಿಗಾದ್ರೂ ಗೊತ್ತಿರ್ಬಹುದಾ?’ಅಂತ ಕೇಳಿದ್ರಂತೆ, ಅದಕ್ಕೆ ಎಲ್ಲರೂ ಚಿತ್ರಕ್ಕಾ ಕಡೆ ನೋಡಿದ್ರಂತೆ. ‘ಈಗ ಇವರ ತಲೆ,ಹೊಟ್ಟೆ ಎರಡೂ ಖಾಲಿ. ಕೂಡ್ಲೆ ಟ್ರೀಟ್ಮೆಂಟ್ ಕೊಡಬೇಕು. ತಡ ಮಾಡಿದ್ರೆ, ಜೀವಕ್ಕೆ ಅಪಾಯ ಅಂತ ಹೇಳಿ ಅವರನ್ನ ರೂಮ್ಗೆ ಕರ್ಕೊಂಡು ಚಿಕಿತ್ಸೆ ಕೊಟ್ಟಮೇಲೆ ಸಂಜೆಗೆ ಸರಿಹೋದ್ರಂತೆ. ಚಿತ್ರ ಅಕ್ಕಾವ್ರೆ ರಾತ್ರಿ ಮಲಗೋವಾಗ ಅವರಮ್ಮನ್ನ ಎಬ್ಬಿಸಿ, ಶಿವುನ ಕರೆಸಿಕೊಂಡು ಅವರ ಮುಂದೆ ಗೊಳೋ ಅಂತ ಅತ್ತು ರಾಜಿ ಮಾಡ್ಕೊಂಡ್ರಂತೆ. ಈಗ ಇಬ್ಬರೂ ವಿಜದಶಮಿ ಆದ್ಮೇಲೆ ಕೊಡಗಿನ ಪ್ರವಾಸಕ್ಕೆ ಹೋಗ್ತಾರಂತೆ. ಮದುವೆ ಉಗಾದಿಗೆ ಮುಂಚೆನೆ ಅಂತ ನಿಮ್ಮ ರೇಖಾ ಅತ್ತೆ ಅವ್ರು ಹೇಳಿದ್ದನ್ನ ಕೇಳಿದೀನಿ.”. ನನಗೆ ಏನ್ ಹೇಳ್ಬೇಕೂಂತಲೆ ತೋಚಲಿಲ್ಲ. ಇಲ್ಲಿ ಏನೋ ಗೊಲ್ಮಾಲ್ ನಡೆದಿರೋದಲ್ಲಿ ಸಂಶಯವೇ ಇಲ್ಲ. ನನ್ ಕಣ್ಮುಂದೇನೇ ಇವರುಗಳು ನನ್ನ ಪ್ಳಾನ್ನ ಸಬೊಟೇಜ್ ಮಾಡಿ, ನಂಗೇ ಚಳ್ಳೆಕಾಯಿ ತಿನಸ್ತಿ ದಾರೆ. “ಜೀವೂ,” ಗಡುಸಿನಿಂದಲೇ ಹೇಳ್ದೆ. “ ಈ ಬಕಾಸುರನ್ನ ಪರೀಕ್ಷೆ ಮಾಡೊಕ್ಕೆ, ಸಮಯಕ್ಕೆ ಸಿಕ್ಕೋ ಡಾಕ್ಟರು ಯಾರಿರ್ಬೋದು ಅಂತ ಚೆನ್ನಾಗಿ ಗೊತ್ತಿದೆ. ನಿನ್ನ ವೇಷ ನಿನ್ನೆ ಯಾರ್ದಾಗಿತ್ತು ಸ್ವಲ್ಪ ಪ್ರಾಮಾಣಿಕವಾಗಿ ಹೇಳ್ತೀಯಾ?” “ಸಾರ್, ನಿಮ್ಮತ್ತೆ ಅವರ ಮಾತೆ ನಡೆಯೋದು ಇಲ್ಲಿ ಆಲ್ವಾ ಸಾರ್? ಅಲ್ಲಿ ನೋಡಿ ನಿಮ್ಮ ಅತ್ತೆ ಬಂದು ನಿಮ್ಮನ್ನ ಕರೀತಿದಾರೆ.” ಎಂದ,– ರೇಖಾ ಆತ್ತೆ “ನೋಡು ರಾಜೀವ, ನಿನ್ ಪ್ಲಾನ್ ನಡೆಯೋದಿಕ್ಕೆ ಸಾಧ್ಯ ಆಗೋದೇ ಇಲ್ಲ ಅಂತ್ಲೇ ಜೀವಣ್ಣನ ಮಾತು ಕೇಳಿದ್ದು. ಅಕಸ್ಮಾತ್ ನಿನ್ನ ಸ್ನೇಹಿತ ಏನೋ ಮಾಡಕ್ಕೆ ಹೋಗಿ ನಿಜಕ್ಕೂ ಉರ್ಲು ಹಾಕ್ಕೊಂಡಿದ್ರೆ ನೀನು ಮೊದ್ಲು ಆಮೇಲೆ ನಾವೆಲ್ಲಾ ಜೈಲ್ಗೆ ಹೋಗ್ಬೇಕಾಗಿತ್ತು. ಶಿವೂ ನಿನ್ಮಾತ್ಗೆ ಎದುರು ಹೇಳ್ದೆ ಸುಮ್ನಿದ್ದುದ್ದು. ನಿಮ್ಮಾವ ನಿನ್ನೆ ಊಟದ ವೇಳೇಲಿ ನಿನ್ನ ಪಟ್ಣಕ್ಕೆ ಕರ್ಕೊಂಡು ಹೋಗಿ, ಆ ಸಮಯದಲ್ಲಿ ಈ ನಾಟಕ ಮಾಡಿದ್ದು ನಿಜ. ಯಾರು ಡಾಕ್ಟರ್ ಪಾರ್ಟ್ ಮಾಡಿದರೇನು, ಈಗೆಲ್ಲ ಸುಖಾಂತ್ಯವಾಯ್ತಲ್ವ? ನಿಂಗೆ ಗೊತ್ತಿರೋ ಹಾಗೆ ನಿಮ್ಮ ದೊಡ್ಮಾವ ನಿನ್ನ ,ನಿನ್ ಸ್ನೇಹಿತರನ್ನ ಅನುಮಾನ್ವಾಗೇ ನೋಡೋದು ನಿಂಗೂ ಗೊತ್ತು. ಇದೇ ವೇಳೇಲಿ ನಿಮ್ ದೊಡ್ಮಾವಾನೂ ಇದ್ದಿದ್ರೆ ಪರಿಸ್ಥಿತಿ ಇನ್ನೂ ಕುಲಗೆಟ್ಟು ಹೋಗ್ತಾ ಇತ್ತಲ್ವ?ಚಿತ್ರ ಸುಖವಾಗಿರ್ಬೇಕು ಅನ್ನೋದ್ ತಾನೇ ನಿನ್ನ,ನನ್ನ ಎಲ್ಲರ ಆಶೆ. ಸಂತೋಷ ಪಡೋದ್ ಬಿಟ್ಟು ಕ್ವಾಪ ಯಾಕ ? ಅಷ್ಟಕ್ಕೂ ಯಾವಾಗ್ಲೂ ನಮ್ಗೆಲ್ಲಾ ಸಮಯಕ್ಕೆಆಗೋದು ಜೀವೂನೇ ಅಲ್ವ? “ಸರಿ ಹಾಗಾದ್ರೆ, ಎಲ್ಲಾ ಒಳ್ಳೇದಕ್ಕೇ. ಸರಿಹೋಯ್ತು ಬಿಡಿ ಅತ್ತೆ.”,–“ಜೀವು?”,– “ಸಾರ್ ”,–ಇಂಗ್ಲೀಷ್ ಕವಿ ಬೈರೋನ್ ಹೇಳ್ತಾನಲ್ಲ ‘ಆಲ್ ಇಸ್ ವೆಲ್ ದಟ್ಸ ಎಂಡ್ಷ್ ವೆಲ್’. ಹುಚ್ಮಾವ ಬರೋಷ್ಟರಲ್ಲಿ ಊಟ ಮುಗಿಸಿ,ನಾವು ಹೈವೇ ದಾಟಿರೋಣ.ಕಾರು,ಲಗ್ಗೇಜು ರೆಡಿ ಮಾಡು.” “ಸರಿ ಸಾರ್. ಆದ್ರೆ, ಆ ಇಂಗ್ಲಿಷ್ ಕವಿ ಬೈರೋನ್ ಅಲ್ಲ ಸಾರ್. ಶೇಕ್ಸ್ ಪಿಯರ್ ತಮ್ಮ ‘ ಕಾಮೆಡಿ’ ನಾಟಕಕ್ಕೆ ಆ ಹೆಸರು ಇಟ್ಟಿದಾರೆ. ‘ಆದದ್ದೆಲ್ಲಾ ಒಳಿತೇ ಆಯ್ತು’ ಅಂತ ದಾಸರು ಕೂಡ ಹಾಡಿದ್ದಾರೆ.” “ಹೋಗ್ಲಿ ಬಿಡು. ಯಾರಾದ್ರೇನು, ನಮ್ಮ ಶಿವೂ ಇನ್ಮೇಲೆ ಮೀನುಗಳ ಜೊತೆ ಅಲ್ದೆ, ಚಿತ್ರ ಜೊತೇನೂ ಈಜ್ಬೇಕು ! ಜೀವನ ಅಂದ್ರೆ ಇದಲ್ವ? ಚಿತ್ರ ವಿಚಿತ್ರ!^^^^^^^^^^^^ -ಲೇಖಕಎಚ್.ಅರ್. ಹನುಮಂತ ರಾವ್, ಬಿ.ಎಸ್.ಸಿ.,ಎಮ್. ಐ.ಇ.,ಎಮ್. ಐ. ಐ.ಎಮ್ (ನಿ)ಪ್ರಬಂಧಕ, ಎಚ್.ಎ.ಎಲ್.
NOTE:This humorous story was modelled after the style and format of famous humourist, P.G.Wodehouse’s Berti Wooster- Jeeves Series chronicles and was published in January 2012 issue of famous kannada humour mthly. magazine”APARANJI”(Editors-Belur Ramamurthy, aparanji Shivu).
———————————————————————————-
Комментарии