ಸ್ವರ್ಗ ಲೋಕಕ್ಕೊಂದ್ ಸರ್ಪ್ರೈಸ್ ವಿಸಿಟ್(ನಾಟಕ).
- haparna
- Jan 5, 2017
- 8 min read
ಲೇಖಕ: ಎಚ್.ಆರ್.ಹನುಮಂತ ರಾವ್ ————————————————————————— ವೆಂಕಿ, ರಾಘು, ಶೀನೀ, ಸೋಮು, ಚಂದಿ ಹಾಗು ಮಾಧು -ಇವರೇ ನಮ್ಮಸಿಟಿ ಸೋಷಿಯಲ್ ಕ್ಲಬ್ನ ಮಹಾ ಸದಸ್ಯರುಗಳು. ನಮ್ಮ ನಾಟಕದ ಗ್ರೂಪಿನಲ್ಲಿ ಇವರಲ್ಲದೆ ಹಲವರು ಹೊರಗಿನವರೂ ಉಂಟು. ಕಳೆದ ವೈಕುಂಠಏಕಾದಶಿ ದಿನ ಒಂದು ಏಕಾಂಕ ಪ್ರಹಸನದ ನಾಟಕವಾಡಿದೆವು. ಪ್ರೇಕ್ಷಕರೆಷ್ಟು ಮಂದಿ ಎಂದು ಕೇಳಬೇಡಿ.ಕಾರಣ, ‘ಇದ್ದವರೇ ಆರು, ಬಿಟ್ಟವರ್ಯಾರು’ ಎನ್ನುವ ಹಾಗೆ ಆಗಬಾರದಲ್ಲವೇ? ಆದ್ದರಿಂದ ಸಾರಾಂಶ ಮಾತ್ರ ನಾವಾಡಿದ ಪ್ರಹಸನದ ರೂಪದಲ್ಲೇ ಹೇಳಿಬಿಡುತ್ತೇನೆ: **** . . **** ಪರದೆ ಮೇಲೇಳುತ್ತಲೇ ಸ್ವರ್ಗ ಲೋಕದ ದೃಶ್ಯ ಕಾಣ ಬರುತ್ತದೆ.‘ವೈಕುಂಠಕ್ಕೆ ದ್ವಾರ’ ಎಂದು ಬರೆದು ಹಾಕಿದ ಬಾಗಿಲ ಬಳಿ ದ್ವಾರಪಾಲಕನೊಬ್ಬ ವಿಧಾನ ಸೌಧದ ಡವಾಲಿ ಜವಾನನ ತರಹದ ಸಮ ವಸ್ತ್ರ ಧರಸಿ ನಿಂತಿರುವನು. ಅಲ್ಲಿಗೆ ಆರು ಜನ ವಿವಿಧ ವೇಷಗಳಲ್ಲಿ ಆಗಮನವಾಗುವುದು. ಒಬ್ಬನು ಮಂಡಿ ಮೇಲಕ್ಕೆ ಕಟ್ಟಿದ ಕಚ್ಛೆ ಪಂಚೆ, ಹೆಗಲಿಗೊಂದು ವಸ್ತ್ರ, ಹಣೆಯಲ್ಲಿ ದಟ್ಟವಾದ ವಿಭೂತಿ ಪಟ್ಟೆ, ಕೈಯಲ್ಲಿ ಧರ್ಭೆ ಹಿಡಿದವನು, ಹೆಸರು ವೆಂಕಟಸುಬ್ಬಶಾಸ್ತ್ರಿ. ಬಿಳಿ ಗಡ್ಡ, ಕುರುಚಲು ಮೀಸೆ, ಜುಬ್ಬಾ, ಮೇಲೊ೦ದು ವೈಷ್ಟ್ ಕೋಟು, ಪೈಜಾಮ, ಕಪ್ಪು ಕನ್ನಡಕ, ಹೆಗಲಿಗೊಂದು ಜೋಳಿಗೆ, ಕೈಯ್ಯಲ್ಲೊಂದು ಡೈರಿ ಹಿಡಿದುಕೊಂಡ ಇನ್ನೊಬ್ಬನ ಹೆಸರು ವಿಶ್ವ ಮೂರ್ತಿ. ಮೂರನೆಯವನು ಸೂಟು ಬೂಟು ಧರಿಸಿ ಕೈಯಲ್ಲೊಂದು ಪುಸ್ತಕ ಹಿಡಿದಾತ, ಪ್ರೊಫ಼ೆಸರ್ ಅಂದು ಯಾರು ಬೇಕಾದರೂ ಹೇಳಬಹುದು. ತಾನೊಬ್ಬ ಶ್ರೇಷ್ಟ ವೇದಾ೦ತಿ, ವೈಚಾರಿಕ ಎಂಬ ಭ್ರಮೆ, ಹೆಸರು ಗಿರೀಶ, ನಾಲಕ್ಕನೆಯವನು ಗರಿಗರಿಯಾದ ಬಿಳೀ ದಟ್ಟಿ ಪಂಚೆ, ಶರ್ಟು, ಮೇಲೊಂದು ಷೆಲ್ಯಾ, ತಲೆಗೊಂದು ಬಿಳಿ ಖಾದಿ ಟೋಪಿ, ಮುಖದಲ್ಲಿ ದೇಶಾವರಿ ನಗೆ, ಹೇಳಲೇಬೇಕಾಗಿಲ್ಲ ಇವನು ಜನಸೇವಕ, ಅವರಿಗಾಗಿಯೇ ಹುಟ್ಟಿಬಂದವನಂತೆ, ಜನರಿಗಾಗಿಯೇ ಜೀವ ಸವೆಸುತ್ತಿರುವನಂತೆ, ಈಗ ಅಧಿಕಾರದ ಗಾದಿಯಲ್ಲಿ ಭದ್ರವಾಗಿ ಕೂತು ಅಟ್ಟಹಾಸದಿಂದ ಮೆರೆಯುತ್ತಿರುವ ಕುಶಲಮಂತ್ರಿ, ಹೆಸರು ಜಾನುವಾರಪುರ ಪಟ್ಟಣಸೆಟ್ಟಿ ಮಹಾದೇವಯ್ಯ. ಐದನೆಯವನೇ ಕಚ್ಚೆ ಪಂಚೆ, ಧೋತರ ಧರಿಸಿದವ, ಗೋಪಾಲಕೃಷ್ಣ ಗುಡಿ ಪೂಜಾರಿ- ಟೀವಿಎಸ್ಸಾರ್ ದೇಶಿಕನ್ (ಅರ್ಥಾತ್ ತಿರುಮಲೈ ವೇಂಕಟನಾಥ ಶ್ರೀರಂಗಾಚಾರ್ ರಂಗನಾಥನ್ ದೇಶಿಕನ್), ಮುಖದ ಮೇಲಿನ ದೊಡ್ಡದಾದ ಆಂಗ್ಲ ಅಕ್ಷರ -ವೈ-ಹೋಲುವ ಬಿಳಿ ಪಟ್ಟೆ ನಾಮ, ಆರನೆಯವನೇ ಬಿಳಿ ಪೈಜಾಮ,ವೈಸ್ಟ ಕೋಟು, ದಪ್ಪದ ಕನ್ನಡಕ, ಕೆದರಿದ ತಲೆ ಕೂದಲು, ಅರ್ಧ ಬಿಳಿ, ಅರ್ಧ ಬಕ್ಕ ತಲೆ, ಕೈಯಲ್ಲೊಂದು ಪೆನ್ನ ಹಿಡಿದವ, ಯಾರವ? ಬಿಡಿ, ಅವನು ತೆರೆಯ ಮೇಲೆ ಬಂದಾಗ ಪರಿಚಯ ಮಾಡಿಕೊಂಡರಾಯಿತು. ಅದೇನೂ ಅಂಥ ಮುಖ್ಯವಾದದ್ದಲ್ಲ್ ಇದೀಗ ನಾಟಕ : ಪರದೆ ಮೇಲೇಳುತ್ತಲೇ ಸ್ವರ್ಗದ ಬಾಗಿಲ ದೃಶ್ಯ. ಯಾವುದೇ ಸರ್ಕಾರಿ ಅಧಿಕಾರಿಯ ಕೊಠಡಿಯ ದ್ವಾರವನ್ನು ಹೋಲುವಂತೆ. ಒಂದೆರಡು ನಿಮಿಷಗಳ ಕರ್ನಾಟಕ ಸಂಗೀತ, ಪಾಶ್ಚಿಮಾತ್ಯ ಹಾಗು ಬೀಟಲ್ ಎಲ್ಲಾ ಮಿಶ್ರಿತ- ಕಲಸುಮೇಲೋಗರ ವಾದ್ಯ ಸಂಗೀತ. ಸದ್ದು ನಿಲ್ಲುತ್ತಿದ್ದಂತೆ, ಬಾಗಿಲಿನ ಬಳಿ ಮೇಲೆ ಹೇಳಿದ ಎಲ್ಲ ಮಂದಿ, ಒಬ್ಬೊಬ್ಬರ ಹೆಸರನ್ನು ಬಾಗಿಲ ಬಳಿಯ ಸೇವಕ ಕೂಗುತ್ತಿದ್ದಂತೆ ಪ್ರತ್ಯಕ್ಷರಾಗುವರು. ಗುಡಿ ಪೂಜಾರಿ ದೇಶಿಕನ್ ಬಾಗಿಲನ್ನು ತಳ್ಳಿ ಒಳ ಹೋಗುವ ಪ್ರಯತ್ನದಲ್ಲಿ ತಡೆಯುವ ಡವಾಲಿ ಸೇವಕ. ಡ. ಸೇ.(ಆತನನ್ನು ತಡೆಯುತ್ತಾ): ಸ್ವಾಮಿ, ಅಲ್ಲೇ ನಿಲ್ಲಿ, ಒಳಗೆ ಸೆಕೆಟ್ರೀ ಬೆಲ್ ಮಾಡಿ ಕರೆದ್ಮೇಲೆ ಒಬ್ಬೊಬ್ಬರೇ ಒಳ ಹೋಗಬೇಕು, ತಿಳಿಯಿತೇ? ದೇಶಿಕ: ಎಲೆಲೆ, ಎನ್ನಡಾ, ಇದು ಸ್ವರ್ಗದ ಬಾಗಿಲೊ, ತಹಸೀಲ್ದಾರ್ ಕಛೇರಿನೋ? ಉಣಕಿ ಯೆವಳ ಫ್ಯಾಟ್- ಕೊಬ್ಬು? ನಾನ್ಯಾರ್ ಕೊತ್ತಾ? ಆ ಗಾಡ್’ನ ಸೆಕೆಟ್ರೀ, ಗೊತ್ತಾಯ್ತಾ? ನಿನ್ ಮಾದರಿ ಸೇರವಂಟ್ ಆಲ್ಲೇ. ನನಗಿ ಬಿಡು. ಎನ್ನ ತೋಡಾದೆ, ಕೀಪ್ ಆಫ್ ಮೈ ಹ್ಯಾಂಡ್. ಡ. ಸೇ.: ಏ ಸ್ವಾಮಿ, ಇದು ನಿಂ ಭೂಲೋಕದ್ ಕಚೇರಿ ಅಲ್ಲ, ಅದಕ್ಕೆ ನಾ ಹೇಳ್ತಾ ಇರೋದು, ಇಲ್ಲಿ ಯಾರ ಅಟಾಟೋಪನು ನಡೆಯಲ್ಲ.ಇಲ್ಲಿ ರೂಲ್ಸ್ ಬೇರೆ. ಸ್ವಲ್ಪ ಇರಿ. ವೇಂ.ಸು.ಶಾಸ್ತ್ರಿ: ನಾನೆಷ್ಟು ಜನಕ್ಕೆಸತ್ತಾಗ ಪ್ರೇತ ಕರ್ಮ ಮಾಡ್ಸಿ, ಎಲ್ಲರಿಗೂ ನರಕದ ಒನ್ವೇ ಟ್ರಾಫಿಕ್ ತಪ್ಸಿ, ಸ್ವರ್ಗದ ದಾರಿ ತೋರ್ಸಿದೀನಿ, ಇಲ್ಲಿ ನೋಡಿದ್ರೆ ಮತ್ತೆ ರೂಲ್ಸು, ರೂಲ್ಸು, ಅದರ ಪಿಂಡ, ಸ್ವರ್ಗದಲ್ಲೆಂತಹದಯ್ಯ ನಮ್ಮ೦ತ ಹವರ್ಗೆ? ಬೆಳಿಗ್ಗೆ ಎದ್ರೆ ಚಟ್ಟ ಕಟ್ಟೋ ಮನೆ ಮುಂದೆ ಹೋಗಿ ಹೆಣಕ್ಕ ದಾರಿ ಮಾಡೊವ್ನ್ ನಾನು. ಡ. ಸೇ. ಸ್ವಾಮಿಗೋಳೇ, ನಿಂಕೈಯ್ಯಲ್ಲಿ ಕರ್ಮ, ತಿಥಿ ಮಾಡ್ಸಕಂಡವ್ರು ಸ್ವರ್ಗಕ್ಕೆ ಬಂದ್ರು ಬರ್ಬೋದು ಆದ್ರೆ, ನೀವು ಅ೦ಥವ್ರ ಹೆಣ ಎದುರಿಗೆ ಇಟ್ಕ೦ಡ್ ಒಂದಕ್ಕೆ ನಾಲ್ಕರಷ್ಟು ಹಣ ವಸೂಲಿ ಮಾಡಿರೋದ ಪಟ್ಟಿ ಕೂಡ ಯಮಲೋಕದಿಂದ ಇಲ್ಲಿಗೆ ರವಾನೆ ಆಗಿರುತ್ತೇ, ಸುಮ್ನೆ ಮಾತಾಡ್ದೇ ನಿಂತ್ಕಳ್ಳಿ. ನಿಂ ಹೆಣಕ್ಕೂ ರೇಟ್ ಫಿಕ್ಸ್ ಮಾಡೀ, ದಾರಿ ಮಾಡೀವರ೦ತೆ ಆಮ್ಯಾಕೆ. ಯಾರ್ಬೇಡಾಂದ್ರೂ. (ಶಾಸ್ತ್ರಿ ಅವನನ್ನು ಕೆಂಗಣ್ಣಿನಿಂದ ನೋಡುವ.) ವಿಶ್ವ ಮೂರ್ತಿ: ಇಂಥವರನ್ನ ನಾವೇ ನೋಡ್ಕೊಳ್ತೀವಿ, ನಮ್ಮ ಕೈಗಧಿಕಾರ ಬಂದ್ರೆ, ಧರ್ಮ ಅಂತೆ ಧರ್ಮ!, ಈ ಸ್ವರ್ಗ,ನರಕಗಳು ಅಷ್ಟೇಯಾ, ನಾವ್ ಕಿತ್ಬಿಸಾಕಕ್ಕೆ ತಯಾರಿದೀವಿ, ಅದಕ್ಕೆ ನಾವ್ ಇಲ್ಲೀ ತ೦ಕಾ ಬಂದಿರೋದ್ ಕಣಯ್ಯಾ, ಯು ಆಲ್ಸೋ ಷಟಪ್. (ಕರೆ ಗಂಟೆ ಶಬ್ದ ವಾಗುತ್ತದೆ. ಸೇವಕ ಒಳಗೆ ಇಣಕಿ ನೋಡಿ, ನಂತರ ದೇಶಕನಿಗೆ ಒಳ ಹೋಗುವಂತೆ ಕೈ ತೋರಿಸುತ್ತಾನೆ. ಸ್ವರ್ಗದ ಬಾಗಿಲ ಒಳಗೆ ತೆರೆಯುತ್ತಾ ಅಲ್ಲಿ. ಹಾವಿನ ಆಕಾರದ ಹಾಸಿಗೆಯ ಮೇಲೆ ರಾಜನಂತೆ ಮಲಗಿದ್ದವನೆದ್ದು ಪಕ್ಕದಲ್ಲಿಯ ಸೋಫಾದ ಮೇಲೆ ವೈಕುಂಠೇಶ್ವರನ ಅಲಂಕಾರದಲ್ಲಿ ಆಸೀನನಾಗುವನು ಮಹಾ ವಿಷ್ಣು. ಅವನಿಗಷ್ಟು ದೂರದಲ್ಲಿ ಕೈಯಲ್ಲಿ ಟ್ಯಾಬ್ಲೆಟ್ ಕಂಪ್ಯೂಟರ್ ಹಿಡಿದು ನಿಂತಿರುವ ಸೆಕೆಟ್ರೀ .) ಸೆ: ದೇಶಿಕನ್, ಮಹಾವಿಷ್ಣು ಸನ್ನಿಧಾನ ಇದು. ನೀವು ಯಾವ ಆಧಾರದ ಮೇಲೆ ಸ್ವರ್ಗಕ್ಕೆ ಬರಲು ಯೋಗ್ಯತೆ ಉಂಟೋ ನಾಲ್ಕೇ ವಾಕ್ಯಗಳಲ್ಲಿ ಹೇಳಿ. ದೇಶಿಕನ್(ಅಡ್ಡ ಬೀಳುತ್ತಾ): ‘ನಾರಾಯಣ, ನಾರಾಯಣ, ಪಾಹಿ ಪಾಹಿ ಮಾಂ. ನಾ ಸಾಯ೦ ಪ್ರಾತಃ ನಿನ್ನ ಪೂಜೆಯಲ್ಲೇ ಇರುತ್ತೇನಲ್ಲವೇ ಪ್ರಭು? ಉಣಿಕಿ ಎಲ್ಲಾಮ ಅರಿಯುಮ್, ನನ್ನ ಹೆಂಡತಿ, ಪೊರ೦ದ ಕೊಳಂದೆ, ವೀಡು ಎಲ್ಲಾ೦ ವಿಟ್ಟು ಅಂಗೇಯೇ ಇರಕೇ,‘ಕೊಳ೦ದೆ, ಪೋನ್ಡಾಟಿ ಇಲ್ಲ ಎಂದು ನೆನೆಕರೆಯಾ?’ ಎಂದು ಬಯ್ಯದ ದಿನವಿಲ್ಲ,ಹಾಗಾಗಿ ನಾರಾಯಣ ನಿನ್ನ ಸ್ವರ್ಗ, ಅಲ್ಲಿ ಇಂದ್ರ, ರಂಭೆ, ಅಪ್ಸರೆ, ಮೇನಕೆ ಇವರುಗಳ ಕಂಪೆನಿಯೇ ಎನಕು ಪೋದು೦, ಪೋದು೦. ಯಾರಿಕು ವೆಂಡ೦ಮ್ ಈ ಫ್ಯಾಮಿಲಿ, ಈ ಗಲಾಟ ವೈಫು, ಕೊಳಂದೆ? ’ನೀಯೆ ಶೊಲ್ಲಿರ್ಕೆ ಎಲ್ಲಾ ಮಾಯಂ’ಎನ್ನುಟು. ಮಹಾ ವಿಷ್ಣು: ಸೆಕ್ರೆಟರಿ? ಏನೀ ಭಕ್ತನ ಚರಿತ್ರೆ, ಇವನ್ಯಾಕಿದ್ದಿತು ಅಪ್ಸರೆ, ಮೇನಕೆಯರು? ಅವರೆಲ್ಲ ಇವನ ಕೊಟ್ಟೀಗೆಯ ದನಗಳು ಅಂದುಕೊಂಡಿರುವನಾ ಹೇಗೆ? ಸೆ:ಈತ ತಟ್ಟೆ ಕಾಸಿಂದ ಹಿಡಿದು ನಿನ್ನ ದೇವಸ್ಥಾನದಲ್ಲಿ ನಡೆಯುವ ಹೋಮ, ಹವನ ಹಾಗೂ ಎಲ್ಲಾ ವ್ಯವಹಾರಗಳಲ್ಲೂ ಬಾಚಿ ಬಾಚಿ ಯಾರಿಗೂ ಗೊತ್ತಾಗದಂತೆ ಬೇರೆಬೇರೆ ಜಾಗಗಳಲ್ಲಿ ಮುಚ್ಚಿಟ್ಟು ಕಾರು, ಬಂಗಲೆ ಎಲ್ಲಾ ಸಂಪಾದಿಸಿದ್ದಾನೆ, ಓ ನಾರಾಯಣ. ಮ. ವಿ. :ಎಲೈ ದೇಶಿಕಾ, ದೇವರಿಗೆ ಗೊತ್ತಾಗದ್ದು ಇನ್ನು ಇದೆ ಅಂದುಕೊಂಡಿರುವೆಯಾ ಮೂರ್ಖಾ?, ಮತ್ತಿನ್ನೇನಾದರೂ ಇವನ ಪುಣ್ಯ ಕಾರ್ಯವು೦ಟೊ? ಹೇಳಿಬಿಟ್ಟು ಹೊರಡು. ಸೆ.:ಸ್ವಾಮಿ, ರಾತ್ರಿ, ತಲೆಗೆ ಮುಸುಕು ಹಾಕಿಕೊಂಡು ಹೆಂಡತಿ ಮಕ್ಕಳಿಗೂ, ಭಕ್ತಾದಿಗಳಿಗೂ ತಿಳಿಯದಂತೆ ಇವ ಆ ಮಹಾ ಸ್ವಾಮಿ ಭಕ್ತ, ನಿನ್ನ ಕೃಪಾ ಪೋಷಿತ ರಾಮಾನುಜ ಐಯಂಗಾರರ ಹಿಂದಿನ ರಸ್ತೆಯಲ್ಲಿರುವ ಲೀಲಾಸಾನಿಯ ಮನೆಗೆ ಹೋಗಿಬರುವ. ದೇಶಿಕನ್: ಆ ಬಾಗಿಲು ಸ್ವರ್ಗಕ್ಕೆ ಹೋಗುವುದುಂಟ ಸೆಕೇಟ್ರೀ? ಓ,ಮಹಾ ವಿಷ್ಣು, ನಮೋ ನಮಃ,ಈ ಚಾಂಡಾಲನ ಮಾತೇಕೆ ಕೇಳುವಿರಿ, ನಿಮ್ಮ ಅನನ್ಯ ಭಕ್ತ ನಾನು, ಕಾಪಾಡು. ನನ್ನಲ್ಲಿ ಬಂದ ಭಕ್ತರಿಗೆಲ್ಲಾ ನಿನ್ನ ಮಂತ್ರ ಹೇಳಿ ಅವರಿಗೆ ಸ್ವರ್ಗದ ದಾರಿ ಹತ್ತಿರಕ್ಕೆ ಬರುವಂತೆ ಮಾಡಿದ್ದೇನೆ ಓ ಆ೦ಡಾಳನೇ. ಸೆ.: ನಿಮಗೇ ತಿಳಿಯುತ್ತೆ, ಹೊರಡಬಹುದು.ನಿಮ್ಮ ದಾರಿ ಆ ಕಡೆ. (ಹೊರಡುವನು ಆ ಕಡೆ ಬಾಗಿಲು ತಳ್ಳಿ, ಅದು ತೆರೆಯುತ್ತಲೇ ಒಳಗೆ ಕಾಣಿಸುವ ಬೋರ್ಡ್ ‘ನರಕಕ್ಕೆ -ಒಂದೇ ದಾರಿ -ಹೀಗೆ ಪ್ರಪಾತಕ್ಕೆ ತಳ್ಳುವ ಶಬ್ದ, ಒಂದು ಕ್ಷಣ -.ಕತ್ತಲು ನೇಪಥ್ಯದೆಲ್ಲೆಲ್ಲೂ ತುಂಬಿಕೊಳ್ಳುತ್ತದೆ. ಮನುಷ್ಯನು ಕಿರುಚಿದ ದೊಡ್ಡ ಧ್ವನಿ ಕೇಳಿಸುತ್ತದೆ. ಮತ್ತೆ ಬೆಳಕು) ಮ.ವಿ. : ಎಲ್ಲರು ಹೀಗೆಯೇನೋ? ಸೆ: ಅದೇನು ಹೇಳಲಿ ಮಹಾ ಸ್ವಾಮಿ, ಭೂ ಲೋಕದಲ್ಲಿ ಅದು ನಿಮ್ಮ ಪ್ರೀತಿಯ ಭಾರತದಲ್ಲಂತೂ ಅತಿರೇಕಕ್ಕೆ ಹೋಗಿದ್ದಾರೆ ಜನ, ನಿನ್ನ ಹೆಸರಿನಲ್ಲೇ ವಂಚನೆ -ಭಿಕ್ಷುಕರಿಂದ ಹಿಡಿದು ಭೂಪತಿಗಳವರೆಗೆ- ಹೇಳುವುದು ಒಂದು, ಮಾಡುವುದು ಇನ್ನೊಂದು. ಅತಿ ಪಾಪ ಕಾರ್ಯಗಳೇ.. ಸೆಕೆಟ್ರಿ ಬಾಗಿಲ ಬಳಿ ಹೋಗಿ ಮತ್ತೊಬ್ಬನನ್ನ ಕಳುಹಿಸುವಂತೆ ಹೇಳುವನು. ಡ. ಜ.: ಮಹಾದೇವಯ್ಯಾ,ಯಾರ್ರೀ ಎಂದು ಕರೆದು, ಆತ ಬರುತ್ತಲೇ, ಅಲ್ಲಿ ಕೇಳಿದಷ್ಟಕ್ಕೆ ಮಾತ್ರ ಹೇಳಿ, ಇಲ್ಲಿರುವುದು ಮಹಾ ವಿಷ್ಣು ಹೈ ಕಮಾಂಡ್. ಮಹಾದೇವಯ್ಯ: ವಿಷ್ಣು ಇಲ್ಲಿಗಷ್ಟೆ ಮಹಾ ಹೈ ಕಮಾಂಡ್, ನಮ್ಮ ಹೈಕಮಾಂಡ್ ನೋಡ, ಒಂದು ನರಪಿಳ್ಳೆನೂವ ಎದುರು ಮಾತಾಡಾಂಗಿಲ್ಲ, ಅದಪ್ಪ ಹೈ ಕಮಂಡ ಅಂದ್ರ ಹಾಂಗಿರಬೇಕ. ಡ.ಜ.: ಅದ್ಕೆ ಅವರ ಕಾಲಿಗೆ ಬಿದ್ದು, ಡೊಗ್ಗು ಸಲಾಂ ಮಾಡಿ ಬಗ್ಗಿ ಇರ್ತಿರಲ್ಲ, ನಿಮಗೆ ಬೇಕಾದ್ಹಾಗೆ ಜನರ ದುಡ್ನ ಕೊಳ್ಳೆ ಹೊಡೆಯಾದೆಲ್ಲ ರೆಕಾರ್ಡ್ ಆಗಿರತ್ತೆ ಇಲ್ಲಿ, ಹೋಗಿ ಸುಮ್ನೆ ಒಳ್ಗೆ. ಇಲ್ಲೊರೋದ್ ಪುರುಷೋತ್ತಮ. ಮಹಾ ವಿಷ್ಣು. ಯಾವ ಅಮ್ಮನೂ ಅಲ್ಲ, ರಾಜಕುಮಾರನೂ ಅಲ್ಲ. ಮಹಾ ದೇವಯ್ಯ: ಡವಾಲೀ ಜವಾನನ ಕಡೆ ತುಚ್ಛವಾಗಿ ಕೆಕ್ಕರಿಸಿ ನೋಡುತ್ತಾ, ಮೊದಲೇ ವಾಲಿದ್ದ ಗರಿಗರಿ ಟೋಪಿಯನ್ನ ಮತ್ತಷ್ಟು ಪಕ್ಕಕ್ಕೆ ವಾಲಿಸಿ, ಹೆಗಲ ಮೇಲಿನ ಶಲ್ಯವನ್ನ ಸರಿಪಡಿಸಿದಂತೆ ಮಾಡಿ, ಠೀವಿಯಿಂದ ಬೀಗುತ್ತಾ,ಅಟ್ಟಹಾಸವನ್ನ ಸೂಸುತ್ತಾ, ಕೃತಕ ನಗುವನ್ನ ಮುಖದ ಮೇಲೆ ತರಿಸಿಕೊಂಡು ಒಳಗೆ ಪ್ರವೇಶಿಸುವನು.) ಮ.ವಿ.: ಯಾರ್ ಈತ, ಹಿರಣ್ಯಕಶುಪನ ಅಹಂ ಅನ್ನೂ ಮೀರಿಸುವಂತಿದೆ ಇವನ ಅಹಂಕಾರ,ನಡೆ,ಗತ್ತು? ಸೆ.: ಮಹದೇವಯ್ಯ ನೀನೇನಾ? ಸ್ವಾಮಿ ಜಗನ್ನಾಥ, ಈ ಮನುಷ್ಯ ರಾಜ್ಯವನ್ನ ಆಳುತ್ತಿರುವ ಗುಂಪಿನವ. ಸುಮಾರು ಜನರಿಗೆ ಟೋಪಿ ಹಾಕಿ, ತನ್ನ ಸ್ವಂತ ಅಣ್ಣ ತಮ್ಮ೦ದಿರ ಆಸ್ತಿಯನ್ನೆಲ್ಲ ಅಕ್ರಮ, ಮೋಸದಿಂದ ಮುಟ್ಟಗೋಲು ಹಾಕಿಕೊಂಡವನು. ತಂದೆ ಸಾಯುವ ವೇಳೆ ಇನ್ನೂ ಜೀವಂತ ಇದ್ದಾಗಲೇ ಆತನ ಕೈ ಬೆರಳನ್ನೇ ಕೊಯ್ದು ವಜ್ರದ ಉಂಗುರವನ್ನ ಪಡೆದವನು.ಸರ್ಕಾರದ ಕೆಲಸವೆಂದು ಊರೂರು ಸುತ್ತುತ್ತಾ ಸರ್ಕಾರಿ ಬಂಗಲೆಗಳಲ್ಲಿ,ಜನರ ದುಡ್ಡಿನಲ್ಲಿ ಪರಹೆಣ್ಣುಗಳೊಡನೆ ರಾಸಕ್ರೀಡೆಯಾಡುವ ಸ್ವೇಚ್ಚಾಚಾರಿ,ಪರಮ ಪಾಪಿ, ರಸ್ತೆಯಲ್ಲಿ ಕಂಡ ಕಂಡ ಹೆಣ್ಣು ಮಕ್ಕಳನ್ನೇ ತನ್ನ ಗುಂಡಾ ಸಹಚರರಿಂದ ತರಿಸಿ ಅನ್ಯಾಯ ಎಸಗಿದವನು. ಇವ ಎಲ್ಲಾ ಊರಲ್ಲೂ ಬೇನಾಮಿಯಾಗಿ ಮನೆಗಳನ್ನು ಮಾಡಿ ಜನರಿಗೆ ವಂಚನೆ ಮಾಡಿ,ಗೋಮಾಳಗಳನ್ನೂ ಪಡೆದು ಕೋಟಿಗಟ್ಟಲೆ ಹಣ ಅಕ್ರಮವಾಗಿ ಸಂಪಾದಿಸಿದವ.’ಬಡವರು, ಬಡವರು ಎನ್ನುತ್ತಾ’ ಅವರಿಗೆ ಕೊಡಮಾಡಿರುವ ಬಿಪಿಎಲ್ ಎಂಬ ಗ್ರಾಸದಲ್ಲಿ ಕಲಬೆರಕೆ ಮಾಡಿ ವಂಚಿಸುವವ.ಆ ಮೋದಿ ಐನೂರು/ಸಾವಿರ ರುಪಾಯಿಗಳನ್ನ ಅಪಮೌಲ್ಯ ಮಾಡ್ದಾಗ ಇವನ ಬಂಧು, ಮಿತ್ರರ ಅಕೌಂಟಿನಲ್ಲಿ, ಅವರ ಮನೆಗಳಲ್ಲಿ ಲಕ್ಶ ಲಕ್ಷ ನೋಟುಗಳನ್ನು ಇಟ್ಟಿದ್ದು ತೆರಿಗೆ ಅಧಿಕಾರಿಗಳು ಕಂಡು ಹಿಡಿದ್ದಾರೆ ಓ ಮಹಾಸ್ವಾಮಿ ಭಗವಂತ. ಇಷ್ಟಾದರು ಆಡಳಿತ ಸಭೆಗಳಲ್ಲಿ ಪೋರ್ನೋ ನೋಡ್ಕಂಡಿರುವುದ ಇವನ ನಿತ್ಯಕರ್ಮ ಸ್ವಾಮಿ ಭಗವಂತ. ಮಹಾ ದೇವಯ್ಯ(ಕಣ್ಣು ಕೆಂಪಗೆ ಮಾಡಿ ಬುಸುಗುಟ್ಟುತ್ತಾ): ಏ ಸೆಕ್ರೆಟ್ರಿ, ನನ್ನೆದುರ್ಗೆ ಹೀಗೆ ಮಾತಾಡಾವ ನನ್ನ ಬೆನ್ನ ಹಿಂದೆ ಅ ವಿಷ್ಣುಗೆ ಏನೇನ್ ವಿಸ್ಯ ಮುಟ್ಸತೀಯಾ, ಓ ವಿಷ್ಣು ಸ್ವಾಮಿ, ನನ್ನ ಸೆಕ್ರೆಟರಿ ಕರೆಸ್ರಿ, ನಿಮ್ಗೆಲ್ಲ ಏನ್ದಾರಿ ಮಾಡ್ಬೇಕೋ ನನ್ಗೆ ಗೊತ್ತದೆ. ತಗಳಪ್ಪ, ಈ ಸ್ವರ್ಗ್ದಾಗೆ ವಿಷ್ಣುವಿಂದ ಹಿಡ್ದ ಜವಾನ್ತಂಕ ಜಾತಿ ಬೇಧ ಮಾಡಾಂಗ ಕಾಣಸ್ತೈತಿ, ನಾನು ಬೇರೆ ಜಾತಿನವ ಅಂದ್ಬಿಟ್ಟು ನೀವೆಲ್ಲ ಹಿಂಗ ನನ್ನ ದೂಷ್ಣೆ ಮಾಡಕ್ಕೆ ಹೊಂಟೀರಾ? ಮಟ್ಟ ಹಾಕ್ಬಿಟ್ಟೇನು ಅಲ್ಲಿ ಅಮ್ಮನೋ,ಕುಮಾರನೋ ಪರ್ಮಿಶನ್ ಕೊಟ್ರೆ. ಮ. ವಿ.: ಇಂಥವ್ರೇ ಭೂಲೋಕ್ದಲ್ಲಿ ಜಾಸ್ತಿ ಆಗ್ತಿದೆಯ?, ಅದೂ ಭಾರತದಲ್ಲೇ, ಆ ಕಂಸ, ರಾವಣ್ನಂತವ್ರೇ ಎಷ್ಟೋ ವಾಸಿ ಇವ್ರ ಮುಂದೆ, ಕಳ್ಸಿಇವ್ನನ ಆ ದಾರಿಗೆ( ಎನ್ನುತ್ತಾ ಮತ್ತೆ ಕಣ್ಣ್ಮುಚ್ಚುವ). ಸೆ.: ನಡೀರಿ ಆ ಕಡೇ,ಅಲ್ಲೇ ಸ್ವರ್ಗದ ದಾರಿ ಇದೆ. ಇಲ್ಲಿ ವಿಷ್ಣು ಪರ್ಮಿಷನ್ ಕೊಟ್ಟವ್ರೆ(ಮೀಸೆ ತಿರುವುತ್ತ ಮಹಾದೇವಯ್ಯ ತಾನು ಬಂದ ಬಾಗಿಲಿಗೆ ಹೋಗುವ). ಸೆ.:ಆ ಕಡೆ ಅಲ್ಲ ಮಂತ್ರಿ, ಹೀಗೆ ಈ ಬಾಗಿಲಿಗೆ ನಿಮ್ಮ ಹೈ ಕಮಾಂಡ್ ಕಡೇ(ಎಂದು ಇನ್ನೊಂದು ಬಾಗಿಲು ತೋರಿಸುವ. ಆವನು ಅತ್ತ ಹೋಗುತ್ತಲೇ ಕತ್ತಲು ಒಂದು ಕ್ಷಣ, ಧಿಡೀರ್ ಶಬ್ದ, ಮನುಷ್ಯ ಕಿರುಚಿದ ಶಬ್ದ ಕೇಳಿಬರುತ್ತದೆ, ನಂತರ. ಎಲ್ಲಾ ಸ್ಥಬ್ಧ. ಮತ್ತೆ ಬೆಳಕು.), ಮುಂದಿನವರನ್ನು-ಹೆಸರು ಗಿರೀಶ- ಕರೆಯಿರಿ- ಡ.ಜ.: ಯಾರ್ರೀ ಗಿರಿಶಾ? ಬೇಗ ಬನ್ನಿ, ಸೂಟು,ಬೂಟಿನ ಸಣ್ಣನೆಯ,ಲಂಬು ಮನುಷ್ಯ ಪ್ರವೇಶ, ಕೈಯ್ಯಲ್ಲೊಂದು ಪುಸ್ತಕ. ಡ.ಜ.: ನಡೆಯಿರೀ ಒಳಗೆ. ಸೆ.: ಏನರಿ, ನೀವು ಸ್ವರ್ಗಕ್ಕೆ ಬರಲು ಏನರ್ಹತೆ ಇದೆ? ಎದುರಿಗೆ ಇರುವವರು ಮಹಾ ವಿಷ್ಣು, ಗಮನದಲ್ಲಿರಲಿ. ಗಿ.: ಐ ಆಮ್ ಪ್ರೊಫೆಸರ್, ಫಿಲಾಸಫಿ ಮೈ ಸಬ್ಜೆಕ್ಟ್. ಒಹ್ ಲಾರ್ಡ್ ವಿಷ್ಣು, ಯು ಆರ್ ಒಬ್ಬ ಮಾಯಾವಿ, ನಾಟ್ ರಿಯಲ್. ದೇರ್ ಈಸ್ ನಥಿಂಗ್ ಲೈಕ್ ಗಾಡ. ಯು ನೋ ವಾಟ್ ಸೊಫ಼ೊಕ್ಲಿಸ್, ಅರಿಸ್ಟೋಟಲ್, ಜಿದ್ದು ಅಂಡ್ ಆದರ್ಸ್ ಸೆಡ್ ಅಬೌಟ್ ಯು? ಸಂ ಫೂಲ್ಸ್ ಸ್ಪ್ರೆಡ್ ರಾಂಗ್ ತಿಂಗ್ಸ್. ನೀನು ಮಹಾ ಢೋಂಗಿ. ಮ. ವಿ.: ಸೆಕ್ರೆಟರಿ, ಈ ತಲೆನೋವ್ಗಳ್ನ ಹ್ಯಾಗೆ ಇಲ್ಲಿಗೆ ಕರಿಸಿದ್ರಿ, ಈತನ ವೇದಾಂತ ಏನ್? ಸೆ.: ಇವ್ರು ವಿದ್ಯಾರ್ಥಿಗಳಿಗೆ ಪಕ್ಷಪಾತ ತೋರಸ್ದೆ ವಿದೇಶಗಳ ವೇದಾಂತ ಓದಿ,ಬೋಧನೆ ಮಾಡ್ತಾ ಇದ್ರೂ, ಇದಷ್ಟೇ ಅವ್ರ ಪ್ಲಸ್ ಪಾಯಿಂಟ್ ಗೋವಿಂದ. ಆದ್ರೆ ಹಿಂದೂ ಧರ್ಮ ಅಂದ್ರೆ ’ವಾಟ್ ಈಸ್ ದೇರ್? ವೇರ್ ಇಸ್ ದಟ್” ಅಂತಾರೆ. ಪ್ರಭೋ. ಇವರು ಯಾವ ವಿಷ್ಯದಲ್ಲೂ ನಿರ್ಧಾರ ಮಾಡವ್ರೆ ಅಲ್ಲ.ಯಾವ್ದನ್ನೂ ಒಪ್ಪೋವ್ರೆ ಅಲ್ಲ, ಮ. ವಿ.: ಗಿರೀಶಾ, ಇನ್ನಷ್ಟು ವೇದಾಂತ ಕಲ್ತು ಇಲ್ಲಿಗೆ ಬಾ, ನೀನು ಹುಟ್ಟಲಿಕ್ಕೆ ಏನ್ಕಾರಣ? ಸಾಯ್ಲಿಕ್ಕೆ ಏನ್ಕಾರ್ಣ ?ಅದಕ್ಕರ್ಥ ತಿಳಿದು ಬಾ. ಇವನ್ನ ವಾಪಸ್ಸು ಭೂಲೋಕಕ್ಕೆ ಕಳ್ಸು ಇನ್ನಷ್ಟು ಜ್ಞಾನೋದಯವಾಗ್ಲಿ. ನಂತರ ಣೋಡೋವಾ. ಸೆ.: ಆಯ್ತು, ನೀವು ಯಾವ್ದಾರಿಲಿ ಬಂದ್ರೋ ಹಾಗೆ ಹೋಗಿ,( ಪ್ರೊಫೆಸರ್ ‘ಐ ನೋ,ಹಿ ಕೆನ್ನಾಟ್ ಟೆಲ್,ಬಂಕಂ ಗಾಡ್’ ಎನ್ನುತ್ತಾ ಪ್ರೇಕ್ಷಕರ ಮಧ್ಯೆ ಹೋಗಿ ನೇಪಥ್ಯ ಸೇರಿಕೊಳ್ಳುವ). ಸೆಕ್ರೆಟರಿ ’ನೆಕ್ಸ್ಟ್, ‘ವಿಶ್ವ ಮೂರ್ತಿ, ಬನ್ನಿ’ಎಂದು ಬಾಗಿಲಾಚೆ ಬಂದು ಕರೆಯುವ. ವಿಶ್ವ ಮೂರ್ತಿ ನೇರ ವಿಷ್ಣು ಬಳಿ ಹೋಗಬಯಸುವ. ಸೆಕ್ರೆಟರಿ ಅವನ್ನ ತಡೆಹಿಡಿದು ತನ್ನ ಪಕ್ಕದಲ್ಲೇ ಹಿಡಿದು ನಿಲ್ಲಿಸಿಕೊಳ್ಳುವ.) ಸೆ: ಇದು ಸ್ವರ್ಗ ಲೋಕ ಏನ್ನನ್ಕಂಡ್ಯೆಯ್ಯ, ಸ್ವಲ್ಪ ಈ ಕಡೆ ನಿಲ್ಲು, ಏನ್ ನಿಮ್ಮ ಸ್ವರ್ಗಲೋಕಕ್ಕ ಬಂದ ವಿಷ್ಯ? ಅದಷ್ಟು ಹೇಳಿ. ವಿಶ್ವಮೂರ್ತಿ: ಇದೇನ್ ಸ್ವರ್ಗನಾ ಅಥವ ಪರದೆ ಹಾಕ್ಕೊಂಡ್ ನಾಟಕ ಥೇಟರಾ? ಯಾರಾರ್ ಇಲ್ಲಿ ಆಕ್ಟರುಗಳೂ? ಸೆಟ್ಟಿಂಗ್ ಮಾಡಕ್ಕೆ ಬರ್ದೆ ಇರೋರನ ಇಲ್ಲೀ ತನ್ಕ ಬಿಟ್ಟೀದೀರ, ಅದು ವಿಷ್ಣುನಾ ನಗು ಬರತ್ತೆ, ನಮ್ಮ ನಾಟಕ ನೋಡಿ ಬಂದು ಕಲೀರಿ, ’ಒಡೆದ ಹಾಳೆ’,’ವರಾತ” ಇಲ್ಲವೆ ’ಮಂಗ್ಯ ಮಂಗ್ಯ’ ಥರ ನೋಡಿ ಕಲೀರಲ್ಲ. ಇದೂ ಒಂದ್ ಸ್ವರ್ಗಾದ ಸೆಟ್ಟ್? ಜನಗಳ್ನ ಫ಼ೂಲ್ ಮಾಡಕ್ಕ ಹೊಂಟೀರಲ್ಲಾ? ದನದ ಮಾಂಸ ತಿನ್ನಕ್ಕೂ ಕೈಲಾಗ್ದವ್ರು ಏನ್ತಾನೆ ಕಟ್ಟೆಕಡೀತಾರೆ? ವಿಷ್ಣು: ಈ ಅಷ್ಟಾವಕ್ರಗಳ್ನ ಹೇಗೆ ಒಳಗೆ ಬಿಟ್ಟೆ ಸೆಕೆಟ್ರಿ? ಇವ್ನ ಕಥೆ ಏನು? ಸೆ: ಓ, ಜನಾರ್ಧನ, ಇವರುಗಳು ಪರದೇಶಗಳಲ್ಲಿ ಅಷ್ಟೋ, ಇಷ್ಟೋ ಡಿಗ್ರಿ, ಪಿಎಚ್ಡಿ ಅನ್ನೋ ಟೈಟ್ಲ್ಗಳ್ನ ಹೆಸರು ಮುಂದೆ ಪೋಣಿಸ್ಕೊಂಡು ಬಂದು ಭಾರತದಲ್ಲಿ ಇವ್ರಂಥಹವರ ಬುದ್ಧೀನ ಮೀರ್ಸೋ ಯಾರೂ ಬುದ್ಧಿವಂತರೇ ಆಗಲಿ, ಯೋಚ್ಸಿ ಬರೆಯೋವರೆ ಆಗ್ಲಿ, ಸರ್ಕಾರಕ್ಕೆ ಸರ್ಯಾದ ಸಲಹೆಗಳ್ನ ಕೊಡೋ ಜನ ಇಲ್ಲವೇ ಇಲ್ಲಾಂತ ಸರ್ಕಾರ್ಗಳೀಗೆ ಡೊಗ್ಗು ಸಲಾಮು ಹಾಕ್ಕೊಂಡು ಅವರಿಗೆ ಬೇಕಾದ್ದನ್ನೆಲ್ಲ ಗಿಟ್ಟಿಸೋ ಮಹಾ ಕುಶಲಿಗಳು ಸ್ವಾಮಿ ಭಗವಂತ. ಸ್ವದೇಶೀ ಅಂದ್ರೆ ಜರೀತಾ, ಪರದೇಶಿಗಳ ನೆರಳನ್ನೂ ಬಿಡ್ದೆ ಬೇಕಾದಂತೆ ಅಪ್ಪ್ಕಂಡು ಅವ್ರನೆಲ್ಲ ಹೊಗಳೋ ಗುಂಫಿಗೆ ಸೇರ್ದವ್ರು. ಮ. ವಿ.: ಅಂಥವ್ರು ಏನ್ಕಟ್ಟೆ ಕಡಿಯೋದಂತಾ? ಸೆ.: ಗೊತ್ತಿಲ್ಲಾ ಆದ್ರೆ, ಅವ್ರ ಬೇಳೆ ಬೇಯ್ಸಿಕೊಳ್ಳೋದಂತೂ ಅಧಿಕಾರದಲ್ಲಿರೋವರನ್ನ ಹೊಗಳೀ, ಬೇಕಾಬಿಟ್ಟಿ ನಡ್ಕಳ್ಳೋ ಮಂದಿ ಅಂತ ಮಾತು ಮಹಾ ವಿಷ್ಣು, ಓರಿಗೆ ಜನ ಇವ್ರ್ನ ’ಬುದ್ಧಿಜೀವಿಗಳು’ ಅಂತ ಕರ್ಯೋದುಂಟು. ವಿಶ್ವ: ಅಯ್ಯೋ, ವಿಷ್ಣು, ಈ ತರಾ ಜನಾನ ನಿನ್ ಸಾಕ್ಕ೦ಡು ನಿನಗೆ ಪೂಜೆ ಮಾಡ್ಸಕಳ್ತಿಯಾ? ಆ ಪುರಾಣ ಕಥೆಗಳ್ನ ಅವರಿವರ ಕೈಯ್ಯಲ್ಲಿ ಬರೆಸಿಕೊ೦ಡು, … ಅದಕ್ಕೆ ನಿನ್ನ ಭಗವದ್ಗೀತೆ ಅಂಥವನ್ನ’ಸುಟ್ಟಾಕಿ’ಅಂದಿದ್ದ ನಮ್ಮಣ್ಣ ಭಗವಾನ. ಮ. ವಿ.: ವಿಶ್ವ ಮೂರ್ತಿ ಏನ್ ನಿನ್ ಸಮಸ್ಯೆ, ಅದನ್ ಬಿಟ್ಟು ಏನೇನೋ ಒದರಬೇಡ,ಇಲ್ಲಿ ನಿನ್ಮಾತ್ಗೆಸೊಪ್ಪು ಹಾಕೋರು ಇಲ್ಲ, ಬೇಗ ಹೇಳಿ ಮುಂದಿನ ದಾರಿ ಏನಂತಿಳ್ಕೋಬಹುದು. ವಿಶ್ವ: ನಿಮ್ಮಂಥ ಡ್ಹೋ೦ಗಿಗಳು ಅಲ್ಲೇ ಸಿಕ್ತಾರೆ, ನಿಮ್ಮ ಬಂಡವಾಳ ಬಯಲು ಮಾಡ್ಲೇಬೇಕು. ಈ ಅನುಮಾನ ಇದ್ದದ್ದರಿಂದ್ಲೇ ಇಲ್ಲಿಗೆ ಬಂದಿದ್ದು. ಮ.ವಿ.:ಸೆಕಟ್ರೀ, ಸ್ವರ್ಗ ಎಲ್ಲ ಟೂರ್ ಮಾಡ್ಸಿತೋರ್ಸ್ಬದಿತ್ತು, ಈ ರೀತಿ ಅಹಂ ಇರೋವ್ನಿಗೆ ದಾರಿ ತೋರ್ಸಿ ಇವನ ದಾರಿ ಏನು ಅನ್ನೋದ. ನೆಕ್ಸ್ಟ್. ಸೆ.: ವಿಶ್ವಮೂರ್ತಿ, ಬನ್ನಿ ಹೀಗೆ ನಿಮ್ಮ ಸ್ವರ್ಗ ಹೇಗೆ ಅಂತ ತೋರಿಸ್ತೀವಿ ,ಈ ಬಾಗಿಲಲ್ಲಿ ಹೊರಡಿ, ಬಯಲು ಮಾಡೋ ದಾರಿ ಅದು (ಎಂದು ಶಾಸ್ತ್ರಿ, ದೇಶಿಕನ್ ಹಾಗು ಮಹದೇವಯ್ಯ ಹೋದ ದಾರಿ ತೋರಿಸುವ, ಆತ ಹೋಗುತ್ತಲೇ ಮತ್ತೆ ಜೋರಾದ ಶಬ್ದ,ಕಿರುಚಾಟ, ಕತ್ತಲು,ಹಾಗು ತಿರುಗಿ ಬೆಳಕಾಗುತ್ತದೆ.) ಸೆ.:(ಬಾಗಿಲಬಳಿ ಡವಾಲಿಗೆ) ಮುಂದಿನವನಾರು,ಕಳಸಯ್ಯ. ಡ.ಸೇ. : ಇನ್ಯಾರರಿದ್ದಾರಾ?,( ಬಿಳಿ ಪೈಜಾಮ, ವೈಸ್ಟ ಕೋಟು, ದಪ್ಪದ ಕನ್ನಡಕ, ಕೆದರಿದ ತಲೆ ಕೂದಲು,ಅರ್ಧ ಬಿಳಿ, ಅರ್ಧ ಬಕ್ಕ ತಲೆ, ಕೈಯಲ್ಲೊಂದ. ಪೆನ್ನ ಹಿಡಿದವನ ಕಡೆ ನೋಡಿ)ಏನ್ರಿ, ನೀವು ಯಾರಂತ ಅಲ್ಲಿ… ಬಿಳಿ ಪೈಜಾಮವಾಲಾ: ನಾನೇ ಹೇಳಕಂತೀನಿ, ದಾರಿ ಬಿಡು ಅತ್ಲಾಗೆ. ಡ. ಸೇ.: (ಸ್ವಗತ –ಬಲೇ ಪೊಗರು ಈಯಪ್ಪನಗೆ, ಅಲ್ಲೋದ್ರೆ ಹೇಂಗಾಡ್ತಾನೋ, (ಬಾಗಿಲ ಒಳಗೆ ತಲೆ ಹಾಕಿ) ಸ್ವಾಮಿ, ಈ ಆಸಾಮಿನ ವಿಚಾರಿಸ್ಕಳ್ಳಿ ಸರ್ಯಾಗೇ,ಹೆಸರ ಹೇಳಲ್ಲಾ ಅಂತದೇ. ಪಿತ್ಥ ಜಾಸ್ತಿ ಅಂತ್ ಕಾಣ್ತದೆ. ಸೆ.: ಕಳ್ಸು,ಇನ್ಯಾರನು ಸೇರ್ಸ್ಕೊಬ್ಯಾಡ, ಕದ ಹಾಕು.(ಡ.ಸೇ. ಬಿಳಿ ಪೈಜಾಮ(ಬಿ. ಪೈ.)ಧಾರಿಯನ್ನ ಒಳಗೆ ಕಳುಹಿಸಿ ಆಚೆ ಬದಿ ಬಾಗಿಲು ಹಾಕಿ ನೇಪಥ್ಯಕ್ಕೆ ಸರಿಯುವನು. ಸೆ.:(ಆತ ಒಳಗೆ ಬರುತ್ತಲೇ, ಆತನನ್ನು ದುರುಗುಟ್ಟಿ ನೋಡಿ) ಏನ್ರಿ ನಿಂಪುರಾಣ? ಯಾರ್ನೀವು? ಒಹ್, ತಿಳೀತು, ಮಹಾ ವಿಷ್ಣು, ನಿಮ್ಮ ತಲೆ ನೋವಿಗೆ ಕಾರಣ ಇದೀಗ ಇವನೇ ಅಂತ ತಿಳೀತು. ವಿಚಾರಿಸಿಕೊಳ್ಳಿ ಇಂತವರೇ ಎಲ್ಲರಿಗೂ ತಾಪತ್ರಯ ಸ್ವಾಮಿ. ಮ.ವಿ.: ಯಾರಿವ, ಏನಂತೆ ಈತನ ರಾಮಾಯಣ?ಏನ್ಹೆಸರು? ಸೆ.: ಹೆಸರು ಗೋಪ್ಯವಾಗಿ ‘ಅನಾಮಿಕ’ ಎಂದು ಕರೆಸಿಕೊಳ್ಳುತ್ತಾನೆ. ನಿಮ್ಮ ಮುಂದೆ ಬಂದು ಹೋದ ಆ ಎಲ್ಲ ಐದು ಮಂದಿಗೂ ಪ್ರಚೋದನೆ ಮಾಡಿ, ನಿಮ್ಮ ಮುಂದೆ ತಂದು ನಿಲ್ಲಿಸಿದವ ಈತನೇ. ಇವನಿಗೆ ಬೇರೆ ಕೆಲಸವೇ ಇಲ್ಲದೆ ಬಾಯಿಗೆ ಬಂದಿದ್ದು ಬರೆದು ಎತ್ತಿಕಟ್ಟುವ ಜಾತಿ, ಈ ರೀತಿ ನಾಟಕ ಮಾಡಿಸಿ ನಿಮ್ಮ ನೆಮ್ಮದಿಗೆ ಭಂಗ ತಂದವನು ಈತನೇ ಅಂದಮೇಲೆ ನೀವು ಸರಿಯಾದ ಶಿಕ್ಷೆ ನೀಡಲೇಬೇಕು. ಇಲ್ಲಿ ಬಂದವರಿಗೆ ಸ್ವರ್ಗಕ್ಕೆ ಇಲ್ಲೇ ಇದೆ ದಾರಿ ಎಂದು ನಂಬಿಸಿದವ ಇವನೇ. ಇವನಿಗೆ ಸರಿಯಾದ ದಾರಿ ಮೊದಲು ತೋರಿಸ್ಬೇಕು ಸ್ವಾಮಿದೇವ, ಇಲ್ಲದಿದ್ದರೆ ಅನಾಹುತಗಳೆ ಮಾಡಿಬಿಡುವನಲ್ಲದೆ ನಿಮ್ಮ ಶಾಂತಿಗು ಭಂಗ ತರಬಲ್ಲ. ಒ೦ದು ಜಾತಿಯ ಅನಫಿಲಿಸ್ ಸೊಳ್ಳೆ ತರಹಾ,ಕುಟುಕೋ ಜಾತಿ.ಖಾಯಿಲೆ ಹರಡೋ ಪ್ರವೃತ್ತಿ ಈತನದು. ಬಿ.ಪೈ.: ಎಲೈ ವಿಷ್ಣು ಮಹಾಶಯ, ಈ ನಿಮ್ಮ ಸಹಾಯಕ ಈಗಲೀಗಿನ ನಮ್ಮ ದೇಶಗಳ ಮುಖ್ಯಮಂತ್ರಿಗಳ ಖಾಸಾ ಸೆಕೆಟ್ರೀಗಳಂತೆ ನಿಮಗೆ ಎರಡು ಬಗೆಯುವವ. ಹುಷಾರು! ಭಗವಂತ, ನೀನು ನಿಜವಾಗ್ಗ್ಗ್ಯೂ ಭಗವಂತನೇ ಆದರೆ ಭಗವದ್ಭಕ್ತರನ್ನು ಸಲಹುವೆ ಎಂದು ಎಲ್ಲಾ ಪುರಾಣ, ಪುಣ್ಯಕಥೆಗಳಲ್ಲಿ, ಡಂಗುರ ಹೊಡೆಸಿರುವುದು, ಹಾಗೆಯೇ ನಮ್ಮ೦ಥವರನ್ನು ಕೈ ಬಿಡುವುದಿಲ್ಲವೆನ್ನುವುದು, ಆ ದಾಸರುಗಳೆಲ್ಲ ನಿನ್ನ ಕೊ೦ಡಾಡಿರುವುದು ನಿಜವೇ ಆದರೆ, ಯಾವಯಾವುದೋ ವೃತ್ತಿ ನಾಟಕ ಮಂಡಳಿಯವರ ನಾಟಕಗಳ ಬಿದ್ದುಹೋಗುವ ಕಂಬಗಳಲ್ಲಿ ಪ್ರಹ್ಲಾದನು ನಿನ್ನನ್ನು ಹೊರಕ್ಕೆಳೆದಿದ್ದುದು ನಿಜವೇ ಆದರೆ, ಆ ಏನಕ್ಕೂ ಪ್ರಯೋಜನಕ್ಕೆ ಬಾರದ ಅಜಮೀಲನಂಥವರಿಗೆ ಯಾವಯಾವುದೊ ‘ಕೋಟಾ’ಗಳಡಿಯಲ್ಲೋ ಏನೋ ಎಂತೊ ಸ್ವರ್ಗ ಕೈಗೆ ಎಟುಕಿಸಿ ಕೊಟ್ಟಿದ್ದು ನಿಜವೇ ಆದರೆ ನನ್ನನ್ನ ಯಾತಕ್ಕಾಗಿ ಹೀಗೆ ದಂಡಿಸುತ್ತಿರುವೆ, ಇಲ್ಲಿ ನ್ಯಾಯ,ನೀತಿಗೆ ಬೆಲೆಯೇ ಇಲ್ಲವೇ? ನಿನ್ನಾ ನಂಬಿ ಈ ಬರೆಯುವ ಚಟಕ್ಕೆ ಬಿದ್ದದ್ದಕ್ಕೆ ಒಂದೇ ಸಮ ಹೆಂಡತಿ ಮಕ್ಕಳಿಂದ ನಿವಾಳಿಸಿಕೊಳ್ಳುತ್ತಿದ್ದೇನೆಂಬುದು ನಿನಗ್ಯಾಕೆ ತಿಳಿಯುತ್ತಿಲ್ಲ, ಇಷ್ಟಕ್ಕು ನಿನ್ನ ಹೊಗಳಿ ಅಟ್ಟಕ್ಕೇರಿಸಿದರೆ ನಮಗೆ ಕೋರಿದ್ದು ಕೊಡುವೆ ಅಂತಾ ನಿನ್ನ ವಿಷ್ಣುಸಹಸ್ರನಾಮದಲ್ಲಿ-ಎಲ್ಲಿ ಸ್ವಲ್ಪ ಜ್ಞಾಪಿಸಿಕೊಳ್ಳುವ, ‘ಸ್ತವ್ಯ: ಸ್ತವಪ್ರಿಯ:’ಎಂತಲೋ, ‘ಇಮ೦ ಸ್ತವಮ್ ಭಗವತೋ ….’ ಇತ್ಯಾದಿ ಹೇಳಿಕೊಂಡಿರುವವನು ನೀನೇ ಅಲ್ಲವೇ? ನನ್ನನ್ನೇಕೆ ಬಡವನಾಗಿ ಮಾಡಿದ್ದೀಯಾ? ಕರುಣೆ ಯಾಕಿಲ್ಲಾ? ಆಗೋ ನೋಡಲ್ಲಿ ಅಲ್ಲಿ ಕುಳಿತಿರುವ ಪ್ರೇಕ್ಷಕರು ಎಷ್ಟು ಮ೦ದಿ ಈ ನಾಟಕಕ್ಕೆ ಹಾಜರು ಎಂದು ತಿಳಿಯುತ್ತಿಲ್ಲವೇ? ನನ್ನ ವೃತ್ತಿ ಬಾ೦ಧವರಿಗೆ ಅಪಕೀರ್ತಿಯೋ ನನ್ನಿಂದಾಗಿ, ಗೇಟ್ ಕಲೆಕ್ಷನ್ನ ಶೂನ್ಯ ಮಾಡಿಬಿಟ್ಟೆಯಲ್ಲೋ ನಿನ್ನ ಗಬಡ ಆಕ್ಟಿಂಗ್ನಿಂದ? ಮೋದಿ ಮಾಡಿದ ಮೋಡಿಯಂತೆ ನನ್ನನ್ನು ಡಿನೋಟಿಫೈ ಆದ ಐನೂರು, ಸಾವಿರ ರುಪಾಯೀ ನೋಟಿನಂತೆ ಮಾಡಿ ನನ್ನ ಬರವಣಿಗೆಗೆ ಯಾಕಿಷ್ಟು ಅಸಡ್ಡೆ, ಅನಾದರ, ಅದಕ್ಕೆ ನೀನಲ್ಲವೇ ಕಾರಣ? ಹಾಗೆಂದು ನೀನೇ ಭಗವದ್ಗೀತೆಯಲ್ಲಿ ಅರ್ಜುನನಿಗೆ ಸಾರಿ ಸಾರಿ ಹೇಳಿದ್ದೀಯಲ್ಲವೇ? ಇದಕ್ಕೆ ಸರಿಯಾದ ಉತ್ತರ ನೀನು ಕೊಡುವುದಿಲ್ಲವೆಂದರೆ ನಾನು…. ಮ.ವಿ.: ಏನು ಮಾಡುತ್ತೀಯಾ? ಬಿ. ಪೈ .:ಮಾಡುವುದೇನಿದೆ, ನಿನ್ನ ಮೇಲೆ ಇನ್ನಷ್ಟು ಈ ತೆರನೆ ಬರೆದು, ಬರೆದು ಸಿನೆಮಾ ಚೀಟಿಗಳಂತೆ ಪ್ರಚಾರ ಮಾಡಿ, ಎಲ್ಲಾ ಕಡೆಯೂ ಡಂಗುರ ಬಾರಿಸುವೆ ಬುದ್ಧಿಜೀವಿಗಳ ಜೊತೆ ಸೇರಿ. ಏನಂತೀ? ಮುಂದಿನ ನಾಟಕಗಳಿಗೆ ನೀನು ವಿಷ್ಣು ಆಗಲಾರೆ ತಿಳಿಯಿತೇ? ಮ.ವಿ.: ಎಲೈ ಘಾತುಕ, ನಿನಗೆ ಇಲ್ಲೇ ಹಿಡಿ ಶಾಪ ಕೊಟ್ಟುಬಿಟ್ಟೇನು, ಆ ಡ್ನ್ನೈರೆಕ್ಟರ್, ಪ್ರಡ್ಯೂಸರ್ಗೆ ಹೇಳಿ, ನನ್ನ ಸಂಭಾವನೆ ಕೊಟ್ಟು, ಬಾಕಿ ಲೆಕ್ಕ ಚುಕ್ತ ಮಾಡಿ ಮಾತಾಡು, ಇಲ್ಲವಾದರೆ ಇಲ್ಲೇ, ಈಗಲೇ, ಸಿಗಿದುಬಿಟ್ಟೆನು,ಇದೀಗಲೇ ಎದ್ದು ಬಂದು ನಿನ್ನ ಹಿರಣ್ಯಕಶುಪಿವಿನಂತೆ ಹೊಸಕಿಹಾಕಿಬಿಟ್ಟೇನು.(ಜೋರಾಗಿ ಶಬ್ದ, ದೇವಸ್ತಾನದ ಗಂಟೆ, ಜಾಗಟೆ, ಶಂಖಗಳ ನಿನಾದ ಜೊತೆ ವಿಷ್ಣುವು ಆಸನದಿಂದೆದ್ದು ಬಿ. ಪೈ. ಆಸಾಮಿಯನ್ನು ಹಿಡಿಯಲು ಹೋಗಿ ಬೀಳುವ ಹಾಗೆ ನಟಿಸುವನು, ಆ ಕೂಡಲೇ ನೇಪಥ್ಯದಿಂದ ದಿಗ್ದರ್ಶಕ ಓಡಿ ಬಂದು ಅವನನ್ನ ಹಿಡಿದು ನಿಲ್ಲಿಸಿ, ಪ್ರೇಕ್ಶಕರೆದುರು ನೋಡುತ್ತಾ ‘ನೋಡಿ ಸ್ವಾಮಿ, ನಾವಿರೋದು ಹೀಗೆ, ಪರದೆ ಹಿಂದೇನು ಅಷ್ಟೇ, ನಿಮ್ಮಮುಂದೇನು ಅಷ್ಟೇ, ಬುದ್ಧಿ ಬರಲ್ಲ ಬಿಡಿ, ನಮಸ್ಕಾರ ಎಲ್ಲರಿಗು. ಹೋಗಿ ಬನ್ನಿ, ಮತ್ತೆ ಬನ್ನಿ ಜೈ ಭಾರತ ಮಾತಾ, ಜೈ ಭುವನೇಶ್ವರಿ. ——————————————————————-
Comentarios