ಸಂಪಾದಕರಿಗೆ ಇನ್ನೊಂದು ಪತ್ರ
- haparna
- Mar 28, 2019
- 4 min read
ಸಂಪಾದಕರಿಗೆ ಇನ್ನೊಂದು ಪತ್ರ ಎಚ್. ಆರ್. ಹನುಮಂತರಾವ್ “ಬೊಂಬಾಟ್ ಸುದ್ಧಿ” ಪತ್ರಿಕೆಯ ಸಂಪಾದಕರಿಗೆ, ಗೊಂದಲಪುರ, ತಂಗಳೂರು ನಗರ. ನನ್ನ ಅನಂತಾನಂತ ಪ್ರಣಾಮಗಳು. ನಾನು ಈ ಪತ್ರ ಬರೆದ ಉದ್ದೇಶ ತಡಮಾಡದೆ ಹೇಳಿಬಿಡುತ್ತೇನೆ. ಮೊಟ್ಟ ಮೊದಲಿಗೆ ನಿಮ್ಮ ಕ್ಷಮೆ ಕೋರುವೆ. ಕಾರಣ ನಿಮ್ಮ ವೇಳೆ ಅಮೂಲ್ಯ. 1. ನಿಮಗೆ ನಾನು ಕಳುಹಿಸಿದ ನನ್ನ ಬರಹಗಳೆಲ್ಲಾ ಇಷ್ಟೂ ದಿನಗಳು- ದಿನಗಳೇನು ಬಂತು-ವರ್ಷಕ್ಕೂ ಹೆಚ್ಚುಕಾಲ ಯಾವುದೋ ಅಗೋಚರ ಶಕ್ತಿ ನಿಮ್ಮನ್ನ ಪ್ರೇರೇಪಿಸಿ ಕಸದ ಬುಟ್ಟಿಯೆಡೆಗೆ ನನ್ನ ಲೇಖನಗಳನ್ನ ಒಯ್ಯುತ್ತಿದೆಯೆಂಬ ಅನುಮಾನವುಂಟು. ಇರಲಿ, ನಾನು ಯಾವುದೋ ಹಠಕ್ಕೆ ಬಿದ್ದು ಬರೆಯಲು ಪ್ರಯತ್ನಿಸಿದ್ದೇನೋ ನಿಜವೆ. ಆದರೆ ಶಾಲಾ ಬಾಲಕನಾಗಿದ್ದಾಗಲೇ ಆ ಕಾಲದ “ಚಂದ ಮಾಮ, ಬಾಲ ಮಿತ್ರ, ಬಾಲ ಬೋಧೆ, ಚಿಲಿಪಿಲಿ, ನಂದನ ವನ”ಗಳಂಥವನ್ನ ಓದುತ್ತಿದ್ದವನು. ಶಾಲೆಯಲ್ಲಿ ವಿರಾಮದ ವೇಳೆ ಹುಡುಗರಿಗೆ ಆ ಕಥೆಗಳನ್ನ ಇನ್ನಷ್ಟು ಎಳೆದೋ, ಬದಲಾಯಿಸಿಯೋ ಹೇಳುತ್ತಿದ್ದೆ. ನಮ್ಮ ಮೇಷ್ಟರು ಖುಷಿಯಿಂದ ‘ನೀನೇ ಇವೆಲ್ಲ ಬರೆದೆಯೋ ಇಲ್ಲ ಯಾರಾದರೂ ಹೇಳಿ ಬರೆಸಿದರೋ’ ಎಂದು ಅನೇಕ ಬಾರಿ ಪ್ರಶ್ನಿಸಿದ್ದುಂಟು. ನಾಚಿಕೆಯಿಂದ ತಲೆ ಬಗ್ಗಿಸಿ ಉತ್ತರ ಕೊಡದೆ ಸುಮ್ಮನಿರುತ್ತಿದ್ದೆ. ನನ್ನ ಅಮ್ಮ ಮಾತ್ರ ತನ್ನ ಎಲ್ಲಾ ಬಂಧುಗಳಲ್ಲಿ, ನೆರೆಹೊರೆಯರಲ್ಲಿ ನಾನು ಮುಂದೆ ಅತಿ ಉದ್ಧಾಮ ಪಂಡಿತನೋ, ಸಾಹಿತಿಯೋ ಆಗುವೆನೆಂದು ಬಾಲಿಶ ಬರಹಗಳನ್ನ ತಿದ್ದಿ, ಅದಕ್ಕೆ ತನ್ನದನ್ನೂ ಸ್ವಲ್ಪ ಸೇರಿಸಿ, ಪ್ರೌಢಿಮೆಯನ್ನ ಮೆರೆಸಿ ಬೀಗುತ್ತಿದ್ದುದುಂಟು. ಜನರ ಕೆಟ್ಟ ದೃಷ್ಟಿ ನಿವಾರಿಸಲು ಆಗಾಗ್ಗೆ ಪರಕೆಯ ಸುಟ್ಟು ದೃಷ್ಟಿ ತೆಗೆಯುತ್ತಿದ್ದುಂಟು. ಅವೇ ಬಹುಷ: ನನ್ನ ಬರಹಗಳ ಸಂಖ್ಯೆಯನ್ನ ಮೀರಿಸಿರಬಹುದೇನೋ. ತಪ್ಪೇನು? ಎಲ್ಲ ತಾಯಂದಿರೂ ಆಶಿಸುವುದೂ ಅದೇನೇವೆಯೆ? ಆ ತಾಯಿ ಶಾರದೆ ಇಂದು ಪಂಡಿತರೆನಿಸಿಕೊಳುವವರಿಗೂ ಕಾಣದ ಕೈನಲ್ಲಿ ಹೀಗೆ ಬರೆಸಿರಬೇಕೆಂಬ ಅನುಮಾನವಿದೆ. ಸಾಮುವೆಲ್ ಜಾನ್ಸನ್ ಎಂಬ ಪ್ರಸಿದ್ಧ ಆಂಗ್ಲ ಭಾಷಾ ವಿಶಾರದನ ತಂದೆಯೂ ಇವನ ಬಾಲ್ಯದಲ್ಲಿ ಹೀಗೇ ಮಾಡುತ್ತಿದ್ದರೆಂದು ಯಾರೋ ಹೇಳಿದ್ದು ನನ್ನ ಕಿವಿಗೆ ಬಿದ್ದಿದೆ. 2. ನನ್ನ ಮನಸ್ಸಿನಲ್ಲಿ ಲೇಖಕನಾಗುವ ಬಯಕೆ ಆಗಲೇ ಮೂಡುತ್ತಿತ್ತು ನನಗರಿವಿಲ್ಲದೆಯೆ. ಅದನ್ನೇ ಅಲ್ಲವೆ ಧೀಮಂತ ಶಕ್ತಿ ಎನ್ನುವುದು? ಹೈಸ್ಕೂಲಿನಲ್ಲಿದ್ದಾಗಲೆ ಯಾರಿಗೂ ತಿಳಿಯದಂತೆ ಹೆದರುತ್ತಾ ನನ್ನ ಬರಹವನ್ನ ಸಿನೆಮ ಮಂದಿರದ ಪಕ್ಕಕ್ಕಿದ್ದ ಸುಪ್ರಸಿದ್ದ ಪತ್ರಿಕೆಯ ಸಂಪಾದಕರು-ವೃತ್ತಿಯಲ್ಲಿ ವೈದ್ಯರು-ಅವರ ಜವಾನನ ಕೈಗೆ ಕೊಟ್ಟು ಓಡಿಬಂದಿದ್ದೆ. ನಂತರ ಕಾಲೇಜಿಗೆ ಬರುವ ವೇಳೆಗೆ ಒಂದೆರಡು ಕಥೆಗಳನ್ನ ಬರೆಯುವ ಸಾಹಸ ಮಾಡಿದ್ದುಂಟು. ಸ್ನೇಹಿತರಿಗೆ ತೋರಿಸಿದೆ. ಯಾರೂ ಪ್ರತಿಕ್ರಿಯಸದಿದ್ದರೂ, ಹಲವು ತಲೆಹರಟೆಗಳು ಲೇವಡಿಮಾಡಿದ್ದರು. ಆದರೂ, ಎಲ್ಲರಿಗೂ ತೋರಿಸಿ ಖುಶಿ ಪಡುತ್ತಿದ್ದೆ, ಅವರಿಗಾಗದ ಕೆಲಸ ನಾನು ಮಾಡಿದ್ದರಿಂದ ಅವರಿಗೆ ಹೊಟ್ಟೆಕಿಚ್ಚೆಂದು ಭಾವಿಸಿದ್ದುಂಟು. ನನ್ನ ಪ್ರಯತ್ನ ನಿಲ್ಲಲಿಲ್ಲ. ಹೀಗಿರುವಾಗ, ನಮ್ಮ ಮನೆಗೆ ಬಂದ ಒಬ್ಬ ವಯಸ್ಸಾದ ನೆಂಟ-ಆತ ಯಾವುದೋ ದೇವಸ್ಥಾನದ ಪೂಜಾರಿ, ಆ ಬಗ್ಗೆ ಏನೋ ಬರೆದಿದ್ದನಂತೆ, ಅದನ್ನ ಯಾವುದೋ ಪತ್ರಿಕೆ ‘ಪ್ರಿಂಟಿಸಿದ್ದರಂತೆ’ ಜಂಬ ಕೊಚ್ಚಿಕೊಳ್ಳುತ್ತಿದ್ದ. ನಾನು ಆತನ ಸಲಹೆ ಕೇಳಿದೆ, ನಾ ಬರೆದಿದನ್ನ ನೋಡಿದಓದಲಿಲ್ಲ, ಚೆನ್ನಾಗಿದೆ, ಕಳಿಸು ಎಂದು ಬೆನ್ನು ಗುದ್ದಿದ್ದ. ದೇವರ ನೈವೇದ್ಯ ತಿಂದು, ತಿಂದು ಹೊಟ್ಟೆ ಉಬ್ಬಿತ್ತು, ಆದರೂ ಪೈಲ್ವಾನನ ಬಾಡಿ. ನಾ ಆ ಏಟಿಗೆ ಮುಗ್ಗರಿಸಿ ಬಿದ್ದದ್ದು ನೆನಪಿದೆ. ಅದೂ ಒಂದು ದೇವರ ಮಹಿಮೆಯೆಂದೇ ಭಾವಿಸಿದೆ. ಅಲ್ಲಿಂದ ಮುಂದೆ ನನಗೆ ತಡೆಯೇ ಇರಲಿಲ್ಲ, ಬರೆದೆ, ಬರೆದೆ, ನಾ ಬರೆದೆದ್ದೆಲ್ಲ ಅನೇಕ ಪತ್ರಿಕೆಗಳಿಗೆ ರವಾನಿಸಿದೆ, ಎಲ್ಲ ವ್ಯರ್ಥ, ಸಾಕಷ್ಟು ಅಂಚೆ ಸ್ಟಾಂಪು ಹಾಕಿದರೆ ವಾಪಸ್ಸು ಕಳುಹಿಸುತ್ತೇವೆಂದಿದ್ದಕ್ಕೆ ಹಾಗೆ ಮಾಡದೆ ಸುಮ್ಮನಿದ್ದೆ. ಕಾರಣ, ಕೈ ತಪ್ಪಿಯಾದರೂ ಅದು ಅಚ್ಚಿನ ಮನೆ ತಲುಪುವುದೇನೋ ಎಂದು ಅಶಿಸಿ. ಮುಂದೊಂದು ದಿನ ನಾನು ಪ್ರಸಿದ್ಧಿಗೆ ಬಂದಾಗ-ಬಂದೇ ಬರುತ್ತೇನೆಂದು- ನಂಬಿಕೆಯಿದೆ. ಆದರೆ, ಆ ಪತ್ರಿಕೆಯವರು ಯಾಕೋ ಅವೆಲ್ಲ ಒಟ್ಟುಗೂಡಿಸಿ ‘ಹಿಂದಕ್ಕೆ ಕಳುಹಿಸಿದೆ” ಎಂದು ಬರೆದು ಹಿಂತಿರುಗಿಸಿದ್ದರು.
3. ನಂತರ ಯಾರೋ ಹೇಳಿದರು, “ಬೊಂಬಾಟ್ ಪತ್ರಿಕೆ”ಗೆ ಹೊಸಬ, ಹಳಬ ಅನ್ನೋದೇನಿಲ್ಲ, ಪ್ರಯತ್ನಮಾಡಿ ಅಂತ. ಹಾಗೇಂತ ನಾನೂ ಮನೇಲಿ ದೇವ್ರ ಮುಂದೆ ಕೂತು ಪೂಜೆ ಸಲ್ಸಿ, ಹರಕೆ ಹೊತ್ತು, ಗಂಟೆಗಟ್ಲೆ ತೋಚಿದೆಲ್ಲಾ ಬರೆದೆ, ಬೇಕಾದವರಿಗೆ ತೋರಿಸಿದೆ, ಆವರ್ಯಾರೂ ಓದೆದೇನೆ ಕಳಿಸು, ಕಳಿಸು ಎಂದು ಬೆನ್ನು ತಟ್ಟಿ ನನ್ನಿಂದ ದೂರವೇ ಆದರು, ಯಾಕೋ ಏನೋ. ಒಬ್ಬ ಬಂಧು ಮಾತ್ರ ನನ್ ದಾಕ್ಷಿಣ್ಯಕ್ಕೋ ಏನೋ ಕಟ್ಬಿದ್ದು, ಓದಿ, ಏನೇನೋ ಸಿಕ್ಕಾಪಟ್ಟೆ ಸಲಹೆ ಕೊಟ್ಟಿದ್ದುಂಟು. ಅವನು ಹೇಳಿದ್ದ, ನೀ ಏನೇ ಬರೆದ್ರೂ ಅದನ್ನ ರೆಕೆಮೆಂಡ್ ಮಾಡೋವ್ರು ಇದ್ರೇನೆ ಅವು ಗೆಲ್ಲೋದು, ಅಷ್ಟೂ ಗೊತ್ತಿಲ್ವ- ಇದು ಶಿಪಾರಸ್ ಯುಗ- ಅದೂ ಭಾರತದಲ್ಲಿ, ಸರ್ಕಾರೀ ಕಛೇರಿಗಳಲ್ಲದೆ, ಈಚೆಗೆ ಎಲ್ಲಾ ಸಂಸ್ಥೆಗಳಲ್ಲೂ ಒಬ್ಬ ಜವಾನನ ನೌಕರಿಗೂ ಶಿಫಾರಸ್ಸು ಬೇಕೆಂಬ ಸುದ್ದಿ ವ್ಯಾಪಕವಾಗಿದೆ. ಅಲ್ದೆ ಒಬ್ಬ ಸುಪ್ರೀಮ್ ಕೋರ್ಟ ಜಡ್ಜನ ಆಯ್ಕೆ ಮಾಡಬೇಕಾದ್ರೆ ಕಮಿಟೀಲಿ ಮೆಜಾರಿಟಿ ಬರಬೇಕಂತೆ, ಅಲ್ಲಿಗೆ ಎಲ್ಲೆಲ್ಲೂ ಶಿಫಾರಸು ಪತ್ರ ಇರಬೇಕೆನೋ. ಅದು ಗೊತ್ತಿಲ್ಲದ ಸಮಾಚಾರ. ಅದಕ್ಕೇ, ಏನಿಲ್ಲಾಂದ್ರೂ ಕನಿಷ್ಟ ನೀನು ಆ ಪತ್ರಿಕೆ ಕಛೇರಿ ಗೇಟ್ನಲ್ಲಿರೋ ಕಾವಲ್ನವ್ನಾದ್ರೂ ಪರಿಚಯ ಮಾಡ್ಕೋ, ಹಾಗೇ ಸ್ನೇಹಿತನ್ನ ಮಾಡಿಕೋ, ಆಮೇಲ್ನೋಡು ನಿನ್ಸಮಾಚಾರ, ಊರ್ಗೆಲ್ಲಾ ನೀನೇ ಸೋದರಮಾವ ಎಂದೆಲ್ಲ ವಿವರ್ಸಿ ಹೋದ ಮುಠ್ಠಾಳ. ಅದೂ ಮಾಡಿದ್ನಿಜ. ಸಾಲದ್ದಕ್ಕೆ, ನಮ್ಮನೇ ದಾರೀಲಿರೋ ಪೈಲ್ವಾನ್ ಮುಸ್ತಫ ಖಾನ್ ಗರಡಿಮನೆ ಪಕ್ಕದಲ್ಲಿರೋ ಜ್ಯೋತಿಷಿ ಏನೋ ಮಂತ್ರಿಸಿಕೊಟ್ಟು-ಇದನ್ನ ಪೋಸ್ಟ್ ಡಬ್ಬಾದಲ್ಲಿ ಹಾಕೋವಾಗ-ಈಗೀಗ ಮಿಂಚಂಚೇಲಿ ಕಳ್ಸೋದ, ಇರ್ಲಿ, ಅದರಲ್ಲಿ ಇದನ್ನ ಹಾಕು, ಆಮೇಲ್ನೋಡು ನನ್ಕರಾಮತ್ನ ಅಂತ, ಹಾಗೇ ಮಾಡಿದ್ದುಂಟು, ಆ ಪೆಟ್ಟಿಗೆಗೂ ಹೂವು ಮುಡಿಸಿ, ಕೈ ಮುಗಿದು.
4. ನಮ್ಮನೆ ದೇವರು ಆ ವೆಂಕಟರಮಣನಿಗೆ – ಅವ ನಿಜವಾಗಿ ಸುಂಕದ ರಮಣನೋ, ಸಂಕಟ ರಮಣನೋ- ಎಷ್ಟೋ ಬಾರಿ ಮುಡಿ ಕೊಡುವ ಸಂಕಲ್ಪ ಮಾಡಿದ್ದೂ ಆಯ್ತು, ನೀವು ಎಲ್ಲ ಲೇಖನಗಳನ್ನ ಅದು ಹೇಗೆ ಪಕ್ಕಕ್ಕೆ ತಳ್ಳುತ್ತಿದರೋ ಏನೋ ಆ ವೆಂಕಟನಿಗೇ ಗೊತ್ತು, ಸ್ವಲ್ಪನಾದರೂ ಆತನಿಗಿರಲಿ, ಆತನಿಂದಾದರೂ ನಿಮ್ಮ ಮನಸ್ಸು ಬದಲಾವಣೆಯಾಗೋದು ಬೇಡ್ವ? ಹಗಲು ದರೋಡೆ ಮಾಡಿದವರ ಹಣಾನೂ ಹುಂಡಿಗೇ ಹಾಕ್ಕೊಂಡು ಅವ್ರಗೆಲ್ಲಾ ಜೈಲಿಗೆ ಹೋಗೋದನ್ನ ತಪ್ಸಿ, ವಜ್ರದ ಕಿರೀಟ ಕೊಟ್ರೆ ದೇಶಾನೇ ಕೊಡ್ಸೋವ್ನಾದ್ರೆ ಆ ದೇವು ನನ್ಬಗ್ಗೆ ಸ್ವಲ್ಪನಾದ್ರೂ ಕನಿಕರ ಬೇಡ್ವ? ಲಂಚ ಕೊಡೋವ್ರಗೆ ಮಾತ್ರ ಅಯ್ಯೋ ಅನ್ನೋದ್ ಸರೀನಾ? ಸಿನೆಮಾವೊಂದ್ರಲ್ಲಿ ಉದಯಕುಮಾರ ಹಾಡಿದ್ದು ಜ್ಞಾಪಕ ಬರ್ತಿದೆ ‘ಓ, ಭಗವಂತ, ಪರರಿಗುಪಕರಿಸಿ, ಎನಗಪಕರಿಸೋ ಭಗವಂತಾ ನೀನೇನಾ’ಅಂತ. ನೀವೇನಾರ ಹೇಳಿ, ಅಂದಿನಿಂದ ಈ ಹಲವಾರು ಹೆಂಡತೀರ್ನ ಇಟ್ಕೊಂಡವ್ರ ಗತೀನೇ ಇಷ್ಟು,’ ಬುದ್ಧಿ ಒಂದೇ ತರಾ ಇರಲ್ಲ ಮಂಕು ಕವ್ದಿರುತ್ತೆ ಇಲ್ಲ ತುಕ್ಕು ಹಿಡ್ದಿರುತ್ತೆ’ ಅನ್ನೋದು ಹೆಂಡ್ತೀರಿರೋವರೆಲ್ಲಾರ ಯೂನಿವರ್ಸಲ್ ಅನುಭವ ಅಂತ ತಿಳಕಂಡು ಹೆಂಡ್ರಿರೋ ದೇವ್ರನ ಬಿಟ್ಟೆ. ಇದೀಗ ಆ ಡೊಳ್ಳು ಹೊಟ್ಟೆ, ಮೋದಕ ಪ್ರಿಯ ಗಣೇಶನ್ನ ಮನಸ್ಸಿನಲ್ಲಿ ಇಟಕಂಡು ಬರೆಯೋದನ್ನ ನಿಲ್ಸದೆ ಪತ್ರಿಕೆಗಳಿಗೆ ಕಳಸೋದು ಅಂತ ತೀರ್ಮಾನಿಸಿದೀನಿ. ನಾನು ಕನ್ನಡ ಓರಾಟಗಾರರಂತೆ ಛಲಗಾರ, ಏನೇ ಬರಲಿ ಕನ್ನಡಕ್ಕೆ ಜಯವಿರಲಿ, ನನ್ನ ಲೇಖನಗಳನ್ನ ಪ್ರಿಂಟ್ಸೋ ಎದೆಗಾರ ಸಂಪಾದಕರನ್ನ ಹಿಡಿದೇ ಹಿಡತೀನಿ ಅಂತ ಆವನ ಮುಂದೆ ಕಡಬು ಕೈಲ್ಲಿ ಹಿಡ್ದು ಪ್ರಮಾಣ ಮಾಡಿದ್ದೇನೆ. ಎಷ್ಟಾದ್ರೂ, ಈತ ಏನ ಕಮ್ಮಿ ಕಷ್ಟ ಪಟ್ಟಿದಾನ್ಯೆ? ಆ ವ್ಯಾಸ ಋಷಿಯ ಕಾವ್ಯ ರೂಪದ ರನ್ನಿಂಗ್ ಕಾಮೆಂಟರೀನ ಟನ್ ಗಟ್ಲೆ-ಇಪ್ಪತ್ನಾಕು ಸಾವ್ರಕ್ಕೂ ಹೆಚ್ಚು ಪದ್ಯಗಳನ್ನ-ಅಷ್ಟೇ ಕಂಪ್ಯೂಟರ್ ಸ್ಪೀಡ್ನಲ್ಲಿ ಬರೆದನಂತೆ,’- ಹಾಗಂತ ನಮ್ಮನೆ ಹತ್ರ ಇರೋ ಪಾಡುರಂಗ ದೇವಸ್ಥಾನದ ಹರಿಕಥೆ ಆಚಾರ್ರು ಹೇಳಿದ್ರು-ನಿಮಗೂ ತಿಳಿದಿರಬಹುದು, ಆತ ಹೆಣ್ಣಿನ ಸೌಂದರ್ಯ ವರ್ಣೀಸೋವಾಗ-ಆತನ ಕಣ್ಣೊಂದು ಸ್ವಲ್ಪ ಓರೆ-ಕಿಚಾಯ್ಸೋ ಹುಡ್ರು ‘ಹೋತನ್ಕಣ್ಣು ಹೋರಿ ಮ್ಯಾಗೇ, ಆಚಾರೀ ಕಣ್ ಸೀರೆನ್ಮ್ಯಾಗೆ- ಅಂತ ಆಡ್ಕೊಳ್ತಿದ್ದರು. ನಂತರ ಕಾಲೇಜಿಗೆ ಬರೋ ವೇಳೆಗೆ ಒಂದೆರಡು ಕಥೆಗಳನ್ನ ಬರೆಯುವ ಸಾಹಸ ಮಾಡಿದ್ದುಂಟು. ಅಂದ್ಮೇಲೆ ನನ್ನ ಲೇಖನಗಳ ಬಗ್ಗೆ ಕುಬ್ಜನಿಗೆ ‘ಅಯ್ಯೋ ಪಾಪ’ ಅನ್ಸೊದಿಲ್ವೆ ಗೌರವ ಸಂಪಾದಕ್ರೇ? ನಿಮಗೂ ಬಿಸಿ ತಟ್ಟಲೇಬೇಕಾ?
5. ಈ ಮಧ್ಯೆ, ನನಗೊಬ್ಬ ಉದ್ಧಾಮ ಸಾಹಿತಿಗಳ ಪರಿಚಯವಾಯ್ತು. ಅವ್ರು ನನ್ನ ಪರಿಸ್ಥಿತಿಯನ್ನ ತಿಳಿದು ಸಲಹೆ ಕೊಟ್ಟರು. “ನೋಡು, ಒಂದಷ್ಟ್ ದಿನ ಬರಯೋದ ನಿಲ್ಸು, ಬರೆಯೋದನ್ನ ನಿಲ್ಲಿಸದಿದ್ರೂವೆ ಸಾಕಷ್ಟು ಪುಸ್ತಕಗಳನ್ನ ಓದಿಯಾದ್ರೂ, ಮಹಾಭಾರತ, ರಾಮಾಯಣ, ಪಂಪ, ರತ್ನಾಕರ, ಲಕ್ಷ್ಮೀಶ, ಕುವೆಂಪು, ಮಾಸ್ತಿ, ಗುಂಡಪ್ಪ, ಅಡಿಗ, ಕಾರಂತ-ಇಂತಹವರ ಕೃತಿಗಳ ಓದಿ ಹೇಗೆ ಬರೆಯೋದು ಅಂತ ಕಲಿ; ನಂತರ ಒಳ್ಳೆಯ ಸಾಹಿತಿಗಳಿಗೆ ತೋರಿಸು” ಎಂದಿದ್ದರು. ಒಳ್ಳೆಯ ಸಲಹೆ ಎಂದು ನಾನು ಮೊದಲಿಗೆ ಬಾಲ ಭಾರತ, ಎಳೆಯರಿಗೆ ರಾಮಾಯಣ, ಅಮರ ಚಿತ್ರ ಕಥಾ ಇಂಥಹವನ್ನೋದಿದೆ. ನನಗೆ ಹೆಚ್ಚಿನ ಸ್ಪೂರ್ತಿ ಬಂದಿದ್ದು ನಿಜ. ಇನ್ನಷ್ಟು ಬರೆದು ನಿಮಗೆ ಕಳಿಸಿದ್ದುಂಟು, ಅದನ್ನೆಲ್ಲ ನೀವು ನೋಡಿಯೋ, ನೋಡದೆಯೋ-ಕ್ಷಮಿಸಿ ಈ ಮಾತಿಗೆ-ಹಳೇ ದಾರಿ ತೋರಿಸಿಬಿಟ್ಟಿರಲ್ಲವೆ? ಹೌದು, ನಿಮಗೆ ಗೊತ್ತಿರಲೇಬೇಕು. ನಿಮ್ಮ ತಪ್ಪಲ್ಲ, ‘ಅಯ್ಯೋ’ ಎನ್ನದ ವೆಂಕಟನೇ ಕಾರಣ. ನನ್ನ ಲೇಖನಗಳ ಬಗ್ಗೆ ಕುಬ್ಜನಿಗೇನಾದರೂ ‘ಅಯ್ಯೋ’ ಅನಿಸಿದ್ದರೆ ಹೆಚ್ಚೇನಿಲ್ಲ. ಕಾರಣ-ಆತನಿಗೆ ಗೊತ್ತಿಲ್ಲದ್ದು ಏನಿದೆ?-‘ತ್ವಮೇವಂ ಜ್ಞಾನ ಮಯೋಸಿ, ತ್ಮವೇಮಂ ಬ್ರಹ್ಮ ಮಯೋಸಿ’ ಎಂದು ನಾವು ಪಠಿಸುವದಿಲ್ಲವೆ?
6. ನಿಮಗೊಂದು ಮಾತು ಹೇಳಲೇಬೇಕು. ಎಲ್ಲಿಯೋ ಓದಿದ ನೆನಪು-‘ಎಳೆಗರುಂ ಎತ್ತಾಗದೆ?’-ಅಂದಮೇಲೆ, ನಾನು ಹಿಂದೆಲ್ಲಾ ಬರೆದುದು ಬಾಲಿಷವಾಗಿಯೋ, ಅರ್ಥವಿಲ್ಲದಾಗಿಯೋ ಕಂಡಿರಬಹುದು. ಆದರೆ, ಇಷ್ಟೆಲ್ಲ ಬರೆದುದಾದ ಮೇಲೆ ಕೈ ಕುದುರುವುದಿಲ್ಲವೆ? ಸಾಕಷ್ಟು ಕುದಿಸಿದ ಮೇಲೆ ಅಕ್ಕಿ ಅನ್ನವಾಗದೆ ಇರುತ್ತದೆಯೆ? ‘ಎಳೆಗರುಂ’ ಕಾಲಕ್ರಮದಲ್ಲಿ ಹಸುವೋ, ಎತ್ತೋ ಆಗಲೇ ಬೇಕಲ್ಲವೆ, ವಿಧಿ ನಿಯಮ ತಪ್ಪಿಸುವರ್ಯಾರು? ಅಲ್ಲದೆ ಮತ್ತೇನು ಕತ್ತೆಯಾಗಬಲ್ಲದೆ? ಹಲವು ಸಲ, ಅಂದು ಏನು ತಪ್ಪೆಂದು ತಿಳಿದಿದ್ದೆವೋ ಇಂದು ಅದೇ ಸರಿ ಎನ್ನುವ ಅನೇಕ ಅನುಭವಗಳು ವಿಜ್ಞಾನದಿಂದಲೂ ಕಾಣಬರುತ್ತದೆ. ಸುಪ್ರಸಿದ್ಧ ವಿಜ್ಞಾನಿ ನ್ಯೂಟನ್ ತಲೆಯ ಮೇಲೆ ಹಣ್ಣು ಬೀಳದಿದ್ದರೆ ಗುರುತ್ವಾಕರ್ಷಣೆಯ ಬಗ್ಗೆ ಏನು ಹೇಳುತ್ತಿದ್ದ? ಆ ಕೀರ್ತಿ ಮತ್ಯಾರಿಗೋ ಸಲ್ಲುತ್ತಿತ್ತಲ್ಲವೆ? ಸೂರ್ಯನು ಭೂಮಿಯ ಸುತ್ತ ಗಿರ್ಕಿ ಹೊಡೆಯುವದೆಂದು ಖಗೋಳ ವಿಜ್ಞಾನಿ ಟಾಲ್ಮಿಯ ಮಾತನ್ನೇ ನಂಬಿದ್ದರು ಧರ್ಮಪಾಲಕರು ಅಂದು. ಅದಕ್ಕೆ ವ್ಯತಿರಿಕ್ತವಾಗಿ ಕೊಪರ್ನಿಕಸ್ ಸಂಶೋಧನೆಯಿಂದ ಸೂರ್ಯನ ಸುತ್ತ ಭೂಮಿ ಸುತ್ತುತ್ತದೆಯೋ ಹೊರತು ಅದಕ್ಕೆ ತದ್ವಿರುದ್ಧವಾಗಿಯಲ್ಲ ಎಂದು ತಿಳಿದಿದ್ದರೂದರೂ ಧೈರ್ಯ ಸಾಲದೆ, ಕೊನೆಗೆ ಅದನ್ನೇ ಎತ್ತಿಹಿಡಿದ ಬ್ರೂನೋ ಪ್ರಕಟಿಸಿಬಿಟ್ಟ. ಕೋಪಕ್ಕೆ ಆತನನ್ನ ಹಾಗೂ ಅದೇ ಸರಿಯೆಂದ ಗೆಲಿಲಿಯೋಗೆ ಶಿಕ್ಷೆ ಕೊಟ್ಟದು ಚರಿತ್ರೆಯಿಂದ ತಿಳಿದಿಲ್ಲವೋ?
7. ಒಂದು ದಿನ, ಕೆಟ್ಟ ಗಳಿಗೆ. ನನ್ನ ಹೆಂಡತಿ-ಒಂದು ದಿನ ಯಾವ್ದೋ ಕೆಟ್ಟ ಕೋಪಕ್ಕೋ, ಗೊತ್ತಿಲ್ಲದೆಯೇ ರದ್ದಿ ಪೇಪರಂಗಡಿಗೆ ಹಳೇ ಪೇಪೇರುಗಳನ್ನ ಕಳಿಸುವಾಗ, ನನ್ನ ಎಲ್ಲಾ ವಾಪಸ್ಸು ಬಂದ ಬರೆದ ಕಟ್ಟುಗಳನ್ನ ಸೇರಿಸಿ ಕಳಿಸಿಬಿಟ್ಟಿದ್ದಳು. ಅದು ನನಗೆ ಗೊತ್ತಾಗಿದ್ದು ಬಹಳ ತಡವಾಗಿಯೇ. ಕೇಳಿದರೆ, ತನಗೆ ಆ ವಿಷಯವೇ ಗೊತ್ತಿಲ್ಲವೆಂಬಂತೆ ಜಾರಿಕೊಂಡಿದ್ದಳು. ನಾನು ರೇಗಿ ಏನು ಪ್ರಯೋಜನ? ಅಲುಮೇಲು ಮಂಗಾಪುರದಲ್ಲಿ ತನ್ನ ಪತ್ನಿ ಹೋಗಿ ನಿಂತ ಮೇಲೆ, ತಿರುಮಲದಲ್ಲಿ ನೆಲಸಿದ ಆ ವೆಂಕಟರಮಣನೇ ಸಂಕಟದಲ್ಲಿರುವಾಗ ನಾನ್ಯಾವ ಲೆಕ್ಕ? ಹೆಂಡತಿಯ ಮೇಲೆ ಸಿಟ್ಟು ಗಾಳಿ ಗುದ್ದಿ ಮೈ ನೋವಿಸಿಕೊಂಡಷ್ಟೇ ಪ್ರಯೋಜನ, ಅಲ್ಲವೆ? ನಿಮ್ಮ ಅನುಭವವೆಂತೋ? ಆದರೆ ಮರೆಯದಿರಿ, ನಾನು ಓರಾಟಗಾರರಂತೆ ಛಲವಾದಿ. ನಾನು ಬರೆದೇ ಬರೆಯುವೆ, ನಾನೂ ಅವರಂತೆ ಮೆಜಸ್ಟಿಕ್ ಸರ್ಕಲ್ ಬಳಿಯೋ, ಮೈಸೂರು ಬ್ಯಾಂಕ್ ಬಳಿಯೋ ಎಲ್ಲಾದರೂ ಸರಿ, ಅವಕ್ಕೆ ಪ್ರಚಾರಮಾಡಿ, ದಾರಿ ಕಾಣಿಸುವೆ-ಮರೆಯದಿರಿ-ಎಳೆಗರುಂ ಏನಾಗಬಲ್ಲದು? ಜೈ ಭುವನೇಶ್ವರಿ, ಜೈ ಕನ್ನಡ ಮಾತೆ, ಸಿರಿಗನ್ನಡಂ ಗೆಲ್ಗೆ.
Comments