ಸಂಜೆ ಹೊತ್ಗೆ ಸೀರೆ ಎಂಟ್ಮೊಳ ನೇಯ್ದ್ರು೦ತೇ(ಹರಟೆ).
- haparna
- May 18, 2017
- 4 min read
ಸಂಜೆ ಹೊತ್ಗೆ ಸೀರೆ ಎಂಟ್ಮೊಳ ನೇಯ್ದ್ರು೦ತೇ(ಹರಟೆ). ——————————————————————————————- ಯಥಾ ಪ್ರಕಾರ ನಮ್ಮ ಸೋಷಿಯಲ್ ಕ್ಲಬ್ನ ಸಭೆ- ಅಂದ್ರೆ ಸೋಮು, ಚಂದ್ರು, ರಾಘಣ್ಣಿ, ವಿಶ್ವ ಮತ್ತು ನಾನು-ಈಚೆಗೆ ಫ್ರಾನ್ಸಿಸ್, ಕುಂಜುಣ್ಣಿ ಸೇರ್ಪಡೆಯಾಗಿದೆ- ಗಣೇಶನ ಹಬ್ಬದ ಮಾರ್ನೆ ದಿನ ಸಂಜೆ ನಡೆಸಿದ್ವಿ- ಜಾಗ ನಮ್ಮಮನೆ ಮಹಡಿಯ ಮೇಲಿನ ನನ್ನದೇ ಕೊಠಡಿ, ಅದೇ ನಮ್ ಗ್ರೀನ್ರೂಮ್, ಹೆಸರಿಗಷ್ಟೇ ನಾಟಕ ಮಂಡಳಿ-ಸಧ್ಯಕ್ಕೆ ಕೇವಲ ಹರಟೆ ಮಂಡಳಿ-ಆದರೆ ಪ್ರಯತ್ನ, ಚರ್ಚೆಗಳಿಗೇನು ಕಮ್ಮಿಯಿಲ್ಲ. “ಸೋಮು, ನಿಂಗಿಷ್ಟವಾದ ಟಿವಿ ಸೀರಿಯಲ್ ಯಾವ್ದು ?”, ನಂಗಂತೂ ‘-A’ ಟೀವಿನ ‘ ಧನಿಷ್ಠ ನಕ್ಷತ್ರ’, Y -ಟೀವಿನ ‘ಕಳೆದು ಹೋದವಳು’, ಜೀರೋ-ಟಿವಿಯ ‘ಸಿಕ್ಕಿದ್ದೇನು?’ ಪರವಾಗಿಲ್ಲ ಅನ್ನಸ್ತು, ಆದ್ರೆ ಯಾವ್ದೂ ಮುಗಿಯೋ ಸೂಚನೆನೇ ಇಲ್ಲಾ, ಎರಡು ವರ್ಷಗಳಿಂದ.”ವಿಶ್ವ ಅಂದ. ಚಂದ್ರು “ಧನಿಷ್ಟಾ ನಕ್ಷತ್ರ ಆಕಾಶದಲ್ಲಿ ಹುಡುಕ್ತಾ ಇದಾರೆ ಅಂತ್ಕಾಣುತ್ತೆ , ಸಿಗೋವರ್ಗು ಆ ಸೀರಿಯಲ್ ನಿಲ್ಸಲ್ಲ, ಅದು ಸಿಗಲ್ಲ, ಇನ್ನು ಕಳೆದು ಹೋದವಳು ಬೆಂಗಳೂರ್ನಲ್ಲಿ ಸಿಗೋದುಂಟಾ? ‘ಸಿಕ್ಕಿದ್ದೇನು’ನಲ್ಲಿ ನೋಡೋವ್ರಿಗೆ ಸಿಕ್ಕಿದ್ದೇನು-ಬಹುಶ: ತಲೆನೋವು, ಸಾಂಕ್ರಾಮಿಕ ಜ್ವರ, ಅನ್ನೋದೇ ಶೇಷ ಪ್ರಶ್ನೆ”ಅಂದು ಲೇವಡಿ ಮಾಡ್ದ. “ಸಾಕ್ನಿಲ್ಸು, ಆ ಹೆಸರು ಕೇಳಿದ್ರೇನೇ ನನ್ತಲೇ ಗಿರ್ಕಿ ಹೊಡಿತಿದೆ, ಮತ್ತೆ ವರ್ಣನೆ ಮಾಡಲಿಕ್ಕೆ ಶುರು ಮಾಡಿದ್ಯೋ, ಆಷ್ಟೇ”. ಸೋಮು ಉವಾಚ. ನಾನಂದೆ “ಹಾಗೆಲ್ಲ ನೀನು ಅಷ್ಟೊಂದು ಸಿರಿಯಸ್ಸಾಗಿ ತೊಗೊಂಡ್ರೆ, ಹೈ ಟೀಆರ್ಪಿ ರೇಟಿಂಗ್ ಇರೋ ಅವುಗಳ ಭಕ್ತಾದಿಗಳು ಏನ್ಮಾಡ್ಬೇಕು?” “ಹಾಗಿದ್ರೆನೆ ಜನ ನೋಡೋದು, ನಿಂಗೆ ಬುದ್ಧೀನೂ ಇಲ್ಲ, ಚೆನ್ನಾಗಿದ್ರೆನೇ ನೋಡಬೇಕು ಅನ್ನೋ ರೂಲ್ಸ್ ಇದೆಯಾ?, ನಿಂಗಿಷ್ಟ ಆಗ್ದಿದ್ರೆ ನೋಡಬ್ಯಾಡ”. ವಿಶ್ವ ಸಮರ್ಥಿಸಿಕೊಂಡ. ರಾಘಣ್ಣಿ ಅಂದ “ ನಾವೇ ಒಂದು ಸೀರಿಯಲ್, ಯಾಕ್ತೇಗಿಬಾರ್ದು? ನಿಂದೆ ಒಂದು ಬ್ಯಾ೦ಕ್ ಅಕೌಂಟ್ನಲ್ಲಿ ಹಣ ಹೂಡಿ, ಕಥೆ, ಸ್ಕ್ರಿಪ್ಟ್ ರೆಡಿಮಾಡ್ಕಂಡು ಚಾನೆಲ್ ಕಮಾಂಡೆರ್ಸ್ನ ಹೋಗಿ ನೋಡೋದು” “ನಿಂಗೇನ್ ಅನುಭವ ಇದೆ ಅಂತ ಅವೃಗೊಳು ನಿಂಗೆ ಮಣೆ ಹಾಕ್ತಾರೆ, ಸುಮ್ನೆ ಏನೇನೋ ಒದರ್ಬ್ಯಾಡ. ಹಣ ಒದಗಿಸೋ ಚಿಕ್ಕಪ್ಪ ಯಾರು?”ಸೋಮು ಪ್ರಶ್ನಿಸಿದ. ಅಲ್ಲಿಗೆ ಆ ಮಾತು ಮುಕ್ತಾಯ, ವಿಷಯ ಮತ್ತೆಲ್ಲಿಗೋ ತಿರುಗಿತು. ನಾನೇ ಮೆಲಕು ಹಾಕುತ್ತ ಇದ್ದಾಗ ನನಗೂ ಅನ್ನಿಸಿದ್ದುಂಟೂ, ಈ ಟೀವಿ ಸೀರಿಯಲ್ ಗಳಂದ್ರೆ ಸಂತೆ ಮಾದರಿಯಾ? ”ಸಂಜೆ ಹೊತ್ಗೆ ಸೀರೆ ಎಂಟ್ಮೊಳ ನೇಯ್ದ್ರು’ ಅನ್ನೋ ಗಾದೆ ತರಾ, ಯಾವ ಗುಣ ಮಟ್ಟ ಇವಕ್ಕೆ ಅನ್ವಯಿಸುತ್ತಾರೆ, ಹೇಗೆ? ಈ ಟೀ ಆರ್ ಪಿ ಹೇಗೆ ಅನ್ವಯ್ಸಿದ್ದಾರೆ? ಸೋಮು ಅಂದ ‘ಹೊಸದಾಗಿ ಕನ್ನಡಕ್ಕೂ ಟೀವಿ ಮಾಧ್ಯಮ ಸೇರ್ಪಡೇ ಆದಾಗ, ಸರ್ಕಾರೀ ಚಾನೆಲ್ ಆಗಿತ್ತಷ್ಟೆ, ಆದರೂ, ತುಂಬ ಒಳ್ಳೆಳ್ಳೆಯ ಹಲವು ಟೀವಿ ಸೀರಿಯಲ್ಗಳು ಬಂದು ಹೋದವು. ಭಾರತಾದ್ಯಂತ ಪ್ರದರ್ಶಿಸಿಗೊಂಡ ‘ಮಹಾ ಭಾರತ್’ ಬಹಳವೇ ಖ್ಯಾತಿ ಪಡೆಯಿತು. ತಮ್ಮ ದಿನದ ಕೆಲಸ ಬಿಟ್ಟೂ ಜನ ನೋಡುತ್ತಿದ್ದರೆಂದರೆ ಏನಾಶ್ಚರ್ಯ?’ ರಾಘಣ್ಣಿ ಧ್ವನಿ ಕೂಡಿಸಿದ ‘ಇಂದಿನ ಕೆಲವು ಚಾನೆಲ್ಗಳಲ್ಲಿ ಬರುವ ಹಲವಾರು ಸೀರಿಯಲ್ಗಳನ್ನು ದ್ರೌಪದಿಯ ಮಾನಭಂಗದ ಸಂಧರ್ಭದಲ್ಲಿ ಕೃಷ್ಣನಿಂದಾಗಿ ಸೀರೆ ಅಕ್ಷಯವಾಗುವ ರೀತಿ ಇರುತ್ವೇ ವಿಶ್ವ ! ಅದರಲ್ಲಿ ಕಂಟೆಂಟ್, ಥೀಮ್, ಆರಂಭ, ಕೊನೆ ಹುಡುಕಿದರೂ ಸಿಗಬಹುದೆ?’ ವಿಶ್ವಅಂದ ‘ ಕೆಲವ್ರು ಇವನ್ನೆಲ್ಲ ಗಮನದಲ್ಲಿಟ್ಟು ಮಾಡ್ತಾರೆ ಕಣಯ್ಯ. ಎಲ್ಲಾ ಒಂದೇ ತಕಡಿಗೆ ಹಾಕ್ಬೇಡ, ಎಲ್ಲಾ ಸಿರಿಯಲ್ಗಳೂ ಹೀಗಿರಲ್ಲ. ಇವತ್ತಿನ ಕಥೆ ನಾಳೆ ಬೇರೆ ಆದರು ಹೆಚ್ಚೇನಿಲ್ಲ. ಕ್ಯಾರೆಕ್ಟರುಗೋಳು ಯಾವಾಗ ಬದಲಾಗ್ತಾರೋ ಗೊತ್ತಾಗಲ್ಲ. ಗೊತ್ತಾಗಿ ತಾನೇ ಪ್ರೇಕ್ಷಕ ಏನ್ಮಾಡ್ಬೇಕು?’ ನಾನಂದೆ ‘ಮನೆಯಲ್ಲ೦ತು ಈಗ ಶಾಂತ ವಾತಾವರಣ, ಕಾರಣ, ಮಾತೆ ಇಲ್ಲದ ಮೇಲೆ ಜಗಳ ಎಲ್ಲಿ ಬಂತು? ಹೀಗೆ ಗಂಡ ಹೆಂಡರ ಮಧ್ಯೆ ಶಾಂತಿ, ಗಂಡ ಸ್ನೇಹಿತರು, ಕ್ಲಬ್ಬುಗಳಿಗೆ ಚಾಲು, ಇತ್ಯಾದಿ, ಮಕ್ಕಳಿಗೆ ಇದೆಯಲ್ಲಾ ಮೊಬೈಲ್ನಲ್ಲೆ ಆಟ, ಅಲ್ಲೇ ನಾನಾ ತರಹ ಪಾಠ,ವಾಟ್ಸಪ್ ಚಾಟು. ಇವುಗಳೆಲ್ಲರ ಮಧ್ಯೆ ಹೊಂವರ್ಕ್ ಇತ್ಯಾದಿ. ಅತ್ತೆ, ಸೊಸೆ ಒಟ್ಟಿಗೆ ಕೂತು-ಬಿಡ್ತು ಅನ್ನಿ-ಆ ಕಾಲ ಹೋಯ್ತು. ಈಗ ಮೋದಿ ಯುಗ, ಅಲ್ವೇನ್ರೋ ?’ ಚಂದ್ರು ಉವಾಚ ‘ಈ ೩೦ ನಿಮಿಷಗಳ ಸೀರಿಯಲ್ಗಳಲ್ಲಿ ಐದೈದು ನಿಮಿಷಕ್ಕೂ ಬ್ರೇಕು, ಎರಡು, ಮೂರು ನಿಮಿಷ ಜಾಹಿರಾತು-ನೋಡಿದ್ದನ್ನೇ ಮತ್ತೆ ನೋಡೋದು, ಮುಖ ತೊಳೆಯುವುದಕ್ಕೆ ಸೋಪು, ಹಲ್ಲುಜ್ಜುವುದಕ್ಕೆ ಪೇಷ್ಟು, ಆಮಶಂಕೆಗೆ ಗುಳಿಗೆ ಇಲ್ಲದಿದ್ದರೆ ಮತ್ತೊಂದ್ ಸೀರಿರ್ಯಲ್ನ ಜಾಹಿರಾತು ಹೀಗೆ, ಮತ್ತೆ ಸಿಗ್ನಲ್ ಟ್ಯೂನ್ – ಹೀಗೆ ಕಥೆನೇ ಮುಂದ್ವರೆಯೊಲ್ಲಾ, ಮತ್ತೆ ಅದೇ ಹಿಂದಿನಿಂದ ಶುರು. ಅಲ್ಲದೇ ಸ್ಪಾನ್ಸರ್ ಮಾಡೋವ್ರ ಜಾಹಿರಾತಿಗೋಸ್ಕರಾನೇ ಸೀರಿಯಲ್ ಮಾಡೋದ ಅಂತ ಅನುಮಾನ ಬರೋದು ಸಹಜ! ಹೇಗಾದರೂ ಟಿಆರ್ರ್ಪಿ ಜೋರಾಗಿದ್ರೆ ಸರಿ. ಕರ್ಚಿಫ್ನಿಂದ ಆಗಾಗ್ಗೆ ಕಣ್ಣೀರು ವರ್ಸೊತರಾ ಆದ್ರೆ ಟಿಆರ್ಪಿ ಇನ್ನು ಹೆಚ್ಚಾಗತ್ತದ೦ತೇ ನಮ್ಮ ಕೆಲಸದಾಳು ಗೌರಿ ಅಂತಾಳೆ. ರಾಘಣ್ಣಿ ಇನ್ನು ಒಂದು ಸಂಶೋಧನೆ ಮಾಡಿದಾನೆ ‘ನೋಡ್ರೋ, ಈ ನಡುವೆ ಸೀರಿಯಲ್ಗಳಲ್ಲಿ ಪ್ರೀತಿ, ಪ್ರೇಮ, ಪ್ರಣಯ ಕೂಡ ಸಿನಿಮಾಗಳಂತೆ ಒಳದಾರಿ ಕಂಡಿವೆ! ಆದರೆ ಮಕ್ಕಳ ಜೊತೆಯಲ್ಲಿ ನೋಡುವಾಗ ಹಿರಿಯರಿಗೆ ಮುಜುಗಾರವಾಗುತ್ತೆ! ನಾನಂದೆ ‘ಅದಕ್ಕೆ ಸೀರಿಯಲ್ ಗುರುಗಳು ಕಾರಣರಲ್ಲ! ಮಕ್ಕಳನ್ನು ನೋಡಲು ಬಿಡದಿದ್ದರಾಯಿತಷ್ಟೇ ಅನ್ನುವುದು ಅವರ ವಾದವಾಗುತ್ತೆ, ಬಹುಶ:! ತೋಟದಲ್ಲೋ, ಪಾರ್ಕಿನಲ್ಲೋ ಅವರು ಸುತ್ತಿ, ಸುತ್ತಿ ಹಾಡಿದರೆ ನಿಮಗೇನು ಮುಜಗುರ ಸ್ವಾಮಿ, ಮೊದುವೆಯಾದ ಹೊಸದರಲ್ಲಿ ಮಕ್ಕಳ ಜೊತೆಗೆ ನೋಡಿದ್ದು೦ಟು ಹೌದೋ ಅಲ್ಲವೋ, ಅಂದರೆ? ‘ ಅನೇಕ ಬಾರಿ ಅನಿಸಿದ್ದುಂಟು ಕಣ್ರಯ್ಯಾ, ಈ ವರ್ಷಾನುಗಟ್ಟಳೆ ಅರ್ಧ ಘ೦ಟೆ ಸೀರಿಯಲ್ಗಳನ್ನು ರಬ್ಬರಿನಂತೆ ಗಮಕದ ಕೀರ್ತನಾಚಾರ್ಯರು ಎಳೆದಾಡಿ ಹಾಡುವಂತೆ ನನ್ನಂಥಹವರನ್ನು ಹಿಂಸಿಸುವುದರ ಬದಲು ಮಾಮೂಲಿ ಚಿತ್ರಗಳಂತೆ ಮೂರು ಘ೦ಟೆ ಸಿನಿಮಾನೇ ಮಾಡಿ ಬಿಟ್ಟರೆ ಸಲೀಸು! ಚಂದ್ರು ಪಲುಕಿದ ‘ಇನ್ನೊಂದು ವೈಚಿತ್ರ್ಯವೆಂದರೆ ಸಿನಿಮಾಗಳಂತೆ ಇಲ್ಲೂ ಕೊಲೆ, ದರೋಡೆ, ಥಕಥಕ ಡಾನ್ಸ್, ಕಿಡ್ನ್ಯಾಪ್ ಸರ್ವೇ ಸಾಮಾನ್ಯವಾಗಿ ಹೋಗಿವೆ. ಮನೆಯವರಲ್ಲೇ ಪಿತೂರಿ ನಿಜವಾಗಿ ನಡೆಯುವದಕ್ಕಿಂತ ಹೆಚ್ಚಾಗಿ ಇವರೇ ಎಳೆಎಳೆಯಾಗಿ ತೋರಿಸಿ, ದೊಡ್ಡ ದೊಡ್ಡ ಐಶ್ವರ್ಯವಂತರೆಂದರೆ ಆ ಕುಟುಂಬಗಳಲ್ಲಿ ಪಿತೂರಿ ಸರ್ವೆಸಾಮಾನ್ಯ, ಯಾರಿಗೂ ಏನು ಕೆಲಸವಿಲ್ಲದೆ ಮನೆಯಲ್ಲಿ ಜಗಳ ಆಡುವುದೇ ಇಲ್ಲಿಯ ಮಾರಲ್-ನೀತಿ ಪಾಠ. ಕತ್ತಿಮಸೆಯುವುದು ಹೇಗೆ ಎನ್ನುವುದನ್ನು ಇಲ್ಲಿ ಹಳೆ ಅತ್ತೆಯಂದಿರಿಗೆ ಹಾಗು ಹೊಸದಾಗಿ ಮನೆಯ ಹೊಸಲು ತುಳಿವ ಸೊಸೆಗೆ ಪರಿ ಪೂರ್ಣ ಪಾಠ ಬಿಟ್ಟಿ ದೊರೆಯುತ್ತದೆ ಏನಂತೀರೊ, ವಿಶ್ವ ಹೇಗೆ?’ ವಿಶ್ವ ‘ಈ ಸೀರಿಯಲ್ಲುಗಳನ್ನು ನೋಡಿದ ಮೇಲೆ ಯಾವುದೇ ಕುಟುಂಬದ ಹೆಣ್ಣಾದರೂ ಸರಿ, ಏಕೈಕ ದೃಢ ನಿರ್ಧಾರದಿಂದ ಮೊದುವೆ ಮಾಡಿಕೊಳ್ಳುವಾಗಲೇ ಗಂಡನೊಡನೆ ಶರತ್ತು ಹಾಕಿ ಬಂದರೆ ಅತ್ತೆ, ಮಾವನ ಪರಿಸ್ಥಿತಿ ಏನಾಗಬಹುದು? ದೂರದೇಶದಲ್ಲಿರುವ ಕಾರಣಕ್ಕೋ ಹೇಗೋ ಮಕ್ಕಳು ವೃದ್ಧ ಮಾತಾ ಪಿತೃಗಳನ್ನು ವೃದ್ಧಾಶ್ರಮಕ್ಕೆ ಸೇರಿಸಿದರೇನು ಉತ್ಪ್ರೇಕ್ಷೆ ಅಲ್ಲ.’ ಎಂದು ಒಪ್ಪಿಕೊಂಡ . ನನ್ನ ಅನುಭವವೂ ಹೇಳುತ್ತದೆ –ಒಂದು ಕಾಲತ್ತಿಲ್ ರೇಡಿಯೋ ಎಂಬ ಮ್ಯಾಜಿಕ್ ಪೆಟ್ಟಿಗೆಗೆ ಮರುಳಾಗಿ, ಸೈಗಲ್, ಲತಾ, ಆಶಾ, ಮನ್ನಾಡೇ, ರಫಿ, ಕಿಶೋರ್, ರೇಡಿಯೋ ಸಿಲೋನ್, ಅಮೀನ್ ಸಯಾನಿ ಅಲ್ಲದೆ ಘಂಟಸಾಲ, ಸುಶೀಲ, ಸುಬ್ಬುಲಕ್ಷ್ಮಿ, ಮಹಾಲಿಂಗಮ್, ಬಾಲಮುರುಳೀ, ಪಿ.ಬೀಎಸ್, ಶಿರ್ಕಾಳಿ, ಸುಶೀಲ, ಜಾನಕಿ, ಬಿಸ್ಮಿಲ್ಲಾ ಖಾನ್, ಮನ್ಸೂರ್, ಬಸವರಾಜ ರಾಜಗುರು, ಚಂಬೈ, ಮಹಾಲಿಂಗಮ್, ಕುನ್ನೈಕುಡಿ ಶೆಮ್ಮನಗುಡಿ, ಚೌಡಯ್ಯ, ಬಾಂಬೆ ಸಹೋದರಿಯರು, ಕಾಳಿಂಗರಾವ್,ಅನಂತ ರಾಜು, ಇತ್ಯಾದಿ ಇತ್ಯಾದಿ ಜನರ ಹಾಡುಗಳಿಗೆ ರಸ್ತೆ ಬದಿಯ ಧ್ವನಿ ಪೆಟ್ಟಿಗೆ ಮೂಲಕ ಯಾವುದೇ ಉತ್ಸವದ ಕಾರ್ಯಕ್ರಮಗಳಿಂದ ಮರುಳಾಗುತ್ತಿದ್ದವರು ಎಪ್ಪತ್ತು-ಎಂಬತ್ತು ದಶಕದವೆರಿಗಿನ ಪೀಳಿಗೆಯವರು. HMV ಯ ಗ್ರಾಮಾಫೋನ್ ಪೆಟ್ಟಿಗೆ, ಅದರ ಸ್ಪೀಕರಿನ ಮುಂದೊಂದು ಶ್ವಾನ, ಇದರ ಜಾಡನ್ನು ಬಿಟ್ಟು ಹೋಗುತ್ತಿದ್ದವರೇ ಅಪರೂಪ. ತಾರುಣ್ಯದಲ್ಲಿದ್ದವರು ಟೆಸ್ಟ್ ಮ್ಯಾಚ್ ಎನ್ನುತ್ತಲೇ ಮನೆಯಲ್ಲಿ ಓದುವುದನ್ನೂ ನಿಲ್ಲಿಸಿ, ರೇಡಿಯೋಗೆ ಕಿವಿ ಹಚ್ಚಿ ಹಿರಿಯರಿಂದ ಶಾಪ ಹಾಕಲ್ಪಡುತ್ತಿದ್ದರು! ಇಲ್ಲವೇ ದಾರಿಯಲ್ಲಿ ಹೋಗುತ್ತಿದ್ದಾಗ, ರೇಡಿಯೋ ಉಲಿಯುತ್ತಿದ್ದ ಹೋಟೆಲುಗಳ ಮುಂದೆ ಗುಂಪು ಕಟ್ಟಿನಿಂತು, ವಿಜ್ಹೀ, ಬೆರ್ರಿ, ಸುರೇಶ ಸುರಯ್ಯ, ಚಕ್ರಪಾಣಿ , ಆನಂದರಾವ್ ಮುಂತಾದವರ ವೀಕ್ಷಕ ವಿವರಣೆಯನ್ನು ತದೇಕ ಚಿತ್ತದಿಂದ, ಅವರ ಒಂದು ಪದವನ್ನೂ ಬಿಡದೇ ಕೇಳುತ್ತಾ ನಮ್ಮವರು ಬೌಂಡರಿ ಹೊಡೆದರೆ ಸಂತೋಷದದಿಂದ ಹಿರಿಹಿರಿ ಹಿಗ್ಗಿ, ಚಪ್ಪಾಳೆ ತಟ್ಟುವುದೋ, ಔಟಾದರೆ ಶಾಪ ಹಾಕುವುದೋ ಸರ್ವೇ ಸಾಮಾನ್ಯ ದೃಶ್ಯವಾಗಿತ್ತು! ಈ ತರಹದ ಸನ್ನಿವೇಶ ‘ಗಣೇಶನ ಮದುವೆ’ ಯಲ್ಲೂ ತೋರಿಸಿದ್ದಾರಲ್ಲ! ನಂತರದ ದಿನಗಳಲ್ಲಿ ಟೇಪ್ ರಿಕಾರ್ಡರ್ ಮತ್ತು ಕ್ಯಾಸೆಟ್ ಪ್ಲೇಯರ್ಗಳ ಸಾಧನ ಎಟಕುವಂತಾದಮೇಲೆ ರೇಡಿಯೋ ಹಾಗೂ ಗ್ರಾಮಾಫೋನ್ ಸಾಧನಗಳು ಕಣ್ಮರೆಯಾಗುತ್ತಾ, ಸರ್ಕಾರದ ಸ್ವಾಧೀನದಲ್ಲಿದ್ದೇ ಪ್ರಚಾರಗೊಂಡ ಕಪ್ಪು ಬಿಳಿಪು ಟೀವೀ ಮೂಲಕ ತಮ್ಮ ಕ್ರಿಕೆಟ್ ಕಲಿಗಳನ್ನು ಕಣ್ಣಾರೆ ನೋಡುವ, ಆಡುವ, ಇಲ್ಲವೇ ಶೂನ್ಯ ಸಂಪಾದನೆಯನ್ನು ಮಾಡುವ ದೃಶ್ಯಗಳನ್ನು ವೀಕ್ಷಿಸುವಂತಾಯ್ತು! ಅದೊಂದು ಬಗೆಯ ರೋಮ್ಯಾಂಟಿಕ್ಯುಗ. ಇಂದಿನ ರಾಜಕೀಯ ಹಗರಣಗಳು, ದಿನನಿತ್ಯ ಕೊಲೆ, ಸಾಮೂಹಿಕ ಅತ್ಯಾಚಾರ, ಎಗ್ಗಿಲ್ಲದಂತೆ ಸರ್ಕಾರಿ ಹಣದ ಸೂರೆ, ಹಿರಿಯ ನಾಗರಿಕರನ್ನು ಹುಡ್ಕಿ, ಒಬ್ಬರೇ ಇದ್ದಾಗ ಕತ್ತು ಹಿಚುಕಿ, ದೋಚುವುದು ಇತ್ಯಾದಿ ಬಲು ಅಪರೂಪವೇನು, ಇರಲೇ ಇಲ್ಲ. ಮುಖೇಶ್ ಹಾಡಿದ ‘ಮೈ ಆವಾರ ಹೂಂ,’ ಶ್ರೀ ೪೨೦’ನ ‘ ಮೇರಾ ಜೂತಾ ಹೈ ಜಪಾನೀ..’ ‘ನಾಗಿನ್’ ಚಿತ್ರದ ತನುಡೋಲೆ,ಮೇರ ಮನು ಡೋಲೇ ’ ಮೊಗಲ್ ಎ ಅಜಾಮ್ನ ‘ ಪ್ಯಾರ್ಕಿಯಾ ತೋ ಡರ್ನಾ ಕ್ಯಾ’ ….//ಇತ್ಯಾದಿ ಹಾಡುಗಳನ್ನು ಗುನಿಗುನಿಸುತ್ತಾ ರಸ್ತೆಯಲ್ಲೇ ಹುಚ್ಚರಂತೆ ಹಾಡಿಕೊಂಡು ಹೋಗುವವರೂ ಇದ್ದರು! ಇನ್ನು ಉದಯೋನ್ಮುಖ ಕನ್ನಡ ಚಿತ್ರಗಳ ಹಾಡುಗಳಂತೂ ಎಲ್ಲೆಲ್ಲೂ, ಕೇಳಬಹುದಿತ್ತು. ‘ಬೇಡರ ಕಣ್ಣಪ್ಪ’ದ ಶಿವಪ್ಪ ಕಾಯೋ ತಂದೆಯೇ’ ‘ಸತ್ಯ ಹರಿಷ್ಚಂದ್ರ’ದ ಹೆಚ್ಚು ಕಡಿಮೆ ಎಲ್ಲಾ ಹಾಡುಗಳು, ಸ್ಕೂಲ್ ಮಾಸ್ತರನ ‘ಸ್ವಾಮಿ ದೇವನೇ’, ಭಕ್ತ ಕನಕದಾಸ, ಬೆಳ್ಳಿ ಮೋಡ, ಸದಾರಮೆ, ಕಣ್ತೆರದು ನೋಡು, ನಂದಾದೀಪ, ಸಂಪತ್ತಿಗೆ ಸವಾಲ್ ಇತ್ಯಾದಿ ಸಾಲು ಸಾಲಾಗಿ ಬಂದು ಹೋದ ಚಿತ್ರಗಳ ಹಾಡುಗಳನ್ನು ೬೦-೭೦-೮೦ ದಶಕದ ಪೀಳಿಗೆ ಇಂದಿಗೂ ಸಮಯ ಸಿಕ್ಕಾಗಲೆಲ್ಲಾ ಗುನುಗುತ್ತಲೇ ಇರುತ್ತಾರೆ! ಕೆಂಪೇ ಗೌಡರಸ್ತೆಯಲ್ಲಿದ್ದ ನಿಯೋ ಮೈಸೂರು ಕೆಫೆ ಹೋಟೆಲಲ್ಲಿ ಕನ್ನಡ, ಹಿಂದಿ ಹಾಡುಗಳಿಗಾಗಿ ಅಂದಿಗೆ ನವನವೀನವಾಗಿದ್ದ ಜ್ಯೂಕ್ ಬಾಕ್ಸ್ ಕೂಡ ತರಿಸಿದ್ದರು! ಒಂದು ಹಾಡು ಹಾಕಲು ಇಪ್ಪತ್ತೈದು ಪೈಸೆ! ಈಗ, ಅವೆಲ್ಲ ಹೋಗಿ ‘ಟಿ ಆರ್ ಪಿ’ ಎಂಬ ರಕ್ಕಸ ಎಲ್ಲವನ್ನು ನುಂಗಿ ಅವನೇ ಹೊಸ ಜಗತ್ತು ಸೃಷ್ಟಿಸಿದ್ದಾನೆಯ? ಮುಂದೇನು?——————————————————————————-




Comments