ಶ್ವಾನವಂತರು
- haparna
- Dec 15, 2016
- 4 min read
ಶ್ವಾನವಂತರು ಲೇಖಕ: ಎಚ್. ಆರ್. ಹನುಮಂತ ರಾವ್, ಈ-ಮೈಲ್: hrhrau@gmail.com —————————————————————– ಶ್ವಾನ: ರೀ ಸ್ವಾಮಿ, ಯಜಮಾನ್ರೆ, ಆ ಪುಸ್ತಕ ಸ್ವಲ್ಪ ಪಕ್ಕಕ್ಕಿಡಿ, ಈ ಕಡೆ ನೋಡಿ. ಕ್ಷೇಮವೇ, ಕುಶಲವೇ? ನಾನ್ಯಾರ ಗೊತ್ತಾಯತ್ರ ? ನಾನು: ಯಾರದು? ಈ ಕಡೆ, ಆ ಕಡೆ, ಯಾವ್ಕಡೆನೂ ಎಲ್ಲೂ ಯಾರೂ ಇಲ್ವೆ! ಎಲ್ಲಿಂದ ಬರ್ತಿದೆ ಈ ಆಕಾಶವಾಣಿ? ಶ್ವಾನ: ನಾನೇಯಾ, ನಾಯಿ ‘ರಾಂಬೋ’. ಎದುರ್ಗೇ ಇದೀನಿ ಕಾಲ್ತಾವ, ಆಕಾಶದಲ್ಲಲ್ಲ….. ನಿಮ್ಪರಿಚಯಸ್ಥ. ಹಿಂದೆ ಎಷ್ಟೋ ಬಾರಿ ನಾವು, ನೀವು ಈ ಫ್ರೀಡಂ ಪಾರ್ಕ್ನನಗೆ ಮಾತಾಡಿ ಏಟೇಟೋ ವಿಸ್ಯಗಳ ಬಗ್ಗೆ ಕೂಡ ಚರ್ಚೆ ಮಾಡೀವಿ? ನಾನು: ಗೊತ್ತಾಯ್ತು, ನೀ ಇಲ್ಲ್ಯಾಕ್ಬಂದು ನನ್ನ ಕಾಡಿಸ್ತಿದೀ? ಈ ಫ್ರೀಡಂ ಪಾರ್ಕ್ನಲ್ಲಿ ಯಾರೂ ಕೇಳೋವ್ರು ಇಲ್ಲಾ? ನಿನ್ನಂತಹವರ್ನ ಒಳಗೆ ಬಿಟ್ಕಂಡು ಮಕ್ಕಳು ಮರಿಗಳ ನೆಮ್ಮದಿ ಹಾಳ್ಮಾಡ್ಲಿಕ್ಕ? ಶ್ವಾನ:ಯಾಕ ಬುದ್ದಿ, ಆರೋಗ್ಯ ಸರಿ ಇಲ್ಲವ್ರ? ನಾ ಮಾಡ್ಬಾರದ್ ರಾಜ್ಕೀಯ ಮಾಡ್ತಿವ್ನ? ಎಲೆಕ್ಸನ್ ಟೇಂನಾಗೆ ನಿಂ ವೋಟ್ ಹಾಕಿಸ್ಕಂಡು ಅಧಿಕಾರಕ್ಕಂತ ಅವರಿವರ ಜೊತೆ ಪಗಡೆ, ಜೂಜು ಆಡ್ಕಂಡಿವ್ನ? ನಾನು: ಹಂಗ ಹೇಳಾಂಗಿಲ್ಲಾ, ಇವತ್ನೀ ಒಳ್ಳೇವ್ನೇ, ಆದ್ರೆ ನಾಳೆ ಅಧಿಕಾರ ರುಚಿ ಕಂಡ್ರೆ ನೀ ನಾಯಿ ಒಂದೇ ಅಲ್ಲ ಇಲಿಮರಿಗ್ಳೂ ಕೂಡ ಹೆಗ್ಣ್ಗಗಳಾಗ್ತವೆ ಆದ್ರ, ನಿನಗಿರೋ ಯೋಚನಾ ಶಕ್ತಿ ನಂಗೋಳ್ಗೆ ಇದಯಾ? ನೀ ನಾಯಿ ಆದ್ರೂ, ಮನುಷ್ಯರ ತರಾನೇ, ರಸ್ತೆ ಬದಿಗೇನೇ ಎಲ್ಲೆಂದ್ರಲ್ಲೇ ಗಲೀಜು ಮಾಡೋದ, ನಮ್ಮಂಗೇ ಮಾತೋಡೋಡದ್ನ- ಈ ಎರಡ್ಬಿಟ್ರೆ? ಏನ್ ವ್ಯತ್ವಾಸ ಅಂತೀನಿ. ಆದ್ರೆ ಯಾರಾದ್ರೂ ಈಗ್ ನೋಡಿದ್ರೆ ನನ್ನೇನ್ ಅಂತಾರೆ? ಹುಚ್ಚ ಅನ್ನಕ್ಕಿಲ್ವ? ನಾಯಿ: ಮಾಡ್ದವ್ರ ಪಾಪ ಆಡ್ದವ್ರ ಬಾಯ್ನಾಗೆ ಅನ್ನ್ಂಗಾಯ್ತದಷ್ಟೇಯ, ಬಿಡಿ ಯಾಸಟ್ಗೋ. ಈ ದೇಸ್ದಾಗೇ ಯಾರು ಸರಿಯಾಗವ್ರೆ- ಯಾರಲ್ಲ- ಅಂತ್ ಹೇಗ ಹೇಳಾದು? ನಿಮ್ಜನಗೋಳಲ್ಲಿ ಸರಿಯಾಗ್ ಲೆಕ್ಕ ಹಾಕಿದ್ರೆ ನೂರಕ್ಕೆ ಐವತ್ಮಂದಿಯಾದ್ರೂ ನೇರ, ಪ್ರಾಮಾಣಿಕವಾಗಿ ಯೋಚ್ನೆ ಮಾಡವ್ರು ಅದಾರ? ಅಂದ್ಮ್ಯಾಕೆ ಯಾರು ನಿಜವಾದ ಹುಚ್ಚರು? ನೀವೇನಂತೀರಾ? ಕ್ವಾಪ ಬೇಡ ಸಾರು. ಒಳ್ಳೇದಲ್ಲ ನಿಮ್ಂಥವ್ರಿಗೆ ಬೀಪಿ, ಸುಗರ್,ಅದೂ ಇದೂ ಇರೋವ್ರಿಗೆ. ನಾನು: ಎಷ್ಟೋ ಸಾರಿ ನಂಗೂ ಅಂಗೇ ಅನ್ಸತದೇ, ಅದ್ರ, ಅವೆಲ್ಲಾ ನಿಂಗ್ಯಾಕ, ನಾಯಿ ಜನ್ಮಕ್ಕ? ಏನನ್ಕಂಡಾರು ಜನ? ನಾಯಿ: ಏನೋ ತಾವ್ ದೊಡ್ಡವ್ರು, ರಿಟೈರಾಗಿ, ರಿಟ್ರೀಡಿಂಗ್ ಸ್ಟೇಜನಾಗಿರೋವ್ರು, ನಿಮ್ಮನ್ ಕೇಳಾವ ಅಂತ, ಆವೊತ್ತಿಂದ ಒಂದ್ವಿಚಾರ ನಂಗ ಕಾಡಿಸ್ತಾ ಅದೆ… ನಾನು: ಎಲ, ಎಲಾ, ನನ್ಮೂಲಕ್ಕೇ ಕೊಳ್ಳಿಇಡ್ತೀಯಾ! ಇನ್ನೂ ಗಟ್ಟಿಯಾಗೇ ಅವ್ನಿ, ಬೀ.ಪೀ.ನೂ ಇಲ್ಲ, ಸುಗರೂ ಇಲ್ಲ, ಸವೆದ ಟೈರಾಗಿಲ್ಲ, ಸುಮ್ಕಿರು, ಒಂದ್ ಹಲ್ಕೂಡ ಬಿದ್ದಿಲ್ಲ. ಆದ್ರ ಇದಕ್ಕ ಫ್ರೀಡಂ ಪಾರ್ಕಂತ ಈ ಊರನ ಐಟೀ ಸಿಟಿ ಮಾಡಿ ಜನ ಪ್ರಿಯರಾದ ಮು.ಮಂತ್ರಿಗಳೊಬ್ರು ಹೆಸರಿಟ್ಟವ್ರೆ. ಇಲ್ಲಾದ್ರೂ ನಾವ್ ಶಾಂತವಾಗಿರೋದಕ್ಕ ಬಿಡೂ. ನಾಯಿ: ಹೌದು, ಅದನ್ನೇ ನಾ ಕೇಳ್ಬೇಕಂತಾ, ಇಲ್ಲಿ ಸೆಂಟ್ರಲ್ ಜೈಲಿತ್ತಂತ, ಅಲ್ಲಿ ಎಂಥಂಥದೋ, ಆಗ್ಬಾರ್ದೆಲ್ಲಾ ನಡ್ದೋಗದಂತ ಕೇಳಿವ್ನಿ, ಮತ್ತ ಇಲ್ಲಿ ಸತ್ತವರ, ನರಳಿದವ್ರ ಆತ್ಮ ಅಡ್ಡಾಡಕಿರಲ್ವ? ಅಂದ್ಮೇಕೆ ಈ ಹೆಸರು ಯಾಕ? ನಾನು: ಅಂಗ್ಲರು ನಮ್ಮ ಖೈದಿಗಳ್ನ ಇದೇ ಜಾಗದಲ್ಲಿ ಸೆರೆಹಾಕವ್ರು, ಸ್ವಾತಂತ್ರ್ಯಬಂದ್ಮ್ಯಾಕೆ ನಮ್ಮದೇ ಸರ್ಕಾರ ವಿರೋಧಪಕ್ಷದ ಜನಗೋಳನೂವೇ ಇಲ್ಲಿ ಕೂಡ ಹಾಕಿ ಹಿಂಸೆ ಮಾಡವ್ರೆ, ಹೀಗಾಗೋಯ್ತಲ್ಲ ಅಂತ್ ಕಣ್ಣೀರ್ಹಾಕಿ ಜನ ಅದನ್ಮರೀಲಿ, ಮತ್ತೆ ವೋಟ್ ಹಾಕ್ಲಿ ಅನ್ನೋಕೋಸ್ಕರ ಹೀಗೆ ಮಾಡಿರ್ಬೋದೇನೋ, ಗೊತ್ತಿಲ್ಲಪಾ. ಅಥ್ವಾ ಭೂಕಳ್ರು ಇದನ್ನೂ ಗುಳುಂ ಮಾಡ್ಬೋದು ಅಂತೋ. ಬುದ್ಧಿವಂತ್ರಾಗವ್ರೆ ಜನ ಈಗೀಗ. ತೆಗಿ ಅತ್ಲಾಗೆ, ಏನೀಗ ನಿನಗ್ಯಾಕೀದ್ದಿತು ಅವ್ರ ಉಸಾಬರಿ ? ನಾಯಿ: ಬುದ್ಧಿವಂತ್ರು ಅಂದ್ಕೂಡ್ಲೆ ‘ಬುದ್ಧಿಜೀವಿ’ಗಳು ನೆಪ್ಪಿಗೆ ಬಂತು, ಅಂಥವ್ರುಗಳಿಂದ ಈ ಮೋದಿ ಮಾಡಿರೋ ಐನೂರು, ಸಾವಿರ ರೂಪಾಯಿ ನೋಟ್ ಹಿಕ್ಮತ್ ಬಗ್ಗೆ. ಮಾತೆಲ್ಲ ಕೆಲವು ಮಾಧ್ಯಮಗಳಿಗೆ ಬಿಟ್ಟವ್ರ? ಬೇರೆ ಟೈಂನಗೆ ಏನೇನೋ ಹೇಳ್ತಾರೆ, ಜನಗೋಳ್ಗೆ ಬುದ್ಧಿ ಹೇಳ್ತಾವ್ರೆ, ಧರ್ಮ ಗ್ರಂಥಗಳ್ವಿಷ್ಯ ಮಾತಾಡ್ತಾರೆ, ಸುಡು ಅಂತಾರೆ, ದನದ ಮಾಂಸ ತಿನ್ನಂತಾರೆ. ಅದೇ ರೈತ್ರು ಆತ್ಮಹತ್ಯೆ ಮಡ್ಕಳ್ತಾ ಇದ್ದ ವೆಳ್ಯಾಗೂ, ಹೆಂಗಸರ ಚೈನ್ ಕಿತ್ಕಳ್ಳಾದು, ದಿನಾ ಕೊಲೆಗಳು, ಮಾನಭಂಗ, ಖೂನಿ ಆಗ್ತಾನೇ ಐತೆ, ಇವ್ರುಗೋಳುಸಿರೇ ಎತ್ತಾಕಿಲ್ಲ್? ನಾನು: ನೀ ಆ ಬಗ್ಗೆ ಸುಮ್ಕಿರು, ನೀನೇನ್ ಬುದ್ಧಿಜೀವಿನಾ? ಅವ್ರಿಗೆ ಬಹಳಷ್ಟು ಬುದ್ಧಿ ‘ದೇವ್ರು’-ಆ ಹೆಸರು ಅವ್ರ ಮುಂದೆತ್ತಾ೦ಗಿಲ್ಲ, ತಪ್ಪಾಯ್ತುದೇ ಅಂಗಂದ್ರೆ, ಹುಟ್ಟುವಾಗ್ಲೇ ಸ್ವಯಂ ಪಡ್ಕಂಡವ್ರು, ಎಲ್ಲಾ ಅವ್ರಿಗೆ ಸ್ವಯಾರ್ಜಿತ. ‘ದೇವ್ರನ’ ಡಿಸ್ಮಿಸ್ ಮಾಡಿ ಗವಾಕ್ಷಿ ಇಂದ ಹೊರಕ್ಕಾಕು, ಅದ್ಕೇ ಆವರ್ನ ಬುದ್ಧಿಜೀವಿ ಅನ್ನೋದ. ಇವ್ರುಗೋಳು ಬುದ್ಧಿ ಹೇಳೋದ್ರಲ್ಲಿ ಸಾಕ್ರಟೀಸ್, ವೈಜ್ಞಾನಿಕವಾಗಿ ಮಾತಾಡೋದ್ರಲ್ಲಿ ಯಾವ್ವಿಜ್ಞಾನಿಗೆ ಕಮ್ಮಿಇಲ್ಲ. ಪರ್ಪಂಚಾನೇ ಅವ್ರ ಕೈಯಾಗದೆ — ಎಲ್ಲ ಅವರ್ಗೆ ಗೊತ್ತದೆ. ನಾಯಿ: ಅದ್ಕೇನಾ ಅವರ್ಗೊಳೆ ಜ್ಞಾನಪೀಠ ಹಂಚ್ಕಳ್ಳಾದು ಸಾರು? ನಾನು:ಮಂಕು ಮುಂಡೇದೆ ನಾ ಆವಗ್ಲಿಂದ ಹೇಳ್ತಾನೆ ಇವ್ನಿ, ನಿಂಗ್ಯಾಕಿದ್ದೀತು ಜ್ಞಾನಿಗಳ ಉಸಾಬರಿ. ಇವರ್ಗೋಳ ಪೈಕಿ ಎಟೇಟ್ ಮಂದಿಗೂ ಜ್ಞಾನ ಪೀಠ ಸಂಪಾದಿಕೊಟ್ಟವ್ರೆ ಗೊತ್ತಾ. ನೀ ಸುಮ್ಕಿರೋದ ಕಲಿ, ನೀ ನಾಯಿ. ಅಗೋ ಅಲ್ಲಿ ಯಾವ್ದೋ ನಾಯಿ ಬೊಗಳ್ತಾ ಇದೆ ನಿನ್ಕರೀತಾ ಇರ್ಬೇಕಾ. ನಾಯಿ: ಅದು ನನ್ನವ್ಳೇ ಸಾರು, ಭೋ ಪಿರೀತಿ ನನ್ಮ್ಯಾಕೆ, ಒಂದ್ ಕ್ಷಣಾನೂ ಬಿಟ್ಟಿರ್ವ್ಳೇ ಅಲ್ಲ, ಅತ್ತ, ಇತ್ತ ಹೋಗಾಕೆ ಬಿಡವಲ್ಲ. ‘ಹಂ ತುಂ ಕಮರೇಮೆ ಬಂದ್ ಹೋ’, ‘ನೀ ಬಳಿ ಇರಲು ಬಿಸ್ಲೇ ನೆರಳು’ ಅಂಥಾ ಹಾಡುಗಳು ಅವಳಿಗೆ ಬೋ ಇಷ್ಟ. ನಾ ಅವಳ ಮುಂದೇನೆ ಇರ್ಬೇಕಂತಾಳೆ ಸದಾ. ನಿಂ ಜನಗೋಳು ಹಾಗಿರೋದ ಮದ್ವೆ ಆದ ಹೊಸದರಲ್ಲಿ ‘ಅನಿಮೂನ್’ ಅಂತಾರಲ್ಲ -ಆ ಟೈಂನಾಗೆ, ಮಾತ್ರ ಅಲ್ಲವ್ರ? ನಾನು: ಸರಿ ಹೊರಡು ಇನ್ನ ಹೆಂಡ್ರ ತಾಕೆ, ರಾಜಕೀಯ ನನಗ ನಿನಗೂ ಸರಿಬರದು. ನಾಯಿ: ನೀವ್ ಏಳ್ದಾಂಗೆ ನಮ್ಯಾಗಿಕಿದ್ದೀತು ಇವ್ರುಗೋಳ್ವಿಷ್ಯ. ಹೋಗಾಕ್ಮುಂಚೆ ಒಂದ್ಮಾತ್ ಕೇಳ್ತೀನಿ, ನಿಂ ರಾಮನ ಅವತಾರ, ಮಹಿಮೆ ಬಗ್ಗೆ ಕೇಳ್ಲಿಕ್ಕೆ ಹೋದೆ ಅಲ್ಲೊಬ್ಬರ್ನ, ರಾಮಾಯಣನ್ನ ಬರ್ದವ ವಾಲ್ಮಿಕಿ ಯಾವ ಗುಂಪಿಗೆ ಸೇರ್ದವ ಮೊದಲ್ಹೇಳು, ಬೇರೆ ವಿಸ್ಯ ಆಮೇಕೆ ಅಂತಾ ಅಲ್ಲೊಬ್ರು ಸವಾಲ್ ಹಾಕಿದ್ರು, ರಾಮನ ಕಥೆ ಯಾರ್ಗಬೇಕು ಎಂದಂಗಿತ್ತು ಅವ್ರ ಬಾಸೆ ಬುದ್ಧಿ. ಸತ್ಯಕ್ಕೋಸ್ಕರ ನಿಂ ಹರಿಶ್ಚಂದ್ರ, ಅಪ್ಪನಿಗೋಸ್ಕರ ರಾಮ ಎಂಥಾ ತ್ಯಾಗ ಮಾಡವ್ರೇ, ನಾವೇಟೋ ಕಲೀಬೋದಲ್ವ, ನಿಮ್ಗಾಂಧೀಗೆ ಅಂಥವ್ರೆ ಗುರು ಅಲ್ಲವ್ರ ಅಂದ್ರೆ, ಮತ್ತೊಬ್ರು ‘ಅದೆಲ್ಲ ಸ್ವಾತಂತ್ರ ಸಂಪಾದ್ಸಕ್ಕಷ್ಟೇಯ, ಈಗ ಅದೆಲ್ಲ ರೇಷನ್ ಕಾರ್ಡ್ಗೆ ಮಾತ್ರ, ಇದೀಗ ನಾವೇ ರಾಜ್ರು, ಮಹಾರಾಜ್ರಂಗ ಅದೀವಿ, ಸುಮ್ನೆ ಹೋಗತ್ತಾ’ ಅಂಬೋದಾ ಸಾರು? ನಾನು: ನಿಜ, ಆ ಗಾಂಧಿ ನವೇಂಬರೆಂಟಕ್ಮುಂಚಿನ್ ಸಾವಿರ್ರೂಪಾಯ್ನೋಟ್ ತರಾ ಈಗ ಸವಕಲು ನಾಣ್ಯ. ಈಟ್ವರ್ಷ ಆ ಹೆಸ್ರ ಹೇಳ್ಕಂಡೇ ಐವತ್ತು ವರ್ಸದಾಗಿನ್ದ ಭೋಜನ, ರಿಸಾರ್ಟ್, ಬಂಗ್ಲೆ ಮೇಲೆ ಬಂಗ್ಲೆ ಕಟ್ಟಿಸ್ಕ೦ಡ್ ಬದುಕ್ತಿರೋದ ನಮ್ಮ ಪ್ರತಿನಿಧಿಗ್ಪ್ಳು. ಈಗಿನ್ ಗಾ೦ಧಿ ಬೇರೆನೆಯ, ಬಾಲ ಮುದರ್ಕಂಡು ಹೋಗತ್ತ. ನಾಯಿ: ಅಂಗಾದ್ರೆ.. ನಾನು: ಅವ್ರು ಹೇಳಿದ್ನಿಜ. ನಿಂಗಂಟೇನ್ ಹೋಗದು? ನಮಗ ಯಾಕಿದ್ದೀತು? ನಮ್ದು ಪ್ರಜಾ ಪ್ರಭುತ್ವ, ಎಂಗೆ ಬೇಕಾದ್ರೂ ಇರ್ತೀವಿ, ಏನಾದ್ರೂ ಅಮ್ತಿವಿ, ನಂ ಪ್ರೊಫ಼ೆಸರುಗೋಳ ವಿದ್ವತ್ನ ಮುಂದ ರಾಮಾಯಣ , ಭಗವದ್ಗೀತೆ, ಮಹಾಭಾರತ ಎಂಥದೋ? ನಾಯಿ: ನಿಮ್ಮಿಂದ್ ಈ ಮಾತು ಕೇಳಕ್ ಈಟು ದೂರ ನಾ ಬರಬೇಕಿತ್ತ ಸಾರು? ನಂಗೊಂಥರ ಆಯ್ತದೆ. ಹೋಗ್ಲಿ, ಗಾಂಧಿ ಸತ್ರು, ಅವ್ರ ಹಿಂದೇನೆ ಸತ್ಯನೂ ಸಾಯ್ತು, ನ್ಯಾಯ ಹಂಗೆ, ಹಿಂಗೇ ಜೋಕಾಲಿ ಆಡ್ತಿದೆ, ಏನಕ್ಕೂ ಗ್ಯಾರಂಟೀ ಕೊಡಾಂಗಿಲ್ಲ, ಅಸತ್ಯ ನಿಲ್ತು, ನೀವೇನಂತೀರಾ? ನಾನು: ಅಂಗಂದ್ರೇನ್ ತರ್ಲೆ ಮುಂಡೇದೆ? ನೀ ತುಂಬಾ ಹೆಚ್ಕೊಳ್ತಿದೀ. ನಂ ದೇಶ್ದಾಗೆ ‘ಸಂವಿಧಾನ’ ಅಂತ ಒಂದ್ಕಟ್ಪಾಡಿದೆ, ಅದ್ನ ತಯಾರ್ಮಾಡಕ್ಕೆ ಏಟೇಟೋಮಂದಿ ಪ್ರಭೃತಿಗಳು ಬೆವರು ಸುರ್ಸವ್ರೆ. ಅದ್ರ ಅರ್ಥನೂ ಎಟೇಟೋ ವಿದ್ವಾಂಸರು ಬರದವ್ರೇ, ಝಾಬ್ವಾಲ ಅನ್ನೋವ್ರು ಒಬ್ರು, ಅದ್ನ ಓದ್ಕಂಡ್ಭಾ. ಸುಮ್ಕೆ ಅಲ್ಲ. ನಿನ್ ಪುರಾಣ ನಿಲ್ಸಿ ಓಡತ್ತ ಹೆಂಡ್ರ ಬಳೀಗೆ. ನಾಯಿ: ಯುವರಾನರ್, ನೋ ಅಬ್ಜೆಕ್ಷನ್, ಈಗ್ಲೀಗ ಅಧಿಕಾರ್ದಾಗ್ ಇರೋವ್ರನ, ಅವ್ರ ಸುತ್ತಾ ಗಿರಕಿ ಹೊಡೆಯೋ ಬುದ್ಧಿವಂತ ವ್ಯಕ್ತಿಗೋಳ್ನ ಏನನ್ಬೇಕಾ? ನಾನು: ನೀನೇ ಹೇಳಿದ್ಯಲ್ಲ ‘ಬುದ್ಧಿವಂತರು’ಅಂತ. ಅವರ್ನೆ ‘ಬುದ್ಧಿಜೀವಿಗಳು’ ಅ೦ತ ಕರೆಯೋದೈತಿ ,ಅವರಿಗೆಲ್ಲಾ ‘ಅತೀಂದ್ರ್ರಿಯ’ ಜ್ಞಾನ ಇರತೈತಿ ಅಂತ್ ಅನ್ಸತದೆ. ಇವರಗೋಳ ಸಮಾಸಾರ ನಂಗಬ್ಯಾಡ. ಬಡವ ಅಂತ ಮಡಗ್ದಾಗಿರೋದ್ಕಲಿ. ನಡಿ ಅತ್ತ ಮನೆಕಡೆ. ನಾಯಿ:ಆಯ್ತಪ್ಪ, ‘ನಾವ್ ರೈತ್ರ ಮಕ್ಳು, ಬಡವ್ರಗೋಸ್ಕರಾನೆ ಹುಟ್ಭಂದಿರೋರು, ಅವ್ರಿಗೋಸ್ಕರಾನೆ ನಾವ್ ಎಲೆಕ್ಸಂಗೆ ನಿಂತಿರೋದ’ ಅಂತೆಲ್ಲ ಹೇಳ್ಕಂಡವರ್ನ ರೈತರು ವೋಟ್ ಕೊಟ್ಟು ಗೆಲ್ಲಿಸಿದವ್ರ್ನನಂಬ್ಕಂಡು ಸಾಲ ಮಾಡಿ ಬೆಳೆ ತೆಗೆದಾಗ, ಹೆಚ್ಚು ಕಮ್ಮಿಆಗಿ, ಜಫ್ತಿಗೆ ಬಂದ್ರ, ಅವ್ರುಗೋಳು ನೇಣ್ಹಾಕ್ಕಂಡ್ ಸಾಯೋದನ್ನ್ ನೋಡ್ತಾ ನೋಡ್ತಾ, ಏರ್ಕಂಡೀಷನ್ ಕಾರ್ನಾಗೆ ಸುತ್ತಾಡ್ಕಂಡಿದಾರಲ್ಲ ವೋಟ ತಗೊಂಡವ್ರು, ಈ ಬುದ್ಧಿಜೀವಿಗಳು ಸುಮ್ನೆ ಆದಾರಲ್ಲ? ಅದ್ಕೇನಂತೀರಿ ಅಪ್ಪಣ್ಣೀ? ನಾನು: ಎಲ ಎಲಾ, ನೀಯು ಗೊಬ್ಬರದ ರಾಜ್ಕಾರ್ಣಿನೆ, ಎಟೇಟ್ ಉದ್ದನೆ ವಾಕ್ಯಗಳ ಕಟ್ಟಿ ಸರ ಸರ ಮಾತಾಡ್ತೀ? ಇಂಗ್ಲಿಷ್ ಕೂಡಾ ಸೇರಿಸ್ತಿ! ನೀ ಎಲ್ಲಿ ಕಲ್ತೆ ನಾಯಿ ಮುಂಡೇದೇ? ನಾಯಿ: ನಾ ಒಂದ್ಕಾಲ್ದಾಗೆ ದೊಡ್ಡ ರಾಜಕಾರಣಿ ಮನೆಗೆ ಕಾವಲು ಕಾಯ್ತಾ ಇದ್ದವನು, ಅವರುಗೋಳ ಹಗಲೂ, ರಾತ್ರಿ ಆಟ, ಪಾಟಗಳ್ನ- ಅದೇನೋ ರಾಸಕ್ರೀಡೆ ಅಂತಾರಲ್ಲ-ಅದ್ನು ಕೂಡ ಕಂಡಿವ್ನಿ. ಅದ್ಕೇ ನನ್ನಾಲ್ಗೆ ಏಲಬು ತಿರುಗ್ಸಕ್ಕೆ ಆಯ್ತಿದೆ. ಜಾತಿ, ಧರ್ಮ ಎಲ್ಲ ನಾಲ್ಗೇನಲ್ಲೇ ಸೃಷ್ಟಿ ಯಾಗೋದು ಅಲ್ಲೇ. ನಾನು: ಮತಾಂತರ, ಧರ್ಮದ ಬಗ್ಗೆ ಬಹಳ ಗೊಂದಲ ನನಗೂ ನಿಂಗೂ ಬೇಡ. ಶಿಕಾಗೋನಲ್ಲಿ ಸ್ವಾಮಿ ವಿವೇಕಾನಂದರು ನಮ್ಮ ಧರ್ಮದ ಬಗ್ಗೆ ಏನ್ ಹೇಳಿದ್ರೂ ಅನ್ನೋದ್ನ ಓದಾದರೂ ತಿಳ್ಕಳ್ಳಿ ಜನ. ನಡಿ ನೀ ಮನೇಗೆ.” ಈ ನಾಯಿ ಕಾಟ ನಂಗ್ಯಾಕಿದ್ದೀತು ? ******* ****** ******* “ಯಜಮಾನ್ರೆ, ಸ್ವಾಮೀ, ಪಾರ್ಕ್ನ ಮುಚ್ಚೋ ವೇಳೆ ಆಗೇದ, ಇಲ್ಲಿ ಯಾರನ ಇರಕ್ಕೆ ಬಿಡಾಂಗಿಲ್ಲ, ದಯವಿಟ್ಟು ಎದ್ದು ಮನೆಗೆ ಹೊರಡ್ರಲ್ಲ, ‘ನಾಯಿ, ನಾಯಿ’ ಅಂತ ಏನೇನೋ ಕೈನಾಗೆ ಪುಸ್ತಕ ಹಿಡ್ಕಂಡು ಬಡಬಡಸ್ತಿದ್ದೀರಾ, ಇಲ್ಲಿ ಯಾವ್ನಾಯೀನೂ ಇಲ್ಲ!”
Comments