ಶ್ವಾನ ಸಂಭಾಷಣೆ
- haparna
- Jul 2, 2014
- 3 min read
ಶ್ವಾನ ಸಂಭಾಷಣೆ ಅದು: ನಾನೊಂದು ನಾಯಿ, ಗೊತ್ತಾ?…. ನಾನು: ನೋಡಿದ್ರೇನೆ ಗೊತ್ತಾಗುತ್ತೆ, ನೀನೇನ್ ಅದ್ನ ಹೇಳ್ಕೊಬೇಕಾ ನಾಯಿ ಮುಂಡೇದೆ! ಅದು: ಹಂಗಲ್ಲ, ಮನುಷ್ಯರು ಎಷ್ಟೋ ಸಲ ನಮ್ಮ ತರಹಾನೇ ಆಡ್ತಾರೆ, ನಿಮಗೆ ಅನುಮಾನ ಬರ್ದೇ ಇರಲಿ ಅಂತ. ನಾನು : ಹಹಹ! ಅಲ್ಲ, ನಂಗೆ ದೇವ್ರು ಇನ್ನೂ ಎರಡೂ ಕಣ್ಗಳನ್ನ ಚೆನ್ನಾಗೇ ಇಟ್ಟಿದಾನೆ. ನಿನ್ ತಲೆ, ನಾಲ್ಕು ಕಾಲು,ಬಾಯಿ,ನಾಲಗೆ ಮತ್ತು ಬಾಲ ಎಲ್ಲ ನೀನು ಶ್ವಾನ ಮುಂಡೇದು ಅನ್ನೋದ್ನ ಡಂಗುರ ಹೊಡ್ದು ತೋರಿಸ್ತಿವೆ. ನಾಯಿ: ಅಲ್ಲೇ ನೀವು ತಪ್ಪು ಮಾಡ್ತಾಯಿರೋದು, ನಿಮ್ಮಗಳಲ್ಲಿ ಎಷ್ಟೋ ಜನ ಕಣ್ಣಿದ್ದೂ ಕುರುಡರ ತರಹ ಆಡೋದಿಲ್ವೆ? ಹಾಗಂತ ಹಾಡು ಕೂಡ ಕಟ್ಟೀದ್ದೀರ. ಮುನ್ಸಿಪಾಲ್ಟಿಯವ್ರು ನಮ್ಮನ್ನ ಹಿಡಿಯೋಕ್ ಬಂದು,ಅದರ ಬದ್ಲು ತರಕಾರಿ ಮಾರ್ಕೆಟ್ನಾಗೆ ಕೈಗೆಸಿಕ್ಕಿದ ತರಕಾರಿ ವಗೈರೆ ಮತ್ತು ಸಿಕ್ದೋರ್ನೆಲ್ಲ ಲಾರೀಲಿ ತುಂಬ್ಕೊಳ್ಳೊದಿಲ್ವ? ಪೋಲಿಸ್ ಸ್ಟೇಷಣ್ಗೆ ಕಳ್ತನ ಆಗಿದೆ ಅಂತ ಕಂಪ್ಲೇಂಟ್ ಕೊಡಕ್ ಬಂದ್ರೆ ಕಂಪ್ಲೇಂಟ್ ಕೊಟ್ಟವನ್ನೆ ಪೋಲಿಸ್ನೋರು ಲಾಕಪ್ಗೆ ಹಾಕಲ್ವ? ಇತ್ತೀಚ್ಗೆ ಅಣ್ಣ ತಮ್ಮಂದಿರಿಬ್ಬರು ಅವ್ರಪ್ಪನ್ನ ಮಾಡಿ ಮೇಲೆ ನಾಯಿನ ಚೈನ್ ಹಾಕಿ ಕಟ್ಟಿದಹಾಗೆ ಕಟ್ಟಿ ಎಷ್ಟೋ ದಿವ್ಸ ಉಪವಾಸ ಇಟ್ಟಿದ್ರಂತೆ. ನಿಮಗೆ ಪೇಪರ್ ಓದೋ ಅಭ್ಯಾಸ ಇಲ್ಲಾಂತ ಕಾಣುತ್ತೆ. ನಾನು: ವಿಷಯಕ್ಕೆ ಬಾ,ಮುಂಡೇದೆ, ತಲೆಹರಟೆ ಮಾತು ಬೇಡ. ದಿನ ಪತ್ರಿಕೆಗಳು ಈಗ ಮೂರು ರುಪಾಯಿ.ನಿಂಗೆ ಗೊತ್ತಾಗದ ಮಾತು ಬೇಡ. ಎಷ್ಟಾದ್ರೂ ನೀನ್ ನಾಯಿ ಅನ್ನೋದ್ ಮರೀಬ್ಯಾಡ. ಕೇಜಿ ಚಿಕೆನ್ಗೆ ಈದಿನ ಯಾವ್ ರೇಟ್ ಇದೆ ಗೊತ್ತಾ? ಅದು: ಮೊನ್ನೆ ನಮ್ಮ ಜಾತಿ ಸಭೇಲಿ ಏನೇನೋ ಠರಾವುಗಳ್ನ ಪಾಸ್ ಮಾಡಿದ್ವಿ. ಅದರಲ್ಲಿ ಒಂದು ನಿಮ್ಮಗಳ ಬಗ್ಗೆ ಕೂಡ. ನಾನು: ಏನು? ನಿಮ್ಮಗಳಲ್ಲೂ ಜಾತಿ, ಪಕ್ಷ , ಕುಲ ಎಲ್ಲಾ ಉಂಟಾ? ನಾ: ಹಂಗಲ್ಲ, ನಮ್ಮದು ಬರೀ ನಾಯಿ ಜಾತಿ ಅಷ್ಟೇ. ‘ಅಖಿಲ ಭಾರತ ಶ್ವಾನ ಕೂಟ’ ಒಂದೇ ನಮ್ಮಲ್ಲಿ ಇರೋದು, ನಮಗೆ ಸ್ವಾಮಿ ನಿಷ್ಠೆ ಹೇಗೊ ದೇಶ ಭಕ್ತಿನೂ ಅಷ್ಟೆ. ನಮ್ಮ ದೇಶ ಭಾರತ. ಅದಕೋಸ್ಕರ ಏನ್ ಮಾಡೋದಕ್ಕೂ ಸರಿ. ನಿಮ್ಮಗಳ ಹಂಗಲ್ಲ. ನಾನು:ನಿನ್ನ ತಲೆ ಪ್ರತಿಷ್ಠೆ ಜಾಸ್ತಿ ಆಯ್ತು. ಮೊದಲೇ ನಾಯಿ ಬುದ್ಧಿ ಅಂತಾರಲ್ಲ, ಹಾಗೆ ಮಾತಾಡ್ತಿದಿ. ನಮ್ಮ ದೇಶ, ಪಕ್ಷ ಜಾತಿ ಅಂದ್ರೆ ಏನಂದ್ಕೊಂಡಿ? ದೊಡ್ದ ದೊಡ ಮಹಾನುಭಾವರುಗಳಿಂದ ಆಗಿರೋವು. ನಾ: ನಮ್ಮಲ್ಲಿ ವಿದೇಶೀ ನಾಯಿ, ಸ್ವದೇಶೀ ನಾಯಿ, ಆ ಬ್ರೀಡೂ ಈ ಬ್ರೀಡು ಅಂತೀವೋ ಹೊರತು, ಆ ಪಾರ್ಟಿ, ಈ ಪಾರ್ಟಿ, ಆ ಜಾತಿಗೆ ಹುಟ್ಟಿದವನು, ಈ ಜಾತಿಗೆ ಹುಟ್ಟಿದವರು ಅಂತ ಒಬೊಬ್ರ ಕಾಲೆಳೆಯುವ ಅಭ್ಯಾಸ ಇಲ್ಲ. ನಮ್ಮ ಚುನಾವಣೆಗಳಲ್ಲಿ ಏನಿದ್ರೂ ಕರ್, ಬಿಚ್ ಅಂದ್ರೆ ಹೆಣ್ಣು, ಗಂಡು ಅಷ್ಟೆ ನೋಡಾದು, ಅದೂ ಅವ್ರ ಅವ್ರ ಮೇಟಿಂಗೋಸ್ಕರ. ನಾನು: ಏನೇನೋ ಬೊಗಳ್ತೀಯ, ಯಾವುದೋ ಟೆರರಿಸ್ಟ್ ಕಡೇದೇ ಇರ್ಬೇಕು ನೀನು. ಮತ್ತ, ನೀವುಗಳು ಗುಂಪು ಕಟ್ಕೊಂಡು ಬೀದಿ ರಂಪ ಮಾಡೊದನ್ನ ಯಾರು ನೋಡಿಲ್ಲ? ದಾರೀಲಿ ಸಿಕ್ದವ್ರನೆಲ್ಲ ಹೆದ್ರಿಸೋದು, ಕಚ್ಚೋದು ಮಾಡೋದ್ ಯಾತಕ್ಕ? ನಾ: ನಿಮ್ಮ ಪುಢಾರೀಗಳ್ನ ನೋಡಿ ನಾವು ಹಾಗೆ ಆಡೋದು. ನಮ್ನಮ್ ರಸ್ತೆ ನಮ್ನಮ್ ಅಧೀನದಲ್ಲಿ ಇದ್ರೆ, ನಾಳೆ ನಿಮ್ಮ ರಸ್ತೆಗೆ ಯಾರೊಬ್ಬ ಕಳ್ಳಾನೂ ಕಾಲಿಡೋದ್ನ ತಪ್ಪಿಸ್ತೀವಿ. ಅದು ಸರಿ ಅಲ್ವೋ. ಅದು ಬಿಟ್ಟು,ನಿಮ್ಮ ಪಂಚಾಯ್ತಿ ನಂಬ್ರಿಯಿಂದ ಹಿಡಿದು ಎಮ್ಮೆಲ್ಲೆಗಳ ತನಕ ಎಲ್ಲಾರೂ ಜಾತಿ, ಹಣ, ಹೆಂಡ,ಟೀವಿ,ಸೀರೆ, ಇನ್ನೂ ಏನೇನೋ ಕೊಡ್ತೀವಿ ಅಂತ ಆಶ್ವಾಸನೆ ಕೊಟ್ಟು ನಿಮ್ಮಗಳ ಓಟು ಕದೀತಾರಲ್ಲ ಆಮೇಲೆ ನೀವು ಕುಯ್ಯೋ ಮರ್ರೋ ಅಂದ್ರು ಕೇಳೊವ್ರಿಲ್ಲಾ , ಅದಕ್ಕೇನ್ ಹೇಳ್ತೀರಾ ಅಪ್ಪಣ್ಣೀ? ನಾನು: ಆದ್ರೇನು? ನಮ್ಮದು ಪ್ರಜಾಪ್ರಬಹುತ್ವ ಸರ್ಕಾರ ಅನ್ನೋದ ಮರೀಬ್ಯಾಡ. ಅವರನ್ನ ಹಿಂದಕ್ಕೆ ಕರ್ಸ್ಕೊಬಹುದು ನಮಗೆ ಬ್ಯಾಡ ಅನ್ನಿಸಿದ್ರೆ. ನಾ: ಹೌದಾ? ಹಂಗಾದ್ರೆ, ನಿಮ್ಮಲ್ಲಿಯ ಅನೇಕ ರಾಜಕಾರಣಿಗಳ ಮೇಲೆ ಎಂಥೆಂಥಾ ಅಪಾದನೆಗಳು ಲೋಕಾಯುಕ್ತ ಸಿಬಿಐ, ಅವ್ರು ಇವ್ರು, ಎಲ್ಲಾ ಕಡೆಗಳಿಂದ್ಲೂ ರುಜುವಾತಾದ್ರೂನುವೆ ಜೈಲ್ಗೆ ಹೋಗೋದಿರ್ಲಿ, ರಾಜೀನಾಮೆ ಕೊಟ್ಟಿದ್ದೇ ಇಲ್ಲ! ಗ್ಯಾಂಗ್ ರೇಪ್ ಮಾಡ್ದವ್ರನ್ನೆಲ್ಲಾ ಸಾರಾಸಗಟಾಗಿ ಹಿಡ್ದು ಜೈಲ್ನಲ್ಲಿ ಹಾಕವ್ರ? ಜನಗಳ ಕೋಟಿ ಕೋಟಿ ಹಣ ನುಂಗ್ದವ್ರೆಲ್ಲ ಆರಾಮಾಗಿ ಪಾರ್ಲಿಮೆಂಟು, ಮಿನಿಸ್ಟರಗಳ ಮನೆ ಅಲ್ಲಿ, ಇಲ್ಲಿ ಓಡಾಡ್ಕೊಂಡಿದಾರಲ್ವ? ನಮ್ಮ ನಾಯಿಗಳಲ್ಲಿ ಯಾರೊಬ್ಬನಾದ್ರೂ ಹಂಗೆ ಮಾಡಿದ್ರೆ, ನಾವೆಲ್ಲ ಸೇರ್ಕೊಂಡು ಅದು ‘ನಾನ್ ಹುಟ್ಟಬಾರ್ದಾಗಿತ್ತು’ ಅನ್ನೋತರ ಮಾಡಿ ಊರ ತೊಟ್ಟೀಲಿ ಎಸೀತಿದ್ವಿ. ಕೋರ್ಟು,ಕಚೇರಿ ಅಂತ ನಾವು ನ್ಯಾಯಕ್ಕೆ ವರ್ಷಾನುಗಟ್ಟಲೆ ಕಾಯೋದೇ ಇಲ್ಲ. ನಾನು: ಸುಮ್ನೆ ನೀನ್ ನಾಯಿ ಪ್ರತಿಷ್ಠೆ ತೋರ್ಸಕ್ಕೆ ಬರ್ಬೇಡ. ನಿಮ್ಗಳ ಮರ್ಯಾದೆ ಏನು ಅನ್ನೋದು ನಮಗೂ ಗೊತ್ತು. ಹೆಣ್ ನಾಯಿ ನೋಡಿದ್ರೆ ಸಾಕು, ಒಂದಲ್ಲ ಹತ್ತು ಗಂಡ್ನಾಯಿಗ್ಳು ಅದ್ರ ಹಿಂದೆ ಹ್ಯಾಗೆ ಹೊಡ್ದಾಡ್ಕೊಂಡು ಬೀದಿ ಬೀದಿ ಅಲಿಯತ್ವೆ ಅನ್ನೋದ! ಆವಾಗ ಯಾವ ಲೋಕಾಯುಕ್ತಾನೂ ನಿಮ್ಗೆ ಕಾಣ್ಸೊಲ್ಲ. ನಾ: ಬಿಡ್ತು ಅನ್ನಿ, ಕಾಮಕ್ಕೆ ಕಣ್ಣಿಲ್ಲ ಅಂತ ನೀವೇ ಪತ್ರಿಕೆ,ಪುಸ್ತಕಗಳಲ್ಲಿ ಬರ್ಕೊಂಡಿಲ್ವ? ನಿಮ್ಮ ಇಂದ್ರ, ಚಂದ್ರ ಇದೇ ಕೆಲಸ ಮಾಡ್ದಾಗ ತಪ್ಪು ಅನ್ಸಿರಲಿಲ್ಲವೋ? ಅವ್ರ ದಾರೀಲೆ ಹೋಗುವ ನಿಮ್ಮ ಮಿನಿಸ್ಟರುಗಳು, ಎಮೆಲ್ಲೇಗೋಳು ಎಷ್ಟೋ ಮಂದಿ ಸರ್ಕಾರೀ ಕೆಲಸ ಅಂತ ಊರೂರು ಅಲ್ಕೊಂಡು, ಟ್ರಾವೆಲರ್ಸ್ ಬಂಗ್ಲೆಗಳಲ್ಲಿ ಮಾಡೊ ಕಾಮಕಲಾ ಕಲಾಪಗಳಿಗೆ ಟಿಎ, ಡಿಎ ಎಲ್ಲಾ ತೊಗೊಳಲ್ವ? ಆಷ್ಟೇಕೆ ಸ್ವ್ವಾಮಿ, ಯಾವ್ದೋ ಅಸೆಂಬ್ಲಿನಾಗೆ ಮಿನಿಸ್ಟರುಗೋಳೂ ಮೊಬೈಲ್ನಾಗೆ, ಅದು ಎಂಥದೋ ಪೋರ್ನೋಚಿತ್ರಗಳ್ನ ನೋಡ್ತಾ ಖುಷಿಯಾಗಿರಲಿಲ್ವೋ? ನಮ್ಮ ಪೋರ್ನೋ ಎಲ್ಲ ಓಪನ್ ರಸ್ತೆ ನಾಗೇ,ವಿಡ್ಯೋನೇ ಬೇಕಿಲ್ಲ! ನಾನು: ನೋಡು, ನಿಂಗೆ ಏನೋ ಅಷ್ಟು ಬುದ್ಧಿ ಇದೆ ಅಂತ ಸಾರಾಸಗಟಾಗಿ ನಮ್ಮ ಪ್ರತಿನಿಧಿಗೊಳ್ನ ಬಯ್ಯೋದು ನಿನ್ನ ಕುಲಕ್ಕೆ ಮರ್ಯಾದೆ ತರೋವಂತದಲ್ಲ. ನಿನ್ಲಿಮಿಟ್ನಾಗಿರೋದು ವಳ್ಳೇದು ನಾಯಿಮುಂಡೇದೆ. ನಾ: ಮತ್ತೆ, ನಮ್ಮ ಕುಲ ಜಾತಿ ಅಂತಾ ಮಾತಾಡ್ಬೇಡಿ ಒಡೆಯಾ, ಜಾತಿ,ಕುಲ ಮತ ನೋಡಿ ಮಣೆ ಹಾಕೋದು ಏನಿದ್ರೂವೆ ನಿಮ್ಮ ಜನೊಗೋಳ್ ಮಾತ್ರಾನೆ. ನಾನು: ಪ್ರಜಾಪ್ರಭುತ್ವ ಅಂದ್ರೆ ಏನ್ ಅಂಡ್ಕೊಂಡಿ? ‘ಈಕ್ವಾಲಿಟಿ ಆಫ್ ರಿಲಜಿಯನ್ ,ಕ್ಯಾಸ್ಟ್ ಎಟ್ಸೆಟ್ರಾ, ಕೆಳಗೆ ಇರೋವ್ರು, ಮೇಲೆ, ಮೇಲೆ ಇರೋವ್ರು ಕೆಳಗೆ ಬರ್ಬೇಕು’ ತಿಳೀತಾ? ನಾ: ತಿಳೀತು ಬಿಡಿ, ಮಧ್ಯೆ ಇರೋವ್ರು ಗೋತಾ ಹೊಡೀತಾ, ತ್ರಿಶಂಕು ತರಾ ನೇತಾಡ್ತಾ ಇತ್ತ ಬದ್ಕೋಂಗು ಇಲ್ಲ ಸಾಯೋಂಗೂ ಇಲ್ಲ, ಅದೇನಾ ನಿಮ್ಮಗಳ ಪ್ರಭುತ್ವ? ಗುಂಡ್ಹಾಕಿ ಒಂದೇ ಸಲಕ್ಕೆ ಅವ್ರನೆಲ್ಲಾ ಫ್ಯಾಸಿಷ್ಟರುಗಳ ತರಾನೇ ಸುಟ್ಟ್ ಹಾಕಿ. ಆಗ ಓಟಿಗೆ ಇವ್ರು ಸಿಕ್ತಾರೆ,ಹಣಕ್ಕೆ ಅವ್ರು ಸಿಗ್ತಾರೆ. ನಾನು: ಅಂಗಲ್ಲ, ಲೇ, ನಿಂಗೆ ಈ ಸೂಕ್ಷ್ಮಎಲ್ಲ ತಿಳಿಯೊಲ್ಲಾ, ಹಂಗೇನಾದ್ರೂ ಮಾಡಿದ್ರೆ ತೆರಿಗೆ ಕಟ್ಟೋವ್ರೆ ಕಮ್ಮಿ ಆಗ್ಬಿಟ್ಟು ದೇಶ ಒಣಕ್ಕಂಡೋಗ್ತದೆ ಅಷ್ಟೇಯ. ಆಮೇಲೆ ನಿಂಗೆ ಗಂಜಿನೇ ಗತಿ. ನಾ: ಏನಾದರೇನು, ನಮ್ಮ ನಾಯಿಗೋಳ್ ಮಟ್ಗೆ ಹೇಳೋದಾದ್ರೆ ನಮಗೆ ಸ್ವಾಮಿ ನಿಷ್ಠೆ ಹೇಗೆ ಮುಖ್ಯವೋ ಹಾಗೆ ದೇಶ ಭಕ್ತಿ ಕೂಡ. ಎಂಜಲು ಕಾಸ್ಗೆ ನಾವು ಯಾರ್ಯಾರ್ ಕಾಲು ಹಿಡಿಯೊಕ್ಕೋಗೊಲ್ಲ, ದೇಶಕ್ಕೋಸ್ಕರ ನನ್ನ ಸ್ವಾಮಿ ಪ್ರಾಣ ಬಿಡೋ ಪರಿಸ್ಥಿತಿ ಬಂದ್ರೆ, ಮೊದಲು ಅವ್ರ ಪ್ರಾಣನ ಉಳಿಸಿ ನಂತರ ನಮ್ಮಪ್ರಾಣ ದೇಶಕ್ಕೋಸ್ಕರ ಕೊಡಕ್ಕೆ ತಯಾರಿ. ಲಂಚ,ಮಂಚ, ಸಂಚು ಎಲ್ಲ ‘ಸರ್ಕಾರದ ಕೆಲಸ ದೇವರ ಕೆಲಸ’ ಅಂತ ಹೇಳ್ಕೊಂಡು ಅಧಿಕಾರಿಗಳ್ನೂ ತಪ್ಪು ದಾರಿಗೆ ಎಳೆಯೋ ಮಂದಿಗೆ ಇರಲಿ. ನಾನು: ಇನ್ನು ಹೀಗೆ ಮಾತಾಡ್ತಾ ಇದ್ರೆ ಕೈಕಾಲ್ಕಟ್ಟಿ ಎಲ್ಲಿಗೆ ಕಳ್ಸಬೇಕೋ ಅಲ್ಲಿಗೆ ಕಳ್ಸೋದು ಗ್ಯಾರಂಟೀ, ಅಧಿಕ ಪ್ರಸಂಗಿ . ಹೋಗ್ತೀಯೋ ಇಲ್ವೋ ನಾಯಿ ಮುಂಡೇದೆ …………. *** *** *** *** “ರೀ ರೀ , ಏಳ್ರೀ, ಭಾನುವಾರ ಅಂತ ಹತ್ತು ಗಂಟೆ ಆದ್ರೂ ಏಳೋದ್ ಬಿಟ್ಟು ಏನೇನೋ’ನಾಯಿ ನಾಯಿ ಅಂತ ಕನಸಿನಲ್ಲಿ ಒದರ್ತಾ ಇದ್ದೀರಾ? ರಾತ್ರಿ ಎಲ್ಲ ಸುಡುಗಾಡು ಇಸ್ಪೀಟು ಸ್ನೇಹಿತರ ಜೊತೆ ಆಡೋದು, ಕಾಸೆಲ್ಲ ಕಳಕೊಂಡು ಹೀಗೆ ನಿದ್ದೇಲಿ ಒದರಕೊಳ್ಳೋದು” – COURTESY, “SAKHI”,KANNADA PRABHA WEEKLY.
$$$$$$$$$$$$$$$$$$$**************$$$$$$$$$$$$$$$$$
THIS HUMOROUS SKIT by H.R.HANUMANTHA RAU WAS PUBLISHED IN “SAKHI” ( ಸಖಿ -ಕನ್ನಡ ಪಾಕ್ಷಿಕ), KANNADA BI-WEEKLY, BELONGING TO CHAIN OF ‘EXPRESS’ NEWSPAPERS IN THEIR 15TH JULY 2013 ISSUE.
—————————————————————————-
Comments