, ಲಂಚಾಸ್ಪತ್ರೆ
- haparna
- Sep 3, 2016
- 4 min read
, ಲಂಚಾಸ್ಪತ್ರೆ
“ಸೂರಿ, ಲಂಚಾಸ್ಪತ್ರೆಗೆ ಎಂದಾದ್ರೂ ಹೋಗಿದ್ಯ, ಹೋಗಿದ್ರೆ, ಅದೆಲ್ಲಿದೆ? ಅದ್ರ ಬಗ್ಗೆ ನಿನ್ ಅನುಭವ ಏನ, ಹೇಗೆ?” “ಏನಾಯ್ತೋ ವಿಶ್ವ ನಿಂಗೆ, ಹುಚ್ಚು ಹುಚ್ಚಾಗಿ ಮಾತಾಡಕ್ಕೆ ಶುರು ಮಾಡಿದಿ? ನಿನ್ನೆ ಮನ್ನೇ ತ೦ಕಾ ಚೆನ್ನಾಗಿದ್ಯಲ್ಲ?” “ಸ್ವಲ್ಪ ತಡಿ ಸೂರಿ, ಅಲ್ಲಯ್ಯಾ, ನಂ ವಿಶ್ವನಿಗೆ ಯಾವತ್ತಾದ್ರೂ ತಲೆ ಸರಿ ಇದೆ ಅಂತ ಯಾರದ್ರು ಸರ್ಟಿಫಿಕೇಟ್ ಕೊಟ್ಟಿದ್ರಾ?”, ಚಂದಿಯ ಈ ಪ್ರಶ್ನೆಗೆ ರಾಘಣ್ಣಿ “ಈಗಲಾದ್ರೂ ಯಾರಾದ್ರೂ ಸರಿ ಇದೆ ಅಂತಾ ಹೇಳ್ತಾರಾ?” ಅಂದ. ಸೂರಿ ತಲೆ ಅಲ್ಲಾಡಿಸಿದ. “ಅಂದ್ಮೇಲೆ ಅದೆನ್ ಒದರ್ಕ೦ತಾನೋ ಒದರ್ಕಳ್ಳಿ, ಪೂರ್ತಿ ತಿಳ್ಕೊ, ಆಮೇಲೆ ಕನ್ ಕ್ಲುಷನ್ಗೆ ಬಾ”. ಚಂದಿ ಉವಾಚ. “”ಬಾಯಿದೆ ಅಂತ ಬಾಯ್ಗೆ ಬಂದಿದ್ದ್ ಬಡಬಡಿಸ್ಬೇಡ್ರೋ ಬಕ್ರ ಬಡ್ಡಿ ಮುಂಡೇವಾ, ನಂಗೇನ್ ಹುಚ್ಚಿಲ್ಲ, ಹಾಗೆನಾದ್ರೂ ಯಾರಾದ್ರೂ ಅಂದ್ರೆ, ಅದು ನಿಮ್ಮ ಸಹವಾಸ ದೋಷದಿಂದ ಆಗಿರ್ಬೋದಷ್ಟೇಯಾ. ನಾ ಯಾಕೆ ಹೇಳಕ್ಕ ಬಂದೆ ಅಂದ್ರೆ, ಆ ಮಲ್ಲೇಶ ನಗರದ ಬಸ್ಟಾಪಿನ ಬಳಿ ಎರಡು ಐನಾತಿ ಆಸಾಮಿಗಳು- ನೀವೂ ನೋಡಿರಬೇಕು-ಅವ್ರಗಳ ಮನೆಯವ್ರಿಗೆ ವೇಸ್ಟ್ ಬಾಡಿಗಳು-ಸಂಜೆ ಕೂತಿರ್ತಾವಲ್ಲಾ, ಬಸ್ಗೆ ಹತ್ತಿ, ಇಳಿಯೋವರ್ನೆಲ್ಲಾ ಮಂಗಗಳ್ತಾರಾ ನೋಡ್ತಾ- ಅವರುಗಳು ಮಾತಾಡಿಕೋತಾ ಇದ್ನ ನಿನ್ನೆ ಸಂಜೆ ಕೇಳಿಸ್ಕ್೦ಡೆ, ನಾ ಅಲ್ಲೆ ಬಸ್ಗೆ ಕಾಯ್ತಾ ಇದ್ದಾಗ. ಅದೇನಪ್ಪಾ ಅಂದ್ರ, ಅವ್ರುಗಳ್ ಮಾತ್ನಲ್ಲೇ, ಸ್ವಲ್ಪ ಕಿವಿಗೊಟ್ಟ್ ಮಾತು ಕೇಳೋಷ್ಟು ತಾಳ್ಮೆ ಇರ್ಲಿ ದಂಡ ಪಿಂಡಗಳ್ರಾ …… ” *** *** “ದೇಶ್ಕಚಾರೀ, ನಿಂಗೇನಾದ್ರು ಈ ಲಂಚಾಸ್ಪತ್ರೆ ಬಗ್ಗೆ ಏನಾದ್ರೂ ಗೊತ್ತಾ? ಯಾಕಂದ್ರೆ, ನಿನ್ನೆ ಅಲ್ಲೊಬ್ಬರು ರೇಷನ್ ಶಾಪ್ನಲ್ಲಿ ಸ್ವಲ್ಪ ವಯಸ್ಸಾದವ್ರೇ, ಕೋಪದಿಂದ ಅಂಗ್ಡಿನವ್ನ ಹತ್ರ ಬಹಳಾನೇ ಜೋರಾಗಿ ವಾದ ಮಾಡ್ತಾ ಇದ್ದಂಗಿತ್ತು. ಹೇಳ್ತಾ ಇದ್ರೂ ‘ಏನಯ್ಯಾ, ನಾವು ಈ ವಯಸ್ನಲ್ಲಿ, ಲಂಚಾಸ್ಪತ್ರೆಗೆ ಸೇರ್ಕಂಡು ಅಲ್ಲಿ ಪಾಠ ಕಲ್ತು ನಿನ್ನ ಹತ್ರ ಬರ್ಬೇಕಾ? ನಿಂಗ್ಬೇಕಾದವ್ರಿಗೆ ಒಂದು ತರಹಾ, ಬೇರೆಯವರಿಗೆ ಇನ್ನೊಂಥರಹ ರೇಷನ್ ಕೊಡ್ತೀಯಾ? ಇದೊಂದು ಬಾಕಿ ಇತ್ತು ಸ್ವಾತಂತ್ರ ಬಂದ್ಮೇಲೆ, ಅಲ್ಲಿ ಯಾರ್ಯಾರಿಗೆ ಎಷ್ಟು ಲಂಚ ಕೊಟ್ರೆ ಏನೇನು ನಿನ್ಹತ್ರ ಬೇಕಾದ್ದು ಪಡೀಬಹುದು ಅಂತ’ ಕಲ್ತು ಇಲ್ಲಿಗೆ ಬರಾವ? ಅದು ಬಿಟ್ರೆ ಹುಚ್ಚಾಸ್ಪತ್ರೆನೆ ಗತಿ ಈ ದೇಶದಲ್ಲಿ ನಿಯತ್ತಿರೋವ್ರಿಗೆ”. ಅಂದ್ರು ಪದ್ಮನಾಭಯ್ಯ. ಪದ್ಮನಾಭಯ್ಯ, ದೇಶಿಕಾಚಾರಿ -ಇವರಿಬ್ಬರು ಸರ್ಕಾರೀ ಕೆಲ್ಸದಲ್ಲಿದ್ದ್, ರಿಟೈರ್ಡ ಆಗಿ ರಿಟ್ರೀಡಿಂಗ್ ಸ್ಟೇಜ್ನಾಗಿರೋವ್ರು. ದೇಶಕಾಚಾರಿ ಮಾಸಾಶನದ್ಜೊತೆಗೆ ಇರ್ಲಿ ಅಂತ ಬ್ರಾಹ್ಮಣಾರ್ಥಕ್ಕೂ ಹೋಗುವದುಂಟು. “ಅಷ್ಟು ಗೊತ್ತಾಗಲ್ವೆ ನಿಂಗೆ ಪದ್ಮನಾಭಯ್ಯ? ಪಾಪ ಆ ವಯಸ್ಸಾದವ್ರು, ನಾನು, ನೀನು-ನಂಗೇನ್ ವಯ್ಸು ಕಮ್ಮಿನಾ- ಮತ್ತಿನ್ನೇನು ಮಾಡ್ಲಿಕ್ಕ ಸಧ್ಯ? ಎಲ್ಲಾ ಕಡೆನೂ ಮೋಸ ಆದ್ರೆ, ಸ್ವಾತಂತ್ರ್ಯ ಬರೋದಕ್ಕೆ ಮುಂಚ್ನಿಂದ್ಲು ಅವ್ರು ನೋಡಿರೋವ್ರುಗಳು, ಆಗ್ಲೂ ರೇಷನ್, ಈಗ್ಲೂ ರೇಷನ್. ಕಡೆ ಪಕ್ಷ ಆ ಕಾಲದಲ್ಲಿ ಈ ರೀತಿ ಕಣ್ಣೆದುರಿಗೆ ಮೋಸ ಮಾಡ್ತಿರಲಿಲ್ಲ ಅಂತ್ಕಾಣುಸುತ್ತೆ.” “ದೇಶೀ, ಈಗ್ಗೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಗ್ತಾ ಬಂದ್ರು ಇವರು ಇನ್ನ ಬಡತನ ರೇಖೆಯಿಂದ ಜನಗಳನ್ನ ಮೇಲಕ್ಕೆ ಎತ್ತಾನೆ ಇದಾರೆ, ಆದರೆ, ಅವರುಗಳ ಕುಟುಂಬಗಳ್ಮಾತ್ರ ಕೋಟಿಗಟ್ಟಲೆ ಹಣ ಶೇಖರಿಸ್ತಾ, ಊರೆಲ್ಲ ಮನೆಗಳು ಕಟ್ತಾನೇ ಇದಾರೆ”. ಅಷ್ಟರಲ್ಲಿ ಪದ್ಮನಾಭಯ್ಯನವರ ಏಕಾಕ ದೃಷ್ಟಿಗೆ ಎದುರಿನ ಬಸ್ಟಾಪಿನಲ್ಲಿ ಹಲವಾರು ಕಾಲೇಜು ತರುಣಿಯರು ಇಳಿಯುತ್ತಿದ್ದುದು ಬೀಳುತ್ತಲೇ ಮೌನಕ್ಕೆ ಶರಣಾಗಿ, ಅವರ ಕೈ, ಧರಿಸಿದ್ಧ ಶರ್ಟಿನ ಜೋಬಿಗೆ ಹೋಗಿ, ನಿಧಾನವಾಗಿ ನೆಶ್ಯದ ಡಬ್ಬಿ ಹೊರತೆಗೆದರು. ಅವರು ಬಾಲ್ಯದಲ್ಲಿ ಮರಕೋತಿಯಾಟಾಡುವಾಗ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡು ಇನ್ನೊಂದರಲ್ಲಿ ಏಕಾಗ್ರ ದೃಷ್ಟಿಯಿಂದ ನೋಡಬೇಕಾಗಿ ಅವರು ನೋಡುವಾಗ ಕಾಕದೃಷ್ಟಿ ಹೋಲುತ್ತಿತ್ತು. ಡಬ್ಬಿಯಿಂದ ನಿಧಾನವಾಗಿ, ಚಿಟಿಕೆಯಷ್ಟು ನೆಶ್ಯ ತೆಗೆದು, ತಲೆಯನ್ನು ಪೂರ್ತ ಮೇಲಕ್ಕೆ ಎತ್ತಿ ಸಾವಕಾಶವಾಗಿ ಕಡಾಯಿಯಂತಹ ಮೂಗಿನ ಹೊಳ್ಳೆಗೆ ತೂರಿಸಿ, ಅರೆ ಕ್ಷಣ ಸ್ವರ್ಗ ಸುಖ ಅನುಭವಿಸಿ, ಡಬ್ಬಿಯ ಮುಚ್ಚಿ, ದೇಶಿಕಾಚಾರಿಗೆ ಹಸ್ತಾ೦ತರಿಸಿದರು. ಆ ವೇಳೆಗೆ ಇವರ ಗುಂಪಿನವರೇ ಆದ ಮತ್ತೊಬ್ಬರು ಸಿದ್ಧವೀರಪ್ಪ ಆಲ್ಲಿಗೆ ತಮ್ಮ ನಾಯಿ ‘ರಾಣಿ’ ಸಮೇತ ಆಗಮಿಸಿದರು. ಈತ ಕೋಆಪರೇಟಿವ ಬ್ಯಾ೦ಕಿನ ಸೇವೆಯಲ್ಲಿದ್ದು ನಿವೃತ್ತರಾದವರು. ಪದ್ಮನಾಭಯ್ಯನ ಮಾತು ಕೇಳಿಸಿಕೊಳ್ಳುತ್ತ ತಮ್ಮ ರಾಣಿಯನ್ನ ಅಲ್ಲೇ ಕಟ್ಟಿಹಾಕಿ, ಕಟ್ಟೆಯ ಮೇಲೆ ಆಸೀನರಾಗುತ್ತಾ ಆ೦ದ್ರು “ಆದ್ರೆ ಇವ್ರುಗಳು ಕೋಟಿ ಕೋಟಿ ಆಸ್ತಿ ಹೇಂಗಾರ ಮಾಡಕಂಡ್ರು? ಮೊನ್ನೆ ತ೦ಕಾ ಇವ್ರು ಕೈಯಲ್ಲಿ ಏನು ಇಲ್ದೆ ಒದ್ದಾಡ್ತಾ ಇದ್ದವ್ರು ಬುದ್ಧಿ, ನಾನೇ ಕಣ್ಣಾರ ನೋಡೀನಿ ಇವ್ರ ಪೈಕಿ. ಇವರುಗಳೆಲ್ಲಾ ಸ್ವತಂತ್ರ ಭಾರತ ಅಂದ್ರೆ ಅವ್ರಿಗೆ, ಅವ್ರ ಮಕ್ಕ್ಳಗೆ ಮಾತ್ರ ಸ್ವಾತಂತ್ರ್ಯ ಅಂತ ಅನ್ಕಂಡು ನಿಂಮ್ ಲೆಕ್ಕದಾಗೆ ಎಲ್ಲ ಅನ್ಭವಿಸಿಕಂಡ್ ತಮ್ಮ ಮಕ್ಕಳಿಗೂ ದಾನ ಮಾಡ್ಕಂತವ್ರೆ. ನಿಮ್ಗು, ನನ್ನಂತವರಿಗು ಇದ್ದೆ ಇದೆ-ನಿಷ್ಕಾಮ ಕರ್ಮ ಪದ್ಮನಾಭಯ್ಯ”. “ಎನ್ಹಾಗಂದ್ರೇ, ಅರ್ಥವಾಗೋ ತರಾ ಮಾತಾಡ್ಬಾರ್ದೇ?ಸಿದ್ವೀರು”. “ಅಲ್ಲ ಸ್ವಾಮಿಗೊಳೆ, ನಾವ್ ವೋಟ್ಕೊಟ್ಟು ಇವ್ರಿಗೆ ನಮ್ಮ ದೇಶಾನ್ ಆಳೋದಕ್ಕೆ ಬಿಟ್ರೆ ಇವ್ರುಗೋಳು ಕೋತೀಗೆ ಎಂಡಾ ಕುಡಿಸದಂಗೆ ಆಡ್ಕನ್ಡ್, ಸೂರೆ ಮಾಡ್ತಾ ಅವ್ರೆ ದೇಶಾನ್ನೇ”. ಈ ಮಾತ ಕೇಳಿ ದೇಶೀ ಅಂದ್ರು “ಸಿದ್ವಿರು ಭಾಷೆಲಿ ನಿಷ್ಕಾಮ ಕರ್ಮ ಅಂದ್ರೆ ಈಗ ತಿಳೀತು, ವೋಟ್ ತಗಂಡ್ ಅಧಿಕಾರಕ್ಕೇರ್ದವ್ರು ಬ್ರಿಟೀಷರ ತರಾ ನಮ್ಮನ್ನ ಗುಲಾಮರಂಗೆ ಅಷ್ಟಿಟ್ಟು ಗಂಜಿ, ಸ್ವಲ್ಪ ಕಟ್ಮುಗ್ಲ ಆಕ್ಕಿ, ಚೂರು ಬೇಳೆ, ಟಿವಿ, ಸೈಕಲ್ ಅಂತಾ ನಂ ಲೆಕ್ಕದಾಗೆ ದಾನ ಕೊಟ್ಟಂಗ ಮಾಡಿ, ಜನಗೊಳ್ನ ಹೆಂಡ ಕುಡ್ದವರ ಹಾಗೆ ಮಾಡ್ಬಿಟ್ಟು ತಮ್ಮ ಸುಖ ನೋಡ್ಕಳ್ಳೋವ್ರಲ್ಲವಾ ಇವ್ರು?”. ಸಿದ್ಧವೀರು ಅಂದ್ರು “ಅದಕ್ಕೆ ಕಣಪ್ಪ ಈಗಿನ ಜನ ಬುದ್ಧಿವಂತರಾಗ್ತಾವ್ರೆ. ಎಲ್ಲೆಲ್ಲಿ ಏನೇನ್ ಮಾಡಿದ್ರ ಇವ್ರುಗೋಳ ಕಾರ್ಯ ಸಲೀಸಾಗ್ತಾದೇ ಅಂತ ತಿಳ್ಕಂಡ್ ಏನೇನ್ ಎಲ್ಲೆಲ್ಲಿ ಮಾಡ್ಬೇಕೊ ಮಾಡಿಕಂತಾವ್ರೆ, ನಾವು ನೀವಗಳಷ್ಟೇ ಮಂಕರ ತರಹ ನ್ಯಾಯ, ನೀತಿ ಅಂತ ಕೂತು ಒದ್ಲಾಡ್ತಾ ಇರೋವ್ರು. ತಿಳ್ಕಳ್ಳಿ ದೇಶಣ್ಣ, ಅದ್ಕೆ ಆ ರೇಷನ್ ಅಂಗಡಿನಾಗೆ ಅಂಗೇ ಹೇಳಿರಬೇಕು ಆ ವಯಸ್ಸಾದವ್ರು”. “ಕೈಲಾಗದವ ಮೈ ಪರ್ಚ ಕಂಡ ಅನ್ನೋ ಪರಿಸ್ಥಿತಿ” ಅಲ್ಲವ? ಅದಕ್ಕೆ ಕಣಪ್ಪ, ನಾವು ಕೂಡ ಗಾಂಧಿ ತತ್ವ ಮರ್ತು ನಂದಾರಿ ನೋಡ್ಕೋಬೇಕು” ಅಂದರು ಪದ್ದಣ್ಣ. ನೆಶ್ಯ ಸೇವಿಸಿದ ಮೇಲೆ ಅವರಿಗೆ ಹೊಸ ಹುರುಪು ಬಂಧಂಗ್ಹಿತ್ತು. “ಪದ್ಮನಾಭು, ನಾವುಗೊಳ್ ಒಂದ್ಕೆಲ್ಸ ಮಾಡಬೋದು,ಈ ಸರ್ಕಾರಿ ಕೆಲಸಗಳಲ್ಲಿ ಎಲ್ಲೆಲ್ಲಿ ಮೇಜಿನ್ಕೆಳ್ಗೇ ಕೆಲಸ ಆಗತ್ತೋ ಅಲ್ಲೆಲ್ಲಾ ಸರ್ಕಾರಾನೇ ಒಂದು ರೇಟ್ ಫಿಕ್ಸ್ ಮಾಡಿ ಗೆಜೆಟ್ನಗೆ ಹಾಕೋದು. ಮತ್ತೆ ಇದು ಎಲ್ಲಾ ಪಾರ್ಟಿಗಳು ಒಪ್ಪದಿದ್ರೆ ಆ ಕಚೇರಿ ಪಕ್ದಲ್ಲೇ ಒಂದು ಮಿನಿ ಕಚೇರಿ ತೆಗೆದು ಅಲ್ಲಿ ಹೋಗೋ ಜನಗಳಿಗೆ ಈ ರೇಟ್ ಪ್ರಕಾರ ಹಣ ಸಂದಾಯ ಮಾಡ್ಸಿ ಆಮೇಲೆ ಅವ್ರ ಕೆಲಸ ಮಾಡ್ಕೊಡೋದೇ ಸರಿ. ಏನಂತೀಯಾ?”. “ದೇಶೀ, ನೀನ್ಕೂಡ ಪೌರೋಹಿತ್ಯಕ್ಕೂ ಇದೇ ರೀತಿ ಮಾಡಿದ್ರೆ, ನಾಲ್ಕು ಜನರ ಹೆಗಲ್ಮೇಲೆ ಹೋಗೋಕ್ಮುಂಚೆನೇ ನಾಲ್ಕು ಮನೆ ಕಟ್ಟಿ ಬಾಡಿಗೆಗೆ ಕೊಡಬೋದು ನೀ, ಏನಂತೀ?”. ದೇಶೀ ಅಂದ್ರು, “ಅದೆಲ್ಲ ಸರಿ ಕಾಣಲ್ಲ, ಇವೆಲ್ಲ ಅಮೆರಿಕಾ ಅಣ್ಣನೋ, ಪೌ೦ಡ್ಶಿಲಿಂಗಪೆನ್ನಿ ಮಾವ್ನೊ, ವರ್ಲ್ಡ್ ಬ್ಯಾ೦ಕ್ ದೊರೆಗ ಳೊ ಅ೦ಥವರಿಗೆ ಗೊತ್ತಾದ್ರೆ ಕಷ್ಟ ದೇಶದ ಮಾನ ಉಳಿಸಿಕೊಳ್ಳದ್.” “ಹಾಗಾದ್ರೆ, ಒಂದ್ ಕೆಲಸ ಮಾಡಾವ ಬುದ್ಧಿ, ಎಲ್ಲಾ ಸರಿಹೋಗ್ತದೆ”. “ಏನಪ್ಪಾ ವೀರೂ ಅಂಥ ಐಡಿಯಾ, ಮನೆಹಾಳ್ಭುದ್ಧಿ ಬೇಡ, ಆಳೋವ್ರಿಗೂ ಸುಲಭ ಆಗ್ಬೇಕು, ದೇಶದ ಮರ್ವಾದೆನು ಹೋಗಾದ್ ತಿಳಿಬಾರ್ದು?” ಪದ್ಮನಾಭಯ್ಯ ಅಂದ್ರು. “ಅಂದ್ರೆ, ಮರ್ವಾದೆ ಹೋದರು ಪರ್ವಾಗಿಲ್ಲ, ಆದ್ರೆ ಯಾರಿಗೂ ತಿಳಿಬಾರ್ದು ಅಂತೀರಾ ಸ್ವಾಮಿ. ನಿಮ್ಲೆಕ್ದಾಗೆ? ಮನೆಹಾಳ್ಬುದ್ಧೀನೋ, ಚಾ೦ಡಾಲ್ಬುದ್ಧಿನೋ ನೀವೇ ತಿಳ್ಕಳ್ಳಿ, ಈಗ ನಮ್ಮಲ್ಲಿ ಲೋಕಾಯುಕ್ತ ಅಂಥ ಸಂಸ್ಥೆ ಇದ್ಯಲ್ಲ್ವಾ? ಹಾಗೇನೇ, ಸಿಬಿಐ, ಇಂಟೆಲಿಜೆನ್ಸ್ ಬ್ಯುರೋ, ರಾ ಅನ್ನೋ ಬೇರೆ ಬೇರೆ ಏಜೆನ್ಸಿಗಳ್ನ ಓಟ್ಟ್ಗೆಸೇರಿಸಿ ಮಹಾಯುಕ್ತ ಅಂತ ಮಾಡಿ, ಅದರ ಉಸ್ತುವಾರಿಗೆ ಬಿಟ್ಟು, ಏನೇ ಅಪಾದ್ನೆ ಬಂದ್ರು ಅವೃಗೊಳ್ಗೆ ತಗಲಾಕಿ ಸುಮ್ಕಿದ್ಬಿಟ್ರೆ ಆಯ್ತು, ಅವರುಗಳು ದೇಶ, ವಿದೇಶಗಳ ಗೂಢಚರ್ಯ, ಅದು ಇದು ಎಲ್ಲಾ ಪತ್ತೆ ಮಾಡಿ ವರದಿ ಕೊಡು ಅನ್ನೋತನ್ಕ ಕೊಡೋಲ್ಲ, ನಿಮಗೆ ಏನು ಕಷ್ಟನು ಇರಲ್ಲ. ಆವಾಗ್ಗೆ ಎಲ್ಲಾ ನಿಂ ಲೆಕ್ಕಕ್ಕೆ ಬತ್ತಾವೆ.” ದೇಶೀ ವೀರೂನ ಭುಜ ಅಲುಗಿಸಿ “ವೀರು, ಇದು ದೇಶವೇ ಎಕ್ಕುಟ್ಕಂಡ್ ಹೋಗೋ ಬುದ್ಧಿ, ಮತ್ತೆ ನಮ್ಮನ್ ಆಳೋಕ್ಕೆ ವಿದೇಶದವರೇ ಓಡಿ ಬರ್ತಾರೆ ಅಷ್ಟೇಯಾ.ಅಲ್ನೋಡು ನಿನ್ನ ರಾಣಿ ಏನ್ಮಾಡ್ತಾ ಇದೆ.” “ತೆಗೀರಿ ಅತ್ಲಾಗೆ, ಲ೦ಚದ್ ವಿಸ್ಯ ಗಂಭೀರವಾಗಿ ಮಾತಾಡೋವಾಗ ನಾಯಿ ತ್ಯಾಜ್ಯದ್ ವಿಸ್ಯ ಎನ್ಮಹಾ? ಅದಕ್ಕೆ ಅಷ್ಟು ಸ್ವಾತಂತ್ರ್ಯ ಬೇಡವ್ರ? ದೇಶ, ಜನಗೊಳ್ ಕಾಯಕ್ಕೆ ತಯಾರಿರೋ ಈ ಪ್ರಾಣಿ ಎಲ್ಲಿ? ಲಂಚ ತಿನ್ನೋ ಆ ಮೃಗಗಳೆಲ್ಲಿಗೆ ಹೋಲಿಕೆ? ಅತ್ಲಾಗೇ ಅದ್ನ ಬಿಡಿ, ಈ ಸಮಸ್ಯೆ ಬಗ್ಗೆ ಮಾತಾಡಾವ ದೇಶೀ ಅಣ್ಣೋರೆ?” ಪದ್ಮನಾಭಯ್ಯ ಹೇಳಿದ್ರು” ಸಿದ್ದ್ ವೀರು, ನಾಯಿ ವಿಷ್ಯಕ್ಕೆ ಬಂದ್ರೆ, ಇದು ದೇಹಕ್ಕೆ ಬೇಡದ್ದು ಎಲ್ಲೆಂದ್ರಲ್ಲಿ ಹೊರಗ್ ಹಾಕತ್ತೆ, ಲಂಚ ತಿನ್ನೋರು ತಿನ್ನಬಾರದ ತ್ಯಾಜ್ಯಗಳನ್ನ ನುಂಗಿ ತೇಗ್ತಾರೆ, ಸೈಟುಗಳನ್ನೇ ಗುಳುಂ ಮಾಡ್ತಾರೆ, ತಮ್ಮ ಐದೈದು ಸಂತತಿಗಳಿಗಾಗೋಷ್ಟು ಆಸ್ತಿ ಮಾಡಕಂತಾರೆ, ಅಷ್ಟೇಯಾ ವ್ಯತ್ಯಾಸ, ಹೀಗೆಮಾಡಿದ್ರೆ ಹೇಗೆ ಸಾರು? ಯಾರಾದರೂ ಲಂಚದ ಹೆಸರು ಅಪ್ಪಿತಪ್ಪಿ ಹೇಳಿದ್ರೆನೂ, ಅವರ್ನ ಭೂಗತ ಮಾಡ್ಬಿಡೋದು, ಲಂಚ ತೊಗೊಳ್ಳೋದು, ಕೊಡೋದು ಎರಡು ಈಗಿರೋ ರೂಲ್ಸ್ ಪ್ರಕಾರ ಅಪರಾಧ ಅಂತ ಮಾಡಿರೋವಾಗ, ಅದಕ್ಕೆ ಸರಿಯಾಗಿ ಹೊಂದತ್ತೆ ನಾ ಹೇಳೋದೂ.” ದೇಶೀ ನುಡಿದರು “ಆದ್ರೆ ಅದಕ್ಕಿಂತ ಒಳ್ಳೆ ಐಡಿಯ ಅಂದ್ರೆ ಆ ರೇಷನ್ ಅಂಗಡೀಲಿ ವಯೋವೃದ್ಧರು ಹೇಳಿದ್ರಲ್ಲ ಹಾಗೆ ದೇಶದಲ್ಲಿ ಎಲ್ಲ ಕಡೆ ಈ ಲಂಚಾಸ್ಪತ್ರೆಗಳನ್ನ ಕಟ್ಟಿಸಿ, ಅಲ್ಲಿ ಸರ್ಕಾರಿ ಕೆಲಸಕ್ಕೆ ಸೇರ್ಕೊಳ್ಳೋವ್ರನ್ನ ಮತ್ತು ಸರ್ಕಾರಿ ಕೆಲಸಗಳ್ನ ಮಾಡಿಸ್ಕೊ ಬೇಕಾದವ್ರುಗಳಿಗೆ ಟ್ರೈನಿಂಗ್ ಕೂಡಾ ಅಲ್ಲೇ ಏರ್ಪಾಟ್ ಮಾಡಿದ್ರೆ ಹೇಗೆ ?” “ನಿವೇಳಾದ್ದ್ ಅದೇಮ್ಕೆ ಸರಿಹೋಗ್ತದೆ, ನೀವ್ ಪುಳ್ಚಾರ್ ಮಾತ್ನ ಬಿಡಿ, ಸರ್ಯಾಗ್ ಯೋಚ್ನೆ ಮಾಡ್ರಲ್ಲಾ ದೇಶಣ್ಣಾ” “ ಆ, ನಂಗ್ ಹೊಳೀತು, ಹೀಗ್ ಮಾಡಿದ್ರೆ ಸರಿಯಾಗಿರುತ್ತೆ, ಈ ಲಂಚಾಸ್ಪತ್ರೆಗಳಿಗೂ ಸರ್ಕಾರಿ ಅಧಿಕಾರಿಗಳ್ನ ನೇಮಸಿದ್ರೆ ಎಲ್ಲ ಸರಿಹೋಗತ್ತೆ, ಯಾರ್ಗು ಏನು ಒಂಚೂರು ಗೊತ್ತಾಗಲ್ಲ. ಆದ್ರೆ…” ಸಿದ್ಧವೀರು, ಪದ್ಮನಾಭಯ್ಯ ಇಬ್ಬರು ಒಟ್ಟಿಗೇ ಒಂದೇ ಉಸಿರಿನಲ್ಲಿ “ಹೌದೌದು, ಅದೇ ಸರಿ.”ಎಂದು ಅನುಮೋದಿಸಿದರು. ದೇಶೀ ಮೆಲ್ಲಗೆ ಒದರಿಕೊಂಡರು “ಆಗ ಅಲ್ಲೂ, ಎಲ್ಲೆಲ್ಲೂ ಸರ್ವತ್ರಮಯಂ, ಕಾಂಚಾಣಮಯಂ, ದೇವಲೋಕಮಯಂ ಇದಂ ಭೂ ಲೋಕಂ ತತ್ರಾಪಿ, ಆ ವಯೋ ವೃದ್ಧರ ತರಾ ಕಂಪ್ಲಿನ್ಟ್ ಮಾಡವ್ರೆ ಇರಲ್ಲ. ಅದೇ ಸರಿಯಾದ್ಮಾರ್ಗ.” ಬಸ್ಟಾಪಿನಲ್ಲಿ ಇಳಿದು ಹತ್ತುವವರು ಕಮ್ಮಿಯಾಗುತ್ತಿದ್ದಂತೆ “ಟೈಂ ಆಯ್ತು, ಮನೆ ಕಡೆ ಹೋಗೊವಾ, ವೀರೂ ನಿಮ್ ರಾಣೀನ ಹುಷಾರಾಗ್ ಕರ್ಕೋನ್ಡ್ ಹೋಗ್ರಪಾ, ದಾರೀಲಿ ಅದಕ್ಕೂ ಯಾರಾದ್ರೂ ಲಂಚ ಕೊಟ್ಟು ಕರ್ಕಂಡ್ ಹೋಗ್ಬಿಟ್ಟಾರು” ಅನ್ನುತ್ತಾ ದೇಶೀ ಕಟ್ಟೆ ಮೇಲಿಂದ ಎದ್ದು ಮನೆ ಕಡೆ ಹೊರಟರು. ಉಳಿದವರು ಹಿಂಬಾಲಿಸಿ, ಅವರವರ ಮನೆ ದಾರಿ ಹಿಡಿದರು.
Comments