ಯಕ್ಷ ಪ್ರಶ್ನೆ(ವಿಡಂಬನೆ) by H.R. Hanumantha Rau
- haparna
- Feb 12, 2016
- 5 min read
ಯಕ್ಷ ಪ್ರಶ್ನೆ(ವಿಡಂಬನೆ)
ಸ್ವರ್ಗದಲ್ಲಿ ಇಂದ್ರನ ಆಸ್ಥಾನದಲ್ಲಿ ನೆಮ್ಮದಿಯಾಗಿದ್ದ ಧರ್ಮದೇವತೆಯೆನಿಸಿಕೊಂಡ ಯುಧಿಷ್ಟರನಿಗೆ ವಿಷ್ಣು@ವೈಕುಂಠ ಡಾಟ್ಕಾಮ್ ನ ಹುಕುಮ್ಮೊಂದು ಐ-ಮೇಲ್ ಮೂಲಕ (ಐ=I = Indra=ಮಿಂಚು, ಮೇಲ್ = ಅಂಚೆ, ಅರ್ಥಾತ್ ಮಿಂಚಂಚೆ ) ಕೈ ಸೇರಿತು. ‘ನೀನು ಈ ಕೂಡಲೇ ಮಾನವ ರೂಪದಲ್ಲಿ ಭೂಮಿಗಿಳಿದು, ಒಂದು ಕಾಲದಲ್ಲಿ ನಿವೃತ್ತರ, ಸುಸಂಸ್ಕೃತರ ಸುಂದರ, ಶುಭ್ರ ಸ್ವರ್ಗವೆಂದೇ ಪ್ರಸಿದ್ಧಿಯಾಗಿದ್ದ ಬೆಂಗಳೂರೆಂಬ ಹೈಟೆಕ್ ನಗರ ಈಗಲೀಗ ಜನರ ಹಾಹಾಕಾರ, ಕೋಪ, ಕ್ರೌರ್ಯ, ಆಶೌಚದ, ಹೇಯ, ಕೃತ್ಯಗಳಿಗೆ ಆಗರವಾಗಿದೆಯೆಂದು ವರದಿಗಳು ಬರುತ್ತಿವೆ. ಈ ಜನರ ಪೂರ್ವಾಪರ ಸ್ಥಿತಿಗತಿಯನ್ನು ಅಧ್ಯಯನ ಮಾಡಿ, ಆ ಬಗ್ಗೆ ಶೀಘ್ರ ಸಮೀಕ್ಷೆಯನ್ನು ಕಳುಹಿಸುವುದು. ಈಗಲೀಗಲೇ, ಅಲ್ಲಿಯ ಬೃಹತ್ ಬಕಾಸುರರ ಮಹಾ ಸಂಘದ ಚುನಾವಣೆಯೂ ನಡೆಯುವದಿದೆ. ಶೋಷಿತ ಜನರ ಸಂಕಟ, ಗೋಳಾಟಗಳೇನು, ಪ್ರಜೆಗಳು ಯೋಗ್ಯ, ಅಯೋಗ್ಯರೆನ್ನದೆ, ಅನಿಮಿಷಗಳನ್ನು ಒಡ್ಡುವವರಿಗೆ ಕಂಡಾಪಟ್ಟೆ ವೋಟು ಕೊಟ್ಟು ತಮ್ಮ ತಲೆಯಮೇಲೆ ತಾವೇ ಚಪ್ಪಡಿ ಎಳೆದುಕೊಳ್ಳುವರೋ, ಇಲ್ಲವೆ, ಯೇಮಾರದೇ, ವೋಟ ಪಡೆದವರು ತಮ್ಮ ಮಾತಿನಂತೆ ನಡೆಯುಬಲ್ಲವರನ್ನು ಆರಿಸುವರೋ ಹೇಗೆಂದು, ಜನರ ಮನವನ್ನ ಅರಿತುಕೊ. ನಗರವನ್ನು ಹರಿದು, ಹಂಚಿ, ಹೋಳು ಮಾ0ಡಲು ಹೊರಟವರ, ಇಲ್ಲವೇ ಹಾಗೆ ಮಾಡದೆಯೂ ತಾವೇ ಚೆನ್ನಾಗಿ ಮೇಯ್ದು, ಜನರ ಬಾಯಿಗೆ ಕೈಒರಸುವಂತಹವರ ಹಿಂದೆ ಹೋಗುವರೋ, ಅಥವಾ ಪ್ರಾಮಾಣಿಕರನ್ನು ಗುರುತಿಸಿಬಲ್ಲ ಇಚ್ಛಾ ಶಕ್ತಿಹೊಂದಿರುವರೋ ಅಧ್ಯಯನ ಮಾಡು. ‘ಅಬ್ಬರದ ಪ್ರಚಾರಗಳಿಂದ ದೂರವಿದ್ದು, ಭೂಲೋಕದ ಎನ್ ಕ್ವಯರಿ ಕಮೀಷನ್ಗಳ ವರದಿಗಳಂತಾಗದೆ, ವಾಸ್ತವವನ್ನುನಿನ್ನ ರಿಪೋರ್ಟಿನಲ್ಲಿ ಬಿಂಬಿಸು.’ ಎಂಬ ಷರಾ ಜೊತೆಗೆ ಸೇರಿಸಿದ್ದರು. ಧರ್ಮಜ ಹೌಹಾರಿದ. ‘ಹೋದಯಾ ಮಾರಿ, ಉಸ್ಸಪ್ಪ,’ ಅಂತಿದ್ದರೆ, ‘ಹಿತ್ಲಲ್ಲೇ ಇರುವೆ, ಇಗೋ, ಛಾವಣಿ ಮೇಲಿಂದ ಲಾವಣಿ ಹಾಡುತ್ತಾ ಬಂದೆ’ ಅನ್ನೋ ತರಾ ಆಗೋಯ್ತಾ? ಈ ಧರ್ಮನಂದನ ದ್ವಾಪರದ ನಂತರ ಯಾವ ಕೌರವ, ಶಕುನಿಗಳಗಳ ಕಾಟಕ್ಕೆ ಸಿಕ್ಕಿಕೊಳ್ಳದೆ, ಬರೀ ಕಣ್ಣೊಂದೇ ಅಲ್ಲದೆ ಹೃದಯ, ಮನಸ್ಸು ಕೂಡ ಕುರುಡಾಗಿದ್ದ ದೃತರಾಷ್ಟ್ರನಂತಹವರ ಕೈಗೂ ಸಿಕ್ಕದೆ, ಚುಚ್ಚಿ, ಚುಚ್ಚಿ ಹಂಗಿಸಿ ಮಾತಾಡುವ ದ್ರೌಪದಿಯ ಬಾಯಿಗೂ ಬೀಳದೆ ನೆಮ್ಮದಿಯಾಗಿ ಅಪ್ಸರೆಯರ ನೃತ್ಯ, ಸೌಂದರ್ಯವನ್ನ ಆಸ್ವಾದಿಸುತ್ತಾ, ಇತರ ದೇವ, ಋಷಿಗಣಗಳ ಜಿದ್ದಾ ಜಿದ್ದಿ, ಕೆರಳಿಸುವ ಮಾತುಗಳ ಇತ್ಯಾದಿ ಸರಸ-ವಿರಸಗಳನ್ನು ಆನಂದದಿಂದ ನೋಡಿ ನೆಮ್ಮದಿಯಾಗಿದ್ದವ. ‘ತನಗ್ಯಾಕಿದ್ದೀತು ಈ ಭಂಡರ ರಾದ್ಧಾಂತ’ ಎಂದು ಯೋಚಿಸುತ್ತ, ತಲೆ ಸಾಕಷ್ಟು ಕೆರೆದರೂ ಪ್ರಯೋಜನವಾಗಲಿಲ್ಲ. ಸ್ವಲ್ಪ ಯೋಚಿಸಿದರೆ, ಈಗಿನ ಇಲ್ಲಿನ ಅನೇಕ ಸರ್ಕಾರಗಳೂ ದುರ್ಯೋಧನನಂತೆ ದುಷ್ಟ ಚತುಷ್ಚಯರ ಸಂಗದಲ್ಲೋ ಅಥವಾ ಅದಕ್ಕೂ ಹೆಚ್ಚಿನ ಕೆಟ್ಟ ಜನರ ಸಂಪರ್ಕ, ಶಕುನಿಯಂತಹ ‘ಅತಿ ಮಾನವ’ ಬುದ್ಧಿಜೀವಿಗಳ ಸಂಗ, ಸಮಾಲೋಚನೆ,ಆದೇಶ, ಉಪದೇಶಗಳನ್ನು ಪಡೆದು ಜನರನ್ನು ಆಳುವದಿದ್ದು, ಇದರಲ್ಲೇನು ಅತಿಶಯವೆಂದು ತಾನು ಈ ಕೆಲಸಕ್ಕೆ ಕೈ ಹಚ್ಚಬೇಕು? ಏನೂ ಹೊಳೆಯಲಿಲ್ಲ. ಹೋಗಲಿ, ನಾರದರನ್ನು ಕೇಳೋಣವೆಂದರೆ ಆತ, ಕಟ್ಟಾಗಿ, ಕೆಟ್ಟು ಕೂತಿದ್ದ ತನ್ನ ತಂಬೂರಿಯಿಂದ ಕೀರಲು ಧ್ವನಿ ಮಾತ್ರ ಹೊರಹೊಮ್ಮಿಸುತ್ತಾ, ಆಫ಼್ಗನಿಸ್ತಾನದಲ್ಲೋ, ಅಬು ದುಬೆಯಲ್ಲೋ, ವಿದೇಶಗಳಲ್ಲಿ ಮೋದಿ ಎಲ್ಲೆಲ್ಲಿ ಪ್ರವಾಸದಲ್ಲಿದ್ದರೋ ಅಲ್ಲಲ್ಲಿ ಸುತ್ತುತ್ತಿದ್ದವರು. ಹರಿನಾಮವನ್ನೂ ಆಗಾಗ್ಗೆ ತಪ್ಪಿದರೂ, ಟೆಂಟು ಹಾಕುವದರಲ್ಲೇ ಮಗ್ನರಾಗಿದ್ದ ಇವರ ಬಳಿ ಜನ ಸಾಮಾನ್ಯನಾಗಿ ಹೋಗಿ, ಆ ಸ್ಥಳಗಳ ಕೀಚಕ, ಜರಾಸಂಧ, ಮಾರೀಚರಂತಹ ಉಗ್ರರಿಗೆ ತಾನು ಬಲಿಯಾಗುವುದು ಸರಿಯಲ್ಲವೆಂದು ಆ ಯೋಚನೆ ಬಿಟ್ಟನು. ಉಳಿದವರೆಂದರೆ ವಸಿಷ್ಠ, ವಿಶ್ವಮಿತ್ರರುಗಳು. ಮೂಗಿನಮೇಲೆಯೇ ಸದಾ ಕೋಪ ಇರುವ ವಿಶ್ವಾಮಿತ್ರರ ತಂಟೆಗೆ ಹೋಗುವುದು ಒಂದೇ, ಗಾಂಧಿ ತತ್ವಕ್ಕೇ ಈ ದೇಶದ ಜನ ಎಳ್ಳು ನೀರು ಬಿಡುತ್ತಿರುವಾಗ ಹರಿಶ್ಚಂದ್ರನಂತೆ ಇಲ್ಲದ ತಕರಾರುಗಳನ್ನು ತನ್ನ ಮೇಲೆಯೇ ಎಳೆದುಕೊಳ್ಳುವುದೂ ಒಂದೇ ಎಂದು ಯೋಚಿಸಿ ಅದನ್ನೂ ಕೈಬಿಟ್ಟ. ಹಲವಾರು ಟೀವಿ ಚಾನೆಲ್ಲುಗಳಲ್ಲಿ ತಪ್ಪದೆ ಕಾಣಿಸಿಕೊಂಡು ಜನರಿಗೆ ಪುಕ್ಕಟೆ ಜ್ಯೋತಿಷ್ಯ, ಸಲಹೆ, ಪರಿಹಾರಗಳನ್ನು ಬೋಧಿಸುವ, ಕೈ ಬೆರಳುಗಳ ತುಂಬ ಬಂಗಾರದುಂಗರ ಧರಿಸಿದ ಗಡ್ಡಧಾರಿ, ಜರತಾರಿ ವಸ್ತ್ರಚ್ಛಾದಿತ, ನಾಮಧಾರಿ ಗುರುಗಳು – ‘ಜಟಿಲೋ ಮುಂಡಿ,ಲುಂಛಿತ ಕೇಶ: ಕಾಶಾಯಮ್ಬರ, ಬಹು ಕೃತ ವೇಷ:’ -ಎಂಬ ಶಂಕರರ ಮಾತನ್ನು ಜ್ಞಾಪಿಸುವ ಮಹಾ ಮಹಾ ಋಷಿಗಳು ಆ ನಗರದಲ್ಲೇ ಇರುವಾಗ, ವಯೋವೃದ್ಧ ವಸಿಷ್ಟರನ್ನೇಕೆ ಈ ಹಂತದಲ್ಲಿ ಕಾಣಬೇಕೆಂದು ತರ್ಕಿಸಿ ಆ ವಿಚಾರವನ್ನು ಅಲ್ಲಿಗೇ ಬಿಟ್ಟ. ಸ್ವರ್ಗಕ್ಕೆ ಹೇಗೋ ದಾರಿ ಮಾಡಿಕೊಂಡು ಬಂದವರನೇಕ ಮಂದಿಯ ತುರ್ತು ಅಹವಾಲಿನ ಒತ್ತಡಕ್ಕೆ ಬಿದ್ದು, ಶೇಷಶಾಯಿಯಾಗಿ ಹಾಯಾಗಿರುವುದ ಬಿಟ್ಟು ಈ ಮಹಾ ವಿಷ್ಣು ಅರ್ಥಾತ್ ಶ್ರೀಕೃಷ್ಣ ತನ್ನನ್ನು ಎಡವಟ್ಟಿಗೆ ಸಿಕ್ಕಿಸುವುದು ಯಾವ ಸೌಭಾಗ್ಯಕ್ಕೆಂದು ಮೂಗನ್ನು ಉಜ್ಜಿಕೊಂಡ. ಮೂಗಿನ ಮೇಲೇ ಕೂತು ಕಿರಕು ಮಾಡುತ್ತಿದ್ದ ಸೊಳ್ಳೆಯನ್ನು ಓಡಿಸಲು ಹೋಗಿ, ಮೂಗಿಗಿನ್ನಷ್ಟು ಏಟು ಬೀಳಿಸಿಕೊಂಡದ್ದಷ್ಟೆ ಲಾಭ. ಬಿಬಿಎಂಪಿ ಸಾಕಿದ ಬೆಂಗಳೂರಿನ ನಾಯಿ, ಸೊಳ್ಳೆಗಳೆಂದರೆ ಸುಮ್ಮನೇ ಏನು? ಚಿಕೆನ್ ಗುನ್ಯಾ, ಡೆಂಗು ಜ್ವರ, ತಪ್ಪಿದರೆ ಟೈಫಾಯಿಡ್, ಕಾಲರ, ನಾಯಿ ಕೆಮ್ಮು ಅಂತಹ ವರಗಳನ್ನು ಕರಣಿಸುವ, ಭ್ರಷ್ಟರಲ್ಲಿ ಭ್ರಷ್ಟರೆಂಬ ಪ್ರತ್ಯಕ್ಷ ದೇವರುಗಳಲ್ಲವೇ ಅವು ಕೂಡಾ?
ಒಂದು ಕಾಲದಲ್ಲಿ, ಯಕ್ಷರಿಗೆ ಸೇರಿದ ಸರೋವರದಲ್ಲಿ ನೀರು ಕುಡಿಯಲು ಹೋಗಿ ತನ್ನ ತಮ್ಮಂದಿರು ಮೂರ್ಚೆ ಹೋಗಿದ್ದು, ತಾನು ಆ ಯಕ್ಷರು ಕೇಳಿದ ಪ್ರಶ್ನೆಗಳಿಗೆ ಉತ್ತರವಿತ್ತು, ಬಿಡಿಸಿಕೊಂಡಿದ್ದನ್ನ ಜ್ಞಾಪಿಸಿಕೊಂಡ. ಅದೇ ಧಾಟಿಯಲ್ಲೇ ಒಂದು ಯೋಜನೆಯನ್ನ +ಸಿದ್ಧ ಪಡಿಸಿ, ತಾನೂ ಒಂದು ಪ್ರಶ್ನೆ ಮಾಲಿಕೆಯನ್ನು ತಯಾರಿಸಿದ. ತಾನೇ ಆರಿಸಿದ ಪ್ರಭಾವೀ ನೇತಾರರ, ವ್ಯಕ್ತಿಗಳ, ಸಾಮಾನ್ಯರ ಉತ್ತರವನ್ನು ಪಡೆದು, ಕೊನೆಗೆ ತನ್ನ ಅಂತಿಮ ವರದಿ ತಯಾರಿಸಿ ಮೇಲಕ್ಕೆ ಕಳುಹಿಸಿ ಕೈ ತೊಳೆದುಕೊಂಡನು. ಆ ಪ್ರಶ್ನೆ ಮಾಲಿಕೆಯೇನು, ಅದರಿಂದೇನು ಉಪಕಾರವಾಯಿತೆಂಬುದನ್ನ ತಿಳಿಯಲು ಕುತೂಹಲವಿದ್ದರೆ, ನಮ್ಮನ್ನು ಸಂಪರ್ಕಿಸದೆ, ವಿಷ್ಣುವಿಗೇ ನೇರವಾಗಿ ವೈಕುಂಠದ ವೆಬ್ಸೈಟ ಮೂಲಕ ಹೋಗಿ, RTI ಹಕ್ಕಿನಡಿ ವಿಚಾರಿಸಿಕೊಳ್ಳಲು ನಮ್ಮ ಆಭ್ಯಂತರವಿಲ್ಲ. ಆ ಕಡತಗಳಿಂದ ಸಿಕ್ಕ ಕೆಲವೇ ಅಣಿಮುತ್ತುಗಳನ್ನು ಮಾತ್ರ ಇಲ್ಲಿ ಕೊಟ್ಟಿದೆ. ಅತಿ ಹೆಚ್ಚು ಸರಿ ಉತ್ತರ ಬಂದದ್ದು ಯಾವುದೆಂದು ಅದರಡಿಯಲ್ಲೇ ಪ್ರಕಟಿಸಿದೆ. ಇಲ್ಲಿ ಕೊಟ್ಟಿರುವ ಅಭಿಪ್ರಾಯಗಳು ನಮ್ಮದಲ್ಲವಾದ್ದರಿಂದ, ಇದನ್ನು ಪ್ರಕಟಿಸಿದವರಿಗೂ ಸಂಬಂಧವಿಲ್ಲದಾಗಿ, ನಾವು ಯಾರೂ ಆ ಉತ್ತರಗಳಿಗೆ ಯಾವರೀತಿಯಲ್ಲೂ ಹೊಣೆಗಾರರಲ್ಲವೆಂದು ಪ್ರತಕ್ಷ, ಪರೋಕ್ಷ ಪ್ರಾಮಾಣಿಸಿ ಹೇಳುತ್ತೇವೆ. ಸರಿಯಾದ ಉತ್ತರ ಯಾವುದೆಂಬುದನ್ನು ಓದುಗರಿಗೇ ಬಿಟ್ಟಿದ್ದು. : ೧. ಈ ಬ್ಯಾಂಗ್ಲೂರ್ ನಗರ ಯಾರಿಂದ ಮೊದಲು ಗುರುತಿಸಲ್ಪಟ್ಟಿತು? 1. ಕೆಂಪೇ ಗೌಡ 2. ಟಿಪ್ಪುಸುಲ್ತಾನ್ ,3. ವಿಶ್ವೇಶ್ವರಯ್ಯ.4. ಯಾರೋ ಬ್ರಿಟೀಷ್ ಅಧಿಕಾರಿ. ಕೆಂಪೇ ಗೌಡ ಹೆಸರು ಬಸ್ ಸ್ಟಾಂಡ್ ಮತ್ತು ಈಗ ಏರ್ಪೋರ್ಟಗಷ್ಟೇ ಇಟ್ಟ ಹೆಸರು. ಇದೀಗ ಎಲ್ಲಕ್ಕೂ ಅದೇ ಹೆಸರಿಡಬೇಕೆಂಬ ಕೂಗೆದ್ದಿದೆ. —ಅತಿ ಹೆಚ್ಚು ಉತ್ತರಗಳು : ನಂ. 4. ೨. ಮೊದಲಿಗೆ ಈ ನಗರಕ್ಕೆ ನೀರು ಎಲ್ಲಿಂದ ತರಿಸಿದರು? 1. ಆಗ ಈ ನಗರವೊಂದು ಮರಭೂಮಿ, ಹಾಗಾಗಿ ಕೆರೆ ಇರಲು ಸಾಧ್ಯವಾದರೂ ಹೇಗೆ? ಜನರ ಹಾಹಾಕಾರವೆದ್ದುದ್ದೇ ಕಾರಣ ಕೆಅರ್ ಸಾಗರದಿಂದ ತರಿಸಬೇಕಾಯಿತು, ಈಗಲೂ ಅಷ್ಟೆ.2. ಮೊದಲೆರಡೂ ಸುಳ್ಳಿನ ಕಂತೆಗಳು, ಕೆರೆಗಳು ಮಸ್ತಾಗಿದ್ದವು, ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಈಗಲೀಗ ಡವಲಪರ್ಸ್ ಮತ್ತು ಪರಭಾಷೆಯವರು ಇಲ್ಲಿ ಗುಳೆ ಹೂಡಿದ್ದೇ ನೀರಿಗೆ ಬಂತು ಅಭಾವ. ಇತ್ತೀಚಿನವರೆಗೆ ಕೆಆರ್. ಸಾಗರದಿಂದ. ಈಗ ಅದೂ ಖಾಲಿ. ಬಹುಶ: ಕೆಲವು ದಿನಗಳಲ್ಲಿ ಮರುಭೂಮಿಯೂ ಆಗಬಹುದು. 3. ತಿಪ್ಪಗುಂಡನ ಹಳ್ಳಿ ಜಲಾಶಯ. ಈಗ ಅಲ್ಲಿ ನೀರಲ್ಲ, ಬರೀ ಕೆಸರು, ಮಣ್ಣು ಸಿಗುತ್ತೆ. ಯಾರಿಗೆ, ಎಷ್ಟು ಬೇಕಾದರೂ ಕೊಡಬಲ್ಲರು.4. ಯಾರಿಗೂ ಗೊತ್ತಿಲದ ನಿಗೂಢ, ಅಪ್ರಬುದ್ಧ ಪ್ರಶ್ನೆ, ಬುದ್ಧಿಜೀವಿಗಳಷ್ಟೇ ಬಹುಶ: ಉತ್ತರಿಸಬಲ್ಲರು. ಅವರನ್ನು ಕೇಳಿ ನೋಡಿರಿ. —ಅತಿ ಹೆಚ್ಚ್ಚುಉತ್ತರಗಳು :3. ೩. ಈ ನಗರಕ್ಕೆ ಹೇಗೆ ಈ ಹೆಸರು ಬಂತು? 1. ಕೆಂಪೇ ಗೌಡನಿಗೆ ಇಷ್ಟವಾಗಿ ಈ ಹೆಸರು ಅದೇ ವಾಡಿಕೆಯಲ್ಲಿ ಬಂತು.2 ಸಿಲ್ಲಿ ಕೊಸ್ಚನ್, ನೋ ಒರಿಜಿನಲ್ ಬ್ಯಾಂ ಗಲೋರಿಯನ್ ಲಿವ್ಸ್ ನೌ ಟು ಆನ್ಸರ್ ಇಟ್. ವೆರಿ ಫ್ಯು ಹೂ ಲಿವ್ ಬೀಯಿಂಗ್ ಓಲ್ಡ್ ಸಫರ್ ಡಿಮೆಂಟಿಯ. ನೋವೊನ್ ಸ್ಪೀಕ್ ಲೋಕಲ್ ಲಾಂಗ್ವೇಜ್.3. ಜಯಾ ಅಮ್ಮಾಕು ಅಮ್ಮ ಸಂಧ್ಯ ಮೈಸೂರಲಿ ಇರಿಂದರ್, ಅವಂಗ ಕೇಟು ಪಾರ್ಕಲ, ತೆರೆಯುದಿ. ನಮಕೆ ಕೊತ್ತಿಲ್ಲ. 4. ಕಳ್ಳೇಕಾಯಿ ಮಾರುವ ಮುದುಕಿ. ಆಕೆ ಹೆಸರು ಸಾಲುಮರದ ನಿಂಗಮ್ಮ. —ಅತಿ ಹೆಚ್ಚ್ಚುಉತ್ತರಗಳು : 2. ೪. ಒಂದು ಕಾಲದಲ್ಲಿ ಈ ನಗರ ಸಿವಿಲ್ ಏರಿಯಾ, ದಂಡು ಹಾಗು ಪೇಟೆ ಯಾ ಸಿಟಿ ಎಂಬ ಮೂರು ಭಾಗಗಳಾಗಿ ಮಾಡಿಕೊಂಡಿದ್ದರು. ಈಗಿನ ವಾಸ್ಥವ ಸ್ಥಿತಿಯೇನು? ಕನ್ನಡಿಗರ ಗತಿಯೇನು? 1. ಮೂರೂ ಭಾಗಗಳು ಕಲಬೆರಕೆಯಾಗಿವೆ. ಕನ್ನಡಿಗರು ಎಲ್ಲೆಲ್ಲೂ ಕೊಂಚಂ, ಕೊಂಚಂ ಮಟ್ಟು ದಾ. 2. ಈ ನಗರವನ್ನ ಹೋಳು ಮಾಡಿ ಹಂಚಬೇಕೆಂದಿರುವವರನ್ನ ಕೇಳಿನೋಡಿ. ಅವರಿಗೆ ತಿಳಿದಿರಬಹುದು. 3. ಇತ್ತೀಚೆಗೆ ಅಲ್ಲಲ್ಲಿಯ ಕೋಮು, ಭಾಷೆ ಮಾತಾಡುವವರ ಸಂಖ್ಯೆಗೆ ಅನುಸಾರವಾಗಿ ಭಾಗ ಮಾಡಿರಬೇಕು. ಎಲ್ಲರಿಗೂ ಪ್ರಾತಿನಿಧ್ಯ ಸಿಗುತ್ತದೆ. ಜೈ ಕರ್ನಾಟಕ. 4. ಯಾವುದೂ ಅಲ್ಲ. ಆಗಿನ ದಿನಗಳಲ್ಲಿ ಮಿಲಿಟರಿ ಬೀಡು ಬಿಟ್ಟದ್ದಕ್ಕಾಗಿ ಅದು ದಂಡು, ಅವರಿಗೆ ಸಪ್ಪ್ಲೈ ಮಾಡಲು ಸುತ್ತಲೂ ಇರುವ ನಾಗರಿಕರು ಅದಕ್ಕೆ ಸಿವಿಲ್ ಏರಿಯಾ, ಮಿಕ್ಕೆಡೆ ಹಳೇ ಬೆಂಗಳೂರಿಗರು, ಈಗಲೂ ಆಷ್ಟೆ. ಆದರೆ ಈ ಕೊನೆಯದು ಬಳೇಪೇಟೆ ಗಲ್ಲಿಗಳಲ್ಲೂ ಮಾಯವಾಗುತ್ತಿದೆ. —ಅತಿ ಹೆಚ್ಚ್ಚುಉತ್ತರಗಳು :1. ೫. ಕಾವೇರಿ ನದಿಯಿಂದ ನೀರು ಬೇಕೇಬೇಕೆಂದು ಅಮ್ಮ ಯಾವಾಗಲೂ ಹಠ ಹಿಡಿಯುತ್ತಾರೆ. ಇಡೀ ಚೆನ್ನೈ ಎಲ್ಲಾ ನೀರಲ್ಲೇ ಮುಳುಗಿದ್ದರೂ. ನಾವು ಕೊಡುವುದಿಲ್ಲ, ಕೊಡುವುದಿಲ್ಲ, ಅನ್ನುತ್ತಾ ಎಲ್ಲಾ ಸರ್ಕಾರಗಳು ನೀರು ಬಿಟ್ಟೇ ಬಿಟ್ಟಿವೆ, ಮುಂದೆಯೂ ಬಿಡುತ್ತಾರೆ ಹೆಚ್ಚು ಹೆಚ್ಚಾಗಿ. ಅಕಸ್ಮಾತ್, ಕಾವೇರಿಗೆ ಭಾಗಮಂಡಲದಿಂದ ನೀರೇ ಬರದಿದ್ದ ಪಕ್ಷದಲ್ಲಿ ಅ ತಾಯಿ ಏನು ಮಾಡಬಹುದು? 1. ಕರ್ನಾಟಕದ ಯಾವುದೇ ಭಾಗದಲ್ಲಿರುವ ನದಿಯಾದರೂ ಸರೆ, ನಮಗದರ ಕಾಳಜಿಯಿಲ್ಲ, ಆದರೆ ನೀರು ಮಾತ್ರ ಬಿಡಿ, ಬಿಟ್ಟೆ ತೀರಬೇಕು. ಹುಷಾರು! ಕೋರ್ಟು !! 2. ಕೋರ್ಟ್ನಲ್ಲಿ ಸರ್ಕಾರ ಪಾಪರ್ಚೀಟಿಗೆ ಹಾಕಿಕೊಂಡು ನಿದ್ದೆ ಮಾಡಬಹುದು. 3. ನೀರಲ್ಲ, ಬೇಕಿದ್ದರೆ ಟನ್ ಗಟ್ಟಲೆ ಯಾವುದೇ ಪಾನೀಯ ಕೊಡಬಲ್ಲೆವು, ಬೀರಿನ ರಾಜ ಮಲ್ಯರನ್ನು ಒಪ್ಪಿಸಿ ಬೀರನ್ನೂ ಕೊಡಬಲ್ಲೆವು, ಅವರೂ ಇಲ್ಲಿನವರೆ ಎಂದು ಲಾವಣಿ ಹಾಡುತ್ತಾ ಒಪ್ಪಿಕೊಳ್ಳಿ ಎಂದು ನ್ಯಾಯಾಧೀಕರಣದ ಮುಂದೆ ಬಕೆಟ್ ತುಂಬ ಬೀರು ಮಿಶ್ರಿತ ಕಣ್ಣಿರು ಸುರಿಸಬಹುದು.4. ಮಂತ್ರಿ ಮಂಡಲ ಸಾಮೂಹಿಕವಾಗಿ ರಾಜಿನಾಮೆ ಕೊಟ್ಟು ಸಂವಿಧಾನಾತ್ಮಕ ಸಮಸ್ಯೆ ತಂದು ಕೇಂದ್ರ ಸರ್ಕಾರದ ಹೆಗಲಿಗೆ ವರ್ಗಾಯಿಸಬಹುದು. —ಅತಿ ಹೆಚ್ಚ್ಚುಉತ್ತರಗಳು : 3 ಕ್ಕೆ. ಕಡೆಯದಕ್ಕೆ ಸೊನ್ನೆ ಉತ್ತರಗಳು, ಗಮನಿಸಿ. ೬. ಆಡಳಿತಾಂಗದಲ್ಲಿ ಲಂಚವೆಂಬುದು ಅಘೋಷಿತ ಕಟ್ಟಾನಿಯಮವಾಗಿದೆ. ಲಂಚ ತೆಗದುಕೊಳ್ಳದವನು ಸರ್ಕಾರದಲ್ಲಿರಲೇ ಕೂಡದು. ಅದೇ ಸ್ವಧರ್ಮ.ಲಂಚದಲ್ಲೇ ಹುಟ್ಟಿ, ಮಿಂದವರು. ಗೀತೆಯಲ್ಲಿ ಹೇಳಿಲ್ಲವೇ- ‘ಸ್ವಧರ್ಮೇ ನಿಧನಂ ಶ್ರೇಯ:’ 1. ಮಂಚವೆಂಬುದು ಎಷ್ಟು ಅಪ್ಯಾಯಮಾನವೋ, ಲಂಚವೂ ಅಷ್ಟೇ, ಅದು ಸರ್ಕಾರದಲ್ಲಿ ಕೆಲಸಮಾಡುವವರ ಮಾನಸಿಕ ಹಾಗು ಭೌತಿಕ ಧರ್ಮ. ಸತ್ತಮೇಲೆ ಪಾರಮಾರ್ಥಿಕವೂ ಕೂಡ. ಕಾರಣ ಆ ಹಣದಿಂದಲೇ ಕರ್ಮ ಮಾಡಿದರಷ್ಟೇ ಸತ್ತವನಿಗೆ ಮುಕ್ತಿ, ಇಲ್ಲವಾದರೆ ಪ್ರೇತವಾಗಿಯೇ ಇರುತ್ತಾನೆ. 2. ಎಲ್ಲ ಸುಳ್ಳು. ಲಂಚಪಡೆಯುವವರನ್ನು ಸಮುದ್ರದ ಆಳದಲ್ಲಿ ಎದ್ದು ಬರಲಾರದಂತೆ ಮುಳುಗಿಸಿ ಬನ್ನಿ. ಅದೇ ಸರಳ ಶಿಕ್ಷೆ. 3. ಮನುಷ್ಯನು ಅದೆಷ್ಟೋ ಮಾನಸಿಕ ವ್ಯಾಧಿಗಳಿಂದ ನರಳುತ್ತಾನೆ. ಈ ಲಂಚದ ವಿಷಯವೂ ಅಷ್ಟೇ. ಆದ್ದರಿಂದ ಇದು ಅಪರಾಧವೆನ್ನಲಾಗದು. ಆ ಕಾರಣ, ವ್ಯಾಧಿಗೆ ಪರಿಹಾರವಾಗಿ ಸರ್ಕಾರವೇ ಲಂಚ ಪಡೆಯುವುದನ್ನು ಅವಿರೋಧವಾಗಿ ಅಂಗೀಕರಿಸತಕ್ಕದ್ದು.4. ಇದರ ಬಗ್ಗೆ ಮತ್ತಷ್ಟು ಚರ್ಚೆಗಳಾಗಿ, ಸುಪ್ರೀಮ್ ಕೋರ್ಟಿನಲ್ಲಿ ಫುಲ್ ಬೆಂಚ್ ನ ತೀರ್ಮಾನಕ್ಕೆ ಬಿಡಬೇಕು. ನಂತರ ಸಂವಿಧಾನವನ್ನ ಬದಲಾಯಿಸತಕ್ಕದ್ದು. ಆದರೆ ಆ ಬೆಂಚಲ್ಲಿ ಕನಿಷ್ಟ ಐದು ಜಡ್ಜಿಗಳಾದರೂ ತಮ್ಮ ವೃತ್ತಿಯಲ್ಲಿ ಒಂದು ಬಾರಿಯಾದರೂ ಲಂಚ ಪಡೆದಿರಲೇಬೇಕು. ಮಿಕ್ಕವರು ಎಲ್ಲ ಕೋಮಿನವರನ್ನು ಪ್ರತಿನಿಧಿಸಬೇಕು. —ಅತಿ ಹೆಚ್ಚ್ಚುಉತ್ತರಗಳು : 3 ಕ್ಕೆ. ಕನಿಷ್ಟ ಉತ್ತರಗಳು 2 ಕ್ಕೆ .
೭. ಈ ನಗರ ಕರ್ನಾಟಕದ ರಾಜಧಾನಿ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿ ಕನ್ನಡವೇ ಇಲ್ಲಿಯವರ ಜನರಾಡುವ ಬಾಷೆ ಆಗಿರಬೇಕು. ಹೌದಲ್ಲವೇ? 1. ತೆಲಸುಲೇದಂಡಿ. 2.ನೀ ಶೋಲ್ಲುದಿ ಎನ್ನಾ? ಇಂಗ್ಲೀಷಲೆ ಪೇಸಂಗೋ. 3. ಸ್ವಾತಂತ್ರ್ಯ ಪೂರ್ವ ಇಲ್ಲಿ ವಾಸಿಸುತ್ತಿದ್ದವರ ಭಾಷೆ. ಈಗಲ್ಲ. 4. ನಾವು ಹಾಗೇ ಅಂದುಕೊಂಡಿದ್ದೆವು. ಕನ್ನಡ ಓರಾಟಗಾರರನ್ನು ಹುಡುಕಿ ಕೇಳಬೇಕು. ಅವರು ರಾಜ್ಯೋತ್ಸವ ವೇಳೆ ಸಿಗುತ್ತಾರೆ. —ಅತಿ ಹೆಚ್ಚ್ಚುಉತ್ತರಗಳು :4. ೮. ಈ ನಗರ ಚುನಾವಣೆಯಲ್ಲಿ ವೋಟು ಮಾಡಿದ ನಂತರ ಜನಗಳ ಪಾತ್ರವೇನು? 1. ಹಾಯಾಗಿ ಎಲ್ಲವನ್ನೂ ಮರೆತು, ಮೊದಲಿನಂತೆ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಾ, ಅಶೌಚ ಮಾಡುತ್ತಾ, ವಾಹನಗಳನ್ನು ಎರ್ರಾಬಿರ್ರಿ ಓಡಿಸುತ್ತಾ ನೆಮ್ಮದಿಯಾಗಿ ಇರುವುದು, ಯಾರು ಗೆದ್ದರೇನು? 2. ‘ನಾಯಿ ಬೊಗಳಿದರೆ ಸ್ವರ್ಗ ಲೋಕ ಹಾಳಾಗುವುದಾ?’ ಎಂಬಂತೆ ಬೆಂಗಳೂರಿಗರ ಹಣೆ ಬರಹ ಬದಲಾಗುವುದಿಲ್ಲ, ವೋಟು, ನೋಟು, ಜಾತಿ ಎಲ್ಲ ಒಂದೇ ಆಗಿರುವಾಗ. 3. ಸರ್ಕಾರ ಪಾಲಿಕೆಯನ್ನು ಶಾಶ್ವತವಾಗಿ ಹರಿದು, ಭಾಗ ಮಾಡಿ, ತಮಗೆ ಬೇಕಾದವರನ್ನು ಪಾಳೆಯಗಾರರಾಗಿ ಮಾಡುವುದನ್ನು ನೋಡಿ ಗಿನೆಸ್ ಬುಕ್ನಲ್ಲಿ ದಾಖಲಿಸಬೇಕು. ೪. ಏನಾದರೇನು ನಾವು ನಿದ್ದೆಯಿಂದ ಏಳುವುದು ಇಷ್ಟವಿಲ್ಲ. ನಮ್ಮ ದಾರಿ ನಮಗೆ. —ಅತಿ ಹೆಚ್ಚು ಉತ್ತರಗಳು:2. ೯. ಬೆಂಗಳೂರು ನಗರವನ್ನ ಮತ್ತೆ ಸ್ವಚ್ಛ, ಸುಂದರ, ಸಾಂಸ್ಕೃತಿಕ, ಮೆಟ್ರೊ ಬೀಡಾಗಿ ಮಾಡಲು ಏನು ಮಾಡಬೇಕು? 1. ಮೆಟ್ರೋ ನಗರವನ್ನ ಸ್ವದೇಶಿ ಇಲ್ಲವೇ ಪರದೇಶಿ ಐಟಿ, ಬಿಟಿ ಮುಖ್ಯಸ್ತರ ಕೈಗೆ ಕೊಟ್ಟು ಕಾದು ನೋಡಬೇಕು. 2. ಈ ರಾಜಕಾರಣಿಗಳ ಮತ್ತು ಅರೆ ಪ್ರಜ್ನ ನಾಗರಿಕರ ಹೃದಯ ಹಾಗು ಮನ ಪರಿವರ್ತನೆ ಆಗುವವರೆಗೂ ನಮ್ಮಹಣೆಬರಹ ಸರಿಯಿಲ್ಲವೆಂದು ದಾಸರು ಹೇಳುವ ಹಾಗೆ ‘ಆದದ್ದೆಲ್ಲ ಒಳಿತೇ ಆಯಿತು’ ಎಂದುಕೊಂಡು ಭಜನೆಯಲ್ಲಿ ನಿರತರಾಗಬೇಕು. 3. ಅ ಬ್ರಹ್ಮನಿಗೂ ಆಗದ್ದು ನಮ್ಮಿಂದೇನು ಸಾಧ್ಯ ಎಂದು ವಾಸ್ಕೋಡಗಾಮನಂತೆ ನಾವೂ ಪರದೇಶಗಳಿಗೆ ವಲಸೆ ಹೋಗಬೆಕು. 4. ಯಾವ ಪರಿಹಾರವೂ ತೋಚುವುದಿಲ್ಲ, ಮಾರ್ಗದರ್ಶನಕ್ಕಾಗಿ ಕಾವಿ ಬಟ್ಟೆಯವರನ್ನ ಕರೆಸಿ ಅವರಿಂದಲೇ ಆಡಳಿತ ಯಾಕೆ ನಡೆಸಬಾರದು? ಹೇಗಿದ್ದರೂ ಪರೋಕ್ಷವಾಗಿ ಆದಳಿತದಲ್ಲಿ ಅವರ ಕೈ ಇದ್ದರೂ ಇರಬಹುದು. —ಅತಿ ಹೆಚ್ಚ್ಚುಉತ್ತರಗಳು :1. ಆದರೆ ನಾಳೆ ಅಧಿಕಾರದ ರುಚಿ ಕಂಡರೆ ಇವರೂ ಅದೇ ದಾರಿ ಹಿಡಿಯಬಹುದೆಂಬುದು ಅರ್ಧ ಸತ್ಯ. ಇದೀಗ ಈ ಬಗ್ಗೆ ಮತ್ತಷ್ಟು ವಿವೇಚನೆಗಾಗಿ ಓದುಗರಿಗೇ ಬಿಟ್ಟಿದೆ. ಕಾರಣ ಧರ್ಮಜನಂತೂ ಕೈಗೆ ಸಿಕ್ಕುವವನಲ್ಲ. ವಿಷ್ಣುವೂ ನುಣಿಚಿಕೊಂಡರೆ ? ? ಭಜನೆ ಮಾಡಿ. ——————————————————————————————————————-
Comments