ಪುಕ್ಕಟೆ ಸಲಹೆಗಳೆಂದರೇ…
- haparna
- Apr 5, 2016
- 4 min read
ಪುಕ್ಕಟೆ ಸಲಹೆಗಳೆಂದರೇ… ಲೇಖಕ: ಎಚ್. ಆರ್. ಹನುಮಂತ ರಾವ್ ———————————————— ಇದೀಗ ನಿಮಗೆ ತಿಳಿದು ಹೋಗಿರಲೇಬೇಕು. ಈ ಮಾತು ನಮ್ಮ ನಿಮ್ಮನ್ನು ಕುರಿತೇ ನೇರ ಆಡುತ್ತಿರವುದೆಂಬ ಸತ್ಯ, ನಾವು ಹುಟ್ಟುವುದಕ್ಕೆ ಮುಂಚೆಯೇ ನಮ್ಮನ್ನು ಹಿಂಬಾಲಿಸುತ್ತಿರುವುದೆಂದರೆ ಅದು ಪುಕ್ಕಟೆ ಸಲಹೆಗಳಷ್ಟೆ, ನೆರಳಲ್ಲ, ಸಾವಲ್ಲ, ಪಾಪ, ಪುಣ್ಯಗಳೂ ಅಲ್ಲವೇ ಅಲ್ಲ, ನನಗಂತೂ ಇದರ ಅನುಭವ ಹಾಗು ಸತ್ಯಾಸತ್ಯತೆ ಬಹು ನಿಖರವಾಗಿಯೇ ತಿಳಿದುಹೋಗಿದೆ. ಕನಕದಾಸರು “ಮಾನವಾ ನೀ ಮೂಳೆ ಮಾಂಸದಾ ತಡಿಕೆ” ಎಂದರು. ಆದರೆ, ಈ ಬಿಟ್ಟಿ ಸಲಹೆಗಳಿಂದ ಈ ತಡಿಕೆ ಇನ್ನಷ್ಟು ಟೊಳ್ಳಾಗುತ್ತಿದೆಯೆಂಬ ಸತ್ಯ ಅವರಿಗೆ ಹೊಳೆಯಲಿಲ್ಲವೋ? ಹಾಗಿಲ್ಲದಿದ್ದರೆ “ಮಾನವಾ, ಪುಕಟು, ಪುಕಟು ಸಲಹೆಗಳೇ ನಿನ್ನಾ ಅಟ್ಟಿಸಿಕೊಂಡು ಜೀವನವೆಲ್ಲಾ ಬರಡಾಗುತಿದೆಯಲ್ಲೋ, ಆ ಪದುಮನಾಭನೇಕೆ ಇನ್ನೂ ದಯೆ ತೋರಲಿಲ್ಲವೋ? ಎಂದೂ ಹಾಡಬಹುದಿತ್ತೇನೋ. ಹುಟ್ಟುವ ಮುಂಚೆಯೇ, ತಾಯಿಯ ಗರ್ಭದಲ್ಲೇ ಈ ಪುಕಟ್ಟು ವ್ಯವಹಾರ ಷುರುವಾಗಿರುತ್ತದೆ, “ನನ್ನ ತಂಗಿ ಮೂರನೆ ಮಗಳು- ಸರೋಜನಿಗೆ ಎರಡು ತಿಂಗಳಾಗಿದೆಯಂತೆ ರೀ”, “ಹೌದಾ, ಈಗಲೇ ಅವಳಿಗೆ ಹೇಳಿಟ್ಟಿರಿ ಅಂಬುಜಮ್ಮನವರೆ, ಆಟೊ ಹತ್ತ ಬ್ಯಾಡ ಅಂತಾ, ನಮ್ಮವರ ಕಚೇರೀಲಿ ಕೆಲಸ ಮಾಡೋ ವೇದಾಂತಯ್ಯನವರ ಎರಡನೆ ಸೊಸೆ ಬೇಡ ಬೇಡಾಂದ್ರೂ ಕೇಳ್ದೆ ಆಟೋಲಿ ಹೋಗಿದ್ದಕ್ಕೆ ಮೂರ್ಸಾರೀನೂ ಅದೇನೋ ಹೇಳ್ತಾರಲ್ಲ ಆರ್ಬಟ್ ಆಯ್ತಂತೆ ರೀ”. “ಚಾಟ್ ಅಂಗಡಿಗಳಿಗೆ ಹೋಗಿ ಹೊಟ್ಟೆ ಕೆಡಿಸಕೊಳ್ಳಬ್ಯಾಡ, ಈಗಲೀಗಲೇ ಒಳ್ಳೆ ಆಸ್ಪತ್ರೆ ಗೊತ್ತು ಮಾಡಿಕೊಳ್ಳಿ” ಇತ್ಯಾದಿ, ಇತ್ಯಾದಿ. ಆರು ತುಂಬುತ್ತಲೆ ಎಲ್ಲ ಕಡೆಗಳಿಂದಲೂ- ಆರು ಹೆತ್ತವರಿಂದ ಹಿಡಿದು, ಇನ್ನೂ ಕನ್ಯೆಯಾಗೇ ಉಳಿದಿರುವ ಹೆಣ್ಣುಗಳಿಂದಲೂ ಸಲಹೆಗಳು ಬೇಡ ಬೇಡವೆಂದರೂ ಹರಿದು ಬರುತ್ತವೆ ಓತಪ್ರೋತವಾಗಿ. ಬಿಟ್ಟಿ ಸಲಹೆಗಳಿಗೆ ಆದಿ, ಅಂತ್ಯಗಳಿವೆಯಾ ಎಂಬುದು ಆ ಅಂತ್ಯವಿಲ್ಲದ ಅನಂತಶಯನನಿಗೂ ಗೋಚರವಾಗಿಲ್ಲ. ಬಹುಷ: ನಾರದರಂತಹವರಿಂದ ಆತನೂ ಬಿಟ್ಟಿ ಸಲಹೆಗಳನ್ನು ಕೇಳಿ ಕಸಿವಿಸಿಗೊಂಡಿ ರಬಹುದೇನೋ ಎಂಬ ಗುಮಾನಿ ನನಗಿದೆ.
ಇದೀಗ ನೇರವಾಗಿಯೇ ವಿಷಯಕ್ಕೆ ಬರೋಣ. ನನ್ನ ಬರಹದ ಪ್ರಾರಂಭದ ದಿನಗಳಲ್ಲಿ ನನಗೆ ಬಂದ ಆವೇಶವೋ, ಸ್ಪೂರ್ತಿಯೋ, ಹೇಗೋ, ಬರೆಯಲೆಂದು ಕೂತಾಗ ನನ್ನ ಸ್ನೇಹಿತರು ಬಂದು ವಕ್ರಿಸಿದ್ದರು. ನನ್ನ ಕೈಲಿನ ಪೆನ್ನು, ಮೇಜಿನ ಮೇಲಿನ ಹಾಳೆ ನೋಡಿ ರಾಮು, ‘ಮೂಗರ್ಜಿ ಏನಾದರೂ ಬರೀತಿದೀಯೋ?’,’ಇಲ್ಲ’, ಹಾಗಾದರೆ ಏನೀ ವಿಚಿತ್ರ? ಎಂದೂ ನಾವ್ಕಾಣದಿದ್ದ ಈ ಹೊಸ ಅವತಾರ?’ ಸಿಂಗ್ರೈಂಗಾರಿ ಒದರಿದ ‘ಕಾಲೇಜಿನಲ್ಲಿ ನಮ್ಮಗಳ ನೋಟ್ಸ್ ಓದೇ ಇವ್ನು ಪಾಸಾಗಿದ್ದು, ಇವ್ನು ಬರ್ದದ್ದು ನಾ ನೋಡೇ ಇಲ್ಲ,’ ಅವರುಗಳಿಗೆ ನನ್ನ ಇಂಗಿತ ತಿಳಿಸಿದೆ, ಈ ಮಾತು ಕೇಳುತ್ತಲೇ ಎಲ್ಲರೂ ಹುಚ್ಚೆದ್ದು ಡೊಳ್ಳು ಕುಣಿತದವರಂತೆ ಕುಣಿದು, ಕುಪ್ಪಳಿಸಿ ತಲಾತಟ್ಟಿ ಮಾತಾಡಿದರು, ಮನೆಯಲ್ಲಿ ದೊಡ್ದವರಿರಬಹುದೆಂಬ ಪ್ರಜ್ಞೆಯನ್ನು ತೋರದೆ. ರಾಮು ಅಂದ ‘ಇದು ಇವನಿಗೆ ತಲೆ ಕೆಡುವ ಕಾಲ ಶುರುವಾಗಿದೆ ಕಣ್ರಪ್ಪ, ಇವರಪ್ಪ ಮೊದಲು ಇವನಿಗೆ ಲಗ್ನ ನಿಶ್ಚಯಿಸದಿದ್ದರೆ,ಪೂರ್ತಿ ಹುಚ್ಚು ಆವರಿಸುತ್ತದೆ, ನಮಗೆ ಕೆಟ್ಟ ಕಾಲ’, ಇನ್ನೂಬ್ಬ ‘ಅದಲ್ಲ, ಈ ತೆರನ ವ್ಯಾಧಿ ನಿನಗೂ ಬರಬಹುದು’, ಚಂದಮಾಮ ತರಹದ ಬಾಲ ಪುಸ್ತಕಗಳನ್ನು ಈ ವಯಸ್ಸಿನಲ್ಲೂ ಓದುತ್ತಿರಬೇಕು, ನಮ್ಮನ್ನ ಕೇಳಿದ್ದರೆ ರಾಬರ್ಟ ಲೂಡ್ಲಮ್, ಜೆಫ್ರಿ ಆರ್ಚರ್, ಜಾನ್ ಗ್ರಿಷಮ್, ಭಗತ್, ಇತ್ಯಾದಿ ಜನರ ಪುಸ್ತಕ ಕೊಡಿಸುತ್ತಿರಲಿಲ್ಲವೇ? ಸರಿಯಾದ ಕೆಲಸ ಸಿಕ್ಕಿಲ್ಲ, ಅದಕ್ಕೇ ಹೀಗೆ. ಅದೂ ಅಲ್ಲ, ‘ಎಂಪ್ಟಿ ಹೆಡ್ಸ್ ಆರ್ ಓನ್ಲಿ ಹೆವಿ ಹೆಡ್ವೈಟ್ಸ್ ಬಟ್ ಮೇಕ್ ಮಿಯರ್ಲಿ ಸೌಂಡ್, ಎಂಥಹ ಪುಸ್ತಕಗಳನ್ನು ಓದಬೇಕೆಂದು ನೀವಾದರೂ ಹೇಳಿರಪ್ಪ’ಎಂದಿದ್ದ ಕೇಶವ. ವಿಶ್ವ ‘ಇವನಿಗೆ ಬರೆಯುಕ್ಕೆ ಏನಂತಾ ತಲೆಯಿದೆಯಯ್ಯ, ಕಾಲೇಜಿನ ದಿನಗಳಿಂದ್ಲೂ ಖಾಲಿ ತಲೆ ಅನ್ನೋದ್ ಊರ್ಗೇ ಗೊತ್ತಿರೋ ಸಮಾಚಾರ, ಇವನ ಗುಟ್ಟೆಂದರೆ, ನಮ್ಮ ಜೊತೇಲಿ ಬಂದರೆ ಅವನ್ ಸರದಿ ಪ್ರಕಾರ ಈ ಹೊತ್ತು ನಮಗೆಲ್ಲ ಮಸಾಲೆ ದೋಸೆ ಕೊಡಿಸಬೇಕು, ಅದನ್ನ ತಪ್ಪಿಸಕ್ಕಷ್ಟೆ ಈ ನಾಟಕ ’- ಹೀಗೆಲ್ಲಾ ಬಾಯಿದೆ ಎಂದು ಎಲ್ಲರೂ ಏಕ ಕಾಲಕ್ಕೆ ಒದರಿದ್ದರು. ಬಲವಂತವಾಗೆಬ್ಬಿಸಿ, ಕರದು ಕೊಂಡು ಹೋಗಿ, ನನ್ನ ಲೆಕ್ಕಕ್ಕೆ ದೋಸೆಯ ಬಿಲ್ಲನ್ನು ಹಾಕಿಸಿದ್ದಷ್ಟೆ ಇವರಿಂದಾದ ಲಾಭ! ಹೀಗೆ ಪ್ರಾರಂಭದಲ್ಲೇ ಸಂಚಕಾರ ತಂದಿದ್ದರು. ಹಾಗೂ ಒಬ್ಬಿಬ್ಬರು ಬಿಟ್ಟಿ ಸಲಹೆಗಳನ್ನು ಧಾರಾಳವಾಗಿ ಕೊಟ್ಟಿದ್ದುಂಟು. ‘ನೋಡು, ಇದೀಗ ಕಾದಂಬರಿ ಯುಗ. ಅದನ್ನ ಬರೀಬೇಕೆಂದಿದ್ದರೆ ನಮ್ಮ ದೊಡ್ಡ ಸಾಹಿತಿಗಳನ್ನು ಅನುಕರಿಸು, ಹಳೆ ಕಾಲದ ಪಂಡಿತರನ್ನಲ್ಲ, ಸಾಯಂಕಾಲ ವಾಗುತ್ತಲೂ ಪಬ್ ಹುಡುಕು, ಸ್ವಲ್ಪ ಹೊಟ್ಟೆ ಬೆಚ್ಚಗೆ ಮಾಡಿಕೊ, ನಾನು ನಿನ್ನ ಜೊತೇಲೆ ಇರ್ತೀನಿ ಯಾವುದಕ್ಕೂ, ಹೆದರಬ್ಯಾಡ. ಆಮೇಲೆ ನೋಡು, ನಿನ್ನ ಪೆನ್ನು ಹೇಗೆ ಓಡುತ್ತದೆ’. ಇವನ ದೃಷ್ಟಿಯಲ್ಲಿ ಕಾದಂಬರಿಕಾರರು ಅಂದ್ರೆ ಕುಡುಕರು! ಇನ್ನೊಬ್ಬ ಹೇಳಿದ, ನೀನು ಕವನಗಳನ್ನು ಬರೀಬೆಕೆಂದರೆ ಎಲ್ಲೂ ಹೋಗ್ಬ್ಯಾಡ, ನನ್ನ ಬಳಿ ಬಾ. ಸಿಂಪಲ್ ಕಣೋ, ಯಾರಾದರು ಸುಂದರ ಹುಡಿಗೀರ್ನ ಒಂದ್ಕಡೆ ನಿಂತ್ಕಂಡ್ ನೋಡ್ತಾ, ನೋಡ್ತಾ ಇರು, ಅವಳ ಸೀರೆ, ಹೈಹೀಲ್ಡ್ ಷೂಸು, ನಡೆಯೋ ಸ್ಟೈಲು, ಲಿಪ್ಮೂವ್ಮೆಂಟು, ಗಮನವಿಟ್ಟು ಒಂದೆರಡು ದಿನ ನೋಡ್ತಾ ಇರು, ನಿಂಗೇ ಗೊತ್ತಿರಲ್ಲ, ಟನ್ ಗಟ್ಟಲೆ ಅವಳ ತರಹದವರ ಬಗ್ಗೆ ಬರ್ದುಬಿಡ್ತೀಯಾ ಕವನಗಳ್ನ. ವಸಂತ ಬಂದರೆ- ಹಾಗಂದ್ರೆ ನಿಂಗೊತ್ತಾಗಲ್ಲ, ‘ವಸಂತ’- ಯಾರವಳು ಅಂತೀಯಾ ಅನ್ನೋದು ಗೊತ್ತು,-ಅದೇ ಯುಗಾದಿ ವೇಳೆ ವಸಂತ ಋತು ಕಣಪ್ಪ, ಕೋಗಿಲೆ ಹುಚ್ಚೆದ್ದು ಹಾಡುತ್ತವೆ, ಅವುಗಳ ಜಾಡು ಹಿಡ್ಕಂಡೇ ಕಾಗೆ ಗುಬ್ಬಚ್ಚಿ ಎಲ್ಲ ತರಹದ ಬಗ್ಗೆ ಒಂದೊಂದೇ ಪದ್ಯ ಬರೀಬೋದು, ಸುಮಾರು ದಿನಗಳಾಗುತ್ಲೂ ನೀನೂ ಒಬ್ಬ ವರಕವಿ ಬೇಂದ್ರೆ ಆಗಿರ್ತೀಯಾ, ‘ರಾಮಾಯಣ ದರ್ಶನ’ ದಂಥ ಆದಿ ಕಾವ್ಯಗಳನ್ನೂ ಹೀಗೆ ಬರ್ದಿರೋದು ಗೊತ್ತಾ? ಇಂಥ ಐಡಿಯಾಗಳು ಮಸ್ತಾಗಿವೆ ನನ್ನ ಬಳಿ. ಆದ್ರೆ ನನ್ನ ಚೆನ್ನಾಗಿ ನೋಡ್ಕೊಬೇಕಷ್ಟೆ ನೀನು ವಾರಕ್ಕೆರೆಡೆರಡು ಬಾರಿನಲ್ಲಿ, ಎಲ್ಲ ಕವಿಗಳು ಫೇಮಸ್ ಅಗಿರೋವ್ರು ಹೀಗೆ ಕಣಯ್ಯ. ವರ್ಡ್ಸ್ವರ್ತ್,ಬೈರೋನ್, ಶೆಲ್ಲಿ, ನಮ್ಮ ಅಡಿಗ ಇತ್ಯಾದಿಗಳೆಲ್ಲಾ ಹಾಗೆ ಮೇಲಕ್ಕೆ ಬಂದಿದ್ದು ಗೊತ್ತಾ? “ಹೌದೇನೋ, ಅವರುಗಳು ನಿಂಗೆ ಯಾವಾಗಲಾದ್ರೂ ಪ್ರೆಸ್ ಇಂಟರ್ವ್ಯೂ ಕೊಟ್ಟಿದ್ರಾ?”. “ಮತ್ತಿನ್ನೇನು ಬಿಡಲೇ, ಹಾಗಲ್ದೆ, ಇವರ ಪದ್ಯಗಳನ್ನ ನಮ್ಮ ತಲೆಗೆ ಕಟ್ಟಿ ಪರೀಕ್ಷೇಲಿ ಬಲವಂತವಾಗಿ ಬರೀಲೇಬೇಕಂತಾ ಮಾಡ್ತಿದ್ರಾ ನಮ್ಕರ್ಮಕ್ಕೆ?”. ಆದಿ ಕಾವ್ಯವೆಂದರೆ ಏನು ಅನ್ನೋದ್ ಗೊತ್ತಿಲ್ದ ಈ ಚಾಂಡಾಲನ ಮಾತು ನಾ ಯಾರ್ಗಾದ್ರೂ ಹೇಳಿದ್ರೆ ನನ್ಕೈ ಕಟ್ಟಾಕ್ತಿದ್ರೋ ಏನೋ. ಈ ವಿಷಯ ನಮ್ಮಪ್ಪನಿಗೆ ತಿಳಿದು ಬುದ್ಧಿ ಹೇಳಿದ್ರು, “ನೀನ್ ಏನ್ಬೇಕಾದ್ರೂ ಬರೀ, ಆದರೆ ಅದನ್ನ ಯಾರಾದ್ರೂ ವಿದ್ವಾಂಸರಿಗೆ ತೋರ್ಸಿ, ಅವರು ಸರಿ ಅಂದ್ರೆ, ಬರಿ. ಇಲ್ಲಾಂದ್ರೆ ಹೊರಕ್ಕೆ ನಡಿ, ಆದ್ರೆ ಹೊಟ್ಟೆ ಪಾಡಿಗೆ ಬೇರೆ ಉದ್ಯೋಗ ಮೊದ್ಲು ನೋಡ್ಕೋ, ತಲೆ ಹರಟೆ ಬೇಡ, ಇದೇ ಸದಾ ಬರಿಯೋ ಹುಚ್ಚು ಹಿಡ್ಕಂಡ್ರೆ ಹೂತಾಗ್ಬಿಟ್ಟೇನು, ಏನು?”. ಅಲ್ಲಿಗೆ ನನ್ನ ಆ ಬರೆಯೋ ದಿನಗಳು ಅಲ್ಲಿಗೆ ಸಮಾಪ್ತಿ! ಇದೀಗ ಸರ್ಕಾರೀ ಕೆಲಸ ಹಿಡಿದು ಗಾಣದೆತ್ತಿನಂತೆ ದುಡಿಯುತ್ತಿದ್ದೇನೆ. ಅದೇನು ಬರೆಯುತ್ತೇನೋ ಇನ್ನೂ ನಿರ್ಧಾರವಾಗುವುದರಲ್ಲೇ ಇದೆ! ಕವಿಗಳಿಗೆ ಹೊಳೆಯುವಂತೆ ನನಗೆ ಇದುವರೆಗೂ ಯಾವ ಸ್ಪೂರ್ತಿಯ ಸೆಲೆಯೂ ಸಿಕ್ಕಿಲ್ಲ. ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ. ಆದರೆ ಬರೀ ಬಿಟ್ಟಿ ಸಲಹೆ ಖಂಡಿತ ವರ್ಜ್ಯ.
ಆಧುನಿಕ ನಗರಗಳಲ್ಲಿ ಈಗಿನಂತೆ ಒಂದೊಂದು ಬೀದಿಗೂ ಎರಡು, ಮೂರರಂತೆ ಪ್ರಾಣ ಮತ್ತು ಧನ ( ಸಂಸ್ಕೃತ ಸುಭಾಷಿತದಲ್ಲಿ ಹೇಳುವಂತೆ ‘ವೈದ್ಯ ರಾಜ ನಮಸ್ತುಭ್ಯಂ ಯಮರಾಜ ಸಹೋದರ, ಯಮತೋ ಹರತಿ ಪ್ರಾಣಾನ್, ವೈದ್ಯೋ ಪ್ರಾಣಾನ್, ಧನಾನಿ ಚ)ಎರಡೂ ಹಿಂಡುವಂತಹ ಹಾಯ್ ಟೆಕ್ ಆಸ್ಪತ್ರೆಗಳು, ಹಾಸ್ಪಿಟಾಲಿಟಿಯ ಗಂಧವೂ ತೋರಗೊಡದ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ಲುಗಳೂ(ಕೈ ತುಂಬ ಕಾಸಿದ್ದರೆ, ಅಗೋ ಅಲ್ಲಿದೆ ಆ ಲಕ್ಷುರಿ ವಾರ್ಡು, ಇಲ್ಲದಿದ್ದರೆ, ಬಾಡಿಯನ್ನ ಆಚೆಗೆ ಬಿಸಾಡು, ಹೊರಡು ಹೊರಗೆ) ಇಲ್ಲದ ಮೂರು-ನಾಲ್ಕು ದಶಕಗಳ ಹಿಂದೆ ಇದ್ದ ಹಲವೆ ಡಾಕ್ಟರುಗಳ ದವಾಖಾನೆ, ಕ್ಲಿನಿಕ್ ಅಂಡ್ ನರ್ಸಿಂಗ್ ಹೋಮ್ ಎನಿಸಿಕೊಂಡ ಸುಣ್ಣ ಬಣ್ಣ ಕಾಣದಂತಹ ಹಳೇ ಮನೆಗಳಲ್ಲಿ ಚಿಕೆತ್ಸೆ ನಡೆಸಿಕೊಂಡವರೇ ಧನವಂತರು! ನಮ್ಮ ಬಂಧು ಒಬ್ಬರಿಗೆ ಹೊಟ್ಟೆ ನೋವು ವಿಪರೀತವಾಗಿ ಕಾಣಿಸಿಕೊಂಡಿತ್ತು, ಯಾವ ಡಾಕಟರ ಚಿಕೆತ್ಸೆಯು ಸರಿಹೋಗಲಿಲ್ಲ, ಹಾಗಾಗಿ ಯಾವುದೋ ಒಂದು ನರ್ಸಿಂಗ್ ಹೋಮ್ಗೆ ಸೇರಿಸಿಬಿಡಿ ಎಂದಿದ್ದರು ಒಬ್ಬ ವೈದ್ಯರು. ಇದೀಗ ನಮ್ಮಲ್ಲೇ ಜಿಜ್ನಾಸೆ ಷುರುವಾಯೊತು. ಒಬ್ಬೊಬ್ಬ ಬಂಧು, ಸ್ನೇಹಿತರು ಒಂದೊಂದು ಸಲಹೆ ಕೊಟ್ಟರು ಬಿಟ್ಟಿ! “ಇದ್ದಿದ್ದರಲ್ಲಿ ಆ ರಾಜಾ ಹೋಂ ಒಳ್ಳೆಯ ಕ್ಲಿನಿಕ್, ಖಂಡಿತ. ಕಾರಣ ನಮ್ಮ ಪೈಕಿ ಒಬ್ಬರು ರೋಗಿ ಅಲ್ಲಿಂದ ಮತ್ತೆ ಬದುಕಿ ಬಂದರು, ಅದಕ್ಕೆ ಸಂತೋಷ ಪಡಬೇಕು, ಅಲ್ಲವೇನೋ ರಾಮಣ್ಣೀ? ಖಾಯಿಲೆ ಹಾಗೇ ಇದೆ”,ಇನ್ನೊಬ್ಬರು “ ಕುರುಬರ ಪೇಟೇಲಿರೋ ಆ ಧನ್ವಂತ್ರೀ ಹೋಂಗೆ ಹೋದ್ರೆ ಆಲ್ಲಿಂದ ಖಂಡಿತ ಯಾರೂ ಹಾಗೇ ಬಂದದ್ದೇ ಇಲ್ಲ”, “ಅಂದರೆ ಪೇಷಂಟ್ ಜೊತೆಗೇ ಹೋದವ್ರೂನೂ?” “ನೋಡಯ್ಯ, ತಮಾಷೆ ಬೇಡ, ನಿಮ್ಮ ಲಕ್ಕು, ಇಷ್ಟರ ಮೇಲೆ ನಿಮ್ಮಿಷ್ಟ”, ಇನ್ನೊಬ್ಬರು “ಆ ಮಂಜೂಷಾ ನರ್ಸಿಂಗ್ ಹೋಂಗೆ ಸೇರಿದ್ರೆ, ನೀ ಏನೇ ಖಾಯಿಲೆ ಹೇಳು, ಆಪರೇಶನ್ ಮಾಡಲೇಬೇಕು ಅಂತಾರೆ, ಆಮೇಲೆ ಅಷ್ಟೇ, ಕೊಯ್ದಮೇಲೆ ಬರೀ ‘ಬಾಡಿ’ಯಾಗೆ ಹೊರಬಂದವರಿದಾರೆ, ಎಲ್ಲಿಗೆ ಅಂತ್ ನಾ ಹೇಳೋದ್ ಬೇಕಿಲ್ಲ, ನಿನ್ನಿಷ್ಟ”. ಈ ತೆರನ ಬಿಟ್ಟಿ ಸಲಹೆ ಕೇಳಿ ತಲೆ ಕೆಟ್ಟು ಕೊನೆಗೆ ಹೊಟ್ಟೆ ನೋವಿನಿಂದ ನರುಳಿತ್ತಿದ್ದ ನಮ್ಮ ಬಂಧು ‘ಯಾವ ಆಸ್ಪತ್ರೆನೂ ಬೇಡ, ನನಗೆ ಆಯುಸ್ಸು ಮುಗಿದಿದ್ದರೆ, ಮನೇಲೆ ಸಾಯ್ತೀನೋ ಹೊರತು, ಅಲ್ಲೆಲ್ಲೋ ಹೋಗಿ ದೇಹ ಕುಯ್ಯಿಸಿಕೊಂಡ್ ನರಕಕ್ಕೆ ಒಂದೇ ಸಲ ಹೋಗೋದ ನಂಗೆ ಸುತರಾಂ ಇಷ್ಟ ಇಲ್ಲ.” ಎಂದು ಖಡಕ್ಕಾಗಿ ಹೇಳಿದ್ದರು. ತಮಾಷೆ ಎಂದರೆ, ಆತ ದೂರ ಪ್ರಯಾಣಗಳಲ್ಲಿದ್ದು ಸಿಕ್ಕ ಪಟ್ಟೆ ಏನೇನೋ ತಿಂದು ಪೂರ್ತಿ ಹೊಟ್ಟೆ ಕೆಡಿಸಿಕೊಂಡಿದ್ದ. ಇವನಿಗೆ ಒಬ್ಬ ಅಳಲೇಕಾಯಿ ಪಂಡಿತರು ಸಿಕ್ಕು, ಆತ ಇವನಿಗೆ ಬೇಧಿಗೆ ಕೊಟ್ಟು, ಹೊಟ್ಟೆ ಸರಿ ಮಾಡಿದ್ದರು, ಜಾಪಾಳ ತಿಂದ್ಬದುಕಿದವ್ನು, ಈಗಲೂ ಚೆನ್ನಾಗೇ ಇದಾನೆ, ಗಟ್ಟಿ ಪಿಂಡ!
ನನ್ನ ಮೊದಲ ಕೂಸು ಸಂಗೀತಳನ್ನ ನರ್ಸರಿ ಮುಗಿಸಿ, ಲೋಯರ್ ಕೆಜಿಗೆ ಸೇರಿಸಲು ಪಟ್ಟ ಪ್ರಯತ್ನ-ಅದರದೇ ಕಥೆ ಬರೆಯಬಹುದು, ನಗರಗಳಲ್ಲಿನ ಎಲ್ಲ ತಂದೆ ತಾಯಿಯರಿಗೂ ಇದೇ ಅನುಭವವಾಗಿರಲೂ ಸಾಕು. ಹುಟ್ಟಿ ಒಂದೇ ವರುಷವಾಗುತ್ತಲೇ ಹೋದರೂ ‘ನೀವು ಇನ್ನೂ ಮುಂಚೆ ಬರಬೇಕಿತ್ತು ಅನ್ನುವವರೇ. ನನ್ನ ಸ್ನೇಹಿತರು ಹೇಳಿದರು ‘ನೀ ಎಲ್ಲೂ ಹೋಗ್ಬ್ಯಾಡ, ಈ … ಸ್ಕೂಲ್ ಇದೆಯಲ್ಲ ಅಲ್ಲೇ ಸೇರಿಸು, ದುಡ್ಡು ಜಾಸ್ತಿ ತಗಂಡ್ರೂ ಚೆನ್ನಾಗಿ ಹೇಳ್ಕೊಡ್ತಾರೆ, ಇನ್ನೆಲ್ಲೂ ಬೇಡ. ನಾನು ನನ್ನ ಎಲ್ಲ ಮಕ್ಕಳಿಗೂ ಅಲ್ಲೇ ರಾತ್ರೋ ರಾತ್ರಿ ಎಲ್ಲ ಕ್ಯೂ ನಿಂತು ಸೇರ್ಸಿದೀನಿ ’ ಇನ್ನೊಬ್ಬ ಸ್ನೇಹಿತ “ಆ ಸಲಹೆ ಹುಚ್ಚರ ಮಾತು ಕಣೋ, ಅವ್ರ ಹತ್ರ ಚೆಲ್ಲೋಷ್ಟು ಹಣ ಕೈನಲ್ಲಿದೆ, ನಿನಗಾಗತ್ಯ? ಆ ಭಾರತಮಾತ ಸ್ಕೂಲ್ಗೆ ಹೋಗು ಸುಮ್ನೆ, ಅಲ್ಲಿ ಓದಿರೋವ್ರು ಬೃಹಸ್ಪತಿಗಳಾಗಿಲ್ವ? ಹೀಗಾಗಿ ನನ್ನ, ನನ್ನ ಹೆಂಡ್ತಿ ತಲೆ ಕೆಡಿಸಲಿಕ್ಕೆ ಹತ್ತಾರು ದಾರಿ ಆಗಿದ್ದು ನಿಜ. ಕೊನೆಗೆ ಸರ್ಕಾರಿ ಸ್ಕೂಲೊಂದ್ ಬಿಟ್ಟು ಮನೆ ಹತ್ತಿರಾ ಇರೋ ಸ್ಕೂಲಿಗೆ ಸೇರಿಸಿದ್ದೂ ಆಯ್ತು, ಅವರು ಈಗ ಬೆಳೆದು ಒಳ್ಳೊಳ್ಳೆ ಉದ್ಯೋಗದಲ್ಲೂ ಇದಾರೆ. ಹೀಗೆ ನಾ ಬಿಟ್ಟಿ ಸಲಹೆಗಳ ಬಗ್ಗೆ ಹೇಳ್ತಾ ಬಂದ್ರೆ, ನಿಮ್ಗೂ ಈ ‘ಬರಹ’’ನೂ ಯಾವ್ದೋ ಬಿಟ್ಟಿ ಬರಹದ ವಾಸನೆ ತೋರ್ತಾ ಇದೆ ಅಂತ ಅನ್ಸಿದರೆ ನಾ ಏನ್ ಮಾಡೋದು? ಸಾಕು ಇಲ್ಲಿಗೇ, ಈ ಬಿಟ್ಟಿ ಸಮಾಚಾರ, ಏನಂತೀರಾ? ಹೌದಂತೀರಾ, ಇಲ್ಲಾ ಅಂತೀರಾ? .———————————————————-
Comentarios