‘ನಹಿ ಜ್ಞಾನೇನ ಸದೃಶಂ’ —-ಹಾಗಂದರೇನು ಗುರುಗೋಳೇ?
- haparna
- Feb 28, 2017
- 5 min read
‘ನಹಿ ಜ್ಞಾನೇನ ಸದೃಶಂ’ —-ಹಾಗಂದರೇನು ಗುರುಗೋಳೇ?
ವಿಷಯ ಸೂಚನೆ: ಕನ್ನಡ ಸಾರಸ್ವತ ಪ್ರಪಂಚದಲ್ಲಿ ಹಾಸ್ಯಬರಹಗಳು, ನಾಟಕ ರಚನೆ ಹಾಗು ನಟನೆ ಮತ್ತು ಬೊಂಬೆಯಾಟದಲ್ಲೂ ಪರಿಣಿತರಾಗಿದ್ದು ತಮ್ಮದೇ ವಿಶಿಷ್ಠ ಕೊಡುಗೆಯಿಂದ ಶಾಶ್ವತ ಮುದ್ರೆ ಒತ್ತಿ ನಮ್ಮನ್ನಗಲಿ ಸುಮಾರು ಮೂರು ದಶಕಗಳೇ ಆಗುತ್ತಿವೆ.ಅಂದಿನ ದಿ.ರಾ.ಶಿ.ಯವರ “ಕೊರವಂಜಿ” ಮತ್ತಿತರ ಪತ್ರಿಕೆಗಳಿಗೆ ಹಾಸ್ಯ ಲೇಖನಗಳನ್ನು ಬರೆಯುತ್ತಲೇ ಹೆಸರುಗಳಿಸಿದವರು.ವೃತ್ತಿಯಿಂದ ಎಚ್.ಎ. ಎಲ್ ಕಾರ್ಖಾನೆರ್ಯಲ್ಲಿ ದುಡಿಯುತ್ತ, ಈ ಎಲ್ಲ ಪ್ರವೃತ್ತಿಯನ್ನ ಬೆಳಸಿಕೊಂಡಿದ್ದ ಇವರು ಹೆಚ್ಚಿನ ಪರಿಣಿತಿಗಾಗಿ ಇಂಗ್ಲಂಡಿಗೆ ಕಳುಹಿಸಲ್ಪಟ್ಟಾಗ ರಾಶಿಯವರ ಸೂಚನೆಯಂತೆ ಅಲ್ಲಿಯ ತಮ್ಮ ಅನುಭವವನ್ನು ವಿಡ೦ಬಿಸಿ ಗಾಂಪ ಮಠದವರ ವಿದೇಶ ಪರ್ಯಟನೆಯನ್ನ ಉಕ್ಕಿಬರುವ ನಗೆಯುಂಟಾಗುವ ತೆರದಿ ಬರೆದು ಎಲ್ಲರ ಮೆಚ್ಚುಗೆ ಪಡೆದವರು.ಇವರ ಹಾಸ್ಯ ಶೈಲಿ ಇವರದೇ ಛಾಪೆಯನ್ನ ಹೊ೦ದಿದ್ದರೂ ಸ್ವಲ್ಪ ಮಟ್ಟಿಗೆ ಅಂಗ್ಲ ಸಾಹಿತಿ ಚಾರ್ಲೆಸ್ ಡಿಕೆನ್ಸ್ ರಿಗೆ ಹೋಲಿಸಬಹುದೇನೋ.. ಅವರದೇ ಶೈಲಿಯನ್ನ ಸ್ವಲ್ಪ ಮಟ್ಟಿಗೆ ಅನುಸರಿಸಿ ಇಂದಿನ ಪೀಳಿಗೆಯ ಜನಕ್ಕೆ ಪರಿಚಯಿಸುವ ಉದ್ದೇಶದಿಂದ ಈ ಬರಹ ಮೂಡಿಬಂದಿದೆ. “ ಗುರ್ಗೋಳೆ, ಈಚೀಚೆಗೆ ಈ ಮಠದ ಭಕ್ತರು ಇಲ್ಲಿಗೆ ಬರುವುದೇ ಕಮ್ಮಿಯಾಗ್ತಿದೆ, ಹೀಗೇ ನಡೆದರೆ, ಮುಂದೊಂದು ಏಕಾದಶಿ ದಿನ ಒಂದು ಹೊತ್ತು ಗೊಜ್ಜಿನವಲಕ್ಕಿಗೂ ತಪ್ಪಿದರೆ ನುಚ್ಚಿನುಂಡೆಗೂ ಪಂಗನಾಮ ಆಗೋತರಾ ಕಾಣ್ತದೆ, ಬರೀ ನೀರು ಕುಡ್ದೇ ಇರೋಣ ಅಂದ್ರೆ, ಆದೂನೂವೆ ಈ ಮುನ್ಸಿಪಾಲ್ಟಿಯವ್ರು ಎರಡು-ಮೂರು ದಿನಕೊಮ್ಮೆ, ತಪ್ಪಿದ್ರೆ ವಾರಕ್ಕೊಂದ್ಸಲ ಬಗ್ಗಡದ ಥರಾ ನೀರನ್ನ ಬಿಡೋದನ್ನ ಜ್ನಾಪಿಸಿಕೊಂಡ್ರೆ ಮೈಯೆಲ್ಲಾ ಜೋಮು ಹಿಡಿದಂಗೆ ಆಗೋಯ್ತದೆ ಗುರುಗಳೇ”ಎಂದು ಮೊಬೈಲ್ ಫೋನ್ನಲ್ಲಿ ವಾಟ್ಸಪ್ ಚಾಟ್ ಮಾಡುತಿದ್ದ, ಹಳೇ ಕಾಲದ ಗಾಂಪ ಮಠದ ಮಾಡರ್ನ್ ಆವೃತ್ತಿಯ ಶುಂಠೇಶ್ವರ ಮಠದ ಪರಮಾಪ್ತ ಮಾಡರ್ನ್ ಶಿಷ್ಯ ಮಡೆಯ ನಿಟ್ಟುಸಿರು ಬಿಟ್ಟಿದ್ದ. ಇರುವ ನಾಲ್ಕು ಶಿಷ್ಯರುಗಳಲ್ಲಿ ಗುರುಗಳ ಇಚ್ಛೆಗೆ ವಿರುದ್ಧವಾಗಿ ಅಲ್ಲಲ್ಲಿ ಹರಿದ ಜೀನ್ಸ್ ಪ್ಯಾ೦ಟು, ಅಂಗವಸ್ತ್ರ ಧರಿಸುತ್ತಿದ್ದ ಅವರ ಪ್ರೀತಿಯ ಮಡೆಯ. ಅಕಾಲಿಕ ಮರಣದಿಂದ ಶಿವೈಕ್ಯನಾಗಿದ್ದ ಮಡ್ಡಿಯ ಕೊರತೆಯನ್ನ ಇವ ಸ್ವಲ್ಪ ಮಟ್ಟಿಗೆ ನೀಗಿಸಿದ್ದ. ಎಲ್ಲೋ, ಯಾರದೋ ತಪ್ಪಿನಿಂದಾಗಿ, ಒಂದು ಮುಂಜಾನೆ ಮಠದ ಬಾಗಿಲ ಬಳಿ ಬಿಟ್ಟುಹೋಗಿದ್ದ ಹದಿನೈದು ದಿನದ ಕೂಸನ್ನು ಕರುಣೆಯಿಂದ ಎತ್ತಿ, ಸಾಕಿ ಬೆಳಸಿದವರು ಈ ಗುರುಶು೦ಠಾಧಿಪತಿಗಳು. ಹಾಗಾಗಿ ಮಡೆಯ ಅವರ ಮೆಚ್ಚಿನ ಶಿಷ್ಯನಾಗಿದ್ದ, ಇದ್ದುದರಲ್ಲಿ ಎಲ್ಲವನ್ನು ನಿಭಾಯಿಸುವಲ್ಲಿ ಇತರರಗಿಂತ ಉತ್ತಮ. ಹಾಗಾಗಿ ಅವನಿಗೊಬ್ಬನಿಗೆ ಹೆಚ್ಚಿನ ಸ್ವಾತಂತ್ರ ದೊರಕಿಸಿದ್ದು ಆಶ್ಚರ್ಯವಾಗೇನು ಇರಲಿಲ್ಲ. “ಶಿಷ್ಯ, ಅದಕ್ಕಲ್ಲವೆ ನಮ್ಮ ಹಿರಿಯ ಗಾಂಪ ಮಠಾಧೀಶರು ಹೇಳುತ್ತಿದ್ದುದು “ನಹಿ ಜ್ಞಾನೇನ ಸದೃಶಂ”. ಮಂಕ: ಹಾಗಂದರೇನು ಗುರುಗೋಳೇ, ಈ ಸಂಸ್ಕೃತ ಆ ಗಾಂಪರ ಕಾಲಕ್ಕೇ ತ್ಯಾಜ್ಯವೆಂದಾಗ ನೀವೂ ಆ ಭಾಷೆಯಲ್ಲೇ ಹೇಳಿದರೆ ಈ ನಮ್ಮೆಲ್ಲಾರ ಬಿಸಿಯಾಗಿದ್ದ ಮಂಡೆ ತಣ್ಣಗಾಗಲಿಕ್ಕ ಉಂಟಾ, ಹೊಟ್ಟೆಯಲ್ಲಿ ಸಂಕಟ ಇನ್ನಷ್ಟು ಜಾಸ್ತಿಯಾಗುತ್ತದಲ್ಲವಾ? ನಮ್ಮ ಮಾತಿಗೆ ಬುದ್ಧಿಜೀವಿಗಳೂ ಸೇರಿ ನಮ್ಮ ನಿಮ್ಮನ್ನ ಸೇರಿ ಏನಂದಾರು? “ಮಂಕಾ, ಈ ನಡುವೆ ನೀ ಬಹಳವೇ ಯೋಚಿಸುವವನಾಗಿದ್ದಿ, ಚೂಟಿಯಾಗಿ ಬುದ್ಧಿವಂತರ೦ತೆ ಮಾತಾಡಲಿಕ್ಕ ಹತ್ತೀ, ನಮ್ಮ ಮಠದ ಹೆಸರಿಗೇ ಅಪಮಾನ ಮಾಡುತ್ತಿಲ್ಲವಷ್ಟೆ? ಆ ಹಾಳು ಮೊಬೈಲ್ ಫೋನ್ನ ಮೊದಲು ನೀವುಗಳೆಲ್ಲರು ಆಚೆಗೆ ಎಸ್ದು ಆ ಸೆಲ್ಫೋನ್ ಜೀವಿಗಳ ಜೊತೆಜೊತೆಯಾಗಿ ನೀವುಗಳು ಅವರಂತೆ ಮಾತಾಡುವುದು ಬಿಡಿ” ಉಪದೇಶಿಸಿದ್ದರು ಶು೦ಠೇಶ್ವರ ಮಠಾಧೀಶ. “ಹೀಗೆ ಧೈರ್ಯವಾಗಿ ಗುರುಗಳೊಡನೆ ನೀ ಮಾತಾಡಿದ್ದೆ ಅಪರೂಪ ಮಂಕ, ನಿನ್ನ ಲೆವೆಲ್ ಏನೂ, ನಿನ್ನ, ನಮ್ಮ ಮಠದ ಸಂಸ್ಕಾರ ಏನು? ನಮ್ಮ ಆಚಾರ, ವಿಚಾರ ಏನು? ಯಾತ್ರ ದೆಸೀ೦ದ ಹೀ೦ಗ ಮಠ ನಡೆಸ್ಕ೦ಡ್ ಬಂದೀವಿ ಅನ್ನೋದ ಮರೆತು ಮಂಗನ೦ತಾಡಬ್ಯಾಡ” ಮಂಕನಷ್ಟೇ ಅಲ್ಪಮತಿಯಾದ ಮರುಳ ತನ್ನದೂ ಉದ್ದುದ್ದ ಟೀಕೆ ಸೇರಿಸಿದ್ದ. ಮಡೆಯ: ಹೌದಲ್ವಾ ಈ ರೀತಿ ಮಂಕ ಹೇಳಿದ್ದೆ ಇಲ್ಲ, ಹೀ೦ಗೆ ಮಾತಾಡತಿದ್ದರೇ, ಒಂದಿವ್ಸ ಇವಂತಲೇಲಿರೋ ಚೂರು ಮೆದಳು ಸುಟ್ಟು ಕರಕಲಾಗಿ ದೊಡ್ಡಾಸ್ಪತ್ರೆ ಸೇರೋದು ಗ್ಯಾರಂಟಿ, ಆವಾಗ….” “ಶಿಷ್ಯ, ಮಂಕಾ, ಈ ನಿನ್ನ ಜಿಜ್ಞಾಸೆ ಹಿಂದಿನ ಯಾವ ಗಾಂಪೋಪನಿಷದ್ಗೂ ಕಮ್ಮಿ ಇಲ್ಲ, ಆದರೆ ಮೊದಲು ಜ್ನಾನ ಅಂದರೆ ಏನು ಹೇಳುವಂತವನಾಗು?” “ಗುರುಗೊಳೇ, ವಾರಕ್ಕೆ ಎರಡು ದಿನವಾದ್ರೂ ಎರಡೂ ಹೊತ್ತು ಇಲ್ಲಿ ಹೊಟ್ಟೆ ತುಂಬಾ ಅಶನ ಸಿಕ್ಕಿದ್ದೇ ಅಪರೂಪ. ಆ೦ದ್ಮ್ಯಾಕೆ ‘ಜ್ನಾನ’ ದ ಬಗ್ಗೆ ಮಂಕ ತಿಳಿಯುವದಾದರೂ ಹೇಗೆ? ಅದೇನು ನೆಶ್ಯದ ಡಬ್ಬಿಯೇ? ಅ ಶ್ರಮಕ್ಕೆ ಹೊಟ್ಟೆ ಸ್ವಲ್ಪವಾದರೂ ತುಂಬಿರಬೇಡವೇ” ಪಾತ್ರೆ, ಡಬ್ಬಿಗಳೆಲ್ಲಾ ಖಾಲಿಖಾಲಿಯಾಗಿದ್ದ ಅಡಿಗೆ ಮನೆಯನ್ನು ಸಾರಿಸುತ್ತಾ ಅದುವರೆಗೂ ಸುಮ್ಮನಿದ್ದ ಮರುಳ ಪಲುಕಿದ. ತಮ್ಮ ಪೂರ್ವಾಶ್ರಮದಲ್ಲಿ ನಿರಂತರ ಜ್ಞಾನಚೂರ್ಣ ಸೇವಿಸುತ್ತಿದ್ದದ್ದನ್ನು ಹೀಗೆ ಜ್ಞಾಪಿಸಿ, ಗುರುಗಳನ್ನು ಲೇವಡಿ ಮಾಡಬಯಸಿದ್ದ ಈ ಆಷ್ಟಾವಕ್ರ. “ಅದೂ ಅಲ್ಲದೆ ಯೋಚಿಸುವುದು ನಮ್ಮೀ ಮಠದ ಸ್ವತ್ತಲ್ಲ ಎಂದು ನೀವೇ ಅಧಿಕೃತವಾಗಿ ಅಪ್ಪಣೆ ಮಾಡಿರುವುದನ್ನ ಮರೆತರೋ ಹೇಗೆ ಗುರುಗಳೇ?” ಹಸಿವಿನಿಂದಾಗಿ ಹಿಂದಿನ ದಿನದ ಮಿಕ್ಕಿದ್ದ ಉಸಲಿಯ ಕಾಳನ್ನು ಬಾಯಲ್ಲಿ ಹಾಕಿಕೊಳ್ಳಲು ಬಾಯ್ತೆರದ ಶುಂಠ ಮಾತಿಗೆ ಒಗ್ಗರಣೆ ಹಾಕಿದ. “ಜ್ನಾನವಿಲ್ಲದವರು ಆ ಬಗ್ಗೆ ವಿದೇಶಗಳಿಗೆ ಯಾರದೋ ದುಡ್ಡಲ್ಲಿ, ಹ್ಯಾಗೋ ಹೋಗಿ, ಯಾರಿಗೂ ಅರ್ಥವಾಗದ ಡಾಕ್ಟರೇಟ್ ಬಿರಿದು ಪಡೆದು ಬಂದು, ಏನೂ ತಿಳಿಯದಿದ್ದರೂ ನಮಗೆ ಸರಿಸಮಾನರಿಲ್ಲ ಎಂದು ಹೇಳಿಕೊಳ್ಳುವ ಇವರರುಗಳಿಗೆ ಏನೇ ಹೇಳಿದರೂ ಇನ್ನೊಬ್ಬರ ಮಾತು ಕೇಳಲಾರರು, ಸಹಿಸಲಾರರು. ಅಂಥವರು ತಾವೇ ಮಹಾಜ್ನಾನಿಗಳೆ೦ದು ಭಾವಿಸುತ್ತಾರೆ. ಅವರ ಲೆಕ್ಕದಲ್ಲಿ “ನಹಿ ಜ್ಞಾನೇನ ಸದೃಶಂ” ಅಂದರೆ ಹಾಗೆ ಜ್ಞಾನವನ್ನ ಪಡೆದವರಲ್ಲಿ ಆವರಿಗೆ ಸರಿಸಮಾನರಿಲ್ಲ ಎಂದೇ ಅರ್ಥ, ತಿಳಿಯಿತಾ ಮಂಕ, ಮಡೆಯ? ನಾವು ಆ ಕಾಲದ ಗಾಂಪ ಮಠದ ಶಾಖೆಯಾದ ಶು೦ಠೇಶ್ವರ ಮಠದವರು ಹಾಗಲ್ಲ, ಜ್ಞಾನವೇ ನಾಸ್ತಿ, ಅ೦ದ್ರೆ ಪರಂಪರೆ ಮತ್ತು ಅಜ್ಞಾನವೇ ನಮ್ಮ ಆಸ್ತಿ -ಎಲ್ಲ ವಿಷಯದಲ್ಲು.” ಹಳೇಕಾಲದ ಗಾಂಪ ಮಠದ ಗುರುಗಳ ಉತ್ತರಾಧಿಕಾರಿಯಾಗಿದ್ದ ಶುಂಠನ ವಂಶಸ್ತರು ನಡೆಸಿಕೊಂಡು ಬಂದಿದ್ದ ಈ ಶುಂಠೇಶ್ವರ ಮಠದ ನಿರ್ವಹಣೆ ಗುರುಗಳಿಗೆ ಸುಲಭವಾಗೇನೂ ಇರಲಿಲ್ಲ. ತನಗೂ, ತನ್ನ ಶಿಷ್ಯರಿಗು ಅರೆ ಹೊಟ್ಟೆಯಾಗಿ, ಅವರನ್ನು ಪೇಚಿಗೆ ಸಿಕ್ಕಿಸಿದ್ದು ಅನೇಕ ಬಾರಿ. ಆದರೆ ಯಾರನ್ನೂ ಕೇಳೀ, ಬಿಕ್ಷೆ ಬೇಡಬಾರದೆಂಬುದೇ ಇಲ್ಲಿ ನಿಯಮ. ಹಿಂದಿನಿಂದಿಲೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಈ ಮಠ ಯಾವ ರಾಜಕಾರಣಿಯ, ಬಂಡವಾಳಷಾಹಿಯ ಬಾಲ ಹಿಡಿಯದೆ ತಮ್ಮ ಸ್ವಾತಂತ್ರ್ಯ ಕಾಪಾಡಿಕೊಂಡಿದ್ದವರು. ಅದೇ ಕಾರಣಕ್ಕೆ ಯಾವ ಪಾರುಪತ್ತೇ ದಾರನೂ ಇಲ್ಲದ ಮಠವನ್ನ ಶಿಷ್ಯರುಗಳೇ ನಿಭಾಯಿಸುತ್ತಿದ್ದರು. ಅಸಲಿಗೆ ಮಡೆಯನೇ ಪಾರುಪತ್ತೆದಾರ! “ನಮ್ಮ ಹಿಂದಿನ ಆಚಾರ, ನೀತಿ, ವ್ಯವಹಾರಗಳಿಗೆ ಯಾವುದೇ ಅಡ್ಡ ಆತ೦ಕಗಳಿಲ್ಲದೆ, ದೊಡ್ಡ ಶಿಷ್ಯ ಸಮುದಾಯವೇ ಹೊಂದಿ, ಒಂದು ಕಾಲ್ದಲ್ಲಿ ಈ ಮಠ ಸಾಕಷ್ಟು ಶ್ರೀಮಂತವಾಗಿದ್ದುದು ಇಂದೇಕೆ ಹೀಗಾಯಿತು ಗುರುಗೋಳೇ, ನಂಗ್ಯಾಕ ಈತರದ ಶಿಕ್ಷೆ?” ಶು೦ಠ ಅಲವತ್ತುಕೊಂಡ. ಅಪರೂಪಕ್ಕೆ ಭಕ್ತರೊಬ್ಬರ ಮನೆಯಲ್ಲಿ ಗುರುಪೀಠಕ್ಕೆ ಪಾದಪೂಜೆ ಮಾಡಿಸಿಕೊಂಡು ಸುಮಾರು ತಿಂಗಳೆ ಕಳೆದಿತ್ತು. ಆವತ್ತಿನ ಭೂರಿ ಭೋಜನ ಜೊತೆಗೆ ಕಾಯಿ ಒಬ್ಬಟ್ಟು, ಬಿಸ್ಕತಾ೦ಬೊಡೆ, ಕುಂಬಳ ಕಾಯಿ ಮಜ್ಜಿಗೆ ಹುಳಿ ನೆನಪಿಸಿಕೊಂಡು ಶು೦ಠ ಅನೇಕ ದಿನಗಳವರೆಗೆ ಜೊಲ್ಲು ಸುರಿಸಿದ್ದ. “ಹಾಗಾದರೆ, ಎಲ್ಲಾ ಸರಿಯಾಗಿ ತಿಳಿದಿದ್ದವರನ್ನು ಏನು ಮಾಡಬೇಕು? ಕಷ್ಟ ಪಟ್ಟು ವ್ಯಾಸಂಗ, ಸಂಶೋಧನೆ ಮಾಡಿದವರೆಲ್ಲ ಭೂಗತ ರಾಗ ಬೇಕೇ?” ಮಡೆಯನ ಪ್ರಶ್ನೆ. “ಅವರುಗಳಿಗೇನೂ ಕೊಡದಿದ್ದರೂ ಸುಮ್ನಿರುತ್ತಾರೆ, ಕಾರಣ ಭಗವದ್ಗೀತೆಯಲ್ಲಿ ಹೇಳಿದಂತೆ ಅವರುಗಳು ಸ್ಥಿತಪ್ರಜ್ಞರು. ಅವರುಗಳು ಅಂಥಹವಕ್ಕೆ ಕೈ ಒಡ್ಡುವರಲ್ಲವಲ್ಲ? ಯಾವಯಾವುದೋ ಅಕ್ರಮಗಳನ್ನು ಮಾಡಿ, ನಿಜವಾಗಿ ಭೂಗತರಾದವರೇ ಇಂದು ಇಂತಹ ಪುರಸ್ಕಾರಗಳಿಗೆ ಯೋಗ್ಯರೆಂದು ನಿರ್ಧರಿಸಿಬಿಟ್ಟರೆ ಮುಗಿಯಿತು … “ ಗುರುಗಳು ಉಲಿದರು. “ಅದೆಲ್ಲ ಸರ್ಕಾರಕ್ಕೆ ಹೇಗೆ ತಿಳಿಯಬೇಕು ಗುರುಗೋಳೇ?” ಮಂಕ ಪ್ರಶ್ನೆ ಹಾಕಿದ, ಯಾವ ಹೊತ್ತು ಈ ಪರಿ ಮೆದುಳಿಗೆ ಕೆಲಸ ಕೊಟ್ಟವನಲ್ಲ. ಅವನ ತಲೆ ಈಗ ನಿಜಕ್ಕೂ ಕಾದ ಬಾಂಡಲಿಯಂತಾಗಿತ್ತು. “ ಅಯ್ಯಾ ಮಂಕ, ಅಷ್ಟಲ್ಲದೇ ನಿನಗೆ ಈ ಹೆಸರು ಇಟ್ಟಿದ್ದಾರೆಯೇ? ಸರ್ಕಾರದಲ್ಲಿರುವವರನ್ನು ಓಲೈಸಿಕೊಳ್ಳುವ ಶಕ್ತಿಯಿರುವ ಈ ಮಂದಿಗೆ ಅದೇನು ಕಷ್ಟ?”ಗುರುಗಳು ಬೇಸರಿಸಿದರು. ಬಿಸಲಿನ ಮಧ್ಯಾನ್ಹದ ಬೇಗೆಗೆ, ಸರಿಯಾಗಿ ರಿಪೇರಿಯಾಗದ ವಿದ್ಯುತ್ ಬೀಸಣಿಗೆಯೂ ಇಲ್ಲದ ಆ ಮಠದಲ್ಲಿ ಎಲ್ಲರಿಗೂ ಉಸಿರು ಕಟ್ಟುವಂತಿತ್ತು. ಮಡೆಯ ತಲೆಯ ಮೇಲೆ ಎರಡು ಕೈಯಿಟ್ಟು ತನ್ನ ಮಾತು ಸೇರಿಸಿದ “ಅದು ಅವರುಗಳೇ ಎಲ್ಲೆಲ್ಲಿ ಯಾರ್ಯಾರ ಕೈ, ಬಾಯಿ, ಕಾಲು ಹಿಡಿಯಬೇಕೋ ಅವರನ್ನ ಹಿಡಿದು ಅವರುಗಳೇ ಸಿಂಡಿಕೇಟ್ ಮಾಡಕಂಡ್ ಮಾಡರ್ನ್ ಪ್ರಭುಗಳ ಜೊತೆಜೊತೆಗೆ ಇರ್ತಾರೆ, ಆಲ್ಲವ್ರ ಗುರುಗಳೇ?” “ಶಿಷ್ಯರುಗಳಾ, ನೀವೆಲ್ಲಾ ನಿಮ್ಮ ಅಂಕೆ ಮೀರಿ ಏನೇನೋ ಮಾತಾಡಲಿಕ್ಕೆ ಹೊ೦ಟಿವ್ರಿ? ನಿಂಗ್ಯಾಕೆ ಈ ಜನಗೊಳ ಉಸಾಬರಿ? ಆ ಬುದ್ಧಿಜೀವಿಗಳ ಮಟ್ಟಕ್ಕ ನೀವ್ ಬರೂದಕ್ಕ ಸಾಧ್ಯವಿಲ್ಲ, ಕನಸ ಕಾಣಬ್ಯಾಡ್ರಿ. ಅದಕ್ಕೆ ಇದು ಶು೦ಠ ಮಠ ಎನ್ನೋದ್ನ ಮರೀಬ್ಯಾಡ್ರಿ, ಅದರ, ನಮ್ಮಗಳದೆ ಆದ ಸಂಸ್ಕೃತಿ, ಸಂಪ್ರದಾಯ ದೊಡ್ಡದಿದೆ, ಅದಕ್ಕೆ ಬುದ್ಧಿವಂತರ೦ತೇ ಮಾತಾಡಿ ಅಪಮಾನ ಮಾಡಬ್ಯಾಡಿರೀ, ನಿಮ್ಮ ಲಿಮಿಟ್ನ್ಯಾಗ ಇದ್ದರಾ ಸರಿ” ಇದು ಗುರುಗಳ ಆಶೀರ್ವಾದ ವಚನ. ಗುರುಗಳ ಹೊಟ್ಟೆ ಹಸಿವಿನಿಂದಾಗಿ ಪದ ಹಾಡಲಾರಂಭಿಸಿತ್ತು, ಇದ್ದ ಒಂದೇ ದೊಡ್ಡ ಚಾಪೆಯನ್ನ ಮಡಚಿ ಹಾಸಿ, ನೀರು ಕುಡ್ದು ಮಲಗಲು ಶತಪಥ ಪ್ರಯತ್ನಸಿದ್ದರು. ಮಡೆಯ ಓಡಿ ಬಂದು ಚಾಪೆಯನ್ನ ಹಾಸಿ, ಒತ್ತಿಗೆ ದಿಂಬನ್ನು ಜೋಡಿಸಿ, ಪಕ್ಕದಲ್ಲೊಂದು ನೀರು ತುಂಬಿದ ಪಾತ್ರೆಯನ್ನಿಟ್ಟು ತನ್ನ ಮೊಬೈಲ್ ಚಾಟ್ಗೆ ಹಿಂತಿರುಗಿದ. ಮಂಕನಿಗೆ – ಅವನ ಹೆಸರಿಗೆ ತಕ್ಕನಾಗೇ ಮಂಕುದಿಣ್ಣೆನೆ – “ಈ ಸ್ವಾಮಿ ಇತರೆ ಯಾವಯಾವುದೋ ಜಂಗಮರಿಂದ ಹಿಡಿದು ಬೇರ್ಬೇರೆ ಎಂಟೇ ಸ್ವಾಮಿಗಳು,, ಬ್ರಾಂಬ್ರ ಪೀಠಾಧಿಪತಿಗಳು, ಮಸೀದಿ ಫಕೀರರು, ಕ್ರಿಶ್ಚಿಯನ್ ಪಾದ್ರಿಗಳು ಎಲ್ಲಾನೂವೆ ಹಣ ಎಲ್ಲ ಕಡೆಯಿಂದ ಪಡ್ಕ೦ಡು ಜುಮ್ ಅಂತ ಮೆರೀತಾ ಇರೋವಾಗ, ತುಂಬಿದ ಹೊಟ್ಟೆ ಇರ್ಲಿ, ಮಾನ ಮುಚ್ಚೊಕು ಸರಿಯಾದ ಕೌಪೀನ, ಶಾಲುಗಳು ಸಿಕ್ದೇ, ಹುಳ ತಿಂದು ಎಲ್ಲೆಲ್ಲೂ ತೂತು ಬಿದ್ದಿರೋ ಹಳೆ ಕಾಲದ ಕಲಾಬತ್ತಿನ ಮಗುಟಾನೇ ಶಿಷ್ಯರುಗಳ ಜೊತೆ ಹಂಚ್ಕಂಡಿರ್ಬೇಕು ಅಂದ್ರೆ ಯಾವ ಸೀಮೆ ನ್ಯಾಯ?” ಅಂತ ಹೇಳಿ ಹಸಿವಿನ ಸಂಕಟ ತಾಳ್ದೇ ಗುರುಗೋಳ್ಪಕ್ಕದಲ್ಲೇ ಇನ್ನೊಂದ್ ಮುರ್ಕಲು ಚಾಪೆ ಹಾಸಿ ಶಯನೋತ್ಸವಕ್ಕೆ ತಾನೂ ಸಿದ್ಧವಾದ. ಎಂದೂ ಇಷ್ಟೊಂದು ಉದ್ದುದ್ದ ವಾಕ್ಯ, ಪದ ಪ್ರಯೋಗವನ್ನ, ಯಾವಯಾವುದೋ ಕಾಮಾನಂದ, ರಸಾನಂದ, ಪ್ರೇಮಾನಂದ ಇತ್ಯಾದಿ ಸ್ವಾಮಿಗಳ ಬಗ್ಗೆ ಆಷ್ಟೋ,ಇಷ್ಟೋತಿಳ್ದು, ಈ ಪರಿ ಮಾತುಗಳನ್ನ ದೊಡ್ಡ ಪ್ರಮಾಣದಲ್ಲಿ ಮಂಕ ಆಡಿದ್ದು ಗುರುಗಳನ್ನು ಬೆಚ್ಚಿಬೀಳುವಂತಾಗಿಸಿತ್ತು. ಇವನೇನು ನಿಜಕ್ಕೂ ಬುದ್ಧಿಜೀವಿಯ ತುಂಡೋ ಅಥವಾ ಹೊಟ್ಟೆಪಾಡಿನಿಂದಾಗಿ ಉಂಟಾದ ನಿರ್ವಾತ ಪ್ರಯೋಗವೋ ಎಂಬ ಸಂದೇಹದಲ್ಲಿ ಬಿದ್ದರು. ಒಂದು ಕಾಲ್ದಲ್ಲಿ ಸ್ಥಿರವಾದ ಅಸ್ತಿ, ಸಾಕಷ್ಟು ಭಕ್ತರೊಲಿದಿದ್ದ ಗಾಂಪರ ಶು೦ಠೇಶ್ವರ ಮಠ ಈ ‘ದಿವಾಳಿ’ ಪರಿಸ್ಥಿತಿಗೆ ಬ೦ದಿದ್ದು ಕಾಕತಾಳ ವೇನೂ ಆಗಿರಲಿಲ್ಲ. ಜನರಿಗೆ ಗುರುಗಳಲ್ಲಿ ಭಕ್ತಿ ಎಂದೋ ಮಾಯವಾಗಿ ಈಗಿನ ಬೆರಗಿನ ಪಾಶ್ಚಿಮಾತ್ಯ ಲೋಕದ ಅತಿಯಾದ ಅನುಕರಣೆ, ಹಣದ ವಿಪರೀತ ವ್ಯಾಮೋಹ, ಯುವ ಪೀಳಿಗೆಯ ಪ್ರಕ್ಷುಭ್ಧ ಮನೋಸ್ಥಿತಿ ಈ ರೀತಿ ಕಾಡಿಸುತ್ತಾ, ನ್ಯಾಯ, ಧರ್ಮ ಉಳಿಸಲಿಕ್ಕಾಗಿ, ಹಾಗು ಯಾರನ್ನು ಏನಕ್ಕೂ ಬೇಡದ ಈ ಮಠ ಅಧೋಗತಿಗೆ ಬಂದಿತ್ತು. ಎಷ್ಟೇ ಬಡವಾದರೂ ಮಠ ತನ್ನ ಸಾರ್ವಕಾಲಿಕ ನೀತಿಯಾಗಿ ಯಾರನ್ನು ಬೇಡದೆ ಮುನ್ನಡೆಸಬೇಕೆಂಬ ಹಠ ಬುದ್ಧಿಯಲ್ಲಿ ಬಡವರಾದರೂ ಈ ಶಿಷ್ಯರನ್ನು ಪಾಲಿಸಿಕೊಂಡು ಬಂದಿತ್ತು. ಆ ಕ್ಷಣಕ್ಕೆ ಮುಂಬಾಗಿಲು ತಟ್ಟಿದ ಶಬ್ದ ಎಲ್ಲರನ್ನು ಬೆರಗಾಗಿಸಿತ್ತು. ಈ ವೇಳೆಯಲ್ಲಿ ಯಾರೇ ಬಂದರು ಭಕ್ತಾದಿಗಳಿಗೆ ಊಟ ಹಾಕುವ ಸಂಪ್ರದಾಯ ಮುಂಚಿನಿಂದಲೂ ಬಂದಿದ್ದು, ಇದೀಗ ಮಠವೇ ಭಿಕ್ಷಾನ್ನಕ್ಕೆ ಹೋಗುವಂತೆ ಇದ್ದಾಗ ಅತಿಥಿಗಳಿಗೇನು ಉಪಚಾರ, ಹೇಗೆ ಎಂದು ಎಲ್ಲರನ್ನು ಕಾಡಿಸಿದ್ದರೇ ಆಶ್ಚರ್ಯವೇನು? ಮ೦ಕ ಹೋಗಿ ಬಾಗಿಲು ತೆಗೆದು ಬಾಗಿಲಲ್ಲಿದ್ದ ಇಬ್ರು ಪೈಲ್ವಾನರಂತವರನ್ನ ನೋಡಿ ಬೆದರಿದ್ದ. ಆದರೆ ಅಭ್ಯಾಗತರಲ್ಲವೆ೦ದು, ಗುರುಗಳನ್ನೇ ನೋಡಲಿಕ್ಕ ಬಂದವೆಂದು ಹೇಳಿದಮೇಲೆ, ನಿರಾಳವಾಗಿ ಗುರುವಿನ ಬಳಿ ಕರೆತಂದ. ಉಭಯ ಕುಶಲೋಪರಿ ನಂತರ ಅಲ್ಲಿಯ ರಾಜಕೀಯ ಧುರೀಣರೊಬ್ಬರ ಆದೇಶದಂತೆ, ಮುಂದೆ ಅವರ ನಾಯಕ ನಡೆಸಿಲಿರುವ ಪಕ್ಷದ ಸಮಾವೇಶಕ್ಕೆ ಗುರುಗಳು ಬಂದು ಆಶೀರ್ವದಿಸಬೇಕೆಂದು, ಜನರಿಗೆ ಆತನ ಪರವಾಗಿ ವೋಟು ಹಾಕುವಂತೆ ಆದೇಶಿಸಬೇಕೆಂದು ಕೋರಿ ಬಂದವರೆಂದು ತಿಳಿದು ಬಂತು. ಮಠಕ್ಕಾಗಿ ‘ಇರಲಿ’ ಎಂದು ಆತನಿ೦ದ ಇವರ ಮೂಲಕ ಒಂದು ಮೂಟೆಯಷ್ಟು ಅಕ್ಕಿ, ಜೊತೆಗೆ ಇತರ ಸಾಮಗ್ರಿಗಳನ್ನು ಕೊಟ್ಟು ಗುರುಗಳ ಪಾದಕ್ಕೆ ಎರಗಿ, ಮತ್ತೆ ಗುರುಗಳಾಗಲಿ, ಶಿಷ್ಯರಾಗಲಿ ಏನುಮಾತಾಡಲಿಕ್ಕೆ ಅವಕಾಶ ಕೊಡದೆ ಅಲ್ಲಿಂದ ಹೊರಬಿದ್ದಿದ್ದರು. ಸ್ವಲ್ಪ ಹೊತ್ತು ಯಾರಿಗೂ ಬಾಯಿ ತಿರುಗಲಿಲ್ಲ. ಮೌನ ಆವರಿಸಿತ್ತು. ಮರುಳ ಕುದುರೆಯಂತೆ ಹೀ೦ಕರಿಸಿ, ಕೇಕೆ ಹಾಕುವಂತೆ “ಗುರುಗಳೇ ನೀವು ಯಾವ ಜನ್ಮದಲ್ಲಿ ಮಾಡಿದ ತಪಸ್ಸೋ ಏನೊ, ಇಂದು ನಮಗೆಲ್ಲ ಆ ಶು೦ಟೇಶ್ವರ ಊಟ ಕರುಣಿಸಿ ಬಿಟ್ಟ. ಈಗಲೇ ಸ್ನಾನ ಮಾಡಿ ಆಡಿಗೆಗಿಟ್ಟು, ಸಂಜೆ ಪೂಜೆ ಆಗುತ್ತಿದ್ದಂತೆ ಗುರುಗಳಿಗೆ ಪೊಂಗಲ್, ಪಾಯಸ ಮತ್ತು ಎಲ್ಲರಿಗು ಬಿಸಿ ಊಟ ಸಿದ್ಧ ಮಾಡಿಬಿಡುವೆ ಎನ್ನುತ್ತಾ ಅಡಿಗೆ ಮನೆ ಕಡೆ ಹೊರಟ. ಕ್ಷೀಣವಾಗಿದ್ದ ಉಸಿರನ್ನು ಆದಷ್ಟೂ ಗಡುಸು ಮಾಡಿ ಗುರುಗಳು ಮಲಗಿದ್ದಲಿಂದಲೆ ಕೂಗಿ ಹೇಳಿದರು “ಮರುಳಾ, ತಾಳು, ಅವೆಲ್ಲಾವನ್ನು ಮೊದಲು ಉಗ್ರಾಣದಲ್ಲಿ ಹಾಕಿ ಬಾ, ನಮ್ಮ ಊಟಕ್ಕೆ ಅದರಿಂದ ಒಂದು ಕಾಳೂ ತೆಗೆಯಬಾರದು. ಇದು ನಮ್ಮ ಕಟ್ಟಪ್ಪಣೆ, ಗುರುವಾಜ್ಞೆ, ಎಚ್ಚರವಿರಲಿ, ಅದರಿಂದ ಇಲ್ಲಿಗೆ ಬರುವ ಭಕ್ತಾದಿಗಳಿಗಷ್ಟೇ ಆಹಾರವಾಗಬೇಕು, ತಿಳಿಯಿತೇ ಶಿಷ್ಯರುಗಳಾ?” ಅಷ್ಟು ಮಾತಾಡಿ ಇನ್ನಷ್ಟು ಆಯಾಸಪಟ್ಟು ನಿತ್ರಾಣರಾಗಿ ಮತ್ತೆ ಮೊಗ್ಗಲು ಮಲಗಿದರು ಮಠಾಧೀಶರು. ಒಂದು ಕ್ಷಣ ನಿಶ್ಶ ಬ್ಧ. ಮ೦ಕ, ಮರುಳ, ಮಡೆಯ, ಶು೦ಠ ಎಲ್ಲರು ಎಂದು ಕಾಣದ ಹಸಿವಿನಿಂದ ಮತ್ತಷ್ಟು ನರಳಿದರು. ಗುರುವಾಜ್ಞೆ ಮೀರುವಂತಿರಲಿಲ್ಲ. ಮಡೆಯ ಸ್ವಲ್ಪ ಹೊತ್ತು ಸುಮ್ಮನಿದ್ದು ಎಲ್ಲರಿಗು ಸಣ್ಣ ಧ್ವನಿಯಲ್ಲಿ ಹೇಳಿದ “ಆ ಗ್ರಾಸ ಪುಢಾರಿಯನ್ನು ಗೆಲ್ಲಿಸಲು ಜನರಿಗೆ ವೋಟು ಹಾಕುವಂತೆ ಪುಸಲಾಯಿಸಲು ಮಠಕ್ಕೆ ಕೊಟ್ಟ, ಲಂಚ. ಆ ಪುಢಾರಿ ಸರ್ಕಾರಿ ಹಣವನ್ನ ಸೂರೆಮಾಡಿದವನು, ಅವನಿ೦ದ ಏನು ಪಡೆದರೂ ನಮ್ಮ ಮಠದ ನೀತಿ, ನಿಯಮಗಳನ್ನು ಹರಾಜಿಗೆ ಹಾಕಿದಂತೆ. ಆ ಕಾರಣಕ್ಕೆ ಗುರುಗಳು ಭಕ್ತಾದಿಗಳಿಗೆ ವಿನಿಯೋಗವಾಗಲಿ, ಅದು ಏನಿದ್ದರೂ ಜನಗಳಿಗೇ ಸೇರಿದ್ದು. ನಾವು ಸ್ವೀಕರಿಸಿದರೆ ಅವನ ಎಂಜಲು ಕಾಸಿಗೆ ಕೈ ಒಡ್ಡಿದಂತಾಗುತ್ತದೆ, ಅವನ ಪ್ರಚಾರಕ್ಕೆ ಗುರುಗಳಂತೂ ಏನೇ ಕೊಟ್ಟರು ಹೋಗುವವರಲ್ಲ. ಇನ್ನು ಅಶೀರ್ವಾದ ಯಾರಿಗೆ?” ಮಠದ ವಾತಾವರಣದಲ್ಲಿ ಸ್ಮಶಾನ ಮೌನ ಮೂಡಿತ್ತು. ಸಂಜೆ ಸೂರ್ಯನೂ ‘ಅಯ್ಯೋ’ ಎನ್ನುವಂತೆ ನಿಧಾನವಾಗಿ ಪಶ್ಚಿಮ ದಿಗಂತವನ್ನ ಸೇರುತ್ತಿದ್ದ. ——-
Comments