-ಜಂಗಮ ಪೇಟ ಪೆದ್ದುಲ ಗೋವಿಂದಯ್ಯ ಹಾಗು ಕುಮಾರಿ ಸುವರ್ಣಸುಂದರಿ ಇವರುಗಳಿಗೆ ರಂಗನಾಥಪುರ ಸಂಕಟೇಶಯ್ಯ ಕೊಡುತ್ತಿರುವ ಲೀಗಲ್
- haparna
- May 31, 2017
- 3 min read
————————————————————– -ಜಂಗಮ ಪೇಟ ಪೆದ್ದುಲ ಗೋವಿಂದಯ್ಯ ಹಾಗು ಕುಮಾರಿ ಸುವರ್ಣಸುಂದರಿ ಇವರುಗಳಿಗೆ ರಂಗನಾಥಪುರ ಸಂಕಟೇಶಯ್ಯ ಕೊಡುತ್ತಿರುವ ಲೀಗಲ್ ಪೂರ್ವಭಾವೀ ನೋಟೀಸ—- ————————————————————– ಮಾವೇರಿ ತಾಲೂಕ, ಉಪ್ಪಿನಗಂಗಾಪುರ ಹೋಬಳಿ, ಬೊಮ್ಮನ ಹಳ್ಳಿ ಗ್ರಾಮದಲ್ಲಿ ಜನಿಸಿ, ಇದೀಗ ರಂಗನಾಥಪುರ ನಿವಾಸಿಯಾದ ಪೇರಳೆ ಮುದ್ದೇಶಪ್ಪ ಸಂಕಟೇಶಯ್ಯ –ಇವರು ಈ ದಿನ ದುರ್ಮುಖಿ ಸಂವತ್ಸರದ ಜ್ಯೇಷ್ಠ , ಶುದ್ಧ, ಅಷ್ಟಮಿ, ಭಾನು ವಾರ, ಅಂದರೆ ಕ್ರಿ. ಶಕ ……ರಂದು ಈ ಕೆಳಗೆ ಕಾಣಿಸಿದ— -೧. ಹಿರೇಕೆರೂರು, ಪೈಲ್ವಾನ್ ಜಗ್ನಾರಾಯಣ್ ದೋಢಾ ಗಲ್ಲಿ ಅಮಲ್ದಾರ್ ಅಂಬುಜಮ್ಮ ವಠಾರದ ೨೭ನೇ ನಂ. ಗೃಹದಲ್ಲಿ ವಾಸಿಸುತ್ತಿರುವ ಹಾಗು ಜಂಗಮ ಪೇಟೆ ಗೋವಿಂದಪ್ಪ ಬಡಾವಣೆಯಲ್ಲಿ ‘ನವಜೀವನ ಪೈಲ್ಸ್ಅಂಡ್ ಪಿಸ್ತುಲಾ ಮತ್ತು ಮೂರ್ಛೆ ರೋಗ ಚಿಕಿತ್ಸ ಕ್ಲಿನಿಕ್ ‘ನಡೆಸಿಕೊಂಡು ಬರುತ್ತಿರುವ ನಾಮಾ ಬಂಗಾರು ಪದುಮನಾಭ ಶೆಟ್ಟಿ ಕುಮಾರ ಪೆದ್ದುಲ ಗೋವಿಂದಯ್ಯ ಹಾಗೂ ಆವರ ಹಿರೇಮಗಳಾದ ೨. ಮುದ್ದುಲ ಸಿಂಗಾರಿ ಉರ್ಫ಼ ಸುವರ್ಣಸುಂದರಿ ಬಿನ್ ರಂಗನಾಯಕಿ – ಅವರೆಲ್ಲೇ ಇದ್ದರೂ- ಅವರಿಗೆ ಕೊಡುತ್ತಿರವ ಈ ನ್ಯಾಯಾಧಿಕರಣ ಪೂರ್ವ ಭಾವಿ ನೋಟೀಸ್ ಪ್ರಕಾರ ನಾನು ಖಡಾಖ೦ಡಿತವಾಗಿ ಹೇಳಬಯಸುವದೇನೆಂದರೆ – —–1. ನಾನು ಸಂಕಟೇಶಯ್ಯ ಹಾಗು ಮೇಲೆ ಹೇಳಿದ ಮುದ್ದುಲ ಸಿಂಗಾರಿ ಉರ್ಫ಼ ಸುವರ್ಣಸುಂದರಿ ಇಬ್ಬರೂ ಸುಮಾರು ಮೂರು-ನಾಲ್ಕು ವರುಷಗಳಿಂದ ನಮ್ಮ ಬಿ. ಎ. ಡಿಗ್ರಿಗಾಗಿ ಹಿರೇಕೆರೂರಿನ ಒಂದೇ ಕಾಲೇಜಿನಲ್ಲಿ ಓದುತ್ತಿರುವರಾಗಿದ್ದು, ಕಡೆ ಎರಡು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸಿ, ಒಬ್ಬರೊನ್ನಬ್ಬರು ಗಾಢ ಪ್ರೇಮದಿಂದ ಕ್ಷಣವೂ ಬಿಟ್ಟಿರಲಾಗದಂಥ ಸ್ಥಿತಿಯಲ್ಲಿದ್ದವೆಂಬುದು ನಮಬ್ಬಿರ್ಗೆ ಅಲ್ಲದೆ ಆಕೆಯ ತಂದೆಯ ಸ್ಥಾನದಲ್ಲಿರುವ ಗೋವಿಂದಯ್ಯ ಹಾಗು ಇಡೀ ನಮ್ಮಕಾಲೇಜು ಸಮುದಾಯಕ್ಕೆ ಅರ್ಥಾತ ಇಡೀ ಊರಿಗೆ ಗೊತ್ತಿರುವ ಸಮಾಚಾರ. 2. ಇದೇ ಕಾರಣಕ್ಕೆ ನಾನು ನನ್ನ ವಿದ್ಯಾಭ್ಯಾಸದಲ್ಲಿ ಏರುಪೇರಾಗಿ, ಅವಳ ಸಂಗಕ್ಕಾಗಿ, ಹಾಗೂ ಅವಳಿಗೆ ಸಹಾಯ ಮಾಡಲು ಎಲ್ಲೆಲ್ಲಿ ಸಿಕ್ಕಿದ ನೋಟ್ಸಗಳು, ಪುಸ್ತಕಗಳನ್ನು ಕೊಡಿಸುವದರಲ್ಲಿ ನಿರತನಾಗಿ ಸ್ವಯಂ ಪರೀಕ್ಷೆಗಳಲ್ಲಿ ಎರಡೆಡು ಬಾರಿ ಡುಮಕಿ ಹೊಡೆದಿದ್ದು ನನ್ನ ಪ್ರೇಮ ಅವಳಲ್ಲಿ ಯಾವ ಲೈಲಾ ಮಜನು, ಸೋನಿ ಮಹಿವಾಲ್, ದೇವ್ದಾಸ್ ಪಾರ್ವತಿಯರ ಮಟ್ಟಕ್ಕೆ ಕಡಿಮೆಯಿಲ್ಲವೆಂದು ಅಕ್ಷರಶ: ತೋರಿಸಿಕೊಟ್ಟಿದ್ದೇನೆ. ನಾನು ನಮ್ಮ ಹಿರಿಯರಿಂದ ಹಣ ತರಿಸಿಕೊಂಡು ಇವಳಿಗಾಗಿ ಕಂಡ ಕಂಡ ಹೋಟೆಲು, ಸಿನೆಮಾ, ವಿಹಾರ ಇತ್ಯಾದಿಗಳಿಗೆ ಅವಳನ್ನು ಮೆಚ್ಚಿಸಲು ಮಾಡುತ್ತಾ ಬಂದಿರುವುದು ಅವಳಿಗೂ ಅವಳ ಅಪ್ಪನಿಗೂ ನನ್ನ ಒಡನಾಡಿ ಸ್ನೇಹಿತರುಗಳಿಗೂ ತಿಳಿದಿರುವ ವಿಷಯ. ಅವಳಿಗೆ ಬಹಳವೇ ಪ್ರಿಯವಾದ ಚಾಕೊಲೇಟ್ ಐಸ್ಕ್ರೀಮ್, ಜಾ೦ಗೀರ್, ಹಾಗು ಬಾದುಷಾ ಇತ್ಯಾದಿ ನಾನು ಕೊಡಿಸಿರುವುದನ್ನುಲೆಕ್ಕ ಹಾಕುವುದು ಸಭ್ಯತೆ ಆಲ್ಲವೆಂದು ಈ ಮೂಲಕ ಹೇಳಬಯುಸುತ್ತೇನೆ. ಇನ್ನೂ ಒಂದು ಮುಖ್ಯವಿಷಯವೆಂದರೆ ಅವಳನ್ನು ಕೆಣಕಿ ಗೋಳಾಡಿಸಿ ಹಿಂಸಿಸಲು ಅನೇಕ ರೌಡಿಗಳ ಗುಂಪೇ ಅವಳ ಹಿಂದೆ ಬಿದ್ದಾಗ ನಾನು ಅವಳಿಗೆ ಗೋಡೆಯಾಗಿ ನಿಂತು ಅವರುಗಳಿಂದ ಬಚಾಯಿಸಿದ್ದೇನೆ. ಹಾಗೆಂದು ನಾನೇನು ಅಮಿತಾಬ್ ಬಚ್ಚನ್ ಎಂದು ಎದೆ ತಟ್ಟುಕೊಳ್ಳುತ್ತಿಲ್ಲ, ಆದರೆ ಒಬ್ಬ ಭಾರತದ ಸತ್ಪ್ರಜೆಯಾಗಿ ನನ್ನ ಪ್ರಥಮ ಕಾರ್ಯ ಅದೇನೆಂದು ನಿರ್ವಹಿಸಿದ್ದೇನೆ. ಇದು ಅವಳಿಗಾಗಲಿ ಅವಳ ಮುದ್ದಿನ ಅಪ್ಪನಿಗಾಗಲಿ ತಿಳಿದಿರಲೇಬೇಕಾದ ವಸ್ತುನಿಷ್ಟ ವಿಷಯ. ನಾವಿಬ್ಬರು ಒಂದು ಬಾರಿ ನಮ್ಮದು ಅಮರ ಪ್ರೇಮವೆಂದು ಹೇಳಿ ನನ್ನ ಕೈಯ್ಯಲ್ಲಿ ಅವಳ ಹೆಸರನ್ನು ಆಕೆಯೇ ಹಚ್ಚೆ ಹಾಕಿಸಿದ್ದು ಈಗಲೂ ಎದ್ದುಕಾಣುತ್ತಿದೆ. 3. ಕಳೆದ ವರುಷ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದೇನೆ. ದೈವೇಚ್ಛೆ ಜೊತೆಗೆ ಮಾನವ ಕೃತ ಕೃತಕ ಸನ್ನಿವೇಶಗಳಿಂದಾಗಿ ನಾನು ಜರ್ಜಿತನಾಗಿದ್ದೇನೆ. ನನ್ನ ತೀರ್ಥರೂಪರು ನನ್ನ ವಿದ್ಯಾಭ್ಯಾಸ ಸರಿಯಾಗಿ ನಡೆಯಿಲಿ ಲ್ಲವೆ೦ಬ ಕೊರಗು ಜೊತೆಗೆ ನನ್ನ, ಇವಳ ಪ್ರೇಮ ಪ್ರಸಂಗ ಅವರಿಗೆ ವಿಕೃತವಾಗಿ ತೋರಿ ಅದೇ ದು:ಖದಲ್ಲಿ ದೈವಾಧೀನರಾದದ್ದಲ್ಲದೆ ನಮ್ಮ ಕುಟುಂಬದ ಆಸ್ತಿ ವಿತರಣೆಯಾಗಿ ನನ್ನ ಪಾಲಿಗೆ ಏನು ದೊರೆಯಿಲ್ಲವೆಂಬ ವಿಷಯ ನನಗೆ ವ್ಯಸನಕ್ಕೆ ತಳ್ಳಿದ್ದು, ಅದನ್ನೇ ನನ್ನ ಪ್ರೇಮಿಯೆಂದು ತಿಳಿದಿದ್ದ ಸುವರ್ಣ ಸುಂದರಿಗು ತಿಳಿದು ನನ್ನಿಂದ ದೂರವಾಗಿದ್ದಾಳೆ. ಆಕೆ ಎಲ್ಲ ಪರೀಕ್ಷೆಗಳಲ್ಲೂ ಹೆಚ್ಚು ಅಂಕಗಳನ್ನು ಪಡೆದು ಇದೀಗ ಹೆಚ್ಚಿನ ವ್ಯಾಸಂಗಕ್ಕೆ ಬೇರೆಯೇ ವಿದ್ಯಾಲಯ ಆರಿಸಿ ಹೋಗಿದ್ದಾಳೆ, ಹೋಗಲಿ, ಸಂತೋಷದ ವಿಷಯ. ಆದರೆ ನಾನು ಮತ್ತೆ ಮತ್ತೆ ಅದೇ ಹಳೆ ಕಾಲೇಜಿನಲ್ಲೇ ‘ಶತಾಯ ಗತಾಯ’ ಎನ್ನುವಂತೇ ಇದ್ದಲ್ಲೇ ಇದ್ದು ನನ್ನ ಬಾಳು ಕತ್ತಲಾಗಿದೆ. ‘ಗಾಯದ ಮೇಲೆ ಬರೆ’ ಎನ್ನುವಂತೆ ಇದೀಗ ಆಕೆ ನನ್ನ ನೋಡಿ ಮಾತಾಡಿಸುವುದಿರಲಿ, ಎದುರಿಗೆ ಸಿಕ್ಕರೆ ನನ್ನ ಪರಿಚಯವೇ ಇಲ್ಲದಂತೆ ನಟಿಸಿ ಹೋಗುತ್ತಾಳೆ, ಜೊತೆಗೆ ಬೇರೆ ಬೇರೆ ಹುಡುಗರೊಡನೆ ಜಾಲಿಯಾಗಿ ಸುತ್ತುತ್ತಾ ಅವರೊಡನೆ ವಿಹಾರ ಚಕ್ಕಂದ ಮಾಡಿಕೊಂಡು ನನ್ನನ್ನ ಧೂಳಿಗೂ ಸಮವಲ್ಲವೆನ್ನುವಂತೆ ಹೋಗುತ್ತಾಳೆ. ನಾನೇ ಮಾತಾಡಿಸಲು ಹೋದರು “ಸಾರಿ, ನೋ ಟೈಮ್” ಎಂದು ನಿಲ್ಲದೆ ಹೋಗೇ ಬಿಡುತ್ತಾಳೆ. ಅವಳ ಅಪ್ಪನ ಬಳಿ ಮಾತಾಡಲು ಹೋದರೆ, ಆತ ನನ್ನ ಅವನ ಮನೆಯಿಂದ ‘ನನಗು ಅವಳಿಗೂ ಈ ಬಾಬತ್ತು ಏನೂ ಸಂಬಂಧವಿರುವುದಿಲ್ಲ, ಆಕೆಯ ತಂಟೆಗೆ ಹೋಗುವುದಾಗಲೀ, ಅಪಪ್ರಚಾರ ಮಾಡುವುದೇ ಆಗಲಿ ಕಂಡುಬಂದರೆ ಪೊಲೀಸರನ್ನು ಕರೆಸುತ್ತೇವೆ, ಅಲ್ಲದೆ ಗೂಂಡಾಗಳನ್ನು ಕರೆಸಲು ಹೆದರುವುದಿಲ್ಲ’ ಎಂದೆಲ್ಲ ದಬಾಯಿಸಿ ನನ್ನ ಅವನ ಮನೆಯಿಂದ ನಾಯಿಯನ್ನು ಹೊಡದಟ್ಟಿ ದಂತೆ ಮಾಡಿ ಅವಮಾನಿಸಿದ. ಇಷ್ಟೆಲ್ಲಾ ಅಪಮಾನ ನುಂಗಿ ಅವಳಿಗೆ ಪ್ರೇಮ ಭಿಕ್ಷೆ ಬೇಡಿ ಕಾಗದ, ಮಿಂಚಂಚೆ ಮೂಲಕ ಕಳುಹಿಸಿದರೆ ಆಕೆ ಎಲ್ಲವನ್ನು ತಿರಸ್ಕರಿಸಿ, ನೀನು ನನಗೆ ಯಾವ ಮಿತ್ರನು ಅಲ್ಲ, ನನ್ನ ತಂಟೆಗೆ ಬಂದರೆ ಆಗುವ ಮುಂದಿನ ಪರಿಣಾಮಗಳಿಗೆ ನಾವು ಕಾರಣರಲ್ಲ ಎಂದು ಉತ್ತರಿಸಿದ್ದಾಳೆ. ಅನೇಕ ಬಾರಿ ಎದುರು ಬಂದಾಗ, ಉದ್ದೇಶವಾಗಿ ನನ್ನ ಅವಮಾನಿಸಲೆಂದೇ ತನ್ನ ಸ್ನೇಹಿತರೊಡಗೂಡಿ ಅಪಮಾನಕರ ಮಾತುಗಳಿಂದ ನಿಂದಿಸಿ, ಜರೆದು ಕೀಟಲೆ ಮಾಡಿರುವದುಂಟು. ಅದಕ್ಕೆ ನನ್ನ ಬಳೀ ಸಾಕ್ಷಾಧಾರಗಳು ಇರುವುದುಂಟು. ನನ್ನನ್ನು ಅವಮಾನಿಸಲೆಂದೇ ತನ್ನ ಒಡನಾಡಿಗಳ ಹೆಗಲಮೇಲೆ ಕೈ ಹಾಕಿ ರಾಜಾರೋಷವಾಗಿ ಕಾಫಿ ಕ್ಲಬ್ಬು, ಲೈಬ್ರರಿ, ತರಗತಿಗಳ ಕಾರಿಡಾರುಗಳಲ್ಲಿ ಓಡಾಡುತ್ತಿರುತ್ತಾಳೆ. 4. ಇದೀಗ ನಾನು ಎಲ್ಲವನ್ನು ಕಳೆದುಕೊಂಡು ಪ್ರೇಮದಿಂದಲೂ ವಂಚಿತನಾಗಿದ್ದೇನೆ. ನನ್ನ ಸುತ್ತಮುತ್ತಲು ಬರಿ ವ೦ಚಕರೇ ಇರುವರೋ ಅನಿಸುತ್ತದೆ. ನನಗೆ ಜೀವನ, ಬಾಳು ಅಹಸ್ಯವಾಗಿ ತೋರುತ್ತಿದೆ, ಅವಳಿಲ್ಲದ ಬಾಳು ನನಗೆ ಶೂನ್ಯ. ಆದ್ದರಿಂದ ನನಗೆ ಉಳಿದಿರುವ ದಾರಿ ಒಂದೇ. ನ್ಯಾಯಾಲಯದ ಮೆಟ್ಟಲು. ಆದರೆ ಅಲ್ಲಿ ಏನೇನು ಯಾವ ಯಾವ ರೀತಿ, ಹೇಗೆ ಅದೆಷ್ಟು ವರುಷಗಳಿಗೆ ತೀರ್ಮಾನವಾಗುವುದೋ, ತಿಳಿಯದಾಗಿ ನಾನು ಈ ಕೆಳಗೆ ಕಂಡ ರೀತಿ ತೀರ್ಮಾನಕ್ಕೆ ಬಂದಿದ್ದೇನೆ: ೧. ನನಗಾದ, ಖರ್ಚು, ವೆಚ್ಚ ಮಾನಸಿಕ ವ್ಯಥೆ, ಆರೋಗ್ಯ ನಷ್ಟ (ಇದೀಗ ನಾನು ಯೋಚಿಸಿ ಯೋಚಿಸಿ, ಊಟ ತಿಂಡಿ ಇತ್ಯಾದಿ ಎಲ್ಲ ಸರಿಯಾಗಿ ಮಾಡಲಾಗದೆ ಕೆಮ್ಮು, ದಮ್ಮು, ಉಸಿರಿನ ತೊಂದರೆ ಇತ್ಯಾದಿ) ದಿನೇ ದಿನೇ ಕೆಡುತ್ತಿದ್ದು , ಅದರಿಂದಾಗುವ ಎಲ್ಲ ನಷ್ಟಗಳಿಗೂ ಇವಳು, ಇವಳ ಅಪ್ಪನು ಕಾರಣರಾಗಿ, ಮುಂದಾಗುವ ಅನಾಹುತಗಳಿಗೆ ಆವರಿಬ್ಬರೇ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂಬ ವಿಷಯ ಈ ನೋಟಿಸ್ ಮುಖೇನ ತಿಳಿಯ ಪಡುಸುತ್ತಿದ್ದೇನೆ. ಮುಂದೆ ನ್ಯಾಯಸ್ಥಾನದಲ್ಲಿ ಇವರುಗಳು ಕಡ್ಡಾಯವಾಗಿ ಹಾಜರಾಗಬೇಕಾದ ಸಂಧರ್ಭಕ್ಕೆ ಕಾರಣರಾಗುತ್ತಾರೆ. ೨. ನನ್ನ ಆರೋಗ್ಯ ಪೂರ ಕೆಟ್ಟು, ನನ್ನ ಮಾನಸಿಕ ಪರಿಸ್ಥಿತಿ ಹದಗೆಟ್ಟು ನಾನು ಆತ್ನಹತ್ಯೆ ಮಾಡಿಕೊಂಡಿದ್ದೆ ಆದರೆ ಅದಕ್ಕೆ ಇವಳೇ ಕಾರಣವಲ್ಲದೇ ಬೇರೆ ಯಾರು ಅಲ್ಲ ಎಂದು ಈ ನೋಟೀಸ್ ಮೂಲಕ ಗಂಟಾಘೋಷವಾಗಿ ತಿಳಿಸಬಯುಸುತ್ತೇನೆ. ೩. ಮುಂದೆ ಕೋರ್ಟಿನಲ್ಲಿ ವಿಚಾರಣೆ ನಡೆದು ನನ್ನ ಪರವಾಗಿ ತೀರ್ಪು ಬಂದು, ಕೋರ್ಟ್ ಮೂಲಕ ಕಟ್ಟಿಕೊಡಬೇಕಾದ ಖರ್ಚು ವೆಚ್ಚ ಇತ್ಯಾದಿಗಳಿಗೆಲ್ಲ ಇವರಿಬ್ಬರೇ ಕಾರಣರಲ್ಲದೆ ಮತ್ತ್ಯಾರು ಆಗಿರುವುದಿಲ್ಲವೆಂದು ಈ ನೋಟಿಸ್ ಮೂಲಕ ಖಡಾಖಂಡಿತವಾಗಿ ತಿಳಿಸಬಯುಸುತ್ತೇನೆ. ಸಂಬಂಧ ಪಟ್ಟವರೆಲ್ಲ ಈ ಮೂಲಕ ತಿಳಿದಿರುವಂತವರಾಗಲಿ. —–.ರಂ .ಪೇ. ಮು. ಸಂಕಟೇಶಯ್ಯ. ವಿಷಯ ಸೂಚನೆ: ಈ ಪತ್ರವನ್ನ ಓದಿ, ಇಂದಿಗೆ ಸರಿಯಾಗಿ ಹದಿನೈದು ದಿನಗಳೊಳಗೆ ನಿಮ್ಮಿಂದ ಯಾವ ಜವಾಬು ಬರದಿದ್ದ ಪಕ್ಷದಲ್ಲಿ ಮತ್ತೆ ಯಾವ ಪೂರ್ವಭಾವೀ ಸೂಚನೆಯಿಲ್ಲದೆ ಮುಂದಿನ ಕ್ರಮ ಜರುಗಿಸಿ, ನಿಮ್ಮಿಂದ ಆದ ಮಾನನಷ್ಟ ಮತ್ತಿತರೆ ಅಕ್ರಮ ನಡುವಳಿಕೆಗಳಿಗೆ ಸೂಕ್ತ ನ್ಯಾಯ ಕೋರ್ಟ್ ಮೂಲಕ ಪಡೆಯಲು ನಾನು ಹಿಂಜರೆಯುವುದಿಲ್ಲ ಮತ್ತು ಯಾವುದೇ ರಾಜೀ ಸೂತ್ರಗಳಿಗೆ ಒಪ್ಪುವುದಿಲ್ಲ ಎಂದು ಈ ಮೂಲಕ ತಿಳಿಸಬಯುಸುತ್ತೇನೆ.
Kommentare