ಚಿರ ನೂತನ, ಜ್ವಲಂತ ಚೇತನ, ಕನ್ನಡಿಗರ ಕಣ್ಮಣಿ-ಅ.ನ.ಕೃ
- haparna
- Aug 8, 2016
- 5 min read
ಚಿರ ನೂತನ, ಜ್ವಲಂತ ಚೇತನ, ಕನ್ನಡಿಗರ ಕಣ್ಮಣಿ-ಅ.ನ.ಕೃ. ಲೇಖಕ: ಎಚ್. ಆರ್. ಹನುಮಂತ ರಾವ್, ವಿಜಯನಗರ, ಬೆಂಗಳೂರು. ಈ-ಮೇಲ್: hrhrau@gmil.com ಆ. ನ. ಕೃ. –ಕನ್ನಡವೇ ಉಸಿರಾಗಿ, ಕನ್ನಡಕ್ಕಾಗಿಯೇ ದುಡಿದು, ಇಡೀ ಕರ್ನಾಟಕವೆಲ್ಲಾ ಸುತ್ತಿ,ಎಲ್ಲೆಡೆ ಕನ್ನಡಿಗರಲ್ಲಿ ಕನ್ನಡದ ಕಿಚ್ಚನ್ನು ಹೊತ್ತಿಸಿ, ಕನ್ನಡ ಭಾಷೆಯ ಮೇಲೆ ಆದರದ, ಆಭಿಮಾನದ, ಸ್ವಾಭಿಮಾನದ, ಮಾತೃ ಛಾಯೆಯನ್ನು ಬಿತ್ತಿ, ಬೆಳಿಸಿದ, ಬಹುಮುಖದ, ಮಹಾನ್ ವ್ಯಕ್ತಿ –ಅರ್ಥಾತ್ -ಅರಕಲುಗೂಡು ನರಸಿಂಗರಾವ್ ಕೃಷ್ಣ ರಾವ್. ಈ ಮಹಾನ್ ವ್ಯಕ್ತಿ ತಾ.೯-೫-೧೯೦೮ರಂದು ಕೋಲಾರದಲ್ಲಿ ಅಲ್ಲಿಯ, ಸಬ್- ರಿಜಿಸ್ಟ್ರಾರ್ ಆಗಿದ್ದ ನರಸಿಂಗರಾಯರು ಮತ್ತು ಅವರ ಪತ್ನಿ ಅನ್ನಪೂರ್ಣಮ್ಮನವರ ಎರಡನೆ ಕುವರನಾಗಿ ಜನಿಸಿದರು. ಅಂಗ್ಲ ಭಾಷೆಯ ಮೇಲಿನ ವಿಪರೀತ ವ್ಯಾಮೋಹದಿಂದಾಗಿ ಕನ್ನಡವು ಅಳಿವಿನಂಚಿಗೆ ತಲುಪಿದ್ದಂತಹ ಅರ್ಧ ಶತಮಾನಕ್ಕೂ ಹಿಂದಿನ ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ, ಯಾರೂ ಮಾಡಲಾಗದಷ್ಟು ಬೆಟ್ಟದಂತಹ ಕೆಲಸವನ್ನು ಕೈಗೆತ್ತಿಗೊಂಡು ಜೀವನವಿಡೀ ಶ್ರಮಿಸಿದವರು, ಬಿ. ಎಂ. ಶ್ರೀ. ಹಾಗು ಅವರ ಶಿಷ್ಯ ಸಮುದಾಯ. ಈ ಮಹಾನುಭಾವರುಗಳ ಮೊಟ್ಟಮೊದಲ ಪಂಕ್ತಿಯಲ್ಲಿ ನಿಲ್ಲುವವರು ಧೀರೋದಾತ್ತ ವ್ಯಕ್ತಿತ್ವದ ಅ.ನ.ಕೃ. ಅವರು ತಮ್ಮದೇ ಜಾಡಿನಲ್ಲಿ, ತಮ್ಮದೇ ಸ್ವಶಕ್ತಿಯಿಂದ, ಸ್ವಯಂ ಪ್ರೇರಿತರಾಗಿ ಕನ್ನಡಕ್ಕಾಗಿ ಕಟಿ ಬದ್ಧರಾಗಿ, ಅಹೋರಾತ್ರಿ ಶ್ರಮಿಸಿದವರು. ಅರವತ್ತು-ಎಪ್ಪತ್ತರ ದಶಕದಲ್ಲಿ, ಅನ್ಯಭಾಷಿಗರಿಂದ ಬೆಂಗಳೂರಿನ ಜನರ ಸ್ವಾಭಿಮಾನಕ್ಕೆ ಹಾಗು ಕನ್ನಡ ಭಾಷೆಗೆ ಕುತ್ತುಂಟಾಗುತ್ತಿದ್ದಂತೆ ಕನ್ನಡಿಗರನ್ನು ನಿದ್ದೆಯಿಂದೆಬ್ಬಿಸಿ, ಕನ್ನಡದ ಕಿಚ್ಚನ್ನು ಹತ್ತಿಸಿ, ಬೀದಿ ಬೀದಿಗಳಲ್ಲಿ ಎಂ. ರಾಮಮೂರ್ತಿಯಂತಹ ಸೇನಾನಿ, ನಾಡಿಗೇರ ಕೃಷ್ಣರಾಯ ಮತ್ತಿತರರೊಡಗೂಡಿ ಸಭೆಗಳನ್ನು ಮಾಡಿದ್ದಲ್ಲದೆ, ಅನ್ಯರನ್ನು ಎಚ್ಚರಿಸಿ, ಅವರುಗಳ ಧೂರ್ತತೆಯನ್ನ,ಕೊಟ್ಟ ಹಿಂಸೆಯನ್ನು ಸಹಿಸಿಯೂ,ಕಟುವಾಗಿ ವಿರೋಧಿಸಿದವರು. ಕನ್ನಡದ ಭಾಷೆ ಹಾಗು ಜನರ ಮೇಲೆ ಇತರರ ದೌರ್ಜನ್ಯ ಮಿತಿಮೀರಿದಾಗಲೂ ಕಣ್ಣು ಮುಚ್ಚಿಕೊಂಡಿದ್ದ ಸರ್ಕಾರವನ್ನು ನಿದ್ದೆಯಿಂದ ಎಬ್ಬಿಸಿ ಕನ್ನಡ ನೆಲದಲ್ಲಿ ಜೀವಿಸುತ್ತಾ, ಕನ್ನಡದ ಅನ್ನವನ್ನೇ ತಿಂದು, ಕನ್ನಡ ಬಾಷೆಯನ್ನ, ಹಾಗು ಕನ್ನಡದವರನ್ನೇ ಅವಾಚ್ಯವಾಗಿ ಹೀಯಾಳಿಸುತ್ತಿದ್ದ ಅನ್ಯಭಾಷಿಗರನ್ನು, ಅಂತಹವರನ್ನು ಇಲ್ಲಿಗೆ ಕರೆತರುತ್ತಿದ್ದ ಉದ್ಯಮಿಗಳನ್ನು, ಅ.ನ.ಕೃ. ಮಾತಿನಲ್ಲೇ ಹೇಳಬೇಕೆಂದರೆ -ಪರ ಭಾಷಾ ದಲ್ಲಾಳಿಗಳು- ಅವರುಗಳನ್ನ ಎಚ್ಚರಿಸಿ, ಹದ್ದುಬಂದಿಗೆ ತಂದವರು. ಅಂದಿನ ನಿಷ್ಕ್ರಿಯ ಸರ್ಕಾರಕ್ಕೆ ಬುದ್ಧಿ ಕಲಿಸಿದ ಮಹಾನ್ ಹೋರಾಟಗರ. ಇಂದು,ದಂಡು ಪ್ರದೇಶದಂತಹ ಜಾಗದಲ್ಲಿ ಕನ್ನಡದ ನಾಮ ಫಲಕವನ್ನ ನಾವು ಕಾಣುತ್ತಿದ್ದೇವೆಂದರೆ, ಕನ್ನಡ ಪತ್ರಿಕೆಗಳು ಹೆಚ್ಚುಹೆಚ್ಚಾಗಿ, ಅಧಿಕ ಸಂಖ್ಯೆಯಲ್ಲಿ ಪ್ರಕಟವಾಗುತ್ತಿದೆಯೆಂದರೆ,ಅಂದು ಬೆರಳೆಣೆಕೆಯ ಸಂಖ್ಯೆಯಷ್ಟರಲ್ಲಿ ತಯಾರಾಗುತ್ತಿದ್ದ,ಅದೂ ಅಂದಿನ ಮದ್ರಾಸಿನ ಸ್ಟುಡಿಯೋಗಳಲ್ಲಿ, ರಾತ್ರಿಯ ಪಹಣಿಯಲ್ಲಷ್ಟೇ ಚಿತ್ರಗಳನ್ನ ತೆಗೆಯಬೇಕಾಗಿದ್ದ ಪರಿಸ್ಥಿತಿ ಬದಲಾಗಿ, ಇದೀಗ ಅಸಂಖ್ಯಾತ ಚಿತ್ರಗಳು ನಮ್ಮ ಕರ್ನಾಟಕದಲ್ಲಿಯೇ ತಯಾರಾಗಿ, ಹಲವಾರು ವಾಹಿನಿಗಳ ಮೂಲಕ ಇಡೀ ದೇಶದ ಮೂಲೆ ಮೂಲೆಗಳಲ್ಲಿ ಪ್ರಕಾಶಗೊಳ್ಳುತ್ತಿವೆಯೆಂದರೆ ಅದಕ್ಕೆ ಮೂಲ ಕಾರಣ, ಇವರ ನೇತೃತ್ವದಲ್ಲಿ ನಡೆದ ಅನೇಕ ಮಹಾನುಭಾವರುಗಳಗೊಂಡ ‘ಕನ್ನಡ ಚಳುವಳಿ’ ಯಷ್ಟೇ ಕಾರಣ ವೆನ್ನುವುದನ್ನ ಯಾರೂ ಅಲ್ಲಗೆಳೆಯಲಾರರು. ಕನ್ನಡಿಗರಲ್ಲಿ ಭಾಷಾ ಪ್ರಜ್ಞೆ ಹಾಗು ಚಳುವಳಿ ಎತ್ತ ಹೋಗುತ್ತಿದೆ ಎಂಬುದರ ವಾರ್ತೆಗೋಸ್ಕರವೂ, ಸ್ವಲ್ಪ ಕಾಲ ಮ. ರಾಮ ಮೂರ್ತಿಯವರ ಸಂಪಾದಕತ್ವದಲ್ಲಿ “ಕನ್ನಡ ಯುವಜನ” ಎಂಬ ವಾರ ಪತ್ರಿಕೆಯನ್ನೂ, ಅವರ ಅಕಾಲಿಕ ಮರಣವುಂಟಾಗುವವರೆಗೂ ನಡೆಸಿದ್ದುಂಟು. ಆ ದಿನಗಳಲ್ಲಿ, ಬೆಂಗಳೂರು ಮಟ್ಟಿಗೆ ಹೇಳುವುದಾದರೆ, ಕನ್ನಡ ಸಿನೆಮಾ ಮಾಡಿದರೂ ಆಗಿನ ಜೈ ಹಿಂದ್, ಭಾರತ್ ಹಾಗು ಹಿಮಾಲಯ ಸಿನೆಮಾ ಮಂದಿರಗಳನ್ನ ಬಿಟ್ಟರೆ ಬೇರೆಲ್ಲ ಮಂದಿರಗಳಲ್ಲಿ ತಮಿಳು, ತೆಲುಗು, ಹಿಂದಿ ಮತ್ತು ಅಂಗ್ಲ ಚಿತ್ರಗಳ ಪ್ರಾಬಲ್ಯವೇ ಜಾಸ್ತಿಯಾಗಿ, ಕನ್ನಡ ಸಿನೆಮಾಗಳ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡುತ್ತಿದ್ದುದು ಸಾಮಾನ್ಯವಿಷಯವಾಗಿತ್ತು. ಕನ್ನಡ ಚಿತ್ರಗಳು ಪರದೆಯ ಮೇಲೆ ಬರುತ್ತಿದ್ದುದೇ ಅಪರೂಪವಾಗಿದ್ದ ವೇಳೆಯಲ್ಲಿ ಇತರ ಭಾಷಾ ಚಿತ್ರಗಳು ತಮ್ಮ ಪ್ರಾಬಲ್ಯವನ್ನ ಮೆರೆದ್ದಿದು, ಕನ್ನಡಿಗರು ಇತರ ಭಾಷಾ ಚಿತ್ರಗಳನ್ನುನೋಡಬೇಕಾಗಿದ್ದು ಅನಿವಾರ್ಯವಾಗಿತ್ತು. ತಮಿಳರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದ ದಂಡು ಪ್ರದೇಶ ಹಾಗು ಶ್ರೀರಾಮ ಪುರದಲ್ಲಿ ಧೈರ್ಯವಾಗಿ ಸಭೆಗಳನ್ನು ನಡೆಸಿ, ಅಲ್ಲಿದ್ದ ಕನ್ನಡಿಗರನ್ನು ಎಚ್ಚರಿಸಿ ಧೈರ್ಯ ತುಂಬಿದ್ದವರು. ಇನ್ನು, ಆ ದಿನಗಳ ಸಂಗೀತ ಕಛೇರಿಗಳೇ ಆಗಲೀ, ಹಬ್ಬ ಹರಿದಿನಗಳ ಉತ್ಸವಗಳಲ್ಲೇ ಅಗಲೀ ಕಾರ್ಯಕ್ರಮಗಳಿಗಾಗಿ, ಕರ್ನಾಟಕದ ಪ್ರಸಿದ್ಧ ವಿದ್ವಾಂಸರುಗಳನ್ನು, ಕಲಾವಿದರನ್ನು ಕಡೆಗಣಿಸಿ, ಬೇರೆ ಪ್ರಾಂತ್ಯದವರಿಗೆ ಮಣೆ ಹಾಕಿ, ಅತಿ ಹೆಚ್ಚಿನ ಸಂಭಾವನೆಯನ್ನೂ, ಪ್ರಯಾಣ ಭತ್ಯೆಯನ್ನು ಕೊಟ್ಟು ಆಹ್ವಾನಿಸುತ್ತಿದ್ದುಂಟು. ಇದಕ್ಕೆಲ್ಲ ಇತಿಶ್ರೀ ಹಾಡಿಸಿದ್ದೂ ಈ ಚಳುವಳಿಯೆ.ಚಾಮರಾಜಪೇಟೆಯ ಒಂದು ಸುಪ್ರಸಿದ್ಧ ಸಂಗೀತ ಮಂಡಳಿಯಲ್ಲಿ ಇವರ ಬಂಧುವೇ ನೇತಾರರಾಗಿ ಕನ್ನಡಿಗ ವಿದ್ವಾಂಸರನ್ನು ಕಡೆಗಣಿಸಿ ಇತರರನ್ನು ಆಹ್ವಾನಿಸುತ್ತಿದ್ದಾಗ ಬೆಂಗಳೂರಿನ ಬೀದಿ ಬೀದಿ ಬಳಿಯ ಸಭೆಗಳಲ್ಲಿ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡು, ಸಾರಾಸಗಟಾಗಿ ಟೀಕಿಸಿ, ಬಹಿಷ್ಕಾರ ಹಾಕುವ ಬೆದರಿಕೆಯ ನಂತರ ಸಂಗೀತ ಕಚೇರಿಗಳಲ್ಲಿ ಕರ್ನಾಟಕದ ವಿದ್ವಾಂಸರಿಗೂ ಆತಿಥ್ಯ ಮಾಡುವ ಸತ್ಸಂಪ್ರದಾಯವನ್ನ ಬೆಳಸಲು ಕಾರಣರಾದರು. ಬೇರೊಬ್ಬರ ಪ್ರತಿಭೆಗೆ ಭಂಗತರದೆ, ಯೋಗ್ಯತೆಯಿದ್ದ ನಮ್ಮವರನ್ನು ಕಡೆಗಾಣಿಸಬಾರದೆಂಬುದು ಅವರ ವಾದವಾಗಿತ್ತು. ಆದರೆ ನಂತರದ ದಿನಗಳಲ್ಲಿ ‘ಚಳುವಳಿ’ಯು ಕಾವೇರುತ್ತಿದ್ದಾಗ,ಕೆಟ್ಟ ರಾಜಕಾರಣದಿಂದಾಗಿಯೋ ಅಥವಾ ಹಲವರು ಸ್ವಾರ್ಥಕ್ಕೆ,ರೌಡಿತನಕ್ಕೆ ತಿರುಗಿಸುತ್ತಿದ್ದುದ್ದನ್ನು ತಿಳಿದು ಬರುತ್ತಲೇ, ‘ತಾನೂ, ತಮ್ಮ ಸೇನಾನಿಗಳೂ ಈ ಚಳುವಳಿಯಲ್ಲಿ ಭಾಗವಹಿಸುವದಿಲ್ಲವೆಂದು ತುಂಬು ವ್ಯಥೆಯಿಂದ ಪತ್ರಿಕೆಗಳಲ್ಲಿ ಘೋಷಿಸಿ ದೂರವಾದರು.ಆದರೆ ಅಂದು ಅವರು ಹೊತ್ತಿಸಿದ ಕನ್ನಡದ ಕಿಚ್ಚು,ಜ್ಯೋತಿ-(‘ಹಚ್ಛೇವು ಕನ್ನಡದ ದೀಪ’)- ಇಂದಿಗೂ ಪ್ರಜ್ವಲಿಸಿತ್ತಿರುವುದನ್ನು ನಾವು ಇಂದು ಪತ್ರಿಕಾ ಹಾಗು ದೃಶ್ಯ ಮಾಧ್ಯಮಗಳು ಅಪಾರ ಸಂಖ್ಯೆಯಲ್ಲಿ ವಿಜೃಂಭಿಸುತ್ತಿರುವುದರ ಮೂಲಕ ಕಾಣುತ್ತಿದ್ದೇವೆ.ಒಂದೆಡೆ ಚಳುವಳಿಗೆ ಶಕ್ತಿ ತುಂಬುತ್ತಿದ್ದರೆ, ಇನ್ನೊಂದೆಡೆ ಸಾಹಿತ್ಯ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿದ್ದವರು. ಆ ದಿನಗಳಲ್ಲಿ ಹೆಚ್ಚಾಗಿ ಪೌರಾಣಿಕ ಕಥೆ/ಕಾವ್ಯ/ನಿರೂಪಣೆಗಳಿಗಷ್ಟೇ ಸೀಮಿತವಾಗಿದ್ದ ಕನ್ನಡ ಸಾಹಿತ್ಯವನ್ನು ಚಾರಿತ್ರಿಕ ಮತ್ತು ಸಮಕಾಲೀನ ಸಾಮಾಜಿಕ ಹಿನ್ನೆಲೆಯ, ವಾಸ್ತವಿಕ ಜೀವನದ ಕಥಾವಸ್ತು ಬಳಿಸಿ,ಬರೆದು,ಬೆಳೆಸುವದರಲ್ಲಿ ಮಾಸ್ತಿ ಮುಂತಾದ ಹಿರಿಯರ ಜೊತೆಗೆ ಕೈಗೂಡಿಸಿದರು. ಹಾಗೂ ಅಂದಿನ ಮದ್ಯಕಾಲೀನ ಸಾಹಿತ್ಯವನ್ನ ಪ್ರಗತಿಶೀಲ ಸಾಹಿತ್ಯದೆಡೆಗೆ ಮುನ್ನಡೆವಂತೆ ಮಾಡುವ ಚಳುವಳಿಗೆ ನೇತಾರರಾದವರು. ಅವರು ಕೈಯಾಡಿಸದ ಸಾಹಿತ್ಯ ಪ್ರಾಕಾರ ವಿಲ್ಲ. ಸಾಹಿತ್ಯವನ್ನೇ ಜೀವನಕ್ಕೂ ಅವಲಂಬಿಸಿದ್ದರಿಂದ ನಿರಂತರವಾಗಿ ಕಾದಂಬರಿಗಳನ್ನು ಬರೆಯುತ್ತಿದ್ದರು. ಹಾಗಾಗಿ ಹಲವರ ಕಣ್ಣುಗಳಿಗೆ ಇವರ ಬರವಣಿಗೆ ಕುಚೋದ್ಯಕ್ಕೆ ವಸ್ತವೂ ಆಗಿದ್ದಿದುಂಟು. ಹದಿನಾರು ವರುಷಕ್ಕೆ ಇವರ ಸಾಹಿತ್ಯ ಕೃಷಿ ಪ್ರಾರಂಭ. ಆವೇಳೆಗಾಗಲೇ ಆಂಗ್ಲ ಹಾಗು ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಓದಿ, ಅರಗಿಸಿಕೊಂಡು ಪಂಡಿತರಿಗೂ ಆಶ್ಚರ್ಯ ಹುಟ್ಟಿಸಿದವರು. ಒಂದು ರೀತಿಯಲ್ಲಿ ಇವರ ಸಾಹಿತ್ಯ ಜ್ಞಾನ ಸುಪ್ರಸಿದ್ಧ ಆಂಗ್ಲ ಬರಹಗಾರ ಸಾಮ್ಯುವೆಲ್ ಜಾನ್ಸನ್ ರನ್ನ ಜ್ಞಾಪಿಸುವಂತಿರುವುದು. ವಾಸ್ತವತೆ ಅದು ಎಷ್ಟೇ ಕಹಿಯಾಗಿರಲಿ, ಅದನ್ನ ಪ್ರತಿಬಿಂಬಿಸುವುದು ಬರಹಗಾರನ ಆದ್ಯ ಕರ್ತವ್ಯ. ಕಾರಣ, ಸಮಾಜದ ವಿವಿಧ ಸ್ತರಗಳ ಜನರ ನೈತಿಕತೆಯನ್ನು, ಸಮಾಜಕ್ಕೆ ಅವರುಗಳ ಸೇವೆಯನ್ನು ಉತ್ತಮವಾಗಿಸಲು ಬರಹಗಾರನು ಕೂಡ ಇತರರ ಜೊತೆಗೆ ಕೈಜೋಡಿಸುವುದು ಅನಿವಾರ್ಯ ಹಾಗು ಅವನ ಜವಾಬ್ದಾರಿಯೂ. ಗಾಜಿನ ಮನೆಯಲ್ಲಿ ಕೂತು ಸಾಹಿತ್ಯ ಸೃಷ್ಟಿಸುವವರು ಸತ್ಯದಿಂದ ದೂರವೇ ಆಗಬಲ್ಲರು. ಅನೈತಿಕತೆ ಹಾಗು ಅಥವಾ ಕುತ್ಸಿತ ಮನಸ್ಸಿನ ವಿಕೃತ ಪ್ರಚೋದನೆಗಳು ಸಮಾಜವನ್ನ ಹಾಳುಗೆಡುವುದರಲ್ಲಿ ಮುಖ್ಯ ಪಾತ್ರವಹಿಸುವುವು. ಇಂದು ಸಮಾಜದಲ್ಲಿ ನಾವು ಏನೇನು ಕೆಟ್ಟ, ಕುಕೃತ್ಯಗಳನ್ನು ದಿನವಹೀ ನೋಡುತ್ತಿದ್ದೇವೆಯೋ ಅವುಗಳೆಲ್ಲಾ ಈ ವಿಕೃತ ಮನಸ್ಸಿನ ದುಷ್ಪರಿಣಾಮಗಳು ತಾನೇ? ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ದಿಟ್ಟಿನಲ್ಲಿ, ಆಗಿನ ಸಮಾಜದಲ್ಲಿ ಆ.ನಾ.ಕೃ. ಇತರ ಬರಹಗಾರರಿಗೆ ಮೇಲ್ಪಂಕ್ತಿ ಯಾಗಿದ್ದಾರೆ. ಸಮಾಜದ ‘ಕ್ಷುದ್ರ ಜೀವನದ’ ಪ್ರಾಮಾಣಿಕ ಆದರೆ ಕಟು ಸತ್ಯ ವಿಚಾರಗಳನ್ನು ಅವರ ‘ಶನಿ ಸಂತಾನ, ನಗ್ನ ಸತ್ಯ, ಸಂಜೆಗತ್ತಲು, ಕಾಮಿನೀ , ಕಾಂಚನ’ ದಂತಹ ಕಾದಂಬರಿಗಳಲ್ಲಿ ಬರೆದು, ತೋರಿಸಿ ಸಮಾಜಕ್ಕೆ ಕನ್ನಡಿ ಹಿಡಿದರು. ಇಂತಹ ಅಸಹಜ ಆದರೆ ಕೀಳು ಜೀವನ ಸುಸಂಸ್ಕೃತರೆನಿಸಿಕೊಂಡವರಿಂದಲೂ ಕೂಡ ಕಣ್ಣೆದುರಿನಲ್ಲೋ ಅಥವಾ ಕದ್ದು ಮುಚ್ಚಿ ನಡೆಯುವುದನ್ನೋ ಹಾಗೆ ಬಿಟ್ಟರೆ, ಅದರಿಂದಾಗುವ ದುಷ್ಪರಿಣಾಮಗಳಿಗೆ ಸಮಾಜವೇ ಹೊಣೆಯಾಗುತ್ತದೆಂಬುದನ್ನು ಅರ್ಥವತ್ತಾಗಿ ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿದರು. ಇವರ ಸಮಕಾಲೀನರಾದ ಬಸವರಾಜ ಕಟ್ಟೀಮನೀ, ಗೋಕಾಕ, ಕಾರಂತ, ತ.ರಾ.ಸು., ಕೃಷ್ಣ ಮೂರ್ತಿ ಪುರಾಣಿಕ, ತ್ರಿವೇಣಿ, ಬೀಚಿ, ಚದುರಂಗರಂತಹ ಹಲವಾರು ಲೇಖಕರು ಇದೇ ರೀತಿಯಲ್ಲಿ ಸಮಾಜದ ಅನಿಷ್ಟದ ಆದರೆ ಕಟು ವಾಸ್ತವತೆಯನ್ನು ಬರೆದಿದ್ದು೦ಟು. ಆದರೆ, ಅ.ನ. ಕೃ. ಅವರ ಪ್ರಸಿದ್ಧಿಯನ್ನ ಹಾಗು ಜನರ ನಾಲಿಗೆಯಲ್ಲಿ ಯಾವಾಗಲೂ ಇವರ ಹೆಸರು ನುಲಿಯುತ್ತಿದ್ದ ಕಾರಣ ಮತ್ತು ಇವರ ಪುಸ್ತಕಗಳು ‘ದೋಸೆ’ಯಂತೆ ಖರೀದಿಯಾಗುತ್ತಿದುದೂ, ಜೊತೆಗೆ ಕನ್ನಡದ ಬಗ್ಗೆ ಕಿಂಚಿತ್ತಾದರೂ ಅವಹೇಳನ ಮಾತು ಯಾರಿಂದಲಾದರು ಬಂದರೆ, ಖಂಡತುಂಡವಾಗಿ ವಿರೋಧಿಸಿದ್ದರಿಂದ ಅವರುಗಳ ಅಸೂಯೆ ಹಾಗು ದ್ವೇಷಕ್ಕೆ ಕಾರಣರಾಗಿದ್ದರು. ಇಂತಹ ಹಲವು ಜನ ಅವರ ಮೇಲೆ ಹಗೆ ತೀರಿಸಿಕೊಳ್ಳಲು ಕಾಯುತ್ತಿದ್ದರು. ವೇಶ್ಯಾವಾಟಿಕೆಯ ಕಾದಂಬರಿಗಳಲ್ಲಿ ಚಿತ್ರಿಸಿದ ಲೈ೦ಗಿಕ ವಿವರಗಳಿಂದಾಗಿ ಅವರನ್ನು ನಿಂದಿಸಿ ‘ವಿಷಯ ಲೋಲಪ’, ‘ಕಾಮುಕ’, ‘ಯುವಕ, ಯುವತಿಯರನ್ನು ತಪ್ಪು ದಾರಿಗೆಳೆಯುತ್ತಿರುವ’ ಕೀಳು ದರ್ಜೆಯ ಸಾಹಿತಿಯೆಂದೆಲ್ಲ ನಿಂದಿಸಿದ್ದಲ್ಲದೆ, ಅಪಾದನೆ ಹೊರೆಸಿ, ನ್ಯಾಯಸ್ಥಾನಕ್ಕೂಎಳೆದರು. ಅವರ ಗೌರವ, ಪ್ರತಿಷ್ಟೆಗೆ ಸಲ್ಲದ ಕೆಟ್ಟ ಅಪಪ್ರಚಾರ ಮಾಡಿದರು. ಆದರೆ, ವಿಶ್ವದೆಲ್ಲೆಡೆಯ ಸಾಹಿತ್ಯ ಮತ್ತು ಜೀವನದ ಆಗು ಹೋಗುಗಳನ್ನು ಸ್ವಯಂ ಅಭ್ಯಸಿಸಿ, ಪಂಡಿತರ ಸಾಲಿನಲ್ಲಿ ನಿಲ್ಲಬಹುದಾದ ಮಹಾ ಜ್ಞಾನಿಯಾಗಿದ್ದ ಇವರು ಪಾಮರರಂತಲ್ಲದೆ, ಯಾವ ವಕೀಲರ ಸಹಾಯವು ಇಲ್ಲದೆ ತಮ್ಮ ಸ್ವಂತ ಪಾಂಡಿತ್ಯ ಪೂರ್ಣ ತರ್ಕ ಹಾಗು ಮೇಧಾವೀ ವಾಗ್ಝರಿಯಿಂದ ನ್ಯಾಯಸ್ಥಾನದಲ್ಲಿ ವಿಝೃಂಭಿಸಿದ್ದಲ್ಲದೆ, ನ್ಯಾಯವಾದಿಗಳ ಪ್ರಶಂಸೆಗೆ ಕೂಡ ಪಾತ್ರರಾಗಿ ಅಪಾದನೆಯಿಂದ ಮುಕ್ತಗೊಂಡರು. ಅಂದಿನ ಕಾಲದ ಬಡ, ಮಧ್ಯಮ ಕುಟುಂಬಗಳು ಅದೆಷ್ಟು ಕಷ್ಟ ಜೀವಿಗಳಾಗಿದ್ದರೆಂಬುದನ್ನು ಇವರಷ್ಟು ಅಮೂಲಾಗ್ರವಾಗಿ ಚಿತ್ರಿಸಿರುವುದು ಕೇವಲ ಬೆರಳೆಣಿಕೆಯಷ್ಟು ಮಂದಿ. ಇವರ ಮಾರ್ಗದರ್ಶನದಲ್ಲೇ ಅನೇಕ ಸಾಹಿತಿಗಳು ರೂಪಗೊಂಡರು. ಸುಪ್ರಸಿದ್ಧ ಹಾಸ್ಯ ಬರಹಗಾರರಾದ ಬೀಚಿ ಅವರ ಮೊಟ್ಟ ಮೊದಲ ಗ್ರಂಥ(ದಾಸಕೂಟ)ಕ್ಕೆ ಆ.ನ.ಕೃ ಮುನ್ನುಡಿ ಬರೆದು ಕೊಟ್ಟು ಆಶೀರ್ವದಿಸಿದ್ದರು. ಚಿತ್ರದುರ್ಗದ ಕೋಟೆಯ ಇತಿಹಾಸಕ್ಕೆ ಸಂಬಂಧ ಪಟ್ಟಂತೆ ಅನೇಕ ಐತಿಹಾಸಕ ಕಾದಂಬರಿಗಳನ್ನುಬರೆದು ಪ್ರಸಿದ್ಧರಾದ ತ.ರಾ.ಸು. ಇವರ ಅಭಿಮಾನಿಯಾಗಿದ್ದರಲ್ಲದೆ ಒಂದು ರೀತಿಯ ಗುರು-ಶಿಷ್ಯ ಸಂಬಂಧವನ್ನ ಬೆಳಸಿಕೊಂಡಿದ್ದರು. ಇವರ ಮನೆ “ಅನ್ನಪೂರ್ಣ”ನಿಜವಾಗಿಯೂ ಬಂದವರಿಗೆಲ್ಲ ಅನ್ನದಾತರಾಗಿ, ಸಾಹಿತಿಗಳ ಸಂಗಮ ಸ್ಥಳವು ಆಗಿದ್ದು, ಇವರ ಒಂದು ಕಾದಂಬರಿ ‘ಕನ್ನಡಮ್ಮನ ಗುಡಿ’ ಯ ಹೆಸರಿನಂತೆಯೇ ಆಗಿದ್ದುದನ್ನ ಇಂದಿಗೂ ಸ್ಮರಿಸುವವರಿದ್ದಾರೆ. ವಿದ್ವತ್ ಪಂಡಿತರು, ಸಾಹಿತಿ, ರಾಜಕಾರಣಿ ಎಂಬ ಬೇಧವಿಲ್ಲದೆ ಇವರ ಗೃಹ ‘ಅನ್ನಪೂರ್ಣ’ಎಲ್ಲರ ಭೇಟಿಯ ಸ್ಥಾನವಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಕಾರಣರಾದ ಅಗ್ರಜರಲ್ಲಿ ಇವರೂ ಒಬ್ಬರಾಗಿ ಅನೇಕ ವರುಷಗಳ ಕಾಲ ಪರಿಷತ್ತಿನ ‘ಕನ್ನಡ ನುಡಿ’ ಯ ಸಂಪಾದಕರಾಗಿದ್ದರು.ಇಡೀ ಭಾರತದಲ್ಲಿ ಹಾಗು ಹೊರಗೂ ಪ್ರಸಿದ್ಧಿಯಾಗಿದ್ದ ರಾಜ ರವಿವರ್ಮನ ಕಲಾ ಕೃತಿಗಳನ್ನು ಕೂಡ ಯಾವ ಪೂರ್ವಾಗ್ರಹವಿಲ್ಲದೆಯೂ, ಸತ್ಯ ನಿಷ್ಟೆಯಿಂದ ವಿಮರ್ಶಿಸಿ, ಟೀಕಿಸಿ ಹಲವರ ಆಗ್ರಹಕ್ಕೆ ಕಾರಣರಾಗಿದ್ದುದುಂಟು. ಹಲವು ಸಾಹಿತಿಗಳ ಕೆಟ್ಟ ರಾಜಕಾರಣದಿಂದಾಗಿ ಇವರಿಗೆ ಎಂದೋ ಸಿಗಬೇಕಾಗಿದ್ದ ಗೌರವ ಡಾಕ್ಟರೇಟ್ ಪ್ರಶಸ್ತಿ ಹಾಗು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಜೀವನಾವಧಿಯ ಕೊನೆಯ ಕಾಲದಲ್ಲಿ ಇವರ ಪಾಲಿಗೆ ಬಂದದ್ದು ವ್ಯಥೆಯ ವಿಷಯ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೂ ಕೊನೆಗಳಿಗೆಯಲ್ಲಿ ವಂಚಿತರಾದದ್ದು ಕನ್ನಡಿಗರ ದುರದೃಷ್ಟವೆಂದೇ ಹೇಳಬೇಕು. ಇವರ ಧೀರೋದಾತ್ತ ಗುಣಕ್ಕೆ ಒಂದು ನಿದರ್ಶನವೆಂದರೆ, ೧೯೨೯ರಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ. ಆದರ ಅಧ್ಯಕ್ಷ ಸ್ಥಾನದಿಂದ ಅಂದಿನ ಸುಪ್ರಸಿದ್ಧ ಕಾಂಗ್ರೆಸ್ ವಕ್ತಾರ, ಗಾಂಧಿಯವರ ಅನುಯಾಯಿ(ಲೋಕ ಸೇವಾ ಶಿಕ್ಷಣ ಟ್ರಸ್ಟ್’ದ ಪಿತೃ) ರಂ .ರಾ. ದಿವಾಕರ್(ಮುಂದೆ ಸ್ವಾತಂತ್ರ್ಯಾನಂತರ ಇವರು ಬಿಹಾರದ ರಾಜ್ಯಪಾಲರೂ ಆಗಿದ್ದರು) ಹಿಂದಿಯ ಪ್ರಚಾರದ ಬಗ್ಗೆ ಮಾತಾಡಿದ್ದನ್ನ ಕೃಷ್ಣರಾಯರು ಅದೇ ಸಾಹಿತ್ಯ ಪರಿಷತ್ತಿನ ಮುಖ ವಾಣಿ “ಕನ್ನಡ ನುಡಿ”ಯಲ್ಲಿ ಅದರ ಸಂಪಾದಕರಾಗಿ ಟೀಕಿಸಿ, ಖಂಡತುಂಡವಾಗಿ ತರಾಟೆಗೆ ತೆಗೆದುಕೊಂಡಿದ್ದರು. ರಾಷ್ಟ್ರೀಯ ನಾಯಕನಿಗೆ ಅಪಮಾನವಾಯಿತೆಂದು ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀ. ಇವರಿಗೆ ಕ್ಷಮಾಪಣೆ ಕೇಳುವಂತೆ ಆದೇಶಿಸಿದಾಗ ಪತ್ರಿಕೆಗೆ ರಾಜೀನಾಮೆ ಕೊಟ್ಟು ಹೊರಬಂದವರು. ಕನ್ನಡಕ್ಕಾಗಿ ಯಾವುದೇ ಅವಹೇಳನ ಇವರು ಸಹಿಸುತ್ತಿರಲಿಲ್ಲ. ಇವರು ಬರೆದ ‘ಕನ್ನಡಮ್ಮನ ಗುಡಿ’ ಕಾದಂಬರಿ ಕನ್ನಡದ ಬಗ್ಗೆ ಇವರಿಗಿದ್ದ ಕಳಕಳಿ, ಸ್ವಾಭಿಮಾನ, ಕಾಳಜಿ ಎತ್ತಿ ಹಿಡಿಯುತ್ತದೆ. ಇವರು ಅಂದಿನ ಕಾಲದ ವೃತ್ತಿ ನಾಟಕ ಸಂಸ್ಥೆಗಳು ತಮ್ಮತಮ್ಮಲ್ಲಿಯೆ ನಡೆಯುತ್ತಿದ್ದ ವೃತ್ತಿಪರ ಸ್ಪರ್ಧಾ ಮನೋಭಾವದಿಂದಲೂ,ಕಾಲ ಕಾಲಕ್ಕ ಬದಲಾಗುವ ಹವಾ ವೈಪ್ಯರೀತಿಯಿಂದಲೂ, ಕಲಾವಿದರನ್ನು ನಿಭಾಯಿಸಬೇಕಾದ ಕ್ಲಿಷ್ಟ ಪರಿಸ್ಥಿತಿಗಳಿಂದಲೂ ಅದೆಷ್ಟು ಕಷ್ಟ,ನಷ್ಟಗಳನ್ನು ಅನುಭವಿಸಿಯೂ ಮುನ್ನಡೆಸುತ್ತಿದ್ದುದನ್ನು ಇವರ ಮಹಾನ್ ‘ಮೇರು ಕೃತಿ’ಯಾಗಬಹುದಾದ ‘ನಟಸಾರ್ವ ಭೌಮ’ ಕಾದಂಬರಿಯಲ್ಲಿ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದಾರೆ.ಇವರ ಕಾದಂಬರಿಗಳು ‘ಸಂಧ್ಯಾರಾಗ, ಹುಲಿಯುಗುರು, ಕಾಗದದ ಹೂವು, ಗೃಹಲಕ್ಷ್ಮಿ’ ಸರ್ವಕಾಲಕ್ಕೂ ಅನ್ವಯಿಸುವಂತಹವು. ಇವರ ಬರವಣಿಗೆ ಬಹಳ ಸುಲಭವಾಗಿ, ಅತಿ ಶೀಘ್ರವಾಗಿ, ಓದುಗನ ಆಸಕ್ತಿ ಪುಟಪುಟಕ್ಕೂ ಹೆಚ್ಚುತ್ತಾ ಓದಿಸಿಕೊಂಡು ಹೋಗುತ್ತವೆ. ಆತರದ ಮೋಡಿಯನ್ನ ಇವರ ಪ್ರತಿಯೊಂದು ಬರವಣಿಗೆಯಲ್ಲೂ ನಾವು ಕಾಣಬಹುದು. ಆದರೆ ಇಂತಹ ಮಹಾನ್ ವ್ಯಕ್ತಿಗೆ, ಕನ್ನಡವೇ ತನ್ನ ಉಸಿರೆಂದು ಭಾವಿಸಿ, ಜೀವನವಿಡೀ ಕನ್ನಡಕ್ಕಾಗಿಯೇ ಬದುಕಿ, ಹೋರಾಡಿ ಜೀವನ ಸಾರ್ಥಕ್ಯ ಮಾಡಿಕೊಂಡ ಇವರಿಗೆ ನಮ್ಮ ಕನ್ನಡದ ಜನ, ಸರ್ಕಾರ ಏನು ಮಾಡಿದೆ? ಅವರು ಕಾಲವಶರಾಗಿ ನಲ್ವತ್ತೈದು ವರುಷಗಳೇ ಸಂದುಹೋಗಿವೆ. ಅವರ ಜ್ಞಾಪಕಾರ್ಥ ಇವರ ಒಂದೇ ಓಂದು ಪ್ರತಿಮೆಯನ್ನ ಎಲ್ಲಾದರೂ ಸ್ಥಾಪಿಸಿದ್ದೇವೆಯೆ? ಸ್ವಂತ ನೆಲೆ ‘ಅನ್ನಪೂರ್ಣ’ ಗೃಹ ಇವರು ಇಡೀ ಜೀವನವನ್ನ ಬಾಳಿ, ಕನ್ನಡಕ್ಕೆ ಮೀಸಲು ಮಾಡಿ ಹೋರಾಡಿದ ಈ ವ್ಯಕ್ತಿಯ ನೆನಪಿಗಾಗಿ ನಾವು,ನಮ್ಮ ಸರ್ಕಾರ ಈ ಗೃಹವನ್ನ ತನ್ನ ಅಧೀನಕ್ಕೆ ತೆಗೆದುಕೊಂಡು ಅದನ್ನೊಂದು ಚಾರಿತ್ರಿಕ ನೆಲೆಯ ಜ್ಞಾಪಕ ಶಾಲೆಯಾಗಿ ಮಾಡಿದೆಯೇ, ಎಂದಾದರು ಮಾಡುತ್ತದೆಯೇ? ಈ ಜನರಿಗೆ ಮಾಡುವ ಅಂತಹ ದೂರ ದೃಷ್ಟಿಯಾದರು ಇದೆಯಾ? —————————————————————————————————————–
Comments