ಗಾ೦ಪ ಮಠದಲ್ಲಿ ಮೌನ ಮೆರವಣಿಗೆ
- haparna
- Mar 24, 2017
- 4 min read
ಗಾ೦ಪ ಮಠದಲ್ಲಿ ಮೌನ ಮೆರವಣಿಗೆ ಲೇಖಕ: ಎಚ್. ಆರ್. ಹನುಮಂತ ರಾವ್, ಈ ಮೇಲ್: hrhrau@gmail.com
ಫಾಲ್ಗುಣ ಮಾಸದ ಹುಣ್ಣಿಮೆಯ ಹಿಂದಿನ ರಾತ್ರಿ. ಗಾಂಪ ಮಠದಲ್ಲಿ ಎಂದೂ ಇಲ್ಲದ ಗಭೀರ ಮೌನ ಮೂಲಮೂಲೆಗೂ ಆವರಿಸಿತ್ತು. ಆಗಬಾರದ, ದು:ಖಾತಿರೇಕದ ಕೆಟ್ಟ ಸುದ್ಧಿ ನಿಜವಾಗಬಾರದೆ೦ಬ ಆಶಯದಲ್ಲಿ ಶಿಷ್ಯರೆಲ್ಲ ನೆನಗುದಿಗೆ ಬಿದ್ದು ಒದ್ದಾಡುವಂತಾಗಿತ್ತು. ಆ ಹೊತ್ತು ಚಂದ್ರನೂ ಏಕೋ ಹೊರಬರುವ ಇಚ್ಛೆಯನ್ನೇ ತೋರಲಿಲ್ಲ. ಹಾಗಾಗಿ ತೀರಾ ಮಂದವಾದ ಎಲೆಕ್ಟ್ರಿಕ್ ದೀಪದಡಿಯಲ್ಲಿ ಮಠದ ಹೊರಗೂ, ಒಳಗೂ ಎಲ್ಲೆಲ್ಲೂ ಅಂಧಕಾರಮಯ. ವಿಷಯವಂತೂ ತೀರ ಗಂಭೀರ. ಶುಂಠೇಶ್ವರ ಗಾಂಪ ಮಠಾಧೀಶರು ಮೂರು ದಿನಗಳಿಂದ ಈಚಲುಮರದ ಚಾಪೆಯನ್ನ- ಅದನ್ನೇ ’ಹಾಸಿಗೆ’-ಎಂದು ಕರೆಯುವದಾದರೆ ಬಿಟ್ಟೇಳೇ ಇರಲಿಲ್ಲ. ಆಹಾರವನ್ನೂ ಸೇವಿಸದೆ ಮೂರು ದಿನಗಳಿಂದ ನಿತ್ರಾಣರಾಗಿ ಉಸಿರೂ ಸರಿಯಾಗಿ ಹೊರಬರದೆ, ಮಾತಾಡಲೂ ಆಗದೆ ಮಠದ ಶಿಷ್ಯರನ್ನು ದು:ಖದ ಮಡುವಿನಲ್ಲಿ ಅಡಗಿಸಿದ್ದರು. ಮಂಕ ಪುರಾತನ ಕಾಲದ ೩’x ೩’ ಅಳತೆಯ ಡೊಂಕು ಸಲಾಕೆಗಳ ಕಿಟಕಿಯ ಪಕ್ಕದಲ್ಲಿ ಕೂತು ಮರುಳನ ಜೊತೆ ಉಗುರು ಕಡಿಯುವ ಸಮಾಧಿಯಲ್ಲಿದ್ದ. ಶುಂಠ, ಮಡೆಯ ಇಬ್ಬರೂ ಗುರುಗಳ ಪಾದಗಳ ಬಳಿ ಕುಳಿತು ಜಪಮಾಲೆಗಳನ್ನ ಕೈಯ್ಯಲ್ಲಿ ಹಿಡಿದು ತಮ್ಮದೇ ಭಾವೈಕ್ಯ ಸ್ಥಿತಿಯಲ್ಲಿದ್ದರು. ಆಗಾಗ್ಗೆ ಗುರುಗಳ ಕೈನಾಡಿ, ಎದೆ ಹಾಗು ತಲೆ ಮುಟ್ಟಿ ಮಡೆಯ ಕಟ್ಟುಮುಗ್ಗಲಂತಾಗಿದ್ದ ಆ ದೇಹದಲ್ಲಿ ಕುಟುಕು ಜೀವ ಇನ್ನೂ ಅಂಟುಕೊಂಡಿರುವದನ್ನ ಇತರರಿಗೆ ಕೈಸನ್ನೆಯ ಮೂಲಕ ರವಾನಿಸುತ್ತಿದ್ದ, ರವಾನಿಸಿ ಕಣ್ಣೀರು ಸುರುಸುತ್ತಿದ್ದ ! ಈ ಪರಿಸ್ಥಿತಿ ಮುಟ್ಟುವ ಮುನ್ನ ಒಂದು ವಾರದ ಹಿಂದೆ ಭಕ್ತರೊಬ್ಬರೊಬ್ಬರಿಂದ ಪಾದಪೂಜೆ ಮಾಡಿಸಿಕೊಂಡು ಅಲ್ಲಿ ಭಿಕ್ಷೆಗಾಗಿ ಉಣಬಡಿಸಿದ ಹಾಗಲಕಾಯಿ ಗೊಜ್ಜು, ಮೊಸರವಲಕ್ಕಿ ಹಾಗು ಫೇಣಿ, ಕಡಲೆ ಪಾಯಸ, ಜೊತೆಗೆ ಎಂದು ತಿಂದಿರದಿದ್ದ ವೆಜಟಬಲ್ ಕಟ್ಲೇಟ್, ಉಪಚಾರದ ಬಲವಂತಕ್ಕಾಗಿ ಅದುವೇ, ಸ್ವಲ್ಪ- ಸ್ವಲ್ಪವೇನು ಬಂತು, ಹೊಟ್ಟೆ ಬಿರಿಯುವಷ್ಟು -ಆದರೆ ಭಿಕ್ಷುವಿನ ಬಗ್ಗೆ ಹಾಗೆ ಹೇಳುವುದು ಸಲ್ಲ- ಶಾಂತಂ ಪಾಪಂ- ಸೇವಿಸಿದ್ದು ಮೊದಲೇ ಕರುಳ ಬೇನೆಯ ರೋಗದ ಗುರುವಿನ ದೇಹ ಅತಿಸಾರಕ್ಕೆ ತಿರುಗಿ, ಈಗ ಯಾವ ಕೈಮದ್ದಿನ ಉಪಚಾರಕ್ಕೂ ಸಗ್ಗದೇ ಪರಿಸ್ಥಿತಿ ಕೈಮೀರಿಹೋಗುತ್ತಿತ್ತು. ಗುರುಗಳ ಆರೋಗ್ಯವನ್ನ ಆಗಾಗ್ಗೆ ಕೇವಲ ಮಠದ ಊಟವನ್ನೇ ಗಡದ್ದಾಗಿ ತಿಂದೆ, ಯಾವ ಫೀಸು ಪಡೆಯದೇ ನೋಡುಕೊಳ್ಳುತ್ತಿದ್ದ ಹೋಮಿಯೋಪತಿಯ ಕಪಿ-ನೀ-ಪತಿಯನ್ನು(ಶಿಷ್ಯರ ಬಾಯಲ್ಲಿ ಕಪನೀಪತಿ ಅವಸ್ಥಾ೦ತರವಾಗಿ) ಶಿಷ್ಯರುಗಳು ಹಿಂದೆ ಒಂದು ಸುಂಡಿಲಿಯ ರಾದ್ಧಾ೦ತದಲ್ಲಿ ಸಾಕಷ್ಟು ಅವಮಾನಿಸಿ ಮತ್ತೆ ಆವ ಮಠದ ಕಡೆ ತಿರುಗಿಯೂ ನೋಡದಂತೆ ಮಾಡಿದ್ದರು. ಗುರುಗಳಂತೂ ಸುತರಾಂ ಯಾವ ವೈದ್ಯ ನಿಂದಲೂ ಚಿಕಿತ್ಸೆ ಪಡೆಯುವುದಿಲ್ಲೆಂದು, ತನ್ನ ಕೊನೆಯ ಆಶೆಯಾಗಿ ಮಡೆಯನೊಬ್ಬನೇ ಅ೦ತ್ಯಕರ್ಮಕ್ಕೆ ಜವಾಬ್ದಾರನೆಂದು ಹಾಗು ಅವನೇ ಪಟ್ಟಕ್ಕೆ ಬರಬೇಕೆಂದು ಕಟ್ಟಪ್ಪಣೆ ಮಾಡಿದ್ದು ಇದೀಗ ಶಿಷ್ಯರಿಗೆ ಏನು ಮಾಡಲಾಗದೆ ಮಠವನ್ನ ಗಾಡಾಂಧಕಾರಕ್ಕೆ ತಳ್ಳಿತ್ತು. ಯೋಚಿಸಲೇ ಬರದ ಮಂಕ ಏನೇನೋ ಲೆಕ್ಕ ಹಾಕಿ ಅಲ್ಲಿಂದಲೇ ಬಿಕ್ಕುತ್ತಾ ಒದರಿದ “ನಾವು ತಡಮಾಡದೆ ಈಗಲೇ ಮಾಧ್ಯಮಗಳಿಗೆ ವಿಷಯ ತಿಳಿಸಿಬಿಡುವುದು ವಾಸಿ, ಮಡೆಯ, ಅಲ್ಲದೆ ಮುಂದಿನ ಕಾರ್ಯಗಳಿಗೆ ಹಣ ಒದಗಿಸುವ … ” ಮಡೆಯನಿಗೆ ರೇಗಿತು “ಅದು ಈಗ ಮಾತಾಡುವ ಮಾತಲ್ಲ, ನೀ ಬಾಯ್ಮುಚ್ಚಿ ಸುಮ್ಮನಿರು” ಎಂದು ಹೇಳುತ್ತಾ ಮೊದ್ಲೇ ಸಂಧಿವಾತದಿಂದ ಸೊರಗಿದ್ದು, ಇದೀಗ ಬರಿ ಕಟ್ಟಿಗೆಯಂತಾಗಿದ್ದ ಗುರುಗಳ ಕಾಲುಗಳ ಮೇಲೆ ದೊಪ್ಪನೇ ಬಿದ್ದು ಎರಡು ಕೈಗಳಲ್ಲಿ ಹಿಡಿದು ಜೋರಾಗಿ ಅಳುತ್ತಾ “ಗುರುಗಳೇನ ನಮ್ಮನ್ನು ಬಿಟ್ಟು ಹ್ಯಾಗೆ ಹೋಗ್ತೀರಿ? ” ಎನ್ನುತ್ತಾ ನರಳಿ, ಬಿದ್ದು ಹೊರಳಾಡಿದ. ಇವನನ್ನ ನೋಡಿದ ಶು೦ಠನೂ ಏಕ ತಾನದಲ್ಲಿ ಚೀರಾಡಲು ಪ್ರಾರಂಭಿಸಿದ. ಮಂಕ ಏನು ತೋಚದೇ ಉಗುರುಗಳನ್ನು ಮತ್ತಷ್ಟು ಬಲವಾಗಿ ಕಚ್ಚಲಾರಂಭಿಸದ್ದ. ಮರುಳ ಮಡೆಯನ ರೀತಿಯಲ್ಲೇ, ಇದ್ದ ಜಾಗದಲ್ಲೇ ನೆಲದ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ! ಅದೇನು ಇದ್ದಕ್ಕಿದ್ದ ಹಾಗೆ ಸ್ವರ್ಗ ಕೈಗೆ ಎಟುಗಿ ಬಂತೆ? ಭೂಮಿ ಬಾಯ್ವಿಡುವುದಕ್ಕೆ ಮೊದಲು ಭೋರ್ಗೆರೆವ ಶಬ್ದ ನಿಂತು ಎಲ್ಲೆಲ್ಲೂ ಶಾಂತಿ ನೆಲಸಿತೇ? ನಭದಲ್ಲಿ ಚಂದ್ರ ಮತ್ತೆ ಕಾಣಸಿಕೊಂಡು, ಶಾಂತವಾಗಿಸುವ ಆಶಾಕಿರಣ ಮತ್ತೆ ಮೂಡಿಸಿದನೆ ? ಇಲ್ಲ, ಹಾಗೇನಾಗಲಿಲ್ಲ. ಆದರೇ ಹೊರ ಬಾಗಿಲು ಜೋರಾಗಿ ತಳ್ಳಿಕೊಂಡು, ಮಠಕ್ಕೆ ದೂರದ ಊರಿಗೆ ಹೋಗಿ ಅಲ್ಲೇ ನೆಲಸಿಬಿಟ್ಟಿದ್ದ ಹಿಂದಿನ ಗಾಂಪ ಮಠಾಧೀಶರ ಮಹಾ ಭಕ್ತನಾಗಿದ್ದ ಸಾಹುಕಾರ ಅಡವೀಶಯ್ಯ ತನ್ನ ಹಿಂಬಾಲಕರೊಂದಿಗೆ ಒಳ ಬಂದು ಜೋರಾಗಿ “ಏನಾಗಿ ಹೋಗಿದೆ, ಯಾಕೆ ಹೀಗೆ ಎಲ್ಲ ಬಿದ್ದು ಗೋಳಾಡುತ್ತಿದ್ದೀ ರಿ, ಗುರುಗಳೆಲ್ಲಿ” ಎಂದು ಅರಚಿ ಶಿಷ್ಯರೆಲ್ಲರೆಡೆ ನೋಡಿ, “ಮಡೆಯ,ಮರುಳ, ಶು೦ಠ ಏನಾಯಿತೆಂದು ಹೀಗೆ ಎಲ್ಲರೂ ಅಳುತ್ತಿದ್ದೀರಾ? ಬೇಗ ಹೇಳಿ? ಎನ್ನುತ್ತಾ ಚಾಪೆಯಮೇಲೆ ಮಲಗಿದ್ದ ಪೊರಕೆ ಕಡ್ಡಿಯಂತಹ ಗಾಂಪ ಗುರುಗಳನ್ನು ಕಂಡು ಅಲ್ಲಿಗೆ ದುಡು ದುಡು ನಡೆದರು, ಪರಿಸ್ಥಿತಿ ವಿಷಮ ಸ್ಥಿತಿಗೆ ಹೋಗಿದ್ದನ್ನ ಕಂಡು ಮರುಳನನ್ನು “ನೀವೆಲ್ಲ ಏನು ಮಾಡುತ್ತಿದ್ದಿರಿ ಹೀಗಾಗುವ ತನಕ, ವೈದ್ಯರನ್ನೇಕೆ ಕರೆಸಲಿಲ್ಲ? ಭಕ್ತರಾರು ಇವರನ್ನು ನೋಡು ‘ಅಯ್ಯೋ’ ಅನ್ನಲಾರದೆ ಹೋದರೆ, ಏನಿದು?” ಎನ್ನುತ್ತಾ ಚೀರಾಡಿ, ಗುರುಗಳನ್ನು ಮುಟ್ಟಲೂ ಬೇಡವೊ ಎನ್ನುವಂತೆ ಅನುಮಾನಿಸುತ್ತ ತಮ್ಮ ಫೋನಿ೦ದ ಯಾರಿಗೊ ಕರೆಮಾಡಿದರು. ಎಲ್ಲರು ನೋಡು ನೋಡುತ್ತಿರುವಂತೆ ಆಂಬ್ಯುಲೆನ್ಸ ಬಂದು ಗುರುಗಳನ್ನು ಎತ್ತಿಹಾಕಿಕೊಂಡು ಆಸ್ಪತ್ರೆಗೆ ಸಾಗಹಾಕಿ ಮಡೆಯ, ಮಂಕರನ್ನು ಅದೇ ಆಂಬ್ಯುಲೆನ್ಸಲ್ಲಿ ಕೂಡಿಸಿ ತಮ್ಮ ಶಿಷ್ಯರೊಡನೆ ಕಾರಿನಲ್ಲಿ ಹೋಗೇಬಿಟ್ಟರು. ಹೈಟೆಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವಾತಾವರಣ ಶಿಷ್ಯರನ್ನೆಲ್ಲ ಬೆರಗುಗೊಳಿಸಿತ್ತು.ಅವರ ಅನುಭವದಲ್ಲಿ ಹೆಚ್ಚೆಂದರೆ ಒಂದು ಬಾರಿ ಮಂಕನಿಗೆ ವಿಷಮಶೀತ ಜ್ವರ ಬಂದಾಗ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನೆಲದಮೇಲೆ ತಿಗಣೆ ತುಂಬಿದ ತೆಂಗಿನ ನಾರಿನ ಹಾಸಿಗೆ ಮೇಲೆ ಪವಡಿಸಿ ದಬ್ಬಳದಂತಹ ಸೂಜಿಗಳಿಂದ ಚುಚ್ಚಿ ಚುಚ್ಚಿ ಅವನ ಮೈಯಲ್ಲಿದ್ದ ರಕ್ತವನ್ನು ತಿಗಣೆಗಳಿಗೆ ಹಂಚಿದ್ದು, ಯಾರಿಗೂ ಬೇಡದ ಕೆಟ್ಟ ವಾಸನೆಯ ಬ್ರೆಡ್ಡು, ಗಂಜಳದಂತಹ ಹಾಲು ಸೇವಿಸಿ ಹೇಗೋ ಅವನನ್ನ ವಾಪಸ್ಸು ಕರೆತಂದಿದ್ದರು. ಆದರೇ ಮಂಕ, ಮರುಳರು ಇಲ್ಲಿಯ ಹಾಸಿಗೆ, ಉಪಕರಣಗಳು, ಸಿಸ್ಟರುಗಳನ್ನುಕಂಡು ತಾವೆಲ್ಲೋ ಸ್ವರ್ಗದ ಬಾಗಿಲು ನೂಕಿಕೊಂಡು ಒಳಗೆ ಬಂದಿದ್ದು ಗುರುಗಳ ಪೂರ್ವ ಪುಣ್ಯದ ತಪಸ್ಸಿನ ಫಲ, ಅವರ ಸ್ವರ್ಗಾರೋಹಣದ ಜೊತೆ ತಮಗೆಲ್ಲ ಹೀಗೆ ಸ್ವರ್ಗೋಪಚಾರ ಸಿಕ್ಕಿರಬೇಕೆಂದು ಲೆಕ್ಕ ಹಾಕಿಕೊಂಡುದುಂಟು! ಮಡೆಯ ಮಂಕರಂತೂ ದಾದಿಯರನ್ನು ನೋಡಿ, ನೋಡಿ ಅವರ ಸ್ನೇಹ ಸಂಗಕ್ಕೆ ಧ್ಯಾನಿಸಿದ್ದುಂಟು! ಮಡೆಯ ಅನೇಕ ಬಾರಿ, ಅಲ್ಲೇ ಕೂತಲ್ಲೇ ಕೂತು ನಿದ್ದೆಯ ಜೊಂಪಿನಲ್ಲಿ ತನ್ನ ಮಠದ ವಾಸ್ತವವನ್ನೇ ಮರೆತು, ಸೂಟು ಬೂಟು ಧರಿಸಿ, ಠಾಕು ಠೀಕಾಗಿ ಅಂತಹ ಬಾಲೆಯರೊಡನೆ ಸ್ವರ್ಗದ ರಸ್ತೆಗಳಲ್ಲಿ ಸುತ್ತಿದ್ದಂತೆ ಕನವರಿಸಿದ್ದ. ಹೀಗೆ ಒಂದು ಸಲ ಮಡೆಯ ನಿದ್ದೆಯ ಗುಂಗಿನಲ್ಲಿದ್ದಾಗ, ದಾದಿಯು ಅವನ್ನ ಎಬ್ಬಿಸಿ ಡಾಕ್ಟರ ಸೂಚನೆಯ೦ತೆ ಕೆಲವು ಮಾತ್ರೆಗಳನ್ನ ಕೊಟ್ಟು ಅವನ್ನು ಗುರುಗಳಿಗೆ ಸರಿಯಾದ ವೇಳೆಗೆ ತಪ್ಪದೇ ಕೊಡುವಂತೆ ಹೇಳಿ ಹೊರಟುಹೋದಳು. ಮತ್ತೆ ನಿದ್ದೆಯ ಗುಂಗಿನಲ್ಲಿ ಆವ ಮರತೇಬಿಟ್ಟಿದ್ದ. ನಂತರ ಅದರಿಂದಾದ ಅನಾಹುತ ಗುರುಗಳ ಸ್ಥಿತಿ ಎರಡು ದಿನ ಡೋಲಾಯಮಾನ ವಾಗಿತ್ತು. ಮತ್ತೊಂದು ಬಾರಿ ಮಂಕ ಗುರುಗಳಿಗೆ ಕೊಟ್ಟಿದ್ದ ಡ್ರಿಪ್ಸ್ನ ಕೊಳವೆಯನ್ನ ಏನೋ ಮಾಡಲಿಕ್ಕೆ ಹೋಗಿ ಅವರಿಂದಲೇ ಇದ್ದ ಚೂರು ರಕ್ತ ಹೊರಬರಿಸಿ ಸೇವೆಯಲ್ಲಿದ್ದ ದಾದಿಗಳ ಬೈಗಳಿಗೆ ತುತ್ತಾಗಿದ್ದ. ಅಂತೂ ಹಿಂದಿನ ಗುರುಗಳ ಕಟ್ಟಾ ಶಿಷ್ಯನಿಂದಾಗಿ ಸ್ಪೆಷಾಲಿಟಿ ಟ್ರೀಟಿಮೆಂಟ್ ಉಚಿತವಾಗಿ ಪಡೆದು ತಮ್ಮ ಆಯುಸ್ಸು ಇನ್ನೂ ಗಟ್ಟಿಯಾಗಿದ್ದರಿಂದಲೋ ಏನೋ ಮತ್ತೆ ಬದುಕಿ ಬಂದು ಮಠಕ್ಕೆ ಹಿಂತಿರುಗುವಂತಾಗಿತ್ತು ಸ್ವಲ್ಪ ಮೈ ತುಂಬಿಕೊಂಡು ಮತ್ತೆ ಮಠದ ಜವಾಬ್ದಾರಿಯನ್ನ ಹೊರುವಂತಾಗಿತ್ತು! “ಗುರುಗಳೇ ಇನ್ನ ಶಿವರಾತ್ರಿ ಎರಡೇ ವಾರುಗಳದಾವೇ, ಈವರೆಗೂ ಆ ರೈಸ್ ಮಿಲ್ ಅನ್ನದಾನಪ್ಪ ಕೊಟ್ಟ ಒಂದು ಮೂಟೆ ಸಾದಾ ಅಕ್ಕಿ, ಎರಡು ಮೂಟೆ ಭತ್ತದ ಹೊಟ್ಟು ಬಿಟ್ರೆ ಯಾರಿ೦ದ್ಲು ನವಣೆ ಕಾಸೂ ನಮ್ಮ ತಿಜೋರಿಗೆ ಬಿದ್ದಿಲ್ಲ. ಹೀಗೆ ಆದ್ರೆ ಪೂಜೆಗೆ ಅಂತ ಶಿವನ್ಗೆ ಎಕ್ಕಡ ಗಿಡದ ಹೂವಷ್ಟೇ ….” ಮಡೆಯ ತನ್ನ ವ್ಯಾಕುಲವನ್ನ ತೋರ್ಪಡಿಸಿದ. “ನೋಡು ಶಿಷ್ಯ, ಆ ಶಿವಂಗೆ ತಾನು ಈ ಮಠದವರಿಂದ ಪೂಜೆ ಮಾಡ್ಸಕಬೇಕಂತ ಮನಸ್ಸಿದ್ರೆ ಎಂಗಾರ ಒದಗಿಸ್ತಾನ, ಈಟು ದಿನ ಆವಾ ನಂಗ ಏನ್ ಕೊಟ್ಟಾನೋ ಅದ್ನೇ ಅವ ತಗಾಳಾದು.ಶಿವಂಗೆ ಗೊತ್ತಿಲ್ದ್ ವಿಷ್ಯ ನಂಗೇನ್ ತಿಳಿತೈತಿ, ಅದ್ರ ಕಾಳಜಿ ನೀ ಬಿಡು, ಈಗ ಸಂಜೆಗೆ ಏನ ಫಳಾರ ಅನ್ನೋದ ಯೋಚ್ನೆ ಮಾಡಾವ”.ಎಂದು ಪುಕ್ಕಟೆ ವೇದಾಂತ ಮಾತಾಡಿ ಕಣ್ಣು ಮುಚ್ಚಿ ಕೂತರು. ಹೌದು, ಗುರುಗಳಿಗೂ ಮಠ್ದ ಚಿ೦ತೆ ಕಾಡಿತ್ತು ಹಸಿವಿನ ಜೊತೆಗೇ.ಯಾವತ್ತೂ ಯೋಚಿಸದ ಮರುಳ ಇದ್ದಕ್ಕಿದ್ದಂತೆ’ಗುರುಗೋಳೆ, ನನಗೊಂದ್ ಸಂಶಯ, ಯೋಸನೆ ಮಾಡ್ತಾ, ಮಾಡ್ತಾ ” ಎಂದು ಶಿಷ್ಯರೆಲ್ಲರ ಕಡೆ ನೋಡಿದ ಅನುಮಾನಿಸುತ್ತಾ. “ಮರುಳಾ,ನೀ ಕೈಲಾಗದವ ಮೈ ಪರಚಿಕೊಂಡಂತೆ ಆಡೋದ ಬಿಡು, ನಿನಗೆಂತಾ ಯೋಚ್ನೆ? ನಿನ್ನ ಡ್ಯುಟಿ ಅಡಿಗೆ ಮನೇತಾವ, ನಿಂಗ್ಯಾತರ ಯೋಚ್ನೆ? ನಡಿ ಅತ್ತ, ಮಡೆಯ, ನೀ ಬೇಗ ಸಾಯಂಕಾಲದ ಪೂಜೆಗ ರೆಡಿ ಮಾಡು ” ಎಂದು ಗುರುಗಳು ತಮ್ಮ ಹೊಟ್ಟೆ ಪದ ಹಾಡುತ್ತಿರುವದನ್ನ ತಡಿಲಾರ್ದೇ ಅವನನ್ನ ಅಲ್ಲಿಂದ ಅಟ್ಟಿದ್ದರು. ಸಾಯಂ ಪೂಜೆ ಮುಗಿದು, ಮಂಗಳಾರತಿ, ತಂಬಿಟ್ಟು ಪ್ರಸಾದ ಅಲ್ಲಿ ಸೇರಿದ್ದ ಹತ್ತಾರು ಭಕ್ತರುಗಳಿಗೂ ಸೇರಿ ವಿನಿಯೋಗವಾಗುತ್ತಿದ್ದಂತೆ ಗುರುಗಳು ತಮ್ಮ ಕೋಣೆಯನ್ನ ಸೇರಿಕೊಂಡರು ಭಿಕ್ಷೆಗಾಗಿ ಕಾಯುತ್ತಾ. ಸುಮಾರು ಕೇಜಿಯಷ್ಟು ಉಪ್ಪಿಟ್ಟೂ, ಒಂದು ದೊಡ್ಡ ಲೋಟದಲ್ಲಿ ಹಾಲು, ಎರಡೇ ಬಾಳೆ ಹಣ್ಣು, ಜೊತ್ಗೆ ಇರಲಿ ಎಂದು ಎರಡೇ ಸೇಬು ಹಣ್ಣುಗಳು ಹೊಟ್ಟೆ ಸೇರಿದ ಮೇಲೆ, ಹೊಟ್ಟೆನೀವಿಕೊಳ್ಳುತ್ತಿದ್ದ ಹಾಗೆ ಢಮಾರ್ ಎಂದು ಅಪಾನ ವಾಯುವಿಗೆ ಅವಕಾಶವಿತ್ತು ತಮ್ಮ ಈಚಲ ಮರದ ಹಾಸಿಗೆಯನ್ನಲಂಕರಿಸಿ, ಅಂದಿನ ಯೋಚನೆಗೆ ತೆರೆ ಎಳೆದರು ಎಂಬಲ್ಲಿಗೆ ಆದಿ ಮಹಾಗಾಂಪ ಶುಂಠಕೋಫಾಖ್ಯಾನದ ಎರಡನೇ ಅಧ್ಯಾಯ ಮುಗಿದುದು.
Comments