ಗಾಂಪ ಮಠದ ಅಶ್ವಮೇಧಯಾಗ.
- haparna
- Sep 29, 2019
- 7 min read
ಗಾಂಪ ಮಠದ ಅಶ್ವಮೇಧಯಾಗ.
“ಮಂಕ, ಲೇ ಮಂಕಾ, ಮಡೆಯಾ”` ‘ಮಂಕಾ, ಮಡೆಯಾ, ಎಲ್ಲೋದ್ರೋ?’ ಎಲ್ಲಿ ಹೋಗ್ತವೋ ಈ ಮುಂಡೇವು, ಆಗ್ಲಿಂದ ಕೂಗ್ತಾನೆ ಅವಿನಿ. ಏನ್ಕೆಲ್ಸ ಇಲ್ದಿದ್ರೆ ಈ ಮೊದ್ಮಾಣಿಗಾಳು ಹಾಳು ಫೋನ ಹಿಡ್ದಿ ಕೂತ್ಬಿಡ್ತಾವೆ. ಏನೂ ತೋಚ್ದಿದ್ರ ಅಲ್ಲೇ ಮಲಗೂಬಿಡ್ತಾವೆ, ಈ ಮಂಕುದಿಣ್ಣೆಗಳ್ಗೇನ್ಗೊತ್ತಾಯ್ತದೋ’-ಎನ್ನುತ್ತ ಅರಚಿದ್ದರು ಹಯಹೇಷಾರವದ ಧ್ವನಿಯಲ್ಲಿ ಗುರುಗಾಂಪರು.-ಬೃಹದ್ ಕರೋನಾಟಕವೆಂಬ ಏಕೈಕ ನಾಟಕ ಮಂಡಲದಲ್ಲಿ ಗಾಂಪಮಠದ ಇಪ್ಪತ್ತೊಂದನೆಯ ಮಠಾಧೀಶ ಶ್ರೀ, ಶ್ರೀ ಶುಂಠೇಶ್ವರ ಗಾಂಪ ಗುರುವರ್ಯರು ತಮ್ಮ ಶರ ಮಂಚದ-ಅಲ್ಲಲ್ಲ-ನಾರಿನ ಹುರಿಯ ಮಂಚದ ಹೊಟ್ಟಿನ ಹಾಸಿಗೆ ಮೇಲಿಂದ ಕ್ಷೀಣ ಸ್ವರದಲ್ಲಿ ನರಳಿದ್ದು ಕುದುರೆಯ ಕೆನೆತವನ್ನ ಹೋಲುತ್ತಿದ್ದಷ್ಟೆ. ಈ ಬಡ ಮಠವನ್ನ-ಕೂಲಿ ಮಠವೆನ್ನದಿರಿ-ಕೇಳುವವರಾರು? ಗರಿಗರಿ ಟೋಪಿ ಧರಿಸಿ, ಜನಸೇವೆಯೆಂಬಂತಹ ನಾಟಕವಾಡಿ ವೋಟು ಪಡೆದು, ಅಟ್ಟಹಾಸದಿಂದ ಮೆರೆವ ಲಠ್ಠ ರಾಜಕಾರಣಿಗಳ ಪೃಷ್ಠ ಹಿಡಿದೇ ಸುತ್ತಾಡುವ ಮಕ್ಮಲ್ ವೇóಷದ ಖೋಟಾ ಸನ್ಯಾಸಿಗಳಂತಲ್ಲದೆ ನ್ಯಾಯ, ಧರ್ಮಕ್ಕೆ ಕಟ್ಟುಬೀಳುವ ಈ ಬಡ ಗಾಂಪ ಮಠವೆಲ್ಲಿ? ಸಕಲೈಶ್ವರ್ಯಗಳಿಂದ ತುಂಬಿ ಮೆರೆವ ಮಠವಿದಾಗಿದ್ದರೆ ಬಹುಷ: ಇಲ್ಲೂ ರಾಜಕಾರಣಿಗಳ ವಿಷ ಗಾಳಿ ಹೊಗೆಯಾಡುತ್ತಿತ್ತೇನೋ. ಗುರುಗಳ ಹೇಷಾರವ-ಆರ್ತನಾದ- ಶಿಷ್ಯರಿಗೆ ಮುಟ್ಟಲೇ ಇಲ್ಲ. ವಯಸ್ಸಿನ ಹಿರಿತನವಲ್ಲದೆ ಚಿಕ್ಕ ಕರುಳಿನ ದೊಡ್ಡ ಬೇಗೆಯಿಂದ ನರಳಿ, ಕಂಗಾಲಾಗಿ ಸಜೀವ ಕಳೇಬರದಂತಾಗಿದ್ದ ಈ ದೇಹಕ್ಕೆ ಪ್ರಾಣವಾಯುವಿನ ನಂಟು ಇನ್ನೆಂಟು ದಿನವೋ, ವಾರವೋ ಎಂಬ ಬೇಗುದಿಯ ಲೆಕ್ಕಾಚಾರದಲ್ಲಿದ್ದ ಶಿಷ್ಯ ಸಮೂಹ ಮಠದ ಹೊರಗೂ, ಒಳಗೂ. ಕೊನೆಯ ಪ್ರಯತ್ನವಾಗಿ ಪಕ್ಕದಲ್ಲಿದ್ದ ಕಂಚಿನ ಲೋಟವನ್ನ ಬಲವಾಗಿ ನೆಲಕ್ಕೆಸೆದು ಕುಕ್ಕಿಸಿದ್ದರು. ಆ ಶಬ್ದಕ್ಕೆ ಹeóÁರದಲ್ಲಿ ಮಠದ ಜಾಕಾಯಿ ಪೆಟ್ಟಿಗೆಯ ಮೇಲೆ ಕೂತು ಸೆಲ್ಫೋನ್ನಲ್ಲಿ ಸಿನೆಮ ತಾರೆಯರ ರೂಪಲಾವಣ್ಯಗಳನ್ನ ನೋಡುತ್ತ ಬೇರೆಯೇ ಲೋಕದಲ್ಲಿದ್ದ ಮಂಕ ಓಡಿಬಂದ. ‘ಗುರುಗೋಳೆ, ಕರೆದಿರಾ, ಏನಾಯ್ತುದೆ?’,’ ಎಲ್ಲೋಯ್ತೀರೋ, ಎಷ್ಟು ಕರೆದರೂ ಒಬ್ಬರೂ ಹಾ, ಹೂ ಅನ್ನೊವ್ರಲ್ಲ’ ಯಾಕೋ, ನಂಗ ಹೊಟ್ಟೆ ತೊಳ್ಸತಾ ಅದೆ’, ಎನ್ನುತ್ತ ಅವನ ಕೈಹಿಡಿದೇಳುವ ಪ್ರಯತ್ನದಲ್ಲಿ ನಿಂತಲ್ಲೇ ಕುಸಿದುಬಿದ್ದರು, ದೇಹ ಬಿದ್ದಲ್ಲೇ ನಾಲ್ಕರ ಛಳೀ ಬಂದಂತೆ ಅದುರಲಾರಂಭಿಸಿತ್ತು, ಆರೋಗ್ಯ ಅಷ್ಟರಮಟ್ಟಿಗೆ ಬಿಗಡಾಯಿಸಿತ್ತು. ತೀರ ವೃದ್ಧರಲ್ಲದಿದ್ದರೂ, ದೇಹ ಮತ್ತಷ್ಟು ಕ್ಷೀಣಿಸುವದಕ್ಕೆ ಬೇರೆಯೇ ಕಾರಣವಿತ್ತು. ಎರಡು ಮಾಸಗಳಷ್ಟೇ ಹಿಂದೆ, ಚಾತುರ್ಮಾಸ್ಯದ ಅಂಗವಾಗಿ, ಸಂವೃದ್ಧ ಶ್ರೀಮಂತಿಕೆಯಲ್ಲಿ ತೇಲಾಡುತ್ತಿದ್ದ ದಾವಣೆಗೆರೆಯ ರೈಸ್ಮಿಲ್ಗಳ ರಾಜ, ‘ಕಾಮಧೇನು’ ಬ್ರ್ಯಾಂಡ್ ಎಣ್ಣೆ, ಶೇಂಗಾ, ಮೆಣಸಿನಕಾಯಿ ಕಿಂಗ್ ಪಂಚಾಕ್ಷರಿ ವಿರೂಪಾಕ್ಷಪ್ಪನವರ ವಿಶಾಲವಾದ ಭವನದಲ್ಲಿ ಶಿಷ್ಯರೊಡನೆ ಬೀಡು ಬಿಟ್ಟುದುಂಟು. ಜನ್ಮತ: ಇದ್ದ ಚಿಕ್ಕ ಕರುಳ ದೊಡ್ಡ ಬೇನೆಯ ಜೊತೆಗೆ ಸಕ್ಕರೆ ಖಾಯಿಲೆಯೂ ಉಲ್ಬಣಿಸಿತ್ತು. ಪಥ್ಯಾಹಾರವೂ ಅಲ್ಲದ ಮಿತ್ಯಾಹಾರವೂ ಆಗದ, ದಾಕ್ಷಿಣ್ಯದ ಉಪಚಾರಕ್ಕೆ ಶಿಷ್ಯರೊಡನೆ ಕಟ್ಟುಬಿದ್ದು’ಭಿಕ್ಷೆ’ ಎನಿಸಿಕೊಂಡ ಪ್ರತಿ ನಿತ್ಯದ ಅಶನ-ಸಂವೃದ್ಧ ಫಲಾಹಾರ-ಎಣ್ಣೆಯ ವಿವಿಧ ಭಕ್ಷ್ಯಗಳು, ದಾವಣಗೆರೆ ಬೆಣ್ಣೆಯ ಮೃಷ್ಟಾನ್ನ ಬೋಜನದ ಸವಿಯುಣ್ಣುತ್ತಾ ಮರೆತಿದ್ದರು ಪೂರ್ವಾಶ್ರಮದ ಕಟ್ಟುಪಾಡು ಮತ್ತು ಆರೋಗ್ಯದ ಚಿಂತೆ ಸಂಪೂರ್ಣವಾಗಿ. ‘ಭಿಕ್ಷೆ’ ಹೋಗಿ ಇದೀಗ ಜೀವಕ್ಕೇ ಶಿಕ್ಷೆಯ ಕಂಟಕ ತಂದಿತ್ತು. ರೋಗ ಘೋರವಾಗುತ್ತಾ, ಮಠದಲ್ಲಿ ಮತ್ತೆ ಕಾಲಿಡುವ ವೇಳೆಗೆÂ ದ್ರವ್ಯಾಹಾರವೂ ಒಳಹೋಗದೆ ಆರೋಗ್ಯ ವಿಷಮಿಸಿದ್ದು, ಆಳಲೆಕಾಯಿ ಪಂಡಿತ ಹಾಗೂ ಮಠದ ಪಾರುಪತ್ತೇದಾರ ಪ್ರತಾಪ ಪರಮಾನಂದಯ್ಯನ ಚಿಕಿತ್ಸೆಯಿಂದ ಇನ್ನಷ್ಟು ಹದಗೆಟ್ಟಿತಾದರೂ, ಅವನನ್ನೂ ಶಿಷ್ಯರು ಲೇವಡಿಮಾಡಿ ಮಠದಿಂದ ಹೊರಗಟ್ಟಿದ್ದರು ಮತ್ತೆ ಈ ಕಡೆ ತಲೆ ಹಾಕದಂತೆ. ‘ಮಡೆಯಾ, ಮುಠ್ಠಾಳ, ಶುಂಠಾ ಎಲ್ಲಾ ಬನ್ನಿ ಬೇಗ, ಗುರುಗೋಳ ಪರಿಸ್ಥಿತಿ ವಿಪ್ರಮೀತ ಕೆಟ್ಟೋಗದೆ, ಅಯ್ಯಯ್ಯಪ್ಪೋ, ನಾವೇನ ಮಾಡೋದಾ, ಗುರಗೋಳೇ ನೀವ್ನಮ್ನ ಕೈಬಿಟ್ರೆ ನಡುನೀರ್ನಾಗೇ ನಾವ್ಗಳು ಏನ್ಮಾಡೋದ, ಯಪ್ಪೋ, ಯಪ್ಪೋ’ ಎನ್ನುತ್ತಾ ಗುರುಗಳ ಕಾಲ್ಬಳಿ ಬಿದ್ದು ಹೊರಳಾಡಿದ ಮಂಕ. ಏಲ್ಲಾ ಶಿಷ್ಯರೂ ಓಡಿಬಂದು ಗುರುಗಳ ಸ್ಥಿತಿ ಕಂಡು ಒಬ್ಬೊಬ್ಬರು ಒಂದೊಂದು ರೀತಿ ಕಿರಿಚಾಡಲುಪಕ್ರಮಿಸಿದರು. ನಿಂತಲ್ಲೇ ಮರುಳ ದೊಪ್ಪೆಂದು ಮಂಕನ ಮೇಲೆ ಬಿದ್ದು ತಾನೂ ‘ಗುರುಗಳೇ, ಏನಾಗೋಯತದೆ ಹೀಗಾದರ? ಕೇಳಿದ್ರಾ ನನ್ಮಾತ, ಅಂದು ಆ ಸಾವ್ಕಾರ ಪಂಚಾಕ್ಷರಿ ಸವ್ವಾಸ ಬೇಡ, ಈ ಬಡ ಮಠಕ್ಕ ಸರಿಹೋಗದಿಲ್ಲಾ ಅಂತಾ, ಈ ಮಡೆಯನ ಮಾತ ಕೇಳಿ ಕೆಟ್ರಿ, ಗುರ್ಗಳೇ, ನಾವೂ ಕೆಟ್ವಿ, ಹಹ,ಹ್ಹ, ಅಯ್ಯೋ, ನಮ್ನ ನಡು ನೀರ್ನಾಗ ಅದೆಂಗ ಬಿಟ್ಟೋಯ್ತೀರಾ?’, ‘ಅದಲ್ಲಲೇ, ನಿನ್ತಲೇಗಾ ಬರೀ ಮರುಳೇ ತುಂಬಯ್ತೇ, ಪಾರ್ಪತ್ತೀದಾರ್ಪರಮಾನಂದಯ್ಯನ ಚಿಕಿತ್ಸೆ ಬ್ಯಾಡ, ಬ್ಯಾಡಾಂತ್ಬಡ್ಕಂಡೇ, ಅವನ್ಗೇನ ತಿಳೀತೈತೆ, ಡುಮಕಿ ಹೊಡೆದು, ಹೊಡೆದು, ದುಡ್ಕೊಟ್ಟು, ಪಾಸಾಗವ್ನೆ, ಕುದ್ರೇಗ ಜ್ವರ ಬಂದ್ರ ಕತ್ತೇಗ್ಬರ ಹಾಕವ್ನವ್ನು, ದನದ ಬಾಲ ಸುಟಕಂಡ್ರೆ ಕೆಚ್ಚಲ್ಗೆ ಬಾಯ್ಹಾಕೊವ್ನು ಬ್ಯಾಡಾಂತ ನಾ ಬಡ್ಕಂಡೆ, ನೀವ್ಯಾರಾದ್ರೂ ನನ್ಮಾತ್ಕೇಳಿದ್ರಾ? ಅವ್ನ ಹೊರಗಾಗೋದ್ರಾಗೆ ಈಟೆಲ್ಲ ಆಗೋಯ್ತ?’ ಅಲವತ್ತುಕೊಂಡ ಮಡೆಯ ಬಿದ್ದಳುತ್ತಾ. ಈ ಗಾಂಪ ಶಿಷ್ಯರಲ್ಲಿ ತೃಣವಾದರೂ ವ್ಯವಹಾರ ಜ್ನಾನವಿದ್ದವನೆಂದರೆ ಮಡಯನೊಬ್ಬನೆ. ಹಾಗಾಗಿ ಗುರುಗಳ ಚಿಕಿತ್ಸೆಗೆ ಪರಮ ಪಾವನ ಪಂಡಿತ ಪರಮಾನಂದಯ್ಯನ ಗೈರಲ್ಲಿಯೂ ಮಠದ ಶಿಷ್ಯರಲ್ಲೊಬ್ಬ ವೈದ್ಯನಿದ್ದದನ್ನ ನೆಪ್ಪಿಗೆ ತಂದುಕೊಂಡು, ನಂಬರನೊಂದ ಹುಡುಕಿ ಡಾಕ್ಟರ್ ಯೋಗೀಶ್ಗೆ ರಿಂಗಿಸಿದ್ದ, ಗುರುಗಳ ಶೇಷಾಯುಸ್ಸಿನ ಫಲವೋ, ತಪ:ಶಕ್ತಿಯೋ, ಫೋನಲ್ಲಿ ಅತ ಸಿಕ್ಕಿ, ಮಡೆಯ ಬಿಕ್ಕುವುದನ್ನ ಕೇಳಿ, ಕೂಡಲೇ ಬರುವೆನೆಂದು ಧೈರ್ಯ ತುಂಬಿದ್ದ. ಡಾ.ಯೋಗೀಶ ಸುಂಕದ ಕಟ್ಟೆ ಬಾಲ್ಯದ ದಿನಗಳಲ್ಲಿ ಗುರುಗಳ ಚಡ್ಡಿ ಸ್ನೇಹಿತ. ಈತನೂ ಗುರಗಳೊಂದಿಗೆ ಪ್ರತಿ ಪರೀಕ್ಷೆಯಲ್ಲೂ ಎರಡೆರಡು ಬಾರಿ ಡುಮ್ಕಿ ಹೊಡೆದವ. ಗುರ್ಗೋಳು ಇತ್ತ ಮಠಕ್ಕೆ ದಬ್ಬಲ್ಪಟ್ಟಿರೆ ಅತ್ತ ಯೋಗೀಶ ಅವನಪ್ಪನ ಹಣದ ಪ್ರಭಾವದಿಂದಲೋ, ಅವನ ಕೈಗೆ ಮುಂದೆ ಸಿಗುವ ರೋಗಿಗಳ ದೌರ್ಭಾಗ್ಯದಿಂದಲೋ, ಹೇಗೋ ಸರ್ಕಾರೀ ವೈದ್ಯನಾಗಿ ಹೋಗಿದ್ದವ. ಲಂಚದ ಅಮಿಷಕ್ಕೆ, ಮಂತ್ರಿಗಳ ಶಿಫಾರಿಸ್ಗೆ ವಿರೋಧಿಸುವವರ್ಯಾರು? ತರಾತುರಿಯಲ್ಲಿ ಬಂದವನೇ ಯೋಗೀಶ ‘ಎಲ್ಲಿ ಗುರುಗಳು? ಏನಾಗ್ತೈತಿ ಅವರ್ಗ, ಏನ ಮಾಡಬೇಕಾಗದೆ? ಕೊಶ್ಚನಿಸಿದ. ‘ಅದ್ನ ತಿಳ್ಕಳಾಕೆ ನಿಮ್ಗ ಕರೆಸೀವಿ ಡಾಕಟ್ರೇ, ನೀವ ಹೇಳ್ಬೇಕ’ ಎಂದ ಮರುಳ. ‘ಮಡೆಯ, ಮಂಕಾ, ಮುಠ್ಠಾಳ, ಏನಾಗಕ್ಕ ಬಿಟ್ಟರಿ ನೀವ್ಗಳು, ಹೀಗ ನಡಗ್ತ ಬಿದ್ದಿದ್ರ? ಅದ್ನೇ ನಾ ಕೇಳಿದ್ದ’ ಎಂದು ಸಮರ್ಥಿಸಿಕೊಂಡ ಯೋಗೀಶಪ್ಪ ಶಿಷ್ಯರತ್ತ ಕೆಕ್ಕರಿಸಿ ನೋಡಿ. ಗುರುಗಳನ್ನ ಮಂಚದ ಮೇಲೆ ಮಲಗಿಸಿ ತನ್ನ ಉದ್ದನ ಸ್ಟೆತಾಸ್ಕೋಪ್ನ ರೋಗಿಯ ಹೃದಯ ಬಡಿತ ನೋಡಲುಪಕ್ರಮಿಸಿದ. ಮರುಳ ಓಡಿ ಬಂದವ ‘ಡಾಕಟ್ರೇ, ಆ ನಳಿಕೇನ ಕಿವೀಗೇ ಹಾಕಂಡಿಲ್ಲ?’ಎಂದು ಚೀರಿದ. ಮಂಕ ‘ಸುಮ್ನಿರಲೆ ಮರಳ್ಗ, ನಿಂಗ್ಯಾಕದೆಲ್ಲಾ? ಡಾಕಟು ಲಂಡನ್ಗೋ, ಮುಂಡನ್ಗೋ ಹೋಗಿಬಂದಾರ, ಫೆಷಲ್ ಟ್ರೀಟಮೆಂಟ ಉಂಟದ, ಸುಮ್ಕಿರುನೀ’ ಎಂದು ಶಿಷ್ಯರ ಬಾಯಿ ಮುಚ್ಚಿಸಿದ ಅವನೂ ಅನುಮಾನದಿಂದಲೇ. ಮಂಕ, ಮರುಳರ ಕಡೆ ಕೆಕ್ಕರಿಸಿನೋಡಿ ವೀರೇಶ ಯಾವುದೋ ಸೂಜಿ ಚುಚ್ಚಿ, ಮಾತ್ರೆಯೊಂದನ್ನ ಗುರುಗಳ ಬಾಯ್ಗೆ vಹಾಕಿ, ಅಂಬುಲೆನ್ಸಗೆ ಫೋನ್ಮಾಡಿ ಸರ್ಕಾರೀ ಆಸ್ಪತ್ರೆಗೆ ಸಾಗಿಸಿದ್ಧ.
ಗುರುಗಳ ಆಯುಸ್ಸಿನ್ನೂ ಗಟ್ಟಿಯಾಗಿದ್ದು, ಆರೋಗ್ಯ ತಹಬಂದಿಗೆ ಬಂದು ಮತ್ತೆ ಮಠ ಸೇರಿಕೊಂಡರು. ಆದರೆ ಗುರುಗಳ ಒಂದು ಕಾಲು, ಒಂದು ಕೈಗೆ ಲಘುವಾಗಿ ಪಾಶ್ರ್ವವಾಯು ಬಡಿದು, ತೀವ್ರವಲ್ಲದಿದ್ದರೂ ಗುರುಗಳ ಓಡಾಟಕ್ಕೆ ವಿಘ್ನ ತಂದಿತ್ತು. ಇದೀಗ ಶಿಷ್ಯರು ಕರೆದಾಗ ಪಾದಸೇವೆಗೆ ಹೋಗಲು ಕಂಟಕವಾಗಿತ್ತು. ನವರಾತ್ರಿ ಇನ್ನೇನ ಕೆಲವೇ ವಾರಗಳಲ್ಲಿ ಬರುವದಿದ್ದು, ಗುರುಗಳು ವಿವಿಧೆಡೆಗಳಿಗೆ ಧರ್ಮ ಪ್ರಚಾರದ ಸಲುವಾಗಿ ಪ್ರಯಾಣಿಸುವ ಸಮಯವೂ ಕೂಡಿಬರುವುದಿತ್ತು. ಮಠಕ್ಕೇ ಅಂಟಿಕೊಂಡಿರುವುದಕ್ಕೆ ಬೇಸರ ಪಡುತ್ತಿದ್ದ ಶಿಷ್ಯರಿಗೆಲ್ಲಾ ಇಂತಹ ಅವಕಾಶ ಏನೇ ಬರಲಿ ಕಳೆದುಕೊಳ್ಳಬಾರದೆಂಬ ನಿರ್ಣಯಕ್ಕೆ ಬಂದಿದ್ದು ಸಾಕಷ್ಟು ಚರ್ಚೆ ಯಾದರೂ ಗುರುಗಳ ಪ್ರಯಾಣಕ್ಕೆ ದೇಹಸ್ಥಿತಿ ಅಡ್ಡ ಬಂದಿತ್ತು. ‘ಗುರ್ಗೋಳೇ, ನಂಗೊಂದೈಡಿಯ ಬಂದದೆ, ಒಂದ್ಕಾಲ್ದಾಗ ಈ ಮಠದ ಹಿರೇಸ್ವಾಮಿಗೋಳು ಕುದುರೆ ಸವಾರಿ ಮಾಡಿದ್ರಂತ ಎಲ್ಲಾರ ಬಾಯ್ನಗೆ ಕೇಳೀವೀ. ಅವರೂ, ಜೊತೆಗೇ ಶಿಷ್ಯರೂ ಬಿದ್ದು ಏನೇನೋ ಮಾಡ್ಕಂಡ್ರಂತೆ. ಈ ಕಾಲಕ್ಕೆ ಜಟಕಾ ಬಂಡೀನೂ ಅಪ್ರೂಪ್ಯಾಗದೆ. ಆ ಪಂಚಾಕ್ಷರೀ ಸೇವೆನಾಗ ಹತ್ತಾರು ಕಾರುಗಳದಾವೆ, ಯಾವ್ದಾದ್ರೂ ಹಳೇ ಬಂಡಿ ಅವ್ರತಾವಿರೋದ್ನ ಮಠಕ್ಕೇಕೆ ದಾನನೋ, ಕಮ್ಮಿ ರೇಟ್ಗೋ ಕೊಡಬಾರ್ದು, ಕೇಳಿ ನೋಡ್ರಿ’ ಎಂದು ಮುಠ್ಠಾಳ ತನ್ನ ವಿಪ್ರೀತ ಬುದ್ಧಿ ಖರ್ಚುಮಾಡಿದ್ದ. ಮರುಳನ್ಗೆ ಎಲ್ಲಿಲ್ಲದ ಕೋಪ ಉಕ್ಕಿತು. ‘ ಅದೆಂಗಾಯ್ತದೋ, ಅಂದೇ ನಾ ಏಳಿವ್ನಿ, ಅಕ್ರಮವಾಗಿ ದುಡ್ಡು ಸಂಪಾದ್ನೆ ಮಾಡವ್ರ ಸಂಗ ಬ್ಯಾಡ, ಪಂಚಾಕ್ಷರಿ ಬ್ಲಾಕ್ಮನಿ ಗುರೂಂತ್ ಪರ್ಪಂಚ್ಕೇ ಗೊತ್ತದೆ, ಬ್ಯಾಡ, ಬ್ಯಾಡ ಅಂತಂದ್ರೂ, ಅಂದು ಮುರುಷ್ಟಾನ್ನಕ್ಕ ಒಪ್ಕಂಡರಿ. ಗುರ್ಗೋಳ್ಗೆ ಕಾಲು, ಕೈ ನೀವೇ ಮುರಿದ್ರಿ. ಅವ್ನ ದೂರ ಮಡಗಿ, ಮಠಕ್ಕ ಗೌರ್ವ ಉಳಸ್ಕಳ್ಳಿ’. ಅವ್ನ ಮಾತಲ್ಲಿ ಸತ್ಯವಿತ್ತು, ‘ಮಠದ ಧೇಯಾನೂ ಸತ್ಯ, ಧರ್ಮ, ನೀತಿ. ಎಂದಿಗೂ ಬಿಡಬ್ಯಾರ್ದೂ ಅಂತ ಗುರ್ಗೋಳೇ ಪಾಠ ಹೇಳವ್ರೆ, ತೆಗೀ ಆ ಕಾರ್ಸಮಾಸಾರ’ ಎಂದು ಶುಂಠ ಕೂಡ ಮಾತ ಸೇರ್ಸಿದ. ಮಡೆಯನ್ಗೆ ವಿಚಿತ್ರ ಯೋಚ್ನೆ ಹೊಳೀತು. ‘ಗುರ್ಗೋಳು, ನೀವೂಗಳೂ ಎಲ್ಲಾ ನಾ ಹೇಳೋದ ಕೇಳೀ. ಯೋಚ್ನೆ ಮಾಡ್ರಿ. ಈ ಊರ್ನಾಗ ಎಲ್ಲೆಲ್ಲಿ ನೋಡಿದ್ರೂ ಸೆಕೆಂಡ್ ಎಂಡ್ ಕಾರುಗಳಂತ ಮಾರೋದ್ನ ನೋಡಿವ್ನಿ. ನಮ್ಬ್ಯಾಂಕ್ನಾಗ ಒಂದಷ್ಟ್ ದುಡ್ಡದೆ. ಅದಕ್ಕ ಅಷ್ಟು ಇಷ್ಟು ಸೇರಿಸಿ ಕಮ್ಮಿ ರೇಟ್ನ ಕಾರೊಂದ ತಗಂಡ್ರಾಯ್ತು ಗುರುಗಳೇ’. ಗುರುಗಳನ್ನ ಮಾತಾಡಲು ಬಿಡದೆ ಎಲ್ಲರೂ ಉಲಿದರು ಏಕಕಂಠದಲ್ಲಿ. ‘ಅಂಗೇ ಮಾಡಾವ, ಪಂಚಾಕ್ಸರೀನ ಸಂಬಾಳ್ಸಿ ಈ ಕೆಲ್ಸ ಮಾಡ್ಲಿಕ್ಕ ಒಪ್ಪಿಸಿ ನೋಡ್ರಲಾ’-ಮರುಳ ಉವಾಚ. ‘ಮೂರ್ಖರಾ, ಕಾರು ತಗಳ್ಳಾದಿ ಸುಮ್ಕೆನಾ, ಅದಕ ಎಣ್ಣೆ, ಬಣ್ಣ, ರಿಪೇರಿ, ಡ್ರೈವ ಮಾಡುವನ್ಗ ಪಗಾರ ಇವೆಲ್ಲ ಎಲ್ಲಿ ತರ್ತೀರೋ? ಎರಡು ಹೊತ್ತಿನ ಕೂಳ್ಗೆ ಸಂಚಕಾರ ಆಗ್ಯಾದ, ಅದಕ್ಕೆಲ್ಲೀ ಊಟ? ಮಠಾನ ಗುಂಡಿಗೆ ತಳ್ಳಾಕ ಹತ್ತೀರ ನಿವೆಲ್ಲಾ? ರಾತ್ರಿಗ ಏನ ಫಳಾರ, ಅದ್ನ ಯೋಸ್ನೆ ಮಾಡ್ರಿ’ ಮೊದಲೇ ಹಸಿದಿದ್ದ ಗುರಗಳಿಗೆ ರೇಗಿಸಿತ್ತು ಇವರ ಮಾತು. ಎಲ್ಲರಿಗು ಮಂಕು ಕವಿದು ಚರ್ಚೆ ಮುಕ್ತಾಯಗೊಂಡಿತು. ವಿಧಿ ಈ ಮಠವನ್ನ ಅಷ್ಟಕ್ಕೇ ಬಿಡಲಿಲ್ಲ. ಶಿಷ್ಯರ ಈ ಕಾರು ಕೊಳ್ಳುವ ಸಮಾಚಾರ ಅದ್ಹೇಗೋ ದಳ್ಳಾಳಿ ವಿಷಕಂಠಪ್ಪನವರೆಗೂ ಹೋಗಿ ಒಂದು ದಿನ ಮಠಕ್ಕೆ ಕಾಲಿಟ್ಟ ಒಂದು ಗೊನೆ ಬಾಳೆ ಹಣ್ಣು ಚಿಪ್ಪು, ದಕ್ಷಿಣೆ ಸಮೇತ ಪೀತಾಂಬರ ವೇಷದಲ್ಲಿ, ಮೈಯೆಲ್ಲಾ ಎದ್ದು ಕಾಣುವ ಹಾಗೆ ವಿಭೂತಿ ಪಟ್ಟೆ. ಗುರುಗಳಿಗೆ ಅಂಗಾತ ಅಡ್ಡಬಿದ್ದ, ತನ್ನ ಪ್ರವರ ಹೇಳಿಕೊಳ್ಳುವಲ್ಲಿ ಮಠ, ಶಿಷ್ಯರನ್ನ ನಾನಾರೀತಿಯಲ್ಲಿ ಕೊಂಡಾಡಿ ಅಟ್ಟಕ್ಕೇರಿಸಿದ. ಮುಕ್ತಾಯದಲ್ಲಿ ತೀರ್ಥ, ಮಂತ್ರಾಕ್ಷತೆಗೆ ಕೈ ಒಡ್ಡುವಾಗ ಸರಕ್ಕಾಗಿ ಕೈ ಹಿಂತೆಗೆದ. ಎಲ್ಲರೂ ಕೆಕ್ಕರಿಸಿ ನೋಡಿದರು, ಇಷ್ಟೊಂದು ಸೊಕ್ಕೆ? ತೀರ್ಥ ತೆಗೆದುಕೊಳ್ಳಲೇನು ಧಾಡಿ? ‘ಗುರುಗೋಳೂ ಕ್ಷಮಿಸಬೇಕು ಈ ಬಡವನ್ನ, ಎಂದಾದರೂ ಸರಿ, ಏನಾದರೂ ಮಠಕ್ಕೆ ಸೇವೆ ಮಾಡಲೇ ಬೇಕೆಂದೆನಿಸಿತ್ತು, ಇದೀಗ ಆ ಸಮಯ ಬಂದದೆ. ಬ್ಯಾಡ ಅನಬ್ಯಾಡ್ರಿ’ ಎನ್ನುತ್ತ ಮತ್ತೆ ಕಾಲಿಗೆ ಬಿದ್ದ’. ಅದೇನ ಹೇಳಪ, ನನ್ನ ಬಳಿ ಸಂಕೋಚ ಯಾಕ?’ ಶಿಷ್ಯರುಗಳೆಲ್ಲರೂ ಮಂಕು ಬಡಿದಂತೆ ನಿಂತಿದ್ದರು. ಮಡೆಯ, ಶುಂಠರಿಗೆ ನಾಟಕದಂತೆ ಕಂಡಿತ್ತು. ಮಂಕ, ಮರುಳರಿಗೆ ಮಾತ್ರ ಇವ ಮಠಕ್ಕೆ ಕಲ್ಪತರೂವೆನಿಸಿತ್ತು. ‘ಸ್ವಾಮಿಗೊಳೆ, ಈ ಮಠ ಯೇಸು ದಿನಾಂತ ಹೀಗೆ ಬಡವಾಗಿ ಕಾಣಬೇಕು? ನೀವು ರಥದಾಗ ಓಡಾಡುತಿರಬೇಕು, ಈಗ ತಮಗ ಆರೋಗ್ಯ ಮೊದಲನಾಂಗಿಲ್ಲಂತ ಊರ್ಗೇ ಗೊತ್ತಾಗ್ಯದ. ಈಗ ನನ್ಕೈಲಾದ್ಸಹಾಯ ಮಾಡಲೇ ಬೇಕಂತವ್ನಿ, ಬ್ಯಾಡ ಅನಬ್ಯಾಡ್ರಿ, ಒಂದ ಒಳ್ಳೆ ಸ್ವೀಡನ್ ಕಾರು, ಮುತ್ತಿನಂಗೈತೆ, ಕೈತೊಳೆದು ಮುಟ್ಟಾಂಗ್ಹತರ ಅದ, ಸೆಕೆಂಡ್ಸೇಲ್ ಆದ್ರೂವ. ಅಂಗ್ರೇಸಿóಯವ ಈ ಹೊಸಾದು ಕಾರು ಮಡಕ್ಕಂಡು ಹತ್ತೆ ವರ್ಷ ಆತು, ಥಳ ಥಳಾಂತಿದೆ, ಬ್ರೇಕಮೇಲ ಕಾಲು ತೆಗೆದರ ಇಂದ್ರನ ಕುದ್ರೆ ಓಡದಂಗ್ ಓಯ್ತದೆ. ಅವ ವಾಪಸ್ ಊರ್ಗೆ ಹೊರಟವ್ನೆ, ಮನಸಿಲ್ದೆ ಕೊಡ್ತಾವ್ನಷ್ಟೇಯ. ನಿಮ್ಮಮಠಕ್ಕಂದ್ರ ಕಮ್ಮಿ ರೇಟ್ಗ ಕೊಡದ ಗ್ಯಾರಂಟಿ. ಸ್ವಾಮಿ, ಸನ್ಯಾಸಿಗಳು ಅಂದ್ರ ಬೋ ಇಷ್ಟ ಮುಂಡೇದಕ್ಕೆ, ಬಾಯ್ಬಾಯ್ಬಿಡ್ತಾನೆ. ನನ ಮಾತು ಮೀರಾವನಲ್ಲ, ಇಂಪೋರ್ಟೆಡ್ ಕಾರು ಸಿಗದಂದ್ರ ಬೋ ಅದೃಷ್ಟ ಬೇಕ, ನೀವ್ಬ್ಯಾಡಂದ್ರ ಆ ಯತಿಗಳಮಠ, ನಾಮ್ದವ್ರು, ಮೊಣ್ಕಾಲ್ಪಂಚೇನ್ಯಾಗೇ ನಿಂತವ್ರೇ, ಅವ್ರಗಯಾಕ ನಾವ್ಬಿಡ್ಬೇಕು, ಹೌದಲ್ಲೋ ಮರುಳಪ್ಪ?’ ಎಂದು ಪೆಕರುಪೆಕರಾಗಿ ಕೇಳುತ್ತಿದ್ದ ಮರುಳನ ಕಡೆ ತಿರುಗಿದ. ಸಭೆ ಒಂದು ನಿಮಿಷ ಸ್ತಭ್ಧ, ನಂತರ ಸ್ವಾಮಿಗಳು ‘ಅಲ್ಲಪ, ನಂಗೂ ಐತಿ ಆಶಾ, ಮಠದ ಗೌರವಕ್ಕೆ ಬೇಕ, ನನ್ಮರ್ವಾದಿಗಲದಿದ್ರೂ. ಆದ್ರೆ ಮುಫತ್ತು ಕೊಟ್ರೂ ಅದನ ಸಾಕೋದ ಹ್ಯಾಂಗಪಾ ಈ ಮಠಕ್ಕ? ಬ್ಯಾಡವೇ ಬ್ಯಾಡಾಂತ..’ ಅಷ್ಟರಲ್ಲಿ ಮಡೆಯ ‘ಗುರುಗಳೇ, ನಾ ಅಂತೀನಿ. ಈಗ್ಲೇ ಏನೂ ಹೇಳಬ್ಯಾಡ್ರಿ, ಒಂದ್ಮಾತ ಬರ್ತದ, ಹೋಗ್ತದ, ಇವತಬ್ಯಾಡ್ವೇಬ್ಯಾಡ, ಆಮಾವಾಸ್ಯ ಇಂದು, ತೀರ್ಮಾನ ಆಮ್ಯಾಕ ಹೇಳಾವ.’ ಕಾರಿನ ವಿಷಯ ಬಂದಾಗ ಎಲ್ಲರ ಆಶೆಗೂ, ಗುರುಗಳದೂ ಸೇರಿ ಚಿಗುರಿದ್ದು ನಿಜ. ‘ಯಾಕ, ನೀ ಯಾವ್ದಾದ್ರೂ ಬ್ಯಾಂಕಗೆ ಕನ್ನ ಹಾಕೋದುಂಟ?’ ಕೊಂಕಿಸಿದ ಮರುಳ. ಶಿಷ್ಯರ ಹಠಕ್ಕೆ ಬಿದ್ದು ವಿಷಕಂಠನ್ಗೆ ಮತ್ತೊಂದು ದಿನ ಬರುವಂತೆ ಗುರುವಾಗ್ನೆ ಆಯ್ತು. ವಿಧಿಯ ಉದ್ದೇಶವೇ ಬೇರೆಯಿತ್ತು. ಹಾಗೂ ಹೀಗೂ ಮಠಕ್ಕೆ, ಒಂದು ಕಾಲದಲ್ಲಿ ವಿದೇಶೀ ಕಾರೆನಿಸಿದ್ದು, ಮೈಯೆಲ್ಲ ಬೊಕ್ಕೆಗಳಿಂದ ತುಂಬಿದ್ದರೂ, ತುಕ್ಕುಹಿಡಿದ ಮೈ ಕಾಣದಂತೆ ಬಣ್ಣ ಲೇಪಿಸಿಕೊಂಡು ಹೇಗೋ ಓಡುವ ಸ್ಥಿತಿಯಲ್ಲಿ ಬಂದು, ಒಂದು ದಿನ ಮಠದ ಕಾಂಪೌಂಡಿನಲ್ಲಿ ನಿಂತಿತು. ಬೆಣ್ಣೆಯ ಮಾತಲ್ಲೇ ಯಾರದೋ ಕಾರನ್ನ ಸಾವಿರ ಸುಳ್ಳು ಹೇಳಿ ಈ ಬಡ ಮಠಕ್ಕೆ ಮಕ್ಮಲ್ಟೋಪಿ ಹಾಕಿ ಮಾರಿಸಿದ್ದ ವಿóಷಕಂಠ. ಏನೂ ತಿಳಿಯದ ಗುರುಶಿಷ್ಯರಿಗೆ ಯಾಮಾರಿಸಿದ್ದ, ತನ್ನ ಜೋಬನ್ನ ತುಂಬಿಸುವ ಸಲುವಾಗಿ, ನಂತರ ಕಾಲ್ಕಿತ್ತಿದ್ದ, ಮಠಕ್ಕೆ ನುಂಗಲಾರದ ಬಿಸಿ ತುಪ್ಪ ಅಲ್ಲ-ವಿಷವೇ ಆಗಿದ್ದ ವಿಷಕಂಠ. ಸಂಬಳದವಿನಾ ಕಾರನ್ನ ಓಡಿಸುವವರೆಲ್ಲಿ ಸಿಗುತ್ತಾರೆ? ಸಾಕಷ್ಟು ಚರ್ಚೆಯಾದನಂತರ ಮುಂದಿನ ರಸ್ತೆಯಲ್ಲಿ ಡಾಂಬರು ಹಾಕುತ್ತಿದ್ದ ರಸ್ತೆ ಇಂಜಿನ್ ಡ್ರೈವರನನ್ನ ಒಪ್ಪಿಸಿದ್ದಾಯಿತು. ಅವನಿಗೆ ಪ್ರಯತ್ನಿಸಿ ಕಾರು ಓಡಿಸಲು ಬಂದಮೇಲೆ. ನಂತರ ಶಿಷ್ಯರಲ್ಲಿ ಕಣ್ಣು, ಕೈಕಾಲು ಭದ್ರ ಇದ್ದವನಿಗೆ-ಶುಂಠನಿUಷ್ಟೆ- ಡ್ರೈವಿಂಗ್ ಪಾಠ. ಅಷ್ಟಿಷ್ಟು ಕಲಿತಮೇಲೆ. ಅವನ ಗುರು ಅಷ್ಟಿಷ್ಟು ಕಲಿಸಿ ಊರು ಬಿಟ್ಟೇ ಹೋಗಿದ್ದ ಕಾರಣ. ಕೊನೆಗೊಂದು ದಿನ ಶುಂಠನೇ ಧೈರ್ಯವಾಗಿ ಓಡಿಸುವುದೆಂದು ಅವರಲ್ಲೇ ತೀರ್ಮಾನಕ್ಕೆ ಬಂದರು. ಅದೇನು ಏರೋಪ್ಲೇನ, ಸಾವಿರಾರು ಜನ ಪ್ರಯಾಣಿಸುವ ಜಹಜ? ಇದು ಕಾರು, ಹದಿನೈದೂ ತುಂಬದ ಕಾಲೇಜು ಹುಡುಗೀರೂ ಕಾರ್ನ ಬಿಡ್ತಾರೋ ಶುಂಠ, ನಿನಗೇನ ಧಾಡಿ?’ಎಂದೆಲ್ಲ ಅವನ್ನ ಹುರುದುಂಬಿಸಿದರು. ಮುಹೂರ್ತದ ದಿನ, ವೇಳೆಯನ್ನ ಮಡೆಯ ಈ ಮುಂಚೆಯೇ ನಿರ್ಧರಿಸಿ, ಊರಿಗೆಲ್ಲ ಪ್ರಚಾರ ಮಾಡಿಬಿಟ್ಟಿದ್ದ. ಮಠದ ಸುತ್ತಲೂ. ಮಂಕ, ಮರುಳ, ಶುಂಠ ಅದಕ್ಕೆ ಚಿನಾರಿ ಪೇಪರಿನಲ್ಲಿ ವಧುವಿನಂತೆ ಅಲಂಕರಿಸಿದರು. ಮೊದಲ ದಿನದ ಶುಂಠನ ಡ್ರೈವಿಂಗ್ನಲ್ಲಿ ಹಿಂಬದಿ ಸೀಟಲ್ಲಿ ಗುರುಗಳೊಬ್ಬರೇ ಕೂಡುವಂತೆಯೂ, ಶಿಷ್ಯರಿಬ್ಬರು-ಮಂಕ, ಮುಠ್ಠಾಳ ಬಾವುಟ ಹಿಡಿದು ದಾರಿ ಹಾಗು ಅಪಾಯ ಸೂಚಿಸುವುದಕ್ಕೆ ಕಾರಿನ ಮುಂದೆ, ಹಿಂದೆ ಮಡೆಯ, ಮರುಳ, ಅಕ್ಕ ಪಕ್ಕ ಇಬ್ಬರು ಪೊಲೀಸರು ದಾರಿಯ ಜನರನ್ನ ದೂರ ಸರಿಸುವದಕ್ಕೆಂದು ತೀರ್ಮಾನವಾಯಿತು. ಪ್ರಶಸ್ಥವಾದ ದಿನ ಕಾರಿಗೆ ಪೂಜೆ, ಮಂಗಳಾರತಿ, ಚರ್ಪು ವಿನಿಯೋಗ, ಎಲ್ಲ ಮುಗಿದಮೇಲೆ, ಶುಂಠ ಶ್ವೇತವಸ್ತ್ರಧಾರಿಯಾಗಿ ತಲೆಗೊಂದು ಹ್ಯಾಕ್ನಿ ಕ್ಯಾಪು ಧರಿಸಿ ಕಾರಿನ ಡ್ರೈವರ ಸೀಟಲ್ಲಿ ಸೆಟೆದುಕೊಂಡು ಧಿಮಾಕಿನಿಂದ ಕೂತಂತೆ ಕಂಡಿದ್ದ. ಗುರುಶಿಷ್ಯರ ಹೊಸ ಅವತಾರ ನೋಡಲಿಕ್ಕೆ ಜನಗಳು ಜಮಾಯಿಸಿದ್ದರು. ಅವನ ಫೋಟೋ ಸುತ್ತಲಿದ್ದ ಜನರೆಲ್ಲ ಕ್ಲಿಕ್ಕಿಸಿದರು. ವಾಸ್ತವವಾಗಿ ಕೂತಲ್ಲೇ ಅವ ಅದುರುತ್ತಿದ್ದ ಮುಂದಾಗುವ ಕಾರು ಸೆಳೆತಕ್ಕೆ. ತನಗೆ ಸಂಪೂರ್ಣ ಧೈರ್ಯವಿಲ್ಲದಾಗ್ಯೂ ಮಿಕ್ಕವರು ಇವನನ್ನ ಹುರುದುಂಬಿಸಿದ್ದರು ತಾನು ಬೇಡಬೇಡವೆಂದರೂ. ಅವರ ಅಮಾಯಕ ಉತ್ಸಾಹಕ್ಕೆ ತಾನು, ಗುರುಗಳು ಅಪಾಯಕ್ಕೆ ಬಲಿಯಾದರೆ? ತನಗೆ ನರಕವೇ ಗತಿ. ಇದೀಗ, ಗೃಹಿಣಿಯರಿಬ್ಬರು ಕಾರಿಗೆ ದೀಪದಾರತಿ ಮಾಡಿ, ದೃಷ್ಟಿಚುಕ್ಕೆಯನ್ನ ಗುರುಗಳು ಹಾಗು ಶುಂಠನಿಗೂ ಹಚ್ಚಿ ಪಕ್ಕಕ್ಕೆ ಸರಿಯುತ್ತಿದ್ದಂತೆ ಮತ್ತಿಬ್ಬರು ದಾಸರ ಹಾಡನ್ನ- ‘ಭಾಗಾದ ಲಕಷಮಿ ಬಾರೇಮ್ಮಾ’ ತಪ್ಪುತಪ್ಪಾಗಿ ಹಾಡಿದ್ದುಂಟು. ಮತ್ಯಿನ್ಯಾರೋ ವಿಷ್ಣು ಸಹಸ್ರಾಮನಾಮವನ್ನ ಮೊಬೈಗೆ ಹಚ್ಚಿದರು. ಮಡೆಯ ಈಡುಗಾಯನ್ನ ಹೊಡೆಯಲು ಹೋಗಿ ಹಿಂದಕ್ಕೆ ಬಿದ್ದು, ಎದ್ದು ಸುಧಾರಿಸಿಕೊಳ್ಳುತ್ತಿದ್ದಂತೆ ಗುರುಗಳ ಕಾರು ಪ್ರವೇಶವಾಯಿತು. ಮಹೂರ್ತಕ್ಕೆ ಸರಿಯಾಗಿ. ಮುಠ್ಠಾಳ ಮಠದ ಒಳಗಿಂದ ಶಂಖವನ್ನ ಊದಿ ಸೇರಿದವರಿಗೆಲ್ಲ ರೋಮಾಂಚನ ಮಾಡಿಸಿದ. ಮಡೆಯ, ಮಂಕರ ಹೆಗಲಮೇಲೆ ಕೈಹಾಕಿ ಎಡಗಾಲನ್ನ ಕಾರಿನಲ್ಲಿಡಲು ಹೋಗಿ ಆಯತಪ್ಪಿ ಬೀಳುವಂತಾಗಿ ಸುತ್ತಲಿದ್ದವರು ಓಡಿ ಬಂದು ಗುರುಗಳನ್ನ ಅಂಗಾತ ಹಿಡಿದು ಕಾರಿನಲ್ಲಿ ನೂಕಿದ್ದನ್ನ ಶುಂಠ ನೋಡಿ ಬೆರಗಾಗಿದ್ದ, ಮೈಯೆಲ್ಲ ಬೆವರಿದ್ದ. ಉಟ್ಟ ಯೂನಿಫಾರಂ ಅರ್ಧ ತೊಯ್ದಿತ್ತು. ಕಾರು ಮುಂದಿನಿಂದ ಇದೀಗ ಮಂಕ, ಮುಠ್ಠಾಳ ಕಾವಿ ಬಾವುಟ ತೋರಿಸಿ ಕಾರು ಓಡಿಸುವುದಕ್ಕೆ ಸೂಚನೆ ಕೊಟ್ಟರು, ಪೊಲೀಸರು ಕೈ ಆಡಿಸಿದರು. ಇದೀಗ ಶುಂಠ ನಡಗುವ ಕೈಯಿಂದ ಎಲ್ಲ ದೇವರುಗಳು, ಗುರುಗಳನ್ನ ನೆನೆಯುತ್ತ ಎಡಗೈಲಿ ಗೇರಲಿವರ್ನ ನ್ಯೂಟ್ರಲ್ಗೆ ತಳ್ಳಿ, ಕೀತಿರುಗಿಸಿ ಸರಿಯಾಗಿಯೇ ಇಂಜಿನ್ನ ಚಾಲೂ ಮಾಡಿದ, ಸುತ್ತಲೆಲ್ಲಾ ನೋಡಿ ಮೆಲ್ಲಗೆ ಆಗ್ಸಿಲೇಟರ್ನ ಒತ್ತಿದ. ಕ್ಲಚ್ಚಿನ ಮೇಲೆ ಸ್ವಲ್ಪವಾಗಿ ಕಾಲು ತೆಗೆಯುತ್ತಾ. ಕಾರು ಮುನ್ನಡೆಯಲಿಲ್ಲ, ಮತ್ತಷ್ಟು ಆಗ್ಸಿಲೇಟರ್ನ ತಳ್ಳಿದ, ಕಾರು ಮುನ್ನಡೆಯಲೇ ಇಲ್ಲ. ಇಂಜಿನ್ನನ ಶಬ್ಧ ಮಾತ್ರ ಜೋರಾಗುತ್ತಲೇ ಇತ್ತು. ಇದೇನು ಈ ಕಾರು ಹೀಗೆ? ಇದೀಗ ಗಾಬರಿಯಾಗಿದ್ದ. ಪೆಟ್ರೋಲೇ ಇಲ್ಲವೆ? ಹಿಂದಿನ ರಾತ್ರಿ ಮಡೆಯನೇ ಕ್ಯಾನಲ್ಲಿ ತುಂಬಿ ತಂದು ಸುರಿದಿದ್ದ, ಕಳ್ಳತನ ವಾಗಿರಬಹುದಾ, ಏನೆಲ್ಲ ಯೋಚನೆಗಳು ಅವನನ್ನ ಮುತ್ತಿಕೊಂಡಿತು. ಇಂಜಿನ್ ಆರಿಸಿದ. ಕೆಳಗಿಳಿದು ಬಾನೆಟ್ ತೆಗೆದು ಒಳಗೆಲ್ಲ ನೋಡಿದ, ಏನೂ ಅರೆಯದೆ ಮತ್ತೆ ಬಾಗಿಲು ಮುಚ್ಚಿ ಹೊಗೆ ಕೊಳವೆಯೆನೆಲ್ಲ ನೋಡಿ ಅರ್ಥವಾಗದೆ ಮತ್ತೆ ಸೀಟಲ್ಲಿ ಕೂತು ಇಂಜಿನ್ ಕೀಲಿಕೈ ತಿರುಗಿಸಿದ. ಜನವೆಲ್ಲ ಉಸಿರು ಬಿಗಿ ಹಿಡಿದು ನೋಡುತ್ತಿದ್ದರು. ಮರಳಿ ಪ್ರಯತ್ನವೂ ನಿರರ್ಥಕ. ಗುರುಗಳು ಏನು ಸಮಸ್ಯೆ ಎನ್ನುವಂತೆ ನೋಡಿದರು. ‘ಇವ ಕಾರು ಬಿಡುತ್ತಾನ ಇಲ್ಲ ಬೀಳಿಸುತ್ತಾನಾ? ಎಂಬ ಅನಮಾನ ಪಟ್ಟದ್ದು ನಿಜ. ‘ಕಾರು ಯಾಕೋ ಓಡಾವಲ್ದು, ಮೆಕಾನಿಕ್ಕ ಇದ್ರ ನೋಡ್ಬುಹುದ’, ‘ಈಗ ಎಲ್ಲಿಂದ ತರೋದ ಮೆಕಾನಿಕ್ಕ?’ ಗುರುಗಳು ಬೇಸರಿಸಿದರು. ಸುತ್ತಲಿದ್ದವರೆಲ್ಲ ಕಾರಿನ ಬಳಿ ತುಂಬಿಕೊಂಡರು. ಅವರೊಲ್ಲಬ್ಬ ಕೇಳೇ ಬಿಟ್ಟ, ‘ನೀ ಏನ ಡ್ರೈವಿಂಗ ಮಾಡಿದಿ, ಯಾಕ ಸ್ಟಾರ್ಟ ಆಗವಲ್ದು?’, ‘ಅದೇ ಗೊತ್ತಾಗದು, ಏನ ಮಾಡಾಣ?’, ‘ನಾ ನೋಡಲಾ?’, ಗುರುಗಳ ಅಪ್ಪಣೆ ಮೇರೆಗೆ ಅವ ಡ್ರೈವರ ಸೀಟಲ್ಲಿ ಕೂತ ಪಕ್ಕಕೆ ಶುಂಠ. ಕಾರು ಸರಿ ಇದ್ದರ, ನೀ ಡ್ರೈವಿಂಗ ತಪ್ಪೆಲ್ಲೋ ಮಾಡೀಯ, ನೋಡು, ಕಾರಿ ಗೇರ್ನಾಗದ, ಆಫ್ ಆಗೇದ, ಈಗ ಮೊದಲ ಹ್ಯಾಂಡ್ ಗೇರ ರಿಲೀಸ ಮಾಡ್ಕ, ಅಂಗ, ಈಗ ಸ್ಟಾರ್ಟ ಮಾಡು ಹೀಂಗಾ, ನ್ಯೂಟ್ರಲ್ನಿಂದ ಮೊದಲ ಗೇರ್ಗ ಬಾ ಮೆಲ್ಲಗ ಆಕ್ಸಿಲೇಟ…… ಕಾರು ಚಲಿಸ ಹತ್ತಿತು, ಈಗ ಗೊತ್ತಾತ? ಕಾರು ಸರಿ ಅದ,’ ಎನ್ನುತ್ತ ನಿಲ್ಲಿಸಿ ಹೊರಬಂದ. ಶುಂಠನಿಗೆ ಜ್ನಾನೋದಯವಾಗಿತ್ತು. ಹ್ಯಾಂಡ ಬ್ರೇಕ ತೆಗೆಯೋದ ಮರ್ತೇಬಿಟ್ಟಿದ್ದ ಗಾಬರಿiÀುಲ್ಲಿ. ಈಗ ಎಲ್ಲ ಮತ್ತೆ ಜನ ಚುರುಕಾದರು ಸ್ವಹಿತ, ಪ್ರಾಣ ರಕ್ಷಣೆಗಾಗಿ., ಇಂಜಿನ್ ಶುರುಹಚ್ಚಿ ಆಕ್ಸಿಲೇಟರ್ ಜೋರಾಗಿ ಒತ್ತಿದ, ಇಂಜಿನ್ನು ಆರ್ಭಟಿಸಿತು, ‘ಇನ್ನೇನು ಗುರುಗೋಳ ಕಾರು ಮೆರವಣಿಗೆ ಶುರು’ ಎಂದು ಜನ ಜಯಜಯಕಾರ ಮಾಡಿದರು. ಎಲ್ಲ ಚದುರಿ ದೂರ ದೂರ ಸರಿದು ನಿಂತರು ತಮ್ಮ ಪ್ರಾಣಾರಕ್ಷಣೆಗಾಗಿ ಎಚ್ಚರಿಕೆಯಿಂದ. ದೊಡ್ಡ ಷಹರುಗಳಲ್ಲಿ ಬೀದಿನಾಯಿಗಳ ಗುಂಪುಗುಂಪೇ ಅಲ್ಲಲ್ಲಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿರುತ್ತವೆ, ಮರಿಗಳನ್ನ ಹಾಕಿ ಹುಷಾರಿನಿಂದ ಕಾವಲು ಕಾಯುವುದುಂಟು. ಯಾರೂ ಹೊಸಬರವನ್ನ ಸೇರಿಸುವುದಿಲ್ಲ, ಬೊಗಳಿ ಹೆದರಿಸುತ್ತವೆ. ಮಠದ ಸಾಮೀಪ್ಯದಲ್ಲಿದ್ದ ತಮ್ಮದೇ ಶ್ವಾನಗುಂಪು ಈ ಜನ ಸಮೂಹ, ಕಾರಿನ ಅಬ್ಬರಕ್ಕೆ ರೋಸಿಹೋಗಿ ಒಟ್ಟಾಗಿ ಯುದ್ಧಕ್ಕೆ ಅಣಿಯಾಗುತ್ತಿದ್ದವು. ಕಾರನ್ನು ಹೊರಡಿಸುವ ತರಾತುರಿಯಲ್ಲಿ ಎಲ್ಲ ಬ್ರೇಕ್ ತೆಗೆದು ಮೊದಲ ಗೇರಿಗೆ ತಂದು ಶುಂಠ ಆಗ್ಸಿಲೇಟರನ ಒತ್ತುತ್ತಿದ್ದಂತೆ ಇಂಜಿನ್ ಶಬ್ಧ, ಕಾರಿನ ಬಡಬಡ ಶಬ್ಧ, ಜನರ ಜಯಕಾರ ಈ ನಾಯಿಗಳ ತಾಳ್ಮೆ ಎಲ್ಲೆಮೀರಿ ಅವುಗಳ ನಾಯಕ ಎಲ್ಲಕ್ಕೂ ಮುನ್ನುಗಲು ಅಪ್ಪಣೆ ಕೊಡುವುದಕ್ಕೂ, ಕಾರು ಮುನ್ನಡೆಯುವದಕ್ಕೂ ಒಂದೇ ಕಾಲ ಕೂಡಿತ್ತು. ಜಯಕಾರಗಳ ಮಧ್ಯೆ ಕಾರು ಮನ್ನುಗ್ಗುತ್ತಿದ್ದಂತೆ ಎಲ್ಲ ಎಂಟು ದಿಕ್ಕುಗಳಿಂದಲೂ ನಾಯಿಗಳು ಕಾರಿಗೆ ಅಡ್ಡಡ್ಡಚಿಕ್ಕುವಂತೆ ಬೊಗಳುತ್ತ ಒಟ್ಟಿಗೇ ರಸ್ತೆಯ ಅಕ್ಕಪಕ್ಕಗಳಿಂದ ಹೆದರಿಸಲು ಪ್ರಾರಂಬಿಸಿದ್ದವು. ಕೆಲವು ಕಾರಿಗೆ ಅತ್ತಿಂದ ಇತ್ತ ಅಡ್ಡಡ್ಡ ಓಡಲಾರಂಭಿಸಿದ್ದನ್ನ ನೋಡಿ. ಮೊದಲೇ ಗಾಬರಿಯಲ್ಲಿದ್ದ ಶುಂಠನ ಜಂಗಾಬಲವೇ ಉಡಿಗಿತ್ತು. ಅಡ್ಡಲಾಗಿ ಬಂದ ಒಂದು ನಾಯಿಯ ಮೇಲೆ ಹಾಯಿಸುವದನ್ನ ತಪ್ಪಿಸಲು ಎಡಗಾಲನ್ನ ಬ್ರೇಕಮೇಲೆ ಒತ್ತುವುದನ್ಬಿಟ್ಟು ಬಲಗಾನ್ನ ಆಗ್ಸಿಲೇಟರನಮೇಲೆ ಒತ್ತಿದ್ದ, ಕಾರು ಇದ್ದಕ್ಕಿದ್ದ ಹಾಗೇ ವೇಗವಾಗಿ ಓಡಿತ್ತು. ತಪ್ಪು ಅರಿವಾಗಿ ಬ್ರೇಕನ್ನ ಬಲವಾಗಿ ಒತ್ತಿ ಕಾರನ್ನ ಅವಸರದಿಂದ ತಹಬಂದಿಗೆ ತಂದನೇನೋ ಸರಿ. ಗಾಬರಿಂiÀi ಪರಾಕಾಷ್ಟೆಯಲ್ಲಿದ್ದ ಶುಂಠ ಸ್ಟೀರಿಂಗ ಚಕ್ರದ ಮೇಲಿನ ಹಿಡಿತ ಅರಿಯದೇ ಸಡಿಲಿಸಿದ್ದ ಕಾರಣ ಕಾರು ನೇರ ಹೋಗದೆ ಎಡಕ್ಕೆ ತಿರುಗಿ ಅಲ್ಲೇ ಪಕ್ಕಕ್ಕಿದ್ದ ಹುಣಿಸೇಮರಕ್ಕೆ ಡಿಚ್ಚಿ ಹೊಡೆದು ನಿಂತಿತು. : : ಮಾರನೆ ದಿನದ ಪತ್ರಿಕಾ ವರದಿ: ನಿನ್ನೆ ಈ ನಗರದ ಪ್ರಸಿದ್ಧ ಗಾಂಪಮಠದ ಶ್ರೀ ಶ್ರೀ ಶುಂಠೇಶ್ವರ ಗಾಂಪ ಮಠಾಧೀಶರು ಕಾರಿನಲ್ಲಿ ಪ್ರಯಾಣಿಸುವಾಗ ಅಘಾತಕ್ಕೆ ಒಳಗಾಗಿದ್ದರೂ ಅಪಾಯವಿಲ್ಲದೆ ಪಾರಾಗಿದ್ದರೆ. ಬ್ರೇಕು ಸರಿಯಿಲ್ಲವಾಗಿ ಕೆಟ್ಟಿದ್ದು, ಡ್ರೈವರ್ನ ಚಾತುರ್ಯದಿಂದ ದೊಡ್ಡ ಅಪಘಾತ ತಪ್ಪಿ, ಯಾರಿಗೂ ಪ್ರಾಣಹಾನಿಯಾಗದೆ, ಮಹಾಸ್ವಾಮಿಗಳು ಕ್ಷೇಮವಾಗಿದ್ದು ಚಾಲಕ ಸಣ್ಣ ಪುಟ್ಟಗಾಯಗಳಿಗೆ ಚಿಕಿತ್ಸೆ ಪಡೆದು ಕ್ಷೇಮವಾಗಿದ್ದಾರೆ. ಕಾರಿನ ಮುಂಭಾಗಕ್ಕಷ್ಟೆ ಸ್ವಲ್ಪ ಜಖಂ ಆಗಿದ್ದು, ಸರಿಯಿಲ್ಲದ, ಸೆಕೆಂಡ್ಹ್ಯಾಂಡ್ ಕಾರನ್ನ ಮಠಕ್ಕೆ ಮಾರಿಸಿದ ವಿಷಕಂಠಪ್ಪನನ್ನ ಪೊಲೀಸರು ವಿಚಾರಣೆಗೆ ಪಡೆದಿದ್ದಾರೆ.——————————————————–
Comments