(ಗಾಂಪೋಖ್ಯಾನ) ಗಾಂಪ ಮಠದ ದಿವಾಳಿ: ಲೇಖಕ:
- haparna
- Mar 23, 2019
- 4 min read
(ಗಾಂಪೋಖ್ಯಾನ) ಗಾಂಪ ಮಠದ ದಿವಾಳಿ: ಲೇಖಕ: ಎಚ್. ಆರ್. ಹನುಮಂತ ರಾವ್. ಫೋನ್- 8095658334. ‘ಏನಂದ್ರಪ? ಗಾಂಪ ಮಠ ದಿವಾಳೀನ? ಆಯ್ತಂತ? ಏನ್ರೀ ಹಾಗಂದ್ರ?, ‘ಮಠ ದಿವಾಳಿ ಆಗೋದಂದ್ರ ಆದಾಯ ಖುಲಾಸ್ ಅಷ್ಟೇಯ, ಒಳಗೊಳಗೇ ಹೆಗ್ಣಗಳ್ಸೇರ್ಕೊಂಡಿದಾವೆನೋ, ದಿವಾಳಿ ಅಲ್ಲಪೋ’ ‘ಯಾರ್ರೀ ಹಾಗ್ಹೇಳಿದ್ದ? ‘ದಿವಾಳಿ’ನೇ ಆಯ್ತಂತೆ,-ತೆ, ‘ತಾ’ ಅಲ್ಲ, ಊರೆಲ್ಲ ಅದೇ ಮಾತೇಯ, ಆರ್ಥವಾಯ್ತಾ, ಹಾಗಾಗ್ಬಾರ್ದಿತ್ತು, ಛೇ,ಛೇ,’ ‘ಅದೇನ್ ಚಿಟ್ ಫಂಡ್ ಸಂಸ್ಥೇನಾಪ ದಿವಾಳಿ ಆಗ್ಲಿಕ್ಕ? ಎಂಥಹ ಮಠ, ಏನ್ಕಥೆ? ಯಾರ ಉಸಾಬರೀಗೂ ಹೋಗ್ದೆ, ಯಾವ ಪಕ್ಷಕ್ಕೂ ಕ್ಯಾರೇ ಅನ್ನದೇ ಇರೋ, ಆ ಮಠಧ್ಮ್ಯಾಕೆ ಗಾಂಪೇಶ್ವರನಿಗೆ ಯಾಕೋ ಸಿಟ್ಟು ಬಂದದೇ’, ‘ತೆಗೀರೀ ಆ ಮಾತ್ನ, ಹಲವಾರು ಮಠಾಧೀಸ್ರುಗೋಳೇ ಜರೀ ಪಂಚೇನಗ ಝಗಮಗ ಕಣ್ಕುಕ್ಕೋ ಶಾಲು ಹೊದ್ಕಂಡು ಮೈಯೆಲ್ಲಾ ಸೆಂಟ್ಹಾಕ್ಕಂಡೇ ಮಂತ್ರಿಗಳ ಹಿಂದೆ ರಿಸಾರ್ಟು, ಫೈವ್ ಸ್ಟಾರ್ ಹೋಟೆಲ್ನಾಗೆ ಬಳುಕೋ ದೊರೆಸಾನಿಗಳ ಸೊಂಟದ್ಸುತ್ಲೂ ಕೈ ಹಾಕ್ಕೊಂಡ್ ಮೆರೀತಾ, ಮತ್ತೆ ಮಠಕ್ಕೆ ಬಂದ್ರ, ಭಕ್ತಾದಿಗಳೇದ್ರುಗೆ ಕಾವೀ ಕೌಪೀನ ಧರಿಸ್ಕಂಡ್ ಜನರ್ಕೈಲಿ ಭಜನೆ ಮಾಡ್ಸದಿಲ್ವ? ಹಣ, ವ್ಯಾಮೋಹ, ಅಹಂಕಾರ, ಶೃಂಗಾರ ಎಲ್ಲಾ ಬಿಟ್ಟು, ವೈರಾಗ್ಯ ಹಿಡಿದ್ ಸಾಧನೆ ಮಾಡ್ಬೇಕಪ, ಸಾಧನೆ, ಅಂತೆಲ್ಲ ಬೋಧನೆ ಮಾಡವ್ರು ಇರವಾಗ ಆ ಗಾಂಪೇಶ್ವರ ಏನ್ಮಾಡ್ಕಂತಾ ಈ ಮಠದಮ್ಯಾಗ ಮುನಿಸಕೊಳ್ಳಾದಾ, ತೆಗಿ ಅತ್ಲಾಗೆ’. ‘ಅಷ್ಟಲ್ಲದೇ ಮತ್ತೆನಪಾ? ಈ ಮಠಾನೋ ತಮಗೆ ಬಂದ ಕಾಣ ಕೆನಾಗೇ ಪೂಜೆ ಮಾಡ್ಕಂಡು ಭಕ್ತರ್ಗೆ, ಹಿತವಚನ, ಚರ್ಪು ನೀಡುತ್ತಿದ್ದ ಕಂಡೀವಿ. ಮಠ ದಿವಾಳಿಯಾ? ಅಂಥಾ ಆಸ್ತಿ ಸೂರೆಯಾಗೋದೇನಿದ?’ ‘ನೀ ಹೇಳೊದ ಸರೀನೆ, ನಾನೇ ಕಣ್ಣಾರೆ ಕಂಡಿವ್ನಿ ಎಟೋ ಬಾರಿ ಹಳೇ ಗುರ್ಗಳು ಈಚಲು ಚಾಪೆ ಮ್ಯಾಕೆನೇ ಹಳೇ ಕೌಪೀನ ಹಾಕ್ಕಂಡೆ ಏಕಾದಶಿ ದಿನ ಉಪಾಸ ಮಲಕ್ಕಂಡಿರಾದ್ನನ, ಅಲ್ಲದೆ, ಎಂಥೆಂಥ ಗುರುಗಳು, ಶಿಷ್ಯರುಗಳು ಅಲ್ಲಿ ಆಗಿಹೋದರು, ಒಬ್ಬೊಬ್ಬರು ಮಠದ ನೀತಿಯಂತೆ-ಏನೂ ತಿಳೀದ ಅಮಾಯಕರಾಗಿ-‘ ‘ನೀ ಹೇಳದ್ಸರೀನೆ ಅದ ಮಾರಾಯ, ಈ ಗುರುಗೋಳ ಕುದರೆ ಸವಾರಿ, ಶಿಷ್ಯ ಹೊಳೆಗೆ ಕೊಳ್ಳೀ ಇಟ್ಟಿದ್ದ, ಒಂದಾ ಎರಡಾ ಅಂಥ ಪರ್ಸಂಗೋಳು ಇವೆಲ್ಲಾ ಏನ್ ತೋಸ್ರ್ತದ?’ ‘ಮಠದ ಲಾಂಛನ ಹೇಳತ್ತೆ “ನಹಿ ಅಜ್ನಾನ ಸದೃಶಂ, ಉನ್ನತ ವಿದ್ಯಮೇವಮಿದಂ, ತದೇವಂ ವಿಜ್ನಾನಂ”-ಅಂದ್ರೆ ಅಜ್ನಾನವನ್ನ ಮೀರಿಸಿದ ವಿದ್ಯೆ ಯಾವದೂ ಇಲ್ಲ, ಅದೇ ಸುಜ್ನಾನ, ವಿಜ್ನಾನ ಅಂತ ಎಂತೆಂತ ದೊಡ್ಡ ಮಾತ್ನೇ ಆಡವ್ರಲ್ಲಾ, ಆ ಗೌರವಕ್ಕೆ ಚಾಚೂ ತಪ್ಪದೆ ಹಿಂದಿನಿಂದಲೂ ನಡೆಸಿಕೊಂಡು ಬಂದ ಏಕೈಕ ಮಠ ಇದಲ್ವ?’ ‘ಅದಿರ್ಲೀ, ಈ ನಮ್ಮ ರಾಜಕೀಯದಲ್ಲಿನ ದೊರೆಸಾನಿಗಳ ಮಧ್ಯೆ ಯಾರ ಹಂಗಿಗೂ ಬೀಳದೆ ಎಂಥಾ ಕಷ್ಟನಷ್ಟದಾಗೂ ಈಜುತ್ತಾನೇ ಬಂದ ಮಠಕ್ಕೆ ಇಂಥ ದುರ್ಗತಿ ಬಂತೇನಾ’? ಎಂದರು ಇನ್ನೊಬ್ಬರು ಬರದ ಕಣ ್ಣೀರನ್ನ ಒರೆಸಿ, ‘ನಮ್ಮ ಮಂದಿ ಸರಿಯಿಲ್ಲರೀ, ಅದದ್ಕೇ ನಾ ಹೇಳೋದಾ, ದಿವಾಳಿಯಾಗೋವರ್ಗೆಬಿಟ್ಟುದೇ ತಪ್ಪಲ್ಲವೋ, ಏನರೀ ಮಾರಾಯೆ?್ರ’ ಎಂದು ತಮ್ಮನ್ನ ತಾವೇ ಹಳಿದುಕೊಂಡರು. ಹಲವು ವಾಯಾಡಿಗಳು-ನಮ್ಮ ದೇಶದಲ್ಲಿ ಎಂಥಂಥ ಬ್ಯಾಂಕುಗಳಿಗೇ ನಾಮ ಹಾಕಿ ಅಲ್ಲಿನ ಹಣವನ್ನೆಲ್ಲ ವಿದೇಶೀ ಕಳ್ಳ ಬ್ಯಾಂಕುಗಳಿಗೆ ಸಾಗಿಸಿ, ಪತ್ನಿಯರಲ್ಲದೆ, ಉಪಪತ್ನಿ, ಅವಳು ಇವಳ ಜೊತೆ ಸ್ವರ್ಗಸುಖದಲ್ಲಿ ತೇಲುವಾಗ ಈ ಮಠ ನೀತಿ, ನಿಯಮ, ಧರ್ಮ ಎನ್ನುತ್ತಾ ದಿವಾಳಿಯಾದದ್ದು ನಮ್ಮ ಸರ್ಕಾರದ ನಿರ್ಲಕ್ಷ್ಯವಲ್ಲದೆ ಮತ್ತೇನು?-ಎಂದೆಲ್ಲ ತಲಾತಟ್ಟಿ ಮಾತಾಡಿ, ತೆಪ್ಪಗಾದರು, ಮತ್ತೆ ತಮ್ಮ ತಮ್ಮ ಕಾರ್ಯಗಳಲ್ಲಿ ಏನೂ ಆಗಿಲ್ಲದಂತೆ ಮಗ್ನರಾದರು. ‘ಊರಿಗೆ ಬೆಂಕಿ ಬಿದ್ದರೆ ಬೆಟ್ಟದ ಮ್ಯಾಗಿನವನಿಗೇನಾಬೇಕ? ಅಲ್ಲವ ಮಾರಾಯ್ರೆ?’.
ಅಷ್ಟಲ್ಲದೆ, ಸಾಮಾನ್ಯರು ಮತ್ತೇನು ಮಾಡಿಯಾರು? ‘ಡೆಮಾಕ್ರಸಿ’ ಅಂದರೆ ತಾವೇ ವೋಟು ಕೊಟ್ಟು, ತಾವೇ ತಲೆಮೇಲೆ ಚಪ್ಪಡಿ ಎಳೆದುಕೊಳ್ಳುವ ಹೇಸರ ಕತ್ತೆಯಂತಲ್ಲದೆ ಮತ್ತೇನು? ಜೊತೆಜೊತೆಗೇ, ಹಣ, ಹೆಂಡ, ಗ್ಯಾಸ್ಟೊವ್, ಮತ್ತಿನ್ನೇನೋ ಪರಿಕರಗಳ ಪಡೆದು ಇಲ್ಲವೆ ಜಾತಿ ನೋಡಿ ವೋಟು ಹಾಕೋ ಮಂದಿ ಈ ಪ್ರತಿನಿಧಿಗಳನ್ನೂ ತೆಪ್ಪಗೆ ಬೆನ್ನಮೆಲೆ ಹೊತ್ತು ತಿರುಗವರಷ್ಟೆ ಎಂಬ ನಾಣ್ಣುಡಿಗೆ ಹೊರತಲ್ಲವರೆಂದು ಹಲವು ಅರೆಬೆಂದ ಬುದ್ಧಿಜೀವಿಗಳು ಗೊಣಗಿಕೊಂಡರು. ಒಟ್ಟಿನಲ್ಲಿ ಒಂದೇ ದಿನದಲ್ಲಿ ಕೆಲಸವಿಲ್ಲದ ಸಾಕಷ್ಟು ಮಂದಿ ಮಠದ ಅವರೋಹಣ ಕ್ರಿಯೆ ಹೇಗೆಂಬ ಕುತೂಹಲಕ್ಕಾಗಿ ಮಠದ ಹೊರಗೆ ಗುಂಪು ಕಟ್ಟಿ ಜಮಾಯಿಸಿದ್ದರು ಠುಸ್ಪಟಾಕಿಗಳ ಹೊಡೆದು ಮುಗಿಸಿ.
ವಿಷಯ ಈ ಸೂಕ್ಷ್ಮ ಪರಿಸ್ಥಿತಿಗೆ ಹೋಗುವ ಕಾರಣವೇ ಇರಲಿಲ್ಲ. ದೀಪಾವಳಿ ಹಬ್ಬದ ಹಿಂದಿನ ದಿನ ಬೆಳಿಗ್ಗೆ ಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗವಾಗಿ ಭಕ್ತರೆಲ್ಲ ಚರ್ಪು ಪಡೆದು ಮತ್ತೇನೂ ಸಿಗದ ಖಾತರಿಯಿಂದ ಹೊರನಡೆದಾಗ, ಮಠದ ಬಾಗಿಲು ಮುಚ್ಚಿ, ಶಿಷ್ಯ ಮಂಕ ತನ್ನ ತಲೆಯಲ್ಲಿ ಹೊಕ್ಕ ಹುಳವನ್ನ ಹೊರಹಾಕಿದ. ‘ಗುರುಗೋಳೆ, ಊರಿಗೇ ಊರೇ ಈ ಬೆಳಕಿನ ಹಬ್ಬ ಆಚರಿಸೋವಾಗ, ಎಲ್ಲೆಲ್ಲಿ ನೋಡಿದರೂ ಸುಂದರ ಮಕ್ಕಳು, ದೊಡ್ಡವರು ಎನ್ನದೆ ಎಲ್ಲ ಪಟಾಕಿ ಹಚ್ಚಿ ಮೆರೀವಾಗ ನಾವು ಸುಮ್ಮನಿರೋದ ನೋಡಿ ಜನ ‘ಗಾಂಪ ಮಠಕ್ಕೇನಾಗದೆ, ವಯಸ್ಸಾದ ಗುರುಗಳ ಆರೋಗ್ಯ ಏನಾಗಿದೆ, ಯಾ ತರ ಸೂತ್ಕ ಆಂಟ್ಕಂಡಿದೆ ಅಂತ ಜನಕ್ಕ ಅನುಮಾನ ಬರಾದುಂಟಲ್ಲವಾ, ಅದ್ಕ, ನಾವೂ ಯಾಕೆ ಪಟಾಕಿ ಹಚ್ಚಿ ಹಬ್ಬ ಜೋರಾಗಿ ಮಾಡಬಾರ್ದ?…” ಎಂದು ಒದರಿ ಉಗುರು ಕಚ್ಚಿದ”. ಅವನ ತಲೆ ಹೊಕ್ಕ ಹುಳಕ್ಕೆ ಬೇರೆಯೇ ಪ್ರಬಲ ಕಾರಣವಿತ್ತು. ಎದುರು ಬದುರು, ಅಕ್ಕಪಕ್ಕದ ಎಲ್ಲ ಮನೆಯ ಮಂದಿ-ಅದರಲ್ಲೂ ಮುಖ್ಯವಾಗಿ ಪ್ರಾಯಕ್ಕೆ ಬಂದ ಲಲನೆಯರು ಬಣ್ಣವಾಗಿ ಶೃಂಗರಿಸಿಕೊಂಡು ವಯ್ಯಾರದಿಂದ ಬಳುಕುತ್ತಾ, ಕುಲುಕುತ್ತಾ ಸುರುಸುರಬತ್ತಿ, ಭೂಚಕ್ರ ಇತ್ಯಾದಿ ಪಟಾಕಿ ಹಚ್ಚುವ ವೈಖರಿ ನೋಡಿ ತಾರುಣ್ಯದ ದೇಹ ಮನಸ್ಸು ಚಂಚಲವಾಗಿ, ಏನೇನೋ ಬಯಸಿತ್ತು ತಾನು ಮಠದ ಶಿಷ್ಯ ಅನ್ನೋದ ಮರೆತು. ‘ಎಲೆ ಮಂಗ್ಯಾ, ನೀ ಹ್ಯಾಂಗ ಯೋಚಿಸಲಿಕ್ಕೆ ಹೊಂಟಿಯೋ, ನಿನಗೆ ಬುರಡೆ ಮಾತ್ರ ಅದ, ಅದ್ರೊಳಗ ಖಾಲಿಖಾಲಿ ಅಂತ ಎಂದೋ ಎಲ್ಲರ್ಗೂ ಗೊತ್ತದ, ನಿನಗ್ಯಾಕ ಈ ಪಟಾಕಿ ಸಮಾಶರ?” ಎಂದು ಆ ಕೂಡಲೇ ಮಡೆಯ-ಮಠಾಧೀಶರ ಪರಮಾಪ್ತ ಶಿಷ್ಯ ಒದರಿದ. ‘ಗುರ್ಗೋಳೇ, ಈ ಮಂಕ, ಮುಠ್ಠಾಳ್ರಿಗೆ ಸುರಸುರ್ಬತ್ತೀನೂ ಹಚ್ಚಕ್ಕೆ ಬರದೆ ಕೈ ಸುಟಕಂಡಿರೋದ್ನ ನಾವೇ ನೋಡಿವೀ. ನಾ ಆಗ ಅಲ್ಲಿಲಿದ್ರ ಇವಗ ಒಂದ್ಕಣ್ ಐಬಾಗಿರಾದ. ಸುಮ್ನೆ ನಿಂ ಕೆಲ್ಸ ನೋಡ್ಕಳ್ರಪ ಮರಕೋತಿಗಳಾ, ಇದು ಗಾಂಪ ಮಠ ಅನ್ನೋದ ತಿಳೀರಲಾ’- ಮರುಳನ ಈ ಕುತ್ಸಿತ ಮಾತಿಗೆ ‘ತಲೇಲಿ ಏನ್ಬರೀ ಮರುಳೇ ತುಂಬ್ಕೊಂಡಿರ್ತೀಯ, ಅದಕ ಹೀಂಗ ನೀ ಆಡತೀ’ ಅಂತ ಮಂಕ, ಮುಠ್ಠಾಳರಿಬ್ಬರೂ ಆಗಾಗ್ಗೆ ಚುಡಾಯಿಸುತ್ತಿದ್ದುದೇ ಕಾರಣವಾಗಿತ್ತು. ಆ ಟೀಕೆಗಳನ್ನ ಅವರಿಗೇ ಹೀಗೆ ಹಿಂತಿರುಗಿಸಿದ್ದ. ‘ಶಿಷ್ಯರುಗಳಾ, ನೀವು ಗುರುಸಾನಿಧ್ಯದಲ್ಲಿರೋದ ಮರೆತು ಹೀಗ ಬಾಯಿ ಆಡಿಸ್ಲಿಕ್ಕೆ ಹೊಂಟೀರಿ, ಸರೀನಾ? ತೆಪ್ಗಿರೋದ ಕಲೀರಿ ಅಂತ ಏಟೇಟೋ ಬಾರಿ ನಾ ಹೇಳಿದ ಮರಿಬ್ಯಾಡ್ರಿ, ಇದು ಯಾವ್ಮಠ, ನಮ್ಮ ತತ್ವ ಏನದ, ಗೊತ್ತದೇ ತಾನೆ? ಸಿಕ್ಕಸಿಕ್ಕಂಗ ಯೋಚ್ನೆ ಮಾಡೋದ ಗಾಂಪಮಠದ ಹೆಸರಿಗೆ ಸರಿಬರಾದಿಲ್ಲ, ಇದೇನ ಅರಮನೆನಾ, ಮಠಾನ? ವಿಷ್ಯಕ್ಕ ಬನ್ನಿ, ಇಲ್ಲ ಮುಂದಿನ ಕಾರ್ಯ ಏನದ?’ ಮಧ್ಯಾನ್ಹದ ಭಿಕ್ಷೆ ಏನಿರಬಹುದೋ ಎಂದು ಹಸಿವಿನಿಂದ ಹೊಟ್ಟೆಯ ಮೇಲೆ ಕೈಆಡಿಸುತ್ತಾ ಕಂಗೆಟ್ಟಿದ್ದ ಗಾಂಪ ಗುರುಗಳ ಪ್ರಶ್ನೆ. ಕಳೆದ ಸಾರಿ ಇದೇ ಹಬ್ಬಕ್ಕೆ ಮಠದ ಹಳೇ ಶಿಷ್ಯನೊಬ್ಬ ಮುಂಚಿತವಾಗಿ ಸಾಕಷ್ಟು ಸಾಮಗ್ರಿಗಳನ್ನ ಒದಗಿಸಿದ್ದ ಕಾರಣ ಪಾಕ ಪ್ರವೀಣ ಮರುಳ ಮಾವಿನ ಕಾಯಿ ಚಿತ್ರಾನ್ನ, ಹೋಳಿಗೆ, ಕುಂಬಳಕಾಯಿ ಹುಳಿ ಜೊತೆಗೆ ಗೊಜ್ಜವಲಕ್ಕಿ, ಬೊಂಬಾಯಿ ಬೊಂಡ ಎಲ್ಲ ಮಾಡಿಟ್ಟು ಗಾಂಪರೊಡೆಯರು ಶಿಷ್ಯರೊಡಗೂಡಿ ಗಡದ್ದಾಗಿ ಮೆಲ್ಲಿದ್ದರು-ಗುರುಗಳ ಬಗ್ಗೆ ಹಾಗೆ ಹೇಳಬಾರದಲ್ಲವೆ-ಭಿಕ್ಷೆ ಸೇವಿಸಿದ್ದರು. ಆ ಬಾಯಿರುಚಿಯನ್ನ ಮಠದ ಶಿಷ್ಯರು ಇನ್ನೂ ಮರೆತಿರಲಿಲ್ಲ, ಗುರಗಳೂ ಕೂಡ. ಅದನ್ನ ನೆನೆದು ಇನ್ನಷ್ಟು ಹೊಟ್ಟೆ ತಳಮಳಗೊಂಡಿದ್ದರಲ್ಲೇನಾಶ್ಚರ್ಯ. ಆ ತಿಂಗಳ ಕೋಟಾ ಧಾನ್ಯ ರೇಷನ್ ಅಂಗಡಿ ನಾಮಧಾರಿ ಶೆಟ್ಟಿ ಇನ್ನೂ ಕಳಿಸಿರಲಿಲ್ಲ, ಉಗ್ರಾಣದಲ್ಲಿದ್ದ ಎಲ್ಲಾ ಸಾಮಗ್ರ್ರಿಗಳೂ ಇನ್ನೆರಡು ಮೂರುದಿನಗಳಲ್ಲೆ ಮುಗಿದು, ಮತ್ತೇನು ಎನ್ನುವ ಪರಿಸ್ಥಿತಿ ಉದ್ಭವವಾಗುವದರ ಬಗ್ಗೆ ಪಾಕ ಪ್ರವೀಣ ಮರುಳ ನೋಟೀಸು ಕೊಟ್ಟಿದ್ದ. ಇಂತಹ ಬಡಮಠಕ್ಕೆ ಯಾವ ಪಾರುಪತ್ತೇದಾರ ಸಿಗಬಲ್ಲ? ಮಠದ ಬಿಟ್ಟಿ ಊಟ ಸ್ವಾಹ ಮಾಡುತ್ತಲೇ ಅಷ್ಟಿಟ್ಟು ಕಾರ್ಯನಿರ್ವಹಿಸುತ್ತದ್ದ ಪರ್ಮೇಶಿಯನ್ನ ಒಂದು ಸುಂಡಿಲಿಯ ರಾದ್ಧಾಂತದಲ್ಲಿ ಶಿಷ್ಯರು ಹೊರಹಾಕಿದ್ದರು. ಅಷ್ಟಿಷ್ಟು ಚುರುಕಿದ್ದ ಮಡೆಯನೇ ಆ ಕೆಲಸ ನಿರ್ವಹಿಸುವಂತಾದ. ‘ಗುರುಗೋಳೇ, ಈ ಬ್ಲಾಕ್ ಮಾರ್ಕೆಟ್ ಚೋರ ನಾಮಧಾರಿ ಶೆಟ್ಟಿ ಅವ್ನ ಹಣೇಲಿರೋ ನಾಮಾನ ರೇಷನ್ ಪಡೆಯೋ ಮಂದಿಗೆಲ್ಲ ಹಂಚ್ತಾ ಇರೋದ್ನ ಸರ್ಕಾರಕ್ಕೆ ತಿಳಿಸಿದ್ರೂ ಯಾರೂ ಕ್ಯಾರೆ ಅನ್ನದೇ ಇರೋವಾಗ ನಮ್ಮಂಥ ಬಡ ಮಠ ಆತ್ಮ ಹತ್ಯೆ ಮಾಡ್ಕಂಡ್ರೂ ಅಯ್ಯೋ ಅನ್ನವ್ರಿಲ್ಲ, ಅಂಥದ್ರಾಗ ಈ ಮಂಕ ಮಂಗ್ಯನ ತರಾ ಹಬ್ಬ ಅಂದ್ರ ಹೊಸ ಕೌಪೀನ, ಪಂಚೆಮಗುಟ ಬೇಕ, ಪಟಾಕಿ ಹೊಡೀಬೇಕ ಅನ್ನೋದಾದ್ರ ಏನ?’ ಎಂದು ಮಡೆಯ ತನ್ನ ಅಧಿಕಾರ ಚಲಾಯಿಸಿ ಅವರುಗಳನ್ನ ತರಾಟೆಗೆ ತೆಗೆದುಕೊಂಡ. ಅವ್ಗ ಏನೂ ಕೆಲ್ಸ ಇಲ್ದ ಹೋದ್ರ ಹೀಂಗ ಮಾತಾಡೋದ, ಮಡೆಯ’ ಎಂದು ಅಲ್ಲಿಯವರೆಗೂ ಮೊಬೈಲ್ ಫೋನಲ್ಲಿ ಮಂಗ್ನಾಟ ಆಡುತ್ತಿದ್ದ ಶುಂಠ ಬಾಯಾಡಿಸಿದ. ಪೂರ್ವದಲ್ಲಿ ಮೊಟ್ಟಮೊದಲ ಗುರುಗಾಂಪರು ದೈವೈಕ್ಯರಾದಾಗ ಈ ಶುಂಠನ ಆಗಿನ ಸಂಬಂಧಿ ಪಿತೃಗಳ ಪೈಕಿ ಸೇವೆಯಲ್ಲಿದ್ದ ಹಿಂದಿನ ಹಳೇ ಶಿಷ್ಯ ಶುಂಠನನ್ನ ಗುರುಗಳಾಗಿ ಮಾಡಿದ್ದು, ಆ ಕಾರಣ ಈ ಮಠ ಆಗಿನಿಂದ ಶುಂಠೇಶ್ವರ ಮಠವೆಂದೇ ಪುನರ್ನಾಮ ಪಡೆದು ಪ್ರಸಿದ್ದಿಯಾಗಿದ್ದು ಇತಿಹಾಸಕ್ಕೆ ಸೇರಿಹೋದ ವಿಷಯ.
‘ಗಾಂಪ ಗುರುಗಳಗೆ ಹೊಟ್ಟೆ ಮೊದಲೇ ತಾಳ ಹಾಕುತ್ತಿದ್ದರ ಜೊತೆಗೆ ಇವರುಗಳ ವ್ಯಾಖ್ಯಾನ, ಚರ್ಚೆ ಇನ್ನಷ್ಟು ಹೆಚ್ಚಿಸಿ ಶಿಷ್ಯರುಗಳ ಮೇಲೆ ಕೋಪ ಉಕ್ಕುತ್ತಿತ್ತು. ಅಲ್ಲದೆ ಉಗ್ರಾಣ ಖಾಲಿಯಾಗುತ್ತಿದ್ದು ಏನೂ ಮಾಡಲಾಗದೆ ಕೋಪ ತಾರಕಕ್ಕೇರುತ್ತಿತ್ತು. ಆ ಸಮಯದಲ್ಲಿ ಅದೇನು ಶಿವನ ಅನುಗ್ರಹವಾ, ಆಕಸ್ಮಿಕವಾ ಇಲ್ಲ ಕಣ್ಕಟ್ಟಿನ ಮಾಯೆಯಾ? ಎಂದು ಕಣ್ಣುಜ್ಜುವಂತಾಗಿದ್ದು-ಮಠದ ಹಿಂದಿನ ದ್ವಾರದಿಂದ ಎರಡೆರಡು ಮೂಟೆ ಹೊತ್ತು ರೇಷನ್ ಅಂಗಡಿಯ ನಾಮಧಾರಿ ಶೆಟ್ಟಿಯೇ ಪ್ರತ್ಯಕ್ಷನಾದ ಗಾಂಪಗುರುಗಳ ಮುಂದೆ. ಗುರುಗಳಿಗೆ ಸಾಷ್ಟಾಂಗ ಬೀಳುತ್ತಾ.’ಗುರುಗಳೇ ನನ್ನ ಕ್ಷಮಿಸಬೇಕು, ರೇಷನ್ ಈಟು ದಿನ ಕಳಿಸಲಾಗಿದ್ದು ನನ್ನ ಅಕ್ಷಮ್ಯ ಅಪರಾಧ, ಪಾಪಿ ನಾನೆ. ನಾ ಊರಲ್ಲೇ ಇರಲಿಲ್ಲ ಗುರುಗಳೇ ನಂಬಿ ನನ್ನ, ನನ್ನ ಮಗನಿಗೆ ಹೇಳಿದ್ದೆ ರೇಷನ್ ತಲುಪಿಸಲು. ಅವ ಮರ್ತೆ ಹೋದಾನ. ವಿಷಯ ತಿಳಿದ ಮ್ಯಾಕ, ಅವಗ ಛಡಿ ಏಟುಗಳ ಕೊಟ್ಟು, ಮನ್ಯಾಗೆ ಕಟ್ಹಾಕಿ ಬಂದಿವ್ನಿ, ಏನ ಮಾಡಿದ್ರೂ ಬುದ್ಧಿ ಬರಾಕಿಲ್ಲ, ನೀವು ನನ್ನ ಕ್ಷಮಿಸಬೇಕು, ಇಲ್ಲದಿದ್ರೆ ನಾ ಏಳಾದೇ ಇಲ್ಲ’ ಎನ್ನುತ್ತ ಕೃತಕ ಕಣ ್ಣೀರು ಸುರಿಸಿದ. ಇವನ ನಾಟಕೀಯ ನಡಾವಳಿ ತಿಳಿದಿದ್ದ ಎಲ್ಲಾ ಶಿಷ್ಯರೂ ಅಸಹನೆ, ಕೋಪದಿಂದ ಅವನ ಮೇಲೆ ಕೈ ಎತ್ತುತ್ತಿದ್ದಂತೆ, ಮಡೆಯ ಎಲ್ಲರನ್ನೂ ತಡೆದು ಅವನ ರೆಟ್ಟೆ ಹಿಡಿದು ಬಲವಾಗಿ ಎಬ್ಬಿಸಿ ಪಕ್ಕಕ್ಕೆ ತಳ್ಳಿದ, ಆ ರಭಸಕ್ಕೆ ಶೆಟ್ಟಿ ಪಕ್ಕದ ಗೋಡೆ ಹಿಡಿದು ಸಾವರಿಸಿ ನಿಂತ. “ಏ ನಾಮಧಾರಿ, ಈ ನಾಟಕದ ಮಾತುಗಳ ಇಲ್ಲಿ ಯಾರ ಮುಂದೆ ಹೇಳಲಿಕ್ಕ ಹೊಂಟಿ, ಮರೀಬ್ಯಾಡ, ಎಲ್ಲರಿಗೂ ಗೊತ್ತಾಗದ ನಿನ ಅವತಾರ ಏನಂತ.’ ಎಂದು ಮಾತಿನಲ್ಲೇ ಉರಿದುಬಿದ್ದ. ‘ಆಗ ಬಾ, ಈಗ ಬಾ ಎಂದು ಮಡೆಯನನ್ನೇ ಈ ಶೆಟ್ಟಿ ಆಟ ಆಡಿಸುತಿದ್ದ ಕಾರಣ ಮಡೆಯನ ಕೋಪ ಮೂಗಿಗೇರಿತ್ತು.
Comments