ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಪತ್ರಿಕೆಗಳಿಗೆ ನಾ೦ದಿಯಾದ “ಕೊರವಂಜಿ” ಈಗಿನ ಪೀಳಿಗೆಯ ಎಷ್ಟು ಜನರಿಗೆ ಗೊತ್ತು?– ಕ
- haparna
- Sep 16, 2016
- 3 min read
ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಪತ್ರಿಕೆಗಳಿಗೆ ನಾ೦ದಿಯಾದ “ಕೊರವಂಜಿ” ಈಗಿನ ಪೀಳಿಗೆಯ ಎಷ್ಟು ಜನರಿಗೆ ಗೊತ್ತು? ಕೊರವಂಜಿ- ಅಪರಂಜಿ ಪರಂಪರೆ. ‘೫೦-೭೦ ರ ದಶಕಗಳ ಬೆಂಗಳೂರಿನ ನಗರವಾಸಿಗಳಿಗೆ ಮೆಜಸ್ಟಿಕ್ ಟಾಕಿಸ್ ನ ಬಲಬದಿಗೆ ಅಂಟಿಕೊಂಡಂತಿದ್ದ “ಸಿಟಿ ಡಿಸ್ಪೆನ್ಸರಿ” ಚಿಕಿತ್ಸಾಲಯ ಚಿರ ಪರಿಚಿತವೆಂದೇ ಹೇಳಬಹುದು. ಅಲ್ಲಿಯ ದವಾಖಾನೆಗೆ ಹೋದವರು ತಮ್ಮ ಆರೋಗ್ಯ ತಪಾಸಣೆ, ಚಿಕಿತ್ಸೆ ಜೊತೆಗೆ, ಡಾಕ್ಟರ್ ಶಿವರಾಂರವರ ನಗೆ ಚಟಾಕಿಗಳಿಂದ ಹಸನ್ಮುಖರಾಗಿ ಹೊರಬರುತ್ತಿದ್ದುದು ಸರ್ವೇಸಾಮಾನ್ಯ ಅಂಶವಾಗಿತ್ತು . ಚಿಕೆತ್ಸೆಯೊಂದಿಗೆ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲವರಾಗಿದ್ದ ಈತ “ರಾ.ಶಿ.” ಎಂದೇ ಖ್ಯಾತನಾಮರು. ಚ್“ಕೊರವಂಜಿ”ಯಂತಹ ಉತ್ಕೃಷ್ಟ ಹಾಸ್ಯ ಸಾಹಿತ್ಯ ಪತ್ರಿಕೆಯ ಹುಟ್ಟಿಗೆ ಕಾರಣರಾಗಿದ್ದಲ್ಲದ್ದೆ, ‘೫೦ರ ದಶಕದವರೆಗೂ ಇಡೀ ಕರ್ನಾಟಕದಲ್ಲೇ ಒಂದಾದರು ವೈದ್ಯಕೀಯ ಕಾಲೇಜಿಲ್ಲದ ಆ ಕಾಲದಲ್ಲಿ, ಬಹಳಷ್ಟು ಶ್ರಮವಹಿಸಿ ಸರ್ಕಾರದ ವತಿಯಿಂದ “ಬೆಂಗಳೂರು ಮೆಡಿಕಲ್ ಕಾಲೇಜಿ”ನ ಸ್ಥಾಪನೆ ಹಾಗು ಅದರ (ಡೀನ್) ಮೇಲ್ವಿಚಾರಿಕರಾಗಿಯೂ ಕಾರ್ಯ ನಿರ್ವಹಿಸುವ ಜವಾಬ್ದಾರಿ ಹೊತ್ತ ಮೇಧಾವಿ ಹಾಗು ಕನ್ನಡದ ಧೀಮಂತ ವ್ಯಕ್ತಿ.
ಅಪಾರ ಹಾಸ್ಯ ಪ್ರಜ್ಞೆಯ ಈ “ರಾ.ಶಿ.” ಏಳು ದಶಕಗಳಿಗೂ ಹಿಂದೆ, ಸುಪ್ರಸಿದ್ಧ ಆಂಗ್ಲ “PUNCH” ಹಾಸ್ಯ ಪತ್ರಿಕೆಯಿಂದ ಬಹಳಷ್ಟು ಪ್ರಭಾವಿತರಾಗಿದ್ದವರು. ಕನ್ನಡಿಗರಿಗೂ ಆ ತೆರನ ಹಾಸ್ಯ ಸಾಹಿತ್ಯ ಉಣಬಡಿಸಬೇಕೆಂಬ ಕಳಕಳಿಯಿಂದ “ಕೊರವಂಜಿ” ನಗೆ ಬರಹಗಳ ಮಾಸ ಪತ್ರಿಕೆಯೊಂದನ್ನ ನಾ.ಕಸ್ತೂರಿಯವರ ಒಡಗೂಡಿ ಪ್ರಕಟಿಸಲು ತಮ್ಮ ವೃತ್ತಿ ಜೀವನದ ಹೊಣೆಗಾರಿಕೆಯ ಜೊತೆಗೆ ಪ್ರಾರಂಭಿಸಿದವರು. “ಕೊರವಂಜಿ”ಯು ಪತ್ರಿಕಾ ಪ್ರಪಂಚದಲ್ಲಿ “ಆಧುನಿಕ ನಗೆಪ್ರಜ್ಞೆಯ ಹರಿಕಾರಿಣಿ”, “ದ್ರಷ್ಟಾರ”, ಹಾಸ್ಯ ಸಂಜೀವನಿ”ಯ ಮೈಲಿಕಲ್ಲು ಎಂದೆಣಿಸಿದರೂ ಸತ್ಯಕ್ಕೆ ದೂರವಿಲ್ಲ. ಇವರು ಆಗಿನ ಕಾಲದ ಸುಪ್ರಸಿದ್ಧ ಹಾಸ್ಯ ಬರಹಗಾರರಾದ ವುಡ್ ಹೌಸ್, ಸ್ಟೀಫನ್ ಲೀಕಾಕ್ ಮತ್ತಂತಹವರ ಬರಹಗಳನ್ನು ಮೆಚ್ಚಿಕೊಂಡವರು. “ಕೊರವಂಜಿ” ಪ್ರ್ರಾರಂಭಿಸುವುದಕ್ಕೂ ಮುಂಚೆ “’ನವಜೀವನ” ಪತ್ರಿಕೆಯಲ್ಲಿ ’ಸೋಮವಾರದ ಸುಸುದ್ಧಿ’ ಅಡಿ ’ನಗೆಚಟಾಕಿ’ ಕುಹಕಿಡಿ” ಗಳನ್ನು ಬರೆಯುತ್ತಿದ್ದವರು. ೧೯೪೨ರ ಕಾಮನಹಬ್ಬದಂದು (ಮಾರ್ಚಿ ೧೮) ಜನ್ಮತಾಳಿದ ಈ ಪತ್ರಿಕೆಗೆ ದಿ. ಕೈಲಾಸಮ್ ಕೂಡ ಒಂದು ರೀತಿಯಲ್ಲಿ ಕಾರಣಕರ್ತರು. ಅವರೊಡನೆ ಕಂಟೋನ್ಮೆಂಟ್ಗೆ ಸೈಕಲ್ಲಿನಲ್ಲಿ ಸವಾರಿ. ಉದ್ದಕ್ಕೂ ಮಾತುಕತೆ. ಅವರ ಮಾರ್ಕಂಡೇಯ ಚಿತ್ರಣ ತನ್ನಲ್ಲಿದ್ದ ಅಹಂಕಾರ, ಸ್ವಾರ್ಥ ಸ್ವಲ್ಪ ಕರಗಿ ನಾನು ಮನುಷ್ಯವರ್ಗಕ್ಕೆ ಸೇರುವಂತಾದೆ” ಎನ್ನುತ್ತಾರೆ. ರಾ.ಶಿ. ಕೈಲಾಸಂ ನಗೆ ನಾಟಕಕಾರರಾಗಿ ಆ ವೇಳೆಗೆ ಇಡೀ ಕರ್ನಾಟಕದಲ್ಲೇ ಹೆಸರು ಮಾಡಿದ್ದವರು. ರಾಶಿಯೊಂದಿಗೆ ಒತ್ತಾಸೆಯಾಗಿ ನಿಂತ ಸಮಾನ ಮನೋಧರ್ಮದ ನಾ.ಕಸ್ತೂರಿಯವರು. ಇವರಿಬ್ಬರ ನಿಸ್ವಾರ್ಥ ಸೇವೆ ಕನ್ನಡ ನಗೆ ಸಾಹಿತ್ಯಕ್ಕೆ ಒಂದು ಮಹತ್ವದ ಮೈಲಿಗಲ್ಲಾಗಿ ಪರಿಣಮಿಸಿತು. ಇಂದು “ಕೊರವಂಜಿ” ಹಾಕಿಕೊಟ್ಟ ಮ್ಪೇಲ್ಪಂಕ್ತಿಯಲ್ಲೇ ಅನೇಕ ಹಾಸ್ಯ ಪತ್ರಿಕೆಗಳು ಪ್ರಕಟಿತಗೊಳ್ಳುತ್ತಿವೆ . ಆದರೆ, ಎರಡನೆ ಮಹಾಯುದ್ಧದ ಭೀತಿಯಲ್ಲಿದ್ದ ಆ ಜನಗಳ ಮಧ್ಯೆಯೂ ಕೊರವಂಜಿ ಯಂತಹ ಹಾಸ್ಯ ಪತ್ರಿಕೆ ತರಬೇಕಾದರೆ ಅದೇನು ಆಗಿನವರ ಅದೃಷ್ಟವೋ, ಇವರ ಹುಚ್ಚು ಧೈರ್ಯವೋ! ಅಥವಾ ನಗೆ ಸಾಹಿತ್ಯೋ ಪಾಸಕರ ಬೆಂಬಲವೋ ಬಲ್ಲವರಾರು? “ಕೊರವಂಜಿ”ಯು ಸತತ ೨೫ ವರುಷಗಳ ಹಾಸ್ಯದೌತಣ ನೀಡುವಂತಾಯಿತಲ್ಲದೆ, ಇಂದು ಅಪಾರ ಖ್ಯಾತಿಗಳಿಸಿದ “ಅ.ರಾ.ಸೇ, ರಾಮಿ, ಕೇಫ಼, ದಾಶರಥಿ, ಹಾ. ರಾ, ರಾಮಾನುಜ, ಸುನಂದಮ್ಮ, ಮತ್ತಿತರರ ಲೇಖಕರ ದಂಡನ್ನೇ ಹಾಸ್ಯ ಪ್ರಿಯ ಓದುಗರಿಗೆ ಅರ್ಪಿಸಿಲು ಕಾರಣವಾಯಿತು. ಆ ದಿನಗಳಲ್ಲಿ ಕಸ್ತೂರಿಯವರ ವಿದ್ಯಾರ್ಥಿಯಾಗಿದ್ದ ಆರ್.ಕೆ.ಲಕ್ಷ್ಮಣ್ ಮುಂದೆ ’ಟೈಮ್ಸಾಫ಼್ ಇಂಡಿಯ’ ದ ಮೂಲಕ ವಿಶ್ವ ವಿಖ್ಯಾತರಾದುದು ಲೋಕವಿದಿತ. ಈತನಲ್ಲಿ ಸುಪ್ತವಾಗಿದ್ದ ವ್ಯಂಗ್ಯಚಿತ್ರಕಾರನ ಹುಟ್ಟಿಗೆ ’ಕೊರವಂಜಿಯೂ ಕಾರಣವಾಗಿ, ರಾ.ಶಿ., ಕಸ್ತೂರಿ, ಇವರುಗಳ ನಗೆಲೇಖನಗಳೊಂದಿಗೆ ಬೆಳೆದ ಈತ ೧೯೫೧ರ ನಂತರ ’ಟೈಮ್ಸಾಫ಼್ ಇಂಡಿಯ’ ಸೇರಿದರು. “ಕುಹಕಿಡಿಗಳು” ಹಾಗೂ “ಉರಿಗಾಳು, ಕೊರವಾವಲೋಕನ” ಅಂಕಣಗಳು, ರಾ.ಶಿ.ಯವರ ಅರಳು ಹುರಿದಂತಹ ಮಾತುಗಾರಿಕೆಯ ಪ್ರತಿಬಿಂಬದ೦ತಿರುತ್ತಿದ್ದವು. ಅಲ್ಲದೆ ಅಂದಿನ ಪ್ರಚಲಿತ ರಾಜಕೀಯ, ಸಾಮಾಜಿಕ ವಿಷಯಗಳನ್ನು ವಿಡಂಬಿಸಿ ಹಾಸ್ಯಕ್ಕೆ ದಾರಿ ಮಾಡಿ ಓದುಗರ ಮನ ತಣಿಸುತ್ತಿದ್ದರು. ಇಷ್ಟಾದರೂ, ೪೦ ಪುಟಗಳ ಈ ಪತ್ರಿಕೆಯ (ಕೊನೆಯ ದಿನಗಳಲ್ಲಿಯು ಕೂಡ) ಮುಖ ಬೆಲೆ ಕೇವಲ ೨೫ ಪೈಸೆಗೆ ಅಂಗಡಿಗಳಲ್ಲಿ ದೊರೆಯುತ್ತಿತ್ತೆಂದರೆ ಏನಾಶ್ಚರ್ಯ? ಹೀಗೆ ಇಪ್ಪತ್ತೈದು ವರುಷ ಕನ್ನಡಿಗರನ್ನ ರಂಜಿಸಿದ ಪತ್ರಿಕೆ ಕೊನೆ ಕೊನೆಗೆ ಕೊಂಡು ಓದುವವರ ಸಂಖ್ಯೆಯಿಂದ ಬರುವ ಆದಾಯ ಪತ್ರಿಕಾ ಪ್ರಕಟನಾ ಖರ್ಚು, ವೆಚ್ಚಕ್ಕೆ ಸರಿತೂಗಲಾಗದೆ, ಪತ್ರಿಕಾನಷ್ಟಿಪರೆಂದೇ ಕರೆದುಕೊಂಡು ೧೯೬೭ರ ಏಪ್ರಿಲ್ ಸಂಚಿಕೆಯೊಂದಿಗೆ ಬಹು ದು:ಖದಿಂದಲೇ ನಿಲ್ಲಿಸಬೇಕಾದದ್ದು ಕನ್ನ್ನಡಿಗರ ದುರಾದೃಷ್ಟವೋ, ಆಗಿನ ಜನರ ಹಾಸ್ಯ ದೃಷ್ಟಿ ಎತ್ತ ಸಾಗುತ್ತಿದೆಯೆಂಬುದರ ದ್ಯೋತಕವೋ ಯಾರು ಹೇಳಬಲ್ಲರು? ಆ ಕೊನೆಯ ಸಂಚಿಕೆಯಲ್ಲಿ, ಕೊರವಂಜಿ ವಿದಾಯ ಹೇಳುವ ಈ ಸಂಭಾಷಣೆಯನ್ನು ರಾಶಿಯವರು ಪ್ರಕಟಿಸಿದ್ದು ಅದನ್ನೇ ಅರ್ಥಗರ್ಭಿತವಾಗಿ ಪ್ರತಿಧ್ವನಿಸುತ್ತದೆ. ಕೊರವಂಜಿ “ನಾ ಹೋಗಿಬಿಟ್ಟು ಬರ್ತೀನಿ”, “ಹೌದೆ, ನೀ ಇದ್ದದ್ದೇ ಗೊತ್ತಾಗಲಿಲ್ವೇ ತಾಯಿ?”. ಅಪರಂಜಿಯ ಹುಟ್ಟು. ಆದರೆ, ಪರಿಸ್ಥಿತಿಯ ದೆಸೆಯಿಂದಾಗಿ ’ಕೊರವಂಜಿ’ ಕಾಡಿಗೆ ಹೋಗಬೇಕಾದರೂ, “ ಅಪರಂಜಿ” ಯಾಗಿ ಮರುಹುಟ್ಟಿದಳೆಂದರೆ ನಿಜವಾಗಿಯೂ ಸಖೇದಾಶ್ಚರ್ಯವೇ! ಸರಿಯಾಗಿ ೨೫ ವರುಷಗಳ ನಂತರ ಆ ಸೂಲಗಿತ್ತಿಯ ಕಾರ್ಯವೂ ’ಕೊರವಂಜಿ’ಯ ಪರಿಚಾರಕರಿಂದ ೧೯೮೩ ರಲ್ಲಿ ನಡೆದುಹೋಯಿತು! ರಾಶಿಯವರ ವೃದ್ಧಾಪ್ಯದ ಅಂಚಿನ ಹಾಗು ಅವರ ಅಂತ್ಯ ಕಾಲದ ಆ ದಿನಗಳಲ್ಲಿ! ಅಪರಂಜಿಯ ಹುಟ್ಟಿಗೆ ಬರಹಗಾರರ ಗುಂಪಿನ ’ಆಧ್ವ್ಯೈರ್ಯು’ ರುಗಳಾಗಿ ರಾಶಿಯವರ ಪುತ್ರ ಶ್ರೀ ಶಿವಕುಮಾರ, ಅ.ರಾ.ಸೇ ಮತ್ತು ಶೇಷಗಿರಿಯವರ ಒತ್ತಾಸೆಯ ಕಾರಣದಿಂದ ಅದರ ಪುನರ್ಜನ್ಮಕ್ಕೆ ಮತ್ತೆ ಒಪ್ಪಿಗೆಯನ್ನ ಕೊಟ್ಟು ತಾವೇ ಹೆಸರು ಬದಲಿಸಿ “ಅಪರಂಜಿ” ಎಂಬ ಮರುನಾಮಕರಣ ಮಾಡಿ ಹಾರೈಸಿದರು. ೧೯೮೩ರ ಶ್ರಾವಣ ಮಾಸದಲ್ಲಿ ‘ಅಪರಂಜಿ’ ಯ ಮೊದಲ ಸಂಚಿಕೆ ಅ.ರಾ.ಸೇ. ಅವರು ಪ್ರಧಾನ ಸಲಹೆಗಾರರಾಗಿ, ಚಿತ್ರದುರ್ಗದಲ್ಲಿ ಶ್ರೀ ಶೇಷಗಿರಿಯವರ ಸಂಪಾದಕತ್ವದಲ್ಲಿ ಬಿಡುಗಡೆ ಆಯಿತು. ಬೆಂಗಳೂರಿನಿಂದ ಅದರ ವಿತರಣ ಕಾರ್ಯವನ್ನು ಶ್ರೀ ಶಿವರಾಂರವರ ಪುತ್ರ ಶ್ರೀ ಶಿವಕುಮಾರ್ ವಹಿಸಿಕೊಂಡರು. ಏಳೆಂಟು ತಿಂಗಳ ನಂತರ ಈ ತಾತ್ಕಾಲಿಕ ಪರಿಸ್ಥಿಯಿ ಇನ್ನಷ್ಟು ಸುಧಾರಣೆಯಾಗಿ, ಶ್ರೀ ಶಿವಕುಮಾರ್ ರವರ ಸಂಪಾದಕತ್ವದಲ್ಲಿ ಬೆಂಗಳೂರಿನಿಂದಲೇ ಹೊರತರಲು ಪ್ರ್ರಾರಂಭ. ಕೊರವಂಜಿಯ ಹಿರಿಯ ಬರಹಗಾರರ ಬಳಗದ ಅ.ರಾ.ಸೇ., ಟಿ.ಸುನಂದಮ್ಮ, ರಾಮಿ, ಕೇಫ, ದಾಶರಥಿ ದೀಕ್ಷಿತ್ ಇವರುಗಳು ಅತ್ಯಂತ ಅಕ್ಕರೆಯಿಂದ ಅಪರಂಜಿಯ ತನ್ನ ಶೈಶವದ ದಿನಗಳಲ್ಲಿ ಲೇಖನಗಳನ್ನಿತ್ತು ಪೋಷಿಸಿಕೊಂಡು ಬಂದರು. ಇದೀಗ, ಅಪರಂಜಿಯೂ ಅದೇ ಮನೋಭಾವದ ನಗೆ ಸಾಹಿತ್ಯ ಪರಿಚಾರಕರ ಒಂದು ದಂಡನ್ನೇ ನಿರ್ಮಿಸಿದೆಯೆಂದರೆ ಉತ್ಪ್ರೇಕ್ಷೆಯ ಮಾತಲ್ಲ. ಪ್ರಾರಂಭದಿಂದಲೇ ಅಪರಂಜಿಯ ಬಳಗವನ್ನು ಸೇರಿದ ಶ್ರೀನಿವಾಸ ವೈದ್ಯ, ಲೀಲಾ ಮಿರ್ಲೆ, ಎಂ.ಎಸ್.ಕೆ. ಪ್ರಭು, ಶಾಂತಾ ರಘು ಇವರುಗಳೆಲ್ಲಾ ತಮ್ಮ ಉತ್ಕ್ರಷ್ಟ ಹಾಸ್ಯ ಪ್ರಜ್ಞೆಯಿಂದ ಅಪರಂಜಿಯನ್ನು ಓದುಗರಿದ್ದಲ್ಲಿಗೇ (ಅಂತರ್ಜಾಲ ಮೂಲಕವೂ )ಕೊಂಡು ಹೋಗಿ ಉತ್ತಮ ಅಭಿರುಚಿಯನ್ನು ಓದುಗರಲ್ಲಿ ಬೆಳಸಲು ಕಾರಣರಾದರು. ಸಂಪಾದಕತ್ವದ ಜೊತೆಗೆ ಪತ್ರಿಕೆಯ ಎಲ್ಲ ವಹಿವಾಟುಗಳೂ ಶಿವಕುಮಾರರೇ ವಹಿಸಿ ಕೊಳ್ಳಬೇಕಾಗಿದ್ದು, ಆ ಭಾರವನ್ನು ಇಳಿಸಲು ನಾಗೇಶರವರ ಸಲಹೆಯಂತೆ, ಉತ್ಸುವಾರಿಗೆ ೧೯೯೯ನೇ ಅಕ್ಟೋಬರ್ ಹದಿನಾಲ್ಕರಂದು ಕೊರವಂಜಿ-ಅಪರಂಜಿ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿತು. ಗುಂಡೂರಾವ್, ನಾಗೇಶ್, ಬೇಲೂರು ರಾಮಮೂರ್ತಿ, ವಿ.ಆರ್.ನಾಥ್ ಹಾಗೂ ಎಚ್.ಎಸ್.ಕೃಷ್ಣ ಇವರುಗಳು ಶಿವಕುಮಾರ್ ಜೊತೆಯಾಗಿ ಸ್ಥಾಪಕ ಟ್ರಸ್ಟಿಗಳಾದರು. ಈಚೆಗೆ ಸಾಂಧರ್ಭಿಕವಾಗಿ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಶ್ರೀಯುತರುಗಳಾದ ಬೇಲೂರು ರಾಮ ಮೂರ್ತಿ, ವಿ.ಆರ್. ನಾಥ್, ಎಚ್.ಎನ್. ಆನಂದ, ಸಿ.ಆರ್. ಸತ್ಯ, ಕೆ.ಆರ್. ರವೀಂದ್ರ ರಾವ್ ರುಗಳ ಸಹಯೋಗದಲ್ಲಿ ಶಿವಕುಮಾರ್ ಮ್ಯಾನೇಜಿಂಗ್ ಟ್ರಸ್ಟಿಯ ಜವಾಬ್ದಾರಿ ಹೊತ್ತು ಅಷ್ಟೇ ಉತ್ಸಾಹದಿಂದ ಮುನ್ನಡೆಸುತ್ತಿದ್ದಾರೆ. ಶ್ರೀ ಅ.ರಾ.ಸೇ. ಜೀವಂತ ಇರುವವರೆಗೂ ಗೌರವ ಸಲಹೆಗಾರರಾಗಿದ್ದವರು. ಹೀಗೆ ಅಪರಂಜಿ ಇಂದು ತನ್ನ ೩೩ ವರುಷಗಳ ಸೇವೆ ಮುಗಿಸಿ ಧೈರ್ಯವಾಗಿ ಎಲ್ಲ ಅಭಿಮಾನಿಗಳ ಮುಖೇನ ಮುನ್ನಡೆಯುತ್ತಿದ್ದು, ಆದನ್ನು ಮತ್ತಷ್ಟು ಪುರೋಭಿವೃದ್ಧಿಗೊಳಿಸಿ, ನಿರಂತರವಾಗಿ ಕನ್ನಡಿಗರ ಮಧ್ಯೆ ವಿಜೃಂಭಿಸಬೇಕೆಂಬುದು ಹಾಸ್ಯಪ್ರಿಯರೆಲ್ಲರ ಆಶಯ. ಇದು ನೆರವೇರಬೇಕಾದರೆ ನಿರಂತರ ನಗೆಯನ್ನು ಬಯಸುವ ಪ್ರತಿಯೊಬ್ಬ ಕನ್ನಡಿಗನೂ ‘ಅಪರಂಜಿ’ಯಂತಹ ಹಾಸ್ಯವನ್ನುಣಿಸುವ ಪತ್ರಿಕೆಗಳಿಗೆ ಬೆಂಬಲ ತನು, ಮನ, ಧನ ರೂಪದಲ್ಲಿ ಸಲ್ಲಿಸಿ ಮುನ್ನಡೆಸಬೇಕಾದುದು ಅನಿವಾರ್ಯವಲ್ಲವೇ? ಅಲ್ಲದೆ ‘ರಾಶಿ.’ ಯಂತಹವರಿಗೆ ನಾವು ಸಲ್ಲಿಸಬೇಕಾದ ಋಣವೂ ಕೂಡ. …………………. ——————————————————————————– ಲೇಖಕ: ಎಚ್. ಆರ್. ಹನುಮಂತ ರಾವ್,ಈ-ಮೇಲ್: hrhrau@gmail.com ———————————————————————
Comments