ಕೃಷ್ಣಾರ್ಪಣ:
- haparna
- Aug 3, 2016
- 3 min read
ಲೇಖಕ: ಎಚ್. ಆರ್. ಹನುಮಂತ ರಾವ್, —————————————————————————————————————– ಇತ್ತೀಚಿಗೆ ನಾನೊಂದು ಪುಸ್ತಕದ ಲೋಕಾರ್ಪಣೆಯ ಸಭೆಗೆ ಹೋಗಲೇಬೇಕಾದ ಸಂಧರ್ಭ ಒದಗಿ ಬಂತು, ನನ್ನ ಸಾಹಿತ್ಯಾಭ್ಯಾಸಿ ಮಿತ್ರರ ಬಲವಂತಕ್ಕಾಗಿ -ನಿಜ ಹೇಳಬೇಕೆಂದರೆ ನನ್ನ ಆತ್ಮೀಯ ಮಿತ್ರ ಟಿ.ಎಸ್.ಕೆ. ಅವರ ಭಾವ ಮೈದುನನ ಮಗಳು ಬರೆದ ಚೊಚ್ಚಲ ಕವನ ಸಂಗ್ರಹದ ‘ಲೋಕಾರ್ಪಣೆ’ಯ ಸಲುವಾಗಿ. -ಅವರೂ ಹೆಂಡತಿಯ ತಮ್ಮನ ಮಗಳೆಂಬ ಕಾರಣ, ದಾಕ್ಷಿಣ್ಯಕ್ಕಾಗಿ ಅಧ್ಯಕ್ಷತೆಯನ್ನು ವಹಿಸುವುದರ ಜೊತೆಗೆ ನಾನು ಭಾಷಣಕಾರನಾಗಿ ಅವರಿಗೆ ಸಾಥ್ ಕೊಡಬೇಕಾದ ಅನಿವಾರ್ಯ ಪರಿಸ್ಥಿತಿ. ಸಾಮಾನ್ಯವಾಗಿ ಸಭೆ, ಸಂಘ, ಸಮಾರಾಧನೆಗಳ ಕಾರ್ಯಕ್ರಮಗಳಿಗೆ ನಾನು ಹೋಗುವುದು ಅಪರೂಪ. ನನ್ನ ವೈಯುಕ್ತಿಕ ಆಸಕ್ತಿ, ಅಭಿರುಚಿ ಏನೇ ಇರಲಿ, ಭಾಷಣ ಮಾಡುವುದಕ್ಕಿಂತ ಕೇಳುವುದು ಕಷ್ಟಕರವೆಂದು ಅನೇಕ ಸಂಧರ್ಭಗಳಲ್ಲಿ ನಾನು ಅನುಭವದಿಂದ ಕಲಿತಿರುವ ಪಾಠ. ನಿಮಗೂ ಎಷ್ಟೋ ಸಂಧರ್ಭಗಳಲ್ಲಿ ಹಾಗೆಯೇ ಅನಿಸಿರಬಹುದೇನೋ. ವೇದಿಕೆಯನ್ನು ಅಲಂಕರಿಸುವ ಅತಿಥಿ, ಅಭ್ಯಾಗತರ(ಗಣ್ಯರೆಂದು ಕರೆದರೆ ನನ್ನ ಅಭ್ಯಂತರವೇನು ಇಲ್ಲ) ಸಾಲಿನಲ್ಲಿ ಕೂಡುವುದೆಂದರೆ ಸಭಿಕರ ಮುಂದೆ ವೇದಿಕೆಯ ಮೇಲೆ ಎದೆಯುಬ್ಬಿಸಿ ಗತ್ತು, ಗಮ್ಮತ್ತಿನಿಂದ ಕುಳಿತುಕೊಳ್ಳುವದು ಮೋಜೆನಿಸುವುದೇನೋ ನಿಜವೇ. ಆದರೆ ಅಲ್ಲಿ ನಿಜವಾಗಿಯೂ ಅನೇಕ ತೊಡರುಗಳಿರುವುದುಂಟು. ಪುಂಖಾನುಪುಂಖಾನುವಾಗಿ ಒಬ್ಬರ ನಂತರ ಒಬ್ಬರು ಭಾಷಣ ಮಾಡುವವರಿದ್ದರೆ, ವೇದಿಕೆಯ ಮೇಲಿರುವವರು ನಿದ್ದೆ ಬರುವುದನ್ನು ತಡೆಹಿಡಿಯುವುದಾದರೂ ಹೇಗೆ? ಬಾಷಣದ ಕೊರೆತದೊಂದಿಗೆ ನಿರಂತರವಾಗಿ ಆಕಳಿಕೆ ಬರುತ್ತಿದ್ದರೂ ಸಭಾ ಗೌರವದ ದೃಷ್ಟಿಯಿಂದ ತಡೆ ಹಿಡಿಯಲೇಬೇಕು. ನಿಮ್ಮ ಕೈಗೆ ಧ್ವನಿವರ್ಧಕ ಬರುವ ವೇಳೆಗೆ ಅಲ್ಲಿ ಜನರು ಖಾಲಿ ಯಾಗುತ್ತಿರುವುದನ್ನ ಗಮಿನಿಸಿ, ಜವಾಬ್ದಾರಿ ಹೊತ್ತವರು ನಿಮ್ಮನ್ನು ಬೇಗನೆ ಮುಗಿಸಿರೆಂದು ಕೇಳುವ ಪ್ರಮೇಯ ಉಂಟಾಗುವದಿದೆ! ನೀವು ಈ ಸಂಧರ್ಭಕ್ಕಾಗಿಯೇ ತಯಾರಿಸಿದ- ಆದ್ದೂರಿಯ-’ವಿದ್ವತ್ಪೂರ್ಣ ಭಾಷಣ’ ಎಂದು ಬೇಕಾದರೂ ಕರೆಯಿರಿ- ನೀರಿಗೆ ಹಾಕಿದಂತೆ ಆಗುವದಿಲ್ಲವೇ? ಮನೆಗೆ ಬಂದ ನಂತರ ಹೆಂಡತಿ ಹಾಗು ಭಾವಮೈದುನ ಅಥವಾ ಸ್ನೇಹಿತರು ನಿಮ್ಮ ಭಾಷಣ ಎಲ್ಲರಿಗೂ ಮೆಚ್ಚಿಗೆ ಆಯಿತೇ, ಎಷ್ಟು ಹೊತ್ತು ಮಾತಾಡಿದಿರಿ, ಚಪ್ಪಾಳೆ ಎಷ್ಟು ಗಿಟ್ಟಿಸಿದಿರಿ ಎಂದು ಕೇಳಿದರೆ ನಾನು ಎನು ಹೇಳಲಿ? ಎರಡನೆಯ ಅಂಶವೆಂದರೆ, ವೇದಿಕೆಯನ್ನ ಅಲಂಕರಿಸಿರುವಷ್ಟು ಸಮಯ ದೃಷ್ಟಿ ಯಾರಿಗೂ ತಾಕದಂತೆ ಒಂದು ರೀತಿಯ ನಿಶ್ಚಲ, ನಿರ್ವಿಕಾರ ದೃಷ್ಟಿಯ(ಪಕ್ಕದಲ್ಲಿ ಕೂತ ಸ್ನೇಹಿತರು ‘ಮುಖವಾಡ ಹೊತ್ತ ಕುದುರೆ ಮುಖದಂತೆ’- ಎಂದು ಹೇಳುವಂತೆ ಪಕ್ಕೆ ತಿವಿಯುತ್ತಿದ್ದಾರೆ!), ನಿರ್ವಾಣ ಸ್ಥಿತಿಯ ಮುಖಭಾವ ಹೊತ್ತು ಕೂಡುವದು ಸುಲಭವೇ? ಇವೆಲ್ಲಾ ಒತ್ತಟ್ಟಿಗಿರಲಿ, ನಿಮ್ಮನ್ನು ಸಭೆಗೆ ಪರಿಚಯಿಸುವಾತ ನಿಮ್ಮ ಬಗ್ಗೆ ಏನನ್ನು ತಿಳಿಯದವನು ನಿಮ್ಮನ್ನೇ ಕೇಳಿ ಕೇಳಿ ಸಭೆಗೆ ವರದಿ ಮಾಡುವವನಾದರೆ ನಿಮ್ಮ ಸ್ಥಿತಿ ಹೇಗಿರಬಹುದು? ಅಂದಿನ ಸಭೆ ಸಂಜೆ ೫ ಕ್ಕೆ ಪ್ರಾರಂಭವಾಗಬೇಕಿದ್ದು, ಸಾಕಷ್ಟು ಜನ ಕೂಡಿ ಹಾಕಿ, ತಂದಿದ್ದ ಫಲಾಹಾರ ಖರ್ಚಾದ ಮೇಲೆ ಸಭೆ ಪ್ರಾರಂಭವಾಗಲು ಸಮಯ ೬ನ್ನು ಮೀರೀ ಹೋಗಿತ್ತು. ಕಾರ್ಯಕ್ರಮ ಆಯೋಜಿಸಿದವರ ಪೈಕಿಯ ಹೆಣ್ಣುಮಕ್ಕಳಿಂದ ಕೆಟ್ಟ ರಾಗದಲ್ಲಿ, ‘ಎಂದುರೋ ಮಹಾನುಭಾವುಲು, ಅಂದರಿಕಿ ವಂದನಮೂ’ (ತ್ಯಾಗರಾಜರು ಈ ನುಡಿ ಕೇಳಿದ್ದರೆ ಅವರ ಕಣ್ ಆಂಚಿನಲ್ಲಿ ನೀರು ಹರಿದಿರುತ್ತಿತ್ತೇನೋ)ಹಾಡಿಸಿದನಂತರ ಸಭೆ ಸ್ವಾಗತ ಭಾಷಣದಿಂದ ಪ್ರಾರಂಭವಾಯಿತು. ಸ್ವಾಗತ ಭಾಷಣ ಮಾಡಿದವರು ಭಾಷಣಗಾರರ ಬಗ್ಗೆ ಸರಿಯಾಗಿ ವಿಷಯ ಸಂಗ್ರಹಿಸಿರಲಿಲ್ಲವೊ ಅಥವಾ ಅದಕ್ಕಾಗಿ ನಿಯೋಜಿಸಿದವರು ಕೈಕೊಟ್ಟು ಹೊಸಬರನ್ನು ಸಿದ್ಧತೆಯಿಲ್ಲದೆ ಆ ಕಾರ್ಯಕ್ಕೆ ತೊಡಗಿಸಿದ್ದರಿಂದಲೋ ಎಲ್ಲವನ್ನು ಅಯೋಮಯ ಮಾಡಿ, ಅವರಿವರ ವಿವರಗಳನ್ನು ಇಸ್ಪೀಟಿನ ಎಲೆಗಳಂತೆ ಕಲಸಿ ಮೇಲೋಗರ ಮಾಡಿ ವರ್ಣಿಸಿದ್ದರು. ವೇದಿಕೆಯನ್ನಲಂಕರಿಸಿದ ಗಣ್ಯರು ಮತ್ತು (ಕಷ್ಟ ಪಟ್ಟು ಪ್ರಯಾಸದಿಂದ ಬಂದು, ಫಲಾಹಾರ ಮೆಲ್ಲಿದ್ದ ) ಸಭಿಕರಿಗೆ ಸ್ವಾಗತ ಕೋರಿದ ನಂತರ ಸನ್ಮಾನಿತರುಗಳಿಗೆ ಗೌರವ ಶಾಲು ಹೊದಿಸಿ ಕಾಣಿಕೆ ಕೊಡುವ ಹೊತ್ತಿಗೆ ಇನ್ನಷ್ಟು ಸಮಯ ಮೀರಿತ್ತು. ಮೊದಲ ಭಾಷಣಗಾರರು ತಮ್ಮ ವಾಗ್ಝರಿಯನ್ನು ಪ್ರಾರಂಭಿಸಿದರೇನೋ ನಿಜ. ಆದರೆ ಪುಸ್ತಕದ ಲೋಕಾರ್ಪಣೆಯನ್ನೇ ಮರೆತಂತೆ ತೋರಿತು. ಕಾವ್ಯಾಲಂಕಾರದ ನಾನಾ ಪ್ರಾಕಾರಗಳನ್ನು ಮುಗಿಸಿ, ಛ ದಸ್ಸಿನ ಬಗ್ಗೆ ಕೊನೆ ಮುಟ್ಟಿಸುವ ಹೊತ್ತಿಗೆ, ಕಬ್ಬಿಣದ ಕಡಲೆಯಂತಹ ಮಾತನ್ನ ಅರ್ಥಮಾಡಿಕೊಳ್ಳಲಾಗದ ಅರ್ಧದಷ್ಟು ಜನ ನಿಟ್ಟುಸಿರು ಬಿಟ್ಟು ಸಂತಸದಿಂದ ಚಪ್ಪಾಳೆ ತಟ್ಟಿ ಅವರನ್ನು ಸಾಗಹಾಕಿದರು. ಹೀಗೆ ನಿರಂತರ ಮಾತಿನ ಮಳೆಯೋ, ಭೀಕರ ಭಾಷಣದ ಹೊಳೆಯೋ ಮುಂದುವರೆದು, ಕವನ ಬರೆದ ಹುಡುಗಿಯ ಪೂರ್ವೋತ್ತರವನ್ನೆಲ್ಲ ಶೋಧಿಸಿ, ಹೊಗಳಿ, ಅಟ್ಟಕ್ಕೇರಿಸದ ನಂತರ ಆಕೆ ಬರೆದ ಕವನಗಳನ್ನು ಒಬ್ಬರ ನಂತರ ಒಬ್ಬಬ್ಬರಾಗಿ ನಾಲ್ಕಾರು ಖಾಸಾ ಮಂದಿಯಿಂದ ಚಿತ್ರ ವಿಚಿತ್ರ ರಾಗಗಳಲ್ಲಿ ಹಾಡಿಸಿ ಮುಗಿಸುವ ವೇಳೆಗೆ ಸಭೆ ತನಗೆ ತಾನೇ ಕರಗಿ, ಇದ್ದ ಹಲವೇ ಮಂದಿ ನಿದ್ದೆಯಿಂದ ಎದ್ದವರಂತಾಗಿತ್ತು. ಹೀಗೊಂದೆರಡು ಕವನ ಆಕೆ ಬರೆದಿದ್ದನ್ನ ಕೇಳಿ; ಓ ಎನ್ನ ಪ್ರೀತಿಯಾ ಮನದನ್ನೆ ನನ್ನ ಬಿಟ್ಟೆಲ್ಲಿಗೆ ನೀ ಹೊಂಟೆ, ನಿನಗಾಗಿ ಕಾದು ನಾ ಪಾರ್ಕಿನಿಂದ ಹೊರ ಬಂದೆ ಏನು ತೋಚದೆ ಕಿಟ್ಟಪ್ಪನಂಗಡಿಯಲ್ಲಿ ನಿನಗಾಗಿ ತಂದ ಬೊಂಡ, ಬೆಣ್ಣೆ ಮುರುಕು,ನಿಪಟ್ಟು ನಾನೇ ತಿಂದು ಪಟ್ಟಾಗಿ, ನೀರಕುಡಿದು, ಮನೆಗೆ ಹೊಂಟೆ ಬೈ,ಬೈ.
–ಅಲ್ಲಿಗೆ ಗೊತ್ತಾಯಿತಲ್ಲವೇ ಅವನ ಫಸ್ಟ್ ಲವ್ ಬೊಂಡ, ನಿಪಟ್ಟು,ಬೆಣ್ಣೆ ಮುರುಕಿಗಷ್ಟೇ? ಓದಿಸಿ, ಕೇಳಿದವರ ಪರಿಸ್ಥಿತಿ ಏನಾಗಿರಬಹುದು? ಬೊಂಡ, ನಿಪ್ಪಟ್ಟಿಗಾಗಿ ಕಿಟ್ಟಪ್ಪನ ಅಂಗಡಿ ದಾರಿ ಹಿಡಿದರೆ?
ಯಾರು ಯಾರೆಲೆ ನೀ ಎಲ್ಲಿಂದ ಬಂದೇ, ಅದೆಂಥ ನಿನ್ನ ಕಣ್ಣ ನೋಟಾ, ಕುಡಿನೋಟಾ ಕಳ್ಳಕಾಕರು ಕೂಡ ತಮ್ಮ ಕದುಯುವಿಕೆಯ ಬಿಟ್ಟು ನಿನ್ನ ಕಣ್ಣನೋಟಕೆ ಸಿಲುಕಿ ಬಿದ್ದರಾ ಸುಂದರಿ, ಸುರ ಸುಂದರೀ ನೀ ಯಾರ ಮಗಳಾಗಿ ಹುಟ್ಟಿ ಎಮಗೆಲ್ಲ ಈ ತ್ರಾಸ ಕೊಟ್ಟೆಯೋ ನಿನ್ನ ಕಾಲ ಬಳಿ ನಾವ್ ಬೀಳುವೇವು ನೀ ಎಮಗೆ ನಿನ್ನ ಪ್ರೀತಿಯ ತೋರ, ಮುಖವ ತೋರ. –ಅಲ್ಲಿಗೆ ಆಕೆಯ ಕಾವ್ಯದ ತಿರುಳು,ಅದೆಂಥಹ ಆದ್ಭುತ ಕಾವ್ಯಮಯ ರಸಾಮೃತ, ಅದರ ಸ್ವಾದ ಅದೆಷ್ಟು ಸೊಗಸು ಎಂಬುದು ಅಲ್ಲಿ ಸೇರಿ ಉಳಿದಿದ್ದವರು ಅದೆಷ್ಟು ಆನಂದದಲ್ಲಿ ಮೈ ಮರೆತಿರಬೇಕು ಎಂಬುದನ್ನ ನೆನಸಿಕೊಂಡಾಗ….
ಮತ್ತೆ ಕೇಳಿ …
ಓ ಕಪ್ಪೆಯೇ ! ನಿನಗೇಕೆ ಈ ಸಾವು? ನಿನ್ನ ಕೊಂದ ಯಾರಿಗೇನ ಲಾಭ? ಅಯ್ಯೋ,ಎಂಥ ಸಾವು ನಿನಗೆ, ಈ ದುರ್ಮರಣ ? ಇದ್ಯಾವ ನ್ಯಾಯ, ನಿನ್ನ ಸಾಯಿಸಿದವರಿಗೇನ ಲಾಭ ? ಕಟುಕರಷ್ಟೇ, ಅವರಿಗಿಲ್ಲ ದಯಾ,ನೀತಿ, ಕರುಣೆ, ಪ್ರೇಮ, ಪ್ರೀತಿ, ಸ್ವರ್ಗದಲ್ಲಾದರೂ ಪಡೇ ಎಲ್ಲ ದೇವರ ಪ್ರೇಮ, ಪ್ರೀತಿ, ಕರುಣೆ ಓ,ಕಪ್ಪೆಯೇ..
-ಎಂಥ ಸ್ತುತಿ, ಎಂಥ ವಾತ್ಸಲ್ಯ, ಪ್ರಪಂಚವೆಲ್ಲಾ ಹೀಗೆ ಇರಬಾರದಿತ್ತೇ? ಪದ್ಯದ ಗುರು, ಲಘುಗಗಳು ಅದೆಷ್ಟು ಸೊಗಸಾಗಿ ಕುಣಿಯುತ್ತಿವೆ? ಇಂತಹ ಕವನಗಳನ್ನು ಓದುತ್ತಿದ್ದರೆ ಅನೇಕ ಕೇಳುಗರು ಮೂರ್ಛೆ ಹೋದಂತೆ ಕಾಣಿಸಿದ್ದು ನನ್ನ ಕಣ್ಣಿಗೆ ಪೊರೆಯೊ ಹೇಗೆ ಎಂದು ಇನ್ನು ನಾನು ನಿರ್ಧಾರಕ್ಕೆ ಬರುವವಲಾಗಿಲ್ಲ. ಈ ಪದ್ಯ ಓದಿದ ನಂತರ ಇದ್ದ ನಾಲ್ಕಾರು ಜನರಿಂದಲೇ ಭಾರಿ ಕರತಾಡನ. ಒಬ್ಬರು ಭಾಷಣಗಾರರು “ಈ ಹುಡುಗಿ ಕರ್ನಾಟಕದ ಅಲ್ಲಲ್ಲಾ ಇಡೀ ಭಾರತಡ ಕವಿಗಳೆನ್ನೆಲ್ಲಾ ಕೆಲವೇ ವರುಷಗಳಲ್ಲಿ ಹಿಂದಿಕ್ಕಿ ಮುನ್ನಡೆಯುತ್ತಾರೆ ಅಂತ ಹೇಳಿದರೆ ಇನ್ನೊಬ್ಬರು ಜ್ಞಾನ ಪೀಠ ಪ್ರಶಸ್ತಿ ಈಕೆಯ ಬಳಿಯೇ ಸುಳಿದಾಡುತ್ತಿದೆ, ಯಾರು ಯಾರಿಗೋ ಕೊಡುವ ಬದಲು ಮುಂದಿನ ವರುಷ ಈಕೆಗೇ ಕೊಡಬಹುದು. ಸಂಶಯವೇ ಇಲ್ಲ ಅಂದರು. ನನ್ನ ಸರದಿ ಬರುವ ಹೊತ್ತಿಗೆ ನಾ ಎದ್ದು ನಿಲ್ಲುತ್ತಲೇ ಪಕ್ಕದಲ್ಲೇ ಕೂತಿದ್ದವರು ಸೂಕ್ಷ್ಮವಾಗಿ ಕಿವಿಯಲ್ಲಿ ಹೇಳಿದರು ‘ನಿಮ್ಮ ಭಾಷಣಕ್ಕೆ ಮಿಕ್ಕಿರುವುದು ಸಭಿಕರಲ್ಲ, ಈ ಕಾರ್ಯಕ್ರಮ ಏರ್ಪಾಟು ಮಾಡಿದವರು, ನೀವು ಅದಷ್ಟು ಬೇಗ ಹೊರಡುವುದಕ್ಕೆ ತಯಾರಾಗಿ, ನಿಮ್ಮ ಹಿಂದೆಯೇ ನಾನು ಇರುತ್ತೇನೆ. ಔಪಚಾರಿಕ ವಂದನಾರ್ಪಣೆಯಾದ ನಂತರ ಕಾರ್ಯಕರ್ತರು ಒಟ್ಟಿಗೆ ಸಭೆಯಿಂದ ಹೊರಡಲನುವಾದರು. ಆ ಗಜಿಬಿಜಿಯಲ್ಲಿ ನನಗಂತೂ ಥ್ಯಾಂಕ್ಸ್ ಯಾರಾದರೂ ಹೇಳಿದರೆ ಎಂಬುದು ಇನ್ನು ಮನದಟ್ಟಾಗಿಲ್ಲ! —————————————————————————————————————-




Comments