(ಆನಂದ ವಿಹಾರ ಕ್ಲಬ್) …….ಡ್ರೀಮ್ ಕ್ವೀನೋ, ಕೆಟ್ಟ ಕನಸ ಕ್ವೀನೋ…….
- haparna
- Dec 4, 2016
- 8 min read
(ಆನಂದ ವಿಹಾರ ಕ್ಲಬ್) …….ಡ್ರೀಮ್ ಕ್ವೀನೋ, ಕೆಟ್ಟ ಕನಸ ಕ್ವೀನೋ……. ಲೇಖಕ: ಎಚ್. ಆರ್. ಹನುಮಂತ ರಾವ್ ——————————————————————- ಆಶ್ವೀಜ ಮಾಸದ ಎರಡನೆಯ ಶನಿವಾರ. ತಂಪಾದ ಸಂಧ್ಯಾ ಸಮಯ. ಗೂಡು ಸೇರುವ ಹಕ್ಕಿಗಳ ಇಂಪಾದ ಕಲರವದ ರಾಗಮಾಲೆ. ರೂಢಿಯಂತೆ ‘ಆನಂದ ವಿಹಾರ ಕ್ಲಬ್ನ ಚಿಟಿಕೆ ಸಂಘ’ಸದಸ್ಯರಾಗಮನದ ವೇಳೆ. ಒಬ್ಬೊಬ್ಬರೇ ಹಾಜರಿಯಾಗಿ ಆಸೀನ ರಾಗುತ್ತಿದ್ದಂತೆ, ಉಭಯ ಕುಶಲೋಪರಿ. ನಂತರ, ತಮ್ಮ ತಮ್ಮ ಪ್ರಿಯ ಖಾದ್ಯಗಳ ಮತ್ತು ಪಾನೀಯ ಸೇವನೆಯ ರಂಜನೆಯ ಜೊತೆಗೆ, ಪರಸ್ಪರ ಕಿಚಾಯಿಸಿ ಅಲೆಅಲೆಯಾಗಿ ನಗೆ ತರಸಿ ಮತ್ತಷ್ಟು ಮುದ ಕೊಡುವ ಮಾತಿನ ವರಸೆಯ ಮನ ರಂಜನೆ. ಠಾಕೋಠೀಕು ಏಳು ಗಂಟೆಯಾಗುತ್ತಿದ್ದಂತೆ ಮುಖ್ಯ ಭೂಮಿಕೆಯನ್ನಲಂಕರಿಸುವ ಗಣ್ಯರ ರೀತಿ ಶಂಕರ ಸಿದ್ಧಾ೦ತಿಗಳ ಆಗಮನ. ಅವರ ಬರವನ್ನೇ ಎದುರು ನೋಡುತ್ತಾ, ಕಂಡ ಕೂಡಲೇ ಬೇರರ್ ವಾಸು -ಅವನ ಗೈರಲ್ಲಿ ಸುಬ್ಬು- ತಡಮಾಡದೆ ಅವರ ಪ್ರಿಯವಾದ ಪಾನೀಯ ಹಾಗು ಖಾರದ ಗೋಡಂಬಿ ತಟ್ಟೆಯನ್ನ ಮೇಜಿನ ಮೇಲಿಟ್ಟು ದೂರದಲ್ಲಿ ಕೈ ಕಟ್ಟಿನಿಲ್ಲುವವರು. ಸಿದ್ಧಾ೦ತಿಗಳ ಮಾತೆಂದರೆ ಎಲ್ಲರಿಗೂ ತಡೆಯಲಾಗದ ಆಕರ್ಷಣೆ ! ಈ ‘ಆನಂದ ವಿಹಾರ ಕ್ಲಬ್ಬಿ’ನ ಪರಿಚಯವಿಲ್ಲದವರು ನಮ್ಮೂರಿನ ರಾಮ ಮಂದಿರ ರಸ್ತೆಯನ್ನು ದಾಟಿ ಸ್ವಲ್ಪ ಎಡಕ್ಕೆ ನಡೆದು ಮತ್ತೆ ಬಲಕ್ಕೆ ತಿರುಗಿ ಒಂದೆರಡು ಹೆಜ್ಜೆ ಹಾಕಿದರೆ ಎದುರಿಗೇ ಕಾಣುವ ಏಕೈಕ ಬಹುಮಹಡಿ ಕಟ್ಟಡವೆ ನಮ್ಮ ಕ್ಲಬ್ಬಿನ ವಿಳಾಸ. ಮೊದಲ ಉಪ್ಪರಿಗೆಯ ಈಶಾನ್ಯ ದಿಕ್ಕಿನ ಕೋಣೆಯೇ ನಮ್ಮ ಚಿಟಿಕೆ ಸಂಘದ ಆಶ್ರಯ ಧಾಮ. ಸಿದ್ಧಾ೦ತಿಗಳ ಮೇಜು, ಕುರ್ಚಿಯೇ ಅಲ್ಲಿಯ ಕೇಂದ್ರ ಸ್ಥಾನ. ಅವರ ಮಾತೇ- ವೃತ್ತಾ೦ತವೋ, ಅನುಭವವವೋ, ಕಟ್ಟುಕಥೆಯೊ ಏನಾದರಾಗಲಿ- ಒಟ್ಟಿನಲ್ಲಿ ಎಲ್ಲರ ಕುತೂಹಲ, ಆಸಕ್ತಿ ಕೆರಳಿಸಿ,ಆಕರ್ಷಿಸಿ ಕೆದಕುವ ಆಯಸ್ಕಾ೦ತ . ಸಿದ್ಧಾ೦ತಿಗಳು ಕೂಡುತ್ತಾ, ತಮ್ಮ ಸುಲೋಚನವನ್ನ ಮೇಜಿನ ಮೇಲಿಟ್ಟು ಎಲ್ಲರತ್ತ ದೇಶಾವರಿ ನಗೆ ಬೀರಿ “ಏನು, ಬಸವರಾಜಪ್ಪ, ನಿಮ್ಮ ರೇಸ್ ಕೋರ್ಸ್ನ ಈಗಿನ ಲೇಟೆಸ್ಟ್ ವೃತ್ತಾ೦ತವೇನು, ಹೇಗೆ” ಎನ್ನುತ್ತ ತಮ್ಮ ಗ್ಲಾಸನ್ನು ಕೈಗೆತ್ತಿಕೊಂಡರು, ಹಾಗೆ ಕೇಳಲು ಕಾರಣವೂ ಇತ್ತು. ನೀಲಗಿರಿ ಪ್ಲೇಟ್ ರೇಸ್ನಲ್ಲಿ ಮಹಾರಾಜ ಕಪ್ಪಿಗಾಗಿ ಗೊತ್ತಾಗಿದ್ದ ‘ಅಮೃತವರ್ಷಿಣಿ’ ಕುದುರೆ ಹಠಾತ್ತಾಗಿ, ಏನಾಯಿತೋ,ಹೇಗೋ ಅರ್ಧ ದಾರಿಯಲ್ಲೇ ನಿಂತು, ಜಾಕಿ ಏನೇ ಪ್ರಯತ್ನಿಸಿದರೂ ಹಿಂದೆ ಹಿಂದೆ ಸರಿದಿತ್ತು, ಪಂಟರುಗಳು ಭಾರಿ ಕೋಲಾಹಲವನ್ನೇ ಎಬ್ಬಿಸಿದ್ದರು. ಎಲ್ಲರೂ ಸಾಕಷ್ಟು ಗದ್ದಲ ಎಬ್ಬಿಸಿದ ಮೇಲೆ ಅದರ ಮೇಲಿನ ಬಾಜಿ ಹಣ ಮುಂದಿನ ರೇಸ್ಗೆ ಹಾಕಲು ಒಪ್ಪಿದ್ದರು. ಅಂದರೆ ‘ಕುದುರೆ ಬಾಲಕ್ಕೆ ಕಟ್ಟಿದ್ದು, ಸರ್ಕಾರಕ್ಕೆ ಹೋಗಿದ್ದು,…ಳೆ ಗೆ ಕೊಟ್ಟಿದ್ದು ಕತ್ತೆ ಬಾಲಕ್ಕಷ್ಟೇ ಸಮ, ಹಣ ಹೋದ ವೇಶಿಯಂತಕ್ಕು ಸರ್ವಜ್ಞ’,ಏನಂತೀರಾ? -ನಮ್ಮ ಅಶು ಕವಿ ಶೇಖರ್ ರಾಗವಾಗಿ ಉಸುರಿದರು. ಕನ್ನಡದ ಓಳು ಭಜನೆ ಚಂದ್ರು ‘ಹಾಗಲ್ಲರೀ, ‘ಆ ದುಡ್ಡೆಲ್ಲ ಕಳೆದಾಗ ವಿಷ ಕುಡಿದು, ನೀರಿಲ್ಲದಾ ಭಾವಿಗೆ ಜಿಗಿದು, ಕಲ್ಲಿಗೆ ಶಿರ ಚಚ್ಚಿ ಪ್ರಾಣ ಬಿಟ್ಟಂತೆ ಸರ್ವಜ್ಞ’, ಅಂದರು. ಏ.ಏನ್ಕೆ.(ಎಳೆನಿಂಬೆಕಾಯಿ) ಮುಖವೆಲ್ಲ ಕಿವಿಚಿ “ಛಿ, ಅದಲ್ಲ ರೀ, ಅದೇಕೆ ನೀವೆಲ್ಲಾ ಆ ಸರ್ವಜ್ಞನಿಗೆ ಕೆಟ್ಟ ಹೆಸರು ತರ್ತೀರಾ? ಸರಿಯಾಗಿ ಗೊತ್ತಿಲ್ಲಾ ಅಂದ್ರೆ ಸುಮ್ನಿರಿ, ಹೀಗಾದರೂ ಹೇಳಿ -ಆ ಒಂದು ದಿನಂ, ನವೆಂಬರೆ೦ಟರೆಂಟಪಿಎಂ, ಐನೂರ, ಸಾವಿರ ನೋಟು೦ಗಳಂ ಖಡಕ್ ತಿಪ್ಪೆಗುಂಡಿಗೆ ಸಮಂ ಎಂದು ಮೋದಿಯಮ್ ಠೀ(ಟೀ)ವಿಯಲಿ ಒದರಲ್ಕೆ, ಭೂಮಿ ಬಾಯ್ಬಿಟ್ಟಿತೋ, ನಭ ಮೇಲೆರೆಗಿತೋ, ಸಮುದ್ರ ಕೈ ಚಾಚಿ ಎಲ್ಲರ ನುಂಗಿತೋ ಎಂದೆನ್ನುತ ಕಪ್ಪುಹಣ ಒಡೆಯರು೦ಗಳ್, ತಡಬಡಾಯಿಸಲ್ಕೆ, ರೇಜಿಗೆ ಬಂದು, ಎಗೆರಿಗೆರಿ ಬಿದ್ದರೋ, ಈ ದುಷ್ಟ ಚತುಷ್ಟಯರು೦ಗಳೆಲ್ಲ (ಅರ್ಥ-ರಾಜಕಾರಿಣಿ, ಕಾಳಸಂತೆ ಖದೀಮ, ಹಮಾಲೀ ಚೋರ ಹಾಗು ದೇಶದ್ರೋಹಿ ಡಾನ್ ಗುರು) ಬಿದ್ದು, ಎದ್ದು, ಒದ್ದಾಡಿ, ಗುದ್ದಾಡಿ ಗೋಳಾಡಿದರೋ ಅಕಟಕಟ, ಕೋಪದಿಂ ತಕದಿಂ ತಕದಿಂ ಕುಣಿದಾಡಿ ಅರ್ಧ ಹೆಣವಾದರೋ – ಎಂದು ಹೇಳಿರಿಲ್ಲ, ಸರಿಕಾಣುತ್ತದೆ” ಎಂದರು. ಎಲ್ಲರು ಸ್ಥಬ್ಧ, ನಮ್ಮ ‘ಏಎನ್ಕೆ’ ಎಂದು ಇಷ್ಟು ಉದ್ದುದ್ದಾದ ಅಣಕು ಪದ್ಯದ ವಿಕಟಕವಿಯಾದರು, ಅಕಟ ಅಕಟ?’ ಎಂದು ಪ್ರೊಫ್. ಹಂಚಿಕಡ್ಡಿ ಆದಿಯಾಗಿ ಎಲ್ಲರು ಬೆಬ್ಬರಗಾದರು! ಅಶು ಕವಿ ಶೇಖರ್, ಚಂದ್ರು, ಪಿಲ್ಟು (ಅವರ ಪೂರ್ತ ಹೆಸರು ಪಿ.ಐ.ಲಕ್ಷ್ಮಣ ತೇಂಬೆ-ಕಂಪ್ಯೂಟರ್ ಇಂಜನೀರ್) ಒಟ್ಟಿಗೆ ಕೂಗಿಕೊಂಡರು ‘ಸಾರ್, ಅದು ಅವರ ಪದ್ಯವಲ್ಲ, ಮೊಬೈಲ್ಫೋನ್ನಲ್ಲಿ ಯಾರೋ ವಾಟ್ಸಾಪ್ ಮೂಲಕ ಟ್ವೀಟ್ ಮಾಡಿರ್ತಾರೆ, ಅದನ್ನ ಈಗ ಇಲ್ಲಿ ಒದರ್ತಾರೆ, ಅಷ್ಟೇಯಾ ಎಂದು ಮೂದಲಿಸಿ ಮಾತಾಡಿದರು. ಅದಕ್ಕಲ್ಲವೇ ಈ ಸೆಲಫೋನುಗಳು ತಯಾರಾಗಿದ್ದು? ನೇರ ಟ್ವೀಟಿಸಿದರು ನಮ್ಮ ರೇವಣಪ್ಪ. ‘ ಅದು ನಿಜವು ಕೂಡ, ನಮ್ಮ ಅನೇಕ ಮೊಬೈಲ್ ಹುಳಗಳಿಗಷ್ಟೇ ಗೊತ್ತಿರುತ್ತದೆ. ಪೇಪರುಗಳನ್ನು ಓದದೇ ಇಲ್ಲೇ ಬೇಕಾದ್ದು ತಿಳಿಯುವಾಗ ಪೇಪರಾಗ್ಯಾಕೆ ದುಡ್ಡು, ವೇಷ್ಟು? ಎಂದರು ಮುದ್ದೇಶಪ್ಪ. “ಸಾರ್, ಅದರ ಮೇಲೆ ಹಾಕಿದ್ದ ನನ್ನ ಐದು ಸಾವಿರ ನೀರಿನಲ್ಲಿ ಮಾರಣ ಹೋಮವೇ ಆಗಿಹೋಯಿತು” ಎಂದು ನಮ್ಮ ಬಸವರಾಜಪ್ಪ ಅಲಿಯಾಸ್ ಬಿಜ್ಜು ಬಿಸುಸುಯ್ದರ್. “ಹಣ ಹೋದರೆ ಚಿ೦ತಿಲ್ಲ ಸಾರ್, ಆದರೆ ಮತ್ತೊಂದು ಕುದುರೆಗೆ ಹಾಕಲೇ ಬೇಕಾಗಿ ಆ ಕಚಡಾ ‘ಜ್ಯೋತಿ ಮಹಲ್’ ಮೇಲೆ ಹಾಕಿದ್ದು ತಪ್ಪೇ? ನನ್ನ ಗ್ರಹಚಾರ, ಅದು ಚಿಕ್ಕಬಳ್ಳಾಪುರದ ರೈಲ್ ತರಾ ಓಡಿ ಬಾಲ ತೋರ್ಸಿ ಹೋಗಾದ ಸರಿನಾ ಸರ್ ?” ಕೋಪದಿಂದ ಉರಿದುಬಿದ್ದರು ಬಿಜ್ಜು. ಸಭೆಯಲ್ಲಿ ಎಲ್ಲರು ಕ್ಷಣ ಕಾಲ ಮೌನ. ಇದುವರೆಗೆ ಮಾತೆ ಆಡದಿದ್ದ ಸಂಜೀವ ಶೆಟ್ಟರು-ನಾವಿಟ್ಟ ಮತ್ತೊಂದು ಹೆಸರು ಚಿನಿವಾರ ಶೆಟ್ಟಿ, ಆತ ಚಿನ್ನದ ವ್ಯಾಪಾರಿ- ಅದೇನರೀ ಈ ಟ್ರೈನ್ ಸಮಾಚಾರಮು, ಅಟ್ಲ್೦ತ ಮಾ ಪೆಡ್ಲಾ೦ಮು ಊರಿನಿ ತಮಾಷಿ ಚೇಚೇದಿ ಸರಿನಾ ಬಿಜ್ಜು, ದಾಂಕು ತೆಲಸ್ತೆ ಮೀಕಿ, ನಾಕು ಔತುಂದಿ ಚಾಲ ಮರ್ಯಾದಾ? ’ಪ್ರಶ್ನಿಸಿದರು. ‘ನಾವೂ ಹೇಳೋದು ಕೇಳ್ರಿ ಶೆಟ್ರೇ, ನಿಮಹೇಂಡ್ತಿ ಊರಂತ ಇರೋ ವಿಷ್ಯ ಚಪ್ಪಿತೇ, ಮೀ ಹುಷಾರಲೋ ಮೀರು ಉಂಡಾಲ,ಅಂತೆ ಮನಕೇಮಿ, ಗೊತ್ತಾಯಿತ್ರ ಚಿನಿವಾರಲು?’ ಎನ್ನುತ್ತಾ ರೇವಣಪ್ಪ ಕನ್ನಡ, ತೆಲಗುಗೂ ಮದುವೆ ಮಾಡಿಸಿ ‘ಸ್ವಾತಂತ್ರ್ಯಬಂದ ದಶಕದಲ್ಲಿ, ಮುಂಚೆ, ಆನಂತರವೂ ಬೆಂಗಳೂರಿಂದ ಚಿಕಬಳ್ಳಾಪುರ-೩೫ ಮೈಲಿ ಗಳಷ್ಟೇ ಅಂತರ -ಒಂದೇ ಟ್ರೈನ್ ಬೆಳಿಗ್ಗೆ ಇಲ್ಲಿಂದ, ಸಂಜೆ ಅಲ್ಲಿಂದ ಇಲ್ಲಿಗೆ ನ್ಯಾರೋಗೇಜ್ ಬಂಡಿ ಓಡಿಸುತ್ತಿದ್ದರು ವ್ಯಾಪಾರಿಗಳಿಗಾಗಿ. ಅದು ಕನಿಷ್ಠ ನಾಲ್ಕುಘ೦ಟೆಯಾದರೂ ತೆಗೆದುಕೊಳ್ಳುತ್ತಿತ್ತು. ಹೆಜ್ಜೆ ಹೆಜ್ಜೆಗೂ ಹಳ್ಳಿಗಳ ಸ್ಟೇಷನ್ನುಗಳಲ್ಲಿ ನಿಂತು,ಮುಂದೆ ಹೋಗುವ ಕಾರಣ ಅದರ ವೇಗ ಗಂಟಿಗೆ ಹತ್ತು ಮೈಲಿಗಳಾದರೆ ಹೆಚ್ಚು!’ ಎಂದು ಸಮಜಾಯಿಷಿ ನೀಡಿದರು. ಸಿದ್ಧಾ೦ತಿಗಳು ನವಿರಾಗಿ ಕೆಮ್ಮಿ ‘ನನ್ನ ಅನುಭವದಲ್ಲಿ ಈ ತೆರನ ಬಾಜಿ ಕಟ್ಟುವ ಸಮಸ್ಯೆ ನನ್ನ ದೂರದ ಬಂಧುಗಳೊಬ್ಬರ ಪೈಕಿ, ಹೆಸರು- ಮುರಳಿ -ಆತನಿಗೂ ಆಗಿತ್ತು, ಆದರೆ ಅದಕ್ಕೆ ಪರಿಹಾರವು ನಮ್ಮ ಜಿಮ್ಮಿಯಿಂದಾಗಿ ಸಿಕ್ಕಿ ಆತ ಸಾಕಷ್ಟು ಹಣ,ಖ್ಯಾತಿ ಎರಡೂ ಸಂಪಾದಿಸಿದ್ದರು. ‘ಅದು ಹ್ಯಾಗೆ ಸಾರ್, ಜಿಮ್ಮಿ ಅಂದರೆ ಆ ನಿಮ್ಮ ಬಂಧು ಟಿವಿಎಸ್ ಮೂರ್ತಿಗೆ ಅದೇನೋ ಔಷಧ ಕೊಟ್ಟು ಆತ ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಲು ಸಹಾಯ ಮಾಡಿದವರಾ ?-ಎಲ್ಲರು ಒಕ್ಕೊರಳಿನಿಂದ ಕೂಗಿದರು( ಹಿಂದಿನ ‘ಪ್ರೇಮಾಯಣ’ ವೃತ್ತಾoತ ಓದಿ ನೋಡಿ) ಬಿಜ್ಜುಗಂತೂ ಗೆಲ್ಲುವ ಕುದುರೆ ಗುಟ್ಟು ಗೊತ್ತಾದರೆ ಸ್ವರ್ಗವೇ ಭೂಮಿಗೆ ಬಂದ ಹಾಗೆ! ಎಲ್ಲರ ಆಸಕ್ತಿ, ಕುತೂಹಲ ತಾರಕಕ್ಕೇರಿತ್ತು. ಸಿದ್ಧಾ೦ತಿಗಳ ವೃತ್ತಾ೦ತಾವೆಂದರೆ ಅದೇನೋ ಆಕರ್ಷಣೆ. ಎಲ್ಲರ ಗ್ಲಾಸುಗಳು ಮತ್ತೊಮ್ಮೆ ತುಂಬಿಸಲ್ಪಟ್ಟವು ಅವರ ಮಾತಿನ ಮೋಡಿಗೆ ಮರುಳಾಗುತ್ತಾ! ‘ಈ ಮುರಳಿ ಮಿಲಿಟರಿಯಲ್ಲಿ ಸ್ವಲ್ಪ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು’, ಸಿದ್ಧಾ೦ತಿಗಳು ಮಾತು ಮುಂದುವರಿಸಿದರು ‘ನಂತರ ನಮ್ಮ ಬಿಜ್ಜುವಿನ೦ತಲ್ಲದೆ ತಮ್ಮದೇ ಕುದುರೆ ಫಾರ್ಮ್ ಹೊಂದಿದ್ದರಲ್ಲದೆ ಒಂದು ರೇಸ್ ಕುದುರೆ ‘ಡ್ರೀಮ್ ಕ್ವೀನ್- ನ ಮಾಲೀಕರೂ ಆಗಿದ್ದವರು. ಇದು ಸಾಮಾನ್ಯವಾಗಿ ಫಿಲ್ಲಿಗಳ ರೇಸ್ನ ಎಲ್ಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಕೊಟ್ಟು ಯಾವಾಗಲೂ ಪಂಟರುಗಳ ಮೊದಲ ಆಯ್ಕೆಯಾಗುತ್ತಿತ್ತು. ಈ ಕಾರಣ ಹಲವರ ಹಗೆತನಕ್ಕೆ ಕಾರಣವಾಗಿ ಹೇಗಾದರೂ ಈ ಕುದುರೆಯನ್ನ ಅನುಪಯುಕ್ತ ಮಾಡಬೇಕೆಂದು ಒಳಗೊಳಗೇ ಪಿತೂರಿ ಮಾಡುತ್ತಿದ್ದರು. ಮುಖ್ಯವಾಗಿ ಅತಿ ಹೆಚ್ಚು ಹಣ ಬಟವಾಡೆಯಾಗುವ ಮಹತ್ತರ ಡರ್ಬಿ ರೇಸ್ನಲ್ಲಿ ಅದು ಸ್ಪರ್ದಿಯಾಗದ೦ತೆ ಅನೇಕ ಪ್ರಯತ್ನಗಳಾಗಿದ್ದು ಗೆಲುವಾಗಿರಲಿಲ್ಲ. ಹೇಗಾದರೂ ಈ ಬಾರಿಯ ‘ ಒಡೆಯರ್’ ಕಪ್ಗೆ ಅದು ಇರಲೇಬಾರೆದೆಂದು ಗುಟ್ಟಾಗಿ ನಡೆಯುತ್ತಿದ್ದ ಒಳ ವ್ಯವಹಾರ ಹೇಗೋ ನಮ್ಮ ಮುರಳಿಗೂ ಗೊತ್ತಾಗಿ ಸರ್ಪಕಾವಲಿಟ್ಟಿದ್ದರೂ ಯೋಚನೆಯಲ್ಲಿದ್ದರು ತಾವೊಂದು ದೊಡ್ಡ ಜಾಲವನ್ನೇ ಎದುರಿಸುತ್ತಿರುವ ಭಯದಿಂದ. ನಮ್ಮಎಎನ್ಕೆ ಸುಮ್ಮನಿರದೆ ‘ಪೊಲೀಸ್ಗೆ ಕರೆಸಿ ಅವರ ಅಧೀನಕ್ಕೆ ಬಿಡಬೇಕಾಗಿತ್ತು’ ಅಂದರು. ಬಾಲಿಶ ಮಾತುಗಳಿಗೆ ಕಾಯುತ್ತಿದ್ದ ನಮ್ಮ ಗರಡಿ ಪೀರ್ ಸಾಹೇಬ ‘ಹೌದಲ್ವಾ, ಪುಲಿಸ್ಕಾ ಕ್ಯಾ ಮಾಲೂಮ್ ಐಸಾ ಹೋತಿ? ಅವ್ರು ಬರೋದೇನಿದ್ರೂ ಎಲ್ಲಾ ಖರಾಬ್ ಆದ್ಮೇಲೆ ಮಾಲೂಮ್ ಕ್ಯಾ, ಸುಂಸುಮ್ಕೆ ಆನಾ ಜಾನಾ ಕೆ ಅವ್ರೆನ್ ನಿಮ್ಮಮನೆ ಆಳಾ? ಕ್ಯಾ ಆಪ್ ಕ್ಯಾಭಿ ಹಿಂದಿ ಸಿನೆಮಾ ನಹಿ ದೇಖಾ? ನಿಮ್ಮ ಅಮಿತಾಭ ವಿಲ್ಲನ್ ಹಿಡಿದ ಮೇಲೆ ತಾನೇ ಪೊಲೀಸ್ ಬಂದು ಅವನ್ನ ಹಿಡಿದಿದ್ದು? ಬಚ್ಚಾ ತರಹ್ ಮಾತೋಡ್ ಬಿಡ್ರಿ ಎಳೆನಿಂಬೆಕಾಯವ್ರೆ’ಎಂದು ಮೀಸೆಯಂಚಿನಿಂದ ಸಣ್ಣಗೆ ನಕ್ಕರು. ಏಏನ್ಕೆಗೂ ರೇಗಿತು. ‘ಪೀರು ಭಾಯ್ ನೀವ್ ಸುಮ್ನಿರಿ, ಎಲ್ಲಾ ಗೊತ್ತು ಅನ್ನೊದಾದ್ರೆ ನೀವೇ ಕುದ್ರೆ ಕಾವಲು ಯಾಕೆ ಮಾಡಬಾರ್ದು,ಹೇಗೂ ನಿಮ್ಮ ಅರಬ್ಬೀ ಜನ ಕುದುರೆ ಸಾಕೋದ್ರಲ್ಲಿ, ಸವಾರಿಗಳಲ್ಲಿ ಅನುಭವಸ್ತರಲ್ವಾ?’ ಮಾತು ಎಲ್ಲೆಂದಲೋ ಎಲ್ಲಿಗೋ ತಿರುಗಿದುದನ್ನ ನೋಡಿ ಸಿದ್ಧಾ೦ತಿಗಳು ಮುಂದುವರಿಸಿದರು ‘ಹಾಗಲ್ಲ, ಇಲ್ಲಿ ಕುದುರೆ ಕಾವಲಿನ ಮಾತಲ್ಲ, ಕಾವಲುಗಾರರ ಕಣ್ತಪ್ಪಿಸಿ ಹಲವಾರು ವಿಧಗಳಲ್ಲಿ ಕುದುರೆ ಓಡದಂತೆ ಮಾಡಲು ಸಾಧ್ಯ, ಮುರಳಿಯ ವಿರುದ್ಧ ಇದ್ದವರು ಹಲವರು ಟ್ರೈನರು ಗಳಾದರೆ ಕೆಲವರು ಮಾಲೀಕರು ಮತ್ತು ಹಲವಾರು ಹಮಾಲಿಗಳು. ಸ್ಪರ್ಧೆಯ ದಿನ ಹತ್ತಿರವಾಗುತ್ತದ್ದಂತೆ ಫೋನ್ ಹಾಗು ಪತ್ರಗಳ ಮೂಲಕ ಸಾಕಷ್ಟು ಹೆದರಿಸುವುದು ಶುರುವಾಯಿತು. ಪಂದ್ಯಾವಳಿ ಮೂರೇ ದಿನಗಳಿರುವಾಗ ಮುರಳಿ ಆ ಯೋಚನೆಯಲ್ಲೇ ಕುದುರೆ ಲಾಯದ ಪಕ್ಕದಲ್ಲೇ ಜ್ಞಾನ ತಪ್ಪಿ ಬಿದ್ದು ಹೋಗಿ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಮೇಯ ಬಂತು. ಪತ್ರಿಕೆಗಳಲ್ಲೂ ಈ ವಿಷಯ ಹರಡಿತು. ‘ಹಾಗಾದರೆ ಅವರ ಕುದುರೆಗೆ ಈ ವಿಷಯ ತಿಳಿದರೆ ಅದೂ ಕೂಡ ರೇಸಿನಲ್ಲಿ ಭಾಗವಹಿಸಿ…. ?’ ಡಾ. ಜ್ಞಾನೇಶ್ವರಯ್ಯಕೊಸ್ಚಶ್ನಿಸಿದರು . ಇವರು ಮನ:ಶಾಸ್ತ್ರ ವೈದ್ಯರು. ಇವರ ಜೊತೆ ಯಾರು ಜಾಸ್ತಿ ಸಲುಗೆ ಹಚ್ಚಿಕೊಳ್ಳುತ್ತಿದ್ದಿಲ್ಲ, ಕಾರಣ ಯಾರೇ ಸಿಕ್ಕರೂ ಮೊದಲಿಗೆ ಅವರ ತಲೆಯನ್ನು ಮನಸ್ಸಿನಲ್ಲೇ ಅಳೆದು, ತೂಗಿ ಇವನಿಷ್ಠೆ ಎಂದು ಲೆಕ್ಕ ಹಾಕಿ ಅವನ ಕೂಡ ಮಾತಾಡುವುದೇ ವಿಚಿತ್ರವಾಗಿರುತ್ತಿತ್ತು. ಇವರ ದೃಷ್ಟಿಯಲ್ಲಿ ಪೀರು ಸಾಹೇಬರೊಬ್ಬರೇ ಅತ್ಯಂತ ನಾರ್ಮಲ್ ವ್ಯಕ್ತಿ. ಚಂದ್ರು, ಎಎನ್ಕೆ, ಬಿಜ್ಜು ಇತ್ಯಾದಿ ಎಲ್ಲ ಸಬ್ನಾರ್ಮಲ್ ವ್ಯಕ್ತಿತ್ವದವರು! ನಮ್ಮ ಶೀನು ತಲೆ ಸ್ವಲ್ಪ ಓರೆಕೋರೆಯಾಗಿದ್ದು ಅರ್ಧಕ್ಕರ್ಧ ಬೋಳಾಗಿತ್ತು, ಅವರನ್ನು -ಹೈಲಿ ಅನ್ಸ್ಟೇಬಲ್ ಮೈ೦ಡ್ ಇವರದು- ಎಂದು ಟೀಕೆ ಮಾಡಿದ್ದರು! ನಮ್ಮ ಸದಸ್ಯರೆಲ್ಲ ಅವ್ರನ್ನ ಹುಚ್ಛೇಶ್ವರಯ್ಯ ಎಂತಲೇ ಕರೆಯುತ್ತಿದ್ದುದು. ಮತ್ತೆ ರೇಸ್ನಲ್ಲಿ ಕುದುರೆ ಓಡಿ ಗೆದ್ದಿತೋ?ಸಾರ್ ‘ ಚಂದ್ರು ಪ್ರಶ್ನಿಸಿದರು. ‘ಈ ನಿಮ್ಮ ಪ್ರಶ್ನೆಗೆ ಉತ್ತರಿಸುವ ಮುಂಚೆ ಇದು ಕೇಳಿ’ ಸಿದ್ಧಾ೦ತಿಗಳು ಮುಂದುವರೆಸಿದರು, ‘ಸ್ಪರ್ಧೆ ಇನ್ನೆರೆಡು ದಿನವಿರುವಾಗ ಒಂದೆಡೆ ಮುರಳಿ ಆಸ್ಪತ್ರಯಲ್ಲಿದ್ದರೆ, ಇನ್ನೊಂದೆಡೆ ಆಘಾತವಾದ ಸುದ್ಧಿ ಹೊಕ್ಕಿ ಎಲ್ಲರನ್ನು ದಂಗಾಗಿಸಿತು. ಕುದುರೆ ಆ ಎರಡು ದಿನಗಳ ರಾತ್ರಿಯೇ ಯಾರಿಗೂ ತಿಳಿಯದಂತೆ ಮಂಗಮಾಯವಾಗಿತ್ತು! ಅದು ಹೇಗೆ ಸಾರ್? ಅದಕ್ಕೆ ಲಾಯದ ಎಲ್ಲ ಕಡೆ ಕಾವಲು ಇದ್ದರಲ್ಲವೇ? ಅದರ ಬಾಗಿಲು ಬೇಧಿದಸಲಾಗದ ಬೀಗಗಳು ಹಾಕಿದ್ದರಲ್ಲವೇ’ ಎಲ್ಲರು ಒಟ್ಟಿಗೆ ಕಿರುಚಿದರು. ಆ ಗಲಿಬಿಲಿಯ ಶಬ್ದ ಹೊರಗೆಲ್ಲ ಪ್ರತಿಧ್ವನಿಸಿತು. ಕ್ಲಬ್ಬಿನ ಇತರೆ ಮಂದಿ ಹೊಕ್ಕು ಏನಾಯಿತೆಂದು ವಿಚಾರಿಸಿದರು! ರೇವಣಪ್ಪ ನವರು ತುಸು ಕೋಪದಿಂದ ‘ಇದು ನಂಬುವ ಮಾತೆ ಅಲ್ಲ ಸಾರ್, ಏನೋ ಮೋಡಿ ಮಾಡುತ್ತಿರುವಿರಾ, ಹೇಗೆ?’. ಸೂಕ್ಷ್ಮವಾಗಿ ಕಿರು ನಗೆ ನಕ್ಕರು ಸಿದ್ಧಾ೦ತಿಗಳು. ಆ ನಗುವಿನಲ್ಲಿ ‘ನೀವೆಲ್ಲ ಅಮಾಯಕರು, ಅಯ್ಯೋ ಎನ್ನುವ೦ತಿತ್ತು’ ! ‘ಹಾಗಲ್ಲ, ಸ್ವಲ್ಪ ತಾಳಿ. ಏನಾಯಿತೆಂದರೆ ಎಲ್ಲ ನಾಲ್ಕಾರು ಕಾವಲಿದ್ದವರು ಪೂರ ನಂಬಿಕಸ್ತರು. ನರಪಿಳ್ಳೆಯು ಅಲ್ಲಿಗೆ ಬರಲು ಆವಕಾಶ ವಿತ್ತಿಲ್ಲ, ನಾವು ನಿದ್ದೆ ಬಾರದ ಹಾಗೆ ಪ್ರತಿಯೊಬ್ಬರೂ ವಿದೇಶಿ ಪ್ಲೇನುಗಳಲ್ಲಿ ಕೊಡುವ ಪೀನಟ್ ತಿನ್ನುತ್ತಲೇ ಇದ್ದ ದ್ದು’ ಎಂದು ಅಲವತ್ತು ಕೊಂಡಿದ್ದುಂಟು ’. ‘ಹಾಗಾದರೆ ತಡ ಮಾಡದೇ ಸ್ಕಾಟಲೇಂಡ್ ಯಾರ್ಡ್ಗೆ ಫೋನ್ ಮಾಡಿ ಸಮಸ್ಯೆ ಪರಿಹಾರ ಮಾಡಿಕೋ ಬಹುದಿತ್ತಲ್ಲವೇ’? ’ಇದು ಮುದ್ದೇಶಯ್ಯನ ಪ್ರಲಾಪ. ಚಂದ್ರುಗೆ ಕೋಪ ಉಕ್ಕೇರಿ ಬಂತು,’ಏನ್ರಿ, ಹಾಗೆ ಮಾತಾಡ್ತೀರಾ? ನಮ್ಮ ಕನ್ನಡದ ಮೆರಿಟೆಡ್ ಪತ್ತೇದಾರರಿಲ್ಲವೇ? ಕನ್ನಡ ಕುಲಕೋಟಿಗೆ ಅಪಮಾನ ಈ ಮಾತು, ವಿ ಆರ್ ಬೆಟರ್ ಡಿಟೆಕ್ಟೀವ್ಸ್ಆ೦ಮ್ಡ್ ಎನಿ ಡೇ’ ಎಂದು ತಮ್ಮ ಹುಗ್ರ ಕನ್ನಡಾಭಿಮಾನ ತೋರಿ ಅಚ್ಚ ಕನ್ನಡದಲ್ಲಿ ರೇಗಿದರು!’. ‘ಏ ಐಸಾ ನಹಿ ಬಾತ್ ಕರೋ ಚಂದ್ರು ಭೈಯ್, ಮೈ ಸುನಾ ಥಾ, ಉದರ್ ಶೆರ್ಲಾಕ್ ಹೋಮ್ಸ್ ಬಹುತ್ ಬಹುತ್ ಪವರ್ಫುಲ್ ಆದ್ಮಿ ಹೈಯ್, ಹೋಲ್ ವರ್ಲ್ಡ್ ವಾಂಟ್ ಹಿಮ್! ಈ ಕಾರ್ಯಕ್ಕೆ, ಅವ್ರನ್ನ ಮಡಗಿ, ಅವ್ರು ಈಗ ಎಸ್ ಬೋಲೇ ತೋ, ಏಕ್ ಹಿ ದಿವಸ್ ಮೇ ಘೋಡಾ ಪತ್ತೆ ಮಾಡ್ತಾರೆ, ಕನ್ನಡ ಕನ್ನಡಾಂತ ಮತ್ ಬೋಲೋ. ಈಗ ಆಜರೆಂಟ್,ಆಜರೆಂಟ್ ಆಗಿ ಡಿಟೆಕ್ಟ್ ಪಡೇಗಾ, ಆಪ್ ಕ್ಯಾ ಬೋಲ್ತೇ ಎಳೆನಿಂಬೆ ಅವ್ರೆ’ ಎನ್ನುತ್ತಾ ನಮ್ಮಗರಡಿ ಸಾಬು ಫೈಜ್ ಮೊಹ್ಮದ್ ಪೀರ್ ಕನ್ನಡಾ೦ಗ್ಲೋಯರಬೀ ಮಿಶ್ರಣದಲ್ಲಿ ಏಏನ್ಕೆ ಕಡೆ ನೋಡುತ್ತಾ ತಮ್ಮ ಮೀಸೆ ತಿರುವಿದರು. ಏಏನ್ಕೆ ಏನು ಉತ್ತರಿಸುವ ಗೋಜಿಗೆ ಹೊಗಲಿಲ್ಲ, ಕೆಕ್ಕರಿಸಿ ನೋಡಿ ಮುಖ ಬೇರೆಡೆ ತಿರುವಿದರು! ಅವರಿಬ್ಬರ ಪರಸ್ಪರ ಪ್ರೀತಿ, ಸೌಹಾರ್ದ ಯಾವಾಗಲೂ ಹೀಗೆ ಅಚಲವಾದದ್ದು ! ಪ್ರೊ. ಹಂಚಿಕಡ್ಡಿ ‘ಎಂತಂಥ ಕೊಲೆಗಳನ್ನೆಲ್ಲ ಸರ್ಕಾರನ್ನ ಮೆಚ್ಚಿಸಲಿಕ್ಕೆ ಇದೆ ಪೊಲೀಸ್ನವರು ಸೂಯಿಸೈಡ್ ರಿಪೋರ್ಟ್ ಕೊಟ್ಟಿರೋದು೦ಟಂತಾ ಪೇಪರ್ನಾಗೆ ಬರೆದಿದ್ದು೦ಟಲವಾ, ಚಂದ್ರು ಅವ್ರೆ? ಎಂದು ನಿವಾಳಿಸಿದರು. ‘ತಮ್ಮ ಮಾತಿಗೆ ಕವಡೆಯಷ್ಟು ಬೆಲೆ ಇಲ್ಲದ್ದು ಕಂಡು ಉಗ್ರ ಓರಾಟಗಾರ ಚಂದ್ರು ಮತ್ತೆ ಗ್ಲಾಸಿನತ್ತ ಮುಖ ಮಾಡಿದರು. ‘ ಏನಾಯಿತೆಂದರೆ’- ಮಾತು ಮುಂದುವರೆಸಿದರು ಸಿದ್ಧಾ೦ತಿಗಳು ‘ಮಾರ್ನೆ ದಿನ ಮಾಧ್ಯಮಗಳಲ್ಲಿ ಈ ವಿಷಯ ದೊಡ್ಡ ದೊಡ್ಡ ಅಕ್ಷರಗಳ ಶೀರ್ಷಿಕೆಯಡಿ ಜನರ ಮುಖಕ್ಕೆ ರಾಚಿ ಗುಲ್ಲೋ ಗುಲ್ಲು ಪ್ರಾರಂಭವಾಯಿತು. ಎಂದಿನಂತೆ ರೇಸ್ ಕ್ಲಬ್ಬಿನವರು ಇವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುರಳಿ ಜ್ಞಾನವೇ ಇಲ್ಲದಂತೆ ಮಲಗೆ ಇದ್ದರು! ಪೊಲೀಸ್ ಈಗ ಮಧ್ಯವರ್ತಿಗಳಾಗಿ ಪತ್ತೇದಾರಿ ಕೆಲಸ ಶುರು ಹಚ್ಚಿ ಮಾಮೂಲಾಗಿ ಎಲ್ಲರನ್ನು ಪ್ರಶ್ನಿಸಿ, ಹೆದರಿಸಿ ತಮ್ಮ ಕೆಲಸ ಮಾಡುತಲಿದ್ದರು.’ ಕೊನೆಗೂ ರೇಸಿನ ದಿನ ಬಂದೆ ಬಿಟ್ಟಿತು. ಮುಂಗಡವಾಗಿ ಪ್ರಕಟಿಸುವ ರೇಸ್ ಪುಸ್ತಕಗಳಲ್ಲಿ ಏನು ಬದಲಾವಣೆ ಇರದೇ ‘ಡ್ರೀಮ್ ಕ್ವೀನ್’ ‘ಒಡೆಯರ್ ಕಪ್’ನ ಸ್ಪರ್ಧಿಯಾಗಿತ್ತು! ಪಂಟರುಗಳಿಗೆ ಮಾತ್ರ ಇದು ತಲೆನೋವಾಗಿದ್ದರೂ, ಯಾವುದೋ ಕ್ಷಣದಲ್ಲಿ ಅದು ಬರಬಹುದೆ೦ಬ ನಿರೀಕ್ಷಣೆಯಲ್ಲಿ ಅದರ ಮೇಲೆ ಬಾಜಿ ಕಟ್ಟುವವರಿದ್ದೆ ಇದ್ದರು. ರೇಸು ನಡೆಯುವ ಹಿಂದಿನ ರಾತ್ರಿಯೂ ಪೋಲಿಸಿನವರು ಏನು ಸಿಗುವ, ಸಿಕ್ಕಿರುವ ಸೂಚನೆ ಕೊಡುವ ಗೋಜಿಗೆ ಹೋಗಲಿಲ್ಲ! ಪತ್ರಿಕೆಗಳು, ಇತರೆ ಮಾಧ್ಯಮಗಳು ತಮ್ಮ ಸ್ವಕಪೋಲಕಲ್ಪಿತ ‘ಹಾಗೆ, ಹೀಗೆ’ಎಂದು ತೋಚಿದ್ದೆಲ್ಲಾ ಪುಟಗಳನ್ನು ತುಂಬಿದರು. ಟೀವಿಗಳಲ್ಲಿ ಸಿಕ್ಕ ಸಿಕ್ಕವರೆನ್ನೆಲ್ಲ ಮಾತಾಡಿಸಿ, ಬಾಯಿಗೆ ಬಂದಂತೆ ಪ್ರಚಾರ-ಅಪಪ್ರಚಾರ ಮಾಡಿ ಮೂರ್ಖ ಜನರನ್ನು ಮತ್ತಷ್ಟು ಮೂರ್ಖರಾಗಿಸಲು ಪ್ರಯತ್ನಿಸಿದ್ದಂತೂ ನಿಜ! ಪಂಟರುಗಳಂತೂ ಸಿಕ್ಕಸಿಕ್ಕ ಪತ್ರಿಕೆ, ಟಿವಿ ಪ್ರಚಾರ, ಗುಸುಗುಸು ಮಾತುಗಳಿಗೆ ಕಿವಿಕೊಟ್ಟು ಬಳಲಿ ಬೆಂಡಾದರು’ ಎನ್ನುತ್ತಾ ಸಿದ್ಧಾ೦ತಿಗಳು ಸುಧಾರಿಸಿಕೊಳ್ಳಲು ಮಾತು ನಿಲ್ಲಿಸಿ, ಗ್ಲಾಸಿಗೆ ಕೈಚಾಚುತ್ತ, ಖಾಲಿಯಾಗಿದ್ದ ಗೋಡಂಬಿ ತಟ್ಟೆಯಕಡೆ ದೃಷ್ಟಿ ಬೀರಿದರು. ಮೈಯೆಲ್ಲ ಕಿವಿಯಾಗಿ ಮಾತು ಕೇಳುತ್ತಿದ್ದ ಬೇರರ್ ವಾಸು ಓಡಿ ಬಂದು ಆ ತಟ್ಟೆಯನ್ನು ತೆಗೆದು, ಮತ್ತಷ್ಟು ಖಾರದ ಗೋಡಂಬಿಯನ್ನು ತುಂಬಿ ತನ್ನ ಸ್ಥಾನಕ್ಕೆ ಮರಳಿದ. ಇದೀಗ, ‘ಮುಂದೇನು’ ಎಂಬ ಕುತೂಹಲ ಎಲ್ಲೆಡೆ ಹರಡಿತ್ತು, ಮಾತು ಮುದುರಿತ್ತು! ಮೌನ ಆವರಿಸಿತ್ತು, ವಾತಾವರಣ ನಿಶ್ಶಬ್ಧವಾಗಿತ್ತು ! ಶಂಕರ ಸಿದ್ಧಾ೦ತಿಗಳು ಮುಂದುವರೆಸಿದರು ‘ ಆ ಪಂದ್ಯದ ದಿನ ಬಂದೆ ಬಿಟ್ಟಿತು, ಒಡೆಯರ್ ಕಪ್ ಸ್ಪರ್ಧೆ ಮಧ್ಯಾನ್ಹ ಒಂದು ಘ೦ಟೆಗೆ ಸೂಚಿಸಿದ್ದರು. ಅದಕ್ಕೆ ಪೂರ್ವ ಸಿದ್ಧತೆಯಾಗಿ ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ರೇಸ್ ಮೈದಾನದಲ್ಲಿ ಕುದುರೆಗಳೆಲ್ಲ ಹಾಜರಾಗಬೇಕಿತ್ತು. ಎಲ್ಲ ಜಾಕಿ, ಟ್ರೈನರ್ಗಳು ಹಾಗು ಮಾಲೀಕರು ಮತ್ತು ರೇಸ್ ಕ್ಲಬ್ಬ್ನಅಧಿಕಾರಿಗಳು, ಪಶು ವೈದ್ಯರು ಹೀಗೆ ಎಲ್ಲ ಸಮುದಾಯಗಳ ಮುಂದೆ ಅಲ್ಲಿ ಇವ ನ್ನ ಪರೀಕ್ಷಿಸಿ ಪ್ರತಿಯೊಂದರ ಅರ್ಹತೆ ಸಮರ್ಥಿಸಿಕೊಳ್ಳಬೇಕಾಗಿದ್ದು ಅನಿವಾರ್ಯ ನಿಯಮ. ಹಿಂದಿನ ರಾತ್ರಿ ಮುರಳಿಯ ಮನೆಯಲ್ಲಿ ಯಾರಿಗೂ ನಿದ್ರೆ ಇಲ್ಲವಾಗಿತ್ತು. ಅಲ್ಲದೆ ಪೊಲೀಸ್ ಹೆಜ್ಜೆ ಹೆಜ್ಜೆಗೂ ಠಳಾಯಿಸುತ್ತಿದ್ದರು. ಅತ್ತ ಸಮಯ ರಾತ್ರಿ, ಗಡಿಯಾರದ ಮುಳ್ಳು ಹನ್ನೆರಡನ್ನು ಸಮೀಪಿಸುತ್ತಿತ್ತು, ಎಲ್ಲೆಡೆ ನಿಶ್ಶಬ್ಧ. ಒಂದು ಸೂಜಿ ಕೆಳಗೆ ಬಿದ್ದರೂ ಕೇಳಿಸುವಷ್ಟು ಮೌನ ಇತ್ತ ಮನೆಯಲ್ಲಿ, ಅತ್ತ ರೇಸ್ ಕ್ಲಬ್ನ ಸಭಾಂಗಣದಲ್ಲಿ, ಜೊತೆಗೆ ಅಮಾವಾಸ್ಯೆಯ ಹಿಂದಿನ ರಾತ್ರಿ ಕೂಡ’– ಒಂದು ಕ್ಷಣ ಮಾತಿಗೆ ಬ್ರೇಕ್ ಹಾಕಿ ಸಿದ್ಧಾ೦ತಿಗಳು ಎಲ್ಲೆರೆಡೆ ದೃಷ್ಟಿ ಹಾಯಿಸಿದರು. ಅವರುಗಳ ಕೈಯಲ್ಲಿದ್ದ ಗ್ಲಾಸುಗಳು ಸ್ಥಬ್ಧವಾಗಿ ಹಾಗೆ ನಿಂತಲ್ಲೆ ನಿಂತು, ಎಲ್ಲರ ಮುಖದಲ್ಲೂ ಒಂದು ವಿಲಕ್ಷಣ ಕಾತರ, ತುಮುಲ ಹಾಗು ಕೂತುಹಲ ಮುದ್ರೆಯೊತ್ತಿದಂತಿತ್ತು. ತೃಪ್ತಿಯಿಂದ ಸಿದ್ಧಾ೦ತಿಗಳು ಮಾತು ಮುಂದುವರೆಸಿದರು. ‘ಇಂತಹ ಸಂಧರ್ಭಗಳು ನಮ್ಮ ಜೀವನದಲ್ಲಿ ಅಪರೂಪವಾಗಿಯಾದರೂ ಆಗುವುದು ಅತಿಶಯವೇನಲ್ಲ. ಆದರೆ ಇಲ್ಲಿ ನೂರಾರು ಜನರ ಅದೃಷ್ಟ ಈ ಒಂದು ಕುದುರೆಯಿಂದ ಆಗುತ್ತಿದ್ದುದು ಭಾರಿ ಸತ್ಯವಲ್ಲವೇ?’. ಇದೀಗ ಮೌನ ಬೇಧಿಸಿ, ರೇವಣಪ್ಪ ಉಲಿದರು ‘ ನವೆಂಬರ್ ಎಂಟರಂದು ಮೋದಿ ಮಾಡಿದ ಮೋಡಿಗೆ ಕಪ್ಪು ಹಣವಾಗಿ ಶೇಖರಿಸಿಟ್ಟಿದ್ದ ಕೋಟಿ, ಕೋಟಿ ರೂಪಾಯಿಗಳ ಹಣವನ್ನ ಹೆಣವಾಗಿ ಸುಡಬೇಕಾಗಿ ಬಂದದ್ದು ಅದೆಂಥ ಟ್ರಾಜೆಡಿ ಅಲ್ಲದೆ ಮುಂದೆ ಏನು ಮಾಡಲಾಗದ ಪರಿಸ್ಥಿತಿ. ಬೆಳಗಾಗೆದ್ದರೇ ಮುಂದೆನೂ? ಅನ್ನುವ ಯೋಚನೆಗೆ ಗುರಿಯಾದರಲ್ಲವೇ?’ ಹಾಗೆ ಇದೆಯಲ್ಲವೇ ಈ ಕುದುರೆಯ ಸಮಸ್ಯೆ?ಈ ಮಾತು ಕೇಳುತ್ತ ಎಲ್ಲರು ಒಟ್ಟಿಗೇ ‘ರೀ ರೇವಣಪ್ಪ ನಿಮ್ಮ ಶೆಂಗಾ, ಮೆಣಸಿನಕಾಯಿ, ಹತ್ತಿ ವ್ಯಾಪಾರ ತರಹ ಅಲ್ಲ ಈ ಸಂಧರ್ಭ. ನೀವು ಸುಮ್ಮನಿದ್ದು ಅವರು ಮುಂದೇನಾಯಿತೆಂದು ಹೇಳಲಿ, ಸಾರ್, ಮುಂದುವರೆಸಿ’ ಎಂದು ರೇಗುತ್ತಾ ಎಲ್ಲರು ಒಟ್ಟಿಗೆ ಅವರಮೇಲೆ ಬಿದ್ದರು. ರೇವಣಪ್ಪ ಉರಿ ಮುಖ ಮಾಡಿ ಸುಮ್ಮನಾದರು. ‘ನೋಡಿ, ಅದೇನು ಆಶ್ಚರ್ಯ, ಆ ರಾತ್ರಿ ಹನ್ನೆರಡಕ್ಕೆಸರಿಯಾಗಿ ‘ಡ್ರೀಮಕ್ವೀನ್’ ರೇಸ್ ಕ್ಲಬ್ನ ಹೊರ ಆವರಣದಲ್ಲಿ ಹೆಲಿಕಾಪ್ಟರ್ ಮುಖೇನ ಇಳಿದು ಬಂದು, ಅದನ್ನ ಸರಸರನೆ ಕ್ಲಬ್ಬಿನ ಒಳಾ೦ಗಣಕ್ಕೆ ಕರೆದೊಯ್ದು ಅಲ್ಲಿ ನಿಗೂಢವಾದ ಜಾಗದಲ್ಲಿ ಅತ್ಯಂತ ಸುರಕ್ಷಿತವಾಗಿ ಸೇರಿಸಿದ್ರು. ಮುಂದೆ ನಡೆದದ್ದು ಮಾಮೂಲಿಯಂತೆ. ಕುದುರೆ ಸ್ಪರ್ಧೆಯಲ್ಲಿ ಅತ್ಯಂತ ವೇಗದಲ್ಲಿ ಓಡಿ ಎಲ್ಲ ಇತರ ಫಿಲ್ಲಿಗಳನ್ನು ಹಿಂದೆ ಸರಿಸಿ ಒಡೆಯರ್ ಕಪ್ ಗೆದ್ದಿತೆಂದು ಹೇಳಬೇಕಾಗಿಲ್ಲ’. ಎಂದು ಹೇಳುತ್ತಾ ಶಂಕರ ಸಿದ್ಧಾತಿ೦ಗಳು ತಮ್ಮ ಗ್ಲಾಸನ್ನು ತುಟಿಗೇರಿಸಿದರು. ‘ಸಾರ್, ಇದು ಅನ್ಯಾಯ, ನೀವು ಏನೇನೋ ಇಲ್ಲದ, ಸಲ್ಲದ ಕಥೆ ಹೇಳಿ ನಮಗೆ ಮೋಸ ಮಾಡುತ್ತಿದ್ದೀರಾ, ನಿಜವಾಗಿ ಹೇಳಿ, ಏನಾಯಿತೆಂದು? ಅದೇನು ಮ್ಯಾಜಿಕ ಸಾಧ್ಯವಾ, ನಾವ್ ನಂಬುವುದಿಲ್ಲ’ ಚ೦ದ್ರು, ರೇವಂಣ್ಕರ್, ಶೇಖರ್ ವೊಟ್ಟಿಗೇ ಕಿರುಚಿದರು, ಅವರ ಜೊತೆಗೆ ಮತ್ತೆಲ್ಲರೂ ಧ್ವನಿ ಗೂಡಿಸಿದರು. ಶಂಕರ ಸಿದ್ಧಾ೦ತಿಗಳು ಮುಖದಲ್ಲಿ ತುಂಬು ನಗೆ ತರಿಸಿಕೊಂಡು ಎಲ್ಲರೆಡೆ ಕೈ ತೋರಿಸುತ್ತಾ ಎತ್ತರದ ಧ್ವನಿಯಲ್ಲಿ ಹೇಳಿದರು ’ಸ್ವಲ್ಪ ತಾಳಿ, ಅದನ್ನೆ ನಾ ಹೇಳಲಿಕ್ಕೆ ಬಂದೆ, ಅಷ್ಟರಲ್ಲಿ ನೀವುಗಳೆಲ್ಲಾ…’, ಪ್ರೊ. ಹಂಚಿಕಡ್ಡಿ ಎಲ್ಲರಿಗು ಮೌನವಾಗಿರುವಂತೆ ಕೂಗಿ ಹೇಳಿ ಮತ್ತೆ ಸಭೆಯನ್ನು ತಹಬಂದಿಗೆ ತಂದರು. ‘ಏನಾಯಿತೆಂದರೆ, ನಮ್ಮ ಅಂಕಲ್ ಜಿಮ್ಮಿ ಮುರಳಿಗೆ ಬಾಲ್ಯದ ಚಡ್ಡಿ ಸ್ನೇಹಿತರು. ಈತ ಬರ್ಮಾಕ್ಕೆ ತಾರುಣ್ಯದಲ್ಲೇ ಮನೆ ಬಿಟ್ಟು ಹೋಗಿ, ಅಲ್ಲೇ ನೆಲಸಿ ಸ್ವಯಾರ್ಜಿತ ಮಾಡಿ ಜೀವಿಸಿಕೊಂಡಿದ್ದವರು. ಅಲ್ಲಿಯ ದ್ವೀಪದ ಅನೇಕ ಕಾಡಿನ ಜಾಗಗಳಲ್ಲಿ ಅಮೂಲ್ಯವಾದ ಸಂಜೀವಿನಿ ಗಿಡಗಳು, ಅಪಾಯಕಾರಿ ವಿಷ ಗಿಡಗಳು, ಇನ್ನು ಚಿತ್ರ ವಿಚಿತ್ರ ತರಹದ ಮೂಲಿಕೆಗಳು ಬೆಳೆಯುತ್ತಿದ್ದು, ಅವುಗಳ ಬಗ್ಗೆ ಜೀವನಪೂರ ಅಭ್ಯಸಿಸಿ -ಇವುಗಳ ಪರಿಣಾಮಗಳನ್ನು, ಉಪಯೋಗಿಸುವ ರೀತಿ, ಅಪಾಯ, ಪರಿಹಾರ ಎಲ್ಲವನ್ನು ಪರಿಪೂರ್ಣವಾಗಿ ತಿಳಿದಿದ್ದ ಒಬ್ಬ ಕಾಶ್ಮೀರಿ ಪಂಡಿತನ ಪರಿಚಯ ಮಾಡಿಕೊಂಡಿದ್ದರಂತೆ. ಆತ ಇವರಿಗೆ ಸ್ನೇಹಿತನಾಗಿ ತಾನು ಸಾಯುವ ಮುಂಚೆ ಇವರಿಗೆ ಸಾಧ್ಯವಾದಷ್ಟು ಕಲಿಸಿದ್ದನಂತೆ. ಹಾಗಾಗಿ ಪರೋಪರಾರ್ಥಕ್ಕಾಗಿ ಸಂಸಾರ ಕಟ್ಟಿಕೊಳ್ಳದ ಇವರು ಭಾರತಕ್ಕೆ ಮರಳಿ ಬಂದ ಮೇಲೆ ನಮ್ಮ ಕುಟುಂಬದಲ್ಲೇ ಇದ್ದವರು, ಸುಮಾರು ಒಂದು ವಾರದ ಹಿಂದೆ ಆತನನ್ನ ನಮ್ಮ ಮುರಳಿ ಬಳಿಗೆ ಕಳಿಸಿಕೊಟ್ಟಿದ್ದೆ. ಈ ಸಂಧರ್ಭಕ್ಕೆ ಅದು ಅನುಕೂಲವಾಗಿದ್ದು ಕೇವಲ ಧರ್ಮ ಕರ್ಮ ಸಂಯೋಗವಷ್ಟೇ. ಜಿಮ್ಮಿಗೆ ಸರ್ಕಾರದಲ್ಲು ಹಾಗು ಇತರ ಪ್ರಸಿದ್ಧ, ಶಕ್ತಿವಂತ, ಪ್ರಭಾವಿ ವ್ಯಕ್ತಿಗಳ ಪರಿಚಯದಿಂದಾಗಿ ಸಹಾಯ ಪಡೆದು ಯಾರಿಗೂ ಗೊತ್ತಾಗದಂತೆ ಕುದುರೆಯೊಂದನ್ನ ಸ್ಪರ್ಧೆಯ ಹಿಂದಿನ ರಾತ್ರಿ ಹೆಲಿಕಾಪ್ಟರ ಮೂಲಕ ಇಳಿಸಿ ಅದು ಅಪಹರಿಸಬೇಕೆಂಬುವವರನ್ನು ಗುರಿ ತಪ್ಪಿಸಿದ್ದು೦ಟು! ಅವರು ಕದ್ದೊಯ್ದಿದ್ದರು ಅದು ಬೇರೆಯೇ ಅನುಪಯುಕ್ತ ಹುದುರೆಯಾಗುತ್ತಿತ್ತಷ್ಟೇ. ನಿಜವಾಗಿ ಹೇಳಬೇಕೆಂದರೆ ‘ಡ್ರೀಮ್ ಕ್ವೀನ್’ ಮುರಳಿಯ ಲಾಯ ಬಿಟ್ಟೆಲ್ಲು ಹೋಗಿರಲೇ ಇಲ್ಲ! ‘ಅದು ಹೇಗೆ ಸಾಧ್ಯ ಸಾರ್? ಎಲ್ಲರು, ಪೊಲೀಸರು ಕಳೆದುಹೋಗಿದೆಯೆ೦ದು ಹುಡುಕುತ್ತಿದ್ದರಲ್ಲವೇ? ನಿಮ್ಮ ಮುರಳಿ ಆಸ್ಪತ್ರೆ ಸೇರಿದ್ದು ಸುಳ್ಳೇ? ’ ಈ ತರಹ ನಮ್ಮನ್ನ ಮೋಸ ಮಾಡಿದ ಸಮಾಚಾರ ಹೇಳುತ್ತಿದ್ದೀರಾ?’ ಎಂದು ಹಲವರು ಬಾಯಿ ಹಾಕಿದರು. ‘ಹಾಗಲ್ಲ, ಸ್ವಲ್ಪ ತಾಳಿ, ಕುದುರೆ ಕಳೆದು ಹೋಯಿತೆಂಬ ಆ ರಾತ್ರಿ ನಿಜವಾಗಿ ನಡೆದಿದ್ದೇನೆಂದರೆ ಜಿಮ್ಮಿ ತಾನು ತಿಳಿದು ಕೊಡಿದ್ದ ವಿಚಿತ್ರ ಕಂಣ್ಕಟ್ಟಿನ ಔಷದದಿಂದ ಮೂರು ದಿನಗಳ ಹಿಂದಿನ ರಾತ್ರಿ ಲಾಯದ ಬಳಿ ಹೋಗಿದ್ದ ಮುರಳಿಯ ಕೈಲೇ ಸಿಂಪಡಿಸಿದ ಕಾರಣ ಆ ಔಷಧ ಪರಿಣಾಮ ಮಾರನೆಯ ದಿನದಿಂದ ನಲ್ವತ್ತೆಂಟು ಘ೦ಟೆಗಳವರೆಗೆ ಲಾಯದಲ್ಲಿನ ಕುದುರೆ ಯಾರಿಗೂ ಕಾಣುಸುತ್ತಿರಲಿಲ್ಲ, ಅಂತಹ ಮಾಯಾಜಾಲದ ಆ ಔಷಧದ ಪರಿಣಾಮ ಪಂದ್ಯದ ಹಿಂದಿನ ರಾತ್ರಿಯವರಿಗಿತ್ತು. ಹಾಗಾಗಿ, ಯಾರು ಆ ಲಾಯದ ಸಮೀಪ ಬಂದರು ಮರಳಿ ಇಲ್ಲವೆಂದೇ ಹೋಗುತ್ತಿದ್ದರಷ್ಟೇ. ನಮ್ಮ ಜಿಮ್ಮಿಯ ಪ್ರಭಾವದಿಂದಾಗಿ ಪಂದ್ಯದ ದಿನ ಮುಂಜಾನೆಗೇ ಮುಂಚೆಯೇ ‘ಡ್ರೀಮ್ ಕ್ವೀನ್’ ಕ್ಲಬ್ಬಿನಲ್ಲಿ ಹಾಜರಿಯಾಗುವಂತೆ ಎಲ್ಲ ಏರ್ಪಾಡು ಮಾಡಿಸಿದ್ದರು. ಮುರಳಿ ಕೇವಲ ಜ್ಞಾನ ತಪ್ಪಿದಂತೆ ನಟಿಸಿದುದಷ್ಟೇ, ಆಸ್ಪತ್ರೆಯವರು, ಪೊಲಿಸರು, ಎಲ್ಲರೂ ಈ ನಾಟಕದಲ್ಲಿ ಅತ್ಯಂತ ಗುಪ್ತವಾಗಿ ಭಾಗವಹಸಿದವರೇ! ‘ಆದರೆ, ಕುದುರೆ ಗೆದ್ದೇ ಗೆಲ್ಲುತ್ತದೆಂದು ಹೇಗೆತಾನೆ ನಂಬುವುದು ಸಾರ್?’ ಪ್ರೊ. ಹಂಚಿಕಡ್ಡಿ ಕೇಳಿದರು. ‘ಹೌದು, ನಾನು ಮರೆತಿದ್ದೆ, ನಮ್ಮ ಜಿಮ್ಮಿ ಕುದುರೆಗಳಿಗಾಗಿಯೇ ಅವರ ಗುರುವಿನಿಂದ ‘ಗಜಾಶ್ವ ಮಹಾ ಲೇಹ್ಯ’ ಎಂಬ ಔಷಧವನ್ನ ತಯಾರಿಸಿಕೊಂಡಿದ್ದರು. ಅದನ್ನು ಯಾವುದೇ ಕುದುರೆಗೆ ಒಂದೇ ಒಂದು ಸಲ ಕೊಟ್ಟರೆ ಆರು ತಿ೦ಗಳವರೆಗೆ ಅದು ಆನೆಯ ಬಲ ಹೊಂದಿ ಓಡಬಲ್ಲದು, ಆಗ ಅದನ್ನು ಸ್ಪರ್ಧೆಯಲ್ಲಿ ಮೀರಿಸುವ ಯಾವುದೇ ಪ್ರಾಣಿಯು ಇರಲಾರದು.’ – ಎಂದು ಹೇಳಿ ತಮ್ಮ ಕೈ ಗಡಿಯಾರ ನೋಡಿಕೊಂಡರು, ಹತ್ತು ಘಂಟೆ ಸಮೀಪಿಸುತ್ತಿತ್ತು. ತಮ್ಮ ಸುಲೋಚನವನ್ನ ಹಣೆಗೆ ಸಿಕ್ಕಿಸಿ ಎದ್ದು ಹೊರಡುವ ಸೂಚನೆ ಕೊಟ್ಟರು. ಎಲ್ಲರ ಮಾತು ನಿಂತು, ಸಭೆ ಭರ್ಖಾಸ್ತ್ ಆಗಿ ತಮ್ಮ ತಮ್ಮಮನೆಯ ದಾರಿ ಹಿಡಿದರು. ಆವರುಗಳ ತಲೆ ಸಾಕಷ್ಟು ಬಿಸಿಯಾಗಿ, ನಂತರ ತಮ್ಮ ತಮ್ಮತಮ್ಮಲ್ಲೇ ಚರ್ಚಿಸಿ ಕೊಳ್ಳುತ್ತಾ ಕ್ಲ ಬ್ಬಿನಿ೦ದ ಹೊರಬಿದ್ಧರು. ನೆರೆಹೊರೆಯ ವಾಸದ ಹಲವರು ಮಂಪರಿನಲ್ಲಿ ಡ್ರೀಮ್ ಕ್ವೀನ್, ಕುದುರೆ, ಮಾಯ, ಶೇಮ್, ಹೀಗೆಲ್ಲ ಕನವರಿಸುತ್ತಿದ್ದನ್ನು ಅವರವರ ಹೆಂಡತಿಯರುಗಳು ಪರಸ್ಪರ ಮಾತಾಡಿಕೊಳ್ಳುತ್ತಿದ್ದರೆಂಬ ಸುದ್ಧಿ ನಿಜವೇ ಎಂಬುದುಕ್ಕೆಸಮರ್ಥನೆ ಈ ವರದಿಗಾರನಿಗೆ ಸಿಕ್ಕಿರುವುದಿಲ್ಲ.
コメント