ಆನಂದ ವಿಹಾರ ಕ್ಲಬ್ – ಇಲಿ ಹಿಡಿಯಕ್ಹೋಗಿ ಹೆಗ್ಣ ಒಳಗ್ಬಿಟ್ಕಂಡ್ರಂತೆ
- haparna
- Sep 8, 2014
- 5 min read
ಇಲಿ ಹಿಡಿಯಕ್ಹೋಗಿ ಹೆಗ್ಣ ಒಳಗ್ಬಿಟ್ಕಂಡ್ರಂತೆ
(Author: H.R.Hanumantha Rau- this humorous skit was published in ‘APARANJI’ KANNADA HUMOUR MONTHLY,SEPTEMBER 2014 ISSUE)
ಎಂದಿನಂತೆ ಈ ಆಷಾಢದ ಮೊದಲ ಶನಿವಾರದಂದೂ ನಮ್ಮ ಆನಂದವಿಹಾರ ಕ್ಲಬ್ಬಿನ ಚಿಟಿಕೆ ಸಂಘದವರ ಸಭೆ ಸೇರಿತ್ತು. ಖಾದ್ಯ, ಪಾದ್ಯ, ಪಾನೀಯಗಳ ಸಮಾರಾಧನೆಯ ನಡುವೆ ಚರ್ಚೆ ಎತ್ತಲಿಂದ ಎಲ್ಲಿಗೋ ಸಾಗುತ್ತಾ, ಬೆಂಗಳೂರು ನಗರ ಸಭೆ ಕಛೇರಿಯಲ್ಲಿ ಇಲಿಗಳ ಹಿಡಿಯಲಿಕ್ಕಾಗಿ, ವಿನಿಯೋಗಿಸಿದ ಹಣದ ಬಗ್ಗೆ ಆ ದಿನದ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ಧಿಯ ಕಡೆಗೆ ಹೊರಳಿತ್ತು. ಅನೇಕ ಬಾರಿ ಇಂತಹ ಚರ್ಚೆಗಳು ಬಹು ರೋಚಕವಾಗಿದ್ದು, ಈ ವರದಿಗಾರನ ಲೇಖನಿಗೆ ಸಾಕಷ್ಟು ಸಾಮಗ್ರಿಯಾಗುತ್ತಿದ್ದುದು ಸಹಜವೇ.
ಈ “ಆನಂದ ವಿಹಾರ ಕ್ಲಬ್”ನ ಪರಿಚಯವಿಲ್ಲದವರು ಒಮ್ಮೆ ಗುರುಗೋವಿಂದ ನಗರಕ್ಕೆ ಬಂದರೆ,ಅಲ್ಲಿಯ ರಾಮಮಂದಿರದ ರಸ್ತೆ ದಾಟಿ, ಸ್ವಲ್ಪ ಎಡಕ್ಕೆ ನಡೆದು ಮತ್ತೆ ಬಲಕ್ಕೆ ತಿರುಗಿದರೆ ಕಾಣಸಿಗುವ ಏಕೈಕ ಬಹು ಮಹಡಿ ಕಟ್ಟಡವೇ ಈ ಕ್ಲಬ್ಬಿನ ವಿಳಾಸ. ಅದರ ಮೊದಲ ಉಪ್ಪರಿಗೆಯ ಈಶಾನ್ಯ ದಿಕ್ಕಿಗಿರುವ ಪುಟ್ಟ ಹಜಾರವೇ ನಮ್ಮ ಚಿಟಿಕೆ ಸಂಘದವರ ಆಶ್ರಯ ಧಾಮ ಹಾಗು ಶಂಕರ ಸಿದ್ಧಾಂತಿಗಳೇ ಇದರ ಕೇಂದ್ರ ಬಿಂದು. ಅವರ ಮಾತೆಂದರೆ ಎಲ್ಲರಿಗೂ ಕುತೂಹಲದ, ರೋಚಕ ವೃತ್ತಾಂತಗಳ ರಸಾಸ್ವಾದನೆಯ ಕ್ಷಣಗಳು.
“ರೇವಣಪ್ಪ ನಿಮಗೆ ಗೊತ್ತಾ, ಈ ಬೀಬಿಎಂಪಿ ಕಛೇರಿಯಲ್ಲಿ ಇಪ್ಪತ್ತು ಇಲಿಗಳ ನಾಶಕ್ಕಾಗಿ ಎರಡು ಲಕ್ಷ ರುಪಾಯಿಗಳು ವಿನಿಯೋಗವಾದವಂತೆ, ಅಂದ್ಮೇಲೆ, ನಿಮ್ಮ ಮಂಡಿಯಲ್ಲಿ ಈರುಳ್ಳಿ, ಆಲುಗಡ್ಡೆ, ಶೇಂಗಾ, ಧನಿಯ ಇತ್ಯಾದಿ ಸಾಮಗ್ರಿಗಳ ಕಾಪಾಡಕ್ಕೆ ಎಷ್ಟಾಗಬಹುದು?” ಪ್ರೊಫೆಸರ್ ಹಂಚಿಕಡ್ಡಿಯವರ ಪ್ರಶ್ನೆ.
“ತೆಗೀರಿ ಸಾರ್, ನಿಮ್ಮಾತೇನು, ಅವ್ರಿಗೇನ್ ಸರ್ಕಾರ ಹಣದ ಗ್ರಾಂಟ್ ಕೊಡ್ತಾರಾ?” ಸಾಫ್ಟ್ವೇರ್ ತಂತ್ರಜ್ಞ ಪಿಲ್ಟೂ ಉವಾಚ.
“ಅಲ್ರೀ, ಅವರ ಗೋಡೌನಲ್ಲಿ ಧಾನ್ಯ ಕಾಪಾಡ್ಕೊಂಡ್ರೆ ತಾನೇ ನಮಗೆಲ್ಲ ಉಣ್ಣಕ್ಕೆ ಆಹಾರ ಒದಗೋದು? ರೈತರಿಗೆ ಸಾಲ ಮನ್ನ, ಸಾಲ ರಹಿತ ಬಡ್ದಿ ಮನ್ನ ಅಲ್ಲಲ್ಲ ಬಡ್ದಿ ರಹಿತ ಸಾಲ ಇತ್ಯಾದಿ ಎಲ್ಲಾ ಸರ್ಕಾರ ಸಹಾಯ ಮಾಡೋವಾಗ, ಇದನ್ನೂ ಯಾಕ್ಮಾಡ್ಬಾರ್ದು? ಅಷ್ಟಕ್ಕೂ, ನೂರಕ್ಕ್ ನಲ್ಲ್ಬತ್ತೋ, ಐವತ್ತೋ ಆದಾಯ ತೋರ್ಸಿ ರೇವಣಪ್ಪ ಟ್ಯಾಕ್ಸ್ ಕಟ್ಟಲ್ವ? ಹೀ ಇಸ್ ಎನ್ ರೆಸ್ಪೆಕ್ಟಬಲ್ ಟ್ಯಾಕ್ಸ್ ಪೇಯರ್ ಯು ನೋ? ” ಕ್ರಾಸ್ ಕೊಶ್ಚನಿಸಿದರು ಎ.ಎನ್. ಕಪ್ಪಣ್ಣ(ನಮಗೆಲ್ಲ -ಎ.ಎನ್.ಕೆ- ಸೂಚ್ಯವಾಗಿ ಎಳೆ ನಿಂಬೆಕಾಯಿ).
ಕಡೇ ವಾಕ್ಯವನ್ನ ಕೇಳಿ ಮಂಡಿಪೇಟೆ ದೊರೆ ರೇವಣಪ್ಪನವರಿಗೆ ಹೇಗೆ ಹೇಗೋ ಆಯಿತು. ಅವರ ಗಿರಿಜಾ ಮೀಸೆಯನ್ನು ತಿರುವುತ್ತಾ ಬಾಯಿ ತೆರೆಯುವಷ್ಟರಲ್ಲಿ, ನಮ್ಮ ಗರಡಿ ಪೈಲ್ವಾನ್ ಫೈಜ್ ಮಹಮದ್ ಪೀರ್ ಸಾಹೇಬು “ಕ್ಯಾ ಬಾತ್ ಆಪ್ಕಾ, ಬಹುತ್ ಅಚ್ಚೆ ಬಾತ್ ಬೋಲೆ, ಅಲ್ರೀ, ರೇವಣಪ್ಪ ಬಜಾರ್ಮೇ ಇಲಿ ಕಾಯಕ್ಕೆ ಅಂತಾ ದುಕಾನ್ ಮಡಗವ್ರ ! ಹಮಾರ ಮನ್ಯಾಗೂ ಇಲೀನು ಅದಾವೇ, ಹೆಗ್ಣ ಕೂಡ ಆತಾ ಜಾತಾ, ಜೊತೆಗೆ ಬಿಲ್ಲಿ ಕೂಡ. ಹಾಗಂತಾ ನಮಗೂ ಸರ್ಕಾರ್ ಸೇ ಗ್ರಾಂಟ್ ಮಿಲೇಗಾ ಕ್ಯಾ, ಎಳೆ ನಿಂಬೆ ಕಾಯವ್ರೆ?” ಅವಕಾಶ ಸಿಕ್ಕಿದ್ರೆ ಸಾಕು, ಪೀರು ಭಾಯಿ ಕಪ್ಪಣ್ಣನ್ನ ಕಾಲೆಳೆಯೋದ್ ಬಿಡಲ್ಲ. ಅವ್ರಿಗೆ ಅದು ಬಲು ಖುಷಿ.
“ಹಾ ಗಾದ್ರೆ, ನಿಮ್ಮನೆಗೆ ಬರೋ ಇಲಿ ತಿನ್ನೋ ಬಿಲ್ಲೀಗೂ ಪೈಸಾ ವಸೂಲ್ ಆಗ್ಬೇಕು ಸರ್ಕಾರ್ದಿಂದ ಅಲ್ವೇ”ನಿವೃತ್ತ ಜಡ್ಜಿ ವಾಸುದೇವ ಅಡಿಗರ ಪ್ರತಿಕ್ರಿಯೆ.
“ಅಷ್ಟೆ ಅಲ್ಲ ಪೀರ್ ಭಾಯ್, ನಮ್ ಮನ್ಯಾಗೆ ನನ್ ಹೆಂಡ್ತಿ ತಮ್ಮ, ಅವ್ರಮ್ಮಾನೂ ಸೇರ್ಕೊಂಡು ಇಲಿಗಳ್ ತರಾನೆ ಕಚ್ಚಾಡ್ತಾನೆ ಇರ್ತಾರೆ, ನಮ್ಮಲ್ಲೇ ಬಂದ್ ಝಾಂಡಾ ಹಾಕಿ. ನಂಗೂ ಕಪ್ಪಣ್ಣ ಡಿ. ಏ.ರೆಕೆಮಂಡ್ ಮಾಡ್ತಾರಾ?”– ಪಿಲ್ಟು ಅವರ ಉದ್ಗಾರ. ಅವ್ರ ದು:ಖದ ಕಟ್ಟೆ ಒಡೆದಿತ್ತು.
ಮಾತು ಎಲ್ಲೆಲ್ಲಿಗೋ ತಿರುಗುತ್ತಿದ್ದನ್ನ ಗಮನಿಸಿದ ಪ್ರೊ. ಹಂಚಿಕಡ್ಡಿ “ವಿಷಯಕ್ಕೆ ಬನ್ನಿ ಇತ್ಲಾಗೆ, ಇದೀಗ ಇಲಿ ಹಿಡ್ಯಕ್ಕೋಸ್ಕರ ಅಷ್ಟೊಂದ್ ಖರ್ಚಾದರೆ, ಕಂತ್ರಿ ನಾಯಿಗಳ್ನ ಹಿಡಿಯಕ್ಕೆ ಅದೆಷ್ಟು ಕೋಟಿ ಹಣ ಬೇಕಾಗಬಹುದು? ಇದೇ ಆಧಾರದ ಮೇಲೆ ಒಂದೊಂದ್ ವಾರ್ಡ್ನಲ್ಲಿರೋ ಇಲಿ, ಹೆಗ್ಣ, ಸೊಳ್ಳೆ ಮತ್ತಿತರ ಜನರ ರಕ್ತ ಹೀರೋ ಅಂಥಹವನ್ನ ಕಂಡ್ಹಿಡ್ದು ನಾಶ ಮಾಡ್ಬೇಕಾದ್ರೆ ನಾವ್ ಕಟ್ಟೊ ತೆರಿಗೆಯೆಲ್ಲ ಸಾಲೋದೇ ಇಲ್ಲ ಏನಂತೀರಿ ಶಂಕರ್”
“ಅದೇ ಈಗ ಆಗಿರೋದು, ಅದಕ್ಕೇ ಈ ಬೀಬಿಎಂಪಿನೂ ದಿವಾಳಿ ಆಗಿರೋದು ಅಂತಾ ಪೇಪರ್ನಲ್ಲೇ ಹಾಕವ್ರಲ್ಲ!” ಪಿಲ್ಟು ಉವಾಚ.
“ನಿಜ ಹೇಳ್ಬೇಕಂದ್ರೆ, ಇದಕ್ಕೆಲ್ಲಾ ಕಾರಣ ಅಲ್ಲಿರೋ ಭಾರಿ ಸರ್ಕಾರೀ ಹೆಗ್ಣಗಳೇ ಅಂತಾ ಪಿಸ್ಗುಟ್ಟೋದ್ ಕೇಳಿದ್ದೆ ” ಚಂದ್ರು ಉವಾಚ. ತಮ್ಮ ಸುಲೋಚನವನ್ನ ಒರೆಸಿ ಮೇಜಿನಮೇಲಿಡುತ್ತ ಸಿದ್ಧಾಂತಿಗಳು ಒಂದು ಬಾರಿ ಎಲ್ಲರ ಕಡೆ ನೋಡಿ “ವಿಸ್ಮಯದ ಸಂಗತಿ ಅಂದರೆ ಇಷ್ಟೊಂದು ಹಣ ಹೇಗೆ ವಿನಿಯೋಗ ವಾಯಿತೆಂದು ಜವಾಬ್ದಾರಿಯ ಸ್ಥಾನದಲ್ಲಿದ್ದವರು ಯಾಕೆ ಪರಾಮರ್ಶಿಸದೇ ಹೋದರು ಎಂಬುದೆ.”
“ನಮ್ಮ ಬಜೆಟ್ನಲ್ಲಿ ವಿತ್ತೀಯ ಕೊರತೆ ಅಂತ ತೋರ್ಸಸ್ತಾರೋ ಹೊರತು, ಅಲ್ಲಿದ್ದದ್ದನ್ನ ಯಾವ ಯಾವ ಹೆಗ್ಗಣ ಎಲ್ಲೆಲ್ಲಿಂದ, ಯಾಕೆ, ಹೇಗೆ ಬಂದು ತಿಂದೋಯ್ತಂತ ಯಾವ ಹಣಕಾಸಿನ ಮಂತ್ರೀನು ಹೇಳೋದೇ ಇಲ್ವೆ?” ಪ್ರೊ. ಹಂಚಿಕಡ್ಡಿ ಉವಾಚ.
“ಅದೇನ್ ಬಿಡ್ರಿ, ನಂ ಸಾಹೇಬ್ರಿಗೆ ಜೋಬ್ನಲ್ಲಿರೋದೆ ಎಷ್ಟು, ಎಲ್ಲೋಯ್ತಂತ ತಿಳಿಯೋದಿಲ್ಲ ಬಾರ್ಗೆ ಹೋಗ್ಬಂದ್ನಂತ್ರ, ಅಲ್ವೇ ಪೀರು! ಆಗೆಲ್ಲಾ ನಿಂ ಬೀವಿನೆ ಆಡಿಟ್ ಮಾಡಿ, ನಿಮಗೆ ಒಳಕ್ಕರ್ಕಂಡು ಮಂಗಳಾರ್ತಿ ಮಾಡೋದುಂಟಲ್ವಾ?” ಇದೀಗ ಪೀರ್ಗೆ ಕಾಲೆಳಯೋಕೆ, ಸಾಹೇಬ್ರ ಚಾಳಿ ತಿಳಿದಿದ್ದ ಕಪ್ಪಣ್ಣನ ಸರದಿ.
ಪೀರು, ತಮ್ಮ ಗುಟ್ಟುರಟ್ಟಾಗಿದ್ದರಿಂದ, ಅಸಹನೆಯಿಂದ ಕಪ್ಪಣ್ಣರಿಗೆ ತಿರುಗೇಟು ನೀಡುವಷ್ಟರಲ್ಲಿ, ನಯವಾಗಿ ಕೆಮ್ಮುತ್ತಾ ಸಿದ್ಧಾಂತಿಗಳು “ ಸುಮಾರು ಐವತ್ತು ವರುಷಗಳಿಗೂ ಮುನ್ನ-ಅಂದರೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ – ಇದೇ ತರಹದ ವ್ಯವಹಾರದಲ್ಲಿ ನಡೆದಿದ್ದ ಸರ್ಕಾರೀ ಪತ್ರ ವಿನಿಮಯ ಬಹಳಸ್ವಾರಸ್ಯವಾಗಿದೆ” ಎಂದು ಎಲ್ಲರ ದಿಕ್ಕಿನಲ್ಲೂ ನೋಡುತ್ತಾ ದೇಶಾವರಿ ನಗೆ ನಕ್ಕರು.
“ ಆದೇನ್ ಸಾರ್, ವಿವರಿಸಿ ಹೇಳಬಹುದಲ್ಲ?” ಹುಗ್ರ ಕನ್ನಡಾಭಿಮಾನಿ, ಓರಾಟಗಾರ ಚಂದ್ರು ಕೊಶ್ಚನಿಸಿದರು.
ಗ್ಲಾಸಿನಲ್ಲಿದ್ದುದನ್ನು ಗಂಟಲಿಗೆ ಇಳಿಸುತ್ತಾ, ಸಿದ್ಧಾಂತಿಗಳು ಪ್ರಾರಂಭಿಸಿದರು “ಅಪ್ರೋಚ್ ರಸ್ತೆಯೂ ಇಲ್ಲದ, ವಿದ್ಯುತ್ತನ್ನೂ ಕಾಣದ ಆ ದಿನಗಳಲ್ಲಿ, ನಮ್ಮ ಇಲಿಯಾರುಪುರ ಗ್ರಾಮಕ್ಕೆ ಒಂದು ಬಾರಿ ಚಿರತೆಗಳೆರಡು ರಾತ್ರಿಯವೇಳೆ ಹೊಂಚು ಹಾಕಿ, ಒಂದು ಮಗು ಹಾಗು ಎರಡು ಕರುಗಳನ್ನು ಒಯ್ದಿದ್ದವು, ಕಾಡಿನಲ್ಲಿನ ಇತರೆ ಬಲಿಷ್ಠ ಪ್ರಾಣಿಗಳ ದೆಸೆಯಿಂದಲೋ ಇಲ್ಲವೇ ವೃದ್ಧಾಪ್ಯತೆಯ ಕಾರಣದಿಂದಲೋ. ಅವುಗಳ ಹಿಂದೆ ನರಿಗಳು, ಇವನ್ನು ಕೀಟಲೆ ಮಾಡುವ ಉದ್ದೇಶದಿಂದ ಒಂದಷ್ಟು ಮಂಗಗಳೂ ಹಿಂಬಾಲಿಸಿದ್ದವು. ಇತ್ತ ಚಿರತೆ, ನರಿಗಳಿಂದ ಮಕ್ಕಳು, ದೊಡ್ಡವರು, ಹೈನುಗಳಿಗೆ ಅಪಾಯವಿದ್ದರೆ, ಅತ್ತ ಮಂಗಗಳ ಸಾಮೂಹಿಕ ದಾಂಧಲೆಯಿಂದ ಗ್ರಾಮಸ್ತರು ಕಂಗಾಲಾಗಿದ್ದರು. ಪೋಲಿಸ್ ಔಟ್ ಪೋಸ್ಟ್ ಬಹು ದೂರವೇ ಇದ್ದು, ದೂರು ಕೊಡಲು ಹೋಗಿ ಬರಲು, ಬಸ್ಸಿನ ಸೌಕರ್ಯವೂ ಇಲ್ಲದ ಆ ದಿನಗಳಲ್ಲಿ ಸುಮಾರು ಎರಡು-ಮೂರು ದಿನಗಳೇ ಬೇಕಾಗುತ್ತಿತ್ತು. ಸಾಲದ್ದಕ್ಕೆ ಮಳೆಗಾಲ. ಹೀಗಾಗಿ ಊರ ಪಟೇಲ ಕಣಿಭೈರಯ್ಯ ಶಾನುಭೋಗ ಶೀನಪ್ಪನಿಂದ ಪತ್ರ ಬರೆಯಿಸಿ, ಅಮಲ್ದಾರ ಕಚೇರಿಗೂ ಮತ್ತು ಅದರ ನಕಲನ್ನು ಪೋಲಿಸ್ ಔಟ್ ಪೋಸ್ಟಿಗೂ ಆಳುಗಳ ಮುಖೇನ ಕಳಿಸಿಕೊಟ್ಟ. ಅಮಲ್ದಾರರು ದೀರ್ಘರಜೆಯಮೇಲಿರುವುದರಿಂದ ಆ ಕ್ಷಣಕ್ಕೆ ಏನು ಮಾಡ ಲಾಗದೆಂದು ಉತ್ತರ ಬಂತು. ಕನಿಷ್ಟಬಿಲ್ಲೆಯೊಬ್ಬ ಬಂದು ಎಲ್ಲರಿಂದ ವಿಷಯ ಸಂಗ್ರಹಿಸಿಹೋದ ನಂತರ ಮತ್ತೆ ಯಾರೂ ಆ ಪಕ್ಕ ತಲೆ ಹಾಕಲಿಲ್ಲ. ಪಟೇಲ ಮತ್ತು ಶಾನುಭೋಗರ ಮೇಲೆ ಊರ ಜನರ ಒತ್ತಾಯ ಹೆಚ್ಚಾಗತೊಡಗಿತು. ಜನ ಊರು ಬಿಟ್ಟು ಹೋಗುವುದಿರಲಿ, ಬೇರೆಡೆಯಿಂದ ಬರುವವರೂ ಪ್ರಾಣಭಯದಿಂದ ಅಲ್ಲಿಗೆ ಕಾಲಿಡದಾದರು. ಕೊನೆಗೆ ಮತ್ತೂ ಒಬ್ಬ ಗ್ರಾಮಸ್ಥ, ಹನ್ನೆರಡು ಮೇಕೆಗಳು ಚಿರತೆಗಳಿಗೆ ಆಹಾರವಾದ ಮೇಲೆ ಮತ್ತು ಹಲವು ತೋಟಗಳ ನಿರ್ನಾಮ ಪತ್ರಿಕೆಗಳಲ್ಲಿ ಪ್ರಕಟವಾಗಿ, ನಂತರ, ಸರ್ಕಾರ ಕಣ್ತೆರದು ಬೇಟೆಗಾರರನ್ನು ಕಳುಹಿಸಿದರು. ಅಷ್ಟು ಹೊತ್ತಿಗೆ ಎರಡು -ಮೂರೂ ತಿಂಗಳೆ ಸಂದುಹೋಗಿದ್ದವು. ಬಿತ್ತನೆ ಕಾರ್ಯ ಮುಂದೂಡಾಗಿತ್ತು. ಎಲ್ಲೆಲ್ಲೂ ಕೃತಕ ಅಭಾವ.”ಮಾತು ನಿಲ್ಲಿಸಿ ಸಿದ್ಧಾಂತಿಗಳು ಅಂಗವಸ್ತ್ರದಿಂದ ಮುಖವನ್ನ ಒರೆಸಿಕೊಳ್ಳುತ್ತ ಬೇರರ್ ವಾಸುವಿನೆಡೆ ದೃಷ್ಟಿ ಬೀರಿದರು. ಕೂಡಲೇ ವಾಸು ಆ ಕೂಡಲೆ ಮತ್ತಷ್ಟು ಪಾನೀಯ, ಖಾರದ ಗೋಡಂಬಿ ಅವರ ಮುಂದಿಟ್ಟ.
“ಯಾಕೆ ಆಗ್ಗೆ ಅಸೆಂಬ್ಲಿ ಇರಲಿಲ್ಲವೇ ಸಾರು, ಈಗಿನ ನಂ ಪಾರ್ಟಿ ನಾಯಕರಾಗಿದ್ದಿದ್ದರೆ ಸರ್ಕಾರನ್ನ ಒಕ್ಕಲೆಬ್ಬಿಸಿಬಿಡುತ್ತಿದ್ದರು” ನಮ್ಮ ಪುಡಿ ರಾಜಕಾರಣಿ ಮುದ್ದೇಶಯ್ಯನ ಉದ್ಗಾರ. ಈತ ರಾಜಕಾರಣಿಗಳ ವಂಶದಿಂದ ಬಂದವ. ವ್ಯವಹಾರ ಚತುರನಾದ ಈತನಿಗೆ ರಾಜಕಾರಣ ಒಂದು ಸೈಡ್ ಬಿಸಿನೆಸ್ಸ್ ಅಷ್ಟೇಯ.
“ಎನ್ಮಾತ್ ಹೇಳಿದ್ರಿ, ತೆಗೀರೀ ಅತ್ಲಾಗೆ, ಅಲ್ಲ, ಈಗನ್ ಲೀಡರ್ಗೋಳೇ ಆವಾಗಿನ್ ತೋಳಾ, ಚಿರತೆ ಆಗಿಂದ್ರಂತ ಕಾಣ್ಸತ್ತೆ. ಇವರುಗಳು ಆಗಿನ ನಾಯಕರಾಗಿದ್ದಿದ್ರೆ, ಆ ಹಳ್ಳಿನಲ್ಲೂ ಮತ್ತಷ್ಟು ರೇಪ್ ಪ್ರಕರಣ, ಇನ್ನಷ್ಟ್ ಜಮೀನ್ ಒತ್ತುವರೀಗಳೂ ಆಗಿ “ಜಿ” ಕೆಟಗೊರಿ “ಗುಳುಂ”ಕೆಟಗೊರಿ ಆಗಿ, ಅವ್ರ ಮಕ್ಕಳೂ, ಮೊಮ್ಮಕ್ಳು ಬಾರುಗಳಲ್ಲಿ ಗಲಾಟೆ ಮಾಡ್ಕಂಡ್ , ಮೇಯ್ತಾ ಇರ್ತಿದ್ರಷ್ಟೆಯ.” ಕನ್ನಡ ಸೇನಾನಿ ಚಂದ್ರು ಉವಾಚ.
“ಆವಾಗ್ಗೆ ಮುದ್ದೇಶಯ್ಯ ಹೆಸರ್ಗೆ ತಕ್ಕನಾಗಿ ಮುದ್ದೆ ತಿಂದ್ಕಂಡ್, ನಾಮ ಹಾಕಂಡ್ ದಾಸಯ್ಯನ ತರಹ ಬೀದಿಬೀದಿ ಅಲೀಬೇಕಾಗ್ತಿತ್ತು.”ಪಿಲ್ಟು ಮಾತಿನಲ್ಲೇ ತಿವಿದರು.
“ಇಲ್ಲಾ, ಅಸೆಂಬ್ಲಿ ಮೆಂಬರಾಗಿ, ಸೀಟ್ನಾಗ್ ಕುಂತು ನಿದ್ದೇನೂ ತೆಗೀಬೋದಿತ್ತು.” ಪಿಲ್ಟು ಸೇರಿಸಿದರು.
“ಆದ್ರೆ ಆಗ ಇಲಿ, ಹೆಗ್ಗಣಗಳೇ ಇರ್ತಿರಲಿಲ್ಲ! ಕಾರಣ, ಈ ಹೆಬ್ಬುಲಿಗಳೇ ಮೇಯೊಕ್ಕ್ ಷುರು ಮಾಡಿದ್ಮೇಲೆ, ಅವುಗಳ ಬಡ ಸಂಬಂಧಿ ಇಲಿಗಳಿಗೆಲ್ಲಿ ಜಾಗ?” ಪ್ರೊ. ಹಂಚಿಕಡ್ಡಿ ಸೇರಿಸಿದರು.
“ಆವಾಗ್ಗೆ ಆ ಊರ ತುಂಬಾ,’ಇಲಿ,ಇಲಿ ಹೆಗ್ಗಣ,ಇಲಿ,ಇಲಿ ಹೆಗ್ಗಣ,’ಅಂತ ಒದರ್ಕೋಂಡ್ ಪ್ರಾಣ ಬಿಡ್ತಾ ಊರಾಚೆಯ ಹೊಳೆನಲ್ಲಿ ಮುಳುಗಿ ಸಾಯ್ತಿದ್ವು, ಯಾವ ಕಿಂದರ ಜೋಗಿ ಸಹಾಯವೂ ಇಲ್ದೆ, ಆಲ್ವಾ ಚಂದ್ರು? ” ಪ್ರಶ್ನಿಸಿದರು ಪ್ರೊ. ಹಂಚಿಕಡ್ಡಿ.
“ನೀವು ಮಾಸ್ತಿಕಾ ಬೊಮ್ಮನಹಳ್ಳಿ ಕಿಂದರ್ ಜೋಗಿ ಬಗ್ಗೆ ಬೋಲಾ ಕ್ಯಾ? ಉನ್ಕ ಏ ಕವಿತಾ ಬಹುತ ಫೇಮಸ್. ನಮ್ಗೆ ಮಿಡ್ಲ್ ಸ್ಕೂಲ್ಮೆ ಯೇ ಪಢಾಥಾ. ಅವ್ರೇನ್ ಸಾರ್ ಪುಟ್ಟೇನಹಳ್ಳಿ ಕುಟ್ಟಪ್ಪನ ಮೀರ್ಸಿದವ್ರು, ಬಹುತ್ ಬಡಾ ಸಾರ್?” ಪೀರ್ ಸಾಬು ಮಾಮೂಲಿಯಂತೆ ಕವಿಗಳನ್ನು ತಿರುಗಿಸಿದ್ದರು. ‘ಕುವೆಂಪು’ ಹೆಸರನ್ನ ತಿರುಚಿದ್ದಲ್ಲದೆ, ಜೋಗಿಯನ್ನ ಮಾಸ್ತಿಯವರಿಗೆ ದಾನಮಾಡಿದ್ದರು. ಸಾಹೇಬ್ರ ಉದಾರ ಗುಣ!
ಯಾರು ನಗಲಿಲ್ಲ. ಜಡ್ಜಿ ವಾಸುದೇವ ಮಾತ್ರ ಮುಖವನ್ನ ತಿರುಚಿ, ಅಸಹನೆಯನ್ನ ಪ್ರದರ್ಶಿಸಿದರು. ಎ.ಎನ್.ಕೆ. ಮತ್ತು ಚಂದ್ರು ರ ಕನ್ನಡ ಸಾಹಿತ್ಯ ಜ್ಞಾನ ಸಾಹೇಬರಿಗಿಂತ ಹೆಚ್ಚೇನಿರಲಿಲ್ಲ.
“ಈ ಮಧ್ಯೆ, ಶಾನುಭೋಗ ಶೀನಪ್ಪ ಸರ್ಕಾರದೊಡನೆ ಒಂದು ಪತ್ರ ವ್ಯವಹಾರದ ಸೇತುವೆಯನ್ನೇ ಕಟ್ಟುಬಿಟ್ಟ!”- ಶಂಕರ ಸಿದ್ಧಾಂತಿಗಳು ಮುಂದುವರೆಸಿದರು. ಅರ್ಥಾವಾಗಲಿಲ್ಲ, ಬಿಡಿಸಿ ಹೇಳಿ ಸಾರ್?” ರೇವಣಪ್ಪನವರ ಪ್ರಶ್ನೆ.
“ನೋಡಿ, ಆ ಪತ್ರಗಳ ಸಾರಾಂಶವನ್ನಷ್ಟೇ ಇಲ್ಲಿ ಹೇಳುವೆ-
ತೇದಿ …. ಪತ್ರ I. ಇಲಿಯೂರು ಗ್ರಾಮ, ಹೋಬಳಿ ಇತ್ಯಾದಿ, ಸನ್ಮಾನ್ಯ ಅಮಲ್ದಾರ್….ವರಿಗೆ, ವಂದನೆಗಳು. ಇದೀಗ ನಮ್ಮಗ್ರಾಮಕ್ಕೆ ಸುಮಾರು ದಿನಗಳಿಂದ ಹಲವು ಚಿರತೆಗಳು ರಾತ್ರಿ ಹೊತ್ತು ಹೊಂಚು ಹಾಕಿ ಬಂದು ಕುರಿ, ಮೇಕೆ, ಕರು,ಹಸುಳೆಗಳನ್ನು ತಿಂದು ಹಾಕುತ್ತಿವೆ. ಯಾರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದು ಭಯಭೀತರಾಗಿರುತ್ತಾರೆ, ಆದಷ್ಟು ಕೂಡಲೇ ತಡಮಾಡದೆ ಇವನ್ನು ನಿಗ್ರಹ ಮಾಡಿ, ಗ್ರಾಮ ಸುರಕ್ಷಿತವಾಗುವಂತೆ, ನಮ್ಮ ಮತ್ತು ಸುತ್ತ್ತಮುತ್ತಲ ಗ್ರಾಮಗಳ ಪರವಾಗಿ ಪ್ರಾರ್ಥಿಸುತ್ತೇವೆ.-ಇಂತು, ನಿಮ್ಮ ಸೇವಕ —ತೇದಿ….., ಪತ್ರ 2.. ತೇದಿ.. -ಗೆ,ಇತ್ಯಾದಿ , ಸನ್ಮಾನ್ಯರೆ, ನಮ್ಮ ಹಿಂದಿನ ಪತ್ರಕ್ಕೆನಿಮ್ಮಿಂದ ಜವಾಬು ಬಂದಿಲ್ಲ ಮತ್ತು ಯಾವ ರೀತಿಯ ರಕ್ಷಣೆಯೂ ದೊರೆತಿಲ್ಲ, ಹಾಗಾಗಿ ಗ್ರಾಮಸ್ಥರು, ಮಕ್ಕಳಾದಿಯಾಗಿ ಭೀತಿಯಿಂದ ಮನೆಯಿಂದ ಹೊರಬರಲು ಆಗದೆ ಕಳವಳಗೊಂಡಿದ್ದಾರೆ. ಈ ಪತ್ರಕಂಡಾದರೂ ತಡಮಾಡದೆ ರಕ್ಷಣೆಯನ್ನು ಒದಗಿಸತಕ್ಕದ್ದೆಂದು … ಇತ್ಯಾದಿ… ಪತ್ರ ೩-೪-ಹಾಗು ೫ನೆ ದಕ್ಕೂ ಉತ್ತರವಿಲ್ಲ. ಕೊನೆಗೆ ಮತ್ತೆ ಪಟೇಲನೇ ಪೊಲೀಸರಗೂ, ತಹಸೀಲ್ದಾರ ಕಛೇರಿಗೂ ಮುಖ್ತ ಮಾತಾಡಿಬಂದ ಮೇಲೆ ಜವಾಬು ಬಂತು, ರಕ್ಷಣಾ ಸಿಬ್ಬಂದಿಯಲ್ಲ! ಸರ್ಕಾರೀ ಉತ್ತರ:1. ನಮ್ಮ ಉಲ್ಲೇಖ-ಇಲಿ.ಶೀನಪ್ಪ/ಸಂಖ್ಯೆ -೪೨೦… ನಿಮ್ಮ … ದಿನಾಂಕದ ಪತ್ರ ದಿಂದ ನಿಮ್ಮ ಗ್ರಾಮದ ಸುತ್ತ ಚಿರತೆಗಳ ಹಾವಳಿಯಿರುವದೆಂದು ಭಾವಿಸಲಾಗಿದೆ. ಆದರೆ, ಈ ಪತ್ರ ನಕಲನ್ನ ನಮ್ಮ ವನರಕ್ಷಣಾ ಪ್ರಾಧಿಕಾರಕ್ಕೆ ತಿಳಿಸಲಾಗಿ, ಈ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಸಿದಿರುವುದು ನಿಮ್ಮವರ ಅನುಮಾನ, ಭಯಕ್ಕೆ ಯಾವದೇ ಅಧಾರವಿಲ್ಲವಾಗಿ ರಕ್ಷಣೆ ಒದಗಿಸಲು ಸಾಧ್ಯವಿಲ್ಲ. ರೇಂಜ್ ಆಫೀಸಿಗೆ ವಿನಂತಿಸಿ. –ಸಹಿ.. ಜನಗಳಿಗೆ ಕೋಪ,ಅಸಹಾಯಕತೆ ಮತ್ತಷ್ಟು ಖಾರವಾದ ಪತ್ರಕ್ಕೆ ಕಾರಣವಾಯಿತು. ಕೂಡಲೇ ಜವಾಬು ಕೂಡ ಬಂತು. ಪತ್ರ ನ. ಉ.: ಇಲಿ. ಶೀನಪ್ಪ ಸಂಖ್ಯೆ- ೪೪೩-ನಿಮ್ಮ ತೇದಿ…ಯ ಪತ್ರಕ್ಕೆ ಉತ್ತರವಾಗಿ ನಾವು ಹೇಳವುದೇನೆಂದರೆ,ಸೂಕ್ತ ಪುರಾವೆ ಆಥವಾ ಆಧಾರವಿಲ್ಲದೆ ಸರ್ಕಾರ ಯಾವ ಕಾರ್ಯಕ್ರಮವನ್ನೂ ಆಚರಣೆಗೆ ತರಲಾಗುವುದಿಲ್ಲವೆಂದು ಈ ಮೂಲಕ ತಿಳಿಸಬಯುಸುತ್ತೇವೆ. —ಸಹಿ ತಹ್ಸೀಲ್ದಾರ. ನಮ್ಮ ಶಾನುಭೋಗ ಆ ಊರಿನಲ್ಲಿ ಬಹು ಗಟ್ಟಿಗನೆಂದೇ ಪ್ರಖ್ಯಾತಿಯಾಗಿದ್ದ. ಯಾರಿಗೂ ಜಗ್ಗದ ವ್ಯಕ್ತಿ. ಮತ್ತಷ್ಟು ಪತ್ರಗಳನ್ನು ಅವರಿವರುಗಳು ಅನುಭವಿಸಿದ ನಷ್ಟಗಳ ಉಲ್ಲೇಖದೊಂದಿಗೆ ರವಾನಿಸಿದ.
“ಆದರೆ ಸಾರ್, ಪತ್ರಗಳಲ್ಲಿ ಇಲಿಶೀನಪ್ಪ ಎಂದೇಕೆ ಬರೆಯಲು ಕಾರಣ?”ಪಿಲ್ಟು ಪ್ರಶ್ನಿಸಿದರು.
“ನಮ್ಮ ಸರ್ಕಾರೀ ಕಛೇರಿಗಳು ಪತ್ರ ಗಳಲ್ಲಿ ಇಂದ -ಗೆ ಗುರುತಿಸುವ ಕಾರಣಕ್ಕಾಗಿ ಅದೆಷ್ಟು ನಿರ್ಲಿಪ್ತ ಹಾಗು ವಿವೇಕ ರಹಿತ ಮನೋಭಾವದವರು ಅನ್ನುವುದೂ ಇದರಿಂದ ತಿಳಿಯುತ್ತದಲ್ಲವೆ?” ಸಿದ್ಧಾಂತಿಗಳು ಮುಂದುವರೆಸಿದರು. “ ಆಗಿನಿಂದ ಮುಂದಿನ ಕೆಲವು ತಲೆಮಾರುಗಳವರೆಗೆ ಈ ಶೀನಪ್ಪ ಅಲ್ಲಿಯ ಹಾಗು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಲಿಶೀನಪ್ಪಎಂದೇ ಪ್ರಸಿದ್ಧಿಯಾಗಿದ್ದರು. ಅವರಿದ್ದ ಮನೆ ರಸ್ತೆ ಇಲಿ ಶೀನಪ್ಪ ರಸ್ತೆ ಅಂತಲೇ ಗುರುತಿಸುವದಿತ್ತು!
“ ಇದೀಗ “ ಮುಂದುವರೆಸಿದರು ಸಿದ್ಧಾಂತಿಗಳು “ನಮ್ಮ ಶೀನಪ್ಪ ನಿಜವಾಗಿಯೂ ಕೃದ್ಧನಾಗಿದ್ದ. ನಷ್ಟಗೊಂಡ ಹಲವರೊಡನೆ ತಹ್ಸೀಲ್ದಾರ ಕಛೇರಿಗೇ ಪ್ರಯಾಣಿಸಿ ಅಲ್ಲಿಯ ಗ್ರಾಮ ಪಂಚಾಯತಿ ಸದ್ಯಸ್ಯರ ಮುಂದೆ ಪ್ರತಿಯೊಬ್ಬರ ಅಹವಾಲನ್ನು ಬರೆಸಿ, ಇವನೂ ಪ್ರಮಾಣಿಸಿದ ಸಹಿಯೊಡನೆ ರೇಂಜ್ ಆಫೀಸಿಗೂ ಸೇರಿ ಪತ್ರ ಕೊಟ್ಟು ಬಂದ. ಮತ್ತೊಂದು ಪತ್ರ ಇವರುಗಳು ಊರು ಸೇರುತ್ತಿದ್ದಂತೆ, ಪ್ರಥಮತ: ಮೇಲಿನ ಜಿಲ್ಲಾ ಆಡಳಿತ ಅಧಿಕಾರಿಯಿಂದ ಬಂತು.– ನಂ ಉ. ಜಿಲ್ಲಾ -ಅಮಲ್ದಾರ್ -ಇಲಿ-ಶೀನಪ್ಪ ನಂ-೧೩೪೫/ತಾ/-ಗೆ- ನಿಮ್ಮ ಗ್ರಾಮದವರ ಅಹವಾಲು ಕೆಳಗಿನ ಕಛೇರಿಯಿಂದ ಈ ಕಛೇರಿಗೆ ತಲುಪಿದ್ದು, ಇದೀಗ ‘ಅತಿ ಮುಖ್ಯ’ ವಿಷಯವಾಗಿ ನಿರ್ಧರಿಸಿದಲಾಗಿದೆ ಹಾಗು ಸರ್ಕಾರದ ತುರ್ತು ಅವಗಾಹನೆಯೆಲ್ಲಿದೆ. ಸೂಕ್ತ ತೀರ್ಮಾನ ಕೈಕೊಳ್ಳುವವರೆಗೆ, ನಿಮ್ಮ ಸಮಸ್ಯೆಗಳನ್ನು ಎಂದಿನಂತೆ ಕೆಳಗಿನ ಕಛೇರಿಗಳಲ್ಲಿಯೇ ನೋಂದಾಯಿಸಬೇಕಾದದ್ದು,-ಇಂತು–ಸಹಿ.
ಅಲ್ಲಿಯ ಅಧಿಕಾರಿಗಳ ಈ ಬೇಜವಬ್ದಾರೀ ಪತ್ರವ್ಯವಹಾರದಿಂದ ಬೇಸತ್ತ ಊರವರು ಇದೀಗ ಶೀನಪ್ಪ ಹನ್ನೆರಡನೆಯ ಪತ್ರ ಬರೆಯಲು ಹೋಗುವ ಗೋಜಿಗೆ ತಡೆ ಹಾಕಿ, ವಿಧಿಮಾಡಿಸಿದಂತಾಗಲಿ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಆದರೆ ‘ಗಟ್ಟಿ ಪಿಂಡ’ದವನೆಂದು ಹೆಸರಾದ ನಮ್ಮ ಶೀನಪ್ಪ ಛಲಬಿಡದ ತ್ರಿವಿಕ್ರಮನಂತೆ, ಮುಖ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿ ಇವರ ನೆರೆಯ ಊರಿನವರೇ ಆಗಿದ್ದರೆಂದು ತಿಳಿದು, ನೇರ ಈ ಅಧಿಕಾರಿಗೆ ಎಲ್ಲ ಪತ್ರ ವ್ಯವಹಾರಗಳ ಸಾರಾಂಶವನ್ನು ಬರೆದು ಜಿಲ್ಲ ಕಚೇರಿ, ಅರಣ್ಯ ಅಧಿಕಾರಿ,ಪೊಲೀಸ್ ಅಧಿಕಾರಿಗಳಿಗೂ, ಮು.ಮುಂತ್ರಿ ಹೀಗೆ ಎಲ್ಲರಿಗೂ ಕಳಿಸಿದ. ಆ ಪತ್ರ ಹೇಗೊ ಮು. ಮಂ. ನೋಡುವಂತಾಗಿ, ಎರಡೆ ದಿನಗಳಲ್ಲಿ ಅಮಲ್ದಾರ ಕಛೇರಿ ಹಾಗು ಜಿಲ್ಲಾ ಆಡಳಿತ ಕಛೇರಿ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಡನೆ ಈ ಊರಿಗೆ ಬಂದಿಳಿದಿದ್ದಲ್ಲದೆ, ಪ್ರತ್ಯೇಕ, ಪ್ರತ್ಯೇಕವಾಗಿ ನೊಂದವರೆಲ್ಲರ ಮತ್ತು ಈ ಶೀನಪ್ಪ ಹಾಗು ಪಟೇಲನ ಸಾಕ್ಷ್ಯವನ್ನ ಪಡೆದು ಕಾರ್ಯಶೀಲರಾಗಿ ಕಡೆಗೂ, ಈ ಎಲ್ಲ ತೊಂದರೆಗಳ ಕಾರಣವಾದ ಮುದಿ ಚಿರತೆಯರಡನ್ನು ಹಿಡಿದು ಕೊನೆಗೂ ನೆಮ್ಮದಿಯನ್ನು ತಂದರು” ಎಂದು ಸಿದ್ಧಾಂತಿಗಳು ತಮ್ಮಕೈಗಡಿಯಾರ ನೋಡಿ, ಎದ್ದು ಹೊರಡುವ ಸೂಚನೆ ಪ್ರದರ್ಶಿಸುತ್ತಿದ್ದಂತೆ, ಒಬ್ಬೊಬ್ಬರೇ ತಮ್ಮ ಮೇಜು, ಗ್ಲಾಸುಗಳನ್ನು ಬಿಟ್ಟು ಹೊರಡಲನುವಾದರು ತಮ್ಮ ತಮ್ಮ ಮನೆಗಳಿಗೆ, ಚಂದ್ರಮನು ದಿಗಂತದಲ್ಲಿ ದಿವ್ಯವಾಗಿ ಹೊಳೆಯುತ್ತಿದ್ದಂತೆ !
———————————————————————————————————————————————-
Comments