NAGUVIGONDU AAYAAMA…. BEKE?
- haparna
- Jan 12, 2020
- 5 min read
NAGUVIGONDU AAYAAMA BEKE? ಲೇಖಕ: : ಎಚ್. ಆರ್. ಹನುಮಂತ ರಾವ್. 8095658334. ವಿ. ಸೂ.: *ಪ್ರೊ. ಅ. ರಾ. ಮಿತ್ರ ಅವರು ಸಾಕಷ್ಟು ದಿನಗಳ ಹಿಂದೆಯೇ ಹಾಸ್ಯ ಹಾಗು ನಗೆ ಬರಹಗಳ ಬಗ್ಗೆ ಅತ್ಯುಪಯುಕ್ತ ಹಾಗೂ ಸಮಯೋಚಿತ ಯೋಚನಾ ಲಹರಿಯನ್ನ ತಮ್ಮ ಅತ್ಯಮೂಲ್ಯ ವಿಚಾರ ಭಂಡಾರದಿಂದ ಹೊರಬಿಟ್ಟಿದ್ದುಂಟು. ಹಾಸ್ಯಕ್ಕೂ ಒಂದು ಪ್ರಾಕಾರವುಂಟೆ, ಇದ್ದರೆ ಅದರ ರೂಪರೇಷೆಗಳೇನು, ಇತಿಮಿತಿಗಳಿವೆಯೆ? ಈ ಪ್ರಾಕಾರಕ್ಕೇ ಒಂದು ವಿಶಿಷ್ಠ ಸ್ಥಾನ ಇತರ-ಕಲೆ, ವಾಣಿಜ್ಯ, ನಾಟಕ, ಸಂಗೀತ, ನೃತ್ಯ, ಕಾದಂಬರಿ, ವಿಜ್ನಾನ, ಶಾಸ್ತ್ರ ಗ್ರಂಥಗಳು-ಇತ್ಯಾದಿ ವಿಷಯಗಳಿಗೆ ಅವುಗಳದೇ ನಿರ್ದಿಷ್ಠ ನೆಲೆ, ಚೌಕಟ್ಟು, ಹೆಜ್ಜೆಗುರುತುಗಳು, ಪ್ರತಿಭಾ ಪುರಸ್ಕಾರ, ಗೌರವಾದರಗಳಿರುವಂತೆ ಹಾಸ್ಯಕ್ಕೇಕಿಲ್ಲ? ಅಲ್ಲದೆ ಹಾಸ್ಯದ ಬಗ್ಗೆ ಅಭಿರುಚಿ ಹಿಂದೆ ಯಾವ ಮಟ್ಟದಲ್ಲಿತ್ತು, ಇಂದಿನ ಪರಿಸ್ಥಿತಿ ಹೇಗೆ, ಏನು ಎಂಬುದರ ಬಗ್ಗೆ ವಿಚಾರವಾದಿಗಳು ಏಕೆ ಯಾವ ಪ್ರಯತ್ನವನ್ನೂ ಮಾಡಿದ ಹಾಗೆ ತೋರುವುದಿಲ್ಲವಲ್ಲ? ಕಾರಣವೇನು? -ಎನ್ನುವ ಜಿಜ್ನಾಸೆಯನ್ನ ಓದುಗರ ಮುಂದಿಟ್ಟಿದ್ದಾರೆ. ಈ ನನ್ನ ಬರಹದಲ್ಲಿ ಅವೆಲ್ಲದರ ಬಗ್ಗೆ ಚಿಂತಿಸಲು ಹೊರಟಿದ್ದಲ್ಲ, ಆದರೆ, ಹಾಸ್ಯಕ್ಕೆ ನಾವು-ಕನ್ನಡಿಗರು-ಸಾಮಾಜಿಕವಾಗಿ ಕೊಟ್ಟಿರುವ ವಿಶಿಷ್ಠ ಸ್ಥಾನವಾದರೂ ಎಂತಹುದು ಎನ್ನುವದರ ಬಗ್ಗೆ ಇದು ಲಘು ಹರಟೆಯಷ್ಟೆ ಹೊರತು ಚರ್ಚೆಗೆ ವೇದಿಕೆಯನ್ನಾಗಿ ಮಾಡುವ ಉದ್ದೇಶವಿಲ್ಲ. (*ಪ್ರಬಂಧ ಸಂಕಲನ-ಆರತಕ್ಷತೆ-“ಹಾಸ್ಯ-ಒಂದು ಚಿಂತನೆ”).
ಏನಿದರ ಗುಟ್ಟು, ಈ ಕೊರೆತಗಳನು ಬರೆಬರೆದನಿವ ಪ್ರಕಾಶಕನ ಕೈಲಿಟ್ಟು ಅವನದರ ಕಂಡೋ ಕಾಣದೆಯೋ, ಟನ್ನುಟನ್ನಗಟ್ಟಲೆ ಪ್ರಿಂಟಿಸಿಯೆ ಬಿಟ್ಟ, ಓದುಗನ ತಲೆ ತುಂಬ ಹುಳಗಳ ಬಿಟ್ಟ, *ಸೆರಿಬೆಲ್ಲಮನ ಪೂರ ಕೆಡಸಿಟ್ಟು ಸುಮ್ಮಸುಮ್ಮಗೆಯೇ ಓದುಗನ ಸುಖಶಾಂತಿಗೆನಡವಟ್ಟು ನಗುನಗುತಲೇ ತಂದಿಟ್ಟ— . —-ಓ ಗುರುಗಾಂಪ, ಈ ಬರಹಗಳಲಿ ಪುರುಷಾರ್ಥವನೇನ ಕಂಡನಿವ ಕಡುಪಾಪಿ. (**ಅಂಗ್ಲ ಭಾಷೆಯಲ್ಲಿ ‘ಸೆರಿಬೆಲ್ಲಮ್’-ಮೆದುಳು) ಅವರು : ಅಲ್ಲರೀ ನೀವು ಹೀಗೆ ಪುಟಗಟ್ಟಲೆ ಕೊರೆದು, ಓದುಗನ ಮಂಡೆಬಿಸಿ ಮಾಡುವದರಲ್ಲೇನು ಸುಖವ ಕಂಡಿರಿ? ಈ ಲೋಕದಲಿಂದು ಅವನ ಬದುಕೇ ಬಲುಹೀನ, ಶೂನ್ಯವಾಗಿರುವಾಗ. ಇವರು : ಬಡವರಿಗೆ ಮತ್ತೆ ರೇಷನ್ ಯುಗ-ಸ್ವಾತಂತ್ರ್ಯ ಕಾಲದಿಂದಲೂ-ಮಧ್ಯಮ ಜೀವಿಗಳಿಗೆ ಜೀವನವೇ ತ್ರಾಸ. ಇವರಿಗೆಲ್ಲ ಮಂಡೆಯೇ ಇಲವೆಂದು ನಿಮ್ಮ ನಂಬಿಕೆಯೋ? ಇದ್ದರೂ ಬರೀ ಸೋರೆ ಬುರುಡೆಯೆನಿಸಿತೋ ನಿಮಗೆ? ಅವರು : ಕೆಟ್ಟು ನಾರುವ ರಾಜಕೀಯದ ಹೊಲಸು, ಎಲ್ಲೆಲ್ಲೂ ಪುಂಡರ, ಭಂಡರ ಹಾವಳಿ, ದುರ್ನಾತ ಬೀರುವ ನಗರಗಳ, ದಟ್ಟಣೆಯ ಜನವಾಹನ ಸಮೂಹಗಳ ಮಧ್ಯೆ ಭಂಡಬಾಳು ಸವೆಸುವ ಖಂಡಜೀವಿಗಳ ಬದುಕೂ ಒಂದು ಬದುಕೇ? ಅಂಥಹುದರಲ್ಲಿ ಹೀಗೆ ನಿಮ್ಮ ಕೊರೆತಗಳನ್ನ ಓದಿ ಅರಗಿಸಿವುದೆಂತು? ಆನಂದ ಪಡೆವದಂತೂ ಬರೀ ಕನಸೇ. ಇವರು : ಹೀಗೆಲ್ಲ ಪೇಜುಗಟ್ಟಲೆ ಪ್ರಿಂಟಿಸಿ ಜನರ ನೆಮ್ಮದಿಗೆ ಸಂಚಕಾರ ತರುವ ಆ ನಿಮ್ಮ ಪ್ರಕಾಶಕರಿಗಾದರೂ ರವಷ್ಟು ಕರುಣೆ, ಅನುಕಂಪ ಬೇಡವೋ? ಅ : ಬೇಡವೇ ಮತ್ತೆ? ಹೋಗಲೀ, ಇದು ವಾಲ್ಮೀಕಿ, ವ್ಯಾಸರ ಕಾಲವಂತೂ ಅಲ್ಲ, ವಾಲ್ಮೀಕಿಯ ಇಪ್ಪತ್ತುನಾಲ್ಕುಸಾವಿರ, ವ್ಯಾಸರ ಲಕ್ಷಕ್ಕೂ ಮೀರಿದ ಶ್ಲೋಕಗಳಷ್ಟನ್ನ ಅರಗಿಸಿಕೊಳ್ಳುವಂಥಹ ಜನರು ಇರುವರೇ ಇಂದು? ಇ : ಆಚಾರ್ಯತ್ರ್ಯಯರೂ, ದಾಸವರೇಣ್ಯರೂ, ಅಲ್ಲಮ, ಬಾಭರ ಕಾಲವೂ ಅಲ್ಲ, ಪಂಪ, ರನ್ನ, ಜನ್ನರುಗಳ ಹಾಡು, ವಚನ, ಉಪದೇಶಗಳ ಓದಿ, ಮೋಕ್ಷಸಾಧನೆಗಾಗಿ ರಚಿಸಿದ… ಬರಹಗಾರ : ಸ್ವಲ್ಪ ನನ್ನ ಮಾತು ಕೇಳೀ… ಅ : ಅದೂ ಬೇಡರೀ, ಕುವೆಂಪು, ಬೇಂದ್ರೆ, ಅಡಿಗ, ಶಿವನಂಜಪ್ಪ ಇಲ್ಲವೇ…. ಬರಹಗಾರ : ಸ್ವಲ್ಪ ನಿಮ್ಮ ಮಾತಿಗೆ ಬ್ರೇಕ್ ಹಾಕಿ ನನ್ನ ಮಾತು ಕೇಳಿ? ಇ : ಕಾರಂತ, ಗೊಕಾಕ, ಕೃಷ್ಣರಾಯರು, ತ್ರಿವೇಣಿ, ತರಾಸು, ಕಟ್ಟೀಮನಿಯಂಥಹವರ ಕೃತಿಗಳ ಓದಿ ಸಮಾಜದ ಬಗ್ಗೆ ಬೆಳಕು ಬೀಳುವದನ್ನಾದರೂ…. ಅ : ಅಥವಾ ರಾ.ಶಿ, ಬೀಚಿ, ದೀಕ್ಷಿತ, ನಾಡಿಗೇರ, ಲಾಂಗೂಲರು, ಅ.ರಾ.ಸೇ., ಕೇಫ, ಸುನಂದಮ್ಮ, ಮಿತ್ರ, ವೈದ್ಯ, ಪಾಪ ಪಾಂಡು ಪಿತೃ(!) ಮೂರ್ತಿ, ಬೇಲೂರ ಇತ್ಯಾದಿಗಳೆಲ್ಲರ ಹಾಸ್ಯ ಬರೆಹಗಳ.. ಮೂರನೆಯವರು(ಪ್ರವೇಶಿಸಿ) : ಹಾಸ್ಯವಂತೆ, ಹಾಸ್ಯ? ಅಂದೆಂಥರೀ ಈ ಕಾಲದಾಗ, ಯಾರ್ಗಪಾ ಪುರಸತ್ತು ಇರ್ತದೆ ಓದಿ ನಗಲಿಕ್ಕ? ನಾನಂತೂ ದಿನಪತ್ರಿಕೆ ಕೂಡ ತರ್ಸೋದು ನಿಲ್ಸಿ ಎಷ್ಟೋ ವರ್ಷಗಳಾಯ್ತು. ಅಂಥದ್ರಲ್ಲಿ ನಿಮ್ಮ ಕೊರೆತಗಳ-ಕ್ಷಮಿಸಿ, ನಾನಲ್ಲ, ಕೆಲವ್ರು ಹಾಗಂದಿದ್ದರೆ ನನ್ನ ತಪ್ಪಲ್ಲ,-ಓದೋಕ್ಕೆ ಟೈಂ ಎಲ್ಲಿರ್ತದೆ? ‘ಕೊರವಂಜಿ’ಯಂಥಹವು ಇಂದು.. ಅ : ಜಾಸ್ತಿ ಮಾತಾಡಲಿಕ್ಕೂ ವೇಳೆ ಸಾಲದ, ಸೋಟೆ ಮೂತಿಯ ಹೆಂಡತಿಯ ಜೊತೆಗೆ ನಗುವುದೇ… ಬರಹಗಾರ: ಇದೀಗ ನೀವುಗಳೇ ನನ್ಗೆ ಮಾತಾಡಕ್ಕೂ ಬಿಡದೆ ಕೊರೆಯವುದ ಸರೀನಾ? ಮೂ : ನನ್ನ ಮೊಮ್ಮಗ ಎಮ್ಮೆನ್ಸಿ ಕಂಪ್ನೀಲಿ ಕೆಲ್ಸಕ್ಕೆ ಸೇರಿ ವರ್ಷವಾಗ್ತಾ ಬಂತು, ಅವ್ನ ಕೊರಗೇನಂದ್ರೆ ಮೊಬೈಲ್ನಲ್ಲಿ ಆಪ್ಸಂದೇಶಗ್ಳನ ನೋಡಕ್ಕೂ ಟೈಂಮೇ ಇಲ್ಲ ಅಂತಿರ್ತಾನೆ. ಹೆಂಡತಿ ಮಕ್ಳ ಜೊತೆ ಊಟ, ತಿಂಡಿ ಸಮಯ್ದಲ್ಲೂ ಅವ್ರುಗಳು ಮೊಬೈಲ್ನಲ್ಲೇ ಎಲ್ಲಾ ಮಾತು… ಅ : ಹ, ಹ್ಹ, ಹಾ, ಅದೇನ್ಮಹಾ, ನನ್ಮೊಮ್ಮಗಳಿಗೆ ಮೂರು ತುಂಬ್ತಾ ಇದೇ, ಈಗ್ಲೇ ಅವಳಿಗೆ ಕೈನಲ್ಲಿ ಮೊಬೈಲ ಇಲ್ದಿದ್ರೆ ರಂಪಾನೇ ಮಾಡ್ತಾಳೆ, ಊಟ, ತಿಂಡಿ ತಿನ್ನೋಕು ಬಾಯೇ ಬಿಡಲ್ಲ, ಮೂರನೆಯವರು : ಅಲ್ದೆ, ಬೀದಿನಾಗ ಕಳ್ಳೇಕಾಯ್ಮಾರೋ ಅಜ್ಜೀ, ಮನೆಕೆಲ್ಸಕ್ಕೆ ಬರೋ ಆಂಡಾಳೂ ಕೈಲೂ ಮೊಬೈಲ ಅಲಂಕರಿಸಿರ್ತದೆ. ಇ : ನಮ್ಮತ್ತೆಗೆ ಈಗ ಎಂಬತ್ತೈದು ದಾಟಿದೆ, ಆದ್ರೇನು ಸ್ವಾಮಿ, ಟೀವಿನಾಗೆ ಸೀರಿಯಲ್ನೋಡೋವಾಗ ಕರೆಂಟ್ ಹೋದ್ರೆ ಇಲೆಕ್ಟ್ರಿಕ್ ಕಂಪ್ನೀಗೆ ಶಾಪ ಹಾಕೋದುಂಟು. ಈ ವಯಸ್ನಾಗೆ ಹಳೇಕಾಲದ ಅಜ್ಜಿಗಳು ರಾಮಾಯಣ, ಭಾಗವತ, ಪುರಾಣ ಅಂತ ದೇವಸ್ಥಾನದಲ್ಲಿ ಹರಿಕಥೆ ಕೇಳ್ತಿರೋವ್ರು, ಈಗ್ನವ್ರು ಮಾಡ್ರನೈಸಾಗಿದಾರೆ. ಸೀರಿಯಲ್ನಲ್ಬರೋ ಅತ್ತೆ, ಸೊಸೆ ಜಗಳಾನ ತಪ್ಪದೆ ಕನ್ನಡಕ ಹಾಕ್ಕಂಡ್ ಪಿಳಪಿಳೀ ನೋಡ್ತಾರೆ. ಮನಸ್ಸನಲ್ಲೇ ಸೊಸೆಗೆ ಹಿಡಿಹಿಡಿ ಶಾಪ ಹಾಕ್ತಾ ಕೊರಗ್ತಾರೆ. ಅ : ಸೊಸೆ ಬಗ್ಗೆ ಆಗ್ಲೂ ಅದೇ, ಈಗ್ಲೂ ಅದೇ ಬಿಡಿ ಅತ್ಲಾಗೆ. ಏನಂತೀರಾ? ಇ : ಹಾಗಾಗೋದಕ್ಕೆ ಅವಕಾಶವೇ ಇಲ್ಲ ಇಂದು. ಇಬ್ರೂ ಒಂದೇ ಕಡೇ ಇರೋದಪರೂಪಾನೇ. ಮೊಬೈಲ್ ಬಂದ್ಮೇಲಂತೂ.. ಮೂ : ಮುಂದೊಂದು ದಿನ ಮನೆ ನಾಯಿಗಳೂ ಕೂಡ ಬೊಗಳೋದ ಬಿಟ್ಟು ಮೊಬೈನಲ್ಲೇ ಬೀದಿನಾಯಿಗಳ ಜೊತೆ ಲವ್ಮಾಡೋದ್ನ ಕಲೀತಾವೋ, ಏನೋ? ಅ : ಹ್ಹ, ಹ್ಹಾ, ಕ್ಷಮಿಸಿ, ಮಾತು ಎಲ್ಲೆಂದೆಲ್ಲೀಗೋ ಹೋಗ್ತಿದೆ. ಬರಹಗಾರನ ಕೊರೆತವೋ, ವಾಚಕನ ತಲೆಕೆರತವೋ. ನಮಗೆ ಯಾಕಾದ್ರೂ ಬೇಕ್ರಿ? ಅದೂ ಮೋದಿ,ಷಾ ತಂದಿರೋ ಸಿಎಎ ವಿಷಯದಾಗ ಜಾತಿ ಜಾತಿ ಅಂತ ಒಬ್ಬರಿಗೊಬ್ರು ಕಿತ್ತಾಡೋ ಪರಿಸ್ಥಿತೀಲೀ? ಮಾತ್ಗೆ ಹೇಳ್ತೀನಿ, ಬಂಗಾರದ್ಸರ ಮಾಡ್ಸಕ್ಕೆ ನಿನ್ನೆ ನಮ್ಮವ್ರು ಚಿನಿವಾರ್ನ ನೋಡಕ್ಕೆ.. ಮೂ. : ಅರ್ಥವಾಯ್ತು ಬಿಡಿ ಯಾರಂತ, ಅದೇ-ಹೆಂಡತೀ, ನನ್ಪ್ರಾಣ ನೀ ಯಾಕ ಹಿಂಡುತೀ-ಅಂತಾರಲ್ಲ ಆ ಬಗ್ಗೆ ತಾನೇ? ಎಲ್ಲರ್ಗೂ ಗೊತ್ತಿರದೇನೆಯಾ, ಮದ್ವೆಯಾದವ್ರ ಬಾಳೇ ಅದೆಲ್ಲ, ಮುಂದಿನ ಸಾರಿ ಡೈಮಂಡ್ ನಕ್ಲೇಸ್ಗೂ ಡಿಮಾಂಡ? ಇ : ನಿಮ್ಮೀ ವಯಸ್ಸಲ್ಲಿ ಹೆಂಡ್ತೀಗೆ ಬಂಗಾರದ ಸರ ಅಂದ್ರೇ ನಿಮ್ಮ ಪೈಕಿ ಯರ್ದಾದ್ರೂ ಆಸ್ತಿ ಆಕೆಗೆ ಗಿಫ್ಟ? ಮಾವ್ನ ಕಡೆದೋ, ಹೇಗೋ… ಬರಹಗಾರ: ಬರಹಕ್ಕೂ ಬಂಗಾರಕ್ಕೂ ಯಾತದ್ರೀ ಸಂಬಂಧ? ಈ ದಿನಾಗಳಲ್ಲಿ ದಿಗಂತಕ್ಕೇ ಹೋಗಿರೋ ರೇಟು? ನನ್ಮಾತ್ಗೆ ಸ್ವಲ್ಪ ಅವ್ಕಾಶ ಕೊಡಿ, ಅದಬಿಟ್ಟು ನಮ್ರಾಜ್ಕಾರ್ಣೀಗಳು ಪಾರ್ಟೀ ಇಂದ ಪಾರ್ಟೀಗೆ ಕೋತಿಗಳು ರೆಂಬೆಯಿಂದ ರೆಂಬೆಗೆ ಹಾರ್ತಾವಲ್ಲ ಆ ತರಾ ನೀವುಗಳೂ… ಮೂ: ಹಾಗಂದ್ರ? ನಿಜ, ನಿಜ, ಮಾವಿನ್ಮರಕ್ಕೆ ಪ್ರದಕ್ಷಿಣೆ ಹಾಕಿದ್ರೆ ಮಾವಿನಕಾಯಿ ಉದರುತ್ಯೇ? ಗುರಿ ಇಟ್ಟು ಕಲ್ಲೆಸದ್ರೆ, ಆಗ ಫಲ ಸಿಗುತ್ತೆ, ಅದಕ್ಕೇರೀ ಈ ಬರೆತಗಳಗೆ ಕೊರೆತ ಅಂತ ಕರೆದಿದ್ದು? ಅ : ಪುಸ್ತಕದ ಕೊರೆತಕ್ಕಿಂತ ನಮ್ರಾಜ್ಕಾರ್ಣೀಗಳು ಒಬ್ಬರ್ನೊಬ್ರ ಬೈಯೋದ್ರಲ್ಲೇ ಮಜಾ ತಗೋಬೋದು, ಅದೇನು ಭಾಷೆ, ಅದೇನು ವ್ಯಾಕರಣ ಶುದ್ಧಿ, ಅವರ ಮಾತಿನ ಜಾಡು ಎಲ್ಲಿಂದೆಲ್ಲಿಗೇ, ಆ ಭಾಷಾ ಸೌಂದರ್ಯ.. ಸಂಸ್ಕøತ ಪಂಡಿತ್ರೂ ತಲೆ ತಗ್ಗಿಸ್ಬೇಕು ಅವ್ರ ಛಂದಸ್ಸು, ಇವ್ರ ಮೆಟಫರ್, ಆಕ್ಸಿಮೊರಾನ್ ರಚ್ನೆಗಳ… ಮೂ. : ನೀವು ಇನ್ನ ಛಂದಸ್ಸಿನ ಬಗ್ಗೆ ಕೋರೀಬ್ಯಾಡ್ರಪಾ, ಬಿಸಿ ತಲೇನಾಗ ಮಂಡ್ರಕಪ್ಪೆ ಬಿಟ್ಕಂಡ್ಗಾಯ್ತದೆ. ವಿಷ್ಯಕ್ಕೆ ಬನ್ನಿ, ಹೇಳೀಪ್ಪ ನಿಮ್ಹೆಂಡ್ತೀಗೆ ತಾನೆ ನೀವು ಬಂಗಾರದ ಸರಕೊಡಿಸಬೇಕಂತ ಹೇಳ್ತಿದ್ರಿ? ಅ. ನೋ, ನೋ, ಹಾಗಲ್ಲ ನಾ ಹೇಳಿದ್ದು, ಮೂ : ಮತ್ಯಾರಿಗಾದ್ರೂ,, ಓಹೋ, ಅರ್ಥವಾಯ್ತು. ಈ ವಯಸ್ನಲ್ಲಿ ನೀವು, ಅಬಬಬಬ್ಬ, ಬಲೇ ಘಾಟೀ ರೀ, ವಯಸ್ಸಾದ್ರೂ ಚಪಲ ಬಿಟ್ಟಿಲ್ಲಾಂತ ಕಾಣ್ಸತ್ತೆ…ಯಾರಪ್ಪ ಅಂಥವ್ಳು? ಅ : ಹಾಗಲ್ಲರೀ, ದೂರದ ಟಿಂಬಕ್ಟೂನಲ್ಲಿರೋ ನಮ್ಮಗಳಿಗೆ ಮಾಡ್ಸಕೋಬೇಕೂಂತ. ಇಲ್ಲಿ ರೇಟೇನು ಅಂತ್ಕೇಳ್ಲಿಕ್ಕಷ್ಟೇಯಾ. ನಾನು ನನ್ನ ಶ್ರೀಮತಿಗಾಗಿ….ಬಿಡಿ ದೂರದ ಮಾತು. ಆ ಶೋಕಿ ನನಗಿಲ್ಲ ಮೂ : ಅಲ್ವೆ ಮತ್ತೆ, ಈ ವಯಸ್ನಲ್ಲಿ ಹೆಂಡ್ತಿಮೇಲೆ ಬಂಗಾರ ಹಾಕೋದ್, ಹ್ಹ, ಹ್ಹ ಹಾ, ಹಾ.. ಇ : ಬಂಗಾರದ ರೇಟು ಕೇಳಿ ಸ್ವಲ್ಪ ಹೊತ್ತು ತಲೇನೇ ಗಿರ್ ಅಂತೆ ಅವ್ಳಿಗೆ. ಮೂ : ನಿಜಾ, ಡಾಲರ್ನ ರೇಟು ಇರಾಕಿರಾನ್ ಗಡಿ ದಾಟಿದೆ, ನಮ್ಕಾಲ್ದಲ್ಲಿ ಸವರನ್ಗೆ ಐನೂರೋ ಏನೋ ಇದ್ದಂಗ್ಯಾಪ್ಕ. ಬರಹಗಾರ : ಕೊಂಕ್ಣ ಸುತ್ತಿ ಇನ್ನೆಲ್ಲೋ ಹೋಗ್ಬಾರ್ದ ಜಾಗಕ್ಕೆ ಹೋದಂತಾಯ್ತು, ನಿಮ್ಮ ಭಾಷೆ, ನಿಮ್ಮಾತು ಎಲ್ಲಿಂದೆಲ್ಲಿಗೇ… ಅ : ಅಲ್ಲೇ ಇರೋದ ಕಾಣಪ್ಪ, ದೊಡ್ಡವ್ರು ಗಾದೆ ಮಾಡಿಲ್ವ-ಊಟಕ್ಕಿಲ್ಲದುಪ್ಪಿನ್ಕಾಯಿ ಏನಾಯ್ತು? ಅದ್ರ, ರುಚಿ ಕಮ್ಮಿ ಆದೀತೇ? ಈಗ ಹೇಳಿ, ನೀವು ಯಾತಕ್ಕೆ ಬರ್ಯೋದು. ಅದ್ರಿಂದೇನ್ ಸಾಧನೆ ಮಾಡ್ಲಿಕ್ ಹತ್ತೀರಿ? ಇ: ಬರ್ಯೋದೆಷ್ಟೇನಾ ಬರೀಲಿ, ಅದು ಕಡೇಗೆ ಹೋಗೋದು ರದ್ದಿ ಪೇಪರ್ನವನ್ಗೆ. ಯಾರ್ಗೇನ್ ತ್ರಾಸ? ಆದ್ರೆ ಪ್ರಕಾಶಕನಿಗೆ ಕೊಟ್ಟು ಅವನೂ ಕಣ್ಮುಚ್ಚಿ ಪ್ರಿಂಟಿಸಿಬಿಡ್ತಾನಲ್ಲಾ ಕಡು ಪಾಪಿ, ಅವಾಗ್ಲೇ ನಮ್ಮ ಕುತ್ತಗೇಗೆ ಬರೋದು. ಮೂ : ಅದೆಂಥಾ ತಪ್ಪು ಮಾಡೀರಪ್ಪ, ಕನ್ನಡದವ್ರ ಸಮಸ್ಯೆ ಅಂದ್ರೆ ಇದೇ. ಕುತ್ಗೆಗೆ ಅಲ್ಲಾ ಬರೋದು, ತಲೇಗೆ, ಅವ್ರು ಬರೆದಿದ್ದು ನಿಮ್ತಲೇಗೇನೇವೆಯೇ.. ಅ : ಸರ್ಯಾಗ ಹೇಳಿದ್ರಿ ಬಿಡಿ, ಅದ್ರಿಂದ ಒಂದ್ಮಾತ್ನಿಜಾತು, ಓದೋ ಎಲ್ಲಾ ಕುಳಗಳ್ಗೆ ತಲೆ ಇದೆ… ಮೂ : ಒಳ್ಗೆ ಉಳಾಗಳಿದಾವೇ, ಆದ್ರಿಂದ ಕೊರತಗಳ್ನ ತಲೇಲಿ ತುಂಬ್ಕಂಡ್ರೆ ಏನಾಗ್ಬೋದ? ಇ. : ತಲೆನೋವಿನ ಗುಳಿಗೆಗಳ್ಗೆ ಡಿಮ್ಯಾಂಡ್. ಆಲ್ದೆ ತಲೆ ಇರೋದು ಪ್ರೂವ್ಡ್ ಬಿಯಾಂಡ್ ಡೌಟ್. ಕ್ಯು.ಇ.ಡಿ. ಲ್ಯಾಟಿನ್ ಭಾಷೇಲಿ…. ಬರಹಗಾರ: ನನ್ಗೂ ಸ್ವಲ್ಪ ಮಾತಾಡಕ್ಕೆ ಬಿಡ್ರಪಾ, ನಾ ಏನ ಹೇಳೋದಂದ್ರ.. ಅ : ಮತ್ತೆ ಷುರುವಾತಲ್ರೀ ಇಲ್ಲೂ ಕೊರೆತ? ಬರೆಯೋದಲ್ದೆ ಮಾತ್ನಾಗೂ? ಯಕಪ್ಪ ಹೀಗೆ ಗೋಳುಹುಯ್ಕಳ್ಳಾದ. ನಮ್ಪಾಡ್ಗೆ ನಮ್ನ ಬಿಡ್ರಲಾ, ಬರಹಗಾರ : ಹಾಗಲ್ಲ ರೀ, ಪ್ರೊಫೆಸರ್ ಮಿತ್ರ ಅವರು ಕೊರೆತದ ಬಗ್ಗೆನೇ ಒಂದು ಪ್ರಬಂಧ(*ನಾನೇಕೆ ಕೊರೆಯುತ್ತೇನೆ? ಸಂಕಲನ) ರಚಿಸಿರೋದು….ಅಲ್ಲೇನ ಹೇಳಿದಾರೋ ಗೊತ್ತಾ? ಇ : ಆ ವಿದ್ವಾಂಸರನ್ನೇಕೆ ಇಲ್ಲಿ ಎಳೆದು ತರ್ತೀರಿ ಸ್ವಾಮಿ, ಅತ್ಲಾಗೆ ಅವರನ್ನ ಬಿಡಿ, ಎಲ್ಲರೂ ಅವರ್ಹಾಗೇ ಬರೀತಾರ? ಅ : ಅವ್ರ ಜೀವನ್ದಾಗ ಎಂತೆಂತಾ ಕೊರೆತಾಗಳನ ನಿಭಾಯಸಿರ್ತಾರೋ, ಆ ಆನುಭವಗಳ್ನ ಬರ್ದು ನಿಮ್ಮನ್ನ ನಗ್ಸಿರೋದುಂಟಲ್ವ? ಮಾತ್ನಲ್ಲೂ ಕೂಡ. ಬರಹಗಾರ : ಜನರಿಗೆ ಬರಹಗಳು ಬೇಕಿದೆಯೋ ಇಲ್ವೋ ಅನ್ನೋದ್ನ ತಿಳಿದೇ ಬರೀಬೇಕನ್ನೋದಾದ್ರೆ ಹಾಸ್ಯ ಲೇಖಕರಷ್ಟು ಜನ ತಮ್ಮ ಹಡಪವನ್ನ ಸಮುದ್ರದಾಚೆಗೆ ಒಯ್ಯಿರಿ ಅಂತಾರೆ ಮಿತ್ರ ಅವ್ರು ನಗತಾ. ದಾಂಕೇಮಿ ಚಪ್ತಾರಂಡೀ ಮೀರು? ಮೂ. : ಸರ್ಯಾಗ ಹೇಳಿದ್ರು, ಅಷ್ಟಲ್ದೆ ಏನು? ಬರಹಗಾರ : ಹಂಗಂದ್ರೆ, ನೋಡಿಪ್ಪ ನೀವೆಲ್ಲ ನಗಬೇಕಂದ್ರ ಬರ್ಯೋವ್ರೆಲ್ಲಾ ಪೆನ್ನು, ಹಾಳೆ ಬಿಟ್ಟು ಸರ್ಕಸ್ ಬಫೂನಾಗಬೇಕಾ? ಅಂಥದಕ್ಕೆಲ್ಲಾ ನಮ್ರಾಜ್ಕಾರ್ಣೀಗಳೇ ಸಾಕಂತ ನೀವೇ ಹೇಳಿದ್ರಲ್ವೊ? ಹಾಸ್ಯ ಪ್ರಬಂಧ ಹೇಗಿರಬೇಕನ್ನೋದ್ನ ಎಷ್ಟೋ ಸುಪ್ರಸಿದ್ಧರು ಪ್ರಬಂಧಗಳ್ನೆ ಬರೆದಿದಾರೆ. ವಿಸೀ ಅವ್ರು ದೋಸೆ ಬಗ್ಗೆನೇ ಸಂಶೋಧನೆ ರೀತೀಲಿ ಎಂಟು ಪುಟಗಳಷ್ಟು ವಿವರಿಸಿದಾರೆ ಗೊತ್ತಾ? ಇ : ಆದ್ರಿಂದ ನೀವುಗಳೆಲ್ಲ ಸೇರಿ… ಅ : ಪೆನ್ನ ಪೇಪರ್ನ ಬೀರುನಾಗ ಭದ್ರವಾಗಿಟ್ಟು., ಮೂ : ಎಸೆಯೋದು ಬೇಡ, ನೀರು ಕಲುಷಿತವಾಗ್ಬೋದು. ಬರಹಗಾರ : ಬರದಿದ್ದೆಲ್ಲಾ ಶ್ರೆಡಿಂಗ್ ಮೆಷಿನ್ನಗೆ ತಳ್ಳಿ ಅಂತಿರೇನೋ? ಹಾಗಾದ್ರೆ ಮುಂದೆ ನಾವೆಲ್ಲಾ ರದ್ದಿ ಪೇಪರ್ನಂಗಡಿಗಳಲ್ಲಿ ಮೂಟೆ ಹೊರೋದಕ್ಕಷ್ಟೆ ಲಾಯಕಂತೀರೇನೋ? ಆಗ್ಲಾದ್ರೂ ಒಬ್ಬಿಬ್ರು ನಮ್ನ ನೋಡಿ ನಗುವರೇನೋ? ಹೋಗ್ಲಿ ಬಿಡಿ, ಆದ್ರೆ, ನಗೆಬರಹಗಳಿಗೆ ಒಂದು ಆಯಾಮ, ಅದಕ್ಕ ತಕ್ಕ ಗೌರವ, ಅದೇ ಒಂದು ಶಾಖೆಯಾಗಿ ಇತರ ಪ್ರಾಕಾರಗಳ ನಡುವೆ ನಿಲ್ಲುವ ವಿಶಿಷ್ಠ ಸ್ಥಾನಮಾನ? —–“ರೀ. ರೀ, ಅದೇನ್ ನಿದ್ದೇಲೆ ಏನೇನೋ ಒದರ್ಕಂಡಿದೀರಾ, ಎಂಟುಗಂಟೆ ಆದ್ರೂ ಏಳ್ದೆ ಇನ್ನೂ ಮಲಗಿ, ನಿದ್ದೇಲಿ ಬಾಯ್ಗೆ ಬಂದಿದ್ದು ಒದರ್ತೀರಿ, ವಯಸ್ಸಾದೂ ್ರ ಬುದ್ಧಿ ಬರೋಲ್ಲ ನಿಮ್ಮಂತವರ್ಗೆ. ಬರ್ಯೋದ ಬಿಟ್ಟು ಏನಾದ್ರೂ ಒಳ್ಳೆ ಉದ್ಯೋಗ ಹಿಡೀಬಾರ್ದ? ಎಲ್ಲಾ ನನ್ ಹಣೆ ಬರಹಾ. ————————————————–
Comments