‘ಬೀchi’ ಯವರ “ಅಂದನಾ ತಿಂಮ್ಮ” ಕವನ ಸಂಗ್ರಹದ ಬಗ್ಗೆ:.
- haparna
- Dec 22, 2015
- 9 min read
This article is an review and criticism of the great erstwhile, famous kannada humourist “RAYASAM BALLARI BHIMSENA RAO,MORE POPULAR BY HIS PEN NAME “BICHI”. This WORK “ANDANAA THIMMA” IS HIS ONLY POETICAL CONTRIBUTION INTO WORLD OF HUMOUR AND SATYRE. With not much importance given to poetical metre, rhyme,form, his poetical format more or less IS AKIN TO THAT OF DR.D.V.GUNDPPA’S ‘MANKUTHIMMANA KAGGA.THOGH THE THOUGHT PROCESSES OF DVG’S ‘MANKU THIMMA’ AND’THIMMA’ OF BICHI WIDELY DIFFERED, BOTH EXHIBIT THEIR DESIRE FOR AN SOCIETY OF MORALLY-REJUVENATED CULTURE FAR FROM STUPIDTY AND TRADITIONAL ABNORMALITIES WHICH ARE WELL AMPLIFIED IN BOTH THEIR WORKS. BICHI’S WRITING HERE IS SOMETIMES SARCASTIC, OTHER TIMES HUMOUROUS AND OR OPEN CRITICISM OF EVILS OF SOCIETY OF HIS TIMES. THIS ARTICLE IS IN RESPONSE TO ‘M/S SUNDARA PRAKASHANA’S REQUEST FOR MAKING A COMPENDIUM OF REVIEW OF ALL HIS 53 BOOKS BY DIFFERENT AUTHORS. THE COMPENDIUM UNDER THE TITLE OF “ANDANA THIMMA’WAS PUBLISHED IN A PUBLIC FUNCTION ORGANISED BY MR.GOOWRISUNDAR ON 11/12/2015 WITH ILLUSTRIOUS B.S.KESHAVA RAO IN THE CHAIR AND PRESIDED BY BICHI’S GRANDSON ULHAS RAYASAM, BELURU RAMAMURTHY, BESIDES GANGAVATI PRANESH WITH HIS GROUP PRESENTING THEIR USUAL HUMOROUS TALK. ‘ಬೀchi’ ಯವರ “ಅಂದನಾ ತಿಂಮ್ಮ” ಕವನ ಸಂಗ್ರಹದ ಬಗ್ಗೆ: (ವಿಚಾರಾತ್ಮಕ, ವಿಮರ್ಶನಾತ್ಮಕ ಲೇಖನ)—ಲೇಖಕ:ಎಚ್. ಆರ್. ಹನುಮಂತ ರಾವ್. ಕನ್ನಡದ ಅತ್ಯುತ್ತಮ ಹಾಸ್ಯ ಬರವಣಿಗೆಗಾರರಲ್ಲಿ, ಕಳೆದ ಶತಮಾನದ ಮುವತ್ತು-ನಲವತ್ತರ ದಶಕದಿಂದಲೂ ಮುಂಚೂಣಿಯಲ್ಲಿದ್ದವರೆಂದರೆ ‘ ಕನ್ನಡಕ್ಕೊಬ್ಬನೇ ಕೈ’ ಎನಿಸಿಕೊಂಡಿದ್ದ ಕೈಲಾಸಂ ಅವರು. ನಂತರದ ದಿನಗಳಲ್ಲಿ ಬೀಚಿ, ನಾಡಿಗೇರ, ದಾಶರಥಿ ದೀಕ್ಷಿತ್, ಕಸ್ತೂರಿ, ರಾಶಿ. ರಾಜರತ್ನಂ, ಕೇಫ಼, ಹಾರಾ, ರಾಮಿ, ನಾ.ಕ., ಅ.ರಾ.ಸೇ., ಶ್ರೀರಂಗ, ಗೊರೂರು, ಪಾ.ವೆಂ. ಇತ್ಯಾದಿ ಇತ್ಯಾದಿ ಮಂದಿಯಿಂದ ಹಾಸ್ಯ ಸಾಹಿತ್ಯ ವಿಪುಲವಾಗಿಯೇ ಬೆಳೆದು ಹೋಯಿತು. ಇವರದೇ ಜಾಡಿನಲ್ಲಿಂದು, ಲೆಕ್ಕವಿಲ್ಲದಷ್ಟು ದೇಶೀಯ ಹಾಗು ಅನಿವಾಸಿ ಮಂದಿ ನಮ್ಮ ಮಧ್ಯೆಯೇ ಇದ್ದು ಈ ಪ್ರಾಕಾರದ ಸಾಹಿತ್ಯವನ್ನ ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದಾರೆ. ಶತಮಾನದಷ್ಟು ಹಿಂದಯೇ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಚ್. ಸುಬ್ಬರಾವ್ ಮತ್ತು ಜೋಸೆಫ್ ರೂಬೆನ್ ಹೆಸರಿನ ಇಬ್ಬರು ಕೀಟಲೆ ಸ್ವಭಾವದ ವಿದ್ಯಾರ್ಥಿಗಳು ಬಹುಶ: ಜಗತ್ತಿನ ಪ್ರಪ್ರಥಮ ಹಾಸ್ಯ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಹೊರತಂದು ಕೀರ್ತಿಭಾಜನರಾದರು. ನಂತರ, ನಲವತ್ತೆರಡರಲ್ಲಿ ‘ಕೊರವಂಜಿ’ಯ ಪ್ರಾರಂಭಕ್ಕೆ ರಾ.ಶಿ. ಮತ್ತು ನಾ. ಕಸ್ತೂರಿ ಅಸ್ತಿಭಾರ ಹಾಕಿದವರು. ಇಂದು ‘ಕೊರವಂಜಿ’ ಇಲ್ಲದಿದ್ದರೂ, ಬದಲಾಗಿ ಅಪರಂಜಿ, ಅಲ್ಲದೆ ವಿನೋದಾ,, ನಗೆ ಮುಗುಳು, ಹಾಸ್ಯ ದರ್ಶನ ಇತ್ಯಾದಿ ಮಾಸಿಕಗಳು ಹೊರಬರುತ್ತಿದೆಯೆಂದರೆ, ಅದು ಆ ಕೀರ್ತಿ ಶೇಷರುಗಳು ಹಾಕಿಕೊಟ್ಟ ಮಾರ್ಗದರ್ಶನವೂ ಕಾರಣ. ಬೀchi ಯವರು ಕೈಲಾಸಂ, ಕಸ್ತೂರಿ, ರಾ.ಶಿ.,ಮುಂತಾದವರುಗಳ ಜೊತೆ ಜೊತೆಗೆ ಪ್ರಥಮ ಸಾಲಿನಲ್ಲಿ ನಿಲ್ಲುವ ಪ್ರಾತಃಸ್ಮರಣೀಯರು. ಕನ್ನಡ ಮಾತಾಡುವ ಜನ ಎಲ್ಲೇ ವಾಸಿಸುತ್ತಿರಲಿ, ಇವರ ಬಗ್ಗೆ ಗೊತ್ತಿಲ್ಲದವರು ಬಲು ಅಪರೂಪ. ತಮ್ಮ ಪ್ರಥಮ ಹಾಸ್ಯ ಕಾದಂಬರಿ “ದಾಸ ಕೂಟ”ದ ಮೂಲಕ ಜನತೆಗೆ ಪರಚಯಿಸಿಕೊಂಡವರು. ರಾಯಸಂ ಭೀಮಸೇನ ರಾವ್ ಇವರ ನಿಜ ನಾಮಧೇಯ. ‘ಬೀಚಿ’, ಅಥವಾ ‘ಬೀchi’ ಅವರಿಟ್ಟುಕೊಂಡ ಕಾವ್ಯ ನಾಮವಾಗಿ, ಈ ಹೆಸರಿನಿಂದಲೇ ಬಹು ಬೇಗ ಪ್ರಸಿದ್ಧಿಗೆ ಬಂದರು. ಇವರ ಬಹಳಷ್ಟು ಕೃತಿಗಳಲ್ಲಿ ‘ತಿಂಮ’ ಬೀಚಿಯವರ ಮುಖವಾಣಿಯಾಗಿ, ಅವರು ಬರೆದ ವಿಪುಲ ಹಾಸ್ಯ ಹಾಗು ವ್ಯಂಗ್ಯ ಬರಹಗಳಿಗೆ ಜನ ಮಾರುಹೋದದ್ದು ಅತಿಶಯವೇನೂ ಅಲ್ಲ. ಅಂತಹ ಶಕ್ತಿ ಅವರು ತಮ್ಮ ಬರವಣಿಗೆಯಲ್ಲಿ ರೂಪಿಸಿಕೊಂಡಿದ್ದರು. ಅಂಗ್ಲ ಸಾಹಿತ್ಯದಲ್ಲಿ ಅಪರಿಮಿತ ಒಲವಿದ್ದ ಇವರಿಗೆ, ಆ ಭಾಷೆಯ ಅತ್ಯಂತ ನವಿರಾದ, ಆದರೆ ಪುಟಪುಟಗಳಲ್ಲೂ ಹಾಸ್ಯವನ್ನುಕ್ಕಿಸುವ ಬರಹಗಳ ಕರ್ತೃವೆಂದು ಪ್ರಸಿದ್ಧಿಯಾಗಿದ್ದ ದಿ. ‘ಪಿ. ಜ಼ಿ.ವುಢೌಸ್’ ರ ‘ಜೀವ್ಸ್’ ಪಾತ್ರವನ್ನು ಸ್ವಲ್ಪ ಮಟ್ಟಿಗೆ ಇವರ ‘ತಿಂಮ’ನೂ ಹೋಲುವನೆಂಬ ಅಭಿಪ್ರಾಯ ಕೆಲವರಲ್ಲಿದೆ. ಜೀವ್ಸನಲ್ಲಿದ ಸಮೃದ್ಧಿಯಾದ ಪುಸ್ತಕ ಜ್ಞಾನ ಹಾಗು ಸಮಯ ಸ್ಪೂರ್ತಿಯ ಬುದ್ಧಿಮತ್ತೆಯು ಈ ಹೋಲಿಕೆಗೆ ಬಹುಷ: ಕಾರಣವಿರಬಹುದಷ್ಟೆ.
ಬೀಚಿ ತಮ್ಮ ಐವತ್ತೊಂದನೆಯ ಸಾಹಿತ್ಯ ಕೃಷಿಯಾಗಿ ರಚಿಸಿದ “ಅಂದನಾ ತಿಂಮ” ಅಪರೂಪದ ಕವನ ಸಂಗ್ರಹ. ವಯ್ಯಾ ಕರಣಿಗಳ ದೃಷ್ಟಿಯಲ್ಲಿ ಹೇಗೇ ಕಂಡರೂ, ಒಟ್ಟಿನಲ್ಲಿ ನವಿರಾದ ಹಾಸ್ಯ ಲೇಪನದ ಕವನಗಳ ತೆನೆ. ಅದರ ‘ಮುನ್ನೋಡಿ’ ಯಲ್ಲಿ ಅವರೇ ಹೇಳುವಂತೆ ಅವರ ಐವತ್ತೊಂದನೇ ಅಪರಾಧ! ಹಾಸ್ಯಕ್ಕೆ ಮೀಸಲಾಗಿದ್ದರೂ, ಇಲ್ಲಿ ಕವಿ ವಾಣಿ ಒಬ್ಬ ತತ್ವ ಜ್ಞಾನಿಯಂತೆ ಓದುಗರಿಗೆ ತನ್ನ ಜೀವನಾದರ್ಶಗಳನ್ನು ಮತ್ತು ಸಮಾಜದ ಓರೆ ಕೋರೆಗಳನ್ನು, ಮಾನವನ ಇತಿಮಿತಿಗಳನ್ನು ತೋರಿಸುತ್ತಾ ಮಾನವೀಯತೆಯ ಮತ್ತು ವೈಚಾರಿಕತೆಯ ಗುಣಗಳನ್ನು ಬೆಳಸಿಕೊಳ್ಳುವ ಅವಶ್ಯಕತೆಯನ್ನು ಪ್ರತಿ ಕವನದಲ್ಲೂ ಸಮರ್ಥಿಸುತ್ತಾರೆ. ಸಂಸ್ಕೃತ ಬೆರಸದ ನಾಲ್ಕನೂರ ತೊಂಬತ್ತೈದು ಚತುಷ್ಪಾದ ಪದ್ಯಗಳ ಮೂಲಕ ತಮ್ಮ ಅನಿಸಿಕೆ, ಅನುಭವ ಹಾಗು ಚಿಂತನ ಮಂಥನಗಳನ್ನ ಓದುಗರೊಡನೆ ಹಂಚಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಹುಟ್ಟಿದಾಗನಿಂದಲೇ ತಂದೆಯ ಒಡನಾಟ, ವಾತ್ಸಲ್ಯಗಳಿಂದ ವಂಚಿತನಾಗಿದ್ದಲ್ಲದೆ, ಕಿತ್ತು ತಿನ್ನುವ ಬಡತನ, ಮನೆಯಲ್ಲಿ ಮಡಿವಂತಿಕೆಯ ಅಪರಾವತಾರ, ಕಣ್ಣೆದುರಿಗೇ ಕಂಡ ಅಮಾನವೀಯ ಕೃತ್ಯಗಳು, ಕ್ರೂರ, ನಿರ್ದಯೀ, ಸಮಾಜದಲ್ಲಿ ವ್ಯಾಪಕವಾಗಿದ್ದ ಢಂಬಾಚಾರ, ಸರ್ಕಾರೀ ಜನರಲ್ಲಿ ಸೇವಾ ಮನೋಭಾವದ ಕೊರತೆ, ಅಹಂಕಾರದ, ಅನೀತಿಯುತ ಕಾರ್ಯ ಶೈಲಿ-ಇಂತಹವುಗಳೆಲ್ಲಾ ಇವರ ಸಾಹಿತ್ಯ ಕೃತಿಗಳಲ್ಲಿ ವಿಡಂಬನೆಯ ರೂಪದಲ್ಲಿ ಸ್ವಲ್ಪ ಮಟ್ಟಿಗೆ ತೀಕ್ಷ್ಣವಾಗಿಯೇ ಸಾಕಾರಗೊಂಡಿವೆ. ಸಮಾಜ ಪರಿವರ್ತನೆಯನ್ನ ಉತ್ತಮ ಹಾಗು ಯೋಗ್ಯ ದಿಕ್ಕಿಗೆ ಕೊಂಡಯ್ಯುವ ಇವರ ಅಭಿಲಾಷೆ, ಅಭಿಲಾಷೆಯಾಗಿಯೇ ಇಂದಿಗೂ ಉಳಿದು ಹೋಗಿದೆಯೆಂಬ ಮಾತು ಅತ್ಯಂತ ಶೋಚನೀಯವೆನಿಸಿದರೂ, ಅದು ಕಟು ವಾಸ್ತವದ ಸತ್ಯಸಂಗತಿ. ಅದರೂ ಎಲ್ಲಿಯೂ ಯಾರನ್ನೂ ಅನುಕರಿಸದೇ, ಯಾರಿಂದಲೂ ಅನುಕರಿಸಲಾಗದ ತನ್ನದೇ ಸ್ವಂತ, ವಿಶಿಷ್ಠ ಶೈಲಿಯಲ್ಲಿ ಅನುಭವದ ಮತ್ತು ಮೌಲ್ಯಾಧಾರಿತ ನುಡಿಗಳಿಂದ, ಅಲ್ಲಲ್ಲಿ ಹರಿತವಾದ ಮೊನಚು ಮಾತುಗಳಿಂದ, ತತ್ವಜ್ಞಾನಿಯ ಹಾಗೆ, ದ್ರಷ್ಟಾರರ ಹಾಗೆ, ಸರ್ವಜ್ಞನ ಅನುಭವಾಮೃತದ ಪದಗಳ ರೀತಿಯಂತೋ, ಅಲ್ಲಲ್ಲಿ ಡಿವಿಜಿಯ ‘ಮಂಕುತಿಮ್ಮನ’ ಹಿತ ವಚನಗಳ ಧಾಟಿಯಲ್ಲೋ ನುಡಿವ ‘ತಿಂಮ’ ಇಂದಿಗೂ ನಮ್ಮ ನಡುವೆಯೇ ಇರುವನೇನೋ ಎಂಬ ಭಾವನೆ ಮೂಡಿದರೆ ಅದು ‘ಬೀchi’ ಯವರ ಬರಹಗಳ ಪ್ರಭಾವೀ ಶಕ್ತಿಯನ್ನು ಎತ್ತಿ ತೋರಿಸುತ್ತದೆಯಷ್ಟೆ. ‘ಚಾರ್ಲೆಸ್ ಡಿಕೆನ್ಸ್’ ನ ಹಲವು ಕಾದಂಬರಿಗಳಲ್ಲಿ ಹದಿನೆಂಟನೆಯ ಶತಮಾನದಲ್ಲಿ ಮಕ್ಕಳನ್ನು ಹೇಗೆ ಶೋಷಿಸುತ್ತಿದ್ದರೆಂಬುದನ್ನ ಚಿತ್ರಿಸಿರುವ ಹಾಗೆ ನಮ್ಮಲ್ಲೇ ಹೇಗೆ ಇಂದಿಗೂ ಸಮಾಜ ಘಾತುಕರಿಂದ ಹೆಣ್ಣು ಶೋಷಿತಳಾಗುತ್ತಿದ್ದಾಳೆಂಬುದನ್ನ ಇವರು ತಮ್ಮ ಬರಹದಲ್ಲಿ ವರ್ಣಿಸುವಾಗ ನಮ್ಮಲ್ಲಿ ಸುಧಾರಣೆಯೇ ಇಲ್ಲವೋ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಯಾವ ರೂಪದಲ್ಲೂ ಢಂಬಾಚಾರವನ್ನ, ಮೂಢ ನಂಬಿಕೆಗಳನ್ನ ಸಹಿಸದ ವೈಚಾರಿಕನಾಗಿ ದೇವರು, ಸ್ವಾಮಿ, ಸಂನ್ಯಾಸಿ, ಜಂಗಮ ಪುರೋಹಿತ ಶಾಹಿಯನ್ನು ನೇರವಾಗಿಯೇ ಖಂಡಿಸುತ್ತಾರೆ. ತಾವು ಕಂಡ ಕಟು ಸತ್ಯವನ್ನ ಯಾರ ಹಂಗಿಗೂ ಕಟ್ಟುಬೀಳದ ಎದೆಗಾರಿಕೆಯನ್ನು ಪ್ರದರ್ಶಿಸುತ್ತಾರೆ.
ದೇವರುಗಳ ಬಗ್ಗೆ ಇವರ ಮನೋಭಾವವನ್ನ ಮೊಟ್ಟ ಮೊದಲಿಗೇ ಹೇಳಿ ಬಿಡುತ್ತಾರೆ ‘ಸಾವುಕಾರರ ಮಕ್ಕಳಲಿ ಸಂಪನ್ನರೇ ಕಡಿಮೆ/ ಇವನಂತು ದೇವನ ಮಗ ಗಣಗಳ ಪತಿ// ಲವ್ ಕಿಕವ ನ ಪೇಳ್ವೆ ನಿನಗೇನೋ ನಷ್ಟ/ ಅವನಿಗೊಂದು ಸಲಾಮು ಎಸೆಯೋ ತಿಂಮ//. ಗಣಪತಿಗಷ್ಟೇ ಗೌರವ! ಶಿವ ಸ್ತುತಿಯು ಬೇಕಾದರೂ ಏಕೆ? ‘ನಿನ್ನ ಮಗನ ಕಂಡೆ ಜೋಡಿ ಹೆಂಡಿರ ಕಂಡೆ /ನನಗೀಗ ಅನುಮಾನ ನೀನುರುವೆ ಇಲ್ಲವೋ// ನೀನಿದ್ದರೆನಗೇನು, ಇಲ್ಲದಿದ್ದರೇನು?/ನನ ದಾರಿ ನನಗಿದೆ ಹೇಳಿಬಿಡು ತಿಂಮ//. ಗೊತ್ತಾಯಿತಲ್ಲವೇ ದೇವರು ಇವರ ದೃಷ್ಟಿಯಲ್ಲಿ ಬರೀ ಕಲ್ಲು ವಿಗ್ರಹವಷ್ಟೆ. ಈ ಮಾತಿಗೆ ಹೊರತಾಗಿ ಡಿವಿಜಿ ಯವರ ಮಂಕು ತಿಮ್ಮನ ದೃಷ್ಟಿ “ಶ್ರೀ ವಿಷ್ಣುರೂಪ ವಿಶ್ವಾದಿಮೂಲ ಮಾಯಾಲೋಲ/ದೇವ ಸರ್ವೇಶ ಪರಬೊಮ್ಮನೆಂದು ಜನಂ//ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ/ ಆ ವಿಚಿತ್ರಕೆ ನಮಿಸೊ -ಮಂಕುತಿಮ್ಮ. ಇಷ್ಟಾದರೂ ಇವರಿಬ್ಬರಲ್ಲೂ ಬಹಳಷ್ಟು ಸಾಮ್ಯಗಳಿವೆ. ಜಗತ್ತನ್ನು ನೋಡುವ ದೃಷ್ಟಿಯಲ್ಲಿ ಬೇರೆ ಬೇರೆ ರೀತಿಯ ಮನೋಸ್ಥಿತಿಯವರಾದರೂ , ಜೀವನಾನುಭವಗಳ ಬಗ್ಗೆ ಇಬ್ಬರೂ ಏಕ ರೀತಿಯ ಭಾವವನ್ನ ಶ್ರುತ ಪಡಿಸುತ್ತಾರೆ ಅಲ್ಲಲ್ಲಿ! ಬೀchi ಯ ತಿಂಮನಿಗೆ ಕಗ್ಗದ ಮಂಕುತಿಮ್ಮನೆ ಗುರು! ಸುಲಭವಾಗಿ ಯಾರನ್ನೂ ಒಪ್ಪುವವನಲ್ಲ ಈ ತಿಂಮ. ಇವನು ನಂಬಿದ್ದೆಂದರೆ ಆ ಮಂಕುತಿಮ್ಮನನ್ನೇ ‘ ಕಾಲುಶತಮಾನದ ಹಿಂದೆಯೇ ಕಂಡಿಹೆವು, ಕೋಲು ಹಿಡಿದಿಹನವನು ಜ್ಞಾನದಂಡ/ ಎಲ್ಲವನು ಬಲ್ಲ, ಬಲ್ಲವರ ಗುರು, ಗುಂಡಪ್ಪ, ಬಲದೇವ ಮಂಕುತಿಮ್ಮನಿಗೆ ನಮಿಸೋ ತಿಂಮ/ .ಈ ಗುಂಡಪ್ಪ ಈತನ ಕಣ್ಣಿಗೆ ದೇವರು ಒಂದು ರೀತಿಯಲ್ಲಿ. ದೇವರ ಬಗ್ಗೆ ಇಬ್ಬರ ಭಾವನೆ ಬೇರೆ ಬೇರೆ ರೀತಿಯದಾದರೂ ನಮ್ಮ ತಿಂಮನಿಗೆ ಕರೆದು ಬರೆಸುವ ಕಾಣದ ಗುರು ಅವನು/ ಕಾರಕೂನನು ನಾನು ಅವನಿಗೆ//(ದೇವರಿಗೆ)’ ಎನ್ನುತ್ತಾ ಗುರುವಂದನೆ ಸಲ್ಲಿಸುತ್ತಾರೆ. ಸಾಮಾನ್ಯರೊಳಗೊಬ್ಬ ಅತಿ ಸಾಮಾನ್ಯನಾಗಿ ಸಮಾಜದಲ್ಲಿ ಕಾಣಬರುವ ಲೋಪದೋಷಗಳ ಬಗ್ಗೆ ತನ್ನದೇ ವಿಶೇಷ ಗ್ರಹಿಕೆಯ ಸಾಮರ್ಥ್ಯದಿಂದ ಸಮಾಜವನ್ನು ಪ್ರತಿಬಿಂಬಿಸುವ ವಿಚಾರವಂತನಾಗಿ ಇಲ್ಲಿ ‘ತಿಂಮ’ ಚಿತ್ರಿಸಲ್ಪಟ್ಟಿದ್ದಾನೆ. ‘ತಿಂಮ’ನು ಇಲ್ಲಿ ಕೇವಲ ಬೀಚಿಯವರ ಮುಖವಾಣಿಯಷ್ಟೆ. ಒಂದೊಂದೇ ಚತುಷ್ಪದಿಯಲ್ಲೂ ನಮ್ಮ ಸಮಾಜದ ಲಕ್ಷಣಗಳನ್ನು ವೈಚಾರಿಕತೆಯ ಸಾಣೆ ಕಲ್ಲಿಗೆ ಒರೆ ಹಚ್ಚಿ ಸತ್ಯವನ್ನ ಹೊರಗೆಡಹುವ ಪ್ರಯತ್ನ ಇಲ್ಲಿದೆ. ತಮ್ಮ ಕಾವ್ಯ ಲಕ್ಷಣಗಳ ಬಗ್ಗೆ ಇಬ್ಬರಿಗೂ ಯಾವ ರೀತಿಯ ಜಂಬಗಾರಿಕೆಯೂ ಇಲ್ಲ. ‘ವ್ಯಾಕರಣ ಕಾವ್ಯ ಲಕ್ಷಣಗಳನು ಗಣಿಸದೆಯೆ, ಲೋಕತಾಪದಿ ಬೆಂದು ತಣಿಪನೆಳಸಿದವಂ, ಈ ಕಂತೆಯಲಿ ನನ್ನ ನಂಬಿಕೆಯನೆಯ್ದಿಹೆನು, ಸ್ವೀಕರಿಕೆ ಬೇಳ್ಪವರು’ ಎಂದು ಮಂಕುತಿಮ್ಮನ ಮಾತಾದರೆ, ಬೀಚಿಯವರು ‘ಇದು ಕವನ ಸಂಗ್ರಹವೆ? ನಾನು ಕವಿಯೇ? ಗಣ, ಛಂದಸ್ಸು, ಮುಂತಾದುವುಗಳ ಪರಿಚಯ ನನಗೆ ಸುತರಾಂ ಇಲ್ಲ, ನಾನು ಭಾಷಾ ಪಂಡಿತನಲ್ಲ, ಕವಿಯೂ ಅಲ್ಲ, ಗದ್ಯವನ್ನೇ ಸಾಕಷ್ಟು ಅಚ್ಚುಕಟ್ಟಾಗಿ ತುಂಡರಿಸಿ… ‘ಎಂದು ಸವಿನಯವಾಗಿಯೇ ತಮ್ಮ ಬರಹದ ಇತಿಮಿತಿಗಳ ಬಗ್ಗೆ ಹೇಳುವಾಗ ಇನ್ನು ವಿಮರ್ಶಕನಿಗೆಲ್ಲಿಯ ಸ್ಥಾನ? ನಮ್ಮ ಹಲವಾರು ಹಿಂದಿನ ಕವಿಗಳಂತೆ, ಮಂಕುತಿಮ್ಮನ ಪದಗಳಲ್ಲಿ ಸಂಸೃತ ಸ್ವಲ್ಪ ಹೊಕ್ಕಿದ್ದರೂ, ‘ತಿಂಮ’ನು ಮಾತ್ರ ಸರಳವಾದ ಕನ್ನಡ ಪದಗಳ ರಚನೆಯಲ್ಲಿ ದೇವ ಭಾಷೆಯ ಭಾರವನ್ನಾಗಲೀ, ಕಬ್ಬಿಣ ಕಡಲೆಯಂತಹ ಕ್ಲಿಷ್ಟ ಪದ ಪ್ರಯೋಗವನ್ನಾಗಲೀ ಎಲ್ಲಿಯೂ ಓದುಗನ ಮೇಲೆ ಹೇರುವುದಿಲ್ಲ.
ತಿಂಮನ ಮಂಥನಕ್ಕೆ ಸಿಕ್ಕದ ದೇವರಿಲ್ಲ, ಗುಡಿಯಿಲ್ಲ, ಯಾವ ಸನ್ಯಾಸಿ, ಮಠಾಧಿಪತಿ, ರಾಜಕಾರಣಿ ಇಲ್ಲವೇ ಬುದ್ಧಿ ಜೀವಿಗಳೂ ಇಲ್ಲ. ದೇವರೇ ಆಗಲಿ, ಮತ್ತೊಬ್ಬ ಗುರುವೇ ಆಗಲಿ, ಈ ಮಂಥನದಲ್ಲಿ ‘ನಿನ್ನ ನಡೆವಣಿಕೆಯಲ್ಲಿ ನೀತಿಯೇ ಮಾರ್ಗದರ್ಶಿಯಾಗಲಿ. ನಿನ್ನ ಚಿಂತನ ಮೂಢ ನಂಬಿಕೆಯ ದಾರಿ ಹಿಡಿಯದೇ, ಮಾನವತೆಯ ಕಡೆಗೋಲಾಗಿ, ಸತ್ಯವನ್ನರೆಸಿ ಹೋಗು. ಅದೇ ದೈವಕ್ಕಿಂತ ಮಿಗಿಲಾದು’ ಎನ್ನುವನು ತಿಂಮ. ದೇವರಲ್ಲಿದ ಗುಡಿಯೇ ಇವನ ಕಣ್ಣಿಗೆ ಬೀಳುವದಷ್ಟೆ. ‘ಒಂದು ತಲೆ ಅವಗಿತ್ತಿ-ಖಾಲಿಯೇ ಇರಲಿ ಬಿಡು/ಒಂದು ಸಾವಿರ ಇತ್ತ, ಸಹಸ್ರ ಶೀರ್ಷಾ ಅಂದ// ಒಂದೊಂದು ಕಂಣಿಗೂ ಐದು ನೂರಿತ್ತವನು/ಬುದ್ಧಿ ಕುರುಡರ ಮಧ್ಯೆ ನೀ ಸಹಸ್ರಾಕ್ಷ ನೋಡು ತಿಂಮ// . ‘ಸಹಸ್ರ ಶೀರ್ಷಾಪುರುಷ: ಸಹಸ್ರಾಕ್ಷಸ್ಸಹಸ್ರಪಾತ್, ಸ ಭೂಮಿಂ ವಿಶ್ವತೋ ವೃತ್ವಾ, ಅತ್ಯತಿಷ್ಟ ದಶಾಂಗುಲಂ, ಪುರುಷ ಏವೇದಗಂ ಸರ್ವಂ….’, ಎಂದು ಅ ಮಹಾನ್ ಪುರುಷನ ಬಗ್ಗೆ ‘ಪುರುಷ ಸೂಕ್ತ’ದಲ್ಲಿ ಉಕ್ತ ವಾಗುವ ಪರಮಾತ್ಮನು(ದೇವರು) ಹೇಗೇ ಇರಲಿ, ಏನೇ ಆಗಿರಲಿ, ಅವನಿಗೆ ಎಷ್ಟೇ ತಲೆ, ಕಣ್ಣುಗಳಿರಲಿ, ನಿನ್ನ ಮಾನವನ ಬುದ್ಧಿ ಕುರುಡಾಗದಿರಲಿ, ವಿವೇಕ, ಮಾನವೀಯತೆ, ನ್ಯಾಯಪರತೆ ನಿನ್ನಲ್ಲಿ ರೂಢಿಸಿಕೊಂಡಿದ್ದರೆ ಅದೇ ಸಹಸ್ರಾಕ್ಷ, ಸಹಸ್ರ ತಲೆಗಳ ಪುರುಷನಿಗೆ ಸಮವೆಂದು ತಿಳಿಯುವ ಬೀಚಿಯವರ ‘ತಿಂಮ’. ದೇವನು ಇರುವನೋ ಇಲ್ಲೋ, ಇದ್ದರೂ ಯಾವ ರೂಪದಲ್ಲೋ, ಹೇಗೋ, ಯಾರು ಬಲ್ಲರು?’ ಅವನ ದೃಷ್ಟಿಯಲ್ಲಿ ‘ಶಿವನು ಇಹನೋ ಇಲ್ಲೋ ದೊಡ್ಡವನು ಹೌದಲ್ಲೋ / ಯಾವನಿಗೆ ಬೇಕು ಈ ಒಣ ಕಿರಿಕಿರಿ// ದೈವಕಿಂತಲು ದೊಡ್ಡದಿನ್ನೊಂದು ಇದೆ ಎನಗೆ, ಮಾ/ ನವತೆಯೇ ದಾರಿ ನಡೆಯೋ ತಿಂಮ//’, ಮಾನವತೆಯೊಂದಿದ್ದರೆ ಸಾಲದೇನು, ದೇವ ದೇವನೆಂದೇಕೆ ಸುಮ್ಮನೆ ಜಪಿಸುವಿರಿ? ಇಂತಹ ಕಟು ವಾಸ್ತವತೆಯ ದಾರಿ ಹಿಡಿಯುತ್ತಾನೆ ನಮ್ಮ ‘ತಿಂಮ’. ಇವನಿಗೆ ಮಾರ್ಗ ದರ್ಶಕನೆಂದರೆ ಆ ‘ಮಂಕುತಿಮ್ಮನೊಬ್ಬನೆ. ಅವನೆಷ್ಟು ಲೀಲಾಜಾಲವಾಗಿ ತನ್ನ ಬುದ್ಧಿಸಾಮರ್ಥ್ಯದಿಂದ ಜೀವನಾನುಭವಗಳ ಸಾರವನ್ನು ಈ ಕಗ್ಗದ ಮೂಲಕ ನೇಯಬಲ್ಲನೋ ನಮ್ಮ ‘ತಿಂಮ’ನೂ ಅಷ್ಟೇ ಸುಲಭವಾಗಿ ಚತುಷ್ಪಾದ ಕವನಗಳ ಮೂಲಕವೇ ಓದುಗನಿಗೆ ತನ್ನ ಅನುಭವಾಮೃತವನ್ನುಣಬಡಿಸುತ್ತಾನೆ. ಇಬ್ಬರಿಗೂ ಒಂದೇ ಕಾಳಜಿ. ಸಮಾಜದ ಸುಧಾರಣೆ, ಉನ್ನತ ಆದರ್ಶಗಳನ್ನು ಎತ್ತಿ ಹಿಡಿಯುವ ಮನೋಭಾವ. ಮಂಕುತಿಮ್ಮನು ಹೇಳುತ್ತಾನೆ ‘ಕ್ಷಿತಿ ಚಕ್ರ ರವಿ ಚಕ್ರ ಋತುಚಕ್ರಗಳಿಗಿಹುದು/ ಮಿತವೃತ್ತಿ; ನರನಿಗಂತೆಯೆ ಕರ್ಮನಿಯತಿ// ಕ್ಷಿತಿಕಂಪ ರಾಹುಕೇತುಭ್ರಮೆ ನರಪ್ರಗತಿ/ಅತಿಚರಿತೆ ಪ್ರಕೃತಿಯಲಿ-ಮಂಕುತಿಮ್ಮ//’ ಮನುಷ್ಯನು ತನ್ನ ಇತಿಮಿತಿಯರಿತು ಕರ್ಮ ಸಾಧನೆಯಲ್ಲಿ ನಿರತನಾಗಿರಬೇಕಲ್ಲದೆ ಆಕಾಶಕ್ಕೆ ಕೈ ಚಾಚುವುದಾಗಲಿ, ಅನೀತಿಯುತ ಕಾರ್ಯಗಳಲ್ಲಿ ಭಾಗವಹಿಸುವುದು, ಅದೇ ತನ್ನ ಕರ್ಮ ಎಂದು ವಾದಿಸುವುದು ಸರಿಯಲ್ಲವೆಂದರೆ, ಅದೇ ಧಾಟಿಯಲ್ಲಿ ನಮ್ಮ ‘ತಿಂಮ’ನೂ ‘’ಹುಟ್ಟಿ ಬಂದಿಹೆ ನಾನು ಇಚ್ಛಾ ದೇವಿ ಯನ ತಾಯಿ/ ಕೆಟ್ಟ ದಾಹವೇ ಎನ್ನ ಹುಟ್ಟಿಗೆ ಕಾರಣ// ಕಾಟ ಕರ್ಮಗಳೆಂದು ಮೂಗ್ಹಿಡಿದು ಕೂಡುವವನಲ್ಲ/ ಓಟವೇ ಪುಣ್ಯ,ಉಳಿದೆಲ್ಲ ಪಾಪವೋ ತಿಂಮ// ಎಂದು, ತನ್ನ ಪಾಪಕರ್ಮವೆಂದು ಮೂಗು ಹಿಡಿದು ಸುಮ್ಮನೆ ಕೂರುವುದು ತಪ್ಪು, ತನ್ನ ಪಾಲಿನ ಕಾರ್ಯ ಸಿದ್ಧಿಯಲ್ಲಿ ತೊಡಗಬೇಕೆನ್ನುತ್ತಾನೆ. ಬೀಚಿ ಹಾಗು ಡಿವಿಜಿ ಯವರಲಿರುವ ಒಂದು ವ್ಯತ್ಯಾಸವೆಂದರೆ ಮಂಕುತಿಮ್ಮ ಬರೀ ಪುರುಷಾರ್ಥಗಳ ವಿಷಯವಲ್ಲದೆ ಜೀವನದಲ್ಲಿ ಅಲೌಕಿಕದ ಹಾಗು ವೇದಾಂತದ ಬಗ್ಗೆಯೂ ಮನಸ್ಸನ್ನು ಹರಿಸಿ, ಪಾರಮಾರ್ಥಿಕದ ಬಗ್ಗೆ ಸ್ವಲ್ಪವಿಸ್ತಾರವಾಗಿಯೇ ಚಿಂತನೆಗೆ ಅವಕಾಶಮಾಡಿಕೊಂಡಿದ್ದಾರೆ. ‘ಏನು ಭೈರವ ಲೀಲೆಯೀ ವಿಶ್ವವಿಭ್ರಮಣೆ!/ ಏನು ಭೂತಗ್ರಾಮನರ್ತನೋನ್ಮಾದ!// ಏನಗ್ನಿಗೋಳಗಳು! ಏನಂತರಾಳಗಳು!/ಏನು ವಿಸ್ಮಯ ಸೃಷ್ಟಿ!-ಮಂಕುತಿಮ್ಮ//’ ಎಂದು ವಿಸ್ಮಯಗೊಂಡಿದ್ದಾರೆ, ಆದರೆ ಈ ಅಗೋಚರ ಶಕ್ತಿಯ ಮುಂದೆ ಮಾನವ ‘ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು/ತೊಂದೆ ಧಾನ್ಯವನುಣ್ಣು ತೊಂದೆ ನೀರ್ಗುಡಿದು//ಒಂದೆ ಗಾಳಿಯನುಸಿರ್ವ ನರಜಾತಿಯಳಗೆಂತು/ಬಂದುದೀ ವೈಷಮ್ಯ?-ಮಂಕುತಿಮ್ಮ’ ಎಂದು ಬೇಸರಿಸುತ್ತಾರೆ. ಬೀಚಿ ತಮ್ಮ ಆತ್ಮ ಕಥನದ ‘ಭಯಾಗ್ರಫಿ’ ಯ ಒಂದೆಡೆ ಹೇಳುತ್ತಾರೆ ‘ಮಂಕುತಿಮ್ಮನ ಕಗ್ಗದಲ್ಲಿ ಲೌಕಿಕವೂ ಇದೆ, ಪಾರಮಾರ್ಥಿಕವೂ ಇದೆ, ಪಾರಮಾರ್ಥಿಕ ಅಂದೊಡನೆ ನಮಗೆ ವೇದಾಂತದ ನೆನಪು ಆಗುತ್ತೆ, ವೇದಾಂತ ಅಂದೊಡನೆಅನೇಕರಿಗೆ ಕಹಿ ಕುಡಿದಂತಾಗುತ್ತದೆ. ಅಂತಹ ಅನೇಕರಲ್ಲಿ ನಾನು ಒಬ್ಬ.’ ಕಾರಣ ಅವರು ಜೀವನದಲ್ಲುಂಡ ಅಪಾರ ಕಹಿ, ಕಣ್ಣಾರೆ ಕಂಡ ಢಂಬಾಚಾರ, ಕಪಟತನ ಮತ್ತು ಮೌಢ್ಯ. ಇದನ್ನೇ ವಸ್ತು ವಾಗಿಟ್ಟುಕೊಂಡು ಇವರ ಕಗ್ಗದಲ್ಲೂ ಅಲ್ಲಲ್ಲಿ ನಾವು ಕಾಣುವುದು ಸಹಜವಷ್ಟೆ. ಆದರೆ ಅಷ್ಟಕ್ಕೆ ಅವರು ಬರೆದು ನಿಲ್ಲಿಸಲಿಲ್ಲ, ಜೀವನದ ಎಲ್ಲ ಪ್ರಾಕಾರಗಳ ಬಗ್ಗೆಯೂ ಕೈ ಆಡಿಸಿದ್ದಾರೆ. ವಿಧಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. -ತಮಗೆ ಸರಿಯೆನಿಸುದದನ್ನು ನೇರ ಮಾತುಗಳಿಂದ ಹೇಳಿಬಿಟ್ಟಿದ್ದಾರೆ, ಡಿವಿಜಿಯವರು ವಿಧಿಯಾಟದ ಬಗ್ಗೆ ಹೇಳುತ್ತಾರೆ ‘ಬದುಕು ಜಟಕಾ ಬಂಡಿ,ವಿಧಿಯದರ ಸಾಹೇಬ /ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು // ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು/ಪದಕುಸಿಯೆ ನೆಲವಿಹುದು–ಮಂಕುತಿಮ್ಮ//’ . ಡಿವಿಜಿಯವರ ಪ್ರಭಾವ ಇವರಮೇಲಿಷ್ಟಿದ್ದರೂ ಇವರ ಮಾತೃಶ್ರೀಯವರ ದುರ್ಭರ ಜೀವನ, ನಂತರದ ದಿನಗಳ ಬಹುದೇ ಹೃದಯವಿದ್ರಾಯಕ ಘಟನೆಗಳು ಜೀವನವನ್ನ, ಸ್ವಲ್ಪ ಕಟುವಾಗಿಯೇ ಆದರೂ ವ್ಯಂಗ್ಯದಿಂದಲೂ ಕಾಣುವದಿದ್ದು ತಮ್ಮ ಅನುಭವ, ಅನಿಸಿಕೆಗಳನ್ನು ವ್ಯಂಗ್ಯ, ಮತ್ತು ಹಾಸ್ಯ ಬರಹದ ಮೂಲಕ ಚಿತ್ರಿಸುವ ವಕ್ತಾರರಂತೆ ತೋರಿದರೆ ಅತಿಶಯವೇನೂ ಆಲ್ಲ. ಅವರ ಮಾತಿನಲ್ಲಿ ದೈವವೋ, ವಿಧಿಯೋ ಒಟ್ಟಿನಲ್ಲಿ ‘ನನ್ನ ದೇವರು ಬೇರೆ, ನರರು ಮಾಡಿದುದಲ್ಲ/ ತನ್ನಿಂದ ತಾನಾದ ನನ್ನೊಳಿಹನವನು// ಚೆನ್ನ ಚಿತನ್ಯ ದುಡಿತದಲಿ, ಊಟದಲಿ ಮೃಷ್ಟಾನ್ನ/ ನನ್ನಂತೆ ಅವನೂ ನಗುತಲಿಹನೋ ತಿಂಮ// ಎಂದೆನ್ನುತ್ತಾರೆ. ಮನುಜನ ಕೃತ್ರಿಮದ ಬಗ್ಗೆ ‘ದೇಗುಲವು ಬಿತ್ತು ಅದರ ಜೀರ್ಣೋದ್ಧಾರ/ ಹಗಲಿರುಳು ಓಡಾಟ ಭಕ್ತಾದಿಗಳಿಗೆ// ಸಾಗಲಿ ಎಂದಂದ ಕಲ್ಲಾಗಿ ಕುಳಿತಿಹ ದೇವ, ಆ/ ವಗೊಬ್ಬಗೇ ಗೊತ್ತು ಭಕ್ತಿ ಸತ್ತುದುದು, ಹೌದೇನೊ ತಿಂಮ’. ಅದೇ ಮಂಕು ತಿಮ್ಮ ‘ಕೃತ್ರಿಮವೋ ಜಗವೆಲ್ಲ! ಸತ್ಯತೆಯಿದೆಯೆಲ್ಲಿಹುದೋ?/ ಕರ್ತೃವೆನಿದನೆ ತಾಂ ಗುಪ್ತನಾಗಿಹನು// ಚತ್ರವೀ ಜಗವಿದರೊಳಾರಗುಣವೆಂತಹುದೊ!/ ಯಾತ್ರಿಕನೆ ಜಾಗರಿರೊ-ಮಂಕು ತಿಮ್ಮ// ಜಗವೆಲ್ಲ ಜೊಳ್ಳು, ಹಾಗಿದ್ದಮೇಲೆ ಕಲ್ಲಲ್ಲಿ ಅಡಗಿಹ ಶುಷ್ಕ ದೇವರನ್ನು ನಂಬುವುದಾದರೂ ಏತಕ್ಕೆ? ಹಾಗೆ ನೋಡಿದರೆ, ಈ ತಿಂಮನಿಗೂ ಸರ್ವಜ್ಞನಿಗೂ ಹೆಚ್ಚು ಸಾಮ್ಯವಿದೆಯೆಂದು ತೋರುತ್ತದೆ, ಅದರೆ ಅವನು ಮಹಾನ್ ಶೈವ ಭಕ್ತ ಎನ್ನವುದನ್ನ ಮರೆಯಲಾಗದು. ಅವನಿಗೆ ಆ ಶಿವನಲ್ಲಿ ಅಪಾರ ಭಕ್ತಿ. ಆದರೂ ‘ ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ, ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕೆ, ದೇಗುಲವೇ ಇಲ್ಲ ಸರ್ವಜ್ಞ’ ಎಂದು ಲಿಂಗವೆಂದರೆ ಬರೀ ಶಿಲೆಯಲ್ಲ, ತನ್ನ ಮನಸ್ಸಿನ ಅಂತರಾತ್ಮ, ಅದರಿಂದಷ್ಟೆ ಶಿವನನ್ನ ಗುರುತಿಸಬೇಕೆನ್ನುವನು ಮಂಕುತಿಮ್ಮನು ಮೇಲೆ ಹೇಳಿದಂತೆ. ತಿಂಮನಿಗೆ ಶಿಲೆಯ ಕಾಳಜಿಯೂ ಇಲ್ಲ. ಯಾವ ದೈವದ ಬಲವೂ ಬೇಕಿಲ್ಲ, ಕಾರಣ ಆ ದೇವರಿಗೆ ಯಾವದೇ ಬೆಲೆಯೂ ಇಲ್ಲ ಇವನ ದೃಷ್ಟಿಯಲ್ಲಿ. ಅಂದಮೇಲೆ ಭಕ್ತಿ ಎಲ್ಲಿಂದ ಬರಬೇಕು? ಆದರೆ ಇಬ್ಬರೂ ಮಾತಿನಲ್ಲಿ ಯಾವ ದಾಕ್ಷಿಣ್ಯಕ್ಕೂ ಒಳಗಾಗುವುದಿಲ್ಲ, ತಮಗೆ ಅನಿಸಿದ್ದನ್ನು ಕದ್ದು ಮುಚ್ಚಿ ಹೇಳುವವರೆ ಅಲ್ಲ. ನೇರವಾಗಿಯೇ, ಅನೇಕ ಬಾರಿ ಖಂಡ ತುಂಡವಾಗಿ, ಆದರೆ ಎಲ್ಲರೂ ಒಪ್ಪುವಂತೆಯೇ ತಿಳಿಸುವ ಆತ್ಮಬಲವು ಇಬ್ಬರಿಗೂ ಇದೆ. ಈ ತಿಂಮನಂತೆಯೇ ಸರ್ವಜ್ಞನು ಮೌಢ್ಯ, ಬೂಟಾಟಿಕೆ ಮತ್ತು ಒಣ ಢಂಬಾಚಾರವನ್ನ ಸಹಿಸುವುದಿಲ್ಲ. ದೈವ ಭಕ್ತಿಯ ಬಗ್ಗೆ ಹೇಳುತ್ತಾನೆ ‘ಕತ್ತೆ ಬೂದಿಲಿ ಹೊರಳಿ ಮತ್ತೆ ಯತಿಯಪ್ಪುದೇ, ತತ್ವವನರಿಯದಲೆ ಭಸಿತವಿಟ್ಟವ ಶುದ್ಧ ಕತ್ತೆಯೆಂತೆಂದ ಸರ್ವಜ್ಞ’. ಬೀಚಿಯಾದರೊ ‘ಏನೇನು ಅನ್ಯಾಯ ಎಷ್ಟೆಷ್ಟನಾಚಾರ/ ನಿನ್ನ ಹೆಸರಲಿ ಇಂದು ಸಾಗಿಹುದು ಶಿವನೆ ?/ ಚುನಾವಣೆಗೆ ಹಣವಿತ್ತು ವಿಭೂತಿ ತರಿಸುವ/ ಧನವಂತ ತಂತ್ರಿಗಳು ದೇವರೇ ತಿಂಮ //’ ಎಂದು ಸಮಾಜಕ್ಕೆ ಸವಾಲೆಸೆದರೆ. ಅಪಾರ ಶಿವ ಭಕ್ತನಾದ ಸರ್ವಜ್ಞ ‘ ಖಂಡಿಸದೆ ಕರಣವನು, ದಂಡಿಸದೆ ದೇಹವನು/ ಉಂಡುಂಡು ಸ್ವರ್ಗಕಯ್ದಲ್ಕೆ ಅದನೇನು ರಂಡೆಯಾಳುವಳೆ ಸರ್ವಜ್ಞ//’ ಎಂದು ದೇವರು ಒಲಿಯ ಬೇಕಾದರೆ ತಾನು ಮೊದಲಿಗೆ ಪರಿಶುದ್ಧನಾಗಿರಬೇಕೆನ್ನುತ್ತಾನೆ. ಇಬ್ಬರಲ್ಲೂ ಕಟು ವ್ಯಂಗದ ಮಾತುಗಳು ಅಡೆತಡೆಯಿಲ್ಲದೆ ಉಕ್ಕುತ್ತವೆ! ತಿಂಮನು ತನ್ನ ಅಭಿಪ್ರಾಯ ಜನರಿಗೆ ಈ ರೀತಿ ಬಿಂಬಿಸುತ್ತಾನೆ-’ಮಾನವನೆ ನಿನ ಶತ್ರು ಬರೆದಿಟ್ಟುಕೊಳು ಇದನ/ ನಿನಗಾವ ದ್ರೋಹಗಳ ಎಸಗಿಹನು ಗೊತ್ತೆ // ತನಗಿರುವ ಜಾತಿ ಮತಗಳ ರೋಗ ನಿನಗಂಟಿಸಿಹನು/ಏನು ನಿನ್ನ ಬವಣೆ ನಗಬೇಡ ತಿಂಮ// ‘. ಹಾಗಾದರೆ ನಿನ್ನ ನಂಬಿಕೆಯೆಂತಹುದೋ ತಿಂಮ? ಎಂದು ಕೇಳಿದರೆ ಹೇಳುತ್ತಾನೆ ‘ ನನ್ನ ದೇವರು ಬೇರೆ, ನರರು ಮಾಡಿದುದಲ್ಲ/ ತನ್ನಿಂದ ತಾನಾದ ನನ್ನೊಳಿಹನವನು// ಚೆನ್ನ ಚೈತನ್ಯ ದುಡಿತದಲಿ, ಊಟದಲಿ ಮೃಷ್ಟಾನ್ನ/ ನನ್ನಂತೆ ಅವನೂ ನಗುತಲಿಹನೋ ತಿಂಮ//’. ನಮ್ಮ ಜನರಲ್ಲಿ ಸರ್ವಕಾಲಕ್ಕೂ ಈ ಜಾತಿ ಬೇಧ, ಮತ್ಸರ ಹಾಗು ಸ್ವಜನ ಪಕ್ಷಪಾತ-ಇಂಥವೆಲ್ಲ ಕಂಡೂ ನಿಸ್ಸಹಾಯಕರಂತೇಕೆ ವರ್ತಿಸುತ್ತೇವೆ? ಮಂಕು ತಿಮ್ಮನ ಜೀವನಾದರ್ಶಗಳು ಬೀಚಿಗೂ ಬಹುಮೆಚ್ಚಿಗೆಯವು. ಆದರೆ ಅವರ ಮುಖವಾಣಿ ತಿಂಮ ಹೇಳುವಂತೆ “ನನ್ನ ತಿಂಮನಿಗೂ ಡಿವಿಜಿ ಯವರ ತಿಮ್ಮನಿಗೂ ಕೇವಲ ಹೊರಹೋಲಿಕೆ ಅಷ್ಟಿಷ್ಟು ಇರಬಹುದಾದರೂ, ಇಬ್ಬರಲ್ಲಿ ಅಜಗಜಾಂತರವಿದೆ. ಗುಂಡಪ್ಪನವರ ತಿಮ್ಮ ಸೂರ್ಯ, ನನ್ನ ತಿಂಮ ‘ಬೆಡ್ ಲ್ಯಾಂಪ್’ ” ಎನ್ನುವ ದೈನ್ಯತ್ವ(ದೀನತೆ ? )ವಿದೆ. ಡಿವಿಜಿ ಯವರ ಕಗ್ಗದಲ್ಲಿ ವಿಡಂಬನೆಗೆ ಅವಕಾಶವಿದ್ದಿಲ್ಲ, ಇದ್ದರೂ, ಕಂಡೂ ಕಾಣದ ಹಾಗೆ ! ಬೀಚಿಯವರ ಬರವಣಿಗೆಯ ಬಗ್ಗೆ ‘ತೋಚಿದ್ದು, ಗೀಚಿದ್ದು’ ಪುಸ್ತಕದ ಪ್ರಸ್ತಾವನೆಯಲ್ಲಿ ಡಾ. ಸ್ವಾಮಿರಾವ್ ಕುಲಕರ್ಣಿ ಹೇಳುವಂತೆ ‘ ಅವರದು ಹೊಸ ಬಗೆಯ ಸಾಹಿತ್ಯ ನೀಡಿದ ಕಾಣಿಕೆ. ಪ್ರಗತಿಪರ ವಿಚಾರಧಾರೆ, ಚಿಂತಕ ಪ್ರವೃತ್ತಿ, ಸಂಪ್ರದಾಯ ವಿರೋಧಿ ಮನೋಭಾವದೊಂದಿಗೆ ಭಾಷ ಶೈಲಿಯ ವಿಧಾನ -ಇವೆಲ್ಲಕ್ಕಿಂತ ಹೆಚ್ಚಾಗಿ ವ್ಯಂಗ್ಯ, ವಿಡಂಬನೆಗೆ ಜೊತೆಗೆ ಸತ್ವ-ಮಹತ್ವ ತಂದುಕೊಟ್ಟ ಲೇಖಕ. ಅವರ ಪುಸ್ತಕ ಓದುವದೆಂದರೆ ಹಾಗಲಕಾಯಿ ಪಲ್ಯ ತಿಂದಂತೆ. ನಾಲಗೆಗೆ ಕಹಿ ಎನಿಸಿದರೂ ಆರೋಗ್ಯಕ್ಕೆ ಒಳ್ಳೆಯದು. ಆಧರಕ್ಕೆ ಕಹಿ-ಉದರಕ್ಕೆ ಸಿಹಿ’. ಬೀಚಿಯ ಪರಮಾಪ್ತ ರಾಗಿದ್ದವರೊಲ್ಲಬ್ಬರಾಗಿ ಶ್ರೀ ಬಿ. ಎಸ್. ಕೇಶವ ರಾವ್. ಅವರು ತಮ್ಮ “ಬೀchi’s ಬುಲೆಟಿನ್” ಕೃತಿಯ ‘ನಾನ್ನುಡಿ’ಯಲ್ಲಿ ಬರೆಯುತ್ತಾರೆ “ ‘ಬೀಚಿ’ಅನ್ನುತ್ತಿದ್ದಂತೆ ನಮ್ಮ ಜನ ಅವರನ್ನು ಒಬ್ಬ ಹಾಸ್ಯಗಾರ, ಅವರಾಡುವ ಮಾತು, ಅವರು ಬರೆಯುವ ಸಾಹಿತ್ಯ ಎಲ್ಲವೂ ಹಾಸ್ಯಮಯ’ ಎನ್ನುತ್ತಾ ಹಲ್ಲುಗಿರಿಯುವುದುಂಟು, ಆದರೆ ಅದು ಹಾಗಲ್ಲ. ಬೀಚಿಯವರನ್ನು ಒಬ್ಬ ಹಾಸ್ಯಗಾರ ಎನ್ನುವುದಕ್ಕಿಂತ ಅವರೊಬ್ಬ ಅತಿ ಶ್ರೇಷ್ಟ ತತ್ವ ಜ್ಞಾನಿ, ಮಹಾ ಚಿಂತಕ ಎಂದು ಪರಿಗಣಿಸುವುದು ಮೇಲು”. ಬೀಚಿಯೇ ತಮ್ಮ “ಮನೆ ತನದ ಗೌರವ” ಹೊತ್ತಿಗೆಯಲ್ಲಿ ಹೀಗೆ ಹೇಳಿಕೊಳ್ಳುತ್ತಾರೆ- “ಸಾಹಿತಿ ಆದವನು ಸಮಾಜದ ತಾಯಿಯೂ ಹೌದು, ಅಂತೆಯೇ ನಾಯಿಯೂ ಹೌದು. ಅವನಿರುವುದು ಸಮಾಜದ ಒಂದು ಚಿಕ್ಕ ಭಾಗ ಅವನು ಎಂಬುದು ನಿಜ ಹೌದು, ಆದರೆ ತನ್ನ ಸಮಾಜವನ್ನು ಶುಚಿಯಾಗಿಡುವುದು ಅವನ ನೈತಿಕ ಹೊಣೆ. ಈ ಕರ್ತವ್ಯಪಾಲನೆಯ ಕ್ರಮವಾಗಿ ಅವನದಕ್ಕೆ ತಾಯಿಯಾಗಬೇಕು ಮತ್ತು ನಾಯಿಯಾಗಬೇಕು. ಸಮಾಜ ಎಂಬುದು ಒಂದು ಉತ್ತು, ಬಿತ್ತಿದ ಬತ್ತದ ಗದ್ದೆಯಂತೆ. ಬಯಸಿದ ಬತ್ತವೂ ಬೆಳೆಯುತ್ತದೆ, ಅದರೊಡನೆ ಬೇಡಾದ ಹುಲ್ಲು ಕಡ್ಡೆ, ಕಸ ಮುಂತಾದುವು ಬೆಳೆಯುತ್ತವೆ. ಫಲ ಕೊಡುವ ಬತ್ತದ ಪೈರನ್ನು ಕಾಯುವುದು ಎಷ್ಟು ಅವಶ್ಯವೋ, ಪೈರಿನ ಸಮೃದ್ಧಿಗೆ ಮಾರಕವಾಗುವಂತಹ ಕಸ ಕಡ್ಡಿಗಳು ಬೆಳೆಯದಂತೆ ನೋಡಿಕೊಳ್ಳುವುದೂ ಅಷ್ಟೇ ಅವಶ್ಯ. ಸದ್ಗುಣಿಗಳು ಸಮಾಜದಲ್ಲಿ ಇದ್ದರು, ಇದ್ದಾರೆ, ಇರುತ್ತಾರೆ ಕೂಡ; ಅಂತೆಯೇ ದುರ್ಮತಿಗಳೂ. ಅವರನ್ನು ಪೋಷಿಸಬೇಕು, ಇವರನ್ನು ಓಡಿಸಬೇಕು. ಈ ಎರಡೂ ಕೆಲಸಗಳನ್ನು ಸಾಹಿತಿ ಮಾಡಬೇಕು. ಮಾಡುತ್ತಾನೆ…… ಕೆಟ್ಟ ನಾಣ್ಯ ಒಳ್ಳೆಯ ನಾಣ್ಯವನ್ನು ಚಲಾವಣೆಯಿಂದ ಓಡಿಸುತ್ತದೆ ಎಂಬುದನ್ನು ನಾವು ಅರ್ಥಶಾಸ್ತ್ರದಿಂದ ಕಲಿಯುತ್ತೇವೆ …”. ಮೊದಲೇ ಹೇಳಿದಂತೆ ಸಮಾಜದಲ್ಲಿನ ಎಲ್ಲಾ ಪ್ರಾಕಾರಗಳನ್ನು ಈ “ಅಂದನಾ ತಿಂಮ” ದಲ್ಲಿ ಇವರು ಅವಲೋಕಿಸಿದ್ದಾರೆ. ಇವರ ಕಣ್ಣಿಗೆ ಬೀಳದ ಲೋಪದೋಷಗಳೇ ಇಲ್ಲ, ಚುರುಕು ನಾಲಿಗೆಗೆ ಆಹಾರವಾಗದ ವಸ್ತುವಿಷಯವೇ ಇಲ್ಲ! ಅಂಕುಡೊಂಕುಗಳನ್ನು ಸಮರ್ಥವಾಗಿ, ವ್ಯಂಗ್ಯದಿಂದ ಹೊರಗೆಡಹುವ ಇವರ ಪದ್ಯಗಳು ವಿಶಿಷ್ಟ ರೀತಿಯವು. ಹಾಗಾಗಿ ಸುಲಭವಾಗಿ ಜನಸಾಮಾನ್ಯರ ಮೆಚ್ಚುಗೆಯನ್ನೇನೋ ಪಡೆಯುತ್ತಾರೆ. ಆದರೆ ನಮ್ಮ ಜನ ಮಾತ್ರ ರಾಘವಾಂಕನು ತನ್ನ “ಹರಿಶ್ಚಂದ್ರ ಕಾವ್ಯ”ದಲ್ಲಿ ಹೇಳುವಂತೆ ‘ನಡೆವರೆಡಹುದೇ ಕುಳಿತವರೆಡಹುವರೆ? ಎಂಬ ಮಾತಿಗೆ ಒಪ್ಪಿದರೂ, ನಾವು ಅದನ್ನ ಸರಿಪಡಿಸಿಕೊಳ್ಳದಿದ್ದರೇನು ಪ್ರಯೋಜನ? ‘ತಪ್ಪು ಮಾಡುವುದು ಸಹಜ,ಆದರೆ ತಿದ್ದಿಕೊಳ್ಳುವುದು ಸಹಜವಲ್ಲವೇ? ಹಾಗಾಗಿ ಇಂದಿನ ಸಮಾಜ ಸಹಜವಾಗಿ ಹಳೆಯ ಕೆಟ್ಟ ಚಾಳಿಗಳಿಂದೇನು ಕಲಿತಿದೆ? ಒಂದೆಡೆ ತಿಂಮ ಹೇಳುತ್ತಾನೆ ‘ ಒಂದು ಸತ್ಯವ ಪೇಳ್ವೆ ದೇವನೆಂಬುವನಿಲ್ಲ, ಇ / ನ್ನೊಂದು ಸತ್ಯ, ಸತ್ಯವೇ ದೇವರು// ತಂದುಕೊ ಒಬ್ಬನನು ದೇವ ಬೇಕೇ ಬೇಕು/ ಎಂದಿಗೂ ಇರಲವನು ನಿನಗೆ ಕ್ಷೇಮವೊ ತಿಂಮ//. ಪ್ರೇಮದ ಬಗ್ಗೆ ತಿಂಮನ ಅನಿಸಿಕೆ – ‘ ತಂದೆ ತಾಯಿಯ ಪ್ರೇಮ-ಅಂಣ ತಂಗಿಯ ಪ್ರೇಮ/ ಬಂಧು ಮಿತ್ರರ ಪ್ರೇಮ ನಾಡಿ ನುಡಿ ಪ್ರೇಮ// ತಂದ ನಾಯಿಯ ಪ್ರೇಮ ಈ ಎಲ್ಲ ಪ್ರೇಮಕು/ ಒಂದೇ ಕಾರಣ ಉಂಟು ಸ್ವಯಂಪ್ರೇಮವೋ ತಿಂಮ// ಯಾರಿಗೆ ಬೆಲೆ ಈ ಲೋಕದಲ್ಲಿ?– ಉತ್ತಮ ಗುಣದವನು ಏನು ಎಂಬುವರಿಲ್ಲ/ ಕತ್ತೆ ಹೊರುವಾ ಬಟ್ಟೆಗೆ ನಮಸ್ಕಾರ// ಹತ್ತಿಯ ಹೊಲದಲಿ ನಿತ್ಯ ದುಡಿಯುವನವನು/ ಬೆತ್ತಲೆ ಇಹನು ಇದು ಜಗವೋ ತಿಂಮ//. ‘ಅಹಂ’ಇರಬಾರದು– ‘ ಬರೆದೆ ನಾನೆಂಬ ಸೊಕ್ಕು ಸಲ್ಲದು ಕೇಳು/ ಸರ್ವಜ್ಞಪೇಳಿದನು ಅವಗಿಲ್ಲ ಗರುವ// ಬರೆದವನು ನಾನೇ? ನಾನವಳ ಪೆನ್ನು/ ಬರೆಸುವಳು ಒಳಕುಳಿತು ನಮಿಸೋ ತಿಂಮ//. ನಿಜವಾದ ತಿಳುವಳಿಕೆ ಎಂದರೆ– ‘ ತಿಳಿವಳಿಕೆ ನಿನಗಿದೆಯೆ? ನನಗಿದೆಯೇ? ನೀ ಪೇಳು/ ತಿಳಿವಳಿಕೆ ಉಳ್ಳವರು ಈ ಜಗದಿ ಬಹಳಿಲ್ಲ// ತಿಳಿದುದನು ಬಲ್ಲೆಂದು ಇಲ್ಲದವ ಇಲ್ಲೆಂದು / ಹೇಳಿಕೊಳ್ಳುವುದೆ ತಿಳಿವಳಿಕೆಯೋ ತಿಂಮ//. ನಮ್ಮ ರಾಜಕಾರಣಿಗಳು- ಪುಢಾರಿಯಿಂದ ಹಿಡಿದು ಮಂತ್ರಿಗಳವರೆಗೆ ಅವರ ಸಂಸ್ಕೃತಿಯ ಬಗ್ಗೆ– ಆರಕ್ಕೆ ಸಭೆ ಎಂದು ಊರಲ್ಲಿ ಸಾರಿತ್ತು/ ಭಾರಿ ಜನ ಬಂದಿತ್ತು ಮಂತ್ರಿ ಭಾಷಣವಿತ್ತು// ಮಂತ್ರಿಯೂ ಬರಲಿಲ್ಲ ತಂತ್ರಿಯೂ ಬರಲಿಲ್ಲ/ ಬರಿಯ ಬೇಸರ ಪಾಪ! ಕುಳಿತು ಕಾಯ್ದರೋ ತಿಂಮ //, ಆದರೂ ಬಂದರು ಮಂತ್ರಿಗಳು ಎಂಟಕ್ಕೆ/ ಒದರಿತು ಸ್ವಾಗತ ಗ್ರಾಮಫೋನಿನ ಪ್ಲೇಟು// ‘ಇದೇನು ಸಭ್ಯತೆ? ಇದೇನು ಸಂಸ್ಕೃತೀ?/ ಇದರರ್ಥ ಮಂತ್ರಿಗೆ ಆಯಿತೇನೋ ತಿಂಮ? //. ಓಟು ಕೊಟ್ಟ ಮತದಾರರನ್ನು ತುಚ್ಛವಾಗಿ ನೋಡುವುದೇ ಇವರುಗಳ ಅಟ್ಟಹಾಸದ ನಡಾವಳಿ! ಬಾಳಿನ ಅರ್ಥವೇನು? — ಎರಡು ಮುಖ ನಾಣ್ಯಕ್ಕೆ ಬಾಳಿಗೂ ಅಷ್ಟೇ/ ಕರೆ ನೀನು ಸುಖವನ್ನು ದು:ಖ ಹಿಂದೆಯೇ ಇಹುದು// ಸರಸವಾಡ್ವುದು ಸುಖ ದು:ಖಕ್ಕೆ ವಿಶ್ರಾಂತಿ/ ಮೆರೆಯುವುದು ದು:ಖ ಸುಖಕೆ ನಿದ್ರೆಯೂ ತಿಂಮ //–ಇದು ಗೌತಮ ಬುದ್ಧನ ತತ್ವವು ಕೂಡ. ‘ಅದು ಬೇಕು, ಇದು ಬೇಡ ಎಂದಿಗೂ ಅನಬೇಡ/ ಬಂದಿದೆ ಪಾಲಿಗೆ ಕಣ್ಮುಚ್ಚಿ ನುಂಗು// ಅದು ಇದನ ಕೊಡುವವನು ಅರಿಯನೆ ನಿನ ಹಿತವ?/ ಅದ ಅವಗೆ ಬಿಡು, ಆ ಹೊಣೆ ನಿನಗೇಕೊ ತಿಂಮ?// , ಎಲ್ಲ ಕಾಲದಿ ಯಾರು ಚೆನ್ನ ಇದ್ದುದು ಉಂಟು?/ಕೆಲ ಕಾಲ ಚೆನ್ನ, ಕೆಲ ಕಾಲ ಸಪ್ಪೆ, ಇನ್ನು// ಕೆಲ -ಕಾಲ ಬರೀ ಸಿಪ್ಪೆ ಆಗಿಹೆನು/ ನೆಲವಿರುವವರೆಗೂ ಅಂತೂ ಇರುವೆ, ಕೇಳು ತಿಂಮ// ’’. ಇದುವೇ ಜೀವನ ಭಾರ ಹೊರುವ ಶಕ್ತಿ. ‘ಸುಖ ದು:ಖೇ ಸಮೇ ಕೃತ್ವ, ಲಾಭಾ,ಲಾಭೌ, ಜಯಾಜಯೌ… ’ ಇಲ್ಲಿ ಜ್ಞಾಪಿಸಿಕೊಳ್ಳಿ ಭಗವದ್ಗೀತೆಯನ್ನ. ಸಾವಿನ ಬಗ್ಗೆ ಇವರ ವ್ಯಾಖ್ಯಾನ–ಸಾವಿಗಂಜುವುದುಂಟೆ ಹಲ್ಲಿಲ್ಲ ಸಾವಿಗೆ/ ನೋವಿಲ್ಲ ಸಾವಿಲ್ಲ, ಬ್ರಹ್ಮವಿದ್ಯೆಯ ತಿಳಿ// ಸಾವು ಹುಟ್ಟುಗಳೆರಡು ರಾತ್ರಿ ಹಗಲುಗಳು/ ಸಾವಿಗತ್ತೊಡೆ ಎಲ್ಲರದು ರುದ್ರನಾಟಕ್ಕ ತಿಂಮ //, ಸಾವುಗಳ ಕಂಡಳುವಿ ಹುಟ್ಟಿಗೆ ಹಿಗ್ಗುವಿ/ ಯಾವ ಜಾಣತನ ತಲೆ ಕರೆದು ನೋಡು// ಸಾವು ಬೇಡಾದೊಡೆ ಹುಟ್ಟುವದು ಹೇಗಯ್ಯ?/ ದೇವನದು ಏನಿಲ್ಲ ಪ್ರಕೃತಿ ನಿಯಮವೋ ತಿಂಮ //. ಬೀchi ಯವರ ಈ ಕವನ ಸಂಗ್ರಹ “ ಅಂದನಾ ತಿಂಮ”ದ ವಿಚಾರ ಮಂಥನ ಮುಗಿಸುವ ಕೊನೆಗೆ, ಈ ಹೊತ್ತಿಗೆಯಲ್ಲಿನ ಅವರದೇ ಕೊನೆಯ (೪೯೫ನೆ)ಪದ್ಯದ ಮಾತು ಕೇಳಿ “—ನೂರಾರು ಮಾತುಗಳ ಹೇಳಿದೆನು ಈವರೆಗೂ/ ತೆರೆಯದೆ ತುಟಿ ಬಿಗಿದು ಕುಳಿತಿರುವಿ ಏಕೋ?// ಸರೆ ಅಲ್ಲ ಅನ್ನೆಲೋ ಮೂಕೇನು ನಿನಗೆ?/ ಬರಿ ನಕ್ಕು ‘ ಪೊಸತೇನು?’ ಅಂದನಾ ತಿಂಮ//”. ಗೊತ್ತಾ ಯಿತಲ್ಲವೇ ನಾವು ಕನ್ನಡಿಗರು….. ? ***************************************
Comments