ಶೂನ್ಯ ಸಂಪಾದನೆ(ಲಲಿತ ಪ್ರಬಂಧ/ಹರಟೆ)
- haparna
- Jul 17, 2015
- 5 min read
ಶೂನ್ಯ ಸಂಪಾದನೆ(ಲಲಿತ ಪ್ರಬಂಧ/ಹರಟೆ) (ಲೇಖಕ: ಎಚ್. ಅರ್. ಹನುಮಂತ ರಾವ್, ವಿಜಯ ನಗರ, ಬೆಂಗಳೂರು, ಈ ಮೈಲ್ :hrhrau@gmail.com)
ಇತ್ತೀಚೆಗೆ ನನ್ನ ಮಗ ಲೆಕ್ಕದಲ್ಲಿ ಶೂನ್ಯಕ್ಕೆ ಸಮೀಪದ ಅಂಕಗಳನ್ನು ಪಡೆದಿದ್ದಕ್ಕೆ ನಾನು ಕೋಪದಿಂದ ಅವನಿಗೆರಡೇಟು ಹಾಕಿದ್ದುಂಟು. ನನ್ನ ಹೆಂಡತಿಗೆಎಲ್ಲಿಲ್ಲದ ರೋಷ ಉಕ್ಕಿ, ಚಿಕ್ಕಂದಿನ ನನ್ನ ಶೂನ್ಯ ಸಂಪಾದನೆಗಳನ್ನ ಪೆಟ್ಟಿಗೆಯಲ್ಲಿಟ್ಟಿದ ಅಂಕ ಪಟ್ಟಿಗಳನ್ನು ಮಗನಿಗೆ ತೋರಿಸಿ ಸೇಡು ತೀರಿಸಿಕೊಂಡಿದ್ದಳು! ಅವನ ಉಪನಯನದ ವೇಳೆ ಪುರೋಹಿತರು ಗಾಯತ್ರಿ ಜಪ ಹೇಳಿಕೊಟ್ಟ ಮೇಲೆ ಲೋಕಾಭಿರಾಮವಾಗಿ ಹೇಳಿದ್ದರು. ‘ನೀನು ಏನೇ ಓದು, ಬಿಡು ಮಗು, ಆದರೆ ಗಾಯತ್ರಿ ಜಪ ದಿನನಿತ್ಯ ಮಾಡು. ನಿನ್ನ ಅಪ್ಪನ ಅಮ್ಮನ ಇಷ್ಟದಂತೆ ನಡೆದುಕೋ, ಆದರೆ ಮುಂದೆ ನೀ ಏನಾಗಬೇಕೆಂದಿದ್ದೀ?’ ಅದಾಗ ಅವನಿಗೆ ಎಂಟೇ ವರುಷ. ಅವನು ಹೇಳಿದ “ನಂಗೆ ‘ಕಿಚ್ಚ’ ನಂತೆ ಸಿನೆಮ ಹೀರೋ ಆಗಬೇಕಂತ ಇಷ್ಟ.” ನಮ್ಮ ಇಷ್ಟದಂತೆ ಆಗಲಿ, ಬಿಡಲಿ, ಅವನು ಮುಂದೆ ನನ್ನಂತೆ ‘ಜೀರೋ’ ಅಗಬಹುದೆಂಬ ಶಂಕೆ ‘ಬೆಳೆಯುವ ಪೈರು ಮೊಳಕೆಯಲ್ಲಿ ನೋಡು’ ಎನ್ನುವಂತೆ ಮೂಡಿದ್ದರೆ ತಪ್ಪೇನು? ಪ್ರತಿಯೊಬ್ಬರಿಗೂ ಜೀವನಾದರ್ಶವೆಂಬುದು ತನ್ನ ಎಳೆಯ ವಯಸ್ಸಿನಲ್ಲೇ ಗೋಚರವಾಗುತ್ತದೆಂಬುದು ನನ್ನ ಸ್ವಂತ ಕಲಿಕೆಯ ಪಾಠಗಳಲ್ಲೊಂದು. ಇಲ್ಲಿ ಮಾಡುವ ತಪ್ಪುಗಳು ಅವನನ್ನು ಇಡೀ ಜೀವಮಾನ ಕಾಡಿಸಬಹುದು. ಶಿವಾಜಿ ಮಗುವಾಗಿದ್ದಾಗ ಕತ್ತಿಯನ್ನೂ ಮತ್ತಿನ್ನೇನನ್ನೊ ಆತನ ಕೈಗೆ ಕೊಟ್ಟಾಗ ಅವನ ಆಯ್ಕೆ ಎಲ್ಲಾ ಬಿಟ್ಟು ಕತ್ತಿಯಾಗಿತ್ತಂತೆ. ಆದ್ದರಿಂದಲೇ ಆತ ಮನೆಯಲ್ಲೂ, ಶಾಲೆಯಲ್ಲೂ ಚರಿತ್ರೆ, ಶಾಸ್ತ್ರ, ಕಾಗುಣಿತ ಇಲ್ಲವೇ ರೂಢಿ ಗಣಿತವನ್ನೂ ಕಲಿಯಲೊಲ್ಲದೆ, ದೊಡ್ಡವನಾದಮೇಲೆ ಕತ್ತಿ ಹಿರಿದು ಯುದ್ಧಕ್ಕೆ ಸಿದ್ಧನಾಗಿದ್ದು ಚರಿತ್ರೆಗೆ ಸೇರಿ ಹೋದ ಅಂಶ. ಔರಂಗಜೇಬನಿಗೆ ತಲೆನೋವಾಗಲೂ ಇದೇ ಕಾರಣ ವಿರಬೇಕೆ ನ್ನುವುದು ನನ್ನಂತ ಶೂನ್ಯ ಸಂಪಾದಕರ ತರ್ಕಕ್ಕೆಇನ್ನಷ್ಟು ಪುಷ್ಟಿ ದೊರೆಯುತ್ತದೆ. ಗಣಿತ ದ್ವೇಷಿಯೂ ಯಾಕಿರಬಾರದೆಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಹಾಗಲ್ಲದೆ ಲೆಕ್ಕವು ಪ್ರಿಯವಾಗಿದ್ದೇ ಆಗಿದ್ದರೆ ಕತ್ತಿಯ ಬದಲಿಗೆ ಖಜಾನೆಯಲ್ಲಿ ಇರಬಹುದಾದ ಸಂಪತ್ತನ್ನು ಅತ ಎಣಿಸಿಕೊಂಡು ಪೈ ಮಂದಿಯಂತೆ ಹಣದ ವಹಿವಾಟು ನೋಡಿಕೊಂಡಿರಬಹುದಿತ್ತು. ಅಥವಾ ಪ್ರೀತಿ, ಪ್ರೇಮದ ಸುಳಿಯಲ್ಲಿ ಈಜುತ್ತಾ, ಮದಿರೆಯ ದಾಸನಾಗಿಯೋ, ಸಂಗೀತ ಲೋಕದಲ್ಲಿ ಲೀನವಾಗಿಯೋ ಅಥವಾ ಈಗಲೀಗಿನ ಹಲವಾರು ರಾಜಕೀಯ ಮುತ್ಸದ್ದಿಗಳ ಮಕ್ಕಳಂತೆ ನೈಟ್ ಕ್ಲಬ್ಬುಗಳಲ್ಲೋ, ರಿಸಾರ್ಟುಗಳಲ್ಲೋ ನೆಮ್ಮದಿಯಾಗಿ ಕಾಲ ವ್ಯಯಿಸಿಕೊಂಡು ಇರಬಹುದಿತ್ತು. ನನಗೆ ಎಳೆ ವಯಸ್ಸಿನಲ್ಲೇ ನಮ್ಮಪ್ಪ ಏನೇನು ಪರೀಕ್ಷೆಗೆ ಒಡ್ಡಿದ್ದನೋ, ಆವರೀಗಿಲ್ಲದಿರುವುದರಿದ ತಿಳಿಯದು. ಆದರೆ ಸ್ಕೂಲು ಕಾಲೇಜು ದಿನಗಳಲ್ಲೂ ಗಣಿತವೆಂದರೆ ‘ಅಗಣಿತ ಶೂನ್ಯ ಗುಣ ಸಂಪಾದಿತ ಪರಿಪೂರ್ಣ ರಾಮ’ನೇ ಆಗಿದ್ದೆನೆಂದು ನಾನೇ ಹೇಳಿಬಿಡುತ್ತೇನೆ. ಮಾಧ್ಯಮಿಕ ಶಾಲೆಯ ಗಣಿತ ಮೇಷ್ಟ್ರು ಶಾಂತಪ್ಪ ನನ್ನನ್ನು ‘ಶೂನ್ಯ ಸುಂದರ’ ಎಂದು ಕರೆದಿದ್ದುದು ನಾ ಮರೆಯಲು ಸಾಧ್ಯವೇ ಇಲ್ಲ! ನನಗೆ ಹಿರಿಯರಿಟ್ಟ ಹೆಸರು ‘ಸುಂದರ ರಾಮ’ ಹಾಗೂ ಸ್ವಲ್ಪ ಹನುಮನ ಹೋಲಿಕೆ ಇದ್ದ ಮಾತ್ರಕ್ಕೆ ಮಾಸ್ತರು ಆ ರೀತಿ ಅಪಹಾಸ್ಯ ಮಾಡಿದ್ದು ಸರಿಯೇ? ಲೆಕ್ಕದ ಬಗ್ಗೆ ಹೇಳುವಾಗ ಅತಿ ಬುದ್ಧಿವಂತರಿಗೂ, ಈ ಗಣಿತ ಸರಳವೆನಿಸಿದರೂ ಕೈ ಕೊಡಬಹುದೆಂಬುದಕ್ಕೆ ನ್ಯೂಟನ್ ಮಹಾಶಯನೇ ಸಾಕ್ಷಿ! ರಾತ್ರಿಯ ಹೊತ್ತು ಸುದೀರ್ಘ ಸಂಶೋಧನೆಯಲ್ಲಿ ಮುಳುಗಿರುತ್ತಿದ್ದಾಗ ಅವನು ಸಾಕಿದ್ದ ಬೆಕ್ಕುಗಳೆರಡು -ಬೇರೆ ಬೇರೆ ಸೈಜಿನವು-ತಮ್ಮ ರಾತ್ರಿ ವ್ಯವಹಾರ ಮುಗಿಸಿ ಮನೆ ಸೇರುವಾಗ ಬಾಗಿಲನ್ನು ಕೆರೆಯುತ್ತಿದ್ದು ಅವನಿಗೆ ಎದ್ದು ಹೋಗಿ ಬಾಗಿಲು ತೆರೆಯಬೇಕಾಗಿತ್ತು. ಯೋಚಿಸಿ, ಯೋಚಿಸಿ, ಕೊನೆಗೆ ಬಾಗಿಲನಡಿ ಎರಡು ರಂಧ್ರಗಳನ್ನು-ಒಂದು ಚಿಕ್ಕದು, ಚಿಕ್ಕ್ದದಕ್ಕೆ ಮತ್ತೊಂದು ದೊಡ್ಡದು ಇನ್ನೊಂದಕ್ಕೆ, ಮಾಡಿಟ್ಟನಂತೆ! ಭೌತ ಶಾಸ್ತ್ರದಲ್ಲೂ ‘ಬೋರ್’ನ ಸಿದ್ಧಾಂತವೇ ಆಗಲಿ, ಐನ್ಸ್ ಟನ್ ನ ಸಾಪೇಕ್ಷ ಸಿದ್ಧಾಂತವೇ ಆಗಲೀ, ಮಾರ್ಕ್ಸ್ ಪ್ಲಾಂಕ್ ಕಂಡು ಹಿಡಿದ ಭಾಜಕದಲ್ಲಿನ ಬಿಂದುವಿನ ನಂತರದ ಇಪ್ಪತ್ತೆಂಟು ಸೊನ್ನೆಗಳು ಆ ಸಿದ್ಧಾಂತಗಳಿಗೆ ಅದೆಂತಹ ಮಹತ್ತನ್ನು ತಂದು ಕೊಟ್ಟಿತೆಂಬುದು ಅಣು ಬಾಂಬ್ ನ ರಹಸ್ಯ ತಿಳಿದವರಿಗೇ ಗೊತ್ತು. ಆದರೆ ಶೂನ್ಯ ಶೂನ್ಯವಷ್ಟೇ. ಒಂದೆಡೆ ಅಗಾಧ, ಅಪರಿಮಿತ, ಊಹೆಗೂ ಮೀರಿದುದು, ಇನ್ನೊಂದೆಡೆ, ಭಾಜ್ಯ ಶೂನ್ಯವಾದರೆ ಎಲ್ಲವೂ ತ್ಯಾಜ್ಯ! ಇಡೀ ಪ್ರಪಂಚವೇ ಶೂನ್ಯ! ಇನ್ನು, ನಮ್ಮ ಕವಿಗಳು, ಸಾಹಿತಿಗಳ ಬಗ್ಗೆ ಸಂಶೋಧನೆ ನಡೆಸಿದರೆ ಗಣಿತದ ಬಗ್ಗೆ ಅವರುಗಳೆಷ್ಟು ದುರ್ಬಲರೋ, ಗಣಿತಕ್ಕೂ ಅವರು ಅಷ್ಟೇ ದುರ್ಲಭರೆಂಬ ಸತ್ಯಾಸತ್ಯತೆಯನ್ನು ಹೊರಗೆಡಬಹುದೆಂಬ ಗುಮಾನಿ ನನಗಿದೆ. ಅವರಲ್ಲಿ ಗಣಿತದಲ್ಲಿ ಶೂನ್ಯ ಸಂಪಾದನೆ ಮಾಡಿದವರು ಲೆಕ್ಕಕ್ಕೆ ಸಿಗದಷ್ಟು ಇರುವರೋ ಅಲ್ಲವೋ ಆದರೆ ಈ ಗುಂಪಿನವರಲ್ಲಿ ಹೆಚ್ಚಿನವರ ಧನಾರ್ಜನೆ ಸಿಗರೇಟಿನ ಧೂಮದ ವರ್ತುಲ, ವರ್ತುಲದಂತೆ(‘ಪಾ.ವೆಂ.’ ರನ್ನು ಜ್ಞಾಪಿಸಿಕೊಳ್ಳಿ) ಯಾವಾಗಲೂ ಶೂನ್ಯಕ್ಕೆ ಹತ್ತಿರ, ಹತ್ತಿರವಷ್ಟೇ! ಈ ಲೇಖಕನನ್ನು ಸಾಹಿತಿಯೆಂಬ ಗುಂಪಿಗೆ ಸೇರಿಸಕೆಂದರೆ, ಕಾರಣವೇ ಸಿಗದಿದ್ದರೂ, ಶೂನ್ಯಕ್ಕೆ ಅತಿ ಸಮೀಪದವನೆಂಬ ಅಂಶ ಸಹಾಯಕ್ಕೆ ಬಂದರೂ ಬರಬಹುದು. ಆಲಿವರ್ ಗೋಲ್ಡ್ ಸ್ಮಿತ್ ನಂತಹ ಪ್ರತಿಭಾವಂತ ತನ್ನ ಮೇರು ಕೃತಿ ‘ವಿಕಾರ್ ಆಫ್ ವೇಕ್ ಫೀಲ್ಡ್’ ಕಾದಂಬರಿಯನ್ನ ‘ಡಿಕ್ಷನರಿ’ ಖ್ಯಾತ ಸ್ಯಾಮ್ವೆಲ್ ಜಾನ್ಸನ್ ನ ಶಿಫಾರಸ್ಸು ಮೇರೆಗೆ ಪುಸ್ತಕ ಪ್ರಕಾಶಕನಿಗೆ ಒತ್ತೆ ಕೊಟ್ಟು, ಸಾಲ ತೀರಿಸಿದ ನಂತರವೇ ಜೈಲಿನಿಂದ ಹೊರಗೆ ಬರಲು ಸಾಧ್ಯವಾಯಿತು! ‘ಪ್ರಥಮ ಪ್ರಯತ್ನಕ್ಕೇ ದಂತ ಭಗ್ನ’ ಎನ್ನುವಂತೆ ‘ಶೂನ್ಯ’ ಕ್ಕೆ ಹತ್ತಿರ, ಹತ್ತಿರವಾಗಿದ್ದ( ‘ಲಿಮಿಟ್ ಥಿಯರಿ’ ಪ್ರಕಾರ ! ) ಈತನ ಅಂತಹ ಉತ್ಕೃಷ್ಟ ಸಾಹಿತ್ಯ ಅಂಗ್ಲ ಭಾಷಗೆ ಹಾಗಲ್ಲದೆ ದೊರಕುತ್ತಿತ್ತೆ? ನಮ್ಮ ಸಾಹಿತಿಗಳ ಪೈಕಿ ಹಲವು ಪ್ರಾತ:ಸ್ಮರಣಿಯರು ತಮ್ಮ ಹೆಣ್ಣು ಮಕ್ಕಳ ಮದುವೆಯ ಖರ್ಚಿಗಾಗಿ ಪ್ರಕಾಶಕರಿಗೆ ಕಾದಂಬರಿಗಳನ್ನು ಬರೆದು ಕೊಟ್ಟರೆಂದು ಕೇಳಿದ್ದೇನೆ. ಕವಿಗಳು ಯಾವ ದೇಶದವರೇ ಆಗಿರಲಿ ಎಲ್ಲ ಒಂದೇ ಬ್ರಾಂಡಿನವರೆಂಬುದು ನನ್ನ ಅಭಿಮತ. ಅವರೆಲ್ಲರಿಗೂ ಕೋಗಿಲೆ ಹಾಡುವುದೆಂದರೆ ದೇವ ಲೋಕ ಭೂಮಿಗೆ ಇಳಿದು ಬಂದಷ್ಟೇ ಅಪ್ಯಾಯವಾದದ್ದು. ನಿಜ ಸಂಗತಿಯೆಂದರೆ, ‘ನಾಯಿ ಬೊಗಳಿದರೆ ದೇವ ಲೋಕ ಹಾಳಾಗುವುದಿಲ್ಲ’ ಎನ್ನುವ ಆಡು ಮಾತಿನಂತೆ ಕೋಗಿಲೆ ಎಷ್ಟೇ ಹಾಡಿದರೂ ಸ್ವರ್ಗ ಕೈಗೆ ಎಟುಕುವುದಿಲ್ಲ ವೆನ್ನುವುದೂ ನಿಜ! ಆದರೆ ಈ ಕೋಗಿಲೆಯಷ್ಟು ನಿರರ್ಥಕ ಪಕ್ಷಿ ಬೇರೆ ಯಾವುದೂ ಇರಲಾರದು. ಹಾಡಿ, ಹಾಡಿ ತನ್ನ ಪ್ರೇಮಿಯನ್ನು ಕರೆಯುವದನ್ನು ಬಿಟ್ಟರೆ ಬೇರೆ ಯಾವ ಉದ್ಯೋಗವನ್ನು ಅರೆಸಿಕೊಂಡು ಹೋಗುವುದಿಲ್ಲ! ಮೊಟ್ಟೆ ಇಟ್ಟರೂ ಕಾಗೆಯ ಗೂಡನ್ನೇ ಅರಸುತ್ತವೆಯೆಂದ ಮೇಲೆ ಅವು ಅದೆಷ್ಟು ಪರಾವಲಂಬಿಗಳೆಂಬುದು, ಹಲವಾರು ಕವಿಗಳಂತೆಯೇ ಶೂನ್ಯ ಆರ್ಜಿತರೆಂದೂ ಎಲ್ಲರಿಗೂ ಮನವರಿಕೆಯಾಗುವ ಅಂಶ! ಮಗ ಅಥವಾ ಮಗಳು ಚಿಕ್ಕ ವಯಸ್ಸಿನಲ್ಲಿ ಪದ್ಯ ಗೀಚುತ್ತಾನೆ(ಳೆ) ಎಂದು ತಿಳಿದರೆ ಮೊದಲು ಅದನ್ನು ತಪ್ಪಿಸು, ದಾರಿ ತಪ್ಪಿಯಾರು ಎಂದು ಎಲ್ಲರೂ ಬುದ್ಧಿವಾದ ಹೇಳುವರೇ ವಿನಾ ಅದನ್ನೇ ಇನ್ನಷ್ಟು ವೃದ್ಧಿಸಿಕೊಳ್ಳಲಿ ಎಂದು ಹಾರೈಸುವುದಿಲ್ಲ! ಕಾರಣ ಈ ಶೂನ್ಯ ಸಂಪಾದನೆಯೆಂಬ ಅಡ್ಡ ಗೋಡೆ.
ಇದೆಲ್ಲ ಹಾಗಿರಲಿ, ಒಂದು ಕಾಲದಲ್ಲಿ ಮನೆಗೆ ಹಾಲು, ಮೊಸರು ತರುತ್ತಿದ್ದ ‘ನಿಂಗಮ್ಮ’ -ಹಾಲಮ್ಮ-ನಾವೆಲ್ಲ ಚಿಕ್ಕಂದಿನಲ್ಲಿ ನೀರಮ್ಮ ಎಂದು ರೇಗಿಸುತ್ತಿದ್ದುದು ಸರ್ವೇ ಸಾಮಾನ್ಯ-ನಿರಕ್ಷರ ಕುಕ್ಷಿ ಯಾದರೂ, ಆಕೆ ಸುಣ್ಣದ ಗೋಡೆಯ ಮೇಲೆ ಗೀಟುಗಳನ್ನು ಹಾಕಿ ಶಾಲೆ, ಕಾಲೇಜುಗಳಲ್ಲಿ ಓದುತ್ತಿದ್ದ ನಮಗಿಂತ ಅತ್ಯಂತ ನಿಖರವಾಗಿ ತಿಂಗಳ ಕೊನೆಗೆ ಲೆಕ್ಕ ನಮಗೇ ಹೇಳುತ್ತಿದ್ದಳೆಂದರೆ, ಗಣಿತದಲ್ಲಿ ಶೂನ್ಯ ಸಂಪಾದನೆಗೂ ದಿನವಹಿ ವ್ಯಾಪಾರದಲ್ಲಿನ ಗಣಿತಕ್ಕೂ ಸಂಬಂಧವೇ ಇಲ್ಲವೆಂದು ತೋರುತ್ತದೆ. ಹಳ್ಳಿಗಳಲ್ಲಿ ಇಂದಿಗೂ ರೈತರು ಗಣಿತ ವಿದ್ವಾಂಸರಿಗಿಂತ ಹೆಚ್ಚು ನಿಖರವಾಗಿ ನಿಮಗೆ ಕಣದಲ್ಲಿಯ ಉತ್ಪತ್ತಿಯನ್ನು ಹೇಳುತ್ತಾರೆ. ನಕ್ಷತ್ರಾಧಾರಿತ ಮಳೆ ಈ ವರುಷ ಬರಲಿಲ್ಲ, ಆದರೆ ಐದು ವರ್ಷಗಳ ಹಿಂದೆ ಬಂದಿತ್ತಲ್ಲವೆ ಎಂದು ನಿಖರವಾಗಿ ಲೆಕ್ಕವಿಡುತ್ತಾರೆ. ಇಂಥವುಗಳೆಲ್ಲವನ್ನೂ ನೋಡಿದ ಮೇಲೆ, ಶೂನ್ಯಾಧಾರಿತ ಎಳೆಯರ ಮೇಲೇಕೆ ಶಾಲೆಯಲ್ಲಿ ಈ ‘ಮಾಸ್ತರು’ ಗಳೆಂಬ ಹಿಟ್ಲರನ ಸಂತತಿಯವರು ಗಣಿತವನ್ನು ಹೇರಿ, ಹೋಮ್ ವರ್ಕ್ ಎಂಬ ಶನಿಯನ್ನು ಬೆನ್ನಿಗೆ ಹೊರೆಸಿ ಕಳುಹಿಸುತ್ತಾರೆಂಬುದು ಆ ಶನಿದೇವರಿಗೂ ಅರ್ಥವಾಗದ ವಿಷಯ. ಈಗಿನ ನಮ್ಮ ಮಕ್ಕಳು ಮೂಟೆ, ಮೂಟೆ ಪುಸ್ತಕಗಳನ್ನು ಹೊರುವುದೊಂದನ್ನು ಬಿಟ್ಟರೆ ಒಂದು ರೀತಿಯಲ್ಲಿ ಅದೃಷ್ಟವಂತರು. ಕಾನ್ವೆಂಟ್ ಸ್ಕೂಲುಗಳಿಗಾಗಿ, ತಾಯಂದರೆ ಮನೆಯಲ್ಲಿ ಮಕ್ಕಳ ‘ಹೋಮ್ ವರ್ಕ’ ಮಾಡಿ(ಸಿ) ಕಳಿಸುವ ವಾಡಿಕೆಯಿದೆಯಲ್ಲವೇ? ಸ್ವಾತಂತ್ರ ಪೂರ್ವದ ಮತ್ತು ನಂತರದ ದಿನಗಳಲ್ಲಿ ಅಂಗ್ಲರ ಆಳ್ವಿಕೆಯಿಂದಾಗಿ ಪ್ರಚಲಿತಲ್ಲಿದ್ದುದು ರುಪಾಯಿ, ಆಣೆ. ಕಾಸು. ಅದರ ಜೊತೆಗೆ ಬ್ರಿಟೀಷರಲ್ಲಿದ್ದ ‘ಪೌಂಡ್, ಶಿಲ್ಲಿಂಗ್ ಪೆನ್ನಿ’ ಲೆಕ್ಕಗಳನ್ನೂ ಮಾಡುವದಿತ್ತು, ಮಾಧ್ಯಮಿಕ ಶಾಲೆಗಳಲ್ಲಿ ಓದುವಾಗ! ಹಾಗಾಗಿ ಆಗಿನವರು ಪಡಬಾರದ ಕಷ್ಟಗಳನ್ನನುಭವಿಸಬೇಕಿತ್ತು. ಕೆಲವು ಉದಾಹರಣೆಗಳು ಹೀಗಿರುತ್ತಿದ್ದವು; ‘ಒಂದು ಬ್ಲಾಕ್ ಬರ್ಡ್( ವಿದೇಶೀ ಮಾಲು) ಪೆನ್ನಿಗೆ ಐದು ಶಿಲ್ಲಿಂಗ್ ಆರು ಪೆನ್ನಿಗಳಾದರೆ ರಾಮನು ಎಂಟು ಹಾಗು ರಂಗನು ಏಳು ಪೆನ್ನುಗಳನ್ನು ಇಬ್ಬರೂ ಕೊಂಡರೆ ಅವರು ಕೊಡಬೇಕಾದ ಒಟ್ಟು ಹಣವನ್ನು ಪೌಂಡ್ ಮತ್ತು ಶಿಲ್ಲ್ಂಗ್ ನಲ್ಲಿ ಬರೆಯಿರಿ.’ ಆಗಿನ ಕಾಲದಲ್ಲಿ- ಅದೂ ಕೆಟ್ಟ ರೇಷನ್ ಕಾಲ- ರುಪಾಯಿಗಳಿರಲಿ, ನಾಲ್ಕಾಣೆ ಬಿಲ್ಲೆಗಳನ್ನೇ ದೊಡ್ಡವರು ಇಂದಿನ ನೂರು ರುಪಾಯಿಗಳಂತೆ ಭಾವಿಸುತ್ತಿದ್ದವರು. ಇನ್ನು ಮಕ್ಕಳಿಗೆ ಆ ತೆರನ ವಿದೇಶೀ ಹಣ ಕಲ್ಪಿಸಿಕೊಳ್ಳುವದೂ ಸಾಧ್ಯವಿಲ್ಲದಾಗ, ಕೂಡಿ, ಕಳೆದು ಮತ್ತಿನ್ನೇನೋ ಮಾಡಿ, ಸರಿ ಉತ್ತರ ತೋರಿಸುವುದ ಹೇಗೆ ಸಾಧ್ಯ? ನನ್ನನು ಕಾಡುತ್ತಿದ್ದ ಸಮಸ್ಯೆ ಎಂದರೆ ‘ಬ್ಲಾಕ್ ಬರ್ಡ್’ ಪೆನ್ನು ಹೇಗಿರುತ್ತದೆ, ನಮ್ಮಪ್ಪ ನನಗೇಕೆ ಕೊಡಿಸಲಾರ ಎಂಬುದು. ಆದನ್ನ ಕೇಳಿ, ಶಾಲೆಯಲ್ಲಿ ಕೋಪಿಷ್ಟ ಮೇಷ್ಟರಿಂದಲೂ, ಮನೆಯಲ್ಲಿ ಅಪ್ಪನಿಂದಲೂ ಏಟು ತಿನ್ನುವ ಬಯಕೆ ಇಲ್ಲದೇ ಸುಮ್ಮನಿರಬೇಕಿತ್ತು. ಹೇಗೂ ತಪ್ಪು ಉತ್ತರ ಕೊಟ್ಟು ಏಟು ತಿನ್ನುವುದಂತೂ ಸತ್ಯ. ಮತ್ತೊಂದು ಲೆಕ್ಕ ಹೀಗಿರುತ್ತದೆ- ‘ಎ’ ಎಂಬುವನು ಗಂಟೆಗೆ ಒಂಭತ್ತು ಮೈಲಿ ವೇಗದಲ್ಲೂ, ‘ಬಿ’ ಎಂಬುವನು ಆರು ಮೈಲಿ ವೇಗದಲ್ಲೂ ‘ಸಿ’ ಎಂಬುವನು ‘ನಾಲ್ಕು ಮೈಲಿ ವೇಗದಲ್ಲೂ ಓಡಬಲ್ಲರು. ಸ್ಪರ್ಧೆಯೊಂದರಲ್ಲಿ ‘ಡಿ’ ಇಂದ ‘ಇ’ವರೆಗಿನ ದೂರವನ್ನು ‘ಎ’ ಯು ಇಪ್ಪತ್ತು ನಿಮಿಷಗಳಲ್ಲಿ ಕ್ರಮಿಸಿದರೆ, ‘ಬಿ’ ಮತ್ತು ‘ಸಿ’ಗಳು ಅಷ್ಟೇ ವೇಳೆಯಲ್ಲಿ ಅದೆಷ್ಟು ದೂರ ಹೋಗಿರಬಲ್ಲರು? ಇದೇ ರೀತಿಯಲ್ಲಿ ಈ ಎ, ಬೀ, ಸಿ ಗಳು ಹುಲ್ಲು ಕೀಳುವುದೋ ಇಲ್ಲವೇ, ತೊಟ್ಟಿಗಳಲ್ಲಿ ನೀರು ತುಂಬಿ, ಖಾಲಿ ಮಾಡುವುದೋ ಇಂತಹ ನಿಕೃಷ್ಟ ಕೆಲಸ ಮಾಡಿಕೊಂಡಿರುತ್ತಾರೆ. ನನ್ನಂತಹ ಹಲವು ವಿದ್ಯಾರ್ಥಿಗಳಿಗೆ ಇಲ್ಲಿ ಸಾಕಷ್ಟು ತಲೆ ಬಿಸಿಯಾಗುವಂತಹ ಜಿಜ್ಞಾಸೆಎಂದರೆ ಈ ಎ, ಬೀ,ಸೀ ಗಳಿಗಷ್ಟೇ ಇಂತಹ ಕೆಲಸಗಳನ್ನ ಕೊಟ್ಟು, ಅವರುಗಳನ್ನೇಕೆ ಕೂಲಿಗಳಾಗಿಯೇ ನೋಡಬೇಕು? ಅವರುಗಳು ಡಾಕ್ಟರುಗಳಾಗಿ ರೋಗಿಯ ಕೈ ಹಿಡಿದು ಸ್ಕೂಲಿಗೆ ಹೋಗದಂತೆಯೋ , ಸರ್ಕಾರಿ ಆಸ್ಪತ್ರೆಯಂತೆ ವಾರಕ್ಕೆ ಇಷ್ಟಿಷ್ಟು ರೋಗಿಗಳನ್ನು ಮೇಲಕ್ಕೆ ಕಳಿಸುವ ಕೋಟಾ ಪದ್ಧತಿಯಂತೋ , ಸರ್ಕಾರೀ ಕಛೇರಿಗಳಲ್ಲಿ ಲಂಚ ವಸೂಲಿಯ ಕೋಟ ಪದ್ಧಂತಿಯಂತೆಯೋ ಕಾಯಕವೇಕೆ ಕೊಡಲಿಲ್ಲ? ಅಥವಾ ನಮ್ಮ ಸಣ್ಣ ಸಣ್ಣ ತಪ್ಪುಗಳಿಗೂ ಬೆತ್ತದ ರುಚಿ ತೋರಿಸಿ, ನಮ್ಮ ತಂದೆ, ತಾಯಿಂದರಿಗೂ ದೂರು ಬರೆದು ಕಳಿಸುವ ಈ ದುರ್ದಯೀ ಮಾಸ್ಟರುಗಳಿಗೆ ಸ್ವಲ್ಪ ಹೃದಯ ಕಸಿ ಮಾಡಿ, ಕಳಿಸಬಾರದೇಕೆ? ಹೋಮ್ ವರ್ಕ್ನ್ ತೋರಿಸುವ ದಿನ ಮಾಸ್ತರಿಗೇಕೆ ರಜ ಹಾಕುವಂತಾಗಬಾರದು? ವಯಸ್ಸಾದನಂತರ ಇದೀಗ ನಮಗನಿಸುವುದು ಎಲ್ಲಾ ಲೆಕ್ಕಗಳಲ್ಲೂ ಈ ಮೂವರೊಳಗೆ ‘ಎ’ಯು ‘ಆಂಗ್ಲ ಸಾಹೇಬನ ಪ್ರತಿರೂಪನಾಗಿ, ಅಹಂಕಾರಿಯೂ, ಜಂಬಕಾರನೂ, ‘ಸೀ ಅಂತಹ ದುರ್ಬಲನಿಗೆ ಸ್ವಲ್ಪವೂ ಅಯ್ಯೋ ಎನ್ನದೆ ತನ್ನ ಸ್ವಾರ್ಥಕ್ಕಷ್ಟೆ ದುಡಿಯುವವನೂ ಆಗಿರುವದೇಕೆ? ಇದು ನಮ್ಮ ‘ಸಾಮಾಜಿಕ ಸಮಾನತ್ವದ’-ಸೋಷಿಯಲಿಸ್ಟಿಕ್ ಪ್ಯಾಟರ್ನ್- ತತ್ವಕ್ಕೆ ವಿರುದ್ಧವಲ್ಲವೇ? ‘ರಿಸರ್ವೇಷನ್’ ಘೋಷಿಸಿ, ಆ ಮೂಲಕ, ಕಡ್ಡಾಯ ‘ಸುಗ್ರೀವಾಜ್ಞೆ’ ತಂದು ಎ’ ಯು ‘ಸೀ’ ಗಿಂತ ಯಾವಾಗಲೂ ಕಮ್ಮಿ ವೇಗದಲ್ಲಿ ಓಡುವಂತೆಯೋ, ಮುಗ್ಗರಿಸುವಂತೆಯೋ ಮಾಡಿ, ’ಸೀ’, ’ಬಿ’ ಗಳಿಬ್ಬರಿಗೂ ‘ಸಾಮಾಜಿಕ ನ್ಯಾಯ’ ವನ್ನ ಒದಗಿಸಬಹುದಿತ್ತಲ್ಲವೋ? ‘ಬಿ’ಯೂ ಸ್ವಲ್ಪ ಮಟ್ಟಿಗೆ ಏದುತ್ತಾ ಇದ್ದರೂ, ಉಸಿರಾಡಲೂ ಆಗದೆ, ಓಡಲೂ ಆಗದೆ ತೇಕುತ್ತಾ, ನಿಂತಲ್ಲೇ ನಿಲ್ಲುವ, ಬೆವರು ಸುರಿಸುವ ‘ಸೀ’ಯ ಅಸಹಾಯಕ ಸ್ಥಿತಿಗೆ ನೊಂದು, ಆಗಾಗ್ಗೆ ‘ಸೀ’ಗೆ ಕಂಡಲ್ಲಿ ಕೈ ಹಿಡಿದು ಸಹಾಯ ಮಾಡುತ್ತಿದ್ದವನು. ಆದ್ದರಿಂದ ‘ಬಿ’ಯ ಸಾಮಾಜಿಕ ಕಳಕಳಿಗೆ ಮೆಚ್ಚಿ ಅವನಿಗೆ ‘ಮರಣೋತ್ತರ ಸ್ಮಾರಕವನ್ನೋ, ಅವನ ಹೆಸರಿನಲ್ಲಿ ‘ಜ್ಞಾನ ಪೀಠ’ದಂತಹ ರಾಷ್ಟ್ರೀಯ ಬಿರುದುಗಳನ್ನು ಸ್ಥಾಪಿಸಲಿಲ್ಲವೇಕೆನ್ನುವ ಪಾಪ ಪ್ರಜ್ಞೆ ಮೂಡುತ್ತದೆ. ಏನಾದರೇನು, ‘ಸೀ’ ಅಂತಹವರ ‘ಶೂನ್ಯ ಆರ್ಜಿತರ’ ಹಿತವೇ ಮುಖ್ಯವಾಗಿ, ಎಲ್ಲರೂ ಆ ದಿಕ್ಕಿನಲ್ಲೇ ನಡೆದು, ನಮ್ಮ ಈ ‘ನ್ಯಾಯ ಪ್ರಜ್ಞೆ’ಗೆ ‘ಸಾಮಾಜಿಕ ಸಮಾನತೆ’ಯ ಬದ್ಧತೆಯನ್ನು ಕೊಟ್ಟಂತಾಗುತ್ತದೆ. ಎಲ್ಲಾ ಓಟಗಳಲ್ಲೂ ‘ಸೀ’ ಅಂತಹವರಿಗೇ ಪ್ರಥಮ ಬಹುಮಾನ ಘೋಷಿಸಬೇಕು. ಇಂತಹ ಕಳಕಳಿಯನ್ನ ಹೊತ್ತು ಊರೂರು ತಿರುಗಿ ಪ್ರಚಾರ ಮಾಡುವ ಹುಮ್ಮಸ್ಸಿನಲ್ಲಿರುವ ‘ಬುದ್ಧುಜೀವಿ’ಗಳ- ಕ್ಷಮಿಸಿ ತಪ್ಪಾಗಿದೆ – ಬುದ್ಧಿ ಜೀವಿಗಳ ಶ್ರಮ ಸಾರ್ಥಕವಾಗುತ್ತದೆ. ಅಂತಹ ಬುದ್ಧಿಜೀವಿಗಳನ್ನು ಮತ್ತಷ್ಟು ಪ್ರಚೋದಿಸಲು ಇನ್ನಷ್ಟು ‘ಜ್ಞಾನ ಪೀಠ’ಕ್ಕೂ ಮೀರಿದಂತಹ ಪುರಸ್ಕಾರಗಳನ್ನು ಸೃಷ್ಟಿಸಿ ಅವರುಗಳಿಗಷ್ಟೇ ಮೀಸಲಿಡಬಾರದೇಕೆ? ಇಲ್ಲಿ ಇನ್ನೂ ಒಂದು ಸಾರ್ಥಕ ವಿಷಯವೆಂದರೆ ಇಡೀ ಪ್ರಪಂಚಕ್ಕೇ ‘ಶೂನ್ಯ’ ದ ಯೋಗ್ಯತೆಯನ್ನು ಪರಿಚಯಿಸಿದ್ದೇ ನಮ್ಮ ಭಾರತ. ಅದರ ಬೆಲೆ ಅಗಾಧವಾದದ್ದು, ಅದನ್ನೇ ‘ಪುರುಷ’ಎಂತಲೂ- ‘ಪುರುಷಮೇವೇದಗಂ ಸರ್ವಂ’ ಎಂತಲೂ, (ಈಶಾವಾಸ್ಯ) ಉಪನಿಷತ್ತಿನ ‘ ಓಂ, ಪೂರ್ಣಮದ: ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ/ ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ//’ ಎಂತಲೂ, ದೈವಜ್ಞ ‘ಭಾಸ್ಕರಾಚಾರ್ಯನು ಈ ಮಹತ್ವದ ‘ಶೂನ್ಯ’ವನ್ನ ಕಂಡು ಹಿಡಿದು, ಇಡೀ ಲೋಕಕ್ಕಲ್ಲದೆ, ಶೂನ್ಯ ಸಂಪಾದಿತರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟದ್ದು ನಿಜವಲ್ಲವೇ!-ಮೇ ಹಿಸ್ ಟ್ರೈಬ್ ಇಂಕ್ರೀಸ್-
Comments