top of page

ಮರೆವೋ, ವರವೋ, (ಲಲಿತ ಪ್ರಬಂಧ /ಹರಟೆ)

  • haparna
  • Jan 5, 2015
  • 4 min read

ಮರೆವೋ, ವರವೋ, (ಲಲಿತ ಪ್ರಬಂಧ /ಹರಟೆ)- by H.R.Hanumantha Rau,  This essay was Published in January 2015 issue of “APARANJI” Kannada  Humour Mthly. Magazine. 

ಕಾಲೇಜಿನ ವಾತಾವರಣ. ವಿದ್ಯಾರ್ಥಿಗಳದೇ ಒಂದು ಪ್ರಪಂಚವಾದರೆ, ಉಪನ್ಯಾಸಕರುಗಳದೇ ಒಂದು ಲೋಕ. ಪಿರಿಯಡ್ಡುಗಳ ಮಧ್ಯೆ ವಿಶ್ರಮಿಸಲು ಮತ್ತು ಮುಂದಿನ ಪ್ರವಚನಗಳಿಗೆ ಸಿದ್ಧವಾಗಲು ಉಪನ್ಯಾಸಕರುಗಳಿಗೆ ಮೀಸಲಾದ ಕಾಮನ್ ಕೊಠಡಿಯಲ್ಲಿ(ಸ್ಟಾಫ್ ರೂಂ) ಆಪರೂಪಕ್ಕೊಮ್ಮೊಮ್ಮೆ ಎಲ್ಲರೂ ಒಟ್ಟಿಗೇ ಸೇರುವುದುಂಟು. ಅಂತಹ ಸಮಯಗಳಲ್ಲಿ ಆಗಾಗ್ಗೆ ಕಾಲೇಜಿನ ಆಗು ಹೋಗುಗಳು, ಬಿಸಿಬಿಸಿಯಾದ ಇಲ್ಲವೇ ಪಾಂಡಿತ್ಯ ಪೂರ್ಣ ಸಂವಾದಗಳು, ವಿಷಯ ಪ್ರತಿಪಾದನೆಗಳ ಮಂಡನೆ, ಖಂಡನೆ ಹಾಗು ಪರಸ್ಪರ ಕಿಚಾಯಿಸಲೆಂದೇ ತಯಾರಾಗುವ ತರ್ಕ,ವಿತರ್ಕ, ಕುತರ್ಕಗಳು ಮನರಂಜನೆಗೆ ಸಿಕ್ಕುವ ಸಾಕಷ್ಟು ಸಾಮಗ್ರಿಗಳು.

ಇಂತಹ ಹರಟೆಗಳ ಮಧ್ಯೆ ಒಂದು ಬಾರಿ, ನಮ್ಮ ಮಾತು ಎಲ್ಲೆಲ್ಲಿಯೋ ಸುತ್ತಿ. ‘ಮರೆಗುಳಿ’ಗಳ ಬಗೆಗೆ ಹೊರಳಿ, ಸುದೀರ್ಘವಾಗಿಯೇ ಚರ್ಚೆ ನಡೆದುಹೋಯಿತು. ಎಲ್ಲ ಪ್ರೊಫೆಸರುಗಳನ್ನು ಮರೆಗುಳಿಗಳೆಂದು ಸಾಮಾನ್ಯರು ಭಾವಿಸಿರುವುದುಂಟು. ನಮ್ಮ ವಿ.ಟೀ.ಡೀ.(ಭೌತ ಶಾಸ್ತ್ರ ಉಪನ್ಯಾಸಕರು) ಪ್ರಕಾರ ಅದು ಖಂಡಿತ ಸರಿಯಲ್ಲ, ವಿದ್ಯೆಗೆ ಬೆಲೆಕೊಡುವವರು ಅವರ ಜ್ಞಾನ ವೃದ್ಧಿಗಾಗಿ, ಹಾಗು ತಮ್ಮ ಲೇಖನ, ಉಪನ್ಯಾಸ, ವಿಮರ್ಶೆಯ ಪ್ರತಿಪಾದನೆಗಳಲ್ಲಿ ನಿಖರತೆ ಹಾಗು ಸ್ಪಷ್ಟತೆಗಾಗಿ ಪುಸ್ತಕಗಳ ಮಧ್ಯೆಯೋ, ಆಳವಾದ ಅಧ್ಯಯನದಲ್ಲಿ ನಿರತರಾಗಿಯೋ, ದೀರ್ಘ ಆಲೋಚನೆಗಳಲ್ಲೋ ತಲ್ಲೀನರಾಗಿಬಿಡುವುದುಂಟು, ಅಮುಖ್ಯತೆಯ ಆಧಾರದಮೇಲೆ ಇತರ ವಿಷಯಗಳು ಗೌಣವಾಗಿ, ಕಂಡವರಿಗೆ ಉದಾಸೀನರಾಗಿಯೋ, ಮರೆಗುಳಿಗಳಾಗಿಯೋ ತೋರಬಹುದೆಂದು ವಾದಿಸಿದರು. ಈ ತರ್ಕಕ್ಕೆ ಆತನೂ ಕಾರಣವಾಗಿದ್ದು, ವಿದ್ಯಾರ್ಥಿಗಳಲ್ಲಿ ಅವರ ಬಗ್ಗೆ ‘ಮರೆಗುಳಿ’ ಬಿರುದು ಹರಡಿದ್ದುದು ಗುಟ್ಟೇನು ಆಗಿರಲಿಲ್ಲ! ಈ ಮಾತಿಗೆ ಸೊಪ್ಪು ಹಾಕದ ಮತ್ತೊಬ್ಬರು(ಕೆ.ಎನ್.ಅರ್ .-ಗಣಿತ) ತಮ್ಮದೇ ಮಾತಿನಲ್ಲಿ ಖಂಡ ತುಂಡವಾಗಿ ವಿರೋಧಿಸಿದರು. ಮರೆವಿಗೂ ಜ್ಞಾನಾರ್ಜನೆಗೂ ಎಲ್ಲಿಂದೆಲ್ಲಿಯ ಸಂಬಂಧ? ಹಾಗಿದ್ದಲ್ಲಿ, ತಮ್ಮ ವಿಷಯ ಪ್ರತಿಪಾದನೆ ಮಂಡಿಸುವಾಗಲೂ ಮರೆವು ಸಹಜವಾಗಿ ಕೈಕೊಡುವುದಿಲ್ಲವೆ? ಈ ಪರ, ವಿರೋಧೀ ತರ್ಕಕ್ಕೆ ಮತ್ತಷ್ಟು ಉರಿ ಹಾಕಿದವರು ನನ್ನ ಆತ್ಮೀಯ ಗೆಳೆಯರಾದ ಟಿ.ಎಸ್.ಕೆ.(ಸಂಸ್ಕೃತ ವಿದ್ವಾಂಸ). ಅವರ ಅಭಿಪ್ರಾಯದಲ್ಲಿ ವಿಜ್ಞಾನ ಬೋಧಿಸುವವರಲ್ಲಿ ಶೇಕಡ ಅರವತ್ತು ಮಂದಿಯಾದರೂ ವಿವಿಧ ಹಂತದ ಮರೆಗುಳಿಗಳೆಂದು ಸಾರಾ ಸಗಟಾಗಿ ತೀರ್ಮಾನವನ್ನೆ ‘ಸುಗ್ರೀವಾಜ್ಞೆ’ಯ ತರಹ ತೇಲಿಬಿಟ್ಟರು! ಮತ್ತೊಬ್ಬರು ಇವರನ್ನೇ ಕೇಂದ್ರವಾಗಿಟ್ಟುಕೊಂಡು, ಭಾಷಾ ಪಂಡಿತರುಗಳು ಯಾರಿಗೂ ಸಲ್ಲದ ಭಾವ ಪ್ರಪಂಚದಲ್ಲಿ ತಲ್ಲೀನರಾಗಿ ಅರೆ ಹುಚ್ಚರಾಗಿಯೂ ವರ್ತಿಸುವುದುಂಟೆಂದು ಕಾಲೆಳದರು. ಅವರ ಅಭಿಪ್ರಾಯದಲ್ಲಿ ‘ಕವಿಗಳು ಸಂಪೂರ್ಣವಾಗಿ, ಪಂಡಿತರು ಅರೆ ಹುಚ್ಚಿನ ‘ಅಂಚಿ’ನಲ್ಲಿರುವವರು. ಇಲ್ಲಿಂದಾಚೆಗೆ ಎಲ್ಲರೂ ಒಟ್ಟಿಗೇ ಏರಿದ ಧ್ವನಿಯಲ್ಲಿ ಪರ, ವಿರೋಧ ಮಾತಾಡಲು ನಡೆದ ಕೋಲಾಹಲದ, ಅಬ್ಬರ ಮಾತು ಇನ್ನೊಬ್ಬರಿಗೆ ತಾಕಲಾರದಷ್ಟು ತಾರಕಕ್ಕೇರಿ, ತಮಾಷೆಗಾಗಿ ಪರಸ್ಪರ ಕಾಲೆಳಯಲು ಹೋಗಿ, ವಿಕೋಪಕ್ಕೆ ತಿರುಗಿ, ಇಡೀ ಕೊಠಡಿಯಿಂದ ಮೇಲಿನ ಮಹಡಿಯಲ್ಲಿದ್ದ ಪ್ರಿನ್ಸಿಪಾಲರ ಕಿವಿಗೂ ಮುಟ್ಟಿತು. ಅವರಿಂದ ಅಟೆಂಡರ್ ಅಂತೋಣಿ ತಂದು ಕೊಟ್ಟ ‘ಮೆಮೋ’ ಕೂಡ ಯಾರ ಗಮನಕ್ಕೂ ಬಂದಿರಲಿಲ್ಲ. ಈ ವೇಳೆಗೆ ಮಧ್ಯಾನ್ಹದ ಕೊನೆಯ ಘಂಟೆಯಾಗುತ್ತಿದ್ದಂತೆ, ಒಬ್ಬೊಬ್ಬರೂ ತಮ್ಮತಮ್ಮ ಪರಿಕರಗಳನ್ನು ಹೊತ್ತು ಹಾಲಾಹಲದ ಮಧ್ಯೆಯೇ – ಮಾತಿನ ದಾಂಧಲೆ- ಎಂದು ವರ್ಣಿಸುವುದು ಈ ‘ಜ್ಞಾನ ದಾ(ನಿ)ಹಿ’ ಗಳಿಗೆ ಅಪಚಾರವಾದೀತು! – ಹೊರಡಲನುವಾದರು.

ಮಾರನೆಯ ದಿನ ರವಿವಾರವಾಗಿದ್ದು ಮತ್ತೆ ಎಲ್ಲರೂ ಸೋಮವಾರ ಹತ್ತು ಗಂಟೆಗೆ ಸರಿಯಾಗಿ ಕಾಲೇಜು ಒಳಹೊಕ್ಕುತ್ತಲೆ, ಪ್ರಿನ್ಸಿಪಾಲರನ್ನು ಅವರ ಕೊಠಡಿಯಲ್ಲಿ ಕಾಣಲು ಆದೇಶ ಬಂತು. ಇದೀಗ ನಮ್ಮ ಪ್ರಾಧ್ಯಾಪಕರುಗಳು ಹಿಂದೆ ಮಾಡಿದ ತಪ್ಪಿನ ಅರಿವಾಗಿ ಗಿಲ್ಲಿಟೋನಿಗೆ ತಲೆ ಕೊಡುವ ಸಮಯ ನೆನೆಸಿಕೊಂಡು, ಅಳುಕುತ್ತಲೇ ಸಾಮೂಹಿಕವಾಗಿ ಅವರ ಕೊಠಡಿಯನ್ನು ಹೊಕ್ಕರು. ಎಲ್ಲರೂ ಸೇರಿದ ನಂತರ ಪ್ರಿನ್ಸಿಪಾಲರು ನಮ್ಮ ಕಡೆ ನೋಡಿ ದೇಶಾವರಿ ನಗೆ ನಕ್ಕು ಹೇಳಿದರು –”ಇದೀಗ ಹೇಳಿ, ನೀವೆಲ್ಲ ಯಾವ ನಿರ್ಧಾರಕ್ಕೆ ಬಂದಿರಿ ಮೊನ್ನೆಯ ಚರ್ಚೆ ಕೊನೆ ಮುಟ್ಟಿದ್ದರೆ?”– ಎಲ್ಲರೂ ಒಂದು ಕ್ಷಣ ಸ್ತಂಬೀಭೂತರಾದರು. ಶಾಲೆಯ ಹುಡುಗ ತನ್ನ ತಪ್ಪಿನಿಂದಾಗಿ ಮೇಷ್ಟರ ಕೋಲಿನ ರುಚಿಗಾಗಿ ಸರದಿಯಲ್ಲಿ ಕಾಯುತ್ತಿದ್ದಂತೆ, ಅವರ ಬಿಸಿ ಅಪ್ಪುಗೆಯಿಂದ ಆ ಬಾಲಕನ ಮೇಲೆ ಯಾವ ಪರಿಣಾಮವಾಗುತ್ತಿತ್ತೋ, ಆ ಅನುಭವ ನಮಗೂ ಆಗಿದ್ದರಲ್ಲಿ ಅತಿಶಯವೇನು? ಈ ಮಾತು ಅರಗಿಸಕೊಳ್ಳಲು ಕೆಲವು ಕ್ಷಣಗಳೇ ಹಿಡಿಯತಾದರೂ, ಒಬ್ಬಬ್ಬರೂ ಛಳಿ ಬಿಟ್ಟು, ಕ್ಷಮಾಪಣೆ ಕೇಳಿಕೊಳ್ಳಲು ಮುಂದಾದರು. ನಮ್ಮ ಮಾತನ್ನು ಅಲ್ಲಿಗೇ ತಡೆ ಹಿಡಿದು, ಅವರು ಮುಂದುವರೆಸಿದರು “ ನೀವು ಅಧ್ಯಾಪಕರುಗಳು ಕ್ಷಮೆ ಕೇಳುವುದು ಸರ್ವಥಾ ಸರಿಯಲ್ಲ, ಅಲ್ಲಿಗೇ ಬಿಡಿ, ಆದರೆ ಮರೆವೆಯೆನ್ನುವುದೂ ಒಂದು ಮನೋದೈಹಿಕ ಚಟುವಟಿಕೆ. ನಮ್ಮ ದಿನ ನಿತ್ಯದ ಆಗುಹೋಗುಗಳೆಲ್ಲವನ್ನೂ ಜ್ಞಾಪಕವಿಟ್ಟುಕೊಳ್ಳುವುದು ಮೂರ್ಖತನವಲ್ಲದೇ ಮತ್ತೇನು? ನಮ್ಮ ದೇಹ ಅನಾವಶ್ಯಕವಾದದ್ದನ್ನು ಹೇಗೆ ಹೊರಹಾಕುವುದೋ ಹಾಗೆಯೇ ಮನಸ್ಸು ಬೇಡವಾದ್ದನ್ನು ತಿರಸ್ಕರಿಸುತ್ತದೆ. ಆದರೆ, ನಮ್ಮ ಕಂಪೂಟರ್ನಲ್ಲಿಯಂತೆ ಅನೇಕ ವರ್ಷಗಳ ಹಿಂದೆ ನಡೆದಿದ್ದ ಯಾವುದೋ ಸಂಗತಿಯನ್ನೂ ನೀವು ಎಷ್ಟು ಯೋಚಿಸಿದರೂ ನೆನೆಪಿಗೆ ಬರದಿದ್ದರೂ, ಮತ್ತ್ಯಾವುದೋ ಗಳಿಗೆಯಲ್ಲಿ ನಿಮ್ಮ ಬಾಯಿಂದ ಹೊರಬೀಳುವುದಿಲ್ಲವೇ? ನಾವು ನೆನಪಿನಲ್ಲಿ ಉಳಿಸಿಕೊಳ್ಳಲೇಬೇಕಾದ ಮತ್ತು ಸಮಯಕ್ಕೆ ಸರಿಯಾಗಿ ಹೊರಗೆಡವಲೇಬೇಕಾದಂತಹ ವಿಷಯಗಳನ್ನು ಶೇಖರಿಸಿ, ನೆನಪಿನಲ್ಲಿಟ್ಟುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಷ್ಟೆ. ಅದರ ಬಗ್ಗೆ ಕಾಳಜಿ ವಹಿಸಿದರೆ ಎಲ್ಲವೂ ಸುಸೂತ್ರ, ಇಲ್ಲವೇ ಅಪಮಾನ ಹಾಗು ಅಪನಿಂದೆಗೆ ಗುರಿಯಾಗುತ್ತೇವೆ. ವಯಸ್ಸಾಗುತ್ತಾ ಬಂದಂತೆ ಅಂಗಾಂಗಗಳು ನಶಿಸಿ, ಕಾರ್ಯಕ್ಷಮತೆ ಕಮ್ಮಿಯಾಗಿ, ಜ್ಞಾಪಕ ಶಕ್ತಿಯೂ ಕ್ಷೀಣಿಸಬಹುದಷ್ಟೆ. ನಿಮ್ಮ ಕೆಲವು ಮಿತ್ರರ ಪ್ರಕಾರ, ಪ್ರೊಫೆಸರ್ ಆಗಿರುವುದರಿಂದ ನಾನೂ ಒಬ್ಬ ‘ಮರೆಗುಳಿ’ಯೆ. ಇದೀಗ ಹೇಳಿ, ಇಲ್ಲಿ ವಯಸ್ಸಾದವರು ಎಷ್ಟು ಮಂದಿ, ಅದೂ ನನಗಿಂತ? ನಿಮ್ಮಲ್ಲಿ ನಲವತ್ತರ ಆಜುಬಾಜುನಲ್ಲಿರುವವರೇ ಹೆಚ್ಚು. ಮೊನ್ನೆ ನಿಮ್ಮ ಮಾತಿನ ಗೊಂದಲದ ನಡುವೆ ನಾನು ಕಳಿಸಿದ್ದ ‘ಮೆಮೊ’ ಎಷ್ಟು ಜನ ಬಲ್ಲಿರಿ ಹಾಗು ಯಾರು ಅದನ್ನು ಓದಿದ್ದೀರಿ?”. ಮತ್ತೆ, ಎಲ್ಲರೂ ಸ್ತಬ್ಧ. ಅಟೆಂಡರ್ ಅಂತೋಣಿ ಬಂದು ‘ಮೆಮೊ’ ಕೊಟ್ಟು ಎತ್ತರದ ಧ್ವನಿಯಲ್ಲಿ ಎಚ್ಚರಿಸಿ ಹೋದರೂ, ಯಾರು ಅದಕ್ಕೆ ನಿಗಾ ಕೊಟ್ಟಿರಲಿಲ್ಲ. “ಅಂದಮೇಲೆ ನಿಮಗೆಲ್ಲ ಜ್ಞಾಪಕ ಕಮ್ಮಿ, ಮರೆವು ಜಾಸ್ತಿಯಾಗಿದೆ ಎಂದು ಭಾವಿಸಲೇ? ಇಲ್ಲವೆ ಅಗೌರವ ತೋರಿಸಿದಿರಿ ಎಂದು ಆಕ್ಷೇಪಿಸಲೆ? ನಾರಾಯಣರಾವ್, ಆ ‘ಮೆಮೊ’ ದಲ್ಲೇನಿದೆಯೋ ಜೋರಾಗಿ ಎಲ್ಲರಿಗೂ ಓದಿ ಹೇಳಿ”. ಆ ಪತ್ರದ ಸಾರಾಂಶವಿಷ್ಟು – ‘ವಿದ್ಯಾರ್ಥಿಗಳಿಗೆ ತಮ್ಮ ಜವಾಬ್ದಾರಿಯನ್ನು ಅರಿಯುವಂತೆ ಮಾಡಿ, ಮಾರ್ಗ ದರ್ಶಕರಾಗಿಯೂ, ಉತ್ತಮ ಪ್ರಜೆಗಳಾಗಿ ರೂಪಿಸುವುದೂ ಪ್ರಾಧ್ಯಾಪಕರುಗಳ ಕರ್ತವ್ಯವೆನ್ನುವುದು ಎಲ್ಲರೂ ಒಪ್ಪುವುದಾದರೆ, ಕ್ಷುಲ್ಲಕ ಕಾರಣಗಳಿಗಾಗಿ ಇಡೀ ಕಾಲೇಜಿನ ಸೂರು ಕಿತ್ತು ಹೋಗುವ ಹಾಗೆ ಕೂಗಾಡಿದ ಮಾತ್ರಕ್ಕೆ ಚರ್ಚೆಯಿಂದ ಗುರಿ ಮುಟ್ಟಿಲಾಗುವುದೆ? ಹಾಗಿಲ್ಲವಾದಲ್ಲಿ ಕೂಡಲೇ ಜವಾಬ್ದಾರಿಯನ್ನು ಅರಿತು ಶಿಸ್ತನ್ನು ಈ ಕ್ಷಣದಿಂದಲೇ ರೂಢಿಸಿಕೊಳ್ಳುವುದು ಜರೂರು ಅತ್ಯವಶ್ಯಕ. ತಪ್ಪಿದಲ್ಲಿ ಕಾಲೇಜಿನ ನಿಯಮಾನುಸಾರ ಮುಂದಿನ ಕ್ರಮ ಜಾರಿಮಾಡಲಾಗುವುದು — ಎಲ್ಲರೂ ಮುಂದಿನ ಕೆಲಸಗಳಿಗೆ ಹೊರಡಬಹುದು’

ಮರೆವು ಅನೇಕ ವೇಳೆ ಅನುಕೂಲಕ್ಕೆ ಬರುವುದೂ ಇದೆ. ನಮ್ಮ ಕಾಲೇಜಿನಲ್ಲಿ ಡೆಮಾನ್ಸ್ ಟ್ರೇಟರ್ ಹುದ್ದೆ ಖಾಲಿ ಇದ್ದು ಅದಕ್ಕೆ ತುಂಬಲು ಜಾಹಿರಾತು ಮಾಡಿದ್ದರು. ನಮ್ಮ ಬಂಧುವೊಬ್ಬರು ಅದನ್ನ ಕಂಡು ತನ್ನ ಮಗನಿಗೆ ಕೊಡಿಸುವಂತೆ ನನಗೆ ಗಂಟು ಬಿದ್ದರು. ಪ್ರಿನ್ಸಿಪಾಲರು ಯಾರ ಮಾತಿಗೂ ಸೊಪ್ಪು ಹಾಕುವವರಲ್ಲವೆಂದು ಎಷ್ಟು ಹೇಳಿದರೂ ಅವರ ಹಠ ಬಿಡಲಿಲ್ಲ. ಹಾಗಾಗಿ ‘ಸರಿ, ಆ ಹುಡುಗನನ್ನ ನನ್ನ ಬಳಿ ಕಳುಹಿಸಿ, ವಿವರವಾಗಿ ಅವನ ಬಗ್ಗೆ ತಿಳಿದು ಪ್ರಯತ್ನಿಸುವೆ’ ಎಂದು ಹೇಳಿ ಸಾಗಹಾಕಿದೆ. ನಂತರ ನನಗೆ ತಿಳಿದಿದ್ದೇನೆಂದರೆ ಆ ಹುಡುಗ ಆ ಹುದ್ದೆಗೆ ಯಾವ ರೀತಿಯಲ್ಲೂ ಅರ್ಹನಾಗಿರಲಿಲ್ಲ. ಹೀಗಿದ್ದು ಶಿಫಾರಸು ಮಾಡಲು ಹೋಗಿ ಪ್ರಿನ್ಸಿಪಾಲರಿಂದ ತಿರಸ್ಕಾರಕ್ಕೆ ನಾನು ಗುರಿಯಾಗುವುದು ಸುತರಾಂ ಇಷ್ಟವಾಗಲಿಲ್ಲ. ಆಯ್ಕೆ ಸಮಿತಿಗೆ ನನ್ನನ್ನು ಕರೆದಿದ್ದರೂ, ಯಾವುದೋ ಕಾರಣ ಹೇಳಿ ತಪ್ಪಿಸಿಕೊಂಡೆ. ಇಂಟರ್ವ್ಯೂ ವೇಳೆ ಆ ಹುಡುಗನ ಅಜ್ಞಾನಕ್ಕೆ ಪ್ರಿನ್ಸಿಪಾಲರು ಬಯ್ಯದಿದ್ದರೆ ಅದಷ್ಟೆ ಅವನ ಅದೃಷ್ಟ. ನಂತರ ಹಲವು ದಿನಗಳ ಮೇಲೆ ಆ ಬಂಧುವಿಗೆ ಸಮಜಾಯಿಷಿ ಹೇಳಬೇಕಾದಾಗ, ನಾನು ಆ ದಿನ ಬೇರೆ ಅತಿ ಮುಖ್ಯ ಕೆಲಸದ ಮೇಲೆ ಕಾಲೇಜು ಬಿಟ್ಟು ಹೊರಹೋಗಬೇಕಾಗಿ ಬಂದು, ಪ್ರಿಸಿಪಾಲರಿಗೆ ಜ್ನಾಪಿಸುವುದನ್ನು ಮರೆತೇಬಿಟ್ಟೆ. ಕ್ಷಮಿಸಿ, ಎಂದು ಹೇಳಿ ಕೈ ತೊಳೆದುಕೊಂಡಿದ್ದುಂಟು. ನಿಜವನ್ನ ಮರೆಮಾಚಲು ‘ಮರೆವನ್ನು’ ಆಶ್ರಯಿಸಿ ಅಸತ್ಯವನ್ನ ಹೇಳಬೇಕಾದದ್ದು ಎಂತಹ ವಿಪರ್ಯಾಸ! ಮರೆವು ಪುರಾಣ, ಪುಣ್ಯ ಕಥೆಗಳನ್ನೂ ಬಿಟ್ಟಿಲ್ಲ. ದುಷ್ಯಂತ ಮರೆವಿನಂದಾಗಿ-ಅದು ಯಾವ ಶಾಪವೇ ಆಗಿರಲಿ- ಶಕುಂತಲಗೆ ಕೈ ಕೊಟ್ಟದ್ದು ಕಾಳಿದಾಸನ ಮಹಾ ಕಾವ್ಯ ‘ಅಭಿಜ್ಞಾನ ಶಾಕುಂತಲ’ಕ್ಕೆ ಕಾರಣವಾಯಿತಷ್ಟೆ. ಇಲ್ಲವಾದಲ್ಲಿ ಎಂತಹ ಸುಂದರ ಕೃತಿ ಇಡೀ ಲೋಕಕ್ಕೆ ಅಲಭ್ಯವಾಗುತ್ತಿತ್ತಲ್ಲವೇ? ಕಚೇರಿಗಳಲ್ಲೂ, ಹಿಂದಿನ ದಿನ ‘ಬಾಸ್’ ಹೇಳಿದ್ದ ತುರ್ತು ಕೆಲಸ ಇತರ ಚಟುವಟಿಕೆಗಳ ಮಧ್ಯೆ ಮರೆತಾಗಲೋ, ಮಾಡಲಾಗದುದಕ್ಕೋ ಅವರಿಂದ ಪಡೆವ ಚುಚ್ಚು ಮಾತಿನ ಶಿಕ್ಷೆ, ಅಪಮಾನ ಗೌರವಸ್ತರಿಗೆ ನುಂಗಲಾರದ ತುತ್ತು. ನನ್ನ ಸಹ ಉದ್ಯೋಗಿಯೊಬ್ಬರು ಒಮ್ಮೆ ತುಂಬ ಅರ್ಜೆಂಟಾಗಿ ಎರಡು ಸಾವಿರ ರೂಪಾಯಿಗಳು ಬೇಕಾಗಿದೆಯೆಂದೂ, ಅವರ ಬಳಿ ಇದ್ದ ಹಣ ಹೆಂಡತಿ ತೌರಿಗೆ ಹೋಗುವಾಗ ಕೊಟ್ಟು ಕಳುಹಿಸಿ, ಪೇಚಿನಲ್ಲಿದ್ದೇನೆಂದು ಅಲವೊತ್ತುಕೊಂಡರು. ಇದೀಗ ಆರು ತಿಂಗಳಾದರೂ ನನಗೆ ಹಣ ವಾಪಸ್ಸು ಕೊಟ್ಟಿದ್ದಿಲ್ಲ. ನನ್ನ ನೋಡುತ್ತಲೇ ಆತನೇ ಜ್ಞಾಪಿಸಿಕೊಂಡು ‘ಅಯ್ಯೋ,ಈ ಸಲಿಯೂ ಮರೆತೇಬಿಟ್ಟೆ ಕಣಯ್ಯ, ಮುಂದಿನ ಸಂಬಳದಲ್ಲಿ ಗ್ಯಾರಂಟಿ ಕೊಟ್ಟುಬಿಡುವೆ’ ಎಂದು ನಾನು ಅವರನ್ನ ಕೇಳದಿದ್ದರೂ ಗೋಳಾಡಿದ್ದರು! ನನ್ನ ಗ್ರಹಚಾರ, ನಾನೇ ಅವರನ್ನು ಸಮಾಧಾನಪಡಿಸಬೇಕು! ಮನೆಯಿಂದ ಪೇಟೆಗೆ ಹೋಗುವಾಗ ನನ್ನ ಹೆಂಡತಿ ‘ಅದು ತನ್ನಿ, ಇದು ತನ್ನಿ’ಎಂದು ಉದ್ದನೆಯ ಪಟ್ಟಿಯನ್ನೇ ಹೇಳಿ ಕಳುಹಿಸುತ್ತಾಳೆ. ಬಜಾರಿನಲ್ಲಿ ಕೊಳ್ಳುವಾಗ, ಒಂದೆರೆಡೆನ್ನಾದರೂ ಮರೆತು ಬಂದು, ಅನೇಕ ಸಲ ಅವಳ ತೀಕ್ಷ್ಣ ನಾಲಿಗೆಯ ಪ್ರಹಾರಕ್ಕೆ ಬಲಿಯಾಗಿದ್ದನ್ನ ನಾಚಿಕೆಯಿಲ್ಲದೆ ನಾನೇ ಹೇಳಿಬಿಡುತ್ತೇನೆ. ಇದೇ ಕಾರಣವಾಗಿ ಮಕ್ಕಳಿಗೆ ಬೇಕಾಗುವ ತಮ್ಮ ಪಠ್ಯಪುಸ್ತಕ, ನೋಟ್ ಬುಕ್ಕು, ಪೆನಸಿಲ್ಲು, ಯೂನಿಫಾರಂ,ಇತ್ಯಾದಿ ಸಾಮಗ್ರಿಗಳನ್ನು ಕೊಳ್ಳಲು ನನ್ನ ಹೆಂಡತಿ ಅವಳೇ ಹೋಗಿ ಬರುತ್ತಾಳೆ! ಅದು ನನಗೂ ಒಳ್ಳೆಯದೇ! ಇತ್ತೀಚೆಗೆ ಮನೆಗೆ ಬೇಕಾಗುವ ಸಾಮಗ್ರಿಗಳ ಪಟ್ಟಿ ತಯಾರಿಸಿ ನನಗೆ ತೋರಿಸಿ, ಇವನ್ನು ಯಾವ ಕಾರಣಕ್ಕೂ ಮರೆಯುವಂತಿಲ್ಲ ಎಂದು ಎಚ್ಚರಿಕೆಯ ಮಾತನ್ನು ಆಡಿ ನನ್ನ ಕೋಟಿನಲ್ಲಿ ತುರುಕಿ ಕಳುಹಿಸಿದ್ದಳು. ಆದರೆ, ಆ ಕೆಟ್ಟ ದಿನ ನಾನು ಕೆಲಸ ಮುಗಿಸಿ ಹಿಂತಿರುಗುವಾಗ, ನನ್ನ ಕುರ್ಚಿಗೆ ಸಿಕ್ಕಿಸಿದ್ದ ಕೋಟನ್ನು ಅಲ್ಲೇ ಮರೆತುಬಂದು, ಬಹಳ ದೂರದಲ್ಲಿರುವ ಬಜಾರಿನಲ್ಲಿ ಪಟ್ಟಿಯನ್ನು ಕಾಣದೆ, ಮೊಬೈಲನ್ನೂ ಕೋಟಿನಲ್ಲೆ ಬಿಟ್ಟಿದ್ದು, ಅವಳ ಬಳಿ ಸಮಜಾಯಿಷಿ ಪಡೆಯಲೂ ಆಗದೆ ಇಂಗು ತಿಂದ ಮಂಗನಂತಾಗಿದ್ದೆ! ನನ್ನ ಚಿಕ್ಕಪ್ಪನ ಸೋದರ ಸಂಬಂಧಿಯೊಬ್ಬರು ಮರೆವಿನ ಆಸಾಮಿಯೆಂದು ನಮ್ಮ ಸಂಬಂಧಿಗಳೆಲ್ಲರೂ ಬಲ್ಲರು. ಹಾಗಿದ್ದರೂ ಅವರು ಟ್ರಾನ್ಸ್ಪೋರ್ಟ್ ಕಂಪನಿಯೊಂದರ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಾಗಾಗಿ ಇವರಿಗೆ ಎಲ್ಲ ಬಸ್ಸುಗಳ ನಿರ್ವಾಹಕ, ಡ್ರೈವರುಗಳ ನಿಕಟ ಪರಿಚಯವಿತ್ತು. ಒಂದು ಬಾರಿ ಅವರ ಸಂಬಂಧಿಗಳ ಪೈಕಿ ಯಾರಿಗೋ ಆಪರೇಶನ್ ಮಾಡಬೇಕಿದ್ದು ಬೆಂಗಳೂರಿನಿಂದ ತಡಮಾಡದೆ, ತ್ವರಿತವಾಗಿ ಬ್ಲಡ್ ಬ್ಯಾಂಕಿನಿಂದ ರಕ್ತವನ್ನು ತರಬೇಕಿತ್ತು. ಆ ಕಾರ್ಯ ಈತನಿಗೆ ಹೇಳಿ, ಮರೆಯದೇ ತರಲು ಒಪ್ಪಿಸಿದ್ದರು. ಅವರೇನೋ ಕೂಡಲೇ ಒಪ್ಪಿ, ಇತರ ಎಲ್ಲ ಕೆಲಸ ಬಿಟ್ಟು ತಮಗೆ ಗೊತ್ತಿದ್ದ ಬಸ್ಸಿನಲ್ಲಿ ಕೂಡಲೇ ಬೆಂಗಳೂರಿಗೆ ಹೊರಟರು. ಬಸ್ಸಿನಲ್ಲಿ ಕೂತ ತರುವಾಯ, ತಮ್ಮ ಪರಿಚಯದ ನಿರ್ವಾಹಕ, ಡ್ರೈವೆರುಗಳೊಡನೆ ಹರಟುತ್ತಾ ಬೆಂಗಳೂರು ಸೇರಿ, ಅಲ್ಲಿ ಇತರರೊಡನೆ ಊಟ ಮುಗಿಸಿ ಮತ್ತಿನ್ನೇನೋ ಕೆಲಸ ಹಚ್ಚಿಕೊಂಡು, ತಾವು ಹೋಗಿದ್ದ ಕಾರಣವನ್ನೆ ಮರೆತು ಊರಿಗೆ ಹಿಂದಿರುಗಿದ್ದರು! ಎಲ್ಲರಿಂದ ‘ಛೀ,ಥೂ’ ಅನಿಸಿಕೊಂಡ ನಂತರ ಮತ್ತೆ ಹೋಗಿಬರಲೇನೋ ಸಿದ್ಧರಾದರು, ಆದರೆ ಸಮಯದ ವ್ಯವಧಾನವಿಲ್ಲದ ಕಾರಣ ಇವರ ಮರೆವಿಗೆ ಪ್ರತಿಯಾಗಿ, ರೋಗಿಯ ಪ್ರಾಣಕ್ಕೆ ಸಂಚಕಾರ ವಾಗದಂತೆ ಬೇರೇನೋ ವ್ಯವಸ್ಥೆ ಮಾಡಿ ಕೊಂಡರಷ್ಟೇ. *** *** *** *** *ಪತ್ರಿಕಾ ವರದಿ: ಮರೆವು ಹೆಂಗಸಿಗರಿಗಿಂತ ಅವರ ಗಂಡಂದಿರಿಗೇ ಜಾಸ್ತಿಯಂತೆ–ವೈದ್ಯರ ಸಂಶೋಧನೆ. —-ಅಲ್ಲದೇ ಮತ್ತೇನು? ಪ್ರತಿ ರಾತ್ರಿ ತಡವಾಗಿ ಬಂದು ಹೆಂಡತಿಯ ಅಮರ ವಾಕ್ಯಗಳಿಂದ ಬೈಯ್ಸಿಕೊಳ್ಳುವುದನ್ನು ಶ್ರೋತ್ರಿಯನಾದವನು ಮರೆಯದಿದ್ದರೆ, ಮತ್ತೆ ಮಾರನೆ ರಾತ್ರಿಯೂ ಲೇಟಾಗಿ ಬರಲು ಹೇಗೆ ಸಾಧ್ಯ? ಸುಪ್ರಸಿದ್ಧ ಸಾಹಿತಿ ದಿ. ನಾಡಿಗೇರ ಕೃಷ್ಣರಾಯರ ಹಾಸ್ಯದ ತುಣುಕೊಂದು ‘ಮರೆವಿಗೆ’ ಸಂಬಂಧ ಪಟ್ಟಹಾಗೆ ನನ್ನ ‘ಜ್ಞಾಪಕಕ್ಕೆ’ ‘ಬರುತ್ತಿದೆ- – ಇಬ್ಬರು ಹೆಂಗಸರು ತಮ್ಮ ತಮ್ಮ ಗಂಡಂದಿರ ಮರೆವಿನ ಬಗ್ಗ್ಗೆ ಹೇಳಿಕೊಳ್ಳುವಾಗ, ಸಾವಿತ್ರಿ : ರಾತ್ರಿ ನಮ್ಮ ಯಜಮಾನ್ರು ಲೇಟಾಗಿ ಬರೋದು ಅಲ್ದೆ ಏನಾದರೊಂದು ಮರೆತು ಕಳ್ಕೊಳ್ಳದೆ ಬರೋದೆ ಇಲ್ಲ್ಲಾರೀ,…. ಶ್ಯಾಮಲ: ‘ಹೌದಾ, ಅಷ್ಟೊಂದು ಮರವೇನ್ರಿ, ಈ ವಯಸ್ಸಿಗೇ…. ಸಾ: ಯಾಕೆ ಹೇಳ್ತೀರಾ. ಮೊನ್ನೆ ಛತ್ರಿ ಮರೆತು ಎಲ್ಲೋ ಕಳ್ಕೊಂಡು ಬಂದ್ರಾ… ಶ್ಯಾ: ಇದೆಷ್ಟೋ ವಾಸಿ, ಹೊಸದು ಕೊಂಡ್ಕೋಬೋದು, ನಮ್ಮ ಯಜಮಾನ್ರು ಮಾನ, ಮರ್ಯದೇನೇ ಕಳ್ಕೊಂಡ್ ಬರ್ತಾರೆ. ।।।।।।।।।।।।।।।।।।।।।।।।।।।।।।

Recent Posts

See All
Untitled

2. VIEWS (PRESTITUTES-QUOTE- FROM FACE BOOK-17/1/2020):-INDIA IS THE ONLY MAJOR CIVILIZATIONAL COUNTRY WHERE YOU ARE SYSTEMATICALLY...

 
 
 

Comments


IMG-20180912-WA0009.jpg

About Me

H R Hanumantha Rau

A Senior Citizen, graduate in science, professional engineer and a (Metallurgical) Scientist retired from Hindustan Aeronautics Ltd. Now a professed astrologer  and a Free lance writer on social life /problems, predictive astrology, besides contributor to humor magazines.

Read More

 

Join My Mailing List

Thanks for submitting!

bottom of page