top of page

ಮನೆಗೆ ಬಣ್ಣದ ಹೊಸ ಟಚಪ್ಪು, ನ್ಯೂ ಲುಕ್ ಗೆಟಪ್ಪು.(ಲಲಿತ ಪ್ರಬಂಧ) ಲೇಖಕ: ಎಚ್. ಆರ್. ಹನುಮಂತ ರಾವ್, ವಿಜಯ ನಗರ, ಬೆಂ

  • haparna
  • Nov 12, 2015
  • 5 min read

ಮನೆಗೆ ಬಣ್ಣದ ಹೊಸ ಟಚಪ್ಪು, ನ್ಯೂ ಲುಕ್ ಗೆಟಪ್ಪು.(ಲಲಿತ ಪ್ರಬಂಧ)–BY H.R.HANUMANTHA RAU-THIS HUMOUROUS ESSAY IS INTENDED TO BE A PART OF ‘AN ANTHOLOGY OF HUMOUROUS ESSAYS IN KANNADA LIKELY TO BE PUBLISHED BY “HASYA BRAHMA TRUST”, VDYARANYA PURA,BENGALURU IN FEB/MARCH 2016. —————————————————————————————————————— ಇತ್ತೀಚೆಗೆ, ನಮ್ಮಮನೆಯಲ್ಲೊಂದು ಠರಾವು ಬಹಳವೇ ವಾದ, ವಿವಾದ ಪ್ರತಿವಾದಗಳ ನಡುವೆ ಅಂಗೀಕಾರವಾಯಿತು, ಸಾಕಷ್ಟು ಹಳೆಯದಾಗಿದ್ದ ಮನೆಗೆ ಮತ್ತೆ ಸುಣ್ಣ, ಬಣ್ಣ, ಅಲ್ಲಷ್ಟು ಇಲ್ಲಷ್ಟು ಬದಲಾವಣೆ ಹೀಗೆಮಾಡಲೇಬೇಕೆಂಬುದು -ಅಂದಮೇಲೆ ಮನೆ ಹೊಸ ರೂಪ ಪಡೆಯುವ ನೆಪದಲ್ಲಿ ನನ್ನ ಬ್ಯಾಂಕ್ ಬಾಲೆನ್ಸ್ ಇನ್ನಷ್ಟು ಬಡವಾಗುವುದಂದೇ ಅರ್ಥ! ನಾನು ಇರುವುದು ನಮ್ಮ ಹಿರಿಯರು ಬಿಟ್ಟುಹೋದ ಮನೆಯಲ್ಲಿ. ಬೇರೆಡೆ ನಾ ಕಟ್ಟಿಸಬೇಕದ ಖಾಲಿ ನಿವೇಶನವಿದೆ. ನಮ್ಮ ಪೂರ್ವಿಕರು ಕಟ್ಟಿದ ಈ ಮನೆಯ ವಾಸ್ತು ಶಿಲ್ಪಿ ನಮ್ಮ ಸೈಟಲ್ಲಿ ನಾ ಕಟ್ಟಬೇಕೆಂದಿರುವ ಮನೆಯ ಕಂಟ್ರಾಕ್ಟರಿನ ದೊಡ್ಡಪ್ಪನ ಶಡ್ಡಕನಂತೆ. ಆಗಾಗ್ಗೆ ನಮ್ಮಲ್ಲಿ ಬಂದು ಆಗಿನ ದಿನಗಳ ಬಗ್ಗೆ ಗಂಟೆಗಟ್ಟಲೆ ಕೊರೆದು ಹೋಗುತ್ತಾನೆ! ಇನ್ನುಇವನಿಗೆ ಈ ವಯಸ್ಸಿನಲ್ಲಿ-ಅವನ ಮಕ್ಕಳಿಗೆ ಈ ಕೆಲಸ ಬಿಟ್ಟುಕೊಟ್ಟು ತಾನು ನೆಮ್ಮದಿಯಿಂದ ಇರಬೇಕೆಂಬ ಕಾರಣವಾಗಿ – ಇರುವ ಒಂದೇ ಒಂದು ಆಶೆಯೆಂದರೆ ಈ ಪೂರ್ವೀಕರ ಮನೆಯನ್ನು ಮತ್ತೆ ಆ ಗತ ಕಾಲದ ವೈಭವದ ದಿನಗಳನ್ನು ನೆನಪಿಸುವಂತೆ ಮತ್ತೆ ಕಟ್ಟಿಸಿ, ಕಣ್ತುಂಬ ಅಲ್ಲಿ ನಮ್ಮ ಮಕ್ಕಳೂ, ಮೊಮ್ಮಕ್ಕಳು ಆ ಮನೆಯಲ್ಲಿರುವದನ್ನ ನೋಡಬೇಕೆಂಬುದಷ್ಟೇ ಅಂತೆ. ಅದಕ್ಕಾಗಿ ಉಸಿರು ಹಿಡಿದು ನನ್ನ ಆರ್ಡರಿಗೆ ಕಾಯುತ್ತಿದ್ದಾನಂತೆ! ನನ್ನ ಒಬ್ಬಳೇ ಮಗಳು -ಈಗಿನ್ನೂ ಹೈಸ್ಕೂಲು ಓದುತ್ತಿರುವ ರೇಖಾ- ಜರತಾರಿ ಸೀರೆ ಉಟ್ಟು ಮನೆಯಲ್ಲಿ ತನ್ನ ಗಂಡ ಮಕ್ಕಳೊಡನೆ ಮೆರೆಯುವುದನ್ನ ನೋಡಬೇಕಂತೆ! ಅದಕ್ಕಾಗಿ ಈಗ ನಾನು ನನ್ನ ಹಣ- ಸಾಲವೋ ಶೂಲವೋ ಅವನಿಗೇನು ಅದರ ಬಗ್ಗೆ ಕಾಳಜಿಯಿಲ್ಲ- ವ್ಯಯಿಸಬೇಕು. ಇಲ್ಲಿ ಹಳೇ ಮನೆಯ ಪುನರ್ನಿರ್ಮಾಣ, ಬಣ್ಣದ ಬದಲಾವಣೆ, ಹಾಗಾಗಿ ಇದೂ ಒಂದು ಹೊಸ ಮನೆಯೇ . ಇಷ್ಟು ಹೇಳಿದಮೇಲೆ, ಅದೂ ಮಗಳ ಮದುವೆಯ ಬಗ್ಗೆ, ನನ್ನ ಹೆಂಡತಿ ಉಬ್ಬಿ ಅವನ ತಾಳಕ್ಕೆ ತಕ್ಕ ರಾಗ-ಕ್ಷಮಿಸಿ ರಾಗಕ್ಕೆ ತಕ್ಕ ತಾಳ ಹಾಕದಿರುತ್ತಾಳೆಯೆ? ಅದೂ ಮೊದಲ ಸಾರಿ ಅಳಿಯ ಕಾಲಿಡುವಾಗ ಮನೆ ಸಿಂಗಾರದಿಂದ, ಆತ ಒಪ್ಪುವಂತಿರಬೇಕಲ್ಲವೇ? ಅಲ್ಲದೆ -ಈ ಮಾತು ಕೇಳಿ- ‘ಆ ದಿನಗಳಲ್ಲಿ ಸ್ವಾಮಿಗಳು ಸ್ನೇಹಿತರ ಜೊತೆ ಊರೆಲ್ಲ್ಲಾ ಓಡಾಡ್ಕಂಡು, ಹೋಟೆಲ್ ಊಟ್ಮಾಡ್ಕಂಡ್ ಆರೋಗ್ಯ ಕೆಡ್ಸಿಕೊಳ್ತಾ ಇದ್ ಟೈಂನಾಗೆ ಅಮ್ಮಾವ್ರು ಈ ಮನೇಗೆ ಒಳ್ಳೇ ಭಾಗ್ಯಲಕ್ಷ್ಮಿ ತರಾ ಬಂದು ಸಾಹೇಬ್ರ ಕೈ ಹಿಡಿಯುತ್ಲೂ ಸ್ವಾಮಿಯೋರ ಬರೀ ಆರೋಗ್ಯ ಏನ್ಬಂತು, ಅದ್ರೂಷ್ಟಾನೆ ಕುದ್ರಿ, ಕೈ ತುಂಬಾ ಸಂಬಳಾ ಬರೋ ಕೆಲಸಾನೂ ಹಿಡಿದಿದ್ದು ಸುಳ್ಳೇ ತಾಯಿ? ನನಗೆ ಎಷ್ಟೊ ಬಾರಿ ಕೈ ಗಡ ಕೊಟ್ಟಿದ್ದಾರೆ, ಚೆನ್ನಾಗಿರಲಿ ಸಾಹೇಬ್ರು.’ ಎನ್ನುತ್ತಾ ಬರದ ಕಣ್ಣೀರ್ನ ಸುರ್ಸಿ ಕರವಸ್ತ್ರದಲ್ಲಿ ಒರ್ಸ್ಕಂಡಿದ್ದುಂಟು ಭಡವ. ಇದೀಗ ಅವಳ ಹೆಂಗರುಳು ಹಿಂಡಿದಂಗಾಗಿ ಅವನಿಗೆ ತಿಂಡಿ, ಕಾಫಿ ಉಪಚಾರ ಮಾಡಿದ್ದೇ ಮಾಡಿದ್ದು. ಭಂಡ ಇವ, ನಾನು ಇವನ ಲೆಕ್ಕಕ್ಕೆ ಇಲ್ಲದವನಾಗಿದ್ದೆ. ನನಗಾಗಿ ಎಲ್ಲಿ ಹಳ್ಳ ತೋಡಬೇಕೋ ಅವನಿಗೆ ಚೆನ್ನಾಗಿ ಗೊತ್ತು. ನನ್ನ ಹೆಂಡತಿ ಅಲ್ಲಿಂದ ದಿನಾ ಒಂದಲ್ಲ ಒಂದು ಕಾರಣವಾಗಿಟ್ಟುಕೊಂಡು ಈ ಮನೆಯ ಬಗ್ಗೆ ಇಲ್ಲಸಲ್ಲದ ತಪ್ಪುಗಳನ್ನು ಕ್ಷುಲ್ಲಕ ಕಾರಣಕ್ಕಾದರೂ, ಕೆದಕಿ ತೆಗೆದು, ಮೂದಲಿಸಿ, ನಾನು ಊಟ ಮಾಡುವಾಗ ಗಂಟಲಿಗಿಳಿಯದ ಬಿಸಿ ತುಪ್ಪದಂತೆ ಮಾಡುತ್ತಿದ್ದುದು ಸರ್ವೆ ಸಾಮಾನ್ಯವಾಗಿ ಹೋಯಿತು. ಮಕ್ಕಳಂತು ಅವರದೇ ವಾಗ್ವೈಖರಿಯಿಂದ ನನ್ನನ್ನು ಈ ಮನೆಯ ಲೋಪಗಳ ಬಗ್ಗೆ ದೂಷಿಸುವ ಸಲುವಾಗಿ ಸಮಯಕ್ಕಾಗಿ ಕಾಯುತ್ತಿದ್ದರು. ಇದೀಗ ಅವರಿಗೆಲ್ಲಾ ಒಂದು ಬಲವಾದ ಅಸ್ತ್ರ ದೊರೆತಂತಾಯಿತು ಅವಳ ಕುಮ್ಮಕ್ಕುನೊಂದಿಗೆ ಈತನಿಂದಾಗಿ!

ನನ್ನ ಹಿರಿಯ ಪುತ್ರ ಭಾಸ್ಕರ ಈಗ ತಾಂತ್ರಿಕ ಪದವಿಗಾಗಿ ಕೊನೆಯ ಸೆಮಿಸ್ಟರ್ ಓದುತ್ತಿದ್ದಾನೆ, ಎರಡನೆಯವನು ವಿಠಲ ಪಿಯುಸಿಯ ಹಂತದಲ್ಲಿರುವವನು. ಇವರುಗಳು ಓದುವ ಕೊಠಡಿ ಸುಸಜ್ಜಿತವಾಗಿ ಮಾಡಬೇಕು, ಕಪಾಟುಗಳು ಒಂದಲ್ಲ, ನಾಲ್ಕಾರಿರಬೇಕು, ಇದೀಗ ಎಲ್ಲರಿಗೂ ವೆಸ್ಟರನ್ ಕಮೋಡ್ ಅನಿವಾರ್ಯ. ಅಡಿಗೆ ಮನೆ ಇಟಾಲಿಯನ್ ಶೈಲಿಗೆ ಬದಲಾಯಿಸಲು ಅತ್ಯವಶ್ಯಕ. ಇಲ್ಲವಾದಲ್ಲಿ ಸಂಭಾವಿತರು-ಅದೂ ನನ್ನ ಸಹೋದ್ಯೋಗಿ ಕಾಲೇಜು ವಿದ್ವಾಂಸರುಗಳು, ಅವರ ಕುಟುಂಬ ಹೇಗಾದರೂ ಮನೆಗೆ ಕಾಲಿಡಲು ಇಚ್ಚಿಸುತ್ತಾರೆ? ಬೋರ್ವೆಲ್ ಇಲ್ಲದ ಮನೆ ಶೂನ್ಯಕ್ಕೆ ಸಮ, ಕಾರಣ ಈ ಮುನ್ಸಿಪಾಲಿಟಿ ನೀರಿಗಾಗಿ ಕಾದರೆ ಜೀವನವೇ ಬರಡು, ಅಲ್ಲವೇ? ದಾಸರ ಹಾಡಿನ ಧಾಟಿಯಲ್ಲಿ ‘ಬಾಯಾರಿತು ಎಂದು ಕಾವೇರಿ ನಾಕನೇ ಹಂತದ ನೀರಿಗೆ ಕಾದೆ, ಜೀವನವೇ ದುರ್ಭರವಾಯಿತು ದೊರೆಯೇ’ ಎಂದು ನನ್ನ ಮಗ ಕೀರಲು ಗಂಟಲಲ್ಲಿ ಹಾಡಿದ. ಬೆಂಗಳೂರೆಂಬ ದೊಡ್ಡ ಶಹರಲ್ಲಿ ನೀರಿಗೂ, ನೀರಿಲ್ಲದ ಮೇಲೆ ಹಾಲಿಗೂ ಕೊರತೆಯಾಗಬಹುದಾದರೂ, ಎಂಥಹ ಬರದಲ್ಲೂ ಆಲ್ಕೋಹಾಲಿಗೆ ಮಾತ್ರ ಕೊರತೆಯಿಲ್ಲವೆಂಬ ಮಾತು ನನ್ನ ಮಿತ್ರರೂ ಒಪ್ಪುತ್ತಾರೆ! ಆದರೆ ನೀರಿಗಾಗಿ ಆರನೂರ ಅಡಿಗಳಷ್ಟಾದರೂ ಭೂಮಿ ಕೊರೆಯಬೇಕು. ನಮ್ಮ ಬೆಡ್ರೂಮುಗಳಂತೂ ಹಳೇ ಶಿಲಾ ಯುಗದ ಮನೆಯನ್ನು -ಮನೆಯನ್ನು ವುದಾದರೆ-ಹೋಲುತ್ತವೆ! ಅವು ಮೊದಲು ಬದಲಾಗಬೇಕು, ಉಪ್ಪರಿಗೆಯ ಛಾವಣಿ, ಗೋಡೆಗಳಂತೂ ಹಳೇ ಕಾಲದ ಛತ್ರಗಳಂತೆ ಬಿರುಕು ಬಿಟ್ಟು, ಟಿಪ್ಪೂ ಸುಲ್ತಾನ್ ಕಾಲದ ಕೋಟೆಗಳ ಸವೆದು, ಮಾಸಿದ ಭಿತ್ತಿ ಚಿತ್ರಗಳನ್ನು ಅಣಕಿಸುವಂತೆಯೋ, ಎಂದು ಗಾಳಿ, ಬೆಳಕನ್ನು ಕಾಣುವೆವೋ ಎಂಬಂತಿವೆ. ‘ನಿಮ್ಮಮನೆ ಒಳ ಹೊಕ್ಕರೆ ಎಲ್ಲಿಂದ ಎಲ್ಲಿಗೆ ಬಂದು ಮುಟ್ಟುತ್ತೇವೆಯೋ, ‘ದಾರಿ ಕಾಣದಾಗಿದೆ, ಹೇಗೊ, ಏನೋ, ಕಾಯೋ ಶಿವನೇ’, ‘ಏಳು ಸುತ್ತಿನ ಕೋಟೆಯೋ’ ಎನ್ನುವಂತಹ ಮನೆ’ ಎಂದೆಲ್ಲ ನನ್ನ ಗೆಳೆಯರು ಹಾಸ್ಯ ಮಾಡುತ್ತಾರೆ, ಡ್ಯಾಡಿ ಎನ್ನುವನಿನ್ನೊಬ್ಬ. ನಾನು ಚಿಕ್ಕವನಿದ್ದಾಗಲೂ ಓರಿಗೆಯವರು ‘ಅದೆ ಭೂತ್ ಬಂಗ್ಲ’ ರಾವ್ ತಾನೇ ಎಂದು ನನ್ನನ್ನು ಗುರುತಿಸಿದ್ದರು! ಹಾಗಾಗಿ, ಇವರುಗಳ ಮಾತನ್ನು ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ‘ ಹೀಗೆ ಅವರ ದೂರುಗಳ ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು ನೋಟ್ಬುಕ್ಕು ತುಂಬುವಷ್ಟು ವಿಷಯವಾಗುತ್ತದೆ. ಆದಷ್ಟು ನೆಮ್ಮದಿಯಿಂದ ಇದ್ದು, ಇದ್ದುದರಲ್ಲೇ ಸುಖವನ್ನ ಕಾಣುವ ಜಾಯಮಾನದ ನನಗೆ, ಮಕ್ಕಳ ಓದು, ಹಾಗು ದಿನನಿತ್ಯದ ಸಂಸಾರದ ಜಂಜಾಟದ ರಥವನ್ನ ಎಳೆಯಲು ಯಾವ ಶೆಟ್ಟರ ಅಂಗಡಿಗಳಲ್ಲೂ ಸಾಲಕ್ಕೆ ಹೋಗದೆ, ‘ಫ಼ೆಸ್ಟಿವಲ್ ಅಡ್ವಾನ್ಸ್’ಎಂಬ ಸಾಲಕ್ಕೂ ಕ್ಯಾರೆ ಎನ್ನದವನು, ಅಯವ್ಯಯದ ಸಮತೋಲನಕ್ಕೆ ಜೋಪಾನವಾಗಿ ಜೋಕಾಲಿಯಾಡುತ್ತಿದ್ದ ನನಗೆ ಇದೀಗ ಒಂದುಹೊಸ ಬಗೆಯ ಸಮಸ್ಯೆಯನ್ನೇ ಮುಂದಿಟ್ಟಿದ್ದ ಈ ಪಾಪಿ ಕೆಂಚಪ್ಪ, ಕಂಟ್ರಾಕ್ಟರ್ನಾಗಿ ಕಾಡಿದ್ದ, ಹೆಂಡತಿ ಮಕ್ಕಳ ಮೂಲಕ ಸಾಲಕ್ಕಾಗಿ ನಾನು ಯಾಚಿಸುವಂತಹ ‘ದೀನ ನಾನು’ ಪರಿಸ್ಥಿಗೆ ದೂಡಿದ್ದ.

‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಎಂಬ ಗಾದೆ ಬಹಳವೇ ಹಳೆಯ ಕ್ಲೀಷೆಯ ಮಾತಾಯಿತು. ‘ಸಾಲದ ಹೊರೆಯಿಲ್ಲದ ಮನೆ’ ಕಟ್ಟುವುದೂ ಅಷ್ಟೆ. ಅದು ಹೇಗಾದರೂ ಇರಲಿ, ಆದರೆ ‘ಹಳೆಯ ಮನೆಯ ದುರಸ್ತಿ, ಅಧುನೀಕರಣ’ ಈ ಎರಡು ಕ್ಲೀಷೆಯ ಮಾತಿಗಿಂತ ಹೆಚ್ಚು ನಿಮ್ಮ ದುಡ್ಡು, ದುಮ್ಮಾನ, ತಾಳ್ಮೆ ಎಲ್ಲವನ್ನೂ ಪರೀಕ್ಷಿಸುವಂತಹುದು. ಮನೆ ಕಟ್ಟಿಕೊಡುವವನ ಅಭಿಪ್ರಾಯವೂ ಕೂಡ ಅದೆನೇವೆಯೆ. ‘ಸ್ವಾಮಿ, ಒಂದಲ್ಲ ನಾಲ್ಕು ಹೊಸಾ ಮನೆಗಳಾದರೂ ಕಟ್ಟಿಕೊಟ್ಟೇನು, ಆದರೆ ಮನೆ ರಿಪೇರಿ, ಬದಲಾವಣೆ ಮಾಡುವುದು ಯಾವ ಜನ್ಮಕ್ಕೂ ಬೇಡ. ಬೇಡವೇ ಬೇಡಾ’ ಎನ್ನುವ ಅನುಭವಸ್ತ ನಿರ್ಮಾಪಕರಿದ್ದಾರೆ! ಈ ಮಾತು ನನ್ನ ಅನುಭವಕ್ಕೂ ಬರತೊಡಗಿತು ಹಣದ ವಿಷಯವಾಗಿ. ಅಂದು ಪರಿಸ್ಥಿತಿ ಹಾಗಿತ್ತು, ನೀವು ಎಂಥ ಸಂಪಾದಿತ ವ್ಯಕ್ತಿಯಾದರು ಮನೆ ಕಟ್ಟುವ, ದುರಸ್ತಿ ಮಾಡುವ ಕಾರ್ಯವೆಂದರೆ ಯಾವ ಬ್ಯಾಂಕು ನಿಮ್ಮ ಸಹಾಯಕ್ಕೆ ಬರಲು ‘ದಮ್ಮಯ್ಯ’ ಅಂದರೂ ತಿರುಗಿ ನೋಡುತ್ತಿರಲಿಲ್ಲ. ಇದ್ದ ಒಂದು ಸಂಸ್ಥೆಯೆಂದರೆ, ಸರ್ಕಾರಿ ಜೀವ ವಿಮೆಯವರು. ಇವರು ನಿಮಗೆ ಜೀವ ವಿಮೆ ಮಾಡಿಸಿ, ಸಾಯುವವರೆಗೂ ಇವರ ಋಣದಿಲ್ಲವಿರುವಂತೆ- ಬಲಿ ಪಶುವನ್ನಾಗಿ ಮಾಡುತ್ತಿದ್ದವರು! ಖಾಸಾ ಉದ್ಯೋಗದಲ್ಲಿರುವವರ ಸ್ಥಿತಿ ಶೋಚನೀಯವಲ್ಲದೆ ಮತ್ತೇನು? ಈಗ ಅದು ಉಲ್ಟಾ ಆಗಿದೆ ನಿಜ. ಈ ದಿನಗಳಲ್ಲಿ ನಿಮ್ಮಲ್ಲಿ ಯಾವುದೋ ಒಂದು ಸ್ಯಲರಿ ಸರ್ಟಿಫ಼ಿಕೇಟ್ ಇದ್ದರೆ, ನಿಮ್ಮ ಮನೆಗೇ ಬಂದು ಸಾಲ ಕೊಡಲು ಪೈಪೋಟಿ ಮಾಡುತ್ತಾರೆ. ಕಾಲ ಬದಲಾಗಿದೆ. ಹಣ ಎಲ್ಲರ ಕೈಯಲ್ಲೀ ಓಡಾಡುತ್ತದೆ, ಮನೆಯ ಹತ್ತಿರವಿರುವ ಏಟಿಮ್ನಲ್ಲಿಂದ ಕೆಲವೇ ಕ್ಷಣಗಳಲ್ಲಿ ತಂದು ಕೆಲಸ ಪೂರೈಸಬಹುದು! ಮನೆಯ ದುರಸ್ತಿ ಮತ್ತು ಕಟ್ಟಡದ ಮಾರ್ಪಾಡಿಗಾಗಿ ಇಡಬೇಕಾದ ಮೊದಲ ಹೆಜ್ಜೆ ಎಂದರೆ ಮತ್ತೆ ಹೊಸದಾಗಿ ನೀಲಿ ನಕಾಶೆಯನ್ನು ಮಾಡಿಸಿಕೊಳ್ಳುವುದು. ಇಲ್ಲಿಂದ ಒಂದಲ್ಲ ಒಂದು ರೀತಿಯಲ್ಲಿ ಕಾಡಿಸುವ ಪ್ರಮೇಯಗಳು ಒಂದರಮೇಲೊಂದು ಹುಟ್ಟಿಕೊಳ್ಳುವುದುಂಟು. ನಕಾಶೆಯ ಅನುಮೋದಿತ ಲೈಸೆನ್ಸಗಾಗಿ ಶಹರಿನ ಮುನ್ಸಿಪಾಲಿಟಿಯ ಕದ ತಟ್ಟುವುದು. ಇಲ್ಲಿಂದ, ಶ ನಿಮ್ಮ ಹಣ, ಅದಕ್ಕೂ ಹೆಚ್ಚಿಗೆ ವಿನಯ, ತಾಳ್ಮೆ ಎಲ್ಲವನ್ನೂ ಪರೀಕ್ಷಿಸುವ ಈ ಸಂಸ್ಠೆಯವರ ಸಂಪರ್ಕದಿಂದ ಪ್ರಾರಂಭವಾಗುವುದು. ಇಲ್ಲಿ, ಚಿಕ್ಕಪ್ಪ, ಮಾವ, ಬಂಧು, ಅಧಿಕಾರ ಎಂಬ ಬೇಧ ಎಣಿಸದ ಒಂದು ರೀತಿಯ ನವೀನ ‘ಸೆಕ್ಯುಲರ್’ ಪ್ರಯೋಗ. ಇದಕ್ಕೆ ಮತ್ತೊಂದು ಸರ್ವ ವಿದಿತ ಹೆಸರೂ ಇದೆ! ನಮ್ಮ ಬಂಧುವೊಬ್ಬರು ಅತ್ಯುನ್ನತ ನ್ಯಾಯಾಧೀಕರಣದ ಸಂಸ್ಥೆಯಲ್ಲಿದ್ದವರು, ಅವರಿಗೂ ಈ ಬವಣೆ ತಪ್ಪಲಿಲ್ಲ! ‘ಸರ್ವಂ ಕಾಂಚಾಣಮಯಂ’ ‘ಇದಮಿದಂ ಐಟಿಸಿಟಿಯಂ ಬಹು ಶ್ರುತ ಗುಣಂ’. ನಮ್ಮ ಶ್ರುತಿಗಳಲ್ಲಿ ಎಲ್ಲೋ ಒಂದು ಕಡೆ ಈ ಮಾತು ಕೇಳಿಬರುತ್ತದೆ-‘ ಧರ್ಮೋ ರಕ್ಷತಿ ರಕ್ಷಿತ:’ ಆಹಾ, ಎಂತಹ ಸುಮಧುರ ಮಾತು? ಈಗಿನ ಅನುಭವದ ‘ಶಾಖಾಯ ಲವಣಾಯ’ದ ಸಾರಾಂಶ ಆಗಲೇ ಧರ್ಮದ ಹೆಸರಿನಲ್ಲಿ ನಡೆದಿತ್ತೋ? ಬಹುಶ: ಇಲ್ಲಿ ಸಾಕಷ್ಟು ಸಂಶೋಧನೆ ನಡೆದರೆ ನಮ್ಮ ಈಗಲೀಗಿನ ಬುದ್ಧಿಜೀವಿಗಳು, ಭಗವಂತರುಗಳು ಕ್ರಾಂತಿಕಾರಿ ವಿಮರ್ಶೆಗಳನ್ನು ಮಾಡಿ ‘ಸೆಕ್ಯುಲರ್’ ತತ್ವದ ಸಾಮಾಜಿಕ ನ್ಯಾಯಕ್ಕೆ ಇನ್ನಷ್ಟು ಬಲವನ್ನು ತುಂಬಬಹುದು. ಆದರೆ ಇವರು ಸುಡುವುದಾದರೂ ಏನನ್ನು? ಈ ಮಾದರಿಯ ‘ಶಷ್ಟ್ಯಶೀಲ’(ನೆಹರು-ಚೌಏನ್ ಲೈ ಅವರ ‘ಪಂಚ ಶೀಲ’ ದ ತತ್ವ ಜ್ಞಾಪಿಸಿಕೊಳ್ಳಿ) ವನ್ನೂ ಅಥವಾ ಮತ್ತಿನ್ನೇನನ್ನ್ನೋ? ಈ ಕಬಂಧ ಸೇತುವೆ ದಾಟುವ ಮುಂಚೆಯೇ ನಿಮ್ಮ ಕಂಟ್ರಾಕ್ಟರು ಕೆಲಸ ಪ್ರಾರಂಭಿಸಿರುತ್ತಾನೆ ನಿಮ್ಮಿಂದ ಸಂದಿರುವ ಅಡ್ವಾನ್ಸ್ ಹಣದಿಂದಾಗಿ, ಅವನಿಗೂ ಗೊತ್ತು ಇಲ್ಲಿಯ ಒಳಗುಟ್ಟು. ಇನ್ನು ಮನೆಯವರೆಲ್ಲರ ನೆಮ್ಮದಿಗೆ ಇತಿಶ್ರೀ. ಕಾರಣ ಮಾರ್ಪಾಡಿಗಾಗಿ ಆಗುವ ಅಸ್ತವಸ್ತ್ಯ. ಇನ್ನೈದಾರು ತಿಂಗಳಾದರೂ ಮನೆಯೆಲ್ಲಾ ಧೂಳು, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಪದಾರ್ಥಗಳ ಎಳೆದಾಟ ಇತ್ಯಾದಿ, ಹೆಚ್ಚಿನ ಈ ಕಷ್ಟಗಳನ್ನು ಅನುಭವಿಸುವವರೆಂದರೆ ಮನೆಯ ಶ್ರೀಮತಿಯೆ ಎಂಬುದು ಸತ್ಯ ಸಂಗತಿ. ಸಮಾಧಾನದ ಸಂಗತಿಯೆಂದರೆ, ‘ನಮ್ಮ ಮೆಟ್ರೋ’ದಿಂದಾಗಿ ವರ್ಷಾನುಗಟ್ಟಲೆ ಧೂಳು ಕುಡಿಯುತ್ತಿರುವ ಬೆಂಗಳೂರಿಗರಿಗೆ ಇದು ಚಿಟಿಕೆ ನಶ್ಯಕ್ಕೆ ಸಮಾನ! ಎಲ್ಲಾ ಮುಗಿಯುತ್ತ ಬಂದಾಗ ಮನೆಗೆ ಸುಣ್ಣ, ಬಾಗಿಲು, ಒಳ ಗೋಡೆಗಳಿಗೆ ಬಣ್ಣದ ವಿವಿಧ ಎಮಲ್ಷನ್ ಕೋಟು ಇತ್ಯಾದಿ. ನೆಲಕ್ಕೆ ಹಾಸುವ ಗ್ರಾನೈಟ್, ವಿಟ್ರಿಯಸ್ ಹೊದಿಕೆಯ, ಇಲ್ಲಾ ಸಾಮಾನ್ಯ ದರ್ಜೆಯ ಮೊಸಾಯಿಕ್ ಹೀಗೆ ಇವುಗಳ ಆಯ್ಕೆಯಲ್ಲಿ ಸಾಕಷ್ಟು ಚರ್ಚೆ, ಭಿನ್ನಾಭಿಪ್ರಾಯ, ಕಲಹ, ಕೊನೆಗೆ ನನ್ನ ಲೆಕ್ಕಕ್ಕೆ ದೊಡ್ಡ ಮೊತ್ತದ ಬಿಲ್ಲುಗಳು-ಹೀಗೆ ಮುಂದುವರೆಯುತ್ತದೆ. ಈ ಹಂತ ದಾಟುತ್ತಿದಂತೆಯೆ ಎಲ್ಲ ಅನಿಷ್ಟ ನಿವಾರಣೆಗೆ, ಎಲ್ಲರ ಸಂತೋಷಕ್ಕಾಗಿ, ನಮ್ಮ ಮನೆ ನೋಡಿ ಹೊಟ್ಟೆ ಕಿಚ್ಚುಪಡುವವರ ಕೆಟ್ಟ ದೃಷ್ಟಿ, ಗ್ರಹ ದೋಷ ಇತ್ಯಾದಿ, ತಾಕದಂತೆ ಮಾಡಲು ಹೆಸರಾಂತ ಪುರೋಹಿತರ ಮೂಲಕ ಮತ್ತೆ ಗೃಹ ಪ್ರವೇಶ ಶಾಸ್ತ್ರ-ಮಾಡಿಸಿ, ಕನಿಷ್ಟ ಮಂದಿ ಬಳಗ, ಸ್ನೇಹಿತರು, ನೆರೆಹೊರೆ, ಒಡನಾಡಿಗಳನ್ನು ಗೃಹ ಪ್ರವೇಶಕ್ಕೆ ಕರೆಯದಿದ್ದರೆ ನಮಗೇ ಅವಮಾನವಲ್ಲವೇ? ನಮಗಾಗಿ ಹಗಲು ಇರುಳೆನ್ನದೆ ದುಡಿದು ಮನೆ ಕಟ್ಟಿ ಕೊಟ್ಟ ಕೆಂಚಪ್ಪ( ಇವನಿಂದಾಗಿ ನನಗಾದ ಲಕ್ಷ ಲಕ್ಷ್ಯ ಸಾಲ-ಅದನ್ನು ಯಾರು ಕೇಳುವುದೇ ಇಲ್ಲ), ಮತ್ತು ಕೂಲಿಯಾಳುಗಳಿಗೆ ಹೊಸ ಬಟ್ಟೆ, ಬರೆ, ಬಕ್ಷೀಸು, ಸಂಭಾವನೆ- ಇಷ್ಟೂ ಮಾಡದಿದ್ದರೆ ನಾವು ಮನುಷ್ಯತ್ವವಿಲ್ಲದ ಮೃಗಗಳೇ? ಚಿಕ್ಕದಾದ ಆದರೆ ಸುಂದರವಾದ ಆಹ್ವಾನ ಪತ್ರಿಕೆ ಮಾಡಿಸದಿದ್ದರೆ ನಾನು ಉಟಕ್ಕೆ ಮಾತ್ರ ಹಾಜರು, ಮಿಕ್ಕೆಲ ಕೆಲಸ ನೀವೇ ನೋಡಿಕೊಳ್ಳಿ ಎಂದು ದೊಡ್ಡ ಮಗ ಆಡ್ವಾನ್ಸ್ ನೋಟೀಸು ಜಾರಿ ಮಾಡಿದ! ಆಹ್ವಾನ ಪತ್ರಿಕೆ ಜೊತೆಗೆ ಈಗಲೆ ನಾವು ಆಹ್ವಾನಿತರಿಗೆ ಗಿಫ್ಟ್ ಐಟಂಸ್ ಕೊಟ್ಟುಬಿಡುವುದು (ಅವರು ಬರಲಿ, ಬಿಡಲಿ ಅದು ಬೇರೆ ಸಮಾಚಾರ!) ಈ ದಿನಗಳ ಸ್ಟೈಲು. ತೀರ ಹತ್ತಿರದ ಬಂಧುಗಳು, ಹಿರಿಯರು, ಹತ್ತಿರದ ಸ್ನೇಹಿತರು, ಅವರ ಕುಟುಂಬಗಳು ಇತ್ಯಾದಿ ಮಂದಿಗೆ ಉಡುಗೊರೆ ಕೊಡದಿದ್ದರೆ ನಾಳೆ ನಮ್ಮನ್ನು ಯಾರು ‘ಕ್ಯಾರೆ ಅನ್ನುವುದಿರಲಿ’, ಕಣ್ಣೆತ್ತೀ ನೋಡುವುದಿಲ್ಲ- ಹೀಗೆ ನಾವೇ ಹಾಕಿಕೊಂಡ ಕಟ್ಟು ಪಾಡುಗಳಿಗೆ ದಾಸನಾಗಿ ಸಾಲದ ಹಣ ಮತ್ತೊಂದು ಲಕ್ಷ ಜಾರಿ ಹೋಯಿತಷ್ಟೆ! ಹೆಸರಾಂತ ಜ್ಯೋತಿಷಿಯೊಬ್ಬನಿಗೆ ಸಾಕಷ್ಟು ಸುರಿದು ಮುಹೂರ್ತವನ್ನೂ ಇಡಿಸಿದ್ದಾಯಿತು. ಗೃಹ ಪ್ರವೇಶಕ್ಕೆ ಒಂದೇ ವಾರವಿದೆಯನ್ನುವಾಗ ಸರ್ಕಾರೀ ಅಧಿಕಾರಿಯೊಬ್ಬ ಯಾವ್ಯಾವುದೋ ಕಾರಣ ಮುಂದಿಟ್ಟುಕೊಂಡು ಇಲ್ಲಸಲ್ಲದ ಆಕ್ಷೇಪಣೆ ಎತ್ತಿದ. ನಮ್ಮ ಕಂಟ್ರಾಕ್ಟರ್ ಕೆಂಚಪ್ಪ ಅವನ ಹಿತ ವಿಚಾರಿಸಿಕೊಂಡ ಮೇಲೆ ಎಲ್ಲವು ಸುಸೂತ್ರವಾಗಿ ಜರುಗಿ ಹೋಯಿತು! ಇದೀಗ ನಾನು ಇನ್ನು ಕನಿಷ್ಟ ಹತ್ತು ವರುಷಗಳದರೂ ಸಾಲಶೇಷದ ಅಂಚಿನಿಂದ ಹೊರಬರಲಾಗದ, ನಮ್ಮ ಈ ಹೊಸ ಸುಂದರ ವಿನ್ಯಾಸದ, ಬಣ್ಣದ, ಆಧುನೀಕತೆಯನ್ನು ಮೈಗೂಡಿಸಿಕೊಂಡ ಮನೆ -ಪೂರ್ವಾರ್ಜಿತ ಪುಣ್ಯ ಫಲ- ಝಗಮಗಿಸುತ್ತಿದೆ, ನೀವೂ ಒಂದು ಸಲ ವಿಚಾರಿಸಿಕೊಂಡ -ಪರಿಚಯವಿಲ್ಲದಿದ್ದರೇನಂತೆ – ಬಂದು ನೋಡಿ!

Recent Posts

See All
Untitled

2. VIEWS (PRESTITUTES-QUOTE- FROM FACE BOOK-17/1/2020):-INDIA IS THE ONLY MAJOR CIVILIZATIONAL COUNTRY WHERE YOU ARE SYSTEMATICALLY...

 
 
 

Comments


IMG-20180912-WA0009.jpg

About Me

H R Hanumantha Rau

A Senior Citizen, graduate in science, professional engineer and a (Metallurgical) Scientist retired from Hindustan Aeronautics Ltd. Now a professed astrologer  and a Free lance writer on social life /problems, predictive astrology, besides contributor to humor magazines.

Read More

 

Join My Mailing List

Thanks for submitting!

bottom of page