ಬಾಳಿಗೊಂದು ಆಸರೆ, ಮನಕ್ಕೊಂದು ದಿವ್ಯತೆ.
- hrhrau
- Jul 3, 2023
- 3 min read
ಬಾಳಿಗೊಂದು ಆಸರೆ, ಮನಕ್ಕೊಂದು ದಿವ್ಯತೆ.
'ಮಾನವನಾಗಿ ನೀ ಏನೇನ್ಕಂಡೆ...'ಹೀಗೊಂದು ಹಾಡು ಸುಪ್ರಸಿದ್ಧ ನಟರೊಬ್ಬರು ಹಾಡಿರುವುದು ಬಹು ಶೃತ. ಇದನ್ನೇ ಗೋವಿನ ಹಾಡಲ್ಲಿ ಎಲ್ಲ ರೀತಿಯಲ್ಲೂ ಪರರಿಗುಪಕಾರಿಯಾಗಿಯೇ ಬಾಳುವ ಗೋಮಾತೆಯನ್ನ ದೈವಕ್ಕೆ ಹೋಲಿಸಿ, 'ಆದರೆ ನೀನ್ಯಾರಿಗಾದೆಯೋ ಎಲೆ ಮಾನವ?’ಎನ್ನುವ ಪ್ರಶ್ನೆ ಕಂಡಿವಿ. ಕನಕದಾಸರಂತೂ 'ಮಾನವಾ ನೀ ಮೂಳೆ ಮಾಂಸದ ತಡಿಕೆ....'ಎಂದೆಲ್ಲಾ ಹೇಳಿ,'ದಿನನಿತ್ಯದ ಜಂಜಾಟದಲ್ಲೇ ಆಯುಸ್ಸನ್ನೆಲ್ಲಾ ಕಳೆದುಬಿಡುವ ಮನುಜ ಸಾಧಿüಸಿದ್ದಾದರೂ ಏನು?'ಎಂದು ಎಚ್ಚರಿಸುವದಿದೆ.
ತಮ್ಮ"ಕಗ್ಗ"ದಲ್ಲಿ ಡಿವಿಜಿಯವರ ಮಂಕು ತಿಮ್ಮನೂ,"ಅಂದನಾ ತಿಮ್ಮ"ಕಾವ್ಯದಲ್ಲಿ ಬೀಚಿಯವರ 'ವಿಚಾರ ವಿಹಾರಿ' ತಿಂಮನೂ ಹೀಗೆಯೇ ಮಾನವನ ಲೋಪಗಳನ್ನ ವಿಮರ್ಶಿಸಿ ಬುದ್ಧಿ ಹೇಳುವದಿದೆ. 'ತನ್ನ ಆತ್ಮೋದ್ಧಾರದ ಪಥವನೇನ ಕಂಡೆ, ತಾನು ಬದುಕಿ ಬಾಳಲು ಆಸರೆಕೊಟ್ಟ ಸಮಾಜಕ್ಕೆ ನಮ್ಮ ಕಾಣಿಕೆಯಾದರೂ ಏನೆಂಬ ವಿಚಾರದ ಪ್ರಸ್ತಾಪವಿದೆ.
ಭಗವದ್ಗೀತಾಚಾರ್ಯನಂತೂ ಈ ನಶ್ವರ ಜೀವನದ, ಬಂಧುಬಳಗದ, ಪ್ರೀತಿ, ಪ್ರೇಮ ದ್ವೇಷ, ಮತ್ಸರಗಳೆಲ್ಲ ಪಂಚೇಂದ್ರಿಯಗಳಿಂದಾದ ಕೃತಕತೆ, ಬದುಕಿ ಬಾಳಿದಷ್ಟೇ ಕಾಲದಲ್ಲಿ ಈ ಅಪಾರ ಸಂಸಾರ ಸಾಗರದ ಬಗ್ಗೆ ಸಲ್ಲದ ವ್ಯಾಮೋಹದ, ನಶ್ವರ ಜೀವನದ ಆಕರ್ಷಣೆಯಿಂದ ದೂರ ಸರಿದು, ಆತ್ಮೋದ್ಧಾರದ ಹಾದಿಯನ್ನ ಕಂಡುಕೊಳ್ಳಬೇಕೆಂಬುದನ್ನ ಅರ್ಜುನನಿಗೆ ಹದಿನೆಂಟು ಅದ್ಯಾಯಗಳ ಮೂಲಕ ಬೋಧಿಸುತ್ತಾನಲ್ಲವೋ? ಅಂದ ಮೇಲೆ, ಈ ತೆರನ ಕಾಲಕಾಲಕ್ಕೆ ತಕ್ಕಂತೆ ಮನುಜನನ್ನ ಎಚ್ಚರಿಸಿ, ಬದುಕಿಬಾಳುವ ಸನ್ಮಾರ್ಗದ ದಾರಿ ಕಾಣಿಸುವ ವಿವಿಧ ಪಂಡಿತರ, ವಾಗ್ಮಿಗಳ, ವೇದಾಂತಿಗಳ, ಕೀರ್ತನ ಕೇಸರಿಗಳ, ಚಿಂತಕರ, ಮಹಾತ್ಮರ ಸದ್ಬೋಧೆಯನ್ನ ನೆನಪಿಗೆ ತಂದುಕೊಳ್ಳುವ, ಓದುಗರ ಮನಕ್ಕೆ ಹಿತವೆನಿಸುವಂತಹ, ಹೃದಯಕ್ಕೆ ಹತ್ತಿರವಾಗಿ, ಪ್ರಿಯವೆನಿಸುವ ಉಕ್ತಿಗಳನ್ನ ಸಂಗ್ರಹಿಸಿ ಇಲ್ಲಿ ಪ್ರಕಟಿಸುವ ಪ್ರಯತ್ನ ಮಾಡಿದೆ. ಇಲ್ಲಿ, ಸಾಹಿತ್ಯ, ಸಂಗೀತ, ಕಲೆ, ಆಗಮಗಳಿಂದಾಯ್ದ ವಿಚಕ್ಷಣ ಉಕ್ತಿಗಳ ಸಂಗಮವಿದೆ, ಅಬದ್ಧಕ್ಕೆ ಎಡೆಯಿಲ್ಲ, ತತ್ವ ಸಿದ್ಧಾಂತಗಳ ಜಟಿಲತೆ, ಗೋಜಲು ವಿಚಾರಗಳ ತರ್ಕವಿತರ್ಕಗಳಿಂದ ದೂರವೇ. ಎಲ್ಲೂ ಚರ್ವಿತಚರ್ವಣವಿಲ್ಲ. ಮತಪಂಥಗಳ, ಧರ್ಮ ಬೇಧಗಳ ಚರ್ಚೆಗಳಿಂದ ದೂರವೆ. ಜನಬಿಂಬವನ್ನ ಲೋಕಪ್ರಿಯತೆಯ ಮಾಪನವಾಗಿ ಸಂಗ್ರಹಿಸಿದೆಯಿಲ್ಲಿ.
ಭಗವದ್ಗೀತೆಯಿಂದಲೇ ಪ್ರಾರಂಭಿಸುತ್ತಾ ಅದರ ಬಗ್ಗೆ ಎಂತಹ ಸೊಗಸಾದ ವ್ಯಾಖ್ಯಾನವಿದೆ ನೋಡೋಣ.
1. ಸರ್ವೋಪನಿಷದೋ ಗಾವ:, ದೋಗ್ಧಾ ಗೋಪಾಲನಂದನ:/ಪಾರ್ಥೋ ವತ್ಸಸ್ಸುಧೀರ್ಭೋಕ್ತಾ, ದುಗ್ಧಂ ಗೀತಾಮೃತಂ ಮಹತ್//,
2. ವಸುದೇವಸುತಂ ದೇವಂ, ಕಂಸಚಾಣೂರಮರ್ದನಮ್/ದೇವಕೀಪರಮಾನಂದಂ, ಕೃ಼ಷ್ಣಮ್ ವಂದೇ ಜಗದ್ಗುರಮ್//-
--ಎಲ್ಲಾ ಉಪನಿಷತ್ತುಗಳೂ ಗೋವುಗಳಾಗಿ, ಗೋಪಾಲನಂದನ(ಶ್ರೀ ಕೃಷ್ಣ)ನೇ ಹಾಲು ಕರೆಯುವಾತನು(ಗೋಪಾಲಕನು), ಪಾರ್ಥನೇ ಕರುವು, ಮಹತ್ ಗೀತಾಮೃತವೇ ಹಾಲು. ಇಂತಹ ಅಮೃತ ಸಮಾನವಾದುದನ್ನ ಕುಡಿಯುವವರೇ ಜ್ಞಾನಿಗಳು. ವಸುದೇವನ ಮಗನೂ, ಕಂಸ, ಚಾಣೂರರರನ್ನ ವಧಿಸಿದವನೂ, ದೇವಕೀ ಮಾತೃವಿಗೆ ಪರಮಾನಂದದಾಯಕನೂ, ಜಗತ್ತಿಗೇ ಜಗದ್ಗುರುವೂ ಆದಂಥ ಶ್ರೀ ಕೃಷ್ಣನಿಗೆ ನಮೋನಮೋ.
3. ಮೂಕಂ ಕರೋತಿ ವಾಚಾಲಂ, ಪಂಗುಂ ಲಂಘಯತೇ ಗಿರಿಮ್/ಯತ್ಕøಪಾ ತಮಹಂ ವಂದೇ, ಪರಮಾನಂದ ಮಾಧವಮ್//-
4. ಯಂ ಬ್ರಹ್ಮಾ ವರುಣೇಂದ್ರರುದ್ರಮರುತ:, ಸ್ತುನ್ವಂತಿ ದಿವ್ಯೈ: ಸ್ತವೈ:/ ವೇದೈಸ್ಸಾಂಗಪದಕ್ರಮೋಪನಿಷದೈ:,ಗಾಯಂತಿ ಯಂ ಸಾಮಗಾ://
5. ಧ್ಯಾನಾವಸ್ಥಿತತದ್ಗತೇನಮನಸಾ, ಪಶ್ಯಂತಿ ಯಂ ಯೋಗಿನ:/ಯಸ್ಯಾಂತಂ ನ ವಿದುಸ್ಸುರಾಸುರಗಣಾ:,ದೇವಾಯ ತಸ್ಮೈನಮ://--
ಯಾರ ಕೃಪೆಯಿದ್ದಿದ್ದಾರೆ, ಮೂಕನನ್ನೂ ವಾಚಾಳಿಯಾಗಿಯೂ, ಊನ ಕಾಲಿನವನನ್ನೂ ಪರ್ವತಕ್ಕೂ ಹಾರುವ ಶಕ್ತಿ ಗಳಿಸುವಂತೆ ಪ್ರೇರೇಪಿಸುವ, ಆ ಪರಮಾನಂದ ಸ್ವರೂಪಿ ಶ್ರೀ ಕೃಷ್ಣನಿಗೆ ನಮೋನಮೋ. ಬ್ರಹ್ಮ, ವರುಣ, ಇಂದ್ರ, ಮರುತರಿಂದೆಲ್ಲಾ ದಿವ್ಯ ಸ್ತೋತ್ರಗಳಿಂದ ಕೊಂಡಾಡಲ್ಪಡುವವನೋ, ಋಷಿಗಳಿಂದ ಅಂಗ, ಪದಕ್ರಮ, ಉಪನಿಷತ್ತುಗಳಿಂದ ಕೂಡಿದ ಸಾಮ, ವೇದ ಮಂತ್ರಗಳಿಂದ ಕೀರ್ತನ ಮಾಡಲ್ಪಡುವನೋ, ನಿಶ್ಚಲ ಚಿತ್ತದ ಯೋಗಿಗಳಿಂದ ಧ್ಯಾನಿಸಲ್ಪಡುವವನೋ, ಸುರಾಸುರರೂ ಯಾರ ಅಂತ್ಯವನ್ನ ತಿಳಿಯಲಾರರೋ ಆ ಪರಮಾತ್ಮ(ಶ್ರೀ ಕೃಷ್ಣ)ನಿಗೆ ನಮಸ್ಕಾರವು.(ಮುಂದುವರೆಯುವುದು...)-
28-1-2022_(ಮುಂದುವರೆದುದು)-
6. ದೇವರು ಶರಣಾಗತ ವತ್ಸಲನೆನ್ನುವ ಮಾತು ರೂಢಿಯಲ್ಲಿದೆ. ಶರಣು ಬಂದವರು ಶತೃವಾದರೂ ಅವರಿಗೆ ಅಭಯ ನೀಡುವುದು ನೀತಿ,. ಭಾರತೀಯ ಸಂಸ್ಕøತಿಯ ಧರ್ಮ ರಕ್ಷಣೆ ಹಾಗೂ ಬಹು ಪುಣ್ಯ ಕಾರ್ಯವು ಕೂಡ. ಇದನ್ನೇ ಶ್ರೀರಾಮನು ರಾಮಾಯಣದಲ್ಲಿ 'ಶರಣಾಗತ ರಕ್ಷಣೆ ನನ್ನ ದೀಕ್ಷೆ' ಎಂದು ಹೇಳಿರುವುದು. ಇದನ್ನೇ ಭದ್ರಗಿರಿ ಅಚ್ಯುತ ದಾಸರು ತಮ್ಮ ಹರಿಕಥೆಗಳಲ್ಲಿ ರಾಣಾ ರಣಜಿತ್ ಸಿಂಗರ ಔದಾರ್ಯ ಗುಣದ ಉದಾಹರಣೆ ಕೊಟ್ಟು ಸಮರ್ಥಿಸುತ್ತಾರೆ-
--ಈ ರಾಣಾ ರಣಜಿತ್ ಸಿಂಗ್ ಭಾರತದ ಮಹೋನ್ನತ ಔದಾರ್ಯ ಗುಣದ ಸತ್ಪುರುಷ. ಆತನು ಪರಿವಾರ ಸಮೇತ ಒಮ್ಮೆ ವನವಿಹಾರದಲ್ಲಿದ್ದಾಗ, ಒಬ್ಬ ಮದುಕಿ ಮಾವಿನ ಹಣ್ಣಿನ ಆಸೆಗಾಗಿ ಅದರ ಮರಕ್ಕೆ ಕಲ್ಲು ಎಸೆಯುವಳು. ದುರದೃಷ್ಟವಶಾತ್, ಆ ಕಲ್ಲು ಗುರಿ ತಪ್ಪಿ ರಾಜನ ಕಣ್ಣಿಗೆ ಬಡಿದು ನೆತ್ತರು ಚಿಮ್ಮಿತು. ರಾಜ ಭಟರು ಕೂಡಲೇ, ಆ ಕಲ್ಲು ತೂರಿ ಬಂದ ದಿಕ್ಕಿನಲ್ಲಿ ಹೋಗಿ ಮುದುಕಿಯು ಮಾಡಿದ ತಪ್ಪನರಿತು, ಆಕೆಯನ್ನ ಹಿಡಿದು ರಾಜನ ಮುಂದೆ ಅಪರಾಧಿಯಾಗಿ ನಿಲ್ಲಿಸಿ, ಆಕೆಗೆ ಶಿಕ್ಷೆ ವಿಧಿಸುವಂತೆ ಕೋರಿದರು. ಮುದುಕಿ ತನಗ್ಯಾವ ಶಿಕ್ಷೆ ಕಾದಿದೆಯೋ ಎಂದು ಗಡಗಡ ನಡಗುತ್ತ ತಾ ಅರಿಯದೆ ಮಾಡಿದ ತಪ್ಪಿಗೆ ಕ್ಷಮೆ ಅಂಗಲಾಚಿದಳು.
ಮುದುಕಿಯ ದೈನ್ಯವನ್ನ ಕಂಡು ತನ್ನ ನೋವನ್ನೂ ಮರೆತು, ಆಕಸ್ಮಿಕವಾಗಿ ನಡೆದುಹೋದ ಕಾರ್ಯಕ್ಕಾಗಿ ವಿಶಾಲ ಹೃದಯದಿಂದ ಆಕೆಯನ್ನ ಕ್ಷಮಿಸಿದುದಲ್ಲದೆ, ಆಕೆಗೋಸ್ಕರವೇ ತನ್ನ ಅರಮನೆ ಪಕ್ಕದಲ್ಲೇ ಮನೆಯೊಂದ ಕೊಟ್ಟು, ಆಕೆಗೆ ಆಜೀವಪರ್ಯಂತ ಸುಖವಾಗಿರಲು ಎಲ್ಲ ಸೌಕರ್ಯದ ವ್ಯವಸ್ಥೆ ಮಾಡಲು ಮಂತ್ರಿಗಳಿಗೆ ಆದೇಶಿಸುತ್ತಾನೆ. ರಾಜನ ಈ ವಿಚಿತ್ರ ನಿರ್ಧಾರಕ್ಕೆ ಎಲ್ಲರೂ ಸಖೇದಾಶ್ಚರ್ಯಗೊಂಡು, ಕಾರಣ ಕೇಳುವರು. ಧರ್ಮನಿಷ್ಟನಾದ ರಾಣಾ ರಣಜಿತ್ ಸಿಂಗನ ಉತ್ತರ ಎಲ್ಲರಿಗೂ ಮಾರ್ಗದರ್ಶನವೀಯುವಂತಹುದು-ಮುದುಕಿ ಎಸೆದ ಕಲ್ಲು ಆಕೆ ಅಂದುಕೊಂಡಂತಾಗಿದ್ದರೆ ಆಕೆಗೆ ಮರವು ಹಣ್ಣನ್ನು ಕೊಟ್ಟು ಕೃತಾರ್ಥವಾಗುವುದಿತ್ತು. ನಾವು ಮಾನವರಾಗಿದ್ದು ಧರ್ಮದ ನೆಲೆಗಟ್ಟು ತಿಳಿದವರಾಗಿ, ಆಕೆಯನ್ನ ಕ್ಷಮಿಸದೆ ಶಿಕ್ಷೆಗೆ ಗುರಿಮಾಡಿದ್ದೇ ಆದರೆ, ಆ ಮರಕ್ಕಿಂತಲೂ ಕೀಳಾಗುವುದಿತ್ತಲ್ಲವೇ?(ಮೂಲ:-"ಭದ್ರಗಿರಿ ಉಪಕಥಾ ಪ್ರಪಂಚ" ಪುಸ್ತಕ, ಲೇಖಕ ಶ್ರೀ. ಶ್ರೀಕರ ಭಟ್ಟರ ಕೃಪೆ ಕೋರಿ)(ಮುಂದುವರೆಯುವುದು).
29-1-2022-
7. ಗೋ ಮಾತೆಯ ಸಾದೃಶ್ಯತೆ:
ಭಾರತೀಯರ ಧರ್ಮ ಪಾಲನೆಯಲ್ಲಿ ಅತಿ ಹೆಚ್ಚು ಗೌರವ ಸ್ಥಾನವನ್ನ ಗೋ ಮಾತೆಗೆ ಕೊಟ್ಟಿರುವುದು ಸರ್ವ ವಿದಿತವಷ್ಟೆ. ಗೋಪಾಲ ಕೃಷ್ಣನ ಹೆಸರೇ ಗೋವಿನಿಂದ ಪ್ರಾರಂಭವೆಂದಾಗ ಗೋವು ದೈವ ಸ್ವರೂಪವೆನಂದೇ ವೇದಾದಿ ಆಗಮಗಳಲ್ಲಿ ಉಕ್ತ. ಗೋವಿನ ಶ್ರೇಷ್ಠತೆಯ ಬಗ್ಗೆ ಅನೇಕ ಉದಾಹರಣೆಗಳಿದ್ದರೂ, ಹರಿದಾಸ ಭದ್ರಗಿರಿ ಅಚ್ಯುತ ದಾಸರ ಹರಿಕಥೆಗಳಲ್ಲಿ ಒಂದು ಪೌರಾಣಿಕ ನಿದರ್ಶನವನ್ನ ಮಹರ್ಷಿ ಆಪಸ್ತಂಭರ ಮೂಲಕ ಸ್ವಾರಸ್ಯವಾಗಿ ನಿರೂಪಿಸಿರುವುದುಂಟು. ಸಮೃದ್ಧವಾದ ಒಂದು ದೇಶದಲ್ಲಿ ಬರಗಾಲ ಮೂಡಿ, ತುತ್ತು ಅನ್ನಕ್ಕೂ ಆಸರಿಲ್ಲದೆ, ವಿಧಿಯಿಲ್ಲದೆ ರೈತಾಪಿ ಜನ ಆಹಾರಕ್ಕಾಗಿ ಮೀನು ಹಿಡಿಯುವ ಕಾರ್ಯಕ್ಕಿಳಿದರು. ಬಲೆಬೀಸಿದ್ದಾಗೊಂದು ಸಲ ಅದರಲ್ಲಿ ತಪಸ್ಸಿಗೆ ಕೂತ ಮನುಷ್ಯಾಕೃತಿ ಕಂಡು ನಡುಗಿಹೋಗುವರು. ಆ ಋಷಿಯೇ ಧರ್ಮಸೂತ್ರ, ಗೃಹ್ಯಸೂತ್ರಗಳ ರಚಿಸಿದ ಆಪಸ್ತಂಭರು. ಅವರ ಕಂಡು ಭಯಬೀತರಾದ ಕೃಷಿಕರು ಅವರ ಕ್ಷಮೆ ಕೋರಿದಾಗ, ಋಷಿಗಳು ವಿಚಲಿತರಾಗದೆ, 'ತಪ್ಪು ನಿಮ್ಮದಲ್ಲ, ನಿಮ್ಮನ್ನ ಪಾಲಿಸುವ ರಾಜನದೇ ಎಂದು ಅವನ ಕರೆಸುವಂತೆ' ಅಪ್ಪಣೆ ಕೊಡಿಸಿದರು.
ರಾಜನು ಬಂದಾಗ, 'ತಾನು ಇವರಿಂದ ಬಂಧಿಸಲ್ಪಟ್ಟು, ಅವರಿಗೆ ಒತ್ತೆಯಾಗಿರುವುದು ಧರ್ಮ ಶಾಸ್ತ್ರದ ಪ್ರಕಾರ ಸರಿಯಿದೆ. ಆ ಕಾರಣ, ರಾಜನಾಗಿ ನೀನು ನನಗೆ ಸರಿಸಮವಾದ ವಸ್ತು ಕೊಟ್ಟು ನನ್ನನ್ನ ಬಿಡಿಸಿ, ಅವರ ಸಮಸ್ಯೆಗೆ ಪರಿಹಾರ ನೀಡೆನ್ನುತ್ತಾರೆ. ರಾಜನಿಗೆ ಈ ಮಹಾನ್ ಋಷಿಗೆ ಸಮಾನವಾದ ಪರಿಹಾರವೇನೆಂದು ತಿಳಿಯದೆ ಅವರನ್ನೇ ಕೋರಿದಾಗ, 'ಗೋವಿಗಿಂತ ಹೆಚ್ಚಿನ ದಾನ ಯಾ'ವುದೂ ಇಲ್ಲ. ಆ ಕಾರಣ, ಈ ಜನರಿಗೆ ಒಬ್ಬೊಬ್ಬರಿಗೂ, ಗೋವನ್ನ ಕೊಡಿಸಿ ಅವರ ಜೀವನಕ್ಕೆ ದಾರಿ ಮಾಡಿದರೆ, ಗೋವು ಋಷಿ ಸಮಾನ, ಹಾಗಾಗಿ ಅವರ ಜೀವನ ಸಮೃದ್ಧವಾಗಿಯೂ, ನಿನ್ನ ದೇಶ ಸುಖಸಂತೋಷದ ಆಗರವಾಗುವದೆಂದು' ತಿಳಿಹೇಳಿ, ರಾಜನ ಹಾಗು ಪ್ರಜೆಗಳ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ. ಇದನ್ನೇ ಗೋವಿನ ಹಾಡಲ್ಲೂ ನಾವು ಕೇಳಿದ್ದು, ಮನುಷ್ಯನಾಗಿ ಸಾರ್ಥಕ ಜೀವನ ನಡೆಸಲು, ಗೋವಿನ ಆದರ್ಶ ನಮಗೆ ಶ್ರೇಷ್ಠವೆನಿಸುವುದು(ಮುಂದುವರೆಯುವುದು)-.
30-1-2022---8. ಸಂಸ್ಕೃತ ಭಾಷೆಯ ವಿದ್ವಾಂಸರಲ್ಲಿ ಸುಮಾರು ಕ್ರಿ.ಶಕ 700'ರ ಅವಧಿಯಲ್ಲಿ ಪ್ರಸಿದ್ಧಿಗೆ ಬಂದ ಕವಿ ಭರ್ತೃಹರಿ. ಈತ ವ್ಯಾಕರಣ ಶಾಸ್ತ್ರದ ಬಗ್ಗೆ 'ವಾಕ್ಯ ಪದೀಯ' ಹಾಗೂ ಜೀವನದ ಮೌಲ್ಯಗಳ ಬಗ್ಗೆ 'ಸುಭಾಷಿತ ತ್ರಿಶತಿ' ರಚಿಸಿರುವುದುಂಟು. 'ಸುಭಾಷಿತ ತ್ರಿಶತಿ' ಯಲ್ಲಿ 'ಶೃಂಗಾರ ಶತಕ', 'ನೀತಿ ಶತಕ' ಹಾಗೂ 'ವೈರಾಗ್ಯ ಶತಕ'ವೆಂದು ವಿಂಗಡಿಸಿ ಜೀವನ ತತ್ವಗಳನ್ನ ಸರಳವಾಗಿ ಅರ್ಥೈಸಿದ್ಧಾನೆ.
ತನ್ನ 'ನೀತಿ ಶತಕ'ದಲ್ಲಿ ಒಂದೆಡೆ ಗುಣಾಢ್ಯತೆಯೆಂದರೆ ಹೇಗೆಂದು ವಿವರಿಸುತ್ತಾನೆ-ಪ್ರಾಣಾಘಾತಾನ್ನಿವೃತ್ತಿ: ಪರಧನಹರಣೇ ಸಂಯಮ: ಸತ್ಯವಾಕ್ಯಂ/ಕಾಲೇ ಶಕ್ತ್ಯಾ ಪ್ರದಾನಂ ಯುವತಿಜನಕಥಾಮೂಕಭಾವ: ಪರೇಷಾಮ್//ತೃಷ್ಣಾಸ್ರೋತೋವಿಭಂಗೋ ಗುರುಷು ಚ ವಿನಯ: ಸರ್ವಭೂತಾನುಕಂಪಾ/ಸಾಮಾನ್ಯಂ ಸರ್ವಶಾಸ್ತ್ರೇಷ್ವನುಪಹತವಿಧಿ: ಶ್ರೇಯಸಾಮೇಷ ಪಂಥಾ://-
-ಪ್ರಾಣಿ ಹಿಂಸೆ ಮಾಡದೆ, ಪರ ಧನಕ್ಕೆ ಆಶೆ ಪಡದೆ ಆಥವಾ ಅಪಹರಿಸುವ ಇಂಗಿತವಿರದೆ, ಸಂಯಮದಿಂದ ಕೂಡಿ ಬಾಳುವುದು, ಅನೃತಕ್ಕೆ ಅವಕಾಶ ಕೊಡದೆ,(ಅವಶ್ಯಕತೆಯಿದ್ದಾಗ) ಸತ್ಯವನ್ನೇ ನುಡಿಯುವುದು, ದಾನವಂತನಾಗಿರುವುದು, ಯುವತಿಯರ ಬಗ್ಗೆ ಮೂಕವಾಗಿರುವುದು,(ಮಾತಿನಲ್ಲಿ ನಿರಾಸಕ್ತಿ), ಗುರುಹಿರಿಯರಲ್ಲಿ ಗೌರವಾದರಗಳು, ಸಮಸ್ತ ಜೀವಿಗಳಲ್ಲಿ ಹೃದಯವಂತಿಕೆ, ಸರ್ವ ಶಾಸ್ತ್ರಗಳಲ್ಲಿ ಆಸಕ್ತಿ, ಅಧ್ಯಯನಕ್ಕೆ ಒತ್ತು-ಹೀಗೆ ಇವುಗಳೆಲ್ಲ ಮಾನವರ ಶ್ರೇಯಸ್ಸಿಗೆ ಮೂಲವು. ಆದ್ದರಿಂದ ನೀತಿಪಥದಲ್ಲಿ ಸನ್ಮಾರ್ಗಿಗಳಾಗಿ ಬದುಕುವುದು ಶ್ರೇಯಸ್ಕರವು.
31-1-2022---9. ರೂಪಯೌವನಸಂಪನ್ನಾ: ವಿಶಾಲಕುಲಸಂಭವಾ:/ ವಿದ್ಯಾಹೀನ ನ ಶೋಭಂತೇ ನಿರ್ಗಂಧಾ ಇವ ಕಿಂಶುಕಾ://--ಎಷ್ಟೇ ರೂಪ, ಯೌವನವಂತರಾದರೂ, ದೇಹದಾಢ್ರ್ಯ ತೇಜೋವಂತರೂ ಹೆಸರುಪಡೆದ ಸತ್ಕುಲವಂಶಜರಾದರೂ ವಿದ್ಯಾವಿಹೀನರಾದರೆ ಪ್ರಸಿದ್ಧಿಗೆ ಬರಲಾಗರು. ಕಾರಣ, ಪಲಾಶ(ಕಿಂಶುಕ) ಪುಷ್ಪದಂತೆ ಸುಂದರವಾಗಿದ್ದೂ ನಿರ್ಗಂಧವಾಗಿ ತನ್ನ ಬಳಿಗೆ ಆಕರ್ಷಿಸಲು ಸಾಧ್ಯವಾಗುವುದಿಲ್ಲ.
9. ಗುಣೇಶು ಯತ್ನ: ಪುರುಷೇಣ ಕಾರ್ಯ: ನ ಕಿಂಚಿದಪ್ರಾಪ್ಯತಮಂ ಗುಣಾನಾಂ/ ಗುಣಪ್ರಕರ್ಶದುಡುಪೇನ ಶಂಭೋಅಲಂಗ್ಯಮುಲ್ಲಂಧಿಮುತ್ತಮಾಂಗಮ್// ಪ್ರತಿಯೊಬ್ಬ ಮಾನವನೂ ಒಳ್ಳೆಯ ಗುಣವಂತನಾಗಿರಬೇಕು. ಹಾಗಿದ್ದಲ್ಲಿ ಅಸಾಧ್ಯವಾದದ್ದನ್ನ ಕೂಡ ಪಡೆಯಲು ಶಕ್ತಿವಂತರಾಗಲು ಸಾಧ್ಯವು. ಬಾನಲ್ಲಿ ರಾತ್ರಿ ಇಡೀ ಜಗತ್ತಿಗೇ ಆಹ್ಲಾದಕರ ಬೆಳಕನ್ನ ಚೆಲ್ಲುವ ಆ ಶಶಿಯು ಮಹಾ ತೇಜೋಮಯಿ ಶಿವನ ಶಿರದಲ್ಲಿ ಸ್ಥಾನ ಪಡೆಯಲು ಸಾಧ್ಯವೋ?........
Comments