ಬಾಣಸಿಗೋಪಾಖ್ಯಾನ
- HRH Rau
- Jun 15, 2021
- 5 min read
Updated: Jul 2, 2023
ಪ್ರಶ್ನೆ: ಈ ಬರಹ ಬರೆಯುತ್ತಿರುವ ನೀವು ಅಡಿಗೆ ಭಟ್ಟರೆ? ನಮಗೆ ಅದರ ಅವಶ್ಯಕತೆಯಿಲ್ಲ.
ನಾನು: ಕ್ಷಮಿಸಿ, ಖಂಡಿತ ಅಲ್ಲ, ಅಡಿಗೆಯ ವಿಚಾರದಲ್ಲಿ ಅತ್ಯಂತ ಹಿಂದುಳಿದ ಪಂಗಡದವನು. ನನ್ನ ಜ್ಞಾನ ಹೆಚ್ಚೆಂದರೆ ಊಟದ ಸವಿಯನ್ನು ಅನುಭವಿಸುವುದಷ್ಟೆ.
ಪ್ರಶ್ನೆ: ಹಾಗಿದ್ದಮೇಲೆ ಈ ತಲೆ ಬರಹದಿಂದ ನಾವು ಅಂದರೆ ಓದುಗರಿಗೆ ಆಗಬೇಕಾದ್ದೇನು? ಪಾಕ ಶಾಸ್ತ್ರದ ಬಗ್ಗೆ ಬೇಕಿದ್ದರೆ ನಾವು ‘ಬೊಂಬಾಟ್ ಭೋಜನ’ದ ಚಂದ್ರು ಅವರನ್ನು ಕೇಳಿ ತಿಳಿಯುತ್ತೇವೆ, ಅದೂ ಬೇಡ, ಯಾವುದೇ ಕನ್ನಡ ಚಾನೆಲ್ಗೆ ಮಧ್ಯಾನ್ಹ ತಿರುಗಿಸಿದರೆ ಇಲ್ಲವಾ ಹೋಟೆಲ್ನಲ್ಲಿ ಅವರ ‘ಬೊಂಬಾಟ್ ಊಟದ ‘ಸವಿಯೂಟ’ ಕಾರ್ಯಕ್ರಮವಿದ್ದರೆ ಅಲ್ಲೇ ತಿಳಿಯುತ್ತೇವೆ. ನಿಮ್ಮ ಈ ಪುರಾಣ ಯಾರಿಗೆ ಬೇಕು?
ನಾನು: ಕ್ಷಮಿಸಿ, ನಿಮಗೆ ತೊಂದರೆ ಕೊಡುವ ಜಾಯಮಾನದವನಲ್ಲ ನಾನು .....
ಪ್ರಶ್ನೆ: ಹಾಗಿದ್ದಮೇಲೆ ನಿಮ್ಮ ಲೇಖನಿ ಪಕ್ಕಕ್ಕಿಟ್ಟು ‘ರಿಟೈರ್’ ಆಗಿರಿ. ನಮ್ಮ ತಾಳ್ಮೆಯನ್ನು ಪರೀಕ್ಷಸದಿರಿ.
ನಾನು: ನನ್ನ ಬದುಕಿನ ಜಂಜಾಟದಲ್ಲಿ ಸ್ವಲ್ಪಮಟ್ಟಿಗೆ ‘ಟೈರ್ಡ್’ ಆಗಿರುವುದೇನೋ ನಿಜವೆ. ಹಾಗೆಂದು ಉತ್ತರ ಕುಮಾರನಂತೆ ‘ಬೀಟಿಂಗ್ ದಿ ರಿಟ್ರೀಟ್ ’ ಮಾಡುವವನೂ ಅಲ್ಲ, ಸವೆದ ಟೈರುಗಳಂತೆ ರಿಟ್ರೆಡ್ಗೂ ಒಪ್ಪುವವನಲ್ಲ. ಬೇಕಿದ್ದರೆ ನನ್ನ ಸಹೋದ್ಯೋಗಿಗಳನ್ನೇ ಕೇಳಿರಿ. ‘ಇವನು ಬಲು ಗಟ್ಟಿ ಪಿಂಡ, ಸುಲಭಕ್ಕೆ ಸೋಲುವವನಲ್ಲ’ ಎಂದು ನನ್ನ ಬೆನ್ನು ಹಿಂದೆಯೇ ಆಡಿಕೊಂಡವರಿದ್ದಾರೆ.
ಪೃಚ್ಛಕ 2: ನೀವು ಉದ್ದೇಶ ಪೂರ್ವಕವಾಗಿಯೇ ಈ ಬಗ್ಗೆ ಬರೆಯಲು ಕಾಡುವವರಾದರೆ, ಬೇರೆ ಪತ್ರಿಕೆಯನ್ನವಲಂಬಿಸಿ, ಈ ಪತ್ರಿಕೆಯ ಓದುಗರಾದ ನಮ್ಮನ್ನು ಬಿಟ್ಟುಬಿಡಿ.
ನಾನು: ಆ ಮಾತು ಬಿಡಿ, ಈ ಸಿಹಿ ಕಹಿ ಚಂದ್ರು ನಾಟಕ, ಸಿನೆಮಾ ರಂಗದಲ್ಲಿ ಪ್ರಸಿದ್ಧಿಯಾದವರು, ಮುಂದೊಂದು ದಿನ ಡಾಕ್ಟರೇಟ್ ಕೂಡ ಪಡೆಯುವರೇನೋ. ಪಾಪ ಪಾಂಡು, ಸಿಲ್ಲಿ ಲಲ್ಲೀ ಇತ್ಯಾದಿ ಸೀರಿಯಲ್ ಗಳಿಂದಾಗಿ, ಇವರ ಪ್ರತಿಭೆಗೆ ಇನ್ನಷ್ಟು ಮೆರಗು ಬಂದಿರುವುದೇನೋ ನಿಜ. ಆದರೆ, ಇದೀಗ, ಈ ‘ಬೊಂಬಾಟ್ ಊಟ’ ದ ಆಟದಲ್ಲೂ ಟೀವಿ ಚಾನೆಲ್ಗಳ ಡಾರ್ಲಿಂಗ್ ಆಗುತ್ತಿದ್ದಾರೆ ಎಂದರೆ !?
ಪೃಚ್ಛಕ 1: ನಿಮಗೇನು ಸಂಕಟ ಅದರಿಂದ? ನೀವು ಈ ರೀತಿ ನಮ್ಮ ಔದಾರ್ಯವನ್ನ ಹಾಳು ಕೆಡವಬೇಡಿ.
ನಾನು: ಅಡಿಗೆ ನಮ್ಮ ಜೀವನದ ದಿನ ನಿತ್ಯದ ಒಂದು ಅತ್ಯಂತ ಮಹತ್ವಗಳೊಲ್ಲೊಂದು. ನಿಮ್ಮ ಹೆಂಡತಿ ಇಲ್ಲವೇ ಅಡಿಗೆ ಭಟ್ಟ ನಿಮ್ಮ ಆರೋಗ್ಯ ಸರಿಯಾಗಿಟ್ಟಿರಲೂ ಅಥವಾ ಹಾಳುಗೆಡವಲೂ ಕಾರಣ, ತಿಳಿದಿದೆಯೇ? ಇಡೀ ಪ್ರಪಂಚದಲ್ಲಿ ಮನುಷ್ಯನ ಉನ್ನತಿಗೂ, ಅಧೋಗತಿಗೂ ಇವರಿಬ್ಬರೇ ಕಾರಣ ಎಂದು ನನ್ನ ಅಭಿಪ್ರಾಯ.
ಪೃಚ್ಛಕ 2 :ಹಾಗಿದ್ದಮೇಲೆ ನೀವೇ ಅಡಿಗೆ ಮಾಡಿಸಿ ಇಲ್ಲವೇ ಮಾಡಿ, ಬಡಿಸಿ, ಬಡಿಸಿಕೊಂಡು ನಿಮ್ಮ ಹೆಂಡತಿಯನ್ನಷ್ಟೇ ಮೆಚ್ಚಿಸಿ ಇಲ್ಲ ಕಾಡಿಸಿ. ನಮ್ಮನ್ನಲ್ಲ.
ಪೃಚ್ಛಕ 1: ನಿಮ್ಮದು ಅತಿರೇಕದ ಮಾತು, ನ್ಯೂಟನ್, ಜಾನ್ ಫೋರ್ಡ್, ಮರ್ಲಿನ್ ಮನ್ರೋ, ಐನ್ಸ್ಟನ್, ಗಾಂಧಿ, ಬುದ್ಧ, ಭಟ್ಟ ಭಾಸ್ಕಾರಾಚಾರ್ಯ,ಕುವೆಂಪು ಮುಂತಾದವರುಗಳು ರಸ ಭೋಜನ ಬಡಿಸಿಸಿಕೊಂಡೇ ಪ್ರಸಿದ್ಧಿಯಾದರೆಂದು ನಿಮ್ಮ ಅನಿಸಿಕೆಯೇ?
ನಾನು: ನಿಮ್ಮ ತರ್ಕ ಒತ್ತಟ್ಟಿಗಿರಲಿ, ನೀವು ‘ಬಡಿಸಿ’ ಎಂದಾಗ ಜ್ಞಾಪಕಕ್ಕೆ ಬಂತು ನೋಡಿ. ಪ್ರೊ.ಎ. ಎನ್. ಮೂರ್ತಿರಾಯರು ಒಂದೆಡೆ ಬರೆಯುತ್ತ, ವಿ.ಸೀ. ಯವರನ್ನು ಒಂದು ಬಾರಿ ಊಟಕ್ಕೆ ಕರೆದಿದ್ದರಂತೆ. ಬಡಿಸುವಾಗ, ದೋಸೆಯ ಬಗ್ಗೆ ಮಾತು ಬಂದು, ಒಂದು ಪಿ.ಎಚ್. ಡಿಯ ಸಂಶೋಧನೆಗೆ ಸಾಕಾಗುವಷ್ಟರ ಮಟ್ಟಿಗೆ ವಿಚಾರವನ್ನ ವಿಮರ್ಶಿಸಿದರೆಂದಿದ್ದಾರೆ. ಸ್ವತ: ವಿಸೀ. ಯವರೇ ಕೂಡ ದೋಸೆಯ ಬಗ್ಗೆ ಮೂರು ಸಾವಿರ ಪದಗಳಷ್ಟು ವಿಸ್ತೃತ ಪ್ರಬಂಧವನ್ನ ಬರೆದಿದ್ದಾರೆ ಗೊತ್ತಾ ರಾಯರೆ?
ಪೃಚ್ಛಕ 2: ಮತ್ತೆ ಅದೇ ಪುರಾಣ. ಅಲ್ರೀ, ಹಿಂದೆ ‘ಬರಹಗಾರನ ಬವಣೆ’ ಎಂಬ ಲೇಖನ ಪತ್ರಿಕೆಯಲ್ಲಿ ಬರೆದು ನಮ್ಮ ಹಣೆ ಬರಹವನ್ನ ಹಾಳ್ಕೆಡವಿದಿರಿ. ಇನ್ನೂ ಸಾಲದೇ?
ನಾನು : ಸಾಧ್ಯವಿಲ್ಲ ಬಿಡಿ, ನಾನೇನೂ ಬ್ರಹ್ಮನಲ್ಲ. ‘ಅಷ್ಟಕ್ಕೂ ‘ವಿಧಿ ಲಿಖಿತ’ ಅನ್ನುವ ಮಾತುಂಟಲ್ಲವಾ? ಮರೆಯಬೇಡಿ, ಅಡಿಗೆ ಮಾಡಲು ಕಲಿತ ಭೀಮ ಯುದ್ಧದಲ್ಲೂ ಅಷ್ಟೇ ನಿಪುಣನಾದ! ಹಾಗಾದರೆ ಅದು ಅವನ ಹಣೆ ಬರಹವೋ? ಅವನು ಜೀವನದಲ್ಲಿ ಕಷ್ಟಪಟ್ಟು ಸಾಧಿಸಿದ್ದಲ್ಲವೋ?
ಪೃಚ್ಛಕ 3: ಈಚೆಗೆ, ಜಯಲಲಿತರ ಬಗ್ಗೆ ತೀರ್ಮಾನವೊಂದು ಅವರ ಗಳಿಕೆಯ ಬಗ್ಗೆ ಪ್ರಕಟವಾಗಿದೆಯಲ್ಲವೇ? ಅದು ಕೂಡ ಅವರ ಹಣೆ ಬರಹವನ್ನ ಕುರಿತಾದ್ದೇ. ತಮ್ಮ ಹಣೆ ಬರಹ ತಾವೇ ಬರೆದುಕೊಂಡಂತಾಗಲಿಲ್ಲವೆ?
ಪೃಚ್ಛಕ 2: ನಿಮಗೂ ಅ ಪರಿಸ್ಥಿತಿ ಬರಬಾರದೆಂದೇ, ಇಲ್ಲಿಗೇ ನಿಲ್ಲಿಸಿ, ಮುಂದಿನ ಕೆಲಸ ನೋಡಿ.
ನಾನು: ಆಕೆಯ ಮಾತು ಬೇಡ. ‘ಪೆನ್ ಇಸ್ ಮೈಟಿಯರ್ ದಾನ್ ಸ್ವೋರ್ಡ್’ ಅನ್ನುವ ಮಾತಿದ್ದರೂ ನನ್ನ ಲೇಖನದಿಂದ ನಿಮಗೇನೂ ಬವಣೆಯಾಗಲಾರದು. ಏನಿದ್ದರೂ ಸಂಪಾದಕರ ದೃಷ್ಟಿ ಕಸದ ಬುಟ್ಟಿಯಿಂದ ಮೇಜಿಗೂ, ಮೇಜಿನಿಂದ ಕ.ಬು.ಗೂ ಹೊರಳಬಹುದಷ್ಟೆ. ಆದರೆ ನೋಡಿ, ಆಕೆಯ ಊಟ ಜೈಲಿನಲ್ಲಿರುವವರೆಗೆ ಮೊದಲಿನಂತೆ ಬೊಂಬಾಟಾಗಿರಲಾರದಷ್ಟೆ?
ಪೃಚ್ಛಕ 1: ಸಾಕು ಬಿಡಿ, ಆಕೆಯ ಹಣೆ ದೊಡ್ಡದಾಗಿದೆ, ಆಕೆ ಇನ್ನಷ್ಟು ಬರೆದು ಕೊಳ್ಳಲೂ ಜಾಗವಿದೆ, ಬಂಗಾರದ ತಟ್ಟೆಯಲ್ಲೂ ಊಟ ಮಾಡುತ್ತಾಳೆ. ಆದರೆ ನಿಮ್ಮಿಂದಾಗಿ ನಮಗೆ…. .
ನಾನು: ಈ ಊಟದ ಬಗ್ಗೆ ಮಾತಾಡುವಾಗ, “ರಂಗ ಬಿನ್ನಪ”ಖ್ಯಾತಿಯ ದಿವಂಗತ ‘ಎಮ್. ಅರ್. ಶ್ರೀನಿವಾಸಮೂರ್ತಿ’ ಯವರ ‘ರಂಗಣ್ಣನ ಕನಸಿನ ದಿನ ಗಳು’ವಿನಲ್ಲಿಯ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ಹೇಳಲೆ? ‘ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರಲಾರದು’ ಗಾದೆ ನೆನಪಿಸುವ ಈ ಕಥೆ ….
ಪೃಚ್ಛಕ 3: ಸತ್ತು ಸ್ವರ್ಗದಲ್ಲಿರುವ ಆ ಪ್ರಾತ: ಸ್ಮಾರಣೀಯರನ್ನೇಕೆ ಈಗ ಎಳೆದು ತಂದು ಅವರ ಆತ್ಮಕ್ಕೆ ಹಿಂಸಿಸುವಿರಿ? ನಮಗೂ ಅಷ್ಟೆ. ಉಸಿರಾಡಲು ಬಿಡಿ. ನಮ್ಮ ಬಳಿ ಯಾವ ತಲೆನೋವಿನ ಮಾತ್ರೆಯು ಇಲ್ಲ. ಊಟದ ಬಗ್ಗೆ….
ನಾನು: ಹೌದೌದು, ಆ ಬಗ್ಗೆಯೇ ನಾನು ಹೇಳಬೇಕೆಂದಿದ್ದುದು. ನನಗೆ ಅಪರೂಪವಾಗಿ ಅಡಿಗೆ ಮನೆಯ ಕೆಲಸ ಹೆಂಡತಿ ತೌರಿಗೆ ಹೋದಾಗ-ಅದು ಬಲು ಅಪರೂಪ - ಬೀಳುತ್ತದೆ. ಹೋಗುವಾಗ, ನನಗೆ ಒಂದು ಪುಸ್ತಕ ಬರೆಯುವಷ್ಟಾದರೂ ನನ್ನ ನಿತ್ಯ ಕರ್ಮಗಳ ಪಟ್ಟಿಯನ್ನು ಒಪ್ಪಿಸಿ ಹೋಗುತ್ತಾಳೆ, ‘ಅಡಿಗೆ ನೀವೆ ಮಾಡಿಕೊಳ್ಳಿ, ಹೋಟೇಲಲ್ಲಿ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ, ಮೊದಲೇ ನಿಮಗೆ ಅಸಿಡಿಟಿ ಬೇರೆ, ‘ಸಂಜೆಯಾಗುತ್ತಲೇ ಸ್ನೇಹಿತರೊಡನೆಕಾಲ ಹರಣ ಮಾಡಿ, ಮನೆಗೆ ತಡವಾಗಿ ಸೇರುವ ಚಾಳಿಬಿಟ್ಟು ಮನೆ ಬೇಗ ಸೇರಿ, ಪಕ್ಕದ್ಮನೆ ರಂಗಪ್ಪನ ಜೊತೆ ಸೇರಿ ಇಸ್ಪೀಟ್ ಆಡೋದ ನಂಗೇನಾದ್ರೂ ಗೊತ್ತಾದ್ರೆ ನಿಮ್ಮದೃಷ್ಟ ನೆಟ್ಟಗಿರಲ್ಲ ಜೋಕೆ, ಹೊರಗೆ ಹೋದಾಗ ಬೀಗಗಳನ್ನು ಹಾಕೋದ್ಮರೀಬೇಡಿ, ‘ನೋಡಿ, ಆ ಕಡೇ ಮನೆ ಸುಗುಣಾ ಜತೆ ಮಾತ್ಗೆ ನಿಲ್ಬೇಡಿ, ಹಾಳಾದವ್ಳ ಕಣ್ಣು ದೃಷ್ಟಿ ಒಳ್ಳೆಯದಲ್ಲ’. ‘ನಿಮಗೆ ಈ ವಯಸ್ಸಿಗೇ ಮರೆವು ಖಾಯಿಲೆ ಬೇರೆ ಬಂದುದು ನನ್ನ ‘ಹಣೆಬರಹ’ , ಮನೇಕಡೇ ‘ಜೋಪಾನ’, ‘ಬೆಂಗಳೂರಲ್ಲಿ ಇದೀಗ ಒಳ್ಳೆಯವರಿಗಿಂತ ಸುಳ್ಳರು, ಕಳ್ಳರೇ ಜಾಸ್ತಿಯಾಗುತ್ತಿದ್ದಾರೆಂದು ಅಚೆ ಮನೆ ವೆಂಕಟ ಸುಬ್ಬಿ ನಿಮ್ಮೆದುರ್ಗೇ ಹೇಳಿದ್ದು ಗೊತ್ತಲ್ವಾ?’ ಎಂದೆಲ್ಲ ಒದರಿಕೊಂಡೇ ಹೋಗುತ್ತಾಳೆ. ನನ್ನಹೆಂಡತಿ ಈ ಸುಬ್ಬಿಯನ್ನೆನೂ ಹಚ್ಚಿಕೊಂಡಿಲ್ಲ. ನನಗೂ ಅಷ್ಟೆ. ಆಕೆಯದು ಬರೀ ಕುಹಕವಷ್ಟೇ. ಇಬ್ಬರ ಮಧ್ಯೆ ಕಿಚ್ಚು ಹಚ್ಚುವದರಲ್ಲಿ ಮಾತ್ರ ಈ ಸುಬ್ಬಿ ಎತ್ತಿದ ಕೈ. ಆದರೂ ಆಕೆಯ ಹೆಡ್ಲೈನ್ ವಾರ್ತೆಗಳೆಂದರೆ ಟೀವೀಲಿ ಬರೋ ಬ್ರೇಕಿಂಗ್ ನ್ಯೂಸ್ ತರಹ …
ಪೃಚ್ಛಕ 2: ಏನಾದ್ರೂ, ಇಷ್ಟೆಲ್ಲ ವಾರ್ನಿಂಗುಗಳ ಮರೆತು ಕಸಿವಿಸಿ ಮಾಡಿಕೊಳ್ಳುವಿರಲ್ಲವೆ? ಬಿಡಿ, ಹೆಚ್ಚು ಕಮ್ಮಿ ಎಲ್ಲ ಗಂಡಂದಿರ ಸಾಮಾನ್ಯ ಕೆಟ್ಟ ಚಾಳಿ. “ಹೆಂಡತಿಯೊಬ್ಬಳು ಮನೆಯಲಿ ಇಲ್ಲವೋ , ಎಂದೆಂದಿಗೂ ನಾ‘ಶೂನ್ಯಕೆ’ ಸಮವೋ ”ಎಂದು ನರಸಿಂಹ ಸ್ವಾಮಿಗಳು ಹಾಡಿದ್ದರೆ ಇನ್ನೂ ಚೆನ್ನಾಗಿತ್ತಲ್ಲವೆ?
ನಾನು: ‘ಟೆಂಪೊರರಿ’ ಅಡಿಗೆ ಭಟ್ಟನಾಗಲು ಸಾಕಷ್ಟು ಶ್ರಮ ಪಟ್ಟರೂ, ಅದು ಹೇಗೋ ಅನಾಹುತಗಳಾಗಿಬಿಡುತ್ತವೆ. ನೋಡಿ, ಉದಾಹರಣೆಗೆ ಬೆಳಗೆದ್ದು, ಕಾಫಿ ಮಾಡಲು ಗ್ಯಾಸ್ ಸ್ಟೋವ್ ಹೊತ್ತಿಸಲು, ಏನೇ ಉಪಾಯ ಹೂಡಿದರು ಹತ್ತುವುದೇ ಇಲ್ಲ. ಆದು ಹೇಗೋ ಆ ಸ್ಟೊವ್ಗೂ ತಿಳಿದುಬಿಡುತ್ತದೆ ನಾನೊಬ್ಬ ಅಡಿಗೆ ಮನೆಗೆ ನಿರುಪಯೋಗಿ ವಸ್ತು ಎಂಬುದು! ಹೊರಗೆ ಹೋಗುವಾಗ ಅವಳಿಗೊಂದು ಕೆಟ್ಟ ಚಾಳಿಯೊಂದಿದೆ. ಮೊಬೈಲ್ ಫೋನನ್ನು ಬಳಿ ಇಟ್ಟಿರುವುದೇ ಅಪರೂಪ. ಅದೂ ಅವಳ ಸ್ನೇಹಿತರ, ಇಲ್ಲವೇ ಆತ್ಮೀಯರನ್ನು ಕಾಣಲು ಹೋದಾಗ, ಆ ಫೋನನ್ನು ಎಲ್ಲಿಯೋ ಬಿಟ್ಟು, ಅವಳ ಗಮನ ಬೇರೆಡೆಯೇ ಇರುತ್ತದೆ. ಈಗಲೂ ಹಾಗೆಯೇ ಆಯಿತು. ನನ್ನ ಫೋನಿನ ಕರೆಗಳ ಸಪ್ತ ಸ್ವರಗಳೂ ಸಂಗಮದಲ್ಲಿ ತೇಲಿ ಹೋದಂತಾಯಿತಷ್ಟೆ. ಕೊನೆಗೆ ಸಾಕಷ್ಟು ಬೆವರು ಸುರಿಸಿದನಂತರ, ಗ್ಯಾಸ್ ಎಲ್ಲೆಡೆ ಹರಡಿದ ಮೇಲೆ ಇದ್ದಕ್ಕಿದ್ದ ಹಾಗೆ ‘ಬುಸ್’ ಎನ್ನುವ ಭಾರಿ ಶಬ್ದದೊಡನೆ ಹಚ್ಚಿಕೊಳ್ಳುತ್ತದೆ. ಒಂದು ಬಾರಿ, ಗ್ಯಾಸು ಅದೆಷ್ಟು ಸೋರಿ ಹೋಯಿತೆಂದರೆ, ಗಾಬರಿಯಿಂದ ಪಕ್ಕದಮನೆ ಶ್ಯಾಮಲಾ ಆಂಟೀ ಬೀದಿಯವರನ್ನೆಲ್ಲ ಕರೆದು ತಂದಿದ್ದರು ಏನೋ ‘ಅನಾಹುತವಾಗಿದೆ’ ಎಂದು!
ಪೃಚ್ಛಕ 1: ಅದು ನಿಜ, ನನಗೂ ಆ ರೀತಿ ಆಗಿರುವುದುಂಟು.
ನಾನು: ಇದೀಗ ಕಾಫಿ ಪುಡಿಯ ಸರದಿ. ಪುಡಿಯ ಡಬ್ಬಿ ಖಾಲಿ. ಆಗಷ್ಟೆ ಜ್ಞಾಪಕಕ್ಕೆ ಬಂತು. ಅವಳು ಬಸ್ಸು ಹತ್ತುವಾಗ, ಹೇಳಿದ್ದಳು. ‘ನೀವೀಗ ಮನೆಗೆ ಹೋಗುವಾಗ ಕಾಫಿ ಪುಡಿ ಕೊಂಡು ಹೋಗಿ. ಇಲ್ಲವಾದರೆ ನಾಳೆ ನಿಮಗೆ ಕಾಫಿಗೆ ಹೋಟೆಲೇ ಗತಿ’. ದಾರಿಯಲ್ಲಿ ಸ್ನೇಹಿತರೊಬ್ಬರು ಸಿಕ್ಕಿ ಅದರ ಕಡೆ ಗಮನವೇ ಹೋಗಲಿಲ್ಲ.
ಪೃಚ್ಛಕ 3: ಟೀ ಮಾಡಬಹುದಿತ್ತಲ್ಲ. ಹಾರ್ಲಿಕ್ಸ್….
ಪೃಚ್ಛಕ 1: ಅದು ಹಾಗಿರಲಿ, ಆಮೇಲೆ ಊಟಕ್ಕೆ ಏನು ಮಾಡಿದಿರಿ?
ನಾನು: ಶಿವ, ಶಿವ, ತರಕಾರಿಯೇನೋ ಹಚ್ಚಿದ್ದೆ, ಅಕ್ಕಿ, ಬೇಳೆ, ಎಣ್ಣೆ, ಸಾಸುವೆ ಎಲ್ಲ ಅವಳು ಹೇಳಿದ್ದ ಜಾಗದಲ್ಲಿಯೇ ಇದ್ದವು. ನಲ್ಲಿಯನ್ನು ತಿರುಗಿಸಿದೆ. ಜೋರಾಗಿ ಗಗನಚುಕ್ಕಿ, ಬರಚಕ್ಕಿಯಂತೆ ಅದರಿಂದ ನೀರಲ್ಲ, ಹೊರಟಿದ್ದು ಬರೀ ಗಾಳಿ, ಆ ದಿನ ನೀರು ಸಪ್ಲೆ ಇಲ್ಲ. ಅವಳು ಶೇಖರಿಸಿಟ್ಟಿದ್ದ ನೀರು ಧಾರಾಳವಾಗಿ ಪಾತ್ರೆ ತೊಳೆಯಲು ಉಪಯೋಗಿಸಿಬಿಟ್ಟಿದ್ದೆ. ನೀರಿಗಾಗಿ ನೆರೆಹೊರೆಯನ್ನು ಆಶ್ರಯಿಸುವುದು ನನ್ನ ಜಾಯಮಾನವಲ್ಲ, ಸ್ನಾನವನ್ನ ಹೇಗೊ ಗೀಸರಿನಲ್ಲಳಿದುಳಿದಿದ್ದ ನೀರಲ್ಲೇ ಮುಗಿಸಿ ದಾರಿಯಲ್ಲಿನ ‘ದರ್ಶಿನಿ’ ಯಲ್ಲಿ ತಿಂಡಿ ಕಾಫಿ ಮುಗಿಸಿ, ಕಛೇರಿಗೆ ಹೊರಟೆ. ಮತ್ತೊಂದು ದಿನ ಅಡಿಗೆ ಮಾಡಲು ಎಲ್ಲ ಸಾಮಗ್ರಿಗಳು ಸಿಕ್ಕು, ನೀರು, ಓಲೆ ಎಲ್ಲಾ ಸಹಕರಿಸಿದುವೇನೋ ನಿಜ. ಖುಷಿಯಿಂದಲೇ ಉಡುಪಿ ಹೋಟೆಲ್ಲುಗಳಲ್ಲಿನ ಐತಾಳ, ಮೈಯ್ಯ, ಅಡಿಗ, ಕಾಮತ ಇತ್ಯಾದಿ ಬಾಣ್ಸಿಗರಿಂದ ಬಂದಿಯಾಗಿರಬಹುದಾದ ನಳ, ಭೀಮರನ್ನು ಸ್ಮರಿಸಿ ಶುರು ಹಚ್ಚಿದೆ. ಎಲ್ಲ ರೂಲ್ ಬುಕ್ ನ ಆಧಾರದಮೇಲೆ ಮಾಡುತ್ತಿದ್ದುದು ನನಗೆ ಅಹಂ ಕೂಡ ಇತ್ತೇನೋ.
ಪೃಚ್ಛಕ 3: ಇದೀಗ ‘ಭಲೇ’ ಎನ್ನುವ ಸರದಿ ನಮ್ಮದು! ಆದರೆ, ಅದನ್ನ ತಿಂದವರು ನೀವೇನೋ? ಇನ್ಯಾರಮೇಲೂ ಪ್ರಯೋಗಿ ಸಲಿಲ್ಲವಷ್ಟೆ, ಹೊಟ್ಟೆಗೆ ಏನೂ ಆಗಲಿಲ್ಲವೋ?
ನಾನು: ತಾಳಿ ಸ್ವಲ್ಪ, ಅನ್ನ, ಬೇಳೆ ಬೇಯಿಸಲು ಕುಕರೇನೋ ಸರಿಯಾಗೇ ಜೋಡಿಸಿದ್ದೆ. ನೀರು ಕಮ್ಮಿ ಏನೋ ಎಂಬ ಅನುಮಾನ ಮೂಡಿ ಮತ್ತೆ ಮುಚ್ಚಳ ಜೋಡಿಸುವಾಗ ವೈಟ್ ವಾಲ್ವ್ ಮೇಲಿಡಲು ಮರೆತಿದ್ದೆ. ಆ ವೇಳೆಗೆ ತರಕಾರಿಯನ್ನ ಹಚ್ಚಿ ಸಿದ್ಧವಾಗಿದ್ದೆ. ಕುಕರ್ ಕೂಗುವ ಉತ್ಸಾಹವೇ ತೋರಲಿಲ್ಲ ಅರ್ದ ಗಂಟೆ ಕಳೆದರೂ. ಇನ್ನು ಸ್ವಲ್ಪ ಹೊತ್ತು ಆಗಲಿ ಎಂದು ಆದಿನದ ಪೇಪರ ನೋಡಲು ಕೂತೆ ಕುಕರ್ ಕೂಗಿಗೆ ಕಾಯುತ್ತಾ. ಮನುಷ್ಯನಿಗೆ ತಾಮಸ ಗುಣ ಹ್ಯಾಗೆ ಕೂಡಿ ಬರುತ್ತದೆ ಎನ್ನುವುದಕ್ಕೆ ಈ ಪತ್ರಿಕೆ ಓದುವ ಹವ್ಯಾಸವೂ ಕೂಡಾ ಕಾರಣವೆನ್ನುವುದು ಈಗ ಮನದಟ್ಟಾಯಿತು! ಕುಕರ್ ‘ಧಿಡೀರ್’ಜ್ಞಾಪಕಕ್ಕೆ ಬಂದು, ಕೂಡಲೆ ಹೋಗಿ ನೋಡಿದೆ. ಆವಿ ಒತ್ತಡ ನಿಯಂತ್ರಣವಿಲ್ಲದೆ, ಸಲೀಸಾಗಿ ಹೊರಗೆ ಹೋಗುತ್ತಾ, ನೀರು ಖಾಲಿಯಾಗುತ್ತಿತ್ತು. ಮುಚ್ಚಳವನ್ನ ತೆರೆದು ನೋಡಿದರೆ ಅನ್ನ ಹಾಗು ಬೇಳೆ ಆರ್ಧದಷ್ಟೂ ಬೆಂದಿರಲಿಲ್ಲ! ನಾನೀಗ ಮತ್ತೆ ನೀರು ಹಾಕಿ, ಬೇಯಿಸಲು ಕಾದಿರಬೇಕು. ಅದರ ಬದಲು ನೇರ ಒಲೆಯ ಮೇಲಿಟ್ಟು ಪ್ರತ್ಯೇಕವಾಗಿ ಬೇಯಿಸಿದೆ ಹೇಗೆ ಹೇಗೋ. ಹೀಗೆ ‘ಒಂಭತ್ತು, ಹತ್ತು ಊಟದ ಶಾಸ್ತ್ರ ಮುಗಿದಿತ್ತು’!
ಪೃಚ್ಛಕ 1: ಹೋಗಲಿ ಬಿಡಿ, ಕೊನೆಗೂ ನೀವು ಗೆದ್ದಿರಿ, ಆದರೆ ನಮ್ಮನ್ನು ಕೂಡ ನಿಮ್ಮ ಮಾತಲ್ಲೇ ಬೇಯಿಸಿಬಿಟ್ಟರಲ್ಲವೇ?
ಪೃಚ್ಛಕ 2: ಇದಕ್ಕೇ ಅಲ್ಲವೇ ನಮ್ಮ ‘ಹಣೆ ಬರಹ’ ಸರಿಯಿಲ್ಲ ಎನ್ನುವುದು? ಇದಕ್ಕಿಂತ ಬೇರೆ ನಿದರ್ಶನ ಬೇಕೆ? ಬೆಳಿಗ್ಗೆನೇ ‘ಕರಾಗ್ರೇ ವಸುಧೇ’ .. ಹೇಳಿಕೊಂಡು ಕೂಡ
ನಾನು: ಸಾಕು ಬಿಡಿ, ಇನ್ನು ಹೆಚ್ಚು ಮಾತಾಡಿ ಪ್ರಯೋಜನವೇನು? ‘ಚಂದನ’ದ ಕಾರ್ಯಕ್ರಮವೊಂದರಲ್ಲಿ ಬರುವ ‘ಅಡಚಣೆಗಾಗಿ ಕ್ಷಮಿಸಿ, ಸಾರಿ ಫಾರ್ ದಿ ಇಂಟರಪ್ಷನ್’ ಜ್ಞಾಪಕಕ್ಕೆ ಬರುತ್ತದೆ. ನಿಮಗೆ ನನ್ನ ಮಾತಿಂದ ಅಡಚಣೆ ಆಗಿದ್ದರೆ ದಯವಿಟ್ಟು ಕ್ಷಮಿಸಿ.
ಪೃಚ್ಛಕ 3: ಇದೀಗ ನಾವು ನಿಮ್ಮಂಥವರ ಕೈಗೆಸಿಕ್ಕಿದರೆ ಯಾವ ಸೂತ್ರ ಅನುಸರಿಸಬೇಕೆಂದು ಮನದಟ್ಟಾಗಿದೆ ಬಿಡೀ.
*** **** ***** *****
“ ರೀ, ಏಳ್ರೀ, ಟೀವೀಲಿ ‘ ಬೊಂಬಾಟ್ ಊಟ’ ದ ಪ್ರೋಗ್ರಾಮ್ನ ಸೋಫಾದ್ಮೇಲೆ ನೋಡ್ತಾ ಕೂತೇ, ನಿದ್ದೆ ಮಂಪರ್ನಲ್ಲಿ ಅದೇನೇನೋ ಒದರ್ಕೊಳ್ತಾ ಇದ್ದೀರಲ್ಲಾ ? ಆಟ, ಊಟ, ಅದೇನು? ಊಟ ರೆಡಿ ಇದೆ, ಎದ್ಬನ್ನಿ ”----
--------------------------------------------------------------------------------------------------------------
Opmerkingen