ನಾವು ಮೆಟ್ರೋಪಾಲಿಟನ್ನರು, ಐಟಿ.ಬೀಟಿ.ಸಿಟಿಜನ್ಸು….
- haparna
- Dec 7, 2015
- 2 min read
ನಾವು ಮೆಟ್ರೋಪಾಲಿಟನ್ನರು, ಐಟಿ.ಬೀಟಿ.ಸಿಟಿಜನ್ಸು….. ನಾವು ಐಟಿ. ಬೀಟಿ ಸಿಟಿಜನ್ಸು, ಭಾರತ ಮಾತೆಯ ನೆಟಿ-ಸನ್ಸು* ತಪ್ಪುಮಾಡದ ಶುದ್ಧ ನಿವಾಸಿಗಳು, ಅದೇ ಮೆಟ್ರೋಪಾಲಿಟನ್ಸು, ರೂಲ್ಸು, ರೆಗ್ಯುಲೇಶನ್ಗಳನೆಲ್ಲ ಅರೆದು ಕುಡಿದಿರುವ ಪೌರರುಗಳು ಅದು ಹೇಗೆ ಇದು ಹೇಗೆಂಬ ಭಯ, ಭೀತಿ ತಳಮಳವಿಲ್ಲದ ಹೈಕಳು. (೧)
ನಾವು ನವ ನಾಗರೀಕತೆಯ, ಹೈಟೆಕ್ ಸಿಟಿ ಪುರ ವಾಸಿಗಳು ಎಂದೆಂದೂ, ಎಲ್ಲೆಲ್ಲೂ ಏನೂ ತಪ್ಪು ಮಾಡದ ಬುದ್ಧಿಜೀವಿಗಳು, ಸ್ವಚ್ಛ ಮನ, ಸ್ವಂತ ಬುದ್ಧಿ, ನಿರಾಳ ಸ್ವಭಾವದ ಬಲು ಶುಭ್ರ ಜನ ಬಹುಭಾಷಾ ವಿಶಾರದರು, ನವನಾಗರಿಕತೆಯ, ಮೆಟ್ರೊವಾಸಿಗಳು . ( ೨)
ನಮಗಿಲ್ಲ ಸಂಕೋಚ, ದಾಕ್ಷಿಣ್ಯ, ನಮಗನಿಸಿದುದನು ಹೇಳಿಬಿಡುವೆವು ಎಮಗಿಷ್ಟದಂತೆ ಅಡ್ಡಾಡುವೆವು, ಎಲ್ಲೆಂದರಲ್ಲಿ, ತೋಚಿದ್ದ ಮಾಡುವೆವು ನಮ್ಮದೇ ಕಟ್ಟು, ನಿಯಮ, ಸರ್ವಸ್ವತಂತ್ರ ಪ್ರಜಾ ಪ್ರಭುತ್ವವಾದಿಗಳು ದೇಶಸೇವೆ, ಪ್ರೀತಿ, ಪ್ರೇಮ ಎಂದು ಹೇಳುವರೆಲ್ಲ ಕೂಪ ಮಂಡೂಕಗಳು. (೩)
ಅಗೋ ನೋಡಿ, ಅಲ್ಲೊಬ್ಬ ಪೇದೆ ಕೈ ತೋರಿಸುತ ನಿಂತಿರುವ ಭಂಗಿಯನು, ಎದುರಿಂದ ಬಲು ಅಬ್ಬರದಿ ಬರುತಿರುವ ಟೂವ್ಹೀಲರನ ಅಟ್ಟಹಾಸವನು, ಅವ ಇವನ ಕೊಂದೇ ಹೋಗುವನೆಂಬ ಭಯದಿಂದ, ಮಾರು ದೂರವಿರಲು ಹರ ಸಾಹಸ ಮಾಡುತ ರಸ್ತೆಯಂಚೆಗೆ ನಾಟ್ಯ ಮಾಡಲು ಸಿದ್ಧವಾಗಿಹನು. (೪)
‘ಕೇರ್ ಟೂ ಹೂಟ್ಸ್ ಕೆಂಪು ಸಿಗ್ನಲಿಗೆ’ ನೆನ್ನುವ ಸಾರಥಿ ಬಹುಧೀರ ಶರ ವೇಗದಲಿ ಓಡುತಿರುವುದವನ ಚತುಶ್ಚಕ್ರ* ಶಬ್ದಭೇದಿ ರಥ, ‘ಸಿಗ್ನಲ’ಗೆ ಕಾಯುವ ಮೂಢನಲ್ಲ, ಯಾರಿಗೂ ಕೇರ ಮಾಡುವನಲ್ಲ ಹಾರನ್ನನು ಒತ್ತಿ, ಡಿಂಡಿಮವ ಬಾರಿಸುತ ಚಲಿಸುತಲಿಹನು ವೀರಾಧಿವೀರ. (೫)
ಶಿರಸ್ತ್ರಾಣಕೆ ಕ್ಯಾರೆ ಎನ್ನದ ಜಗಧೀರನೊಬ್ಬ ಮೊಬೈಲನೆಡಕಿವಿಗಿಕ್ಕಿ, ಒಂದೇ ಹಸ್ತದಲಿ ಬೈಕನೋಡಿಸುತಿರುವ, ನೋಡವನ ಪೌರುಷವ, ಮತ್ತೊಬ್ಬ ಧೀರ ಆ ಕಡೆಯಿಂದ ಸ್ಕೂಟಿಯಲಿ ಮುಂದೆರಡು ಹಸುಳೆಗಳ, ಹಿಂಬದಿಗೆ ಬಲಿತವರಿಬ್ಬರನಿಕ್ಕಿ, ಹರುಷದಿ ಜಾಲಿರೈಡು ಮಾಡುತಿರುವ. (೬)
‘ಲೇನ ಡಿಸಿಪ್ಲಿನ್ ’ಗೆ ಒಗ್ಗದ ಮತ್ತೊಬ್ಬ ಟ್ರಕ್ಕು ರಕ್ಕಸನ ಜೊತೆಗೊಂದ ಭಾರಿ ಕೆಂಪು ಗಜಗಾಮಿನಿ * ಮುನ್ನುಗ್ಗಿ ಬರುತಿದೆ ಎಲ್ಲರ ಹಿಂದಿಕ್ಕಿ ಅತಿ ಸೊಕ್ಕಿನಲಿ, ಹಿಂದಿಲ್ಲ, ಮುಂದಿಲ್ಲ ನನಗ್ಯಾರೂ ಸಮನಿಲ್ಲ, ಅಕ್ಕ ಪಕ್ಕದಲಿದ್ದವರ ತಿವಿದೇ ಹೋಗುವೆ ಯಾರು ಸತ್ತರೇನೆನೆಗೆ, ಸಿಮೆಂಟು ಮಿಕ್ಸರನೊಂದೇ ಸಮ ಎನೆಗೆ, (೭)
ಇಗೋ, ನೋಡಿಲ್ಲಿ ಅಗೋಚರ ಕಾಲುದಾರಿಯ ಪಾದದಗಲಷ್ಟೆ ಜಾಗ, ಹಣ್ಣು ಹಂಪಲು, ತರಕಾರಿ, ಮತ್ತಿನ್ನೇನೋ ತುಂಬಿದೆ ಮಿಕ್ಕೆಲ್ಲ ಭಾಗ, ಅಲ್ಲಿ ಒಂಟಿ ಕಾಲಲಿ, ವೃದ್ಧನ ಹರಿಸಾಹಸದ ತಕದಿಮ ನಾಟ್ಯ ಪ್ರಯೋಗ ಕಾಣುತಿರುವುದವನ ಕಂಣ್ಗಳಲಿ ಭಯವಿಹ್ವಲದ ನೋಟ, ಪೀಕಲಾಟ . (೮)
ಅಪಾಯದಂಚಿನಲಿರುವೊಬ್ಬನ ಹೊತ್ತು ತರುತಿದೆಯೊಂದ ಆಂಬುಲೆನ್ಸ ಎಡೆಕೊಡಲು ಅಪಾಯ ಸೂಚಕ ಹಾರನ್ನನು ಬಾರಿಸುತದರ ಚಾಲಕ, ಯಾರಿಗೇನಾದರೇನ ನಮಗದರ ಕಾಳಜಿ ಬೇಡ, ದಾರಿ ಬಿಡಲೊಲ್ಲೆವು ನಮ್ಮ ದಾರಿ ನಮಗೆ, ನಮ್ಮ ತುರ್ತು ನಮಗೆ, ಆಂಬುಲೆನ್ಸಗೆ ‘ನೋ ವೇ’.* (೯)
ಯಾರಿಗೆ ಯಾರುಂಟು ಈ ಎರವಿನ ಸಂಸಾರ, ಸರ್ಕಾರೀ ಆಸ್ಪತ್ರೆಗೆ ಹೋದಾ ರೋಗಿ ಬದುಕುಳಿದೇ ಮತ್ತೆ ಬರುತಾನೆಂಬಾ ಮಾತು ಸದಾ ಕಾಲಕೂ ನಿಜವಲ್ಲ ದೊರೆಯೇ, ಹಾಗೆಂದೇ ನೆನವರೋ ಮಣ್ಣಾ ಮಾಡಿ ಹಿಂತಿರುಗುವ ಜನ, ಹರಿ ಹರಿ ಗೋವಿಂದಾ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿ ಹಿಂತಿರುಗಿದರೂ, ಮನೆ ಮಾರಿ ಹಣವೆಲ್ಲಾ ಗೋವಿಂದಾ. (೧೦)
ಏನ ಪೇಳಲಿ, ಎಲ್ಲಿ ನೋಡಿದರಲ್ಲಿ ಕೆಸರ ಗುಂಡಿ, ಮಣ್ಣು, ಹಳ್ಳ ಕೊಳ್ಳ, ಓ ಮೈಗಾಡ್ ! ನೋಡಿಲ್ಲಿ ಮೂಗು ಮುಚ್ಚಿ, ಈ ದಾರಿ ಉಚ್ಚೆಗುಂಡಿ, ಅದುವೇ ಓಪನ್ ಟಾಯ್ಲೇಟ್. ದಾರಿಹೋಕರಿಗೆ ಮತ್ತದೇ ಮನೆಯ ತುರ್ತು ಬಾತ್ರೂಮ್, ಆದುವೇ ‘ರಾಜಾ’ಕಾಲುವೆ ಅಲ್ಲೇ ಬಿಬಿಎಂಪಿಯ ತ್ಯಾಜ್ಯ ರಾಶಿ ರಾಶಿ, ಅದಕಿಲ್ಲ ಮುಕ್ತಿ, ಆದೊಂದ ಮಿನಿ ಮಂಡೂರ. (೧೧)
ಬೀದಿ ಬದಿಯಲೇ ಎಲ್ಲ ತ್ಯಾಜ್ಯ, ವೆಟ್ಟು, ಡ್ರೈಯಿ, ಗ್ರೀನು, ಎಲ್ಲ ಅಲ್ಲೇ, ಬೇರೆ ಜಾಗವಿಲ್ಲ ವಾಕಿಂಗ್ ಪಡೆಯ, ಹೃದಯವಂತ, ಶ್ವಾನವಂತರಾ ಹೈಬ್ರಿಡ್ ಡಾಗ್ಸ್ ಡೌನ್ ಲೋಡಿಗೂ, ನಮ್ಮ ನಿಮ್ಮಮನೆಯ ಮುಂದೇ ಜಾಗ, ಬಿಬಿಎಂಪಿ ಸಾಕಿದಾ ಬೀದಿ ನಾಯಿಗೂ ಅಲ್ಲೇ ಭಾಗ ಮನೆ ಮಠ ಅವಕಿಲ್ಲ ಪೂರ್ ಡಾಗ್ಸ್, ಆದಕೆ ರಸ್ತೆಬದಿಯೇ ಪಬ್ಲಿಕ್ರೊಮಾನ್ಸ್, ಗಾಡ್ ಬ್ಲೆಸ್ . (೧೨)
ಏನಾದರೇನು, ನಾವು ಬ್ಯಾಂಗ್ಲೂರ್ ಐಟಿ ಬೀಟಿ ಸಿಟೀ ನವ ನಾಗರೀಕರು, ಎಮಗಿಲ್ಲ ಸಾಟಿ ವಿಶ್ವದಾ ಯಾವ ಸಿಟೀ, ನಮ್ಮ ಶಿಸ್ತು, ನಮ್ಮ ನೀಟ್ನೆಸ್ಸು, ನಮ್ಮ ಬುದ್ಧಿ, ಸ್ವಚ್ಚ ಮನ, ಸ್ವಭಾವಕೆ ಸಾಟಿಯಿಲ್ಲ ಯಾರೂ ಎಂದಿಗೂ ಅದಕೆ ಅಲ್ಲವೋ ಅಂಕಲ್ಲೊಬಾಮ ಕೂಡ ಈ ನಗರಕೆ ಹೆದರಿ ಬರಲಾರನೋ! (೧೩) —————————————————————————————————————- ಟಿಪ್ಪಣಿ: *ನೆಟಿ ಸನ್ಸು= net-i-citizens,ಚತುಶ್ಚಕ್ರ=ಮೋಟಾರು ಕಾರು, *ಕೆಂಪು ಗಜಗಾಮಿನಿ=ವೋಲ್ವೋ ಬಸ್ಸು, *‘ನೋ ವೇ’=’no way’ —————————————————————————————————————–
コメント