ನೆರೆಹೊರ್ಕೆ (a humourous skit by H.R.Hanumantha Rau-published in Nov. 2015 issue of “APARANJI&#
- haparna
- Nov 14, 2015
- 6 min read
ನೆರೆಹೊರ್ಕೆ ಈ ಪದ ಇಂದು ಸವಕಲು ನಾಣ್ಯವಾಗುತ್ತಿದೆ, ಅದೂ ಬೆಂಗಳೂರಿನಂತಹ ಷಹರುಗಳಲ್ಲಿ. ಟೀಪಿ ಕೈಲಾಸಂ, ಅವರದೇ ಒಂದು ನಾಟಕದಲ್ಲಿ ‘ನೆರೆಹೊರ್ಕೆ, ನೆರೆಹೊರ್ಕೆನೇವೇಯೇ’ ಎಂದು ಹೇಳಿದ್ದು ಬಹುಶ: ಕಳೆದ ಶತಮಾನಕ್ಕಷ್ಟೇ ಹೆಚ್ಚು ಅನ್ವಯವಾಗುವ ಮಾತು. ಜಾಗತೀಕರಣದ ಪ್ರಭಾವವೋ, ಅಂಗ್ಲ ಸಂಸ್ಕೃತಿಯ ಅನುಸರಣೆಯೋ, ಐಷಾರಾಮಿ ಜೀವನದ, ಸ್ವತಂತ್ರ ವಾಸ್ತವ್ಯದ ಅಭಿಲಾಷೆಯೋ ಕಾರಣವಿರಬಹುದು. ನಾಲ್ಕೈದು ದಶಕಗಳ ಹಿಂದಿನ ಪೀಳಿಗೆಯವರಲ್ಲಿದ್ದ ಪರಸ್ಪರ ಸಹಕಾರ, ಸಮಾಲೋಚನೆ, ಕುಶಲೋಪರಿ, ಕಷ್ಟ, ಸುಖಗಳ ವಿನಿಮಯ ಈಗ ಮಾಯವಾಗುತ್ತಿದೆ. ಕೈಯಲ್ಲಿ ಹಣವಿಲ್ಲದಿದ್ದರೂ ಆಗಿನ ಜನರ ಔದಾರ್ಯ, ಸಾಮೂಹಿಕ ಚಟುವಟಿಕೆ, ಉಪಚಾರಕ್ಕೇನೂ ಕಮ್ಮಿಇರಲಿಲ್ಲ. ಈ ಗುಣ ಈಗೀಗ ನಿಧಾನವಾಗಿ ಮಾಯವಾಗುತ್ತಿದೆ. ಈಗಿನಂತೆ ದಿನನಿತ್ಯ ಕೊಲೆಗಳು, ಸುಲಿಗೆ, ಕಾಮುಕರ ಧಾರ್ಷ್ಟ್ಯ ಬಹು ಅಪರೂಪ. ಇಲ್ಲವೆಂದೇ ಹೇಳಿದರೂ ತಪ್ಪಲ್ಲ. ಇಂದಿನ ಸ್ಥಿತಿಗೆ ಬಹುಷ: ಈಗಿನವರ ಹಣದ ವ್ಯಾಮೋಹ, ಮತ್ತು ಜನಸಂಖ್ಯಾಸ್ಫೋಟವೂ ಕಾರಣ. ಆ ದಿನಗಳನ್ನು ನೆನಸಿಕೊಂಡಾಗ ಒಂದೊಂದಾಗಿ ಜ್ನಾಪಕಮಾಲೆ ಸುರುಳಿ ಬಿಚ್ಚಿಕೊಳ್ಳುತ್ತದೆ. ಹಾಸ್ಯ ದೃಷ್ಟಿಗೆ, ಹರಟೆಯ ಮಾತಿಗೆ ಸಾಕಷ್ಟು ಸಾಮಗ್ರಿಯೂ ಒದಗುತ್ತದೆ, ಒಂದೆರಡು ಉದಾಹರಣೆಗಳ ಮೂಲಕ ಹೇಳುವುದಾದರೆ — *** *** *** “ ಏನ್ ಶಾಂತಮ್ಮ, ಸೆರಗಿಗೆ ಕೈ ವರೆಸಿಕೊಂಡ್ ಮನ್ಯಾಗಿಂದ ಹೊರಗ ಬರ್ತಾ ಇರೋದ್ ನೋಡಿದರ ಊಟ ಆಗೆದ ಅನಸ್ತದಾ, ಏನೋ ಮುಖದಾಗ ಸಂತೋಷ ಕಾಣ್ತದಾ? ನಿನ್ ಹೆಸರ್ಗೆ ತಕ್ಕನಾಗೇ ಅದೀಯ ಬಿಡು ಶಾಂತು, ಏನಾದ್ರೂ ಉಂಟಾ, ನಾಚ್ಕೋ ಬೇಡ ಹೇಳು?!” ಆರಾಗಿ, ಏಳನೆ ಬಾಣಂತನಕ್ಕೆಅಲ್ಪವಿರಾಮ ಹಾಕಲು ಕಷ್ಟ ಪಡುತ್ತಿದ್ದ, ಅರ್ಧ ಆಯುಸ್ಸನ್ನು ದಾಟಿದ್ದ ರಾಧಾ ಬಾಯಿಯ ಪ್ರಶ್ನೆ. “ ಛೆ, ಹಾಗೇನಿಲ್ಲ, ರಾಧಾಬಾಯವ್ರ”, ಮುಖವನ್ನ ಸೆರಗಿನಲ್ಲಿ ಮುಚ್ಚಿ ನಾಚುತ್ತಾ, ಎರಡು ಮಕ್ಕಳ ತಾಯಿಯಾಗಿದ್ದ ಶಾಂತಮ್ಮ ಉತ್ತರಿಸಿದಳು . “ಆಗ್ಲಿ ಬಿಡು, ಇನ್ನೂ ಮೂರಲ್ಲ, ನಾಲ್ಕಾಗ್ಲಿ, ಯಾವ ಮಕ್ಕಳು ಕಡೇ ಕಾಲದಾಗ ಆಗಿ ಬರ್ತಾವೋ ಹೇಳ್ಲಿಕ ಬರಲ್ಲ ಶಾಂತು. ಮಾತಿಗ ಹೇಳ್ತೀನಿ, ಆಚೆ ಮನೆ ರಂಗಮ್ಮ ಐದು ಹಡೆದ್ರೂ ಉಳ್ಕೊಂಡಿದ್ದು ಎರಡೇನೇವೆಯ. ಇನ್ನ ಆ ರಂಗನಾಯಿಕೀ ಪಾಡು ಯಾರ್ಗೂ ಬೇಡವ್ವ, ಪ್ರಸ್ಥ ಆದ ಐದನೆ ತಿಂಗಳಾ, ಗಂಡ ಗೊಟಕ್ ಅಂದಾಯ್ತು. ಇದೀಗ ಆ ಚಾಂಡಾಲ ಸಿಂಗ್ರ ಐಂಗಾರಿ ಮನ್ಯಾಗ ಬಾಣಂತನ ಮಾಡ್ಸಕ್ಕ ಹೋಗ್ಯಾಳ, ಆ ಸಿಂಗ್ರೀಗೇ ಈಗಾಗ್ಲೇ ಆರಾಗ್ಯಾದ, ಮೂಲೆ ಮನೆ ಸದಾಶಿವನ ಕಥೆನೂ ಅದೇ, ಮದುವೆ ಆದ ಒಂದ್ ವರ್ಷಕ್ಕ ಹೆಂಡ್ತಿ ಯಶೋಧ ಶಿವಪಾದ ಸೇರಿದ್ಲು, ಬುದ್ಧಿವಂತ, ಇನ್ನೊಂದ್ ಹೆಣ್ಕಟ್ಟ್ಕೊಂಡ, ಅದಕ ನಾ ಹೇಳಾದ, ದೇವ್ರು ಕೊಟ್ಟದ್ದನ್ನ ನಾವ್ಯಾರು ಬೇಡ ಅನ್ನೋಕ್ಕ” “ಅಷ್ಟೆಲ್ಲಾ ಯಾಕೆ, ನಿಮ್ಮೆರಡ್ನೇ ಸೊಸೆಗೆ ಕಡೇ ಗಳ್ಗೇಲಿ ಮೊದಲ್ನೇದೆ ನಿಲ್ಲಿಲ್ಲ ಅಂತಾ ಅದೆಷ್ಟು ಕಣ್ಣೀರ ಸುರ್ಸಿದ್ರೀ, ಆಕೆ ತೌರಕಡೇ ಸರ್ಯಾಗಿ ನೋಡ್ಕೊಂಡಿದ್ದಿಲ್ಲ ಅಂತ ಮಗನ್ಮೇಲೆ ರೇಗಾಡಿದ್ರಲ್ಲ್ವ ರಾಧಾಭಾಯಿ? ನಮ್ಮಮ್ಮ ಅಂತೂ ನಂಗೆ ಹೇಳೇಬಿಟ್ಟಾಳ ‘ನೀ ಯಾರ್ಮಾತ್ಗೂ ಸೊಪ್ಪಾಕ್ಬೇಡಾ ಶಾಂತಿ, ಆದಷ್ಟು ಆಗ್ಲಿ, ಬೇಡಾ ಅನ್ಲಿಕ್ ನಾವ್ಯಾರ? ಕೊಡಾವನು ಅಲ್ಲಿ ಮೇಲಿರೋವ್ನು, ನಮ ಕೈಯಾಗಿಲ್ಲ, ನನ್ ಕೈಕಾಲ್ ಗಟ್ಟಿಯಾಗಿರೋವರ್ಗ ನಾನೇ ಬಾಣಂತನ ಮಾಡಿಸೇ ತೀರ್ತೀನಿ’ಅಂತಾ.” “ಹೋಗ್ಲಿ ಬಿಡು ಶಾಂತು, ‘ನನ್ ಸೊಸೆ ಮಾತ್ಗ ಬಂದ್ರ, ಮಾಡ್ದವ್ರ ಪಾಪ ಆಡ್ದವ್ರ ಬಾಯ್ನಗ’ ಅನ್ನೋ ತರಹ ನಮಗ್ಯಾಕಿದ್ದೀತೂ, ನಿಮ್ಮಮ್ಮ ಹೇಳಿದ್ ಸರ್ಯಾಗೆ ಅದ. ವೈಕುಂಠದ ಬಾಗ್ಲಾಗೇ ಬ್ರಹ್ಮ, ಶಿವ, ಇಂದ್ರ, ಚಂದ್ರ ಹೀಗ ದೇವರ್ಗೋಳೆಲ್ಲಾ ಕುಂತಿರ್ತಾರ ನಮ್ಮ ಮಾತು ಕೇಳಿಸ್ಕೋತಾ, ಆದ್ರೆ ಮಾತಿಗ ಹೇಳ್ತೀನಿ, ಈಗಿನ್ ಕಾಲ್ದ ಹೆಣ್ಣ ನೀ, ನಂಬ್ತೀಯೋ ಇಲ್ವೋ, ಯಜಮಾನ್ರ ಸೋದರ ಸಂಬಂಧಿ ಕ್ರಿಷ್ಟಾಚಾರ್ರ ಅಳಿಯ ಉಡುಪಿ ಹಣಮಂತಾಚಾರ್ರು ಅಂದ್ರೆ ಉರ್ಗೆಲ್ಲ ಗೊತ್ತು ಮಹಾ ಆಚಾರಸ್ತರು, ಅದೇನ್ ಮಡಿ, ಅದೇನ್ ಭಕ್ತಿ, ಅದೇನ್ ಪೂಜೆ, ಪುನಸ್ಕಾರ ಅಂತೀ, ಅವ್ರ ಹೆಂಡ್ತಿ ನಡೆಯೋ ಹೆಜ್ಜೆ ಜಾಗದ್ಮ್ಯಾಗೂ ನೀರ್ಚೆಲ್ಕಂಡೇ ಹೋಗವ್ರು! ಸ್ನಾನ ಮಾಡಿ, ಹಣೆ ಮೇಲೆ ಮುದ್ರೆ, ಮೈಎಲ್ಲಾ ಚಂದನ ಲೇಪಿಸ್ಕಂಡು ಒದ್ದೆ ಬಟ್ಟೆಲೀ ಬೃಂದಾವನ ಸುತ್ತತಾ ಇದ್ರೆ, ಎರಡು ಕಣ್ಣು ಸಾಲದು ಕಣೇ, ಅಂತಾ ಪುಣ್ಯಾತ್ಮ ಈಗಿಲ್ಲ ಬಿಡು” ಎನ್ನುತ್ತಾ ಬರದ ಕಣ್ಣೀರು ಸುರ್ಸಿ, ಸೆರಗಿನಿಂದ ಮೂಗು, ಕಣ್ಣೂ ಎರಡೂ ಒರ್ಸಿಕೊಂಡು ಮಾತು ಮುಂದುವರೆಸಿದರು. “ಕ್ಷಯರೋಗ ಬಂದು ಆವರ್ನ ಆ ದೇವ್ರೇ ಕರ್ಸ್ಕೊಂಡ್ ಬಿಟ್ಟ. ‘ಸಾಕು ಈ ಭೂಮ್ಯಾಗ, ಇನ್ ಸ್ವರ್ಗದಗೂ ಐತೆ ನಿಮ್ ಕೆಲ್ಸ’ ಅಂತಾ. ನಿರಂತರ ಹನ್ನೊಂದ ಮಕ್ಕಳು ಹುಟ್ಟಿ ಎಲ್ಲನೂವೆ ಮೂರ್ ತಿಂಗಳು ಆರ್ತಿಂಗ್ಳಲ್ಲಿ ಸತ್, ಕಡೆದ ಒಂದ್ವರ್ಷ ಬಾಳಿ ಎಲ್ಲಾ ಕಳ್ಕಂಡ್, ಅವ್ರ ಪ್ರಪಂಚನೆ ಮುರ್ದೋಯ್ತು. ಅವ್ರ ಹೆಂಡ್ತಿ ರುಕ್ಕೂಬಾಯಿ ಮಠದಾಗೆ ಸೇವೆ ಮಾಡ್ಕಂಡು ಬಾಳು ಸವೆಸಾದ್ ನೋಡಿದ್ರ ಕರುಳು ಚುರುಕ್ ಅಂತದಾ, ಅದಕ್ಕಾ ನಾ ಹೇಳಿದ್ದು, ಕೊಡೋವ್ನು ಅವ್ನೆ, ತಗೊಳ್ಳೋವ್ನು ಅವ್ನೆ, ನಮ್ಕೈಯಾಗೇನೂ ಇಲ್ಲ, ಶಾಂತೂ?” “ಹೋಗ್ಲಿ ಬಿಡಿ, ರಾಧಾಬಾಯಿ, ಅವರ್ಗಾ ಸ್ವರ್ಗಾ ಬಾ ಆಂತ ಕರೀತಿತ್ತಾ. ಅದಹಂಗಿರಲಿ, ನಿಮ್ಗತಾನ ಏನ್ ಮಹಾ ವಯಸ್ಸಾಗೇದಾ, ಆಯುಸ್ಸ ಮುಗ್ದೋದಾವರ ಯೋಚನಾ ಮಾಡ್ಲಿಕ್ಕ, ಅದೇನ್ ಬೆಳಿಗ್ಗೇನೆ ನಿಮ್ಮ ಕಡೇ ಮಗ ಜಯತೀರ್ಥ ರಚ್ಚೆ ಹಿಡ್ಕಂಢಂಗಿತ್ತ?” “ ಅವ್ನು ಸ್ಕೂಲ್ಗೆ ಹೋಗಲ್ಲ ಅಂತ ಹಠ ಮಾಡಾವ, ಏನಪ ಅಂತಂದ್ರ, ಸ್ಕೂಲ್ನಾಗೇ ನಿನ್ನೆ ಅವ ಮೂಗು ಸುರ್ಸ್ಕೊಂಡೇ ಇದ್ದವ, ನೆಗಡಿ ಬಂದದ ನೋಡ್ರಿ ಅದಕ್ಕ-ಅವರಪ್ಪ ಆಚೆ ಹೋದಾಗ ಅವಗ ಐಸ್ಕ್ರೀಂ ಅದು ಇದು ಕೊಡ್ಸಿ ಕೆಡ್ಸಿಬಿಟ್ಟಾರ – ಅದನ್ನ ಒರೆಸ್ಕೊಳ್ಳಕ್ಕೇಂತ ಅವ್ನ ಮಿಸ್ ಬಯ್ದಾರ, ಅಷ್ಟೇ ಅಲ್ದೆ ಚೀಟಿ ಬರೆದು ಅವರಪ್ಪಂಗ ಕೊಟ್ಟು ಕಳಿಸಿವ್ರು, ‘ಮಗೂಗೆ ನೆಗಡಿ ಬಂದದ ಅಂದ್ರ ಬೇರೆ ಎಲ್ಲ ಮಕ್ಕಳ್ಗೂ ನೆಗಡಿ ಹಿಡಸಬೇಕಾ? ಎಲ್ಲರಿಗೂ ಕಾಲರ ಗೀಲರ ಬಂದ್ರ ಎನ್ಗತಿ, ಜೋಭ್ನಾಗ ಒಂದ ಮಖವಸ್ತ್ರ ಕಳ್ಸಕ್ಕಾಗದಿಲ್ವ?’ ಅಂತೆಲ್ಲ’, ಆ ಚೀಟಿನ ನೋಡಿ ನಮ್ಮವರು ಕೆಂಡ್ದಂಗ್ ಆಗಿ ‘ನಿಂಗೇನ್ ಧಾಡಿ ಬಂದದ, ಅವ್ನ ಮೂಗ್ನಾಗೊಂದ್ ಅರಿವೇ ತೂರ್ಸಿ ಕಳಸ್ಲಿಕ್ ಅಂತಾ, ಇವಂಗ ಮುಗ್ ವರ್ಸಿಕೊಳ್ಳದ್ ಬಿಟ್ಟು, ಸ್ಕೂಲ್ನಾಗೆ ಅದಕ್ಕಿಂತ ಹೆಚ್ಗ ಕಲ್ಯೋದ್ ಎನಿರ್ತೈತಿ, ಆ ಮಿಸ್ಸೇ ಅಕೆ ಸೆರ್ಗ್ನಾಗೇ ಮುಗ್ ವೋರ್ಸಿದ್ರ ಏನ್ ಗಂಟ್ ಹೋಗ್ತಾಯಿತ್ತ ’ ಅಂಥೇಳಿ ಅವಗ ಒದ್, ಎರಡೇಟ್ ಕೊಟ್ಟಾರ, ಅದ್ಕ ಅವ್ನ ರಂಪ” “ನೀವೇನಾರ ಅನ್ನಿ, ಕಾಲ ಕೆಟ್ಟೋಗಿದೆ ರಾಧಾಬಾಯಿ, ಮಕ್ಕಳ್ಗೆ ಪಾಠ ಹೇಳೋದ್ ಒಂದ್ಬಿಟ್ ಈ ನರ್ಸರಿ, ಕೆಜಿಗಳಲ್ಲಿ ಇನ್ನೆಲ್ಲ ಮಾಡ್ತಾರ, ಬರೀ ಯೂನಿಫಾರ್ಮು, ನೋಟ್ಬುಕ್ಕು, ಟೈ, ಲಂಗ, ಲಗಾಮು ಅಂತ ಎಲ್ಲದಕ್ಕೂ ದುಡ್ಡ್ಮಾತ್ರ ಚೆನ್ನಾಗಿ ಕೀಳ್ತಾರ ಕಣ್ರೀ. ಮೊನ್ನೆ ಹಿಂದಿನ್ ಬೀದಿಲಿರೋ ಪುಷ್ಪಾನ ಮಗ್ಳು ಬಿಂದೂನ- ಇನ್ನೂ ಒಂದೂರೆವರ್ಷ ಕೂಡ ಇಲ್ಲರೀ ಅದಕ್ಕ- ಆ ನೃಪತುಂಗ ಸ್ಕೂಲ್ ನರ್ಸೇರಿಗೆ ಸೀಟ್ ಬುಕ್ ಮಾಡ್ಲಿಕ್ಕ ರಾತ್ರೋ ರಾತ್ರಿ ಎಲ್ಲ ನಿದ್ದೆ ಇಲ್ದೆ ಕ್ಯೂನಾಗ ನಿಂತು ಅರ್ಜಿ ಕೇಳಿದ್ರ, ಅವರೇನ್ ಹೇಳ್ಬೇಕು-ತುಂಬಾ ಲೇಟಾಗಿ ಬಂದ್ರಿ ಪಾಪ, ಇನ್ನೂ ಮೊದಲೇ ಬಂದು ರಿಸರ್ವ ಮಾಡಿಸ್ಬೇಕಾಗಿತ್ತ- ಅಂತನ್ನಿಸ್ಕಂಡ್, ಗಂಡನ ಹತ್ರಾನೂ ಬೈಯ್ಸ್ಕೊಂಡ್ ಬಂದು ನನ್ನತ್ರ ಗೊಳೋ ಅಂತ ಅತ್ತ್ಕೊಂಡ್ರು ಪುಷ್ಪಾ. ಆಕೇನ ಸಮಾಧಾನ ಮಾಡ್ಲಿಕ್ಕ ನಂದೆರ್ಡು ಕರ್ಚಿಫು ಹಾಳಾದ್ವು.” “ಹೋಗ್ಲಿ ಬಿಡು ಶಾಂತು, ‘ಮುಂದಿನ್ಸಾರಿ ಪ್ರಸವಕ್ಕ ಹೋಗೋವಾಗ್ಲೇ ನಿಮಗ ಹೇಳಿ ಸೂಲ್ಗಿತ್ತೀನ ನೋಡ್ತೇನಿ’ ಆಂತಾ ಸ್ಕೂಲ್ನವ್ರಗ ಹೇಳಿ ಬರಬೇಕಿತ್ತ. ನಿನ ಮಕ್ಳನ ಜಾಗ್ರತೆ ನೋಡ್ಕೋ, ಕಾಲ ಕೆಟ್ಟೋಗದ, ಜನಗಳಿಗೆ ಮಡಿ ಇಲ್ಲ, ಮೈಲಿಗೆ ಇಲ್ಲ, ಆಚಾರ ಮೊದ್ಲೇ ಬೇಕಿಲ್ಲ, ಎಲ್ಲಾ ಸುಡುಗಾಡು ಆಗ್ಯೇದಾ, ಏನ್ ಯೋಚ್ನೆ ಮಾಡ್ಬ್ಯಾಡಾ, ನಾವೆಲ್ಲ ಅದೀವಿ, ನಿಂಗೇನಾದ್ರೂ ನಮಗ ತಿಳ್ಸವ್ವ, ನೆರೆಹೊರ್ಕೆ ಇರೋದ ಮತ್ಯಾಕ? ” ಕಾಮನ ಹಬ್ಬ ಬಂದರಂತೂ ಪ್ರತಿಯೊಬ್ಬರೂ, ವಿದ್ಯುತ್ ಒಲೆ , ಗ್ಯಾಸ್ ಕಂಡರಿಯದ ಆ ದಿನಗಳಲ್ಲಿ ಮನೆಯಲ್ಲಿ ಶೇಖರ್ಸಿದ್ದ್ ಸೌದೆ, ಮರದ ಪದಾರ್ಥಗಳನ್ನ ಕಾಂಪೌಡಿನೊಳಗೆ ಕಾಮಣ್ಣ ಮಕ್ಕಳಿಗೆ ಕಾಣದಂತೆ ಎಚ್ಚರ ವಹಿಸುತ್ತಿದ್ದರು. ಕಾರಣ, ರಾತ್ರೋರಾತ್ರಿ ಹುಡುಗರು ಅವನ್ನು ಕದ್ದೊಯ್ದು ಬೆಂಕಿಗೆ ಆಹುತಿ ಕೊಡುತ್ತಿದ್ದಿದುದು ಸರ್ವೇ ಸಾಮಾನ್ಯ. ಒಂದು ಬಾರಿ ನಮ್ಮ ರಸ್ತೇಲಿ ದಳ್ಳಾಳಿ ರಾಮಯ್ಯನೆಂಬೋರು ಮನೆ ಮಾಡಿದ್ದರು, ಆದು ರೇಷನ್ ಕಾಲ. ಪ್ರತಿಯೊಂದು ವಸ್ತುವೂ ಆಹಾರ ಧಾನ್ಯ ಕೂಡ ನಿಯಂತ್ರಣದಲ್ಲಿತ್ತು. ಹಾಗಾಗಿ ಮನೆಯ ಇಂಧನವಾಗಿ ಬಳುಸುತ್ತಿದ್ದ ಸೌದೆ, ಸೀಮೆ ಎಣ್ಣೆಗೂ ಕೂಡ ಬರ. ಈ ರಾಮಯ್ಯ ಯುದ್ಧಕಾಲದಲ್ಲಿ ಮಿಲ್ಟ್ರಿ ಕಾಂಟ್ರಾಕ್ಟ್ ನಲ್ಲಿ ಅಕ್ರಮವಾಗಿ ಸಂಪಾದಿಸಿದನೆಂದು ಪ್ರತೀತಿ. ಹಾಗಾಗಿ ಎಲ್ಲರಿಗೂ ಸೌದೆಯ ಡಿಪೋ ಮಾಲೀಕನಾಗಿದ್ದ ಈತನ ಬಗ್ಗೆ ಮೋಸಗಾರನೆಂಬ ಅಭಿಪ್ರಾಯವಿತ್ತು. ಹುಡುಗರು ಹೇಗಾದಾರೂ ಈ ಕಾಮನ ಹಬ್ಬ ನೆಪದಲ್ಲಿ ಅವ್ರಿಗೆ ಚಳ್ಳೆ ಹಣ್ಣು ತಿನ್ನಿಸ್ಬೇಕೆಂದು ಕಾದಿದ್ದು, ಡಿಪೋಗೆ ಸೌದೆ ಬಂದ ರಾತ್ರೋರಾತ್ರಿಯೇ ಸಾಧ್ಯವಾದಷ್ಟು ಕದ್ದು, ಹಬ್ಬದ ದಿನ ‘ರಾಮಣ್ಣ, ಅಲ್ಲ ನುಂಗಣ್ಣ ಹಾಯ್ ಹಾಯ್, ಕಾಮಣ್ಣ ಮಕ್ಕಳೂ, ಸೂ… ಕ್ಕಳು’ ಎಂದು ಆತನ ಮನೆ ಮುಂದೆಯೇ ಕೂಗಿ ಹಾಡುತ್ತ ಎಲ್ಲವನ್ನು ಸುಟ್ಟು, ಸಂತೋಷಿಸಿದ್ದರು! ಆತ ಬಾಯಿ ಬಾಯಿ ಬಡಿದುಕೊಂಡು, ಶಾಪ ಹಾಕಿದ್ದನ್ನ ಈಗಲೂ ನೆನಪಿಗೆ ಬರುತ್ತದೆ. ಒಂದೇ ಕೇರಿಯ ಹುಡುಗರು ಬೇರೆ ವಿಷಯಗಳಲ್ಲಿ ಒಮ್ಮತವಿಲ್ಲದಿದ್ದರು, ಜನಕ್ಕೆ ಒಳಿತಾಗುವ ಬಾಬತ್ತು ನೆರೆಹೊರ್ಕೆಯ ಸಂಘಟನೆಯನ್ನು ತೋರುತ್ತಿದ್ದರು. ನೀರಿನ ಅಭಾವವಿದ್ದ ಕಾಲಗಳಲ್ಲಿ ಯಾರೊಬ್ಬರ ಮನೆಯ ಭಾವಿಯಲ್ಲಿ ನೀರು ಸಿಗುವಂತಿದ್ದರೆ, ಎಲ್ಲ ಹುಡುಗ, ಹುಡುಗಿಯರುಗಳು ಎಷ್ಟೇ ದೂರವಿದ್ದರೂ ಪರಸ್ಪರ ಸಹಾಯ ಮಾಡುತ್ತಿದುದನ್ನ ಹಳೆ ಪೀಳಿಗೆಯವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಹಬ್ಬ, ಹರಿದಿನಗಳು ಬಂತೆಂದರೆ ಪ್ರತಿ ಮನೆಯವರೂ ಆ ಬೀದಿಯ ಹಾಗೂ ಸುತ್ತಮುತ್ತಲೂ ಇದ್ದ ಜನಗಳನ್ನು ಕರೆದು, ಪಾನಕ, ಪನ್ಯಾರ, ತಿಂಡಿ, ತೆಂಗಿನಕಾಯಿ ಇಲ್ಲ ಹಣ್ಣು ಕೊಟ್ಟು ಸಾಮೂಹಿಕವಾಗಿ ಆಚರಿಸುತ್ತಿದ್ದರು. ಯಾರು ತಪ್ಪಿಸಿಕೊಳ್ಳೂವಂತೆಯೂ ಇರಲಿಲ್ಲ, ಮತ್ತೆ ಮತ್ತೆ ಕರೆದು ಉಪಚರಿಸುತ್ತಿದ್ದರು ಹೆಣ್ಣು, ಗಂಡೆಂಬ ಬೇಧವಿಲ್ಲದೆ. ಯಾರಾದರೂ ಬರಲಾಗದಿದ್ದರೆ, ಕಾರಣ ಕೇಳಿ ತಮ್ಮ ಸಹಾಯ ಹಸ್ತ ಬೇಕಿದ್ದರೆ ಕೊಡುವಲ್ಲಿ ಹಿಂದುಮುಂದು ನೋಡುತ್ತಿರಲಿಲ್ಲ. ಇನ್ನು ರಾಮನವಮಿ, ಗೌರಿ ಗಣೇಶ, ಆಯುಧ ಪೂಜೆ, ವಿಜಯದಶಮಿ, ದೀಪಾವಳಿ ಹಬ್ಬಗಳನ್ನ ಪ್ರತಿ ಊರಿನ ಸಮಸ್ತರು -ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು ಒಗ್ಗಟ್ಟಾಗಿ, ಪತ್ರಿಕೆಗಳು- ಇಂದಿಗೂ ಸಾಮೂಹಿಕವಾಗಿ ಆಚರಿಸುತ್ತಿರುವರು. ಈ ಸಂಪ್ರದಾಯಸ್ಥ ಮೂರ್ತಿ ಪೂಜೆ, ಪುನಸ್ಕಾರಗಳು ತಮ್ಮನ್ನು ತಾವೇ ಬುದ್ಧಿವಂತರೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ, ಪ್ರಗತಿಪರರೆಂದು ಕೊಚ್ಚಿಕೊಳ್ಳುವ, ಇಂದಿನ ಹಲವು ಬುದ್ಧಿಜೀವಿಗಳ ಟೀಕೆಗೆ ಗುರಿಯಾದರೂ, ಜಾಗತೀಕರಣದ ಪ್ರಭಾವದಿಂದಾಗಿಯೂ ಕೂಡ ಹಿಂದು ಸಂಪ್ರದಾಯವನ್ನು ಎಳ್ಳಷ್ಟು ಮರೆತಿಲ್ಲವೆಂಬುದಕ್ಕೆ ಪ್ರಾತ್ಯಕ್ಷಿಕ ಸಾಕ್ಷಿ! ಇನ್ನು ಜಾತಿ, ಮತಗಳ ಬಗ್ಗೆ ಯಾರೂ ಚಕಾರ ಎತ್ತುತ್ತಿರಲಿಲ್ಲ. ದೊಡ್ಡ ಷಹರುಗಳೆಂದರೆ ಆಗೆಲ್ಲ ಬೊಂಬಾಯಿ, ಮದ್ರಾಸು, ಕಲ್ಕತ್ತಾ ಇತ್ಯಾದಿಯಷ್ಟೆ. ಇತರ ನಗರಗಳು ಹಾಗು ತಾಲೂಕು ಮಟ್ಟದ ಊರುಗಳಲ್ಲಿ, ಅಲ್ಲಿಯ ವಾಸ್ತವಿಕ ಜೀವನವೇ ಬೇರೆ ರೀತಿಯದು. ವ್ಯವಸಾಯಮಾಡುವವರನ್ನು ಬಿಟ್ಟರೆ, ಇತರ ಜನರಿಗೆ ಸಂಜೆ ಹೊತ್ತು ಕಳೆಯುವ ದಾರಿ ಎಂದರೆ ಪರಸ್ಪರ ಮಾತು, ವಿಚಾರ ವಿನಿಮಯ. ಇಲೆಟ್ರಿಕ್ ದೀಪಗಳನ್ನು ಕಾಣದ ಹಳ್ಳಿ ಜೀವನವಂತೂ ಬಹು ನೀರಸವೆಂದೇ ಹೇಳಬೇಕು. ಸಂಜೆಯಾಗುತ್ತಲೇ ಕುರಿ, ಮೇಕೆಗಳನ್ನುಮೇಯಿಸಿಕೊಂಡು ಬಂದು, ದನಗಳನ್ನುಕೊಟ್ಟಿಗೆಗೆ ತಂದು, ಅವುಗಳಿಗೆ ಹುಲ್ಲು, ನೀರು ಒದಗಿಸುವುದು ಚಿಕ್ಕವರ ಆದ್ಯ ಕರ್ತವ್ಯ. ಗಂಡಸರು ಊರಂಚಿನ ಕಟ್ಟೆಗಳಲ್ಲಿಯೋ ದೇವಸ್ಥಾನದ ಜಗುಲಿಯ ಮೇಲೋ ಕೂತು ಹರಟೆ ಇಲ್ಲ ಇಸ್ಪೀಟಾಟದಲ್ಲೋ, ಹೆಂಗಸರು ಗೃಹಕೃತ್ಯ ಮುಗಿಸಿ, ಎಲ್ಲರ ಮನೆಯ ಬಾಗಿಲುಗಳಾಚೆಯ ಜಗುಲಿಗಳಲ್ಲಿ ಕೂತು ಹರಟೆಯ ಮಾತುಗಳಲ್ಲಿ ತನ್ಮಯರಾಗುತ್ತಿದ್ದಿದೂ ಸಹಜ ಆ ದಿನಗಳಲ್ಲಿ. ಕುತೂಹಲದ ಅನುಭವಗಳು, ಯಾರೋ ಹೇಳಿದ ಕಥೆಗಳು ಕೂಡ ಪರಸ್ಪರ ವಿನಿಮಯ, ಚರ್ಚೆಗೆ ಬರುವುದು ಸಾಮಾನ್ಯ. ಅಂತಹ ವಿಷಯಗಳಲ್ಲಿ, ದೆವ್ವದ ಬಗ್ಗೆ ಸ್ವಲ್ಪ ಹೆಚ್ಚೆನಿಸುವಷ್ಟು ಆಸಕ್ತಿ ತೋರುವುದೂ ಉಂಟು. “ ನೋಡಿ ಆಂಡಾಲೂ, ನೀವು ದೊಡ್ಡ ಊರಿನಿಂದ ಬಂದವರು, ದೆವ್ವ, ಪಿಶಾಚಿಗಳನ್ನ ನಂಬ್ತೀರಾ ಇಲ್ವೋ, ನಂ ಸಂಸಾರ ನಾಗ್ಮಂಗಲದಲ್ಲಿದ್ದಾಗ- ನಿಮಗೆ ಗೊತ್ತಲ್ವಾ, ನಮ್ಮವರು ಅಲ್ಲಿ ದೇವಸ್ತಾನದ ಪೂಜಾರಿಯಾಗಿದ್ದು, ಕುಟಂಬಕ್ಕ್ ವರಮಾನ ಸಾಲದು ಅಂತಾ ಇಲ್ಲಿಗ್ ಬಂದಿದ್ದು- ಮಳೆಗಾಲದಲ್ಲಿ ಹಾವುಗಳು ಎಷ್ಟು ಸಾಮಾನ್ಯವೋ, ಸಂಜೆ ಆಗುತ್ತಲೂ ಕೊಳ್ಳಿ ದೆವ್ವಗಳು ಕೂಡ ಆಕಾಶ ನಿರ್ಮಲವಾಗಿದ್ದರೆ ಕಾಣ್ಸೋವು ಕಂಣ್ರೀ.” “ಹೌದಾ? ಹ್ಯಾಗಿರುತ್ತವೇ ಅವು?”, “ಅದೇರಿ, ಡೊಂಕುಡೊಂಕಾಗಿ, ಒಂಥರಾ ಉರಿಯೋ ಕೊಳ್ಳಿ ತರಹಾನೇ ಕಾಣಿಸ್ತಿದ್ವು” “ಏನ್ ಹೇಳ್ತೀರಾ ನಾಗಮ್ಮನೋರೇ, ಈಗಿನ ದಿನಗಳಲ್ಲೂ ಯಾರಾದ್ರೂ ನಂಬ್ತಾರಾ? ಅದೆಲ್ಲಾ ಭ್ರಮೆ ಅಂತಾ ಪೇಪರುಗಳಲ್ಲಿ ಬರ್ದಿದಾರಂತೆ ?” “ ಅದೆನೋಪ್ಪಾ, ನಾವೆಲ್ಲಾ ಊರ್ಗೆ ಊರೇ ಕಣ್ಣಾರ ನೋಡೀವೀ, ಒಂದ್ಸಲ ಏನಾಯ್ತು ಗೊತ್ತೇನ್ರೀ ಆಂಡಾಳೂ-ಇದು ಸಿನಿ ಮಾಗಳ್ಲಲ್ಲಿ ತೋರ್ಸಾ ತರಹಾನೇ- ಅಲ್ಲಿಯ ಅಳಲೆಕಾಯಿ ಪಂಡಿತ ಅಹೋಬಲ ಭಟ್ಟರ ಮಾವ ‘ಶಾನುಭೋಗ ಶೀನಪ್ಪ’ ಅಂತ ಇಲಿಯಾರಪುರದಲ್ಲಿದ್ರಂತೆ ಕಣ್ರೀ-ಅವರ್ಗೆ ಇನ್ನೊಂದ್ ಹೆಸರು ‘ಇಲಿ ಶೀನಪ್ಪ’ ಅಂತ, ಅವರಿದ್ದ್ಮನೆ ರಸ್ತೆಗೂ ‘ಇಲಿ ಶೀನಪ್ಪ ರಸ್ತೆ ಅಂತಾ ಕರೀತಿದ್ರಂತೆ’’- ಯಾಕೋ, ಅವರ್ನ ದೆವ್ವ ಅಟ್ಟಿಸ್ಕೊಂಡ್ ಬಂದಿತ್ತಂತ ಹೇಳೊವ್ರು. ನೀವ್ ಹೆದ್ರಕೊಳ್ಳಲ್ಲಾಂದ್ರೆ ಹೇಳ್ತೀನಿ.” ಆಂಡಾಳುವಿನ ಒಪ್ಪಿಗೆಗೆ ಕಾಯ್ದೆ ಮುಂದುವರೆಸಿದರು ನಾಗಮ್ಮ“ ಶೀನಪ್ಪ ಬಹಳ ಧೈರ್ಯಸ್ತ ಅಂತೆ, ಆದ್ರೆ ಒಂದ್ಸಲ ಅವ್ರ ಪಕ್ಕದ್ ಊರ್ಗೆ ಕೆಲ್ಸ್ದಮೇಲೆ ಹೋಕ್ಬೇಕಾಗಿತ್ತು. ಹಿಂತಿರುಗೋದು ತಡವಾಗಿ, ದಾರೀಲಿ ಬಿಕೋ ಅನ್ನೋ ಕಾಡ್ನ ದಾಟೊ ಹೊತ್ಗೆ, ಜೋರಾಗ್ ಮಳೆ ಬಂತಂತೆ ಕಣ್ರೀ. ಅಮಾ ವಾಸ್ಯೆಗೆ ಎರಡು ದಿನ ಮುಂಚೆ ಅಂದ್ಮೇಲೆ ಎಲ್ಲೆಲ್ಲೂ ಕತ್ತಲು, ಆಗಾಗ್ಗೆ ಮಿಂಚಿನ ಬೆಳಕನ್ನ ಬಿಟ್ರೆ. ಸುತ್ತಲೂ ದೊಡ್ದೊಡ್ ಮರಗಳು, ಗಿಡ, ಪೊದೆಗಳು, ವಿಕಾರವಾಗಿ ಕಿರ್ಚೋ ನರಿಗಳು, ಅದು ಬಿಟ್ರೆ, ಬಿಕೋ ಅನ್ನೋ ಜಾಗ, ರಾತ್ರಿ ಎಂಟೊಂಬ್ಬತ್ ಗಂಟೆ, ಜೊತೇಗ್ಯಾರೂ ಇಲ್ಲ ಬೇರೆ. ಎಂತಹವರೂ ಹೆದರೋ ಪರಿಸ್ಥಿತಿ ಅಲ್ವೇನ್ರೀ, ಕಾಡು ಅಂದ್ಮೇಲೆ ಹುಲಿ,ಚಿರತೆ,ಅಂಥಾ ಕ್ರೂರ ಪ್ರಾಣಿಗ್ಳು, ಯಾವ್ದಾ ದ್ರೂ ಗಿಡದ ನೆರಳು ನೋಡಿದ್ರೂ ಭಯವಾಗೋ ಸನ್ನಿವೇಶ. ಮಲ್ನಾಡು ಅಂದ್ಮೇಲೆ ಮಳೆ ಹನಿಗಳು ಒಂದೊಂದು ರಟ್ಟೆ ಗಾತ್ರ. ಆ ಮಳೇಲಿ ನೆನೆಯೋದು ತಪ್ಪಿಸೋಕೆ ಎಲ್ಲೂ ಆಶ್ರಯ ಇಲ್ಲ. ಕೊನೆಗೆ ನಡೆದೂ ನಡೆದು ಸುಸ್ತಾಗೋ ವೇಳೆಗೆ ಅಲ್ಲೊಂದ್ ಗುಡಿಸಲ್ತರಾ ಜೋಪಡಿ ಕಾಣಿಸ್ತಂತೆರೀ.” “ಅದು ಹ್ಯಾಗೆ ಅಂತಾ ಜಾಗದಲ್ಲಿ?”, “ಅದೇ ಆಶ್ಚರ್ಯ ಕಣ್ರೀ, ದೇವ್ರೇ ಅಂತಾ ಆ ಗುಡ್ಸಲಿನ ತಡಿಕೆ ಬಾಗ್ಲು ತಟ್ಟಿದ್ದೇ ತಟ್ಟಿದ್ದೂ, ಯಾರೂ ಕದ ತೆಗೀಲಿಲ್ಲ, ‘ಅಯ್ಯೋ ಭಗವಂತಾ, ಪಾಪಿ ಸಮುದ್ರಕ್ಕೋದ್ರೂ ಮೊಣ್ಕಾಲುದ್ದ ನೀರ?’ ಅನ್ನೋ ತರಹಾ ಆಗೋಯ್ತಾ, ಅನ್ಕೊಂಡ್ ಬೆನ್ ತಿರುಗಿಸಿದ್ರೆ, ಏನ್ ಆಶ್ಚರ್ಯ, ಅಂಡಾಳು ಅಂತೀರೀ?”, “ಏನಾಯ್ತು, ನಾಗಮ್ಮ? ನಿಜವಾಗ್ಲೂ ಭಯವಾಗತ್ತಲ್ವ ನೆನೆಸಿಕೊಳ್ಳಕ್ಕೂ!” “ ಅಲ್ವೇ? ಎದ್ರುಗೇನೆ ಒಬ್ಬ ಬೆಚ್ಚಗಿನ ಬಟ್ಟೆ ಹಾಕ್ಕೊಂಡ್ಕೈನಾಗ್ ದೀಪದ್ ಲಾಂದ್ರ ಹೊತ್ಕಂಡು ಇವರ ಮಖಕ್ಕೆ ನೇರ ಹಿಡ್ದಾನೆ! ಒಂದು ಕ್ಷಣ, ಅಂತಾ ಚಳಿ, ಮಳೇಲೂ ಆತ ಬೆವರಿ, ಬಾಯಿ ತೊದಲ್ತಾ ಕೆಳಕ್ಕೆ ಬೀಳೋವ್ರಂಗಾಯ್ತಂತೆ ಆಂಡಾಳೂ”, “ಆಮೇಕೆ?”, “ಆ ಮನುಷ್ಯ- ನೀವ್ ಹಂಗಂತ ಅನ್ಕೊಂಡ್ರೆ- ಹಿಂದಕ್ ಸರಿದು, ಹೆದರ್ಬ್ಯಾಡಿ, ನೀವ್ಯಾರು, ಇಲ್ಯಾಕ್ ಇದೀರಿ ಅನ್ನೋದ್ ನಂ ಗೊತ್ತು, ಬನ್ನಿ, ತುಂಬಾನೇ ಮಳೆಲಿ ನೆನೆದಿದೀರಿ ಪಾಪ, ನಂ ಜೊತೆ ಬನ್ನಿ, ಹೆದರಬ್ಯಾಡಿ, ಅಂತೇಳಿ ಆ ಗುಡಿಸಲು ಬಾಗಿಲ ತೆಗೆದು ಒಳಕ್ಕೆ ಇವರನ್ನ ಬಿಟ್ಟಾನ್ರೀ, ತಗಳಪ್ಪಾ, ಏನಾಶ್ಚರ್ಯ ಅಂತೀರಿ! ಒಳಗೆ ಹೋಗ್ತಿದ್ದಾಗೇ ವಿಶಾಲವಾದ ಸುಂದರ ಹಜಾರ, ಎಲ್ಲೆಲ್ಲೂ ಪೆಟ್ರೋಮಾಕ್ಸ್ ದೀಪದ ಝಗ ಝಗ ಬೆಳಕು, ಅಲ್ಲಿ ಮದ್ವೆಗೆ ಸಿದ್ಧತೆ ನಡೆದಿದೆ, ಒಂದ್ಕಡೆ ಒಳಗೆ ಹೋಗ್ತಾ, ಅಡಿಗೆಮನೆ, ದೊಡ್ ದೊಡ್ ಪಾತ್ರೆಗಳಲ್ಲಿ ಭಕ್ಷ್ಯಗಳು ಎಲ್ಲ ತಯಾರಾಗ್ತಿದೆ, ನಾನಾ ತರಹದ ಸುಮಾರ್ ಜನ ಸೇರಿದ್ದಾರೆ! ಇನ್ನೊಂದೆಡೆ ಓಲಗದ ಪರಿವಾರ ಸಿದ್ಧವಾಗಿದೆ. ಹಸೆಯಮೇಲೆ ಮದುವೆಯಾಗಲಿರುವ ಗಂಡು,ಹೆಣ್ಣು ಗಂಭೀರವಾಗಿ ಕುಳಿತಿವೆ! ಆಸನವೊಂದನ್ನ ತೋರಿಸಿ, ಬನ್ನಿ ಇಲ್ಲಿ ಕುಳ್ಳಿರಿ ಎಂದು ಆತ ಹೇಳುತ್ತಿದ್ದಾನೆ. ಗಾಬರಿಯಿಂದ ಕೂಡುತ್ತಲೇ, “ನೋಡಿ, ನಿಮಗಾಗಿ ಎಲ್ಲರೂ ಕಾಯುತ್ತಿದ್ದರು, ನಿಮಗೆ ದಾನ ಮಾಡಿ ಆಶೀರ್ವಾದ ಪಡೆದನಂತರವಷ್ಟೆ ಮದುವೆ ಕಾರ್ಯಕ್ರಮ ಪ್ರಾರಂಭ, ಅದುವೇ ನಮ್ಮ ಸಂಪ್ರದಾಯ ” ಎನ್ನುತ್ತಾ ಹರಿವಾಣದಲ್ಲಿ ಪಂಚೆ, ಶಲ್ಯ, ಒಂದು ತಾಮ್ರದ ತಪ್ಪಲೆಯಲ್ಲಿ ಧಾನ್ಯ ಹಾಗು ಚಿಲ್ಲರೆ ಕಾಸು ಅವರ ಮುಂದಿಟ್ಟು ಬಾಗಿ ನಮಸ್ಕರಿಸುತ್ತಿದ್ದಂತೆ ಶಾನುಭೋಗರ ದೃಷ್ಟಿ ಸೊಂಟದ ಕೆಳಗೆ ದೇಹವೇ ಇಲ್ಲದ, ಆದರೆ ಧಾರಾಳವಾಗಿ ನೀರು ತೊಟ್ಟಿಕ್ಕುತ್ತಿದ್ದ ಆ ವ್ಯಕ್ತಿಯನ್ನು ಆಪಾದತಲಮಸ್ತಕ ನೋಡುತ್ತಲೇ ಅವರ ಜಂಘಾಬಲವೇ ಉಡುಗಿ ಹೋಯಿತಂತೆ, ಕೂಡಲೇ “ಸರಿ, ನಾ ಈಗಲೇ ಹೊರಡಬೇಕು, ಕ್ಷಮಿಸಿ, ಎಂದು ತೊದಲುತ್ತಾ ಎದ್ದರಂತೆ ಕೈಯಲ್ಲಿ ತಟ್ಟೆ ಹಾಗು ಪಾತ್ರೆ ಹಿಡಿದು! “ಬನ್ನಿ, ನಿಮಗೆ ದಾರಿ ತೋರಿಸುತ್ತೇನೆ” ಎನ್ನುತ್ತಾ ಮತ್ತೆ ದೀಪವನ್ನ ಹಿಡಿದು ಆಚೆಗೆ ಬರುತ್ತಲೇ ಎಲ್ಲವೂ ಮಾಯ, ಕಣ್ಣು ಕತ್ತಲೆ ಕಟ್ಟಿದಂತಾಯಿತಂತೆ. ಮತ್ತೆ ಕಣ್ಣು ಬಿಟ್ಟಾಗ, ಬೆಳಗಿನ ಮುಂಜಾನೆಯಾಗಿ, ನಡುಗುವ ಚಳಿಯಲ್ಲಿ, ಮುರಿದು ಬಿದ್ದುಹೋಗಿದ್ದ ಒಂದು ಗುಡುಸಿಲನ ಹತ್ತಿರ, ‘ಬಿಕೋ’ ಎನ್ನುವ ಜಾಗದಲ್ಲಿ ಮಲಗಿದ್ದರಂತೆ ಕೈಯಲ್ಲಿ, ತಾಮ್ರದ ತಟ್ಟೆ, ಕಂಚಿನ ಪಾತ್ರೆಯನ್ನ ಭದ್ರವಾಗಿ ಹಿಡಿದೇ! ಅಲ್ಲಿಂದ ‘ಎದ್ದೆನೋ, ಬಿದ್ದೆನೋ’ ಎನ್ನುತ್ತಾ ಅದು ಹೇಗೋ ಊರನ್ನು ಸೇರಿಕೊಂಡವರು, ಊರಾಚೆಯ ಆಂಜನೇಯನ ದೇವಸ್ತಾನದ ಕಟ್ಟೆಯ ಮೇಲೆ ಜ್ಞಾನವಿಲ್ಲದೆ ಬಿದ್ದಿದ್ದನ್ನ ಯಾರೋ ನೋಡಿ ಇವರನ್ನು ಕರೆತಂದು ಮನೆಗೆ ಬಿಟ್ಟರಂತೆ ಆಂಡಾಲೂ! ನಾಲ್ಕೈದು ದಿನ ಜ್ವರ ಬಂದು ಚೇತರ್ಸಿಕೊಂಡರಂತೆ! ‘ಆಶ್ಚರ್ಯ’ ಅಂದರೆ ಈಗಲೂ ಆ ದೆವ್ವದ ಜ್ಞಾಪಕಾರ್ಥ ಅವರ ಬಳಿ ಇದ್ದ ಆ ತಟ್ಟೆ ಮತ್ತು ಕಂಚಿನ ಪಾತ್ರೆ ನ್ನು ಅವರ ಮನೆಯವರು ಎಲ್ಲರಿಗೂ ತೋರಿಸುತ್ತಾರಂತೆ ಕಣ್ರೀ! —————————————————————————————————————–
Comments