(ಆನಂದ ವಿಹಾರ ಕ್ಲಬ್) ಪ್ರೇಮ ಬಲಿ-.
- haparna
- Feb 1, 2016
- 7 min read
(ಆನಂದ ವಿಹಾರ ಕ್ಲಬ್) ಪ್ರೇಮ ಬಲಿ-. —————————————————————————————————————– ಫಾಲ್ಗುಣ ಮಾಸದ ಕೊನೆಯ ಶನಿವಾರ. ಶಿಶಿರವನ್ನ ಹಿಂದಿಕ್ಕಿ, ವಸಂತಕ್ಕೆ ಕಾಲಿಡುತ್ತಿದ್ದಂತೆ ಮುಂಜಾನೆಯ ಮಂಜು, ಚುಮು ಚುಮು ಚಳಿ ಮಾಯವಾಗುತ್ತಾ, ರವಿಯು ತನ್ನ ಬಿಸಿಲಿನ ತಾಪವನ್ನು ದಿನ ದಿನಕ್ಕೆ ವೃದ್ಧಿಸಿಕೊಳ್ಳುವ ಪರಿವರ್ತನ ಸಮಯ, ಭಾನುವು ಪಶ್ಚಿಮದಲ್ಲಿ ಮುಳುಗುತ್ತಿದ್ದಂತೆ ಕಿವಿ ಗಿಂಪಾದ ಹಕ್ಕಿಗಳ ಕಲರವ, ಚಿಗುರುತ್ತಿರುವ ಗಿಡ ಮರಗಳು ಮತ್ತಷ್ಟು ತಂಪರೆಯುತ್ತಾ, ಕ್ಷೀಣ ಚಂದಿರನನ್ನು ನಕ್ಷತ್ರ ಮಾಲೆಗಳ ಮೂಲಕ ಸ್ವಾಗತಿಸುವ ಮುಸ್ಸಂಜೆಯ ವೇಳೆ. ಈ ವಾತಾವರಣದ ವೈಪ್ಯರೀತ್ಯದ ಬಗ್ಗೆ ಆನಂದ ವಿಹಾರ ಕ್ಲಬ್ಬಿನ ಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಮೂಲೆಯಲ್ಲಿ ಕುಳಿತಿದ್ದ ನಮ್ಮ ಸಂಜಯ್ ಅನ್ವೇಕರ್-ಬೆಳಗಾವಿಯಾವ- ಮಾತ್ರ, ಸಾಮಾನ್ಯವಾಗಿ ಉತ್ಸಾಹದ ಚಿಲುಮೆಯಂತಿರುವಾತ ಇಂದೇಕೋ ಮ್ಲಾನವದನನಾಗಿದ್ದರು. ಆಗಾಗ್ಗೆ, ಖಾಲಿಯಾದ ಗ್ಲಾಸನ್ನು ಸ್ವಲ್ಪ ಬಲವಾಗಿಯೇ ಮೇಜಿನ ಮೇಲೆ ಕುಕ್ಕುತ್ತಾ, ತಲೆಯಮೇಲೆ ಕೈಯಿಟ್ಟು ಮುಲುಗುತ್ತಿದ್ದನ್ನು ಹಲವರು ಗಮನಿಸಿದ್ದರು. ನಮ್ಮ ಕ್ಲಬ್ಬಿನ ಪರಿಚಯವಿಲ್ಲದವರು, ಗುರುಗೋವಿಂದ ನಗರಕ್ಕೆ ಬಂದರೆ, ಅಲ್ಲಿಯ ರಾಮ ಮಂದಿರ ರಸ್ತೆ ದಾಟಿ ಸ್ವಲ್ಪ ಬಲಕ್ಕೆ ತಿರುವಿ ಮತ್ತೆ ಎಡಕ್ಕೆ ತಿರುಗಿದರೆ, ಎದುರಿಗೇ ಕಾಣಿಸುವ ಏಕೈಕ ಬಹು ಮಹಡಿ ಕಟ್ಟಡದ ಮೊದಲ ಉಪ್ಪರಿಗೆಯೇ ನಮ್ಮಆನಂದ ವಿಹಾರ ಕ್ಲಬ್ಬಿನ ವಿಳಾಸ. ಈಶಾನ್ಯ ದಿಕ್ಕಿಗಿನ ಕೊಠಡಿಯೇ ಚಿಟಿಕೆ ಸಂಘದ ಮೂಲ ಸ್ಥಾನ. ಸಿದ್ಧಾಂತಿಗಳ ಕುರ್ಚಿಯೇ ಕೇಂದ್ರ ಬಿಂದು. ಅವರ ಮಾತುಗಳೇ ಸದಸ್ಯರಿಗೆ ಮುದ ತರುವ, ಮನರಂಜನೆಯ,ಕುತೂಹಲಕರ ವೃತ್ತಾಂತಗಳು– ಕಟ್ಟು ಕಥೆಗಳೋ, ಹೇಗೋ–ಒಟ್ಟಿನಲ್ಲಿ ಸ್ವಾರಸ್ಯದ ಕಥಾನಕಗಳು. ಜೊತೆ ಜೊತೆಗೆ ಖಿಚಡಿಯಂತೆ ಸದಸ್ಯರ ಮಾತುಗಳ ಚಕಮಕಿಯಲ್ಲಿ ವಿಷಯ ಮಂಡನೆ, ಖಂಡನೆ, ಚರ್ಚೆ, ಹಾಸ್ಯ, ಪರಸ್ಪರ ಕಿಚಾಯಿಸಲು ಉದುರುವ ಕುಹಕಿಡಿ, ಪ್ರತಿಯಾಗಿ ಸಿಡಿನುಡಿ ಇಲ್ಲವೇ ಉರಿಕಿಡಿ, ಅದನಾರಿಸಲು ಮಧ್ಯಸ್ತಿಕೆಯ ಸಿಹಿನುಡಿ, ಗ್ಲಾಸುಗಳ ನಿನಾದ; ಹೀಗೆ ಅಲ್ಲಿಯ ವಾತಾವರಣ, – ಛಳಿಗಾಲದ ಹುರಿಗಾಳಿನ ಸ್ವಾದದಂತೆ ! ಸರಿಯಾಗಿ ಏಳು ಗಂಟೆಯಾಗುತಿದ್ದಂತೆ-ಸಮಯ ಪಾಲನೆಗೆ ಮತ್ತೊಂದು ಹೆಸರು ‘ಶಂಕರ ಸಿದ್ಧಾಂತಿ’-ಗಳ ಅಗಮನ. ಒಳಗೆ ಪ್ರವೇಶಿಸುತ್ತಿದ್ದಂತೆ ಬೇರರ್ ವಾಸು ಅವರಿಗೆ ಪ್ರಿಯವಾದ ಪಾನಕ, ಪರಿಕರಗಳನ್ನು ಅವರ ಮೇಜಿನ ಮೇಲಿಟ್ಟು, ತುಸು ದೂರದಲ್ಲಿ ಕೈ ಕಟ್ಟಿ ನಿಲ್ಲುವವ ಬೇರೇನೂ ಕೆಲಸವಿಲ್ಲದಿದ್ದರೆ. ಅವರ ಮಾತೆಂದರೆ ಎಲ್ಲರಿಗೂ ಕುತೂಹಲ, ಅಸಕ್ತಿ! ಮುಗುಳು ನಕ್ಕು, ಆಸೀನ ರಾಗಿ ಎಲ್ಲರೆಡೆಗೆ ನೋಡುತ್ತಾ ಅವರ ದೃಷ್ಟಿ ಸಂಜಯ್ ಅನ್ವೆಕರ್ ನ ಮೇಲೆ ಬಿತ್ತು. “ಅದೇನು ಸಂಜಯ್, ಎಂದಿನ ಲವಲವಿಕೆ ಕಾಣುಸುತ್ತಿಲ್ಲಾ, ಏನೋ ಗಾಢ ಯೋಚನೆಯಲ್ಲಿದ್ದೀರಾ?”ಎಂದರು. ಈ ಮಾತು ಕೇಳುತ್ತಿದ್ದಂತೆ ಆತನ ದು:ಖದ ಕಟ್ಟೆ ಒಡೆದು, ಗಂಟಲುಬ್ಬಿ ಬಂತು. ಬಾಯಲ್ಲಿದ್ದ ದ್ರವ ಗಂಟಲಲ್ಲಿ ಸಿಕ್ಕಿ ನರಳುತಿದ್ದಂತೆ ಚಂದ್ರು “ನಾ ಹೇಳ್ತೇನೆ ಸಾರ್, ಈ ಅನ್ವೇಕರ್ ಪ್ರೀತಿಸಿರೋ ಹುಡುಗಿ ಎಡವಟ್ಟಮ್ಮಣ್ಣಿ ಅಂತ ಗೊತ್ತಿಲ್ದೆ ಮದುವೆಗೆ ಒಪ್ಪಿ, ಮದ್ವೆ ಡೇಟೂ ಫಿಕ್ಸ್ ಆಗಿದೆ. ಆಕೆ ಉಗ್ರ ಜಗಳಗಂಟಿ ಅಂತ ಇದೀಗ ತಿಳೀತು ಆ ಹುಡ್ಗಿ, ಕೋಪಿಷ್ಟಳೆಂದರೆ ಅವಳನ್ನ ಮೀರ್ಸೋವ್ರು ಯಾರೂ ಇಲವಂತೆ, ಅವ್ಳಪ್ಪನ್ನೇ ಒಂದ್ಸಲ ಕೋಪದಲ್ಲಿ ತಳ್ಳಿ ಬೀಳ್ಸಿದ್ದಳಂತೆ. ಈತನೋ ಬಹಳಾನೆ ಸಾಫ಼್ಟು!” “ಗೊತ್ತಾಯ್ತು ಬಿಡಿ, ಇದೇ ತೆರನ ಕೇಸು ನಮ್ಮ ತರೀಕೆರೆ ಚಿಕ್ಕಮ್ಮನ ಮೈದುನ ಪ್ರಹ್ಲಾದನಂದೂ ಆಗಿತ್ತು”. ಬಹಳ ಇಂಟರೆಸ್ಟಿಂಗ್ ಎಪಿಸೋಡು ಅವ್ನ ಜೀವ್ನದಲ್ಲಿ, ಏನೇನೋ ಮಾಡಿ ಸಾಲ್ವೂ ಆಯ್ತು, ಕೇಳಿದ್ರೆ ನೀವುಗ್ಳು ಖುಷಿ ಪಡ್ತಿದ್ರಿ” ಎನ್ನುತ್ತಾ ಗ್ಲಾಸನ್ನು ತುಟಿಯ ಬಳಿ ತಂದರು. “ಅದೇನ್ ಸ್ವಲ್ಪ ವಿವರವಾಗಿ ಹೇಳ್ಭೋದಲ್ವೆ ಸಿದ್ಧಾಂತಿಗ್ಳೇ” ಜಡ್ಜ್ ವಾಸುದೇವರ ಪ್ರಶ್ನೆ. “ಹೌದಲ್ವಾ”ರೇವಣಪ್ಪ ಧ್ವನಿಯೂ ಕೂಡಿತು. ‘ತಲಾಕ್, ತಲಾಕ್’ ಅಂದ್ರೆ ಎಂಥಾ ಹೆಂಡ್ತೀನ್ನಾದ್ರೂ ಕಳ್ಚಕೋಭೋದು ನಮ್ಮ ಪೀರೂ ಭಾಯ್ ಅಂತಹವರಾದ್ರೆ, ಇನ್ನ ನಿಶ್ಚಿತಾರ್ಥ ಎನ್ಲೆಕ್ಕ, ಹಾಗೆ ನಮ್ಗಾಗತ್ಯೆ?” – ಕಪ್ಪಣ್ಣನ ಕುಚೋದ್ಯದ ಮಾತು ಪೀರ್ ಸಾಹೇಬ್ರನ್ನ ಕಿಚಾಯ್ಸೋದಿಕ್ಕೆ. ಪೀರ್ ಸಾಹೇಬ್ಗೆ ರೇಗಿತು. “ಹೌದೌದು, ನಿಮ್ದುಕೆ ಸಣಕಲ್ ಬಾಡೀ ಇರೋ ಆದ್ಮೀಕೋ ತಾಕತ್ ಕಿದರ್ ಮಿಲ್ತಾ? ಬನ್ರೀ ನಮ್ಗರ್ಡೀಗೆ, ನನ್ಜೂನೀಯರ್ ಮಸ್ತ್ ಖಲಂದರ್ ಹತ್ರ ಬಾಡಿ ಬಿಲ್ಡ್ ಮಾಡಿ ನಿಮ್ಮನ್ನ ಪೈಲವಾನ್ ‘ಗೋಗಾ’ನ ತರಹ್ ಕರ್ತೆ ಹಂ, ಆಗ್ಗೆ ದುಸರಾ ಅಲ್ಲ,ಆಠ್ವಾ ಬೀಬಿಕೋ ಭೀ ‘ವಾಪ್ಸಿ’ ಮಾಡೋ ತಾಕತ್ ಬರ್ತಾದೆ, ಸ್ಕೆಲಿಟನ್ ತರಾ ಬಾಡಿಸೇ ಕ್ಯಾ ಕರ್ತೆ, ನೊಣ ಕೂಡ ಓಡ್ಸಕ್ಕೆ ತಾಕತ್ ನಹೀ.” ಮಾತು ಎಲ್ಲಿಗೋ ಹೊರಳುತ್ತಿದ್ದನ್ನ ತಡೆದು ಸಿದ್ಧಾಂತಿಗಳು “ಈ ಪ್ರಹ್ಲಾದನಿಗೆ -ಬಂಧುಗಳಿಗೆಲ್ಲಾ- ಪಲ್ಲೂ- ‘ಅವಳು ಹಾಡಿನ ಮೂಲಕವೇ ಉತ್ತರಿಸೋದು, ಬಾಯ್ ಬಿಟ್ರೆ ಮುಚ್ಚೋದೇ ಇಲ್ಲ’ ಅನ್ನೋದ ಮೊದಲು ಮೊದಲು ಗೊತ್ತಾಗಲಿಲ್ಲ. ಒಂದು ದಿನ ಎದುರಿಗೆ ಸಿಕ್ಕಿ ರಸ್ತೆ ಬದಿಗೆ ಆಕೆ ನಡೆಯುವಾಗ ಎಡವಿ ಬೀಳುವದರಲ್ಲಿದ್ದಳು. ಬೀಳುವ ಮುನ್ನ, ಪಲ್ಲು ಹೇಗೋ ತಡೆದು ಪ್ರಾಣಾಪಾಯದಿಂದ ತಪ್ಪಿಸಿದ್ದ. ‘ಎನ್ನಾ ತಡೆಹಿಡಿದು ಪ್ರಾಣವ ಉಳಿಸಿ, ನನ್ನಾ ಹೃದಯವ ಕದ್ದವ ನೀನೇನಾ, ಎನ್ನಯ ಕೈ ಹಿಡಿದು, ಪ್ರೀತಿಯ ಕಾಣಿಕೆ ಕೊಟ್ಟವ ನೀನೇನಾ” ಎಂದೆಲ್ಲಾ ಹಾಡು ಕಟ್ಟಿ ಆ ಕ್ಷಣದಲ್ಲೇ ರಾಗವಾಗಿ ಅವನ ಕಿವಿಗೆ ಮಟ್ಟಿಗೆ ಬೀಳುವ ಹಾಗೆ ಹಾಡಿದಳಂತೆ’’. ಪಲ್ಲೂವಿನ ಬಾಯಿಂದಲೇ ಕೇಳಿ- ‘ಆಗಿನ ಸಮಯಕ್ಕೆ ನಾನು ಯಾವುದೋ ಹಳೇ ಸಿನೆಮಾ ಹಾಡು ಉಲಿಯುತ್ತಿದ್ದಾಳೆಂದು ಭಾವಿಸಿದ್ದೆ. ಮತ್ತೆ ಮತ್ತೆ ಅವಳನ್ನು ಸಂಧಿಸಿದಾಗ ಅಮಾವಾಸ್ಯೆಯ ರಾತ್ರೀಲಿ ನಾಲ್ಕು ಬೆಕ್ಕುಗಳು, ಮೂರು ಹುಚ್ನಾಯಿಗಳು ಒಟ್ಟಿಗೇ ಜಗಳ ವಾಡುತ್ತಾ ಕಿರುಚಾಡುವ ಭೀಕರ ಕೆಟ್ಟ ಧ್ವನಿಯನ್ನು ಮೀರಿಸುವಂತೆ ತೋರುತ್ತಿತ್ತು ಅವಳ ಎಡೆಬಿಡೆಯಿಲ್ಲದ ತಾನಗಳು. ಮದುವೆ ನಿಶ್ಚಯವಾದ ದಿನ ಅವರ ಕಡೆಯವರೆಲ್ಲ ನನ್ನ ನೋಡಿ ಮುಸಿಮುಸಿ ನಗುತ್ತಿದ್ದನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ. ಬಹುಷ: ಆ ದಿನ ಅವಳಿಗೆ ಬಾಯಿ ಮುಚ್ಚಿರಲು ಎಚ್ಚರಿಸಿದ್ದರೆಂದನಿಸತ್ತದೆ. ಹಾಡಿರಲಿಲ್ಲ. ಆದರೂ ಕೊನೆಯಲ್ಲಿ, ಯಾರೋ ಅವಳನ್ನು ರೇಗಿಸಲು, ‘ಒಂದೇ ಒಂದು ಹಾಡು ಹೇಳು ಹೊಸಾ ಭಾವನಿಗಾಗಿ, ಭಾವನಾ’ ಎಂದು ಪುಸಲಾಯಿಸಿದರು. ಅಷ್ಟಕ್ಕೇ ಅವಳು ಅತಿ ಕೆಟ್ಟದಾಗಿ ‘ನೀನ್ಯಾರಿಗಾದೆಯೋ ಎಲೆ ಮಾನವಾ, ಎನಗಾಗಿ ಜನ್ಮ ತಾಳಿ ಬಂದೆಯೋ/ ಮದು ಮಗ ನೀನಾದೆಯೋ, ಎನ್ನ ಕೈ ಹಿಡಿಯಲೆಂದು ಒಡೋಡಿ ಬಂದೆಯೋ.. ಅತಿ ಮಾನವಾ // , ಮತ್ತು ‘ಮಾವನ ಮಗನೇ, ಮುದ್ದುಮೊಗದವನೇ, ಕನ್ಯಾಸೆರೆ ಬಿಡಿಸಬಂದವನೇ, ಎನ್ನ ಹೃದಯ ನಿನ್ನ ಸಂಗಕಾಗಿ ಮಿಡಿಯಿತೋ’, ಅದು ಮುಗಿಯುತ್ತಿದ್ದಂತೆ ‘ಅಂತಿಂಥ ಗಂಡು ನೀನಲ್ಲ, ನಿನ್ನಂಥ ಸುಂದರಾಂಗ ಎಲ್ಲೂ ಇಲ್ಲ, ಎನಗಾಗಿ ನೀ ಬಂದೇ, ನನ್ನ ಹೃದಯ ಕದ್ದು ಹೋದೆಯಲ್ಲೋ ಅನಂಗ ’ ಎಂದೆಲ್ಲಾ ಶೋಕ ರಾಗದಲ್ಲಿ ಪಲ್ಲವಿ ಸಮೇತ ಹಾಡಲು ಪ್ರಾರಂಭಸುತ್ತಿದ್ದಂತೆ ನನಗೆ ತಲೆ ಸುತ್ತಿ ಬಂದು, ಕಣ್ಣು ಕಟ್ಟಿದಂತಾಗಿತ್ತು, ನನ್ನ ಗೆಳೆಯನಿಗೆ ಮಾತು ಹೊರ ಬರದೆ ಗಂಟಲಲ್ಲಿ ಸಿಕ್ಕಿದಂತಾಗಿತ್ತು. ಆಕೆಯ ತಂದೆ ಅಲ್ಲಿಗೆ ನಿಲ್ಲಸಿ ಸೂಕ್ಷ್ಮವಾಗಿ, ನಮ್ಮನ್ನು ಬೀಳ್ಕೊಟ್ಟರೆಂದು ಜ್ಞಾಪಕ. ಮತ್ತೆ ಇತ್ತೀಚೆಗೆ ಅವಳನ್ನು ಭೇಟಿ ಮಾಡಿದಾಗಲೂ ಅವಳ ಈ ಹುಚ್ಚು ಕಮ್ಮಿಯಾಗಿರಲಿಲ್ಲ. ‘ಇನ್ನೂ ಜಾಸ್ತಿಯೇ, ನೀ ಒಪ್ಪಿದ ನಂತರ, ಎಂದಿದ್ದ ನನ್ನ ಮಿತ್ರ ಗುರುಮೀತ ಸಿಂಗ’. ಜೊತೆಗೆ ರೌಡಿಯಂತಹ ಅವ್ರ ಅಮ್ಮನ ಬೆಂಬಲ. ಇನ್ನು ನನ್ನ ಜೀವನವಿಡೀ ಅವಳ ಕೆಟ್ಟ ಸಂಗೀತಕ್ಕೆ ಕಲ್ಲಾಗಿ, ಸಾಫ್ಟ್ ಕೋರ್ ಮಾವನಿಗೆ ಒರಗು ದಿಂಬಾಗಿ, ಹುಲಿಯಂತಹ ಅತ್ತೆಯ ಬಾಯಿಗೆ ಆಹಾರವಾಗುವುದಕ್ಕೆ ಸಾಧ್ಯವಾಗದ ಮಾತು. ತಲೆ ಕೊಟ್ಟಾಗಿದೆ, ಪ್ರಾಣ ಹೇಗೆ ಉಳಿಸಿಕೊಳ್ಳಬೇಕೆಂಬ ದಾರಿ ಕಾಣುತ್ತಿಲ್ಲ ಶಂಕರಣ್ಣ’. ಪೋಲಿಸರ್ಗೆ ಕಂಪ್ಲೇಂಟ್ ಕೊಟ್ರೆ ಸರಿಹೋಗತ್ತೆ ಎಂದಿದ್ದೆ ನಾನು. ‘ಹಾಡೋದು ಅವಳಿಗೆ ಹುಚ್ಚು, ನೆರೆಯವರಿಗೆ ಶಾಂತಿ ಭಂಗದ ಕುತ್ತು’ ಅಂತಾ ಅಕ್ಕ ಪಕ್ಕದವರೆಲ್ಲ ಪೋಲಿಸ್ಗೆ ದೂರು ಕೊಟ್ಟಿದ್ರಂತೆ ಶಂಕರಣ್ಣ, ಒಬ್ಬಿಬ್ಬರಂತೂ ಮನೆ ಬಾಗಿಲಿಗೆ “ನಾಳೆಗೆ ಇರಲಿ ಹಾಡು, ಇವತ್ತು ಬೇಡ” ಅಂತ ಬರೆದಿದ್ರಂತೆ. ‘ಅವಳ ಮನೆ ಒಳಗೆ ಏನೇ ಹಾಡಿದ್ರೂ, ಪೊಲೀಸ್ನವ್ರು ಏನು ಮಾಡಕ್ಕಾಗಲ್ಲ. ನಿಮ್ಮ ಹಣೆಬರಹ ಬದಲಿಸಲಿಕ್ಕೆ ವೆಂಕಟೇಶನಿಗೇ ಇನ್ನಷ್ಟು ದೊಡ್ಡ ನಾಮ ಹಚ್ಚಿ ಈಡುಗಾಯಿ ಹೊಡ್ಸಿ, ತೆಪ್ಗಿರಿ’ ಅಂದ್ರಂತೆ. ಅತ್ತೆಯಾದವಳಂತೂ ಸೆರಗು ಸೊಂಟಕ್ಕೆ ಸಿಕ್ಕಿಸಿ ಬಾಯಿ ತೆರೆಯುತ್ತಲೇ ವಿರೋಧಿಸ ಬಂದವರು ಮನೆಗಳೊಳಗೆ ಹೋಗಿ ಕದ ಮುಚ್ಚಿಕೊಳ್ಳುತ್ತಿದ್ದರಂತೆ! ಹೀಗಾಗಿ ಸುತ್ತು ಮುತ್ತ ಎಲ್ಲರೂ ‘ಇದೊಂದು ಪ್ರಾರಬ್ಧ ಕರ್ಮ’, ಅವಳ್ನ ಮದ್ವೆ ಮಾಡ್ಕೊಂಡು ಹೋಗೋ ಮಿಕ ಯಾವನಾದ್ರು ಬಂದ್ರೆ ನಮಗೆ ಶಾಂತಿ ಸಿಗುತ್ತೆ ಅಂತ ಅನ್ಕೊಂಡು ಅವ್ರ ಮನೆಗಳ ಬಾಗಿಲು, ಕಿಟಕಿ ಮುಚ್ಕೊಂಡೇ ಇರ್ತಾರಂತೆ, ಅಲ್ದೆ, ಗಂಡು ಹುಡ್ಕೋದಕ್ಕೆ ಸಾಕಷ್ಟು ಪ್ರಯತ್ನಾನೂ ಮಾಡಿದರಂತೆ”. ಅವರ ಗ್ಲಾಸ್ ಬರಿದಾಗಿತ್ತು, ವಾಸು ಕಡೆ ನೋಡುತ್ತಲೇ, ಅವ್ನು ಕ್ಷಣ ವೇಗದಲ್ಲಿ ಇವರ ಇಚ್ಛೆಯನ್ನು ಪೂರೈಸಿ ಮತ್ತೆ ದೂರ ನಿಂತ. ಅವನಿಗೂ ಇವರ ವೃತ್ತಾಂತಗಳ ಬಗ್ಗೆ ಆಸಕ್ತಿ, ಕುತೂಹಲ! ಇವ್ನು ಬಹಳ ಯೋಚ್ನೆ ಮಾಡಿ, ಸ್ನೇಹಿತರ ಸಲಹೆಯಂತೆ ಅವಳಿಗೆ ಕಾಗದ ಬರೆದ. ‘ನೋಡು, ಪ್ರಿಯ ಭಾವನಾ, ನಾನು ನಿನ್ನ ಮೊದಲ ಸರಿ ನೋಡಿ ನಿನ್ನ ಇಷ್ಟ ಪಟ್ಟಿದ್ ನಿಜಾನಾದ್ರೂ, ಅದು ಆ ಕ್ಷಣದ ನಿರ್ಧಾರವಷ್ಟೆ. ನಿನ್ನ ಹಾಡೋ ಹವ್ಯಾಸ ಸರಿಹೋಗ್ಲಿಲ್ಲ. ನನಗೆ ಸರಿಬೀಳಲ್ಲ, ನೀನ್ಬಿಡಲ್ಲ, ಆದ್ರೆ ನಿನಗೆ ಮಹತ್ತರವಾದ ಸಂಗೀತ ಜ್ಞಾನ ದೇವ್ರು ಕೊಟ್ಟಿರುವುದನ್ನು ವೃದ್ಧಿ ಮಾಡಿಕೋ, ದೊಡ್ಡ ಸಂಗೀತಗಾರಳಾಗುವುದು ಖಂಡಿತ. ನನಗಾಗಿ ತ್ಯಾಗ ಯಾವುದೇ ಕಾರಣಕ್ಕೂ ಬೇಡ, ತಪ್ಪು ತಿಳೀದೆ ಇದ್ರೆ, ನನ್ನ ಮರೆತುಬಿಡು, ಕ್ಷಮಿಸುತ್ತೀಯ ಅಂದ್ಕೊಂಡು ಈ ಪತ್ರ ಮುಗಿಸ್ತಿದೀನಿ. ಮತ್ತೆ ಪತ್ರ ವ್ಯವಹಾರ ಬೇಡ. ಎಲ್ಲರ ಕ್ಷಮೆ ಕೋರುವೆ.’ “ಆಕೆ ಒಪ್ಕಳ್ಳಕ್ಕೆ ಒಳ್ಳೆ ಸಲಹೆ, ಅಲ್ಲಿಗೇ ನಿಮ್ಮವರ ಗ್ರಹಚಾರ ಸರಿಹೋಯ್ತು, ಅಲ್ಲವ್ರಾ? ನಮ್ಪಾರ್ಟಿನವ್ರಾಗಿದ್ರೆ, ನಾವ್ ತಿನ್ನೋ ರಾಗಿ ಮುದ್ದೇ ತರಾ ಆ ಅತ್ತೇನಾ ಫೂಟ್ಬಾಲ್ ಮಾಡಿ, ದಾರಿ ತೋರ್ಸಿತ್ತಿದ್ವಿ” ಮುದ್ದೇಶಯ್ಯ ಕೇಳಿದರು. “ಹೌದೌದು, ಆಗ ಅವ್ರ ಕಡೆಯವ್ರು ಅಂಪೈರ್ ತರಾ ಟಿಕೆಟ್ ಕೊಟ್ಟು, ನಿಮ್ನ ಖೈಮಾ ಮಾಡಿ ಕಟೆ ಕಟೆ ಒಳ್ಗೆ ಬಿಸಾಕ್ಸಿರೋವ್ರು, ಮುದ್ದೆನಂತೆ ಮುದ್ದೆ” ಚಂದ್ರು ಕೀಟಲೆಗಾಗಿ ಛೇಡಿಸಿದರು. “ಸಾರ್, ನಮ್ಮತ್ತೆ ತರಾ ಆಗಿದ್ರೆ, ಪಲ್ಲು ತಲೇ ಮೇಲೆ ಹಾಕಕ್ಕೆ ದೊಡ್ಡ ಚಪ್ಪಡೀನೇ ತಂದಿರೋವ್ರು,” ಪಿಲ್ಟೂ ಉವಾಚ,- ಆತ ಅತ್ತೆ, ಭಾವ ಮೈದುನನ ನಿರಂತರ ಕಾಟ ಇಂದಿಗೂ ಸೈಲೆಂಟಾಗಿ ಅನುಭವಿಸ್ತಿರೋವ್ರು. “ಕಪ್ಪಣ್ಣ ನೀವಾಗಿದ್ರೆ ಈ ಸ್ತಿತೀಲಿ ‘ಸಾರಾ ಜಗಹ್ ಛೋಡ್ಕರ್ ಆಯೆ ಹೂಂ ತೆರೆ ಅಂದರ್ಮೆ ಡೂಬ್ಜಾನೆಕೋ’ ಅಂತ ಕೆರೇನೋ ಭಾವಿನೋ ಹುಡುಕ್ತಿದ್ರಿ” ಅಂತ ಪೀರ್ ಸಾಹೇಬರು ಹೇಳ್ತಿದ್ದ ಹಾಗೇ ಕಪ್ಪಣ್ಣ ಕೋಪದಿಂದ “ನಮ್ಮತ್ತೆ ಬಹಳ ದೂರಾನೆ ಸ್ವರ್ಗದಲ್ಲಿ ಇರೋದು, ನಂಗೆ ಸಮಸ್ಯೆನೇ ಇಲ್ಲ, ಅದು ನಿಂ ಪ್ರಾಬ್ಲಂ, ಆದ್ರೆ, ಅಂಥಾ ಸ್ಥಿತೀಲೂ, ನಿಮ್ಮ ಬೀವಿ ಹತ್ರ ನಿಂ ಕರ್ಮಗಳನೆಲ್ಲ ವರಿದಿ ಒಪ್ಪಿಸಿ, ಆಮೇಲೆ ನನಗಲ್ಲ ನಿಮಗೆ ಆಳದ ಭಾವಿ ನಾನೇ ಸ್ವಯಂ ಖುದ್ದು ನಿಂತು ತೋಡ್ತಿದ್ದೆ, ನೀವ್ ಗುಂಡೀಲಿ ಬೀಳೋದ ನೋಡಿ ಉರ್ಗೆಲ್ಲಾ ತಿಥಿ ಊಟಾ ಹಾಕಿಸ್ತಿದ್ದೆ” ಎಂದು ಉರಿದುಬಿದ್ದರು. ಇವರಿಬ್ಬರಿಗೂ ಯಾವಾಗಲೂ ಇದ್ದದ್ದೇ ಈ ಮಾತಿನ ಕಸರತ್ತು. ‘ಮೂರಕ್ಕೆ ಇಳಿಯಲ್ಲ, ಆರಕ್ಕೆ ಏರಲ್ಲ! ಆದರೆ ಎಲ್ಲಾ ಹಾಸ್ಯಕ್ಕಾಗಿ. ಮೂಲೆಯಿಂದ ನಮ್ಮ ಸಂಜಯ್ ನ ಮುಲುಗು ಇನ್ನಷ್ಟು ಜೋರಾಗಿ ಕೇಳಬಂತು. ವಾಸು ಅವರ ಖಾಲಿಯಾಗಿದ್ದ ಗ್ಲಾಸನ್ನು ಬಹುಶ: ಐದನೆ ಬಾರಿಗೆ ತುಂಬಿ ಬಂದ, ಜೊತೆಗೆ ಸಿದ್ಧಾಂತಿಗಳ ಖಾಲಿ ಗ್ಲಾಸನ್ನೂ ತುಂಬಿ, ಖಾರದ ಗೋಡಂಬಿ ತಟ್ಟೆಯನ್ನು ಅವರ ಮುಂದಿಟ್ಟ. “ಅಂದ್ರೆ, ಆ ಹುಡ್ಗಿ ಗೋಳಾಡಿ, ಕೈಯ್ಯಲ್ಲಿ ಸೌಟನ್ನು ಹಿಡ್ದ ಅತ್ತೆಯನ್ನ ಪಕ್ಕದಲಿಟ್ಟು ಪಲ್ಲೂನ ಒಪ್ಪಿಸಿದ್ದಳು ಅಂತಲೇ ಸಾರ್ ?” ಮಧ್ಯ ವಯಸ್ಸಿನ ಬಸವರಾಜಪ್ಪ ಪ್ರಶ್ನಿಸಿದರು. ಇವರು ಬ್ರಹ್ಮಚಾರಿ, ಒಂಥರಾ ಫ಼್ರೀ ಲಾನ್ಸರ್! “ಮತ್ತೆ ಎರಡು ವಾರಗಳು ಏನೂ ಆಗಲಿಲ್ಲ. ಅಲ್ಲಿಗೆ ರಾದ್ಧಾಂತ ಮುಗಿಯಿತು ಅಂತ ಸ್ನೇಹಿತರಿಗೆ ಪಾರ್ಟೀನೂ ಕೊಡ್ಸಿದ. ಒಂದಿನ ಇವನಿಗೊಂದು ರಿಜಿಸ್ಟರ್ಡ್ ಪತ್ರ ಬಂತು. ‘ಸೋಮಶೇಖರ, ೧೮, ನಾನುಮಲ್ ಮಿಸ್ತ್ರಿಮಲ್ ಖಂಬಾಟ್ ವಾಲಾ ಗಲ್ಲಿ, ಹುಣಿಸೇ ಪೇಟೆ- ಅನ್ನೋವ್ನಿಂದ’.ಆದರ ಒಕ್ಕಣೆ ಹೀಗಿತ್ತು, ಲಕ್ಕವಳ್ಳಿ ಅನಂತ ಮೂರ್ತಿ ಪ್ರಹ್ಲಾದ ಅವರಿಗೆ, ಭಾವನಾ ಕೇರಾಫ್ ಗುಂಡಪ್ಪ, ಗೋವಿಂದಪ್ಪ ಬಡಾವಣೆ, ಹುಣಿಸೇ ಪೇಟೆ – ಈಕೆ ಏನು ಹೇಳುವುದೆಂದರೆ, ನೀವು … ತೇದಿ ….ರಂದು ಹಲವಾರು ಜನರ ಮುಂದೆ ಮಾಡಿಕೊಂಡ ಪವಿತ್ರ ಒಪ್ಪಂದ ಮೇರೆ, ಒಪ್ಪಿ, ಮದುವೆಯ ಸಿದ್ಧತೆಯಲ್ಲಿದ್ದು, ಇದೀಗ ನನ್ನ ಮನಸ್ಸು ನಿಮ್ಮ ….ತೇದಿಯ ಪತ್ರ ಓದಿದ ನಂತರ, ಒಡೆದು, ಛಿದ್ರವಾಗಿದೆ. ಅತ್ತು ಅತ್ತು, ಆರೋಗ್ಯ ಹದಗೆಟ್ಟಿದ್ದು, ಇದೀಗ ಆಸ್ಪತ್ರೆಗಳಲ್ಲಿ ಚಿಕೆತ್ಸೆ ಮಾಡಿಸುತ್ತಿದ್ದರೂ ಸರಿ ಹೋಗುತ್ತಿಲ್ಲ. ನನ್ನ ಹೃದಯಕ್ಕೆ ಆಗಿರುವ ಆಘಾತಕ್ಕೆ ಏನು ಮಾಡಿದರೂ ಸರಿ ಹೋಗಲಾರದು. ಇದನ್ನು ತಿಳಿಸಿ ನಿಮಗೆ ಮುಂದೆ ಏನು ಮಾಡಬೇಕೆಂಬುದನ್ನ ಶೀಘ್ರವೆ ನೀವು ತಿಳಿಸದಿದ್ದಲ್ಲಿ ನಾನು ಪ್ರಾಣ ಹರಣಕ್ಕೆ ಕೆರೆ, ಭಾವಿ ಹುಡುಕುತ್ತಾ ಸಿದ್ಧವಾಗುತ್ತಿದ್ದೇನೆ, ಹಾಗಾದಲ್ಲಿ, ಇದಕ್ಕೆ ನೀವಲ್ಲದೆ ಮತ್ತಾರೂ ಕಾರಣರಲ್ಲ, ನಿಮಗೆ ಈ ಸಂಧಿಗ್ಧ ತಪ್ಪಬೇಕಾದರೆ, ಮದುವೆಯೊಂದೇ ಉತ್ತರ, ನಮ್ಮಪ್ಪ ಮುಹೂರ್ತ ಕೂಡ ಮುಂದಿನ ಸೋಮವಾರ ಸೂರ್ಯೋದಯಾದಿ ಹತ್ತು ಗಂಟೆಗೆ ಸರಿಯಾಗಿ ಸಲ್ಲುವ ಕಟಕ ಲಗ್ನದಲ್ಲಿ ನಿಶ್ಚಯಿಸಿದ್ದಾರೆ. -ಇಂತು, ಪ್ರಾಣ ಭಿಕ್ಷೆ ಬೇಡುವ,- ಭಗ್ನ ಹೃದಯಿ, ಭಾವನಾ.’ ಅವಳ ದೀನ ಮತ್ತು ಎಚ್ಚರಿಕೆಯ ಗಂಟೆಯ ಈ ಪತ್ರ ಓದಿದ ನಂತರ ಪಲ್ಲೂಗೆ ಜಂಘಾಬಲವೇ ಉಡುಗಿಹೋಯಿತು. ಆದರೆ, ಇವನಾಗಲಿ, ಇವನ ಸ್ನೇಹಿತರೇ ಆಗಲಿ, ಈ ಸೋಮಶೇಖರ ಎಂಬವರ ವಿಳಾಸದಿಂದ ಬಂದ ಈ ಪತ್ರದ ಮಹತ್ವ ತಿಳಿಯಲೇ ಇಲ್ಲ. ಅವರ ಮನೆಗೆ ಹೋಗಿ ಅವಳಿಗೆ ಸಾಂತ್ವನ ನೀಡುವ ಶಕ್ತಿ ಅವಳ ಅತ್ತೆಯ ಹೆದರಿಕೆಯಿಂದಾಗಿ ಹೋಗಲಿಷ್ಟಪಡಲಿಲ್ಲ. ಇವರುಗಳ ಮೂರ್ಖತನದಿಂದಾಗಿ ಮತ್ತೊಂದು ಪತ್ರ ಬರೆದು ಸಮಾಧಾನದ ಮಾತುಗಳನ್ನು ಬರೆದು ಕ್ಷಮೆ ಕೋರಿದ, ಅಲ್ಲದೆ, ಅವಳ ಆಸ್ಪತ್ರೆ ಖರ್ಚನ್ನು ತನ್ನ ಶಕ್ತಿ ಮೇರೆಗೆ ಎಮ್.ಓ. ಮೂಲಕ ಕಳುಹಿಸುವೆನೆಂದು ಬರೆದು ಬಿಟ್ಟ. ಕೆಲವೇ ದಿನಗಳಲ್ಲಿ ಅದೇ ವಿಳಾಸದ ಸೋಮ ಶೇಖರ್ನಿಂದ ಲಾಯರ್ ನೋಟಿಸು ಇವನ ಬೆನ್ನಟ್ಟಿ ಬಂತು. ‘ನಿಮ್ಮ ನಿರ್ಧಾರದಿಂದಾಗಿ ಅಕೆಗೂ ಅವರ ಕುಟುಂಬಕ್ಕೂ ಆದ, ಆಗುವ ಅಪಾರ ಮನೋ ವೇದನೆ, ಪ್ರೇಮ ಭಗ್ನತೆಯಿಂದ ಹೃದಯ ಛಿದ್ರವಾಗಿದ್ದು , ಐದು ಕೋಟಿ ರುಪಾಯಿಗಳಿಗೂ ಹೆಚ್ಚು ಆರ್ಥಿಕ ನಷ್ಟ ಮತ್ತು ಅಗಣಿತ ಮಾನಸಿಕ ನಷ್ಟ ಇತ್ಯಾದಿ.” “ಸಾರು, ದಾರಿಯಲ್ಲಿ ಇವರಿಗೆದುರಾಗಿ ಎಡವಿ ಮೇಲೆ ಬಿದ್ದದ್ದು ಎಲ್ಲ ನಾಟಕೀಯ, ಹಣ ಸುಲಿಯುವ ಹೆಣ್ಣು ಅಂತೀರ?” ಬಸವರಾಜಪ್ಪ ಕೊ ಶ್ಚನಿಸಿದರು. “ಮತ್ತೆ ಕೋರ್ಟು ಹತ್ತಿದ್ರಾ ಸಾರು? ಇನ್ ದಟ್ ಕೇಸ್, ಅವ್ರು ಗ್ರೇಟ್ ಲೂಸರ್ … ” ಕ.ಓ. ಚಂದ್ರು ಉಲಿದರು. “ಹೌದಲ್ಲಾ”. ಸಿದ್ಧಾಂತಿಗಳು ಸಂಜಯ್ ಕಡೆ ನೋಡುತ್ತಾ “ಆದರೆ ಎಲ್ಲಾ ಸುಖಾಂತ್ಯವಾಯಿತು ಅಂಕಲ್ ಜಿಮ್ಮಿಯವರಿಂದಾಗಿ . “ಯಾರು ಸಾರ ಅವರು, ನಿಮ್ಮ ಸೋದರ ಮಾವನ ಚಿಕಪ್ಪನ ..” ಅವರ ಕಾಲೆಳಯಲಿಕ್ಕೆ. “ನಮ್ಮ ಸಂಜಯ್ಗೂ ಸಹಾಯಮಾಡ್ಬಹುದಲ್ವ”. “ನಮ್ ಪೈಕೀನೂ ಒಬ್ಬರಿಗೆ ಇದೇ ಸಮಸ್ಯೆ, ಅವ್ರ ವಿಳಾಸ ಕೊಟ್ಟೀರಾ?” ರೇವಣಪ್ಪ ಧ್ವನಿಗೂಡಿಸಿದರು. “ವೈ ನಾಟ್, ಬಟ್ ವೆರಿ ಸಾರಿ, ಅವ್ರು ಸತ್ತು ಮೂರ್ವರ್ಷ ಆಯ್ತು.” ಸುಲೋಚನವನ್ನ ಕೆಳಗಿಟ್ಟು ಕಣ್ಣು ವರೆಸಿಕೊಂಡರು, ಯಾರೂ ನಂಬದಿದ್ದರೂ! ಮತ್ತೆ ನಿಶ್ಶಬ್ದ, ಎಲ್ಲರ ಕುತೂಹಲ ಉತ್ತುಂಗಕ್ಕೇರಿತ್ತು. ಎಲ್ಲರ ಕಡೆ ದೃಷ್ಟಿ ಬೀರಿ, ತಮ್ಮ ಕೈಗಡಿಯಾರದತ್ತ ನೋಡಿಕೊಂಡರು. ಯಾರೂ ಏಳುವ ಸೂಚನೆ ತೋರಲಿಲ್ಲ. “ಈ ಜಿಮ್ಮಿ” ಮುಂದುವರೆಸಿದರು “ನಮ್ಮ ತಾತನ ಕಡೇ ಸೋದರನ ಭಾವಮೈದ. ಚಿಕ್ಕಂದಿನಲ್ಲೇ ಮನೆ ಬಿಟ್ಟು ಒಬ್ಬನೇ ಬರ್ಮಾಕ್ಕ ವಲಸೆ ಹೋಗಿ, ಅಲ್ಲೇ ಆರ್ಜನೆ ಮಾಡಿ, ಮತ್ತೆ ಆರ್ದ ಶತಕ ದಾಟಿದ ನಂತರ ಇಲ್ಲೇ ಬಂದಿದ್ದವ. ಸಂಸಾರವಿಲ್ಲ. ಬಹು ಚತುರ. ‘ಪಲ್ಲು, ನೀ ಯೋಚ್ನೆ ಬಿಡು, ನಾನ್ ಸಾಲ್ವ್ ಮಾಡ್ತೀನಿ’ ಅಂತ ಆಶ್ವಾಸನೆ ಕೊಟ್ಟರು. ಜಿಮ್ಮಿಯ ಸಲಹೆಯಂತೆ ಇದೀಗ ಮದುವೆಗೆ ಓಪ್ಪಿ ಕೂಡಲೇ ಕಾಗದ ಬರೆದ ನಮ್ಮಪಲ್ಲು. “ಮಾವನವರಿಗೆ ಮತ್ತು ಅತ್ತೆಯವರ್ಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ನಾನು ಏನೋ ತಪ್ಪು ಮಾಡಿ, ಇದೀಗ ನಿಮ್ಮ ಮಗಳ ಶಾಂತಿಯನ್ನ ಕದಡಲು ಕಾರಣವಾದೆ. ಅವಳೂ ಈ ಮದುವೆ ತಪ್ಪಿ, ಏನಾದರೂ ಪ್ರಮಾದ ಮಾಡಿಕೊಂಡರೆ ನಾನೇ ಕಾರಣ ವಾಗುತ್ತೇನೆ, ಆದ್ದರಿಂದ ನನ್ನ ಹಿರಿಯರ, ಆತ್ಮಿಯರ ಸಲಹೆಯಂತೆ, ಅವಳಿಗೆ ನನ್ನ ಮೇಲಿರುವ ಪ್ರೇಮ ಅಷ್ಟು ಗಾಢವಾಗಿರುವಾಗ, ನಾನು ನನ್ನ ಅದೃಷ್ಟವೆಂದೇ ಭಾವಿಸಿ, ನಿಶ್ಚಿತ ದಿನದಂದೇ ನಾವೆಲ್ಲರೂ ಅಲ್ಲಿಗೆ ಬರಲಿದ್ದೇವೆ. ಆದರೆ ಈ ಮದುವೆ ಯಾವ ಅಡಂಬರವೂ ಇರದೇ, ಸರಳವಾಗಿ, ತೀರ ಹತ್ತಿರದ ಬಂಧು, ಹಿತೈಷಿಗಳಷ್ಟೇ ಸಾಕು. ನಂತರ ಒಳ್ಳೆಯ ಸಮಯದಲ್ಲಿ ಸಮಸ್ತರನ್ನು ಕರೆಸಿ ವಿಝ್ರುಂಬಣೆಯಿಂದ ಮಾಡಲು ಇಚ್ಚಿಸುತ್ತೇನೆ. ಇದಕ್ಕೆ ನಿಮ್ಮ ಒಪ್ಪಿಗೆ ಇರಲಿ-ಇಂತು, ನಿಮ್ಮ ಪ್ರಹ್ಲಾದ.” ಹಾಗಾದರೆ ಮದುವೆಗೆ ಒಪ್ಪಿಬಿಟ್ಟರೆ ಸಾರ್? ಛೇ, ಅನ್ಯಾಯ, ಪಲ್ಲೂಗೆ ಸಕತ್ ಮೋಸ ನಿಮ್ಮ ಜಿಮ್ಮಿಯವರಿಂದಲೂ?” ಮುಖದಲ್ಲಿ ಪ್ರೇತ ಖಳೆ ಹೊತ್ತ ಬಸವರಾಜಪ್ಪನ ಪ್ರಶ್ನೆ. “ಅದು ಹ್ಯಾಗೆ ಪಲ್ಲು ಒಪ್ಪಲು ಸಾಧ್ಯ? ಇಲ್ಲೇನೋ ನಾಟಕ ಇರಬೇಕಲ್ಲವೇ? ”-ಸಂಜಯ್ ಬಾಯಿ ಬಿಟ್ಟರು ಮೌನವಾಗಿ ದ್ದಾತ. “ಬಹಳ ಸಿಂಪಲ್ ಸಂಜಯ್, ನಮ್ಮ ಸಾಹೇಬ್ರಾಗಿದ್ದರೆ- ಇವಳೂ ಇರ್ಲಿ, ಇನ್ನೊಬ್ಬಳೂ ಇರ್ಲಿ, ಮಾವಂದರು ಎರಡೆರಡು ಡೆಲಿವೆರೀ ಖರ್ಚ್ನ ನೋಡ್ಕೊಳ್ಟಾ ಇದ್ರೆ ಪ್ರತಿ ವರ್ಷಾನೂ”ಎಂದು ಸಾಹೇಬ್ರ ಕಾಲೆಳೆದರು ಎಳೆನಿಂಬಿಕಾಯಿ. ಪೀರ್ ಸಾಬರು ಅದೇ ಧಾಟಿಯಲ್ಲೇ “ಮೈ ಐಸಾ ಸರೂರ್ ಕರ್ಸಕ್ತಾ ಹೂಂ, ದೋ ನಹೀ, ತೀನ್ ಭೀ, ಅಲಗ್ ಅಲಗ್ ಬೀವಿಯೋಂಕೆ ಸಾತ್ ಸಾತ್, ಮಝೇ ಲೇ ಸಕತಾಹೂಂ. ಮೈ ಡಿಯರ್ ಕಪ್ಪಣ್ಣ ಆಪ್ ಕ್ಯಾ ಕರತೆ ಹೋ, ರಸೋಯಿ ಘರ್ಮೆ ದೋಸೆ ಹಿಟ್ಟು ರುಬ್ಬಿ ರುಬ್ಬಿಕೊಂಡ್ , ಭಜನ್ ಕರತೇ ರಹ್ತೇ ಹೋ? ಲೇಕಿನ್, ಆಪಕಿ ಬೀವಿ ಸೋಫಾ ಪರ್ ಬೈಟ್ಕರ್ ಟೀವಿ ನೋಡ್ತಾ ಫ್ಯಾನ್ ಹಾಖ್ಖಂಡೀ! ಚಂದ್ರು ಸಾರ್, ಯೇ ಠೀಕ್ ಹೈನಾ?”, “ಪೂರ್ ಚಾಪ್ ನಮ್ಮ ಏಎನ್ಕೆ, ದೋಸೆ ಹಿಟ್ಟೇನ್ಬಂತು, ಅಡ್ಗೇನು ಅವರ್ದೆ ಅಂತ ಕಾಣ್ಸತ್ತೆ ಸಿಂಗರ್ ವೈಫ್ ಅಂಡ್ ಲಟ್ಟಣ್ಗೆ ಅತ್ತೆ ಕಟ್ಕಂಡ್ರೆ. ಐಡಿಯಲ್ ಹಸ್ಬಂಡ್ ಆಗ ನಮ್ಕಪ್ಪಣ್ಣ, ಶ್ರೀ ರಾಮ್ಚಂದ್ರಾನೇ ಏನಂತೀರಾ?” ಚಂದ್ರು ಮಾತು ಸೇರಿಸಿದರು. ಪ್ರೊ. ಹಂಚಿಕಡ್ಡಿ “ವೇಳೆ ಆಗುತ್ತಿದೆ, ನಿಮ್ಮಾತು ಮುಂದ್ವರ್ಸಿ ಸಿದ್ಧಾಂತಿಗಳೇ” ಎಂದು ಎಲ್ಲರ ಬಾಯಿಗೆ ತಡೆ ಹಾಕಿದರು. ಮದುವೆಯ ಹಿಂದಿನ ಸಂಜೆ ಹೆಣ್ಣಿನ ಕಡೆಯ ಜನ ಮಂಗಲ ವಾದ್ಯ ಜೊತೆ ಎದುರು ನೋಡುತ್ತಿದ್ದಂತೆ, ಒಂದು ವ್ಯಾನಿನ ತುಂಬ ಗಂಡಿನ ಕಡೆಯವರು ಮತ್ತು ಇನ್ನೊಂದು ಅಂಬುಲೆನ್ಸ್ ಬಂದು ನಿಂತವು. ಅದರಿಂದ ಸ್ಟ್ರೆಚರಿನ ಮೂಲಕ ವರನನ್ನು ಇಳಿಸಿ ಅಲ್ಲಿ ಯಾರೂ ಮಾತಾಡದಂತೆ ಸಂಜ್ಞೆ ಮಾಡಿ ದಿಬ್ಬಣ ಚಪ್ಪರದೊಳಗೆ ಕರೆತಂದರು. ಒಳಗೆ ಹಾಸಿಗೆಯ ಮೇಲೆ ವರನನ್ನು ಮಲಗಿಸಿ ಆಂಬುಲೆನ್ಸ್ ಹೊರಟುಹೋಯಿತು. ವಿಷಯ ಬಹಳವೇ ಗಂಭೀರವಾಗಿತ್ತು. ಹುಡುಗನಿಗೆ ಜ್ಞಾನ ತಪ್ಪುವ ಖಾಯಿಲೆ ಇದೆಂದು, ಆಯುಸ್ಸಿಗೆ ಮಾರಕವಾಗಬಹುದೆಂಬ ಡಾಕ್ಟರುಗಳ ಸಲಹೆ ಇತ್ತಾಗ, ಕೂಡಲೇ ಮದುವೆಗೆ ಒಪ್ಪಿದ್ದನ್ನು ತಪ್ಪಿಸಲು, ಅವಳಿಗೆ ನಿಜ ಮರೆಮಾಚಿದ್ದನ್ನ ಹುಡುಗಿ ತಪ್ಪಾಗಿ ಗ್ರಹಿಸಿದಳು. ನಿಜ ಬಯಲು ಮಾಡಲೇಬೇಕಾಗಿ ಬಂದು ಈ ರೀತಿ ಮಾಡಿದೆವು, ಅವನಿಗೂ ಅವಳನ್ನು ಮೊದಲ ಬಾರಿ ಕಂಡಾಗ ಈ ಪರಿಸ್ಥಿತಿ ತಿಳಿದಿರಲಿಲ್ಲ. ಎಂದೆಲ್ಲ ಅವರಿಗೆ ತಿಳಿಸಿದರಂತೆ. ಡಾಕ್ಟರುಗಳೆ ಈ ಮಾತು ಹೇಳಿದ ಮೇಲೆ ಮದುವೆ ಅಲ್ಲಿಗೇ ನಿಂತು, ಪರಸ್ಪರ ಸಮಾಲೋಚನೆ ಮೇರೆಗೆ ನಮ್ಮ ಪಲ್ಲು ಸಂಕಷ್ಟದಿಂದ ಪಾರಾಗಿದ್ದ. “ಸಾರ್, ಇದು ಢೋಂಗಿ, ಪ್ರೀತಿಸುವಾಗ ಯಾವ ಖಾಯಿಲೆ ಇಲ್ಲದ್ದು, ಈಗ ಯಾರು ಒಪ್ಪುತ್ತಾರೆ? ಅಂಥ ದಡ್ಡರಾರೂ ಇಲ್ಲ?” ಎಲ್ಲರೂ ಏಕ ಕಂಠದಲ್ಲಿ ಉಲಿದರು. ಎಲ್ಲರ ಗ್ಲಾಸುಗಳನ್ನು ಸಿದ್ಧಾಂತಿಗಳೇ ವಾಸುವಿನಿಂದ ಮತ್ತೆ ತುಂಬಿಸಿ ಎಲ್ಲರತ್ತ ನೋಡುತ್ತಾ “ನೀವ್ಗಳೆಲ್ಲಾ ಹೇಳಿದ್ದು ಸರಿಯೇ, ಆದರೆ ಸ್ವಲ್ಪ ತಾಳ್ಮೆಯಿಂದ ಕೇಳಿ ಸ್ನೇಹಿತರೆ, ನಮ್ಮಜಿಮ್ಮಿ ಬರ್ಮಾದಲ್ಲಿದ್ದಾಗ ಅಲ್ಲೊಬ್ಬ ಪಂಡಿತ ಆವ ಸಾಯುವ ಮುಂಚೆ ಇವರಿಗೆ ತೋರಿಸಿದ್ದ ಒಂದು ಚಿಕಿತ್ಸೆ. ಕಾಡಿನ ಒಂದು ಜಾತಿಯ ಕ್ರಿಮಿಯೇನಾದರೂ ಅಲ್ಲಿಯವರನ್ನು ಕಡಿದರೆ, ಕಡಿಸಿಕೊಂಡವನ ಜ್ಞಾನ ತಪ್ಪುತ್ತಿತ್ತು. ಅಲ್ಲಿಯ ವೈದ್ಯರು ಆ ಕ್ರಿಮಿಗಳನ್ನೇ ಮೂಲವಾಗಿ ಮಾಡಿ ಅವುಗಳಿಂದ ಲಸಿಕೆಯನ್ನು ತಯಾರಿಸಿದ್ದರು. ಅದನ್ನು ಆರೋಗ್ಯವಾಗಿರುವವ ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಿದರೆ, ಮೂರು ದಿನ ಜ್ಞಾನ ತಪ್ಪಿ, ನಾಡಿ ಬಡಿತ ಕಮ್ಮಿಯಾದರೂ, ನಂತರ ಚೇತರಿಸಿಕೊಳ್ಳುತ್ತಿದ್ದ ಯಾವ ದುಷ್ಪರಿಣಾಮವಿಲ್ಲದೆ. ಜಿಮ್ಮಿ ಈ ಲಸಿಕೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದು, ಪಲ್ಲುವಿಗೆ ಕೊಟ್ಟು ಎಲ್ಲರ ದೃಷ್ಟಿಯಲ್ಲಿ ಕೆಟ್ಟ ಖಾಯಿಲೆಯವನಂತೆ ಪ್ರದರ್ಶಿಸಿದ್ದರು. ವಿಧಿಯಿಲ್ಲದೇ ಹೆಣ್ಣಿನ ಕಡೆಯವರು ಸ್ವಯಂ ಮದುವೆ ನಿಲ್ಲಿಸಲು ಅನುವು ಮಾಡಿದ್ದರಷ್ಟೆ.” –ಒಂದು ಕ್ಷಣ ಎಲ್ಲೆಲ್ಲೂ ಗಾಢ ಮೌನ. ಸಭೆ ಬರ್ಖಾಸ್ತಾಗಿ, ಸದ್ದಿಲ್ಲದೇ ಒಬ್ಬೊಬ್ಬರೂ, ವಿಚಿತ್ರ ಕಥಾನಕವನ್ನ ಜೀರ್ಣಿಸಿ ಕೊಳ್ಳುವುದರಲ್ಲೇ ತಲ್ಲೀನರಾಗಿ ತಮ್ಮತಮ್ಮಮನೆಯ ದಾರಿ ಹಿಡಿದರು. —————————————————————————————————————–
Comments