ಅಂತರಂಗ, ಬಹಿರಂಗ….(ಹರಟೆ)
- hrhrau
- Jul 2, 2023
- 4 min read
(ಲೇಖಕ:ಎಚ್. ಅರ್. ಹನುಮಂತ ರಾವ್, ಪೋ ೮೦೯೫೬೫೮೩೩೪,mokkam:SFO).
ನಾನೊಬ್ಫ ಕಚೇರಿಯಲ್ಲಿ ದುಡಿವ ಸಾಮಾನ್ಯರೊಳೊಗೊಬ್ಬ ಸಾಮಾನ್ಯ. ಅಂದ ಮೇಲೆ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರೊಲ್ಲೊಬ್ಬನೆಂದು ನೀವು ತಿಳಿದರೆ ಅದು ಸತ್ಯಕ್ಕೆ ಬಹು ಹತ್ತಿರವೇ. ನಾ ಸಂಸಾರಸ್ತನೂ ಕೂಡ.
ದುಡಿದು ತಿನ್ನುವ ಕಾಯಕವ ಬಿಟ್ಟರೆ, ನನಗೆ ಯಾವ ತರದ ವಿಭಿನ್ನ ಹವ್ಯಾಸವೂ ಇಲ್ಲ.ಅದುವೇ ನನ್ನ ಕೈಲಾಸವೆಂದು ಬಲವಾಗಿ ನಂಬಿರುವೆ.ಅಲ್ಲದೆ, ಸುಗಮ ಸಂಸಾರಕ್ಕೆ ಸರಳ ಜೀವನವೇ ಸೋಪಾನವೆನ್ನುವೆ ನಾನು. ಬಹುಷಃ ಈ ಬಗ್ಗೆಯೇ ಪ್ರೇಮ ಪಲ್ಲವಿಯ ಆರಾಧ್ಯ ಕವಿ ನರಸಿಂಹ ಸ್ವಾಮಿಗಳು ಬಹು ಹಿಂದೆಯೇ ಹೀಗೆ ಹಾಡಿರಬೇಕು. ‘ಹೆಂಡತಿಯೊಬ್ಬಳು ಮನೆಯಲಿ ಇದ್ದರೆ (ನನಗೆ ಪಕ್ಕದಲಿದ್ದರೂ ಸರಿಯೇ!) ನಾನೊಬ್ಬ ಸಿಪಾಯಿ, ಅದೇ ಕೋಟಿ ರೂಪಾಯಿ’, ಅಷ್ಟೇ ಸಾಕು,‘ಮಾತುಮಾತಿಗೂ ಬೆಂಕಿಯನುಗಳದೇ, ಹರಳೆಣ್ಣೆಯ, ಜೋಲು ಮುಖ ತೋರಿಸದೆ, ಬದಲಾಗಿ ಮೆಲುನಗೆಯ, ಮಧುರ,ಮಧುರ ಮಾತುಗಳನಾಡುವ ಸತಿಯಿರಲು’ ಸ್ವರ್ಗಕ್ಕೆ ಕಿಚ್ಚು ಹಚ್ಚೆಂಬ’ ಸರ್ವಜ್ಞನ ಮಾತನ್ನ ಸಪೂರ್ಣ ಅನುಮೋದಿಸುವವನು ಕೂಡ ನಾ! ಅವಳೇ ಎನಗೆ ಎಡ,ಬಲ,ಎಡ, ಎರಡೂ ಕೂಡ.ಅಂದಮೇಲೆ ನಮ್ಮ ಸಂಸಾರ ತುಂಬಿದ ಕೂಡ ತಾನೇ?
ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದ ಹಾಗೇ, ಅವರವರ ಮೊಬೈಲ್ ಪೋನಲ್ಲೊ, ಲ್ಯಾಪ್ಟ್ಯಾಪಿನಲ್ಲೋ ಅಥವಾ ಹೊಂ ವರ್ಕಲ್ಲೋ ತಲ್ಲೀನರಾಗಿ, ಸುತ್ತಮುತ್ತಲನ್ನೇ ಮರೆಯುವ ವಯಸ್ಸದಲ್ಲವೇ? ನಮ್ಮಂತಹ ಸಂಸಾರಸ್ತರೆಲ್ಲರ ಅನುಭವವು ಕೂಡ ಅದೇ ಅಲ್ಲವೋ? ಸ್ನೇಹಿತರ ಜೊತೆಗಿದ್ದರಂತೂ, ಹರಟೆಯಲ್ಲಿ ಮಗ್ನರಾಗಿ, ಪ್ರಪಂಚವನ್ನೇ ಮರೆತುಬಿಡುವರು. ವೇಳೆಯ ಕಡೆಗೆ ಅವರ ಗಮನವೇ ಹೋಗದು! ನಮ್ಮ ಬಾಲ್ಯದ ಪುನರಾವರ್ತನವಷ್ಟೇ.
ಸಂಜೆಯಾಗುತ್ತಿದ್ದಂತೆ, ಕಚೇರಿಯಲ್ಲಿ ದುಡಿದು, ಗೋಧೂಳಿ ಕಾಲಕ್ಕೆ ಮನೆಯ ಸೇರುವ ಹೊತ್ತಿಗೆ ಹೆಂಡತಿ ಯಾದವಳು ಗೃಹಕೃತ್ಯಗಳ ಮುಗಿಸಿ, ಸೆರಗಿಗೆ ಕೈನ ಒರೆಸುತ್ತಾ, ಮಂದಹಾಸದ ನಗೆ ಬೀರುತ್ತಾ, ಕಾಫಿಯನ್ನ ಕೊಟ್ಟು ಪಕ್ಕದಲಿ ನಿಂದರೆ, ಮತ್ತಿನ್ನೇನು ತಾನೇ ಬಯಸಿಯಾನು ಪತಿಯಾದವನು?
ತನ್ನ ಇಡೀ ಜೀವಮಾನದಲ್ಲಿ ಗಳಿಸಿದ ಆಸ್ತಿಯೋ ಎಂಬಂತೆ, ಟೀವಿಯಲ್ಲಿ ಒಂದಾದನಂತರ ಒಂದು ಪುಂಖಾನುಪುಂಖವಾಗಿ ಹೊರ ಬೀಳುವ ಸಿರಿಯಲ್ಗಳಲ್ಲೇ ಆಕೆ ಮುಳುಗಿದ್ದರೇ, ಅದೇನೂ ಅಸಹಜವಲ್ಲ! ನನಗೆ ಬೇಸರವೂ ಇಲ್ಲ. ಮಧ್ಯಮ ವರ್ಗದವರಲ್ಲಿ ಬೇರೇನ ಮನರಂಜನೆ ತಾನೇ ಸುಲಭಸಾಧ್ಯ? ಆದರೆ, ಈ ಟೀವಿ ಸಿರಿಯಲ್ಗಗಳ ಬಗ್ಗೆ ಮಾತಾಡುವಾಗ, ನನಗೆ ಕೂಡಲೇ ನೆನಪಿಗೆ ಬರುವುದು ಕಂಬಿಯಮೇಲೆ ಓಡೋಡುವ ದಿನನಿತ್ಯದ ರೈಲು ಬಂಡಿಗಳ ಸಂಚಾರ..ಪ್ರತಿಯೊಂದು ರೈಲು ಮಾರ್ಗಕ್ಕೂ ಅದಿ,ಅಂತ್ಯಗಳಿರುವುದು ಪೂರ್ವ ನಿಶ್ಚಿತವಲ್ಲವೋ? ಆದರೆ, ಈ ಸೀರಿಯಲ್ಗಳು ಅದು ಎಂದು, ಹೇಗೆ ಎಲ್ಲೇ ಪ್ರಾರಂಭವಾದರೂ, ಬಹುಶ:,ಇಡೀ ಜಗತ್ತಿನ ಸೃಷ್ಟಿಕರ್ತ ಬ್ರಹ್ಮನಿಗೂ ಅವು ಕೂನೆಗೂಳ್ಳುವ ಅಂತ್ಯ ಕಾಣಸಿಗದೇನೋ ಎಂಬಂತೆ ಮುಂದುವರಿಸುತ್ತಲೇ ಹೋಗುವುದೆಂದು ನಮ್ಮ ಹಲವು ಸ್ನೇಹಿತರ ಅಭಿಪ್ರಾಯ! ನಂಬಿದರೆ ನಂಬಿ,ಇಲ್ಲವಾದರೂ ಸರಿ.
‘ಮೂಲತೋ ಬ್ರಹ್ಮರೂಪಸ್ಯ ಜನಾ: ಪ್ರಾರಂಭಯಿತ್ವ, ಮಧ್ಯತೋ ವಿಷ್ಣಸ್ಯ ವಿಶ್ವರೂಪಂ ದರ್ಶಯಿತ್ತ್ವಾ (ಪ್ರಸಾರಯಿತ್ವಾ,) ,ಶಾ೦ತ ಸ್ವರೂಪಾಯ ಅಂತ್ಯಂ (ರುದ್ರಸ್ಯ) ನಪಶ್ಯತಿ, ನ ಪಶ್ಯತಿ…. ಅನಂತ ಸ್ವರೂಪಾಯ ತೇ ಸೀರಿಯಲ್ ಸಿನೇಮಾಯಾ: ನಮೋನಮ:, ಭಜ ಗೋವಿಂದಮ್,ಭಜ!
ಸಂಜೆಗೆ ಮನೆಗೆ ಬಂದು, ಪಾದ್ಯ, ಮುಖಮಾರ್ಜನ ಮುಗಿಸಿ,ನಂತರ ಅರಾಮಾಸನದಲ್ಲಿ ಕೂರುತ್ತ ,ಹೆಂಡತಿ ತಂದು ಕೊಡುವ ಕಾಫಿಯನ್ನ ಹೀರುತ್ತಾ, ನೆಮ್ಮದಿಯಿಂದ ಅದರ ಸವಿಯನನುಭವಿಸುವುದು ಬಹುಕೃತ ಪುಣ್ಯವೇ ಸರಿ! ಗೃಹಕೃತ್ಯ ವಿಶೇಷವೇನೂವಿಲ್ಲದಿದ್ದಾಗ, ಅವಳ ಗಮನ ಟೀವಿ ಸೀರಿಯಲ್ಕಡೆಯೋ ತಪ್ಪಿದರೆ ಫೋನಲ್ಲಿ ಬಂಧು,ಬಳಗ, ಇಲ್ಲವೆ ಸಖಿಯರ ಜೂತೆ ಕುಶಲೋಪರಿ, ಕಾಡ ಹರಟೆ. ನನ್ನ ಗಮನ ಮೇಜಿನ ಮೇಲಿನ ಟಪಾಲು, ಮತ್ತಿತರ ಕಡೆಗೆ. ಇಲ್ಲವೇ ಮಕ್ಕಳ, ಆಟಪಾಠ, ಶಾಲಾ, ಕಾಲೇಜುಗಳ ವಿಚಾರಗಳಡೆಗೆ ಹೋಗುವುದು ಮಾಮೂಲು. ಯಾರಿಗೂ ಟೀವಿ ಬೇಡವೆನಿಸಿದ್ದಾಗ, ಇಲ್ಲವೇ ನನಗಷ್ಟೇ ತುರ್ತುಸುದ್ಧಿ,ವಿಶೇಷ ಮನರಂಜನೆ, ಕ್ರಿಕೆಟ್ ಮ್ಯಾಚುಗಳಂತವು ಬೇಕಿದ್ದಾಗ ಅದನ್ನತಿರುಗಿಸುವ ಸರದಿ ನನ್ನದು.
ಈ ಸುದ್ಧಿ ಚಾನೆಲ್ಗಳೆಂದರೆ, ಸರ್ವದಾ ಕೇಳಿಬರುವುದು ಹಲವಾರು ರಾಜಕಾರಣಿಗಳ ಅಟ್ಟಹಾಸದ ಮಾತೋ, ಪರಸ್ಪರ ಮಾತಿನಲ್ಲಿ ಕೆಸರು ಎರಚಾಡುವದೋ, ಇಲ್ಲವೇ ಕ್ಷುಲ್ಲಕ ಕಾರಣಗಳಿಗೂ ಕೊಲೆ, ಮಾನ ಭಂಗ, ಅತ್ಯಾಚಾರ, ಎಟಿಎಂ. ಲೂಟಿ, –ಇಂತಹವೇ ದಿನನಿತ್ಯದ ವಾರ್ತೆಗಳು ಸರ್ವೇ ಸಾಮಾನ್ಯವೂ,ಬೇಸರ, ಜಿಗುಪ್ಸೆ ತರಿಸುವಂತಹವೂ ಕೂಡ. ನಮ್ಮ ದೇಶದ ನ್ಯಾಯ,ನೀತಿ,ಧರ್ಮದ ಬಗ್ಗೆ ಪುಟಗಟ್ಟಲೆ ಕೂರೆಯುವ ಸಾಧು,ಸನ್ಯಾಸಿ ಮಠಾಧೀಶರುಗಳನೇಕರು, ಮುತ್ಸುದ್ದಿಗಳು, ಬುದ್ಧಿಜೀವಿಗಳು ರಾಜಕೀಯ ಅಂತರಾಳಗಿಳಿದು ಕೂಡ, ಇಂತಹ ಕೂಳಕು ಸುದ್ಧಿಗಳೇ ದಿನನಿತ್ಯದ ವಾರ್ತೆಗಳಾದರೆ, ಸಮಾಜದ ಆರೋಗ್ಯ ಯಾವ ಮಟ್ಟಕ್ಕಿಳಿದಿದೆ ಎನ್ನುವುದನ್ನ ಯೋಚಿಸಬೇಕಾದುದು ಎಲ್ಲರ ಮೊದಲ ಕರ್ತವ್ಯ ತಾನೇ? ,
ಮನರಂಜನೆಯ ಹಲವಾರು ಚಾನೆಲ್ಗಳ ಒಂದೆರಡು ಕಾರ್ಯಕ್ರಮಗಳು ಬಿಟ್ಟರೆ, ನನ್ನ ಅಭಿಪ್ರಾಯದಲ್ಲಿ ಹೇಳಿಕೊಳ್ಳುವಂತಹದು ಏನೂ ಕಾಣೆ. ವರ್ಷ ಗಟ್ಟಲೆ ಓಡುವ, ಹಿಂದಿಲ್ಲದ, ಮುಂದೇನೆಂದು ವಿಧಿಯೂ ಅರಿಯದ, ಜಟಕಾ ಬಂಡಿಯ ಸ್ಪೀಡಿಗಿಂತಲೂ ನಿಧಾನವಾಗಿ ಓಡುವ(ಚಲಿಸುವ), ‘ಟಿಯಾರ್ಪಿ’.ಎಂಬ ಆಧಾರ ಸ್ಥಂಭದ ಮೇಲೆ ನಿಂತ ಈ ಟಿವಿ ಸೀರಿಯಲ್ಗಳು ಬಹುಷಃ, ಹಿಂದೆಂದೋ ವಿಶ್ವಾಮಿತ್ರನಂತಹ ಯಾವುದೋ ಋಷಿಯ ಶಾಪದ ಫಲವಿರಬೇಕೆನ್ನುವುದು ನನ್ನ ಹಲವು ಮಿತ್ರರ ಕುಹಕಿಡಿಗಳು ಕೂಡ! ಒಲ್ಲದ ಗಂಡಿನಂತೆ, ಅದನಾರಿಸಿ, ಪುಸ್ತಕವೊಂದನ್ನಕೈ ಯಲ್ಲಿ ಹಿಡಿದೆ.
ಹಾಗೆಂದ ಮಾತ್ರಕ್ಕೆ ನಾನೊಬ್ಬ ‘ಪುಸ್ತಕ ಪ್ರೇಮಿ’ ಎಂದೇನೂ ನನ್ನ ಬೆನ್ನು ತಟ್ಟುಕೊಳ್ಳುವವನಲ್ಲ. ನೀವ್ಯಾರೂ ಹಾಗೆ ತಿಳಿಯುವುದೂ ಸರಿಯಲ್ಲ!" .ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ, ಪದವಿಟ್ಟಳುಪದೊಂದಗ್ಗಳಿಕೆ"ಯ ಮಹಾ ಕವಿ ಕುಮಾರವ್ಯಾಸನ ನಾಡಿನವನಾಗಿಯೂ, ನನ್ನಂತಹವರ ದೃಷ್ಟಿಯಲ್ಲಿ ಅದು ಅನಿವಾರ್ಯದ ಆದರೆ ಸಮಯೋಪಕಾರಿ ಸರಕು. ಪುಸ್ತಕಗಳು ಓದಲು ಬೇಕಿರಲಿ,ಬೇಡದಿರಲಿ, ಸಹಿಸಲೇಬೇಕಾದ ದೂರದ ನೆಂಟನಂತೆ ಅವು ಹಲವಾರು ಮಂದಿಗೆ! ಜೀವು- ನನ್ನ ಆಪ್ತ ಸಹಾಯಕ-ನಿಗೆ ಮಾತ್ರ ಯಾವುದೇ ಪುಸ್ತಕ ಸಿಕ್ಕರೂ, ಅದನ್ನ ಕೆಲವೇ ಗಂಟೆಗಳಲ್ಲಿ ಓದಿ, ಅದರಲ್ಲಿನ ಹೂರಣ ಜೀರ್ಣಿಸಿಕೊಳ್ಳುವಾತ! ಓದಿನಲ್ಲಿ ಪ್ರಚಂಡ ! ಎಲ್ಲರು ಹಾಗಿರುವುದು ಸಾಧ್ಯವಾಗಿದ್ದರೇ, ವಿಶ್ವವೇ ಪ್ರಾಯಷ: ಅದಲುಬದಲಾಗುತ್ತಿತ್ತು! ಮೂಬೈಲುಗಳಿಗೆ ಕೈ ಅಂಗೈಗಲದಷ್ಟೇ ದೂರ ವಾ ಹತ್ತಿರ!. ಅಂದರೆ, ಈ ದಶಕದ ಮಾನವ ಏನನ್ನ ಬಿಟ್ಟರೂ,ಅವನ್ನ ಬಿಟ್ಟಿರಿಲೇ ಇರಲಾರ! ಇದರ ಜೊತೆಗೆ ಕನಕದಾಸರ 'ಮಾನವಾ,ನೀ ಮಾಂಸ,ಮೂಳೆಯ ತಡಿಕೆ'ಯನ್ನ ಬೇಕಿದ್ದರೆ ಸೇರಿಸಿಕೂಳ್ಳುವುದಾದರೆ ನನ್ನ ಅಭ್ಯಂತರವಿಲ್ಲ!
ಪುಸ್ತಕಗಳ ಒಳ್ಳೆಯ ಗುಣವೆಂದರೆ ಜ್ಞಾನ ವೃದ್ಧಿ. ಅಷ್ಟೇ ಅಲ್ಲದೆ ನಾನಾ ರೀತಿಯಲ್ಲಿ, ನಾನಾ ಸಂಧರ್ಭಗಳಲ್ಲಿ ಬಹೂಪಯೋಗಿಯಾಗಿ ಸಮರ್ಥ ಸೇವೆ ಸಲ್ಲಿಸುತ್ತವೆ! ಒಂದರ್ಥದಲ್ಲಿ ಹಸ್ತಮಿತ್ರ! ಇನ್ನೊಂದು ರೀತಿಯಲ್ಲಿ ಆಪ್ತ ಮಿತ್ರ ಕೂಡ ಪುಸ್ತಕ ಪ್ರೇಮಿಗಳಿಗೆ! ಯಾರಾದರೂ ‘ನಾನು ಪುಸ್ತಕ ಮಿತ್ರನೆಂದು ಬೆನ್ನು ತಟ್ಟಿಕೊಂಡರೆ ಬಹುಶ: ಅದರ ಅರ್ಥ ನೀವಂದುಕೂಂಡಂತಲ್ಲದೆ, ಯಾವ ರೂಪದಲ್ಲಿಯಾದರೂ ಇರಬಹುದು!
ದಿನವೆಲ್ಲ ದುಡಿದುಬಂದು ಮನೆಗೆ ಸೇರುವ ವ್ಯಕ್ತಿ ಆಯಾಸದಿಂದಲಾದರೂ ರಾತ್ರಿ ಸಲೀಸಾಗಿ ನಿದ್ರೆಗೆ ಜಾರುತ್ತಾನೆ. ಬೇರಿನ್ನ್ಯಾವ ಗೋಜಲು, ಹಣದ ಸಮಸ್ಯೆ, ಇಲ್ಲವೇ ಮತ್ತೇನಾ ಕಿರಿಕು ತೊಂದರೆಗಳಲ್ಲಿ ಸಿಕ್ಕಿದ್ದರೆ, ಆ ಯೋಚನೆಗಳ ಸುಳಿಯಿಂದ ಹೊರಕ್ಕೆ ಬಂದು ನಿದ್ದೆಯನ್ನಾಶ್ರಯಿಸುವುದು(ಕವಿ ಸಮಯದಲ್ಲಿ'-ನಿದ್ರಾಲಿಂಗನಕ್ಕೆ'-) ಸುಲಭಸಾಧ್ಯವಲ್ಲವೆಂಬುದು ಎಲ್ಲರ ಅನುಭವ. ಅಂತಹ ಪರಿಸ್ಥಿತಿಯಲ್ಲಿ ಪುಸ್ತಕಗಳು ಹತ್ತಿರವಿದ್ದರೆ, ನಿದ್ದೆ ತರಸುವ ಯಾವುದೋ ಅಯಸ್ಕಾಂತ ಶಕ್ತಿ ಪುಸ್ತಕಗಳಿಗಿರುವ ಕಾರಣ ಪುಸ್ತಕಕ್ಕೆ ಆಪ್ತ ಮಿತ್ರರಾಗುತ್ತೇವೆ!
ದಿಂಬಿನ ಪಕ್ಕದಲ್ಲೇ ಇರುವ ಪುಸ್ತಕದ ಮೇಲೇ ಕಣ್ಣು ಹಾಯಿಸಿ, ಕೈಲಿ ಹಿಡಿದರೆ ಅದನ ಹಿಡಿದು, ರಕ್ಷಾ ಹೊದಿಕೆ ಕಳಚಿ, ಮುನ್ನುಡಿ, ಗ್ರಂಥ ಕರ್ತನ ಪರಿಚಯ ಓದುತ್ತಿದ್ದಂತೆ, ಕಣ್ಣಿನ ರೆಪ್ಪೆಗಳು ಸ್ವಲ್ಪಸ್ವಲ್ಪವೇ ಮುರುಟಿಗೊಳ್ಳುತ್ತವೆ. ಮುಂದಿನ ಹಾಳೆಗೆ ತಿರುಗಿಸಿ, ಮೊದಲ ಪುಟದಲ್ಲಿನ ಪ್ರಸ್ತಾವನೆಗೆ ಬಂದು ನಿಂತಾಗ, ಕಣ್ಣುಗಳೆರಡೂ ಪೂರ್ತಾ ಮುಚ್ಚುವಂತಾಗಿ, ಓದು ಮಸುಮಸುಕಾಗುವುದು ಹೆಚ್ಚಿನವರ ಅನುಭವ. ಹಾಗು ಮೊದಲೆರಡೂ ಪುಟಗಳನ್ನ ದಾಟಿ, ಸಂಪಾದಕ ಇಲ್ಲವೇ ಕೃತಿಕಾರನ ಮುಂದಿನ ಪುಟಕ್ಕೆ ಬಂದಾಗ, ಪುಸ್ತಕ ಸ್ವಲ್ಪಸ್ವಲ್ಪವೇ ಕೈಯಿಂದ ಜಾರುತ್ತ ಹೋಗುವುದು. ಇದೀಗ ಕಣ್ಣೆವೆಗಳು ಮುಚ್ಚುತ್ತಿದ್ದು ಕಣ್ಣೇ ಮಂಜಾಗಿ, ಅಕ್ಷರಗಳು ಮರೆಯಾಗಿ, ಪುಸ್ತಕ ಜಾರಿ, ದಿಂಬಿನಾಶ್ರಯಕ್ಕೆ ಸೇರುವುದು,ಅಲ್ಲಿಗೆ ಪೂರಾ ನಿದ್ದೆಗೆ ಆಹ್ವಾನ! ಬೆಳಗೆದ್ದಾಗ ಪುಸ್ತಕ ಗೂಡಲ್ಲಿ ಹಾಯಾಗಿ ವಿಶ್ರಮಿಸುತ್ತದೆ.ಎಷ್ಟೇ ಆದರೂ ಪುಸ್ತಕ ಸರಸ್ವತಿಯೆಂದು ಬಾಲ್ಯದಲ್ಲೇ ಹೇಳಿಕೂಟ್ಟಿರುವರಲ್ಲಾ?
ನಮಗೆ ಬೇಕಾದವರೋ, ಇಲ್ಲವೇ ಬೇಡಾದವರೊ ಮಾತಿನಲ್ಲಿ ಕೊರೆತಕ್ಕೆ ಶುರುಮಾಡುವಂಥವರಾದರೆ, ಅದನ ತಾಳಲಾಗದ ಪರಿಸ್ಥಿತಿಯಲ್ಲಿ, ಕೈಯಲ್ಲಿನ ಪುಸ್ತಕ ಮುಖಕ್ಕೆ ಅಡ್ಡವಾಗಿ ಹಿಡಿದು ಮತ್ತಿನ್ನೇನಲ್ಲೊ ಗಮನ ಹರಿಸಬಹುದು ಕೂಡ. ಹೆಂಡತಿಯಾದವಳು ರೌದ್ರಾವಾಸ್ತೆಯ,ಹಿಡಂಬಿ ಯಂತಾದರೆ,ಆಕೆಯ ಕೈನಲ್ಲಿರುವ ಬಿರಿಸುಗಳಿಗೆ ಗುರಿಯಾಗುವದನ್ನ ಪುಸ್ತಕ ಅಡ್ಡ ಹಿಡಿದು ತಪ್ಪಿಸಕೊಳ್ಳಬಹುದು ಕೂಡ ಇದೇ ರೀತಿ(ಇದು ಎಲ್ಲ ಗಂಡಹೆಂಡತಿಯರಿಗೂ ಅನ್ವಯವಾಗುವುದೆಂದಲ್ಲ!). ಇರಲೀ, ಸುಖ ಸಂಸಾರವೆಂದರೆ ಈ ಸಮಸ್ಯೆಗಳು ಉದ್ಭವವಾಗುವದೇ ಇಲ್ಲವೆಂಬುದು ನನ್ನ ಮಿತ್ರರುಗಳ ವಾದ.ಅದು ಸರಿಯೇ.
ಇದರೊಂದಿಗೆ, ಆಕೆ ತೌರಿಗೆ ಹೋದಾಗಲಷ್ಟೇ ಗಂಡಂದಿರ ಪರೀಕ್ಷೆ ಅಚಾನಕ್ಕಾಗಿ ನಡೆದುಹೋಗುವುದು! ಅಡಿಗೆಮನೆಯಲ್ಲಿ ನಾ ನಿಸ್ಸೀಮನೆಂದು ಎಲ್ಲರೆದುರಿಗೆ ಬೆನ್ನು ತಟ್ಟಿಕೊಂಡವರಿಗೆ ಅರ್ಥಾತ್ ಅಗ್ನಿಪರೀಕ್ಷೆ! ಗ್ಯಾಸ ಸಿಲಿಂಡರನ ಹೇಗೇ ತಿರುಗಿಸಿದರೂ ಜ್ವಾಲೆ ಹೊರಬರುವುದೇ ಇಲ್ಲ.ಕೊನೆಗೆ ರೇಗುವಂತಾಗಿ, ನೂರೆಂಟು ಶಾಪ ಹಾಕಿ, ರೋಷದಿಂದ ಆರಿಸಲು ಹಿಂದಕ್ಕೆ ತಿರುಗಿಸಿದಾಗ ಭಗ್ಗನೆ ಜ್ವಾಲೆ ನಿಮ್ಮ ಮುಖಕ್ಕಗಲಕ್ಕೂ ಹರಡಿ, ಉದ್ದನೇ ನಾಲಗೆ ಚಾಚಿ ಅಬ್ಬರಿಸುತ್ತದೆ! ಹೇಗೋ, ನಂತರ, ಸಪ್ಲಿಮೆಂಟರಿ ಪರಿಕ್ಷೆಯಲ್ಲಿ ಪಾಸಾದವನಂತೆ, ಮುಖಭಂಗವಾಗಿಯೂ ಒಲೆಯನ್ನ ಕೂನೆಗೂ ಹತ್ತಿಸಿದ್ದೇ ಆದರೆ, ತರಕಾರಿಯನ್ನ ಹಚ್ಚಿ, ಅಕ್ಕಿ,ಬೇಳೆಯನ್ನ ನೀರಲ್ಲಿ ತೊಳೆದು, ಕುಕರಿನಲ್ಲಿ ಜೋಡಿಸಿ ಒಲೆಯ ಮೇಲಿಟ್ಟು, ಅದುವೆ ಕೂಗುವ ತನಕ ಆಚೆ ಬದಿಯ ಆರಾಮ ಕುರ್ಚಿಯಲ್ಲಿ ಕೂತು, ಆ ದಿನದ ಪತ್ರಿಕೆ ಪುಟಗಳ ತಿರುಗಿಸಲು ಕೂಡುತ್ತೀರ. ಓದಲು ತೊಡಗಿದಮೇಲೆ ನಿಮ್ಮ ಗಮನ ಸುದ್ಧಿಯೇತರ ವಿಚಾರಗಳಲ್ಲಿ ಗಮನ ಹರಿಯುತ್ತಿದ್ದಂತೆ, ಕುಕರನ್ನ ಮರೆತಿರುತ್ತೀರ. ಸ್ವಲ್ಪವೇಳೆ ಸಂದ ನಂತರ ನಿಮ್ಮ ಸುಪ್ತ ಮನಸ್ಸೋ, ಮತ್ತಿನ್ನೇನೋ ದಿಢೀರನೆ ಕುರ್ಚಿಯಿಂದೆಬ್ಬಿಸಿ, ಕುಕರಿನ ಬಳಿ ಹೋಗುತ್ತೀರ. ಎಷ್ಟು ಹೊತ್ತಾದರೂ ಕೂಗಿಲಿಲ್ಲವೇಕೆಂಬ ಜಿಜ್ಞಾಸೆಯಿಂದಾಗಿ ಪರೀಕ್ಷಿಸದಾಗ, ನಿಮ್ಮ ತಪ್ಪು ಅರಿವಾಗುತ್ತದೆ,ಕುಕರಿನ ಮೇಲಿನ ವಾಲ್ವನ್ನು ತಗಲಿಸಲು ಮರೆತೇಬಿಟ್ಟಿದ್ದೀರಿ! ಹೆಂಡತಿ ಪಕ್ಕದಲ್ಲಿದಿರುವುದನ್ನ ನೆನಸಿಕೊಂಡು ಇನ್ನಷ್ಟು ಶಾಪಗಳ ಹಾಕಿ, ಏನು ಮಾಡುತ್ತೀರ ?ಆದರೆ ಸರಳ ಸಂಸಾರದಲ್ಲಿ ಇಂತಹ ಪ್ರಮೇಯಗಳು ವಿರಳವೇ ಆದರೆ ಏನೂ ಯೋಚಿಸಬೇಕಿಲ್ಲವು! ಕಾರಣ,ಆಕೆ ಮತ್ತೆ ಹೆರಿಗೆಗೆ ಹೋಗಿದ್ದರೆ ಏನುಮಾಡುವಂತಿದ್ದೀರಿ?
ರಾಜಕುಮಾರ ಶುದ್ಧೋಧನನಿಗೆ ಹಿರಿಯರು ಬಹಳವೇ ಸರಳ, ಸುಂದರ ಸಂಸಾರವನ್ನ ತಗುಲಿಸಿದ್ದರೂ, ಜಗದಲ್ಲಿ ನಡೆಯುವ ತೀರ ಸಾಮಾನ್ಯ ವಿಷಯಗಳ ಬಗ್ಗೆ ಅವನು ತಲೆ ಕೆಡಿಸಿಕೊಂಡು ಕ್ಷುಲ್ಲಕ ಕಾರಣಕ್ಕಾಗಿ ಕೂಸಿನ ಜೊತೆಗೆ ಯಶೋಧೆಯನ್ನ ಬಿಟ್ಟುಹೋದನೆಂದರೆ ಅವನಿಗೆ ಎಂತಹ ಸುಲಭ, ಸರಳ ಜೀವನವೂ ಬೇಕಿಲ್ಲವೆಂದೇ ಅನ್ನೋಣ. ಆದರೆ ನಾವು ಸಾಮಾನ್ಯ ಜನತೆ ಅವನ ಮೇಲ್ಪಂಕ್ತಿಯನ್ನ ಅನುಸರಿಸುವುದು ಅಷ್ಟು ಸುಲಭವು ಅಲ್ಲ, ಸರಳವೂ ಅಲ್ಲ! ಆದರೂ, ಒಂದು ಸಂಶಯ ನನ್ನ ಕಾಡದಿರದು. ನಮ್ಮ ಟೀವಿ ಸೀರಿಯಲ್ಗಳಲ್ಲಿ ತೋರಿಸುವ ಝಟಾಪಟಿ ಸಂಸಾರಗಳನ್ನ ನೋಡಿದಮೇಲೆ, ಮದುವೆಯ ಮಂಟಪದ ಯೋಚನೆ ಬಂದಾಗ, ‘ಇದಮಿಥ್ಥಂ”ಎಂಬ ನಿರ್ಧಾರಕ್ಕೆ ಬಂದು, ಮದುವೆಯೇ ಬೇಡವೆನ್ನಬಹುದಾದ ಬ್ರಹ್ಮಚಾರಿಗಳೂ ಉಂಟಾದರೆ ಹೆಣ್ಣು ಹೂತ್ತವರ ಗತೀ?! ವಿಶ್ವಾಮಿತ್ರರು 'ಕ್ಷಾತ್ರ ಬಲಂ ಧಿಕ್ʼ ಎಂದಂತೆ ಸಂಸಾರ ಸುಖಂ ನ ಹಿ ಸಾರಂ,ಧಿಕ್ಸಂಸಾರಂ, ಬ್ರಹ್ಮಚರ್ಯಂ, ಬಲಂ, ವರಂʼ,ಎಂದರೇ ಹೆಂಗೆಳೆಯರ ಕಂಕಣ ಬಲ ನಿರ್ಬಲವಷ್ಟೇ.
ಮತ್ತೊಂದು ದಿಕ್ಕಿನಿಂದ ಯೋಚಿಸ ಹೊರಟಾಗ, ನಮ್ಮಇತಿಹಾಸದಲ್ಲೇ ಬಂದು ಹೋದ ಸಾಕಷ್ಟು ಗಟ್ಟಿಯಾದ ಕ್ಷಾತ್ರ ಜೀವಿಗಳು ಕೂಡ ಸರಳ ಜೀವನವೆಂದು ನಂಬಿ ಸಂಸಾರಸ್ತರಾಗಿದ್ದವರು ಅದರಿಂದಲೇ ನಾನಾ ಕಷ್ಟ, ನಷ್ಟಗಳಿಗೆ , ಅವರ ಕುಟುಂಬಗಳನ್ನೂ ಕಷ್ಟಗಳಲ್ಲಿ ಸಿಕ್ಕಿಸಿದ್ದನ್ನ ತಿಳಿದಿದ್ದೇವೆ. ನಳ, ಧರ್ಮರಾಯ,ದಶರಥ, ರಾಮ, ಧೃತರಾಷ್ಟ್ರ, ಹೀಗೆ ಹಲವಾರು ಧೀರೋದಾತ್ತರು ಕೂಡ ಅವರೂ, ಅವರ ಸಂಸಾರಗಳೂ ಅನಿರ್ವಚನೀಯ ಕಷ್ಟನಷ್ಟಗಳಿಗೆ ಗುರಿಯಾದರಲ್ಲವೋ? ಆದರೆ, ಇದು ಟೊಳ್ಳು ಅಭಿಪ್ರಾಯವೆಂಬುದು ನನ್ನ ಅನಿಸಿಕೆ. ಪ್ರಜಾ ಪ್ರಭುತ್ವದ ಅಂಕೆಸಂಖ್ಯೆಗಳ ಆಧಾರದಲ್ಲಿ ಇದು ಬಹುವೇ ಗೌಣ. ನಿಕೃಷ್ಟವೆಂದರೂ ಸರಿಯೆ! ಸರಳ ಸಂಸಾರಕ್ಕೆ ಬೇಕಿರುವುದು ಸರಳ ಸಾಂಘಿಕ ಜೀವನ ಮತ್ತು ಜನ ಮೆಚ್ಚುವ ಜನಪ್ರೇಮಿ ಸರ್ಕಾರ. —------------------------------------------------------------------------------------------
—- ಸಂಪಾದಕರು, ಅಪರಂಜಿ: ನಿಮ್ಮ ಮೇ ಸಂಚಿಕೆಯಲ್ಲಿ ಪ್ರಕಟಿಸಿದಂತೆ, “ಅಪರಂಜಿ”ಯ ಅಕ್ಟೊಬರ್ ಸಂಚಿಕೆಗೆಗಾಗಿ ಈ ಲೇಖನ ಕಳುಹಿಸಿರುತ್ತೇನೆ. ಓಪ್ಪಿಗೆಯಾದರೆ ಪ್ರಕಟಿಸಲು ಕೋರಿ—
–೦-ಎಚ್. ಅರ್ .ಹನುಮಂತ ರಾವ್ , ಪೋ: ೮೦೯೫೬೫೮೩೩೪.--------------------------------------------
. .




Comments