CAUVERY WATER ISSUE
- haparna
- Sep 12, 2016
- 2 min read
READ THIS ARTICLE IN “VISHA VAANI” KANNADA DAILY DT. 12TH SEPT. 2016 BY SMT. SAHANA VIJAYAKUMAR. UNDER THE TITLE “ಪರಿಹಾರವಿದ್ದರೂ ಕರುನಾಡೇಕೆ ಉಕ್ಕುತ್ತಿದೆ ಕಾವೇರಿ? 12 Sep 2016”. FOR WANT OF SPACE,1ST HALF OF THE ARTICLE IS NOT REPRODUCED HERE. YOU CAN FORM YOUR COCLUSION:- ………..ಈಗ ಹೊಡೆದಾಡಿ ತಡವಾಗಿಯಾದರೂ ನೀರು ಬಿಡಿಸಿಕೊಳ್ಳುತ್ತಿರುವ ತಮಿಳುನಾಡು ಅದನ್ನು ತನ್ನ ಬೆಳೆಗಳ ಮೇಲೆ ಹಾಯಿಸುವ ಹಾಗಿಲ್ಲ! ಪ್ರತಿಷ್ಠೆಗೆ ಕಟ್ಟುಬಿದ್ದು ಬಿಡಿಸಿಕೊಳ್ಳುತ್ತಿರುವ ನೀರು ಮೆಟ್ಟೂರು ಅಣೆಕಟ್ಟಿನಲ್ಲಿ ಭದ್ರವಾಗಿ ಕೂತಿರುತ್ತದೆ. ಕುಡಿಯುವ ನೀರಿಗೆ ಕೆಆರ್‌ಎಸ್‌ನ ಕಾವೇರಿಯನ್ನು ತಮಿಳುನಾಡು ಯಾವತ್ತೂ ನೆಚ್ಚಿಕೊಂಡಿಲ್ಲ. ಕೃಷಿಗೂ ಅಷ್ಟೇ. ತಂಜಾವೂರಿನ ರೈತನಿಗೆ ಮಯ್ಯಲ, ಅಮರಾವತಿ ಹಾಗೂ ಭವಾನಿ ಸಾಗರದ ನೀರು ಲಭ್ಯವಿದೆ.ಕರ್ನಾಟಕದಿಂದ ಹರಿಯುವ ಕಾವೇರಿ ಹೊಗೇನಕಲ, ಈರೋಡು, ತಿರುಚ್ಚಿಯ ಮೂಲಕ ತಂಜಾವೂರನ್ನು ಸೇರುತ್ತಾಳೆ. ದಾರಿಯುದ್ದಕ್ಕೂ ಅವಳನ್ನು ಕದ್ದು ಕೃಷಿಗಾಗಿ ಬಳಸಿಕೊಳ್ಳುತ್ತಾರೆ. ಅದೆಲ್ಲ ಹಾಗಿರಲಿ, ಈಗ ಪರಿಹಾರದತ್ತ ಗಮನ ಹರಿಸೋಣ. ಕಾವೇರಿ ನೀರಿಗಾಗಿ ಬೊಬ್ಬೆ ಹೊಡೆಯುವ ನಾವು ಲಿಂಗನಮಕ್ಕಿಯ ನೀರನ್ನೇಕೆ ಬಳಸಿಕೊಳ್ಳುವುದಿಲ್ಲ? ಒಂದೆರಡಲ್ಲ, ಭರ್ತಿ 151 ಟಿಎಂಸಿ ಶರಾವತಿ ನೀರು ವಿದ್ಯುತ್ ಉತ್ಪಾದನೆಯ ನಂತರ ಸೀದಾ ಅರಬ್ಬಿ ಸಮುದ್ರ ಸೇರುತ್ತಿದೆ! ಒಂದೇ ಒಂದು ಲೀಟರ್ ನೀರನ್ನೂ ನಾವು ಹಿಡಿದಿಟ್ಟುಕೊಳ್ಳುತ್ತಿಲ್ಲ ಎಂದರೆ ಇದು ಪೆದ್ದುತನದ ಪರಮಾವಧಿಯಲ್ಲದೆ ಮತ್ತೇನು? ಪಶ್ಚಿಮ ಘಟ್ಟಗಳಲ್ಲಿ ಆಗುವ 6000 ಮಿಮೀ ಮಳೆನೀರನ್ನೂ ನಾವು ಶೇಖರಿಸಿಟ್ಟುಕೊಳ್ಳುತ್ತಿಲ್ಲ. ಉಳಿದ ಸಣ್ಣಪುಟ್ಟ ನದಿಗಳನ್ನೆಲ್ಲ ಸರಿಯಾಗಿ ಬಳಸಿಕೊಂಡರೆ ಕಾವೇರಿಯ ಮೇಲಿನ ಅವಲಂಬನೆ ಸಂಪೂರ್ಣ ನಿಲ್ಲುತ್ತದೆ.ಯಾವ ಮುಖ್ಯಮಂತ್ರಿ ಬಂದರೂ ಇಲ್ಲ, ನಮ್ಮವರೇ ಪ್ರಧಾನಿಯಾದರೂ ಇಲ್ಲ. ದೇವೇಗೌಡರು ಈಗ ಮೋದಿಯವರ ಜತೆ ಮಾತುಕತೆ ನಡೆಸುತ್ತಿದ್ದಾರೆ! ತಾವೇ ಪ್ರಧಾನಿಯಾಗಿದ್ದಾಗ, ರಾಗಿ ಮುದ್ದೆಯನ್ನು ಫೆಮಸ್ ಮಾಡುವ ಬದಲು ಈ ಸಮಸ್ಯೆಗೊಂದು ಪರಿಹಾರ ಕಾಣಿಸಬಹುದಿತ್ತಲ್ಲ? ನೀವೇನೇ ಹೇಳಿ, ನಮ್ಮ ರಾಜ್ಯದ ಅಷ್ಟೂ ಗಂಡು ರಾಜಕಾರಣಿಗಳನ್ನು ಒಟ್ಟು ಹಾಕಿದರೂ ಜಯಲಲಿತಾರ ಗಟ್ಟಿತನದಲ್ಲಿ ಒಂದು ಗುಲಗಂಜಿಯಷ್ಟೂ ತೂಗುವುದಿಲ್ಲ! ಇವರೇನಿದ್ದರೂ ಪರಸ್ಪರರ ಕಾಲೆಳೆದುಕೊಂಡು ಆಕೆಯ ಎದುರು ಸೋತು ಹೈರಾಣಾಗಿ ಬರುವುದಕ್ಕೇ ಸೈ!ಈಗ ಸಿದ್ದರಾಮಯ್ಯನವರು ಮಾಡುತ್ತಿರುವುದಾದರೂ ಏನು? ಬರೀ ಸರ್ವಪಕ್ಷ ಸಭೆಗಳು! ಅರೆನೆರೆತ, ಬಿಳಿ ತಲೆಗಳೆಲ್ಲ ಒಂದೆಡೆ ಸೇರಿದರೆ ಸುಮ್ಮನೆ ಮಿನರಲ್ ವಾಟರ್, ಕಾಫಿ, ಬಿಸ್ಕತ್ತುಗಳ ಖರ್ಚು! ಪರಿಹಾರ ಹುಡುಕುವ ಗೋಜಿಗೆ ಇವರ‍್ಯಾರೂ ಹೋಗುವುದಿಲ್ಲ. ಸಾವಿನ ಮನೆಯಲ್ಲೂ ರಾಜಕೀಯ ಮಾಡುವ ಈ ನಾಚಿಕೆಗೆಟ್ಟ ಮಂದಿಗೆ ಪರಿಹಾರ ಬೇಕೂ ಇಲ್ಲ! ಅದಕ್ಕೆಂದೇ ಬೇರೆ ಜನರಿದ್ದಾರೆ. ಕಾವೇರಿಯ ಬಗೆಗಿನ ಎಲ್ಲ ಮಾಹಿತಿಯನ್ನೂ ಕೊಟ್ಟ, ಅವಳ ಇಡೀ ಜಾತಕದ ಅಂಕಿಅಂಶಗಳನ್ನೆಲ್ಲ ನಾಲಗೆಯ ತುದಿಯ ಇಟ್ಟುಕೊಂಡಿರುವ ಐಎಎಸ್ ನಿವೃತ್ತ ಅಧಿಕಾರಿ ಗಂಗಪ್ಪರಂಥವರು! ತಂಜಾವೂರಿನ ಡಿಸಿಯೂ ಆಗಿ ವರ್ಷಗಟ್ಟಲೆ ತಮಿಳುನಾಡಿನ ನೆಲೆಸಿದ್ದ ಅವರಿಗೆ ಕಾವೇರಿಯ ಒಂದೊಂದು ಹನಿಯ ಬಳಕೆಯ ಬಗ್ಗೆಯೂ ಗೊತ್ತಿದೆ. ಅವರು ಈಗ್ಗೆ ಎರಡು ವರ್ಷಗಳ ಹಿಂದೆಯೇ ಸಿದ್ದರಾಮಯ್ಯನವರಿಗೆ ಪತ್ರವನ್ನೂ ಬರೆದಿದ್ದಾರೆ. ಕರ್ನಾಟಕದ ನೀರಿನ ಸಮಸ್ಯೆಯನ್ನು ನೀಗಿಸಿಕೊಳ್ಳಲು ಹೇಗೆ ಲಿಂಗನಮಕ್ಕಿಯಿಂದ, ಉತ್ತರಾಖಂಡದ ಟೆಹರಿ ಅಣೆಕಟ್ಟಿನಿಂದ ನೀರನ್ನು ತರಬಹುದು ಎನ್ನುವುದರ ರೂಪುರೇಷೆಯನ್ನೂ ಕೊಟ್ಟಿದ್ದಾರೆ. ಉತ್ತರಿಸಲು ಸಿದ್ದರಾಮಯ್ಯನವರಿಗೆ ಇನ್ನೂ ಬಿಡುವಾಗಿಲ್ಲ ಪಾಪ!ಸದ್ಯಕ್ಕೆ ಮೋದಿಯವರನ್ನು ಕರ್ನಾಟಕಕ್ಕೆ ಕರೆತರುವುದೊಂದೇ ನಮಗುಳಿದಿರುವ ಮಾರ್ಗ. ಕಳೆದ ವಾರವಷ್ಟೇ ಅವರು ತಮ್ಮ ಕನಸಿನ ಸೌನಿ ಯೋಜನೆಯನ್ನು ಗುಜರಾತಿನಲ್ಲಿ ಉದ್ಘಾಟಿಸಿದ್ದಾರೆ. ಹೆಚ್ಚುವರಿಯಾಗಿರುವ ನರ್ಮದೆಯ ನೀರನ್ನು 115 ಸಣ್ಣಪುಟ್ಟ ಜಲಾಶಯಗಳಲ್ಲಿ ಹಿಡಿದಿಡುವ ಮಹತ್ವಾಕಾಂಕ್ಷೆಯ ಯೋಜನೆ ಹನಿ ನೀರನ್ನೂ ಪೋಲಾಗಲು ಬಿಡುವುದಿಲ್ಲ! ನಮ್ಮ ರಾಜಕಾರಣಿಗಳಿಗೆ ಅಭಿವೃದ್ಧಿ ಬೇಕಿಲ್ಲ. ಮುಗ್ಧ ರೈತರಿಗೋ ರಾಜಕೀಯ ಪ್ರತಿಷ್ಠೆಗಳು ಅರ್ಥವಾಗುವುದಿಲ್ಲ! ಪರಿಹಾರ ಕೊಡುವ ಸಾಮರ್ಥ್ಯವಿರುವ ಗಂಗಪ್ಪರಂಥ, ಎಪ್ಪತ್ತು ದಾಟಿದ ನವಯುವಕರು ಅತೀವ ಹುರುಪಿನಲ್ಲಿ ನಮ್ಮೊಂದಿಗೆ ಕೈಜೋಡಿಸಲು ಸಿದ್ಧರಿದ್ದಾರೆ! ಇನ್ನಾದರೂ ನಾವು ಮನಸ್ಸು ಮಾಡಿದರೆ ಈ ಸಮಸ್ಯೆಯಿಂದ ಶಾಶ್ವತವಾಗಿ ಹೊರಬರಬಹುದು. ಸಿದ್ದರಾಮಯ್ಯನವರೇ, ಕೇಳಿಸಿಕೊಳ್ಳುತ್ತಿದ್ದೀರಾ.
Comentarios