top of page

Birth anniversary of great singer, music director, great scholar of Indian, Western and Folk Music

  • haparna
  • Aug 31, 2016
  • 3 min read

On the birth anniversary 31-8-2016 of great singer, music director, great scholar of Indian, Western and Folk Music– P. Kalinga Rao…. Here is a write-up on great singer P.Kalinga Rao taken by courtesy of ‘KANNADA SAMPADA’ PUBLISHED IN FACE BOOK. ಕನ್ನಡ ಸಂಪದ Kannada Sampada. ಪಿ. ಕಾಳಿಂಗರಾವ್ ನಮ್ಮ ಪಿ. ಕಾಳಿಂಗರಾಯರು ಜನಿಸಿದ ದಿನ ಆಗಸ್ಟ್ 31, 1914. ಕಾಳಿಂಗರಾಯರು ಅಂದರೆ ಒಂದು ರೀತಿಯಲ್ಲಿ ಮೈ ಜುಮ್ಮೆನ್ನುತ್ತದೆ. ಅವರ ಕಾಲದಲ್ಲಿ ಅವರ ಹಾಡುಗಳನ್ನು ಸಂಗೀತ ಕಾರ್ಯಕ್ರಮಗಳಲ್ಲಿ, ರೇಡಿಯೋದಲ್ಲಿ, ಧ್ವನಿಮುದ್ರಿಕೆಗಳಲ್ಲಿ ಕೇಳಿದ್ದವರಿಗೆ ಕಾಳಿಂಗರಾಯರ ಗಾಯನವೆಂಬುದು ಒಂದು ಅವಿಸ್ಮರಣೀಯ ಅನುಭಾವ. ಹುಯಿಲಗೋಳ ನಾರಾಯಣರ ‘ಉದಯವಾಗಲಿ ನಮ್ಮ ಚೆಲುವ ನಾಡು’ ಎಂಬ ಕವಿತೆ ಹಾಡಿ ಕನ್ನಡದಲ್ಲಿನ ಬೆಳವಣಿಗೆಗೆ ಒಂದು ಕ್ರಾಂತಿ ತಂದವರು ಕಾಳಿಂಗರಾಯರು. ಸಿ. ಅಶ್ವತ್ಥರ ‘ಭಾವಯಾನ’ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರು “ಸುಗಮ ಸಂಗೀತವೆಂಬ ಕಲೆ, ಸಕಲ ಭಾಷೆಗಳ ನಡುವೆ ಕನ್ನಡದಲ್ಲಿ ಮಾತ್ರ ಕಾಣುವಂತ ಒಂದು ವಿಶಿಷ್ಟ ಕಲೆ” ಎಂದು ಹೇಳಿದ ಮಾತೊಂದು ನೆನಪಾಗುತ್ತಿದೆ. ಈ ವಿಶಿಷ್ಟ ಕಲೆಯ ಪ್ರವರ್ತಕರು ಪಾಂಡೇಶ್ವರ ಕಾಳಿಂಗರಾಯರು. ಕನ್ನಡದ ವಚನಕಾರರ, ದಾಸವರೇಣ್ಯರ, ವಿವಿಧ ನವ್ಯಕಾಲದ ಕವಿಗಳ ಕಾವ್ಯಗಳು ನಾದದ ಅಲೆಗಳ ತರಂಗಗಳೋಪಾದಿಯಲ್ಲಿ ಕನ್ನಡಿಗರ ಕಿವಿ, ಹೃದಯಗಳನ್ನು ಹೆಚ್ಚು ಹೆಚ್ಚು ತಲುಪಲು ಮೊದಲ್ಗೊಂಡದ್ದು ಕಾಳಿಂಗರಾಯರ ಇನಿದ್ವನಿಯಿಂದ. ನಮ್ಮ ಎಚ್. ಆರ್. ಲೀಲಾವತಿಯವರು ಬಣ್ಣಿಸುವಂತೆ ಕಾಳಿಂಗರಾಯರನ್ನು “ಕಿನ್ನರ ಕಂಠದ ಕನ್ನಡ ಕೋಗಿಲೆ” ಎಂದರೆ ಉತ್ಪ್ರೇಕ್ಷೆಯಾಗಲಾರದು. ಚಿಕ್ಕವಯಸ್ಸಿನಲ್ಲೇ ಸಂಗೀತದ ಆಸಕ್ತಿ ಮೂಡಿಸಿಕೊಂಡ ಕಾಳಿಂಗರಾಯರು ಮುಂದೆ ರಾಮಚಂದ್ರ ಬುವಾ ಅಂತಹ ಶ್ರೇಷ್ಠ ಸಂಗೀತಗಾರರ ಶಿಷ್ಯರಾಗಿ ಬೆಳೆದು ನಾಟಕಗಳಲ್ಲಿ ಹಾಡತೊಡಗಿದರು. ನಂತರದಲ್ಲಿ ಮದರಾಸಿಗೆ ಹೋಗಿ ಅಲ್ಲೊಂದು ಸಂಗೀತ ಶಾಲೆಯಲ್ಲಿನ ಅಧ್ಯಾಪಕರಾಗಿ, ಪ್ರಾಂಶುಪಾಲರೂ ಆದರು. ಮದ್ರಾಸೆಂದರೆ ಕೇಳಬೇಕೆ. ಅದು ಅಂದಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಪ್ರಧಾನ ಕೇಂದ್ರವಾಗಿತ್ತು. ಅಲ್ಲಿಂದಲೇ ಕಾಳಿಂಗರಾಯರಿಗೆ ಸಿನೆಮಾ ಒಡನಾಟ ಪ್ರಾರಂಭವಾದದ್ದು. ಇವರು ಮೊದಲು ಸಂಗೀತ ನೀಡಿದ್ದು ಹಿಂದಿಯ ‘ಪ್ರೇಮ್ ಸಾಗರ್’ ಎಂಬ ಚಿತ್ರಕ್ಕೆ. ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕರೂ ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ್ದ ಆರ್ ನಾಗೇಂದ್ರರಾಯರಿಗೆ ಕಾಳಿಂಗರಾಯರು ಪರಿಚಿತರಾದರು. ನಾಗೇಂದ್ರರಾಯರು ನಿರ್ಮಿಸಿದ ‘ವಸಂತಸೇನಾ’ ಕನ್ನಡ ಚಲನಚಿತ್ರಕ್ಕೆ ಸಂಗೀತ ನಿರ್ದೇಶಿಸಿದ ಕಾಳಿಂಗರಾಯರು, ಅದೇ ಚಿತ್ರದಲ್ಲಿ ಜೈನ ಸನ್ಯಾಸಿಯ ಪಾತ್ರವನ್ನೂ ನಿರ್ವಹಿಸಿದ್ದರು. ನವಜ್ಯೋತಿ ಸ್ಟುಡಿಯೋದ ಮುಖ್ಯಸ್ಥರಾಗಿದ್ದ ಜಿ.ಆರ್.ರಾಮಯ್ಯನವರ ಕೋರಿಕೆಯ ಮೇರೆಗೆ ಅಲ್ಲಿ ತಯಾರಾಗುವ ಎಲ್ಲಾ ಚಿತ್ರಗಳಿಗೂ ಸಂಗೀತ ನೀಡಲು ಕಾಳಿಂಗರಾಯರು ಒಪ್ಪಿಕೊಂಡಿದ್ದರು. ಆದರೆ ಹೀಗೆ ಅವರು ಸಂಗೀತ ನೀಡಿದ್ದು ‘ಕೃಷ್ಣಲೀಲಾ’ ಚಿತ್ರಕ್ಕೆ ಮಾತ್ರ. ಈ ಚಿತ್ರದಿಂದ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರು ಗೀತರಚನಕಾರರಾಗಿ ಪರಿಚಿತರಾದರೆ, ಡಾ.ರಾಜ್ ಕುಮಾರ್ ಅವರ ಸಹೋದರ ವರದರಾಜ್ ಮತ್ತು ಸಹೋದರಿ ಶಾರದಮ್ಮ ಅವರುಗಳು ಬೆಳ್ಳಿತೆರೆಗೆ ಬಂದರು. ‘ಭಕ್ತ ರಾಮದಾಸ’ ಚಿತ್ರದಲ್ಲಿ ಸಂಗೀತ ನೀಡುವಾಗ, ಭಿಕ್ಷೆ ಬೇಡುತ್ತಿದ್ದ ಹುಡುಗಿಯೊಬ್ಬಳ ಕಂಠಸಿರಿಗೆ ಮನಸೋತ ಕಾಳಿಂಗರಾಯರು ಆಕೆಯಿಂದಲೂ ಹಾಡೊಂದನ್ನು ಹಾಡಿಸಿದ್ದರು. 1954ರಲ್ಲಿ ಸಿ.ವಿ.ರಾಜು ಅವರ ‘ನಟಶೇಖರ’ ಚಿತ್ರಕ್ಕೆ ಸಂಗೀತ ನೀಡಿದರು. ನಾಡಿಗೇರ ಕೃಷ್ಣರಾಯರ ಸಾಹಿತ್ಯವಿದ್ದ ಆ ಚಿತ್ರದ ಗೀತೆಗಳು ಜನಪ್ರಿಯವಾದವು. ಕಾಳಿಂಗರಾಯರು ‘ಅಬ್ಬಾ ಆ ಹುಡುಗಿ’, ‘ಮಹಾಶಿಲ್ಪಿ’, ‘ತರಂಗ’ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದರಾದರೂ ಅವರ ಪ್ರತಿಭೆ ಹೆಚ್ಚಾಗಿ ಬೆಳಗಿದ್ದು ಸುಗಮ ಸಂಗೀತ ಕ್ಷೇತ್ರದಲ್ಲಿ. ‘ಕೈವಾರ ಮಹಾತ್ಮೆ’ ಚಿತ್ರದ ‘ಓಂ ನಮೋ ನಾರಾಯಣಾ’, ‘ಕಿತ್ತೂರು ಚೆನ್ನಮ್ಮ’ ಚಿತ್ರದ ‘ತಾಯಿ ದೇವಿಯನು ಕಾಣೆ ಹಂಬಲಿಸಿ’ ಮೊದಲಾದ ಜನಪ್ರಿಯ ಗೀತೆಗಳನ್ನು ಹಾಡಿ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ಕಾಳಿಂಗರಾಯರನ್ನು, ಅವರ ಕಂಠಸಿರಿಗೆ ಪ್ರಸಿದ್ಧವಾದ ‘ಅಂತಿಂಥ ಹೆಣ್ಣು ನೀನಲ್ಲ’ ಗೀತೆಯನ್ನು ಅವರೇ ಹಾಡುತ್ತಿರುವಂತೆ ತುಂಬಿದ ಕೊಡ ಚಿತ್ರದಲ್ಲಿ ತೋರಿಸಲಾಗಿತ್ತು. ಕಾಳಿಂಗರಾಯರು ಚಿತ್ರರಂಗ ಮತ್ತು ಸುಗಮ ಸಂಗೀತದ ಕ್ಷೇತ್ರಕ್ಕೆ ಬರುವ ಮೊದಲು ತಮ್ಮ ಹದಿನಾರನೆಯ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನೀಡಿ ಜನಮೆಚ್ಚುಗೆ ಸಂಪಾದಿಸಿದ್ದರು. ಕಾಳಿಂಗರಾಯರ ಗಾಯನದ ಮೋಡಿಯಲ್ಲಿ ರಾಗವೂ ವೈವಿಧ್ಯಮಯವೇ; ಸಾಹಿತ್ಯವೂ ವೈವಿಧ್ಯಪೂರ್ಣವೆ. ಕಾಳಿಂಗರಾಯರು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ಪಾಶ್ಚಾತ್ಯ ಸಂಗೀತವನ್ನೂ ಅಭ್ಯಾಸ ಮಾಡಿದ್ದರು. ಆದ್ದರಿಂದ ಕವನಗಳನ್ನು ಉತ್ತರ, ದಕ್ಷಿಣ, ಪೌರ್ವಾತ್ಯ, ಪಾಶ್ಚಿಮಾತ್ಯ ಜಾನಪದ, ಶಾಸ್ತ್ರೀಯ ಸಂಗೀತದ ಉಡಿಗೆ ತೊಡಿಗೆಗಳಿಂದಲಂಕರಿಸಿ ಹಾಡಿದರು. ಒಂದೇ ಕವನವನ್ನು ನಾಲ್ಕಾರು ದಾಟಿಯಲ್ಲಿ ಹಾಡುವ ಚೈತನ್ಯ ಅವರಿಗಿತ್ತು. ಅದು ಕರ್ನಾಟಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ಧಾಟಿ, ಪಾಶ್ಚಿಮಾತ್ಯ ಶೈಲಿ ಯಾವುದೂ ಆಗಬಹುದು. ಆದರೆ ಹೇಗೆ ಹಾಡಿದರೆ ಕವನದ ಭಾವಕ್ಕೆ ಇಂಬುಗೊಡುವುದೋ ಅದೇ ಮುಖ್ಯ ಎಂದು ಅವರು ಒತ್ತಿ ಹೇಳುತ್ತಿದ್ದರು. ಇಡೀ ಕರ್ನಾಟಕದ ಕಲಾಭಿಮಾನಿಗಳು ಕಾಳಿಂಗರಾಯರ ಆರಾಧಕರಾದರು. ಕಾಳಿಂಗರಾಯರ ಕಚೇರಿ ಎಂದರೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು. ಆ ಕಡೆ ಮೋಹನಕುಮಾರಿ, ಈ ಕಡೆ ಸೋಹನ ಕುಮಾರಿ ಮಧ್ಯೆ ಈ ದಿವ್ಯ ಚೇತನ ಹಾಡುತ್ತಿದ್ದರೆ ಕಲಿಯುಗ ದ್ವಾಪರವಾಗುತ್ತಿತ್ತು. ಮಿಂಚಿನ ಹೊಳೆ ಹರಿಯುತ್ತಿತ್ತು. ರಸಸ್ರೋತ ಪ್ರವಹಿಸುತ್ತಿತ್ತು. ಕಾಳಿಂಗರಾಯರು ಕನ್ನಡ ಭಾವಗೀತೆಗಳನ್ನು ಹಾಡಲು, ಅವರಿಗೆ ಪ್ರೇರಕ ಶಕ್ತಿಯಾಗಿದ್ದವರಲ್ಲಿ ಅತಿ ಮುಖ್ಯರಾದವರೆಂದರೆ ಅ. ನ. ಕೃಷ್ಣರಾಯರು. ಮಿತ್ರರ ಒತ್ತಾಯಕ್ಕೆ ಮಣಿದು 1946ರಲ್ಲಿ ಹುಯಿಲಗೋಳ ನಾರಾಯಣರಾಯರ “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಎಂಬ ಗೀತೆಯನ್ನು ಸ್ವರ ಸಂಯೋಜಿಸಿ ಹಾಡಿದರು. ಕನ್ನಡ ರಾಜ್ಯೋದಯದ ನಂತರ ಈ ಹಾಡನ್ನು ಹಾಡಿದ್ದ ಕಾಳಿಂಗರಾಯರಿಗೆ ಕರ್ನಾಟಕ ಸರ್ಕಾರ ಸನ್ಮಾನ ಮಾಡಿತು. ‘ತೂಗಿರೇ ರನ್ನವಾ, ತೂಗಿರೇ ಚಿನ್ನವಾ’, ‘ಬಾರಯ್ಯ ಬೆಳುದಿಂಗಳೇ’, ‘ಅಮ್ಮಕ ಜಮ್ಮಕದಿಂದ ಬರುತಾಳೇ ರತುನಾ’, ‘ಮೂಡಲ್ ಕುಣಿಗಲ್ ಕೆರೆ’, ‘ಬೆಟ್ಟ ಬಿಟ್ಟಿಳಿಯುತ್ತ ಬಂದಾಳೆ ಚಾಮುಂಡಿ’ ಒಂದೇ ಎರಡೇ. ಜಾನಪದ ಗೀತೆಗಳಿಗೇ ಹೊಸ ತಿರುವನ್ನು ಕೊಟ್ಟರು. ಈ ಧ್ವನಿ ಮುದ್ರಿಕೆಗಳನ್ನು ಕೇಳಿದವರು ಮೈಮರೆತರು. ಜಿ.ಪಿ. ರಾಜರತ್ನಂರವರ ‘ರತ್ನನ ಪದ’ಗಳನ್ನು ಭಾವಪೂರ್ಣವಾಗಿ ಹಾಡಬಹುದೆಂಬುದನ್ನು ತೋರಿಸಿಕೊಟ್ಟ ಮೊಟ್ಟ ಮೊದಲಿಗರೇ ಕಾಳಿಂಗರಾಯರು. “ಬ್ರಹ್ಮಾ ನಿಂಗೆ ಜೋಡಿಸ್ತೀನಿ ಯೆಂಡಾ ಮುಟ್ಟಿದ್ ಕೈನಾ” ಹಾಡನ್ನು ಕೇಳಿ ಮನಸೋಲದ ಕನ್ನಡಿಗನೇ ಇಲ್ಲ. ಕಾಳಿಂಗರಾಯರ ನಾಲಿಗೆಯ ಮೇಲೆ ದಾಸರು ನಲಿದರು. ವಚನಕಾರರು ಕುಣಿದರು, ಯೆಂಡ್ಕುಡ್ಕ ರತ್ನ ಮೆರೆದರು, ಜನಪದರು ಉಕ್ಕಿ ಹರಿದರು, ಭಾವಗೀತಕಾರರು ಮಿಂಚಿದರು. ‘ಎಲ್ಲಾದರು ಇರು, ಎಂತಾದರು ಇರು’, ‘ಏರಿಸಿ ಹಾರಿಸಿ ಕನ್ನಡದ ಬಾವುಟ’, ‘ಯಾರು ಹಿತವರು ನಿನಗೆ’, ‘ಮಾಡು ಸಿಕ್ಕದಲ್ಲ’, ‘ಮನವೆಂಬ ಸರಸಿಯಲಿ’, ‘ಪರಚಿಂತೆ ನಮಗೆ ಏಕೆ ಅಯ್ಯಾ’, ‘ಹೋದ ವರ್ಷ ಬಂದ ಹಬ್ಬ’, ‘ಮಂಕುತಿಮ್ಮನ ಕಗ್ಗ’, ‘ದೇಶಭಕ್ತಿಗೀತೆಗಳು’, ‘ಹರಿಹರನ ರಗಳೆ’ ಎಲ್ಲವನ್ನೂ ಹಾಡಿ ಸೈ ಎನಿಸಿಕೊಂಡರು. ಕರ್ನಾಟಕದಲ್ಲಿ ಮಾತ್ರವಲ್ಲದೆ ದೆಹಲಿ, ಕೊಲ್ಕತ್ತ, ಮುಂಬಯಿ, ಮದ್ರಾಸ್, ಪೂನಾ, ನಾಗಪುರ ಮುಂತಾದ ಕಡೆಗಳಲ್ಲೆಲ್ಲ ಹಾಡಿ ಭಾರತದ ಉದ್ದಗಲಕ್ಕೂ ತಮ್ಮ ಇನಿದನಿಯ ಗಾನಸುಧೆಯನ್ನು ಹರಿಸಿ ಕೀರ್ತಿ ಶಿಖರಕ್ಕೇರಿದರು. ಇವರ ಗಾಯನವನ್ನು ಧ್ವನಿ ಮುದ್ರಿಸಿಕೊಳ್ಳಲು ಎಚ್.ಎಂ.ವಿ. ಮತ್ತು ಸರಸ್ವತಿ ಸಂಸ್ಥೆಗಳು ಪೈಪೋಟಿಯನ್ನೇ ನಡೆಸಿದವು. ಕಾಳಿಂಗರಾಯರಿಗೆ ‘ಜಾನಪದ ಸಂಗೀತರತ್ನ’, ‘ಬಾಲಗಂಧರ್ವ’, ‘ಜಾನಪದ ಕಲಾ ಚಕ್ರವರ್ತಿ’, ‘ಗಾಯನ ಚಕ್ರವರ್ತಿ’, ‘ಗಾಯನ ಕಂಠೀರವ’, ‘ಕನ್ನಡ ಉದಯಗಾನ ಕೋಗಿಲೆ’, ‘ಸಂಗೀತ ರಸ ವಿಹಾರಿ’ ಮುಂತಾದ ಅನೇಕ ಜನಮೆಚ್ಚಿ ಕೊಟ್ಟ ಬಿರುದು ಬಾವಲಿಗಳು ಸಂದಿದ್ದವು. ನಾವು ಪುಟ್ಟವರಿದ್ದಾಗ ಅವರ ಸಂಗೀತ ಕಾರ್ಯಕ್ರಮಗಳಿಗೆ ಜನ ಮುಗಿಬೀಳುತ್ತಿದ್ದ ರೀತಿ, ಕಾರ್ಯಕ್ರಮಕ್ಕೆ ಬಂದ ರಸಿಕರನ್ನು ಇವರು ತಮ್ಮ ಗಾಯನದಿಂಪಿನಲ್ಲಿ ತೇಲಿಸುತ್ತಿದ್ದ ರೀತಿ ಇಂದೂ ನೆನಪಾಗುತ್ತದೆ. ಸಂಗೀತ ಕ್ಷೇತ್ರದಲ್ಲಿ ಅನಭಿಷಿಕ್ತರಾದರೂ, ಸಾರ್ವಜನಿಕ ಜೀವನದಲ್ಲಿ ಅತ್ಯಂತ ಸರಳಜೀವಿ, ಸಹೃದಯರಾಗಿದ್ದರೂ, ವೈಯಕ್ತಿಕವಾಗಿ ಹಲವಾರು ಗೊಂದಲಗಳ ಜೀವನವನ್ನು ರಾಯರು ಅನುಭವಿಸಿದಂತೆ ತೋರುತ್ತದೆ. ಆದರೆ, ಇವೆಲ್ಲಕ್ಕೂ ಮೀರಿದ್ದು ಅವರ ಅಪ್ರತಿಮ ಪ್ರತಿಭೆ. ಕಾಳಿಂಗರಾಯರು 1981ರ ಸೆಪ್ಟೆಂಬರ್ 22ರಂದು ನಿಧನರಾದರು. ಅವರ ಹಾಡುಗಳನ್ನು ನಾವು ಎಷ್ಟು ಬಾರಿ ಕೇಳಿದ್ದೇವೋ. ಅವರು ಹಾಡಿದ್ದೆಲ್ಲಾ ವೈವಿಧ್ಯಪೂರ್ಣ. ಅವರು ಹಾಡಿದ ಪ್ರತಿಯೊಂದೂ ಹಾಡೂ ಕನ್ನಡಿಗರಿಗೆ ಸಾರ್ವಕಾಲಿಕವಾಗಿ ಪ್ರಿಯ. ಇಂಥಹ ಅವಿಸ್ಮರಣೀಯ ಗಾಯಕರೂ, ಸುಗಮ ಸಂಗೀತ ಪ್ರವರ್ತಕರೂ ಆದ ಕಾಳಿಂಗರಾಯರನ್ನು ಕನ್ನಡ ನಾಡು ನಿರಂತರವಾಗಿ ಅಭಿಮಾನಪೂರ್ವಕವಾಗಿ ನೆನೆಯುತ್ತಿದೆ. ಈ ಮಹಾನ್ ಚೇತನಕ್ಕೆ ನಮ್ಮ ನಮನ.( kannada sampada kshame kOri ).

Recent Posts

See All
Untitled

2. VIEWS (PRESTITUTES-QUOTE- FROM FACE BOOK-17/1/2020):-INDIA IS THE ONLY MAJOR CIVILIZATIONAL COUNTRY WHERE YOU ARE SYSTEMATICALLY...

 
 
 

Comments


IMG-20180912-WA0009.jpg

About Me

H R Hanumantha Rau

A Senior Citizen, graduate in science, professional engineer and a (Metallurgical) Scientist retired from Hindustan Aeronautics Ltd. Now a professed astrologer  and a Free lance writer on social life /problems, predictive astrology, besides contributor to humor magazines.

Read More

 

Join My Mailing List

Thanks for submitting!

bottom of page